ಯೋಗಿ ಮತ್ತು ದಾರ್ಶನಿಕರಾದ ಸದ್ಗುರುಗಳ 3 ಜೀವನಪಾಠಗಳನ್ನು ತಿಳಿಯೋಣ. ಅವುಗಳನ್ನು ಕಾರ್ಯಗತಗೊಳಿಸಲು ಕೇವಲ ಒಂದು ಕ್ಷಣ ತೆಗೆದುಕೊಳ್ಳುತ್ತದೆಯಾದರೂ, ಅವುಗಳು ನಮ್ಮಲ್ಲಿ ಆಳವಾದ ರೂಪಾಂತರವನ್ನು ಆರಂಭಿಸಬಹುದು.

ಪ್ರಶ್ನೆ: ಸದ್ಗುರುಗಳಿಗೆ ನಮಸ್ಕಾರ, ನಾನು ಈಶಾಂಗ ಶಿಕ್ಷಕನಾಗಲು ತರಬೇತಿಯನ್ನು ಪಡೆಯುತ್ತಿದ್ದೇನೆ. ಈಶಾಂಗ ಆಗುವುದರ ಅರ್ಥವೇನು, ಮತ್ತು ನೀವು ನಮ್ಮಿಂದ ಏನನ್ನು ನಿರೀಕ್ಷಿಸುತ್ತೀರಿ?

ಸದ್ಗುರು: "ಈಶ" ಎಂಬ ಪದದ ಅರ್ಥ, "ಯಾವುದು ಎಲ್ಲದರ ತಳಹದಿಯಾಗಿದೆಯೋ ಅದು" ಎಂದು. ಶೂನ್ಯತೆಯು ಎಲ್ಲದರ ತಳಹದಿಯಾಗಿದೆ. ನೀವು ಜಗತ್ತನ್ನು ವಿವಿಧ ಕಂಪನಗಳಂತೆ ನೋಡಿದರೆ, ಮೌನವು ಎಲ್ಲದರ ತಳಹದಿಯಾಗಿದೆ. ನೀವು ಜಗತ್ತನ್ನು ವಿವಿಧ ಆಕಾರಗಳಂತೆ ನೋಡಿದರೆ, ನಿರಾಕಾರವು ಎಲ್ಲದರ ತಳಹದಿಯಾಗಿದೆ. ನೀವು ಜಗತ್ತನ್ನು ಅಳತೆ ಪರಿಭಾಷೆಯಲ್ಲಿ ನೋಡಿದರೆ, ಅನಂತವು ಎಲ್ಲದರ ತಳಹದಿಯಾಗಿದೆ. ನೀವು ಜಗತ್ತನ್ನು ಏನೋ ಅಥವಾ ಎಲ್ಲಾ ಎಂದು ನೋಡಿದರೆ, ಶೂನ್ಯತೆಯು ಎಲ್ಲದರ ತಳಹದಿಯಾಗಿದೆ. ಸೃಷ್ಟಿಯ ಆ ನಿರಾಕಾರ ತಳಹದಿ ಅಥವಾ ನಿರಾಕಾರ ದೈವತ್ವವೇ ಈಶ. ಅಂಗವೆಂದರೆ ಅದರ ಭಾಗವಾಗುವುದು ಎಂದು.

ಯಾವುದು ಅಸ್ತಿತ್ವದ ತಳಹದಿಯೋ, ನೀವು ಹೇಗಿದ್ದರೂ ಅದರ ಒಂದು ಅಂಗವೇ, ನಿಮಗೆ ಅದರ ಅರಿವಿಲ್ಲವಷ್ಟೆ. ಮಾನವ ಅಜ್ಞಾನವು ಎಂತಹುದೆಂದರೆ, ಪ್ರತಿಯೊಬ್ಬರೂ ತಾವೇ ಸ್ವತಃ ಒಂದು ಜಗತ್ತಾಗಿರುತ್ತಾರೆ. ಪ್ರತಿ ವ್ಯಕ್ತಿಯೂ ತಾವೇ ಸ್ವತಃ ಒಂದು ಸೃಷ್ಟಿಯಾಗಿರುವ ಕಾರಣ ಪ್ರತಿಯೊಂದು ಸರಳವಾದ ಕೊಡುವಿಕೆ-ತೆಗೆದುಕೊಳ್ಳುವಿಕೆಯು ಕೂಡ ಜಟಿಲವಾಗುತ್ತದೆ.  ಮತ್ತದು ಮಾತ್ರವಲ್ಲ - ತಾವು ಸೃಷ್ಟಿಗಿಂತಲೂ ಮಿಗಿಲು ಎಂದೆಣಿಸುತ್ತಾರೆ. ಅವರು ಅಷ್ಟು ದೊಡ್ಡದಾಗಿರುವ ಕಾರಣ, ಅವರು ಹೇಗೆ ಚಲಿಸಿದರೂ, ಯಾರಿಗಾದರೂ ಢಿಕ್ಕಿ ಹೊಡೆಯುತ್ತಾರೆ. ಪ್ರತಿದಿನ ಜೀವನ ಸಾಗಿಸುವುದು ಒಂದು ಅಪಾಯವಾಗಿಬಿಡುತ್ತದೆ. ಈ ಕಾರ್ಯಕ್ರಮಗಳ ಮೂಲಕ ನಾವು ಮಾಡಲು ಬಯಸುವುದೇನೆಂದರೆ, ಈ ಅಪಾಯವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗದಿದ್ದರೆ, ಇದು ತಗ್ಗುವಂತೆ ಮಾಡುವುದು. ಹೀಗೆ ಮಾಡಿದಾಗ, ಜನರು ಸಹಜವಾಗಿಯೇ ಅವರ ಪರಮ ಸಾಧ್ಯತೆಯ ಅಭಿವ್ಯಕ್ತಿಯನ್ನು ಕಂಡುಕೊಳ್ಳಬಹುದು.

ಮೂರು ಸರಳ ಜೀವನಪಾಠಗಳು

ಎಲ್ಲಿಯವರೆಗೆ ನೀವು ನಿಮ್ಮ ಮೂರ್ಖತನವನ್ನು (ದಿನದ ಕೊನೆಯಲ್ಲಿ)ಗಮನಿಸಿ, ನಿಮ್ಮ ಕುರಿತು ನೀವೆ ನಗಬಲ್ಲಿರೋ, ಅಲ್ಲಿಯವರೆಗೆ ಏನು ನಡೆಯಿತೆಂಬುದು ಮುಖ್ಯವಲ್ಲ. ಇದು ಎಲ್ಲರೂ ಮಾಡಲೇ ಬೇಕಾದ ಸರಳ ಅಭ್ಯಾಸ. ದಿನದ ಕೊನೆಯಲ್ಲಿ, ನಿಮ್ಮ ಹಾಸಿಗೆಯಲ್ಲಿ ಕುಳಿತು, ಎದ್ದ ಕ್ಷಣದಿಂದ ನೀವು ಹೇಗಿದ್ದಿರಿ ಎಂದು ನಿಮ್ಮ ಇಡೀ ದಿನವನ್ನು ಅವಲೋಕಿಸಿ. ಕಡೇಪಕ್ಷ 90% ಸಮಯ ನೀವು ಮುಟ್ಠಾಳರಾಗಿದ್ದೀರಿ ಎನ್ನುವುದನ್ನು ನೀವೇ ಆಗ ನೋಡುವಿರಿ.

#1

ನಿಮಗೆ ಸ್ವಲ್ಪ ಜವಾಬ್ದಾರಿಯನ್ನು ನೀಡಿದರೆ ಸಾಕು, ಇದ್ದಕ್ಕಿದ್ದಂತೆ, ನೀವು ಬಹಳ ಮುಖ್ಯವಾಗಿಬಿಡುವಿರಿ. ಜಗತ್ತಿಗಿಂತಲೂ ನೀವು ಎಷ್ಟು ಸಮಯ ದೊಡ್ಡವರಾದಿರಿ ಎಂದು ನೋಡಿ. ಹೆಚ್ಚಿನ ಸಮಯ ನೀವು ಜಂಬದಿಂದ ಬೀಗುತ್ತಿದ್ದಿರಿ ಎಂದು ನೀವೇ ನೋಡುವಿರಿ.

#2

ನೀವೆಷ್ಟು ಬಾರಿ ಅಮರರಾದಿರಿ, ಅಂದರೆ, ಎಷ್ಟು ಬಾರಿ ನಿಮ್ಮ ನಶ್ವರತೆಯು ಅರಿವು ನಿಮಗಿರಲಿಲ್ಲ ಎಂದು ನೋಡಿ.

#3

ನೀವೆಷ್ಟು ಬಾರಿ ನಿಮ್ಮ ಸುತ್ತಲಿರುವ ಜನ ಮತ್ತು ವಿಷಯಗಳ ಬಗ್ಗೆ ಯಾವುದೇ ಒಳಗೊಡಿಸಿಕೊಳ್ಳುವಿಕೆಯ ಭಾವನೆಯಿಲ್ಲದೆ ನೋಡಿದಿರಿ ಎಂಬುದನ್ನು ನೋಡಿ.

ನೀವು ಕೇವಲ ಈ ಮೂರು ವಿಷಯಗಳನ್ನು ಗಮನಿಸುತ್ತಿದ್ದರೆ, ನೀವು ರಾತ್ರಿಯಿಡೀ ನಗಬೇಕಾಗುತ್ತದೆಯೆನ್ನುವುದನ್ನು ನೀವೇ ನೋಡುವಿರಿ. ಅಳಬೇಡಿ. ನಿಮ್ಮ ಮುಟ್ಠಾಳತನದ ಬಗ್ಗೆ ನಗುವುದನ್ನು ನೀವು ಕಲಿತರೆ, ನೀವು ಹೊತ್ತಿರುವ ಎಲ್ಲಾ ಕಸ ಬಹುಬೇಗ ಗೊಬ್ಬರವಾಗುತ್ತದೆ, ಮತ್ತು ಗೊಬ್ಬರ ಬೆಳವಣಿಗೆಗೆ ಬಹಳ ಒಳ್ಳೆಯದು.

ಈಶಾಂಗ ಆಗುವುದರ ಅರ್ಥ, ನಿಮ್ಮ ಅಸ್ತಿತ್ವದ ವಾಸ್ತವತೆಯನ್ನು ಅರ್ಥೈಸಿಕೊಳ್ಳುವುದು. ನೀವು ಈ ವಿಶಾಲ ಬ್ರಹ್ಮಾಂಡದ ಒಂದು ಚಿಕ್ಕ ಅಂಗವಷ್ಟೆ. ನೀವು ಈ ಅನಂತ ಶೂನ್ಯತೆಯಲ್ಲಿನ ಒಂದು ಚಿಕ್ಕ ಅಂಗವಷ್ಟೆ. ಮತ್ತು ಇದಕ್ಕೆ ಇನ್ನೊಂದು ಆಯಾಮವೂ ಇದೆ. ನಿಮ್ಮನ್ನು ನಾವು "ಈಶಾಂಗ" ಎಂದು ಕರೆದಾಗ, ನೀವು ಈಶ ಫೌಂಡೇಶನ್ನಿನ ಒಂದು ಅಂಗ, ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ನನ್ನ ವಿಸ್ತರಿಸಿದ ಭಾಗ. ನೀವು ಒಬ್ಬ ಈಶ ಶಿಕ್ಷಕರಾಗಿ ನಿಂತಾಗ, ಜನ ನಿಮ್ಮನ್ನು ಒಬ್ಬ ವ್ಯಕ್ತಿಯಾಗಿ ನೋಡುವುದಿಲ್ಲ, ಬದಲಾಗಿ ನಿಮ್ಮನ್ನು ಅವರು ಸದ್ಗುರುಗಳ ಮುಂದುವರೆದ ಭಾಗದಂತೆ ನೋಡುತ್ತಾರೆ. ನಾನು ಗೋಳು ಮೋರೆ ಮಾಡುವುದಿಲ್ಲ, ಜನರನ್ನು ಹಂಗಿಸುವುದಿಲ್ಲ. ಜನ ನನಗೆ ಏನೇನೋ ಮಾಡುತ್ತಾರೆ, ಅದರೆ ನಾನು ನಗುತ್ತಾ ಜೀವನವನ್ನು ಸಾಗಿಸುತ್ತಿದ್ದೇನೆ. ನನ್ನ ಸುತ್ತಲೂ ಎಲ್ಲವೂ ಅದ್ಭುತವಾಗಿದೆ ಎಂದೇನಲ್ಲ. ನಾನು ನನ್ನೊಳಗೆ ಅದ್ಭುತವಾಗಿದ್ದೀನಿ ಅಷ್ಟೆ. ನಾನು ಅದ್ಭುತವಾಗಿರುವ ಕಾರಣ, ಜಗತ್ತು ಸರಿಯಾಗಿರುತ್ತದೆ.

ನಿಮ್ಮ ತೀರ್ಮಾನಗಳನ್ನು ಪಕ್ಕದಲ್ಲಿರಿಸಿ

ಜನ ನಿಮ್ಮನ್ನು ನನ್ನ ವಿಸ್ತರಿತ ಅಂಗವಾಗಿ ನೋಡುತ್ತಾರೆ - ನೀವು ಅದಕ್ಕನುಗುಣವಾಗಿಬೇಕು. ದ್ವೈತವನ್ನು ಬೆಂಬಲಿಸುವ ಎರಡು ಕಣ್ಣುಗಳೊಂದಿಗೆ ಜನರನ್ನು ನೋಡದಿರುವುದು ಅತ್ಯಂತ ಮುಖ್ಯವಾದ ವಿಷಯ. "ಇವಳು ಚೆನ್ನಾಗಿದ್ದಾಳೆ - ಇವಳು ಚೆನ್ನಾಗಿಲ್ಲ. ಅವನು ಒಳ್ಳೆಯವನು - ಅವನು ಒಳ್ಳೆಯವನಲ್ಲ. ಅವಳು ಪರವಾಗಿಲ್ಲ - ಅವಳು ಸರಿಯಿಲ್ಲ. ಅವನು ಶ್ರೀಮಂತ - ಅವನು ಬಡವ. ಇದು ಸರಿ - ಅದು ಸರಿಯಲ್ಲ."  ಇದೆಲ್ಲಾ ಅಸಂಬದ್ಧತೆ. ನೀವು ಒಂದೇ ಕಣ್ಣನಿಂದ ನೋಡುವುದನ್ನು ಕಲಿಯಬೇಕು - ಎಲ್ಲರೂ ಒಂದೇ ಎಂದು. ಒಮ್ಮೆ ನಿಮ್ಮ ಮುಂದೆ ಜನರಿದ್ದರೆ, ನಿಮ್ಮ ಜೀವನ ನಿಮ್ಮದಲ್ಲ. ನೀವಿದನ್ನಷ್ಟೆ ನಿಮ್ಮಲ್ಲಿ ಒಳಗೂಡಿಸಿಕೊಂಡರೆ, ಉಳಿದವುಗಳನ್ನು ನಿಮಗಾಗಿ ನಾನು ನೋಡಿಕೊಳ್ಳುವೆ. ನಿಮ್ಮತನವನ್ನು ನೀವು ಬದಿಗಿರಿಸಲು ಕಲಿತರೆ, ನಿಮ್ಮ ಇಷ್ಟಾನಿಷ್ಟಗಳನ್ನು ಬದಿಗಿರಿಸಲು ಕಲಿತರೆ, ನಿಮ್ಮ ಅಗತ್ಯ ಮತ್ತು ತೀರ್ಮಾನಗಳನ್ನು ಬದಿಗಿರಿಸಲು ಕಲಿತರೆ, ನೀವಿಲ್ಲಿ ನನ್ನ ವಿಸ್ತೃತ ಅಂಗವಾಗಿ ನಿಂತರೆ, ನಿಮ್ಮ ಜೀವನದ ಪ್ರತಿಯೊಂದು ಅಂಶಗಳನ್ನೂ ನಾನು ನೋಡಿಕೊಳ್ಳುವೆ.

ಸಂಪಾದಕರ ಟಿಪ್ಪಣಿ: ಇಶಾ ಬ್ಲಾಗಿನಿಂದ ಇತ್ತೀಚಿನ ನವೀಕರಣಗಳನ್ನು ಪಡೆಯಿರಿ. ಟ್ವಿಟರ್, ಫೇಸ್ಬುಕ್, RSS ಅಥವಾ ಬ್ರೌಸರ್ ವಿಸ್ತರಣೆಗಳು, ನಿಮ್ಮ ಪಿಕ್ ತೆಗೆದುಕೊಳ್ಳಿ.