ಯೋಗದಲ್ಲಿ, ಶಿವನನ್ನು ದೇವರೆಂದು ಪರಿಗಣಿಸಲಾಗುವುದಿಲ್ಲ. ಅವನನ್ನು ಮೊದಲ ಯೋಗಿ, ಆದಿಯೋಗಿಯಾಗಿ ಮತ್ತು ಮೊದಲ ಗುರು, ಆದಿ ಗುರುವಾಗಿ ಪರಿಗಣಿಸಲಾಗುತ್ತದೆ. ಮಾನವತೆಗೆ ಆದಿಯೋಗಿಯು ನೀಡಿದ ಕೊಡುಗೆಯ ಬಗ್ಗೆ ಸದ್ಗುರುಗಳು ಮಾತನಾಡುತ್ತಾ, ಅವನ ಪ್ರಭಾವವು ಪ್ರಪಂಚದಾದ್ಯಂತ ಗುರುತಿಸಲ್ಪಡುವುದನ್ನು ಖಚಿತಪಡಿಸುವ ಮಹತ್ವದ ಬಗ್ಗೆ ಹೇಳುತ್ತಾರೆ.

ಪ್ರಶ್ನೆ: ನಮಸ್ಕಾರ ಸದ್ಗುರು. ನೀವು ಜಗತ್ತಿನಾದ್ಯಂತ 21 ಅಡಿ ಅದಿಯೋಗಿಯ ಪ್ರತಿಮೆಗಳನ್ನು ರಚಿಸಲು ಯೋಜಿಸುತ್ತಿದ್ದೀರೆಂದು ಕೇಳಲ್ಪಟ್ಟೆ. ಇದರ ಪ್ರಾಮುಖ್ಯತೆ ಏನು? ಈಶ ಯೋಗ ಕೇಂದ್ರದಲ್ಲಿ ಆದಿಯೋಗಿ ಆಲಯದೆದುರು ಒಂದು ಪ್ರತಿಮೆ ನಿರ್ಮಿತವಾಗುತ್ತಿರುವುದನ್ನು ನಾನು ನೋಡಿದೆ.

ಸದ್ಗುರು: ಜಗತ್ತಿನ ಹಲವು ಭಾಗಗಳಲ್ಲಿ ಆದಿಯೋಗಿಯ ಪ್ರತಿಮೆಯನ್ನು ನಿರ್ಮಿಸುವ ಬಗ್ಗೆ - ನಾನು ಈಗಾಗಲೇ ಸಪ್ತರ್ಷಿಗಳು ಜಗತ್ತಿನಾದ್ಯಂತ ಪರ್ಯಟನೆಯನ್ನು ಮಾಡಿದುದರ ಬಗ್ಗೆ ಸ್ವಲ್ಪ ಮಟ್ಟಿಗೆ ಮಾತನಾಡಿದ್ದೇನೆ. 8000 ರಿಂದ 12,000 ವರ್ಷಗಳ ಹಿಂದೆ ದಕ್ಷಿಣ ಅಮೇರಿಕ, ಟರ್ಕಿ, ಮತ್ತು ಉತ್ತರ ಆಫ್ರಿಕಾದಲ್ಲಿ ಲಿಂಗ ಆರಾಧನೆಯಿದ್ದ ಬಗ್ಗೆ ಮತ್ತು ಜಗತ್ತಿನಾದ್ಯಂತ ಹಾವಿನ ಆರಾಧನೆಯಿದ್ದ ಬಗ್ಗೆ ನಾವು ದೊಡ್ಡ ಪ್ರಮಾಣದ ಸಂಶೋಧನಾ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಇದರ ಪುರಾತತ್ವ ಪುರಾವೆಗಳೂ ಇವೆ. ಬಹುಶಃ ಕಳೆದ 20  ಶತಮಾನಗಳಿಂದೀಚೆಗೆ, ಇದು ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ನಾಶವಾಗಿ ಕಳೆದುಹೋಗಿದೆ. ಆದರೆ, ಮೂಲತಃ, ಸಪ್ತರ್ಷಿಗಳ ಪ್ರಭಾವವು ಭೂಮಿಯ ಉದ್ದಗಲಕ್ಕೂ ಇತ್ತು. ಆದಿಯೋಗಿಯ ಯೋಗ ವಿಜ್ಞಾನದಿಂದ ಪ್ರಯೋಜನ ಪಡೆಯದೇ ಇರುವ ಯಾವ ಸಂಸ್ಕೃತಿಯೂ ಇಲ್ಲ - ಯೋಗ ಎಲ್ಲಾ ಕಡೆಯೂ ಹರಡಿತ್ತು - ಮತಧರ್ಮವಾಗಲ್ಲ, ನಂಬಿಕೆ ಕಟ್ಟುಪಾಡಾಗಲ್ಲ, ಸಿದ್ಧಾಂತವಾಗಲ್ಲ, ಆದರೆ ವಿಧಾನಗಳಾಗಿ. ಕಾಲಾಂತರದಲ್ಲಿ, ಅನೇಕ ವಿರೂಪಗಳು ಕಂಡುಬಂದಿವೆಯಾದರೂ, ತಿಳಿಯದೆಯೇ ಜಗತ್ತಿನಾದ್ಯಂತ ಲಕ್ಷಾಂತರ ಜನರು ಯಾವುದಾದರೊಂದು ರೀತಿಯ ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ. ಜನರ ಮೇಲೆ ಯಾವತ್ತೂ ಬಲವಂತವಾಗಿ ಹೇರಲ್ಪಡದೇ ಇಷ್ಟು ಕಾಲ ಜೀವಂತವಾಗಿರುವ ಏಕೈಕ ವಿಷಯವಿದು.

ಆದಿಯೋಗಿಯ ಯೋಗದ ವಿಜ್ಞಾನದಿಂದ ಪ್ರಯೋಜನ ಪಡೆಯದ ಯಾವುದೇ ಸಂಸ್ಕೃತಿ ಇಲ್ಲ. ಮಾನವ ಪ್ರಜ್ಞೆಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ ಒಂದು ಸಂಸ್ಕೃತಿಗೆ ಮತ್ತು ಅದನ್ನು ನೀಡಿದವನಿಗೆ ಮಾನ್ಯತೆಯನ್ನು ನಿರಾಕರಿಸುವ ಪ್ರಯತ್ನಗಳು ನಡೆಯುತ್ತಿವೆ.

ಯಾರೂ ಯಾರೊಬ್ಬರ ಕುತ್ತಿಗೆಗೆ ಕತ್ತಿ ಹಿಡಿದು, "ಯೋಗ ಮಾಡು! ಇಲ್ಲದಿದ್ದಲ್ಲಿ ನಿನ್ನ ತಲೆಯನ್ನು ಕಡಿದುಹಾಕುವೆ" ಎಂದು ಹೇಳಲಿಲ್ಲ. ಇದನ್ನು ಹೇರಲು ಯಾವುದೇ ಶಕ್ತಿಯನ್ನು ಬಳಸದಿದ್ದರೂ ಯೋಗ 15,000 ರಿಂದ 20,000 ವರ್ಷಗಳಿಂದ ಜೀವಂತವಾಗಿದೆ, ಮತ್ತು ಆಧ್ಯಾತ್ಮಿಕತೆಯನ್ನು ಪ್ರಸರಿಸುವುದು ಒಬ್ಬರ ಅಧಿಕಾರದಡಿಯಲ್ಲಿರಲಿಲ್ಲ - ಏಕೆಂದರೆ ಅದು ಅಷ್ಟು ಪರಿಣಾಮಕಾರಿಯಾದ ಪ್ರಕ್ರಿಯೆಯಾಗಿತ್ತು. ಅದು ತನ್ನ ಏರಿಳಿತವನ್ನು ಕಂಡಿದ್ದರೂ ಅದು ಮತ್ತೆ ದೊಡ್ಡ ರೀತಿಯಲ್ಲಿ ಮರಳಿ ಬರುತ್ತಿದೆ. ಆದಾಗ್ಯೂ, ಇಂದು ಯೋಗದ ಮೂಲವನ್ನು ಪ್ರಶ್ನಿಸುವ ಜನರಿದ್ದಾರೆ. ಇಂದು ಕಲಿಸಲಾಗುವ ಯೋಗವನ್ನು ಯುರೋಪಿಯನ್ ವ್ಯಾಯಾಮ ವ್ಯವಸ್ಥೆಯಿಂದ ಪಡೆಯಲಾಗಿದೆ ಎಂದೂ ಹೇಳುವ ಕೆಲವರಿದ್ದಾರೆ. ಮಾನವ ಪ್ರಜ್ಞೆಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ ಒಂದು ಸಂಸ್ಕೃತಿಗೆ ಮತ್ತು ಅದನ್ನು ನೀಡಿದವನಿಗೆ ಮಾನ್ಯತೆಯನ್ನು ನಿರಾಕರಿಸುವ ಪ್ರಯತ್ನಗಳು ನಡೆಯುತ್ತಿವೆ.

ನಾನು ಸಾವನ್ನಪ್ಪುವ ಮುನ್ನ, ಆದಿಯೋಗಿಗೆ ತಕ್ಕುದಾದ ಮಾನ್ಯತೆ ಸಿಗುವುದನ್ನು ಖಚಿತಪಡಿಸಬೇಕೆಂಬುದು ನನ್ನ ಆಶಯ. ಆದಿಯೋಗಿಯ ಈ 21 ಅಡಿ ಎತ್ತರದ ಪ್ರತಿಮೆಗಳು ಈ ಪ್ರಯತ್ನದ ಭಾಗವಾಗಿದೆ. ಎರಡೂವರೆ ವರ್ಷಗಳ ಕಾಲದ ಪ್ರಯತ್ನದ ನಂತರ ನಮಗೆ ಸಂತೋಷವಾಗುವ ಒಂದು ರೂಪವನ್ನು ಕಂಡುಕೊಂಡಿದ್ದೇವೆ. ಈ ರೂಪವನ್ನು ಅಭಿವ್ಯಕ್ತಗೊಳಿಸುವ ಪ್ರಕ್ರಿಯೆಯಲ್ಲಿ ಈಗ ನಾವು ತೊಡಗಿದ್ದೇವೆ. ಈ ಪ್ರತಿಯೊಂದು ಪ್ರತಿಮೆಯು 111 ಅಡಿ ಎತ್ತರ ಮತ್ತು 111 ಅಡಿ ಅಗಲದ ರಚನೆಯಲ್ಲಿ ನಿರ್ಮಿತವಾಗುತ್ತವೆ ಮತ್ತು ಅದರ ಜೊತೆ ಪ್ರಾಣ ಪ್ರತಿಷ್ಠಾಪಿಸಿದ ಲಿಂಗವಿರುತ್ತದೆ. ಇವುಗಳು ಧ್ಯಾನಕ್ಕಾಗಿ ಶಕ್ತಿಯುತ ಸ್ಥಳಗಳಾಗಿರುತ್ತವೆ. ಮೊದಲನೆಯದು ಉತ್ತರ ಅಮೇರಿಕಾದ ಟೆನಸ್ಸಿಯ ಈಶ ಇನ್ಸ್ಟಿಟ್ಯೂಟ್ ಆಫ್ ಇನ್ನರ್ ಸೈನ್ಸಸ್   ಆಶ್ರಮದ ಬಳಿ ಬರುತ್ತಿದೆ. ಒಂದು ಸ್ಯಾನ್ ಹೊಸೆ, ಸಿಯಾಟಲ್, ಮತ್ತನ್ನೊಂದು ಟೊರಾಂಟೋದಲ್ಲಿ ಬರುತ್ತಿದೆ. ಇನ್ನಿತರ ನಗರಗಳು ಈ ಸಾಧ್ಯತೆಯನ್ನು ಪರಿಶೀಲಿಸುತ್ತಿವೆ. ಅಮೇರಿಕಾದಲ್ಲಿ ರಾಜ್ಯಕ್ಕೊಂದಂತೆ 50 ಪ್ರತಿಮೆಗಳನ್ನು ನಿರ್ಮಿಸುವುದು ನಮ್ಮ ವಿಚಾರವಾಗಿದೆ.

ಭಾರತದಲ್ಲಿ ಆದಿಯೋಗಿಯ ಪ್ರತಿಮೆಗಳು

ಭಾರತದಲ್ಲಿ, ಎಲ್ಲಿ ಯಾರು ಇಂತಹ ಉಪಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಾರೋ, ಅಂತಹ ಕಡೆಗಳೆಲ್ಲೆಲ್ಲಾ ಈ ಪ್ರತಿಮಗಳು ಬರುತ್ತವೆ. ಭಾರತದ ನಾಲ್ಕು ಮೂಲೆಗಳಲ್ಲಿ 112 ಅಡಿ ಎತ್ತರದ ಆದಿಯೋಗಿಯ ಪ್ರತಿಮೆಗಳನ್ನು ಸ್ಥಾಪಿಸಲು ಕೆಲವು ಜನರು ಸಹ ಕೆಲಸ ಮಾಡುತ್ತಿದ್ದಾರೆ. ಮೂಡುತ್ತಿರುವ ಸೂರ್ಯನ ಮೊದಲ ಕಿರಣಗಳು ತಾಕುವ ಅರುಣಾಚಲ ಪ್ರದೇಶದ ಸರ್ಕಾರವು ತಮ್ಮ ರಾಜ್ಯದಲ್ಲಿ ಒಂದನ್ನು ಸ್ಥಾಪಿಸಲು ನಮ್ಮನ್ನು ಆಹ್ವಾನಿಸಿದೆ. ಭಾರತದಲ್ಲಿ ಕಾಣುವ ಮೊದಲ ಸೂರ್ಯನ ಕಿರಣಗಳು ಆದಿಯೋಗಿ ಮುಖಾರವಿಂದವನ್ನು ಸ್ಪರ್ಶಿಸಬೇಕೆಂದು ನನ್ನ ಆಕಾಂಕ್ಷೆ. ಜಾತಿ, ಧರ್ಮ ಮತ್ತು ಲಿಂಗವನ್ನು ಪರಿಗಣಿಸದೇ ಅವನು ಮಾನವತೆಗೆ ನೀಡಿದ ಕೊಡುಗೆಗಳನ್ನು ಜನರು ಕೊಂಡಾಡಬೇಕು — ದೇವರಾಗಲ್ಲ, ಆದರೆ ಎಲ್ಲಾ ಮಿತಿಗಳನ್ನು ಮೀರಿದ ಒಬ್ಬ ಮಾನವನಾಗಿ. ಒಬ್ಬ ಮಾನವನು ಏನಾಗಲು ಸಾಧ್ಯವೋ ಮತ್ತು ಏನಾಗಲು ಸಾಧ್ಯವಿಲ್ಲವೋ, ಅವನು ಅದೆಲ್ಲವೂ ಆಗಿದ್ದ. ಮೊದಲ ಬಾರಿಗೆ ಈ ಸಾಧ್ಯತೆಯನ್ನು ಮಾನವತೆಗೆ ತೆರೆದಿಟ್ಟಿದ್ದು ಅವನು. ಅವನು ಅದರ ಬಗ್ಗೆ ಕೇವಲ ಮಾತನಾಡಲಿಲ್ಲ, ಅದನ್ನು ಹೇಗೆ ಮಾಡಬೇಕೆಂಬುದಕ್ಕೆ ನಿರ್ದಿಷ್ಟವಾದ ವಿಧಾನಗಳನ್ನು ನೀಡಿದ. ಅವನಿಗಿಂತ ಮುಂಚೆ ಅಥವಾ ಅವನ ನಂತರ, ಮಾನವ ಪ್ರಜ್ಞೆಗೆ ಯಾರೂ ಇವನಿಗಿಂತ ಹೆಚ್ಚಿನ ಕೊಡುಗೆಯನ್ನು ನೀಡಿಲ್ಲ.

ಮಿಕ್ಕ ಮೂರು 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಗಳಲ್ಲಿ ಒಂದು ಉತ್ತರಾಖಂಡದಲ್ಲಿ, ಹರಿದ್ವಾರಕ್ಕೆ ಹೋಗುವ ದಾರಿಯಲ್ಲಿ, ಇನ್ನೊಂದು ಕನ್ಯಾಕುಮಾರಿಯ ಬಳಿ, ಮತ್ತಿನ್ನೊಂದು ರಾಜಾಸ್ಥಾನದಲ್ಲಿ ಗಡಿಯ ಹತ್ತಿರ  ಬರಬೇಕೆಂಬ ಆಸೆ. ದೇಶದ ನಾಲ್ಕು ಮೂಲೆಗಳಲ್ಲಿ, ಜನರು ನಿರ್ಲಕ್ಷಿಸಲಾಗದಂತಹ ಬೃಹತ್ ಪ್ರತಿಮಾರೂಪದ ಆದಿಯೋಗಿ ಇರುತ್ತಾನೆ. ಆದಿಯೋಗಿಯ ಬಗ್ಗೆ ಪುಸ್ತಕವೊಂದನ್ನೂ ಹೊರತರುತ್ತಿದ್ದೇವೆ. ಅವನನ್ನು ಮಾನವನಾಗಿ ನೋಡುವುದು ಅತೀ ಮುಖ್ಯ. ಹಾಗಾದಾಗ ಮಾತ್ರ, ನೀವು ಅವನ ಹಾಗಿರಲು ಪ್ರಯತ್ನಿಸುತ್ತೀರಿ. ಕೃಷ್ಣ, ರಾಮ, ಯೇಸು ಕ್ರಿಸ್ತ ಅಥವಾ ಇನ್ಯಾರೇ ಆಗಿರಲಿ - ಯಾವ ಕ್ಷಣದಲ್ಲಿ ನೀವು ಅವರನ್ನು ದೇವರಂತೆ ನೋಡುವಿರೋ, ಅವರ ತರಹ ಇರಲು ನೀವು ಯತ್ನಿಸುವುದಿಲ್ಲ - ಅದೇ ಸಮಸ್ಯೆ. ಆದಿಯೋಗಿಯು ಮಾನವ ಮಿತಿಗಳನ್ನು ಮೀರಿದ್ದರೂ ಅವನೂ ಒಬ್ಬ ಮನುಷ್ಯನೇ ಎಂದು ಜನರಿಗೆ ಸದಾ ಕಾಲ ನೆನೆಪಿಸಬೇಕು. ಪ್ರತಿಯೊಬ್ಬ ಮನುಷ್ಯನಿಗೂ ಈ ಸಾಮರ್ಥ್ಯವಿದೆ - ಅವರಿಗೆ ಏನು ತಿಳಿದಿದೆ, ಏನು ತಿಳಿದಿಲ್ಲ, ಅವರ ಹಿನ್ನಲೆಯೇನು ಎಂಬುದೆಲ್ಲ ಗಣನೆಗೆ ಬಾರದು. ಕೆಲ ವಿಷಯಗಳನ್ನು ಮಾಡಲು ಸಿದ್ಧರಿದ್ದರೆ, ಅತಿಶಯಿಸುವುದು ಎಲ್ಲರ ಜೀವನದಲ್ಲೂ ಒಂದು ಸಾಧ್ಯತೆ. ಇದನ್ನು ದೊಡ್ಡದಾಗಿ ನಿರೂಪಿಸಲು ಮತ್ತು ಯೋಗ ವಿಜ್ಞಾನವನ್ನು ನಮಗೆ ಕೊಡುಗೆಯಾಗಿ ನೀಡಿದವನೆಂದು ಮಾನ್ಯತೆ ನೀಡಲು, ದೇಶದಲ್ಲಿ ನಾವು ನಾಲ್ಕು ದೊಡ್ಡ ಪ್ರತಿಮೆಗಳು ಮತ್ತು ಎಷ್ಟು ಸಾಧ್ಯವೋ ಅಷ್ಟು 21-ಅಡಿ ಪ್ರತಿಮೆಗಳನ್ನು ಸ್ಥಾಪಿಸಲು ಯೋಚಿಸುತ್ತಿದ್ದೇವೆ.

ಯೋಗವೇ ಏಕೈಕ ಮಾರ್ಗ

ನಾನು ಏನಾಗಿರುವೆನೋ ಅದು ಸಾಧ್ಯವಾದದ್ದು ಈ ವಿಜ್ಞಾನವು ನಮಗೆ ಉಚಿತವಾಗಿ ಲಭ್ಯವಿರುವ ಕಾರಣದಿಂದ. ನಾನು ಚಿಕ್ಕವನಿದ್ದಾಗ, "ಯೋಗವನ್ನು ಮಾಡಬೇಕಿದ್ದರೆ, ನೀವು ಗುರುಪೂಜೆಯನ್ನು ಮಾಡಬೇಕು" ಎಂದು ನಿರ್ಬಂಧವನ್ನು ಹೇರಿದ್ದರೆ ನಾನು ಎದ್ದು ಹೋಗಿರುತ್ತಿದ್ದೆ. ತಲೆಬಾಗಿ ನಮಸ್ಕಾರ ಮಾಡು, ಅಥವಾ ದೀಪ ಹಚ್ಚು ಎಂದಿದ್ದರೆ, ನಾನು ಹೊರಟುಬಿಡುತ್ತಿದ್ದೆ. ಈ ರೀತಿಯಾದ ಯಾವುದೇ ನಿರ್ಬಂಧಗಳಿಲ್ಲ, ಕೇವಲ ಏನು ಮಾಡಬೇಕೆಂಬುದರ ಬಗ್ಗೆ ಸೂಚನೆಗಳಷ್ಟೆ. ಅವುಗಳು ಕೆಲಸ ಮಾಡಿತು. ಆದಿಯೋಗಿ ನೀಡಿದ ವಿಜ್ಞಾನವಿರದ ಹೊರತು ನಾನು ನಾನಾಗಿರುತ್ತಿರಲಿಲ್ಲ. ಈ ವಿಜ್ಞಾನ ಮತಧರ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಅವನು ಎಲ್ಲಾ ಮತಧರ್ಮಕ್ಕಿಂತಲೂ ಮುಂಚೆ ಬಂದವನು. ಯೋಗ, ಆಧುನಿಕ ಜಗತ್ತಿಗೆ ಅತ್ಯಗತ್ಯ, ಏಕೆಂದರೆ ನಾವು ಬುದ್ಧಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವಿ. ನನ್ನ ತಾರುಣ್ಯದಲ್ಲಿ ನನಗಿದ್ದ ಸಮಸ್ಯೆಯಿದು: ನನಗೆ ದೀಪ ಹಚ್ಚಲು ಆಗುತ್ತಿರಲಿಲ್ಲ, ತಲೆ ಬಾಗಿ ನಮಸ್ಕರಿಸಲು ಆಗುತ್ತಿರಲಿಲ್ಲ, ದೇವಸ್ಥಾನದೊಳಗೆ ಹೋಗುತ್ತಿರಲಿಲ್ಲ, ಯಾರಾದರೂ ಒಂದು ಮಂತ್ರವನ್ನು ಹೇಳಿದರೆ, ಅಲ್ಲಿಂದ ಹೊರಟುಹೋಗುತ್ತಿದ್ದೆ. ಇದು ಬುದ್ಧಿಯ ಸಮಸ್ಯೆ.

ಎಲ್ಲ ಕಡೆಯೂ ಆದಿಯೋಗಿಯ ಹೆಸರು ಅನುರಣಿಸಬೇಕೆಂಬುದು ನನ್ನ ಆಶಯ. ಆದಿಯೋಗಿಯ ಸ್ಥಳಕ್ಕೆ ಬರುವ ಎಲ್ಲರೂ 112 ವಿಧಾನಗಳಲ್ಲಿ ಅವರಿಗೆ ಬೇಕಾದ ಒಂದನ್ನು ಆರಿಸಿಕೊಂಡು, ಮೂರು ನಿಮಿಷದ ಸಾಧನೆಯಿಂದ ಆರಂಭಿಸಬಹುದು.  

ಬುದ್ಧಿಮತ್ತೆಗೆ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಕೊಟ್ಟಷ್ಟೂ, ಹೆಚ್ಚು ಹೆಚ್ಚು ಜನರಿಗೆ ಈ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆ ಉಂಟಾದಾಗ, ವೈಜ್ಞಾನಿಕ ಮಾರ್ಗವಾಗಿ ಯೋಗವು ಏಕೈಕ ಮಾರ್ಗವಾಗಿದೆ. ಬೇರೆಲ್ಲವೂ ಜನರನ್ನು ವಿಭಜಿಸುತ್ತದೆ. ಮತ್ತು ಮಾನವತೆಗೆ ಅದಾಗುವ ಸಮಯ ದೂರವಿಲ್ಲ. ಆ ಸಮಯ ಬರುವ ಮುನ್ನವೆ, ಎಲ್ಲ ಕಡೆಯೂ ಆದಿಯೋಗಿಯ ಹೆಸರು ಅನುರಣಿಸಬೇಕು, ಮತ್ತು ಈ ಯೋಗ ವಿಜ್ಞಾನ ಲಭ್ಯವಿದೆಯೆಂದು ಎಲ್ಲರಿಗೂ ತಿಳಿದಿರಬೇಕು. ಈ ಪ್ರತಿಮೆಗಳು 112 ಅಡಿ ಎತ್ತರವಾಗಿರುತ್ತದೆ, ಏಕೆಂದರೆ, ಆದಿಯೋಗಿಯು ನಮಗೆ ನಮ್ಮ ಪರಮ ಸ್ವರೂಪವನ್ನು ಪಡೆಯಲು 112 ವಿಧಾನಗಳನ್ನು ನೀಡಿದ. ನಾವಿದನ್ನು ಸರಳಗೊಳಿಸಿ, ನೀವು ಮಾಡಬಹುದಾದ 112 ವಿಷಯಗಳನ್ನು ನೀಡುತ್ತೇವೆ. ಇವುಗಳಲ್ಲಿ, ನೀವು ಒಂದನ್ನು ಮಾಡಬೇಕಷ್ಟೆ. ಇದು ನಿಮ್ಮ ಜೀವನವನ್ನು ಸರಳವಾದ ರೀತಿಯಲ್ಲಿ ಪರಿವರ್ತಿಸುತ್ತದೆ.

ಆದಿಯೋಗಿಯ ಸ್ಥಳಕ್ಕೆ ಬರುವ ಎಲ್ಲರೂ 112 ವಿಧಾನಗಳಿಂದ ಅವರಿಗೆ ಬೇಕಾದ ಒಂದನ್ನು ಆರಿಸಿಕೊಳ್ಳಬಹುದು ಮತ್ತು ಮೂರು ನಿಮಿಷದ ಸಾಧನೆಯಿಂದ ಆರಂಭಿಸಬಹುದು. ಪ್ರತಿಯೊಬ್ಬರೂ ಮೂರು ನಿಮಿಷಗಳನ್ನು ವಿನಿಯೋಗಿಸಬಹುದು. ಅದು ಅವರಿಗೆ ಸರಿಯೆನಿಸಿದರೆ, ಕ್ರಮೇಣವಾಗಿ 6, 12, ಅಥವಾ 24 ನಿಮಿಷಗಳಿಗೆ ಅವಧಿಯನ್ನು ಹೆಚ್ಚಿಸಬಹುದು. ಇದನ್ನು ಮುಂದಿನ ದಶಕದೊಳಗೆ ನೆಲೆಗೊಳಿಸಲು ನಾವು ಬಯಸುತ್ತೇವೆ - ಜಾತಿ, ಮತ, ಲಿಂಗ, ಅಥವಾ ದೈಹಿಕ ಸ್ಥಿತಿಗಳು ಗಣನೆಗೆ ಬಾರದೇ ಎಲ್ಲರೂ ತಮ್ಮ ಜೀವನದಲ್ಲಿ ಸರಳವಾದ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಹೊಂದಿರಬೇಕು.

ಯಾರಿಗೆ ಇದನ್ನು ಸಾಧ್ಯವಾಗಿಸುವ ಇಚ್ಛೆಯಿದೆಯೋ, ದಯಮಾಡಿ ನೀವುಗಳು ನಮ್ಮ ಜೊತೆ ಕೈಜೋಡಿಸಬೇಕು. ಏಕೆಂದರೆ ಜನರ ಜೀವನದಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ತರುವುದು ನಾವು ಮಾನವತೆಗೆ ಕೊಡಬಹುದಾದ ಅತ್ಯಂತ ಮುಖ್ಯ ಕೊಡುಗೆ.

ಸಂಪಾದಕರ ಟಿಪ್ಪಣಿ: ಈಶ ಕೇಂದ್ರದ ಅರ್ಪಣೆ - ಸದ್ಗುರುಗಳ ಇಬುಕ್  “Shiva – Ultimate Outlaw” ಮತ್ತು Vairagya “ವೈರಾಗ್ಯ” ಎಂಬ ಐದು ಶಕ್ತಿಶಾಲಿ ಮಂತ್ರಗಳಿರುವ ’ಸಿಡಿ’ಯನ್ನೊಳಗೊಂಡ ‌ಆನ್‌ಲೈನ್ ಪ್ಯಾಕೇಜ್ ಈಗ ಉಚಿತವಾಗಿ ಲಭ್ಯ.

Download Now

ಈ ಲೇಖನದ ಮೂಲ ಆವೃತ್ತಿ ಜನವರಿ 2014ರ ಈಶ ಫಾರೆಸ್ಟ್ ಫ್ಲವರ್‌‌ ಮ್ಯಾಗ್ಸೀನ್ನಲ್ಲಿ ಪ್ರಕಟವಾಗಿರುತ್ತದೆ. PDF ಕಾಪಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ January 2014 issue of Forest Flower ಅಥವಾ ಪ್ರಿನ್‌ಟೆಡ್ ಕಾಪಿಗಾಗಿ ಸಬ್‌ಸ್ಕ್ರೈಬ್ ಮಾಡಿ Print subscriptions.