ಪ್ರಶ್ನೆ: ಇಂದಿನ ಕಾಲಕ್ಕೆ ಸ್ತ್ರೀ ಶಕ್ತಿಯು ನಮ್ಮ ಪ್ರಪಂಚಕ್ಕೆ ಎಷ್ಟು ಮುಖ್ಯವಾಗುತ್ತದೆ?

ಸದ್ಗುರು: ಒಂದು ಕಾಲದಲ್ಲಿ ಜಗತ್ತಿನಾದ್ಯಂತ ಸ್ತ್ರೀ ಶಕ್ತಿಯ ಆರಾಧನೆ ಚಾಲ್ತಿಯಲ್ಲಿತ್ತು. ಆದರೆ ದುರದೃಷ್ಟವಶಾತ್, ಧಾರ್ಮಿಕತೆಗೆ ಒಂದು ಮಹತ್ವಾಕಾಂಕ್ಷೆಯ ವಿಧಾನ ಜಾರಿಗೆ ಬಂತು. ಯಾವಾಗ ಜಗತ್ತಿನಲ್ಲಿ ಗೆಲುವೊಂದೇ ಮಾರ್ಗವಾಯ್ತೋ, ಜನರು ಸ್ತ್ರೀ ಶಕ್ತಿಯನ್ನು ಭೂಮಿಯಿಂದ ನಿರ್ನಾಮ ಮಾಡಿದರು. ಮತ್ತು ಇಂದು, ಯಶಸ್ವಿಯಾಗಲು ಪುರುಷತ್ವವೊಂದೇ ಮಾರ್ಗವಾಗಿದೆ; ನಾವು ನಮ್ಮ ಹೆಣ್ಣುಮಕ್ಕಳನ್ನೂ ಸಹ ಅವರ ವರ್ತನೆ, ವಿಧಾನ ಮತ್ತು ಭಾವನೆಗಳಲ್ಲಿ ಪುರುಷತ್ವದ ಗುಣಗಳನ್ನು ತಂದುಕೊಳ್ಳುವಂತೆ ಒತ್ತಾಯಿಸಿದ್ದೇವೆ. ವಶಪಡಿಸಿಕೊಳ್ಳುವುದೊಂದೇ ಯಶಸ್ಸಿಗೆ ದಾರಿಯೆಂದು ನಾವು ಎಲ್ಲರನ್ನೂ ನಂಬಿಸಿದ್ದೇವೆ.

ಆದರೆ ವಶಪಡಿಸಿಕೊಳ್ಳುವುದು ದಾರಿಯಲ್ಲ; ಆಲಿಂಗಿಸಿಕೊಳ್ಳುವುದೇ ದಾರಿ. ಭೂಮಿಯನ್ನು ಗೆಲ್ಲಲು ಪ್ರಯತ್ನಿಸುತ್ತಿರುವುದು ನಾವಿಂದು ನೋಡುತ್ತಿರುವ ಎಲ್ಲಾ ಅನಾಹುತಗಳಿಗೆ ಎಡೆಮಾಡಿಕೊಟ್ಟಿದೆ. ಸ್ತ್ರೀ ಶಕ್ತಿಯು ಪ್ರಬಲ ಅಂಶವಾಗಿದಿದ್ದರೆ, ಅಥವಾ ಸ್ತ್ರೀ ಮತ್ತು ಪುರುಷ ತತ್ವಗಳು ಸಮನಾಗಿದಿದ್ದರೆ, ಪರಿಸರದ ವಿಪತ್ತುಗಳು ಇರುತ್ತಿರಲಿಲ್ಲವೆಂದು ನನ್ನ ಅಭಿಪ್ರಾಯ ಏಕೆಂದರೆ ಸ್ತ್ರೀ ಶಕ್ತಿ ಹಾಗೂ ಭೂಮಿಯ ಉಪಾಸನೆ ಯಾವಾಗಲೂ ಒಟ್ಟಿಗೆ ನಡೆಯುತ್ತಿತ್ತು. ಭೂಮಿಯನ್ನು ತಾಯಿಯಂತೆ ಕಾಣುತ್ತಿದ್ದ ಸಂಸ್ಕೃತಿಗಳು ಎಂದಿಗೂ ತಮ್ಮ ಸುತ್ತಲಿನ ಪರಿಸರಕ್ಕೆ ಹೆಚ್ಚು ಹಾನಿಯನ್ನು ಉಂಟುಮಾಡಿಲ್ಲ; ಯಾವಾಗ ಗೆಲ್ಲುವುದೊಂದನ್ನೇ ಜೀವನದ ಮಾರ್ಗವಾಗಿ ಪರಿಗಣಿಸಲಾಯಿತೋ ಆಗ ಮಾತ್ರ ನಷ್ಟ ಸಂಭವಿಸಿತು.

 

ಸದ್ಯದಲ್ಲಿ, ಭೂಮಿಗೆ ಇಷ್ಟೆಲ್ಲಾ ಹಾನಿಯನ್ನುಂಟುಮಾಡಿದ ನಂತರವೂ, ಭೂಮಿಯ ಮೇಲೆ ಸಾಕಷ್ಟು ಆಹಾರವಿದ್ದರೂ ಸಹ, ಅರ್ಧದಷ್ಟು ಜನಕ್ಕೆ ಇನ್ನೂ ಹೊಟ್ಟೆಗೆ ಸರಿಯಾಗಿ ತಿನ್ನಲಾಗುತ್ತಿಲ್ಲ. ಸ್ತ್ರೀ ಶಕ್ತಿಯ ಅಂಶವು ಪ್ರಬಲವಾಗಿದಿದ್ದರೆ, ಜನಗಳು ಖಂಡಿತವಾಗಿಯೂ ಸರಿಯಾಗಿ ತಿಂದಿರುತ್ತಿದ್ದರು. ದಯೆ, ಪ್ರೀತಿ ಮತ್ತು ಸದಭಿರುಚಿಗಳು ಮೇಲುಗೈ ಸಾಧಿಸಿರುತ್ತಿದ್ದವು. ನಾವು ಜೀವನವನ್ನು ಅಪ್ಪಿಕೊಳ್ಳುವ ಬದಲು ಅದನ್ನು ಗೆಲ್ಲಲು ನಿರ್ಧರಿಸಿದೆವು. ಸ್ತ್ರೀತತ್ವವು ಪ್ರಧಾನವಾಗಿದಿದ್ದರೆ, ಬಹುಶಃ ನಾವು ಚಂದ್ರ ಅಥವಾ ಮಂಗಳ ಗ್ರಹಕ್ಕೆ ಹೋಗಿರುತ್ತಿರಲಿಲ್ಲ, ಆದರೆ ಅಲ್ಲಿಗೆ ಹೋಗುವ ಮೂಲಕ ನಿಜವಾಗಿಯೂ ನಾವೇನನ್ನು ಸಾಧಿಸಿದ್ದೇವೆ? ಒಂದು ಬಾವುಟವನ್ನು ನೆಟ್ಟು, ಒಂದು ಹೆಜ್ಜೆಗುರುತನ್ನು ಬಿಟ್ಟು ವಾಪಸ್ಸಾಗಿದ್ದೇವೆ. ಇದಕ್ಕೇನಾದರು ಮಹತ್ವವಿದೆಯೇ? ಇದರಿಂದಾಗಿ ಚಂದ್ರನ ಬಗ್ಗೆಯಿದ್ದ ರೋಮಾಂಚನವೆಲ್ಲಾ ಈಗ ಹೊರಟುಹೋಗಿದೆ.

ನಮ್ಮಿಡೀ ಜೀವನದ ಕಡೆಗಿನ ವರ್ತನೆಯು ಏರುಪೇರಾಗಿದೆ. ನಾನು ವೈಜ್ಞಾನಿಕ ಸಾಧನೆಗಳ ವಿರುದ್ಧವಲ್ಲ, ಆದರೆ ನಾವು ವಿಜ್ಞಾನವು ಜೀವನದ ಕಡೆಗೆ ನೀಡುವ ದೃಷ್ಟಿಯನ್ನು ಕಳೆದುಕೊಂಡಿದ್ದೇವೆ. ಬಹಳಷ್ಟು ಜನರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನವು ಕೇವಲ ಭೂಮಿಯ ಮೇಲಿನ ಎಲ್ಲವನ್ನೂ ನಮ್ಮ ಉಪಯೋಗಕ್ಕೆ ಬಳಸುವ ಬಗ್ಗೆಯಾಗಿದೆ. ಎಲ್ಲವನ್ನೂ ದುರ್ಬಳಕೆ ಮಾಡುವ ಈ ವರ್ತನೆಯು, ತುಂಬ ಗೆಲುವಿನ ಮನೋಭಾವವನ್ನು ಹೊಂದಿದ, ಪುರುಷತ್ವದ ಮಾರ್ಗ. ಪುರುಷ ಹಾಗೂ ಸ್ತ್ರೀ ತತ್ವಗಳೆರಡೂ ಸಹ ಸಮನಾಗಿ ಸರಿದೂಗಿದಿದ್ದರೆ, ನಾವು ಹೆಚ್ಚು ಉತ್ತಮವಾದ ಬದುಕನ್ನು ಬದುಕುತ್ತಿದ್ದೆವು.

ಭಾರತದಲ್ಲಿ ದೇವಿ ದೇವಸ್ಥಾನಗಳು

 

 

ಸ್ತ್ರೀ ಶಕ್ತಿಯ ಆರಾಧನೆಯು ಭೂಮಿ ಮೇಲಿನ ಅತ್ಯಂತ ಪುರಾತನ ರೀತಿಯ ಆರಾಧನೆಯಾಗಿದೆ. ಭಾರತ, ಅರೇಬಿಯಾ, ಮತ್ತು ಆಫ್ರಿಕಾದ ಬಹಳಷ್ಟು ಭಾಗಗಳು ಸ್ತ್ರೀ ದೈವದ ಆರಾಧನೆಯಲ್ಲಿ ತೊಡಗಿದ್ದವು. ಆದರೆ ಇಂದು, ಜಗತ್ತಿನಾದ್ಯಂತ ಪುರುಷತ್ವಕ್ಕೆ ಬಹಳಷ್ಟು ಪ್ರಾಧಾನ್ಯತೆಯನ್ನು ನೀಡಿರುವ ಕಾರಣದಿಂದಾಗಿ, ಸ್ತ್ರೀ ಶಕ್ತಿಯ ಆರಾಧನೆಯನ್ನು ಇನ್ನೂ ಉಳಿಸಿಕೊಂಡು ಬಂದಿರುವ ಏಕೈಕ ಸಂಸ್ಕೃತಿಯೆಂದರೆ ಅದು ಭಾರತ.

ಸ್ತ್ರೀ ಮತ್ತು ಪುರುಷ ತತ್ವಗಳು ಸಮನಾಗಿದಿದ್ದರೆ, ಪರಿಸರದ ವಿಪತ್ತುಗಳು ಇರುತ್ತಿರಲಿಲ್ಲವೆಂದು ನನ್ನ ಅಭಿಪ್ರಾಯ ಏಕೆಂದರೆ ಸ್ತ್ರೀ ಶಕ್ತಿ ಹಾಗೂ ಭೂಮಿಯ ಉಪಾಸನೆ ಯಾವಾಗಲೂ ಒಟ್ಟಿಗೆ ನಡೆಯುತ್ತಿತ್ತು.

ಧ್ಯಾನಲಿಂಗವನ್ನು ಪ್ರತಿಷ್ಠಾಪಿಸುವುದಕ್ಕೆ ಸ್ವಲ್ಪ ಮೊದಲು, ನಾನು ಒಂದು ಸಣ್ಣ ಜನರ ಗುಂಪಿನೊಂದಿಗೆ ದೇವಿ ದೇವಸ್ಥಾನಗಳ ಯಾತ್ರೆಗೆ ಹೋಗಿದ್ದೆ. ಆ ಸಮಯದಲ್ಲಿ, ನನಗೆ ತಮಿಳುನಾಡಿನ ಭೂಗೋಳದ ಪರಿಚಯ ಅಷ್ಟಾಗಿ ಇರಲಿಲ್ಲ. ಆದ್ದರಿಂದ ನಾನು ಕರ್ನಾಟಕಕ್ಕೆ ಹೋಗಲು ನಿರ್ಧರಿಸಿದೆ ಏಕೆಂದರೆ ಅಲ್ಲಿ ನನಗೆ ದೇವಸ್ಥಾನಗಳು ಎಲ್ಲಿವೆ ಎಂಬುದು ಗೊತ್ತಿತ್ತು. ಅವು ಪ್ರಸಿದ್ಧವಾದ ದೇವಸ್ಥಾನಗಳೇನಲ್ಲ, ಆದರೆ ಸಣ್ಣ ಊರು ಮತ್ತು ಹಳ್ಳಿಗಳಲ್ಲಿನ ದೇವಸ್ಥಾನಗಳು. ನನಗೆ ಹಿಂದಿನಿಂದಲೂ ಅವುಗಳ ಬಗ್ಗೆ ತಿಳಿದಿತ್ತು, ಅದಕ್ಕಾಗಿ ನಾವು ಅವುಗಳನ್ನು ಹುಡುಕಿಕೊಂಡು ಹೋದೆವು ಏಕೆಂದರೆ ನಮಗೆ ಕೆಲವು ವಿಷಯಗಳನ್ನು ಬಗೆಹರಿಸಬೇಕಿತ್ತು ಮತ್ತು ಅದನ್ನು ನೆರವೇರಿಸಲು ನಾವು ಸರಿಯಾದ ಸ್ಥಳ ಹಾಗೂ ಶಕ್ತಿಯ ಹುಡುಕಾಟದಲ್ಲಿದ್ದೆವು. ಈಶ ಯೋಗ ಕೇಂದ್ರದಲ್ಲಿ ನಾವದನ್ನು ಸೃಷ್ಟಿಸಬಹುದಾಗಿತ್ತು, ಆದರೆ ಅದಕ್ಕಾಗಿ ಒಂದು ಮಂದಿರವನ್ನು ಕಟ್ಟಿ ಅದನ್ನು ನಿರಂತರವಾಗಿ ನಿರ್ವಹಿಸಬೇಕಾಗಿತ್ತು. ನಾವಿನ್ನೂ ಧ್ಯಾನಲಿಂಗವನ್ನು ಪ್ರತಿಷ್ಠಾಪಿಸುವುದರಲ್ಲಿದ್ದೆವು, ಹಾಗಾಗಿ ಇದನ್ನೆಲ್ಲಾ ಮಾಡಲು ಮತ್ತೊಂದು ದೇವಸ್ಥಾನವನ್ನು ನಿರ್ಮಿಸುವುದು ನಮಗೆ ಬೇಕಾಗಿರಲಿಲ್ಲ. 


ಹಾಗಾಗಿ ನಾವು ಈ ದೇವಸ್ಥಾನಗಳನ್ನು ಹುಡುಕಿಕೊಂಡು ಹೋದೆವು ಮತ್ತು ನಾನು ಸಂಪೂರ್ಣವಾಗಿ ಆಶ್ಚರ್ಯಚಕಿತನಾದೆನು. ಸಣ್ಣ ಊರುಗಳಲ್ಲಿ, ಕೆಲವೊಮ್ಮೆ ಸಣ್ಣ ಹಳ್ಳಿಗಳಲ್ಲಿ ಕೂಡ, ನೂರಾರು ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದಂತಹ ದೇವಿ ದೇವಸ್ಥಾನಗಳು ಇನ್ನೂ ಸಹ ಬಹಳ ಶಕ್ತಿಯುತವಾಗಿವೆ – ಸಂಪೂರ್ಣವಾಗಿ, ಪ್ರಬಲವಾಗಿ ಮತ್ತು ತೀವ್ರವಾಗಿ ಶಕ್ತಿಯುತವಾಗಿವೆ. ಇವುಗಳಲ್ಲಿ ಬಹಳಷ್ಟು ದೇವಸ್ಥಾನಗಳನ್ನು, ಆ ಪ್ರಾದೇಶಿಕ ಭಾಗದ ಅವಶ್ಯಕತೆಗಳಿಗೆ ತಕ್ಕಂತೆ ನಿರ್ದಿಷ್ಟವಾದ ಉದ್ದೇಶಗಳಿಗಾಗಿ ನಿರ್ಮಿಸಲಾಗಿತ್ತು. ಇದನ್ನು ಯಾರೇ ಮಾಡಿದ್ದರೂ ಸಹ, ತುಂಬ ಚೆನ್ನಾಗಿ ಮಾಡಿದ್ದರು. ತಂತ್ರಜ್ಞಾನವು ಬಹಳ ಉತ್ತಮವಾಗಿತ್ತು ಮತ್ತಿದು ಇಷ್ಟೊಂದು ಸ್ಥಳಗಳಲ್ಲಿ ಆಗಿರಬೇಕೆಂದರೆ, ನಿಸ್ಸಂಶಯವಾಗಿ ಆ ತಂತ್ರಜ್ಞಾನವು ಜನರ ನಡುವೆ ತುಂಬ ವ್ಯಾಪಕ ಮತ್ತು ಪ್ರಸಿದ್ಧವಾಗಿತ್ತು. ಸಣ್ಣ ಹಳ್ಳಿಯೊಂದರಲ್ಲಿ ಯಾರೋ ಒಬ್ಬರು ಅಷ್ಟೊಂದು ದೊಡ್ಡ ಮಟ್ಟದ ಸಂಕೀರ್ಣತೆ ಹೊಂದಿರುವಂತದನ್ನು ಪ್ರತಿಷ್ಠಾಪಿಸಿರುವುದನ್ನು ನೋಡಿದ್ದು ನಮ್ಮಲ್ಲಿ ತುಂಬ ವಿನೀತ ಭಾವವನ್ನು ಮೂಡಿಸಿತು. ಇವರೆಲ್ಲಾ ಹೆಸರಿಲ್ಲದ ಯೋಗಿಗಳು. ಅವರು ಯಾರೆಂಬುದು ಯಾರಿಗೂ ಸಹ ತಿಳಿದಿಲ್ಲ.  ಅವರು ದೇವಸ್ಥಾನದ ಮೇಲೆ ತಮ್ಮ ಹೆಸರುಗಳನ್ನು ಬರೆಯಲಿಲ್ಲ ಮತ್ತು ಅದೇ ಅದರ ಸೌಂದರ್ಯ – ಅವರ ಹೆಸರನ್ನು ಬಿಟ್ಟುಹೋಗುವ ಅಗತ್ಯವನ್ನು ಅವರೆಂದೂ ಯೋಚಿಸಲೇ ಇಲ್ಲ. ಅಲ್ಲಿನ ಶಕ್ತಿಯೊಂದನ್ನೇ ಅವರು ಬಿಟ್ಟುಹೋಗಿರುವುದು.
 

Editor’s Note: Experience Devi live this 2018 Navratri on October 12, 14 and 17, as we live stream the Navratri Pooja at 5:30 PM IST on Linga Bhairavi Facebook and Youtube channels.