ಈಶದ ’ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್’ ಸಸ್ಯಗಳನ್ನು ಬಳಸಿಕೊಂಡು ನಿಮ್ಮ ಮನೆಯ ವಾತಾವರಣವನ್ನು ಶುದ್ಧೀಕರಿಸುವ ಒಂದು ಸಹಜ ಮತ್ತು ಸರಳ ಉಪಾಯವನ್ನು ನೀಡುತ್ತದೆ.

ಆರೋಗ್ಯಪೂರ್ಣ ಜೀವನಕ್ಕೆ ಅತ್ಯವಶ್ಯಕವಾದ ಸಂಗತಿಗಳು ಐಷಾರಾಮಿ ವಸ್ತುಗಳಾಗಿಬಿಟ್ಟರೆ, ಜಗತ್ತು ಯಾವ ರೀತಿ ಕಾಣಬಹುದು? ಜನಸಂಖ್ಯೆಯ ಒಂದು ಸಣ್ಣ ಭಾಗ ಮಾತ್ರ ಶುದ್ಧ ಕುಡಿಯುವ ನೀರು, ಶುದ್ಧವಾದ ಗಾಳಿ ಮತ್ತು ಸೇವನೆಗೆ ಅರ್ಹವಾದ ಆಹಾರವನ್ನು ಪಡೆಯಲು ಸಾಧ್ಯವಾದರೆ ಹೇಗಾಗಬಹುದು?

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ, ಕಟ್ಟಡದ ಒಳಗಿನ ವಾಯುಮಾಲಿನ್ಯವು, ಕಟ್ಟಡದ ಹೊರಗಿನ ಮಾಲಿನ್ಯವನ್ನು ಮೀರಿಸುತ್ತದೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತಿವೆ. ಒಳಾಂಗಣ ವಾಯುಮಾಲಿನ್ಯದಿಂದಾಗಿ ವರ್ಷ ಒಂದಕ್ಕೆ ಎರಡು ಮಿಲಿಯನಷ್ಟು ಅಕಾಲಿಕ ಸಾವುಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ – ಅವುಗಳಲ್ಲಿ ಶೇ.44% ನಿಮೋನಿಯ, 54% ರಷ್ಟು ಶ್ವಾಸಕೋಶದ ದೀರ್ಘಕಾಲಿಕ ಅಡಚಣೆಗಳಿಂದ ಉಂಟಾಗುವ ಕಾಯಿಲೆಗಳು ಮತ್ತು ಶೇ.2 ರಷ್ಟು ಶ್ವಾಸಕೋಶದ ಕ್ಯಾನ್ಸರ್ ನಿಂದ ಸಾವುಗಳು ಸಂಭವಿಸುತ್ತಿವೆ. ಈ ಸಮಸ್ಯೆಗಳಿಗೆ ಒಳಗಾಗುತ್ತಿರುವವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳೇ ಆಗಿರುತ್ತಾರೆ, ಏಕೆಂದರೆ ಅವರು ಮನೆಯಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಮಕ್ಕಳು ವಾಯುಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳಿಂದ ನಿರಂತರವಾಗಿ ಬಳಲುತ್ತಿರುವುದು ಚಿಂತೆಯ ವಿಷಯವಾಗಿದೆ. ಇದು ಅವರ ಕಲಿಕೆ ಮತ್ತು ಬೆಳವಣಿಗೆಯ ಜೊತೆಗೆ, ಅವರ ಬಾಲ್ಯವನ್ನು ಹಲವಾರು ರೀತಿಗಳಲ್ಲಿ ಕುಂಠಿತಗೊಳಿಸುತ್ತದೆ.

ಈ ಆತಂಕಕಾರಿ ಪರಿಸ್ಥಿತಿಯ ಹೊರತಾಗಿಯೂ, ಈ ಹಾನಿಯನ್ನು ಹಿಮ್ಮುಖಗೊಳಿಸಿಕೊಳ್ಳಲು ಮಾಡಬಹುದಾದ ಒಂದು ಸರಳ ವಿಧಾನವಿದೆ. ಕಮಲ್ ಮಿತ್ತಲ್ ಎನ್ನುವವರು ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್, ಮತ್ತು ನಾಸಾದ ಸಂಶೋಧನೆಗಳ ಸಹಾಯದಿಂದ, ಮೂರು ಸಾಮಾನ್ಯ ಸಸ್ಯಗಳು ನಮ್ಮನ್ನು ಆರೋಗ್ಯವಾಗಿ ಇಡಲು ಬೇಕಾದ ಶುದ್ಧ ಗಾಳಿಯನ್ನು ಸುಲಭವಾಗಿ ಉತ್ಪಾದಿಸುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಅವು ಅರೆಕಾ ಪಾಮ್, ಮದರ್-ಇನ್-ಲಾಸ್ ಟಂಗ್ ಮತ್ತು ಮನಿ ಪ್ಲಾಂಟ್.

ಅರೆಕಾ ಪಾಮ್

ಒಬ್ಬ ಮನುಷ್ಯನಿಗೆ ಬೇಕಾದ ಸಸ್ಯಗಳ ಸಂಖ್ಯೆ : 4

ಸಸ್ಯದ ಕಾಳಜಿ: ಅರೆಕಾ ಪಾಮ್ ಸಸ್ಯಗಳಿಗೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ಕಿಟಕಿಗಳಿಂದ ಬರುವ ಪ್ರಖರವಾದ ಸೂರ್ಯನ ಬೆಳಕು ಬೇಕಾಗುತ್ತದೆ. ಸೂರ್ಯನ ನೇರವಾದ ಬೆಳಕಿನಲ್ಲಿ ಎಲೆಗಳು ಹಸಿರುಮಿಶ್ರಿತ ಅರಶಿನ ಬಣ್ಣಕ್ಕೆ ತಿರುಗುತ್ತವೆ. ಒದ್ದೆ ಮಣ್ಣನ್ನು ಬಳಸಿ ಮತ್ತು ಮೇಲ್ಪದರ ಒಣಗುತ್ತಿದ್ದಂತೆಯೇ ನೀರು ಹಾಕಿ. ಈ ಸಸ್ಯಗಳು ಅತಿಯಾದ ನೀರಿಗೆ ಚೆನ್ನಾಗಿ ಸ್ಪಂದಿಸುವುದಿಲ್ಲ.

ಮದರ್-ಇನ್-ಲಾಸ್ ಟಂಗ್

ಒಬ್ಬ ಮನುಷ್ಯನಿಗೆ ಬೇಕಾದ ಸಸ್ಯಗಳ ಸಂಖ್ಯೆ : ಸೊಂಟದೆತ್ತರದ 6-8 ಸಸ್ಯಗಳು

ಸಸ್ಯದ ಕಾಳಜಿ: ಬೇರೆ ಬೇರೆ ಉಷ್ಣತೆಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಸೂರ್ಯನ ಬೆಳಕು ನೇರವಾಗಿ ಬೀಳದ ಜಾಗದಲ್ಲಿಡಿ ಮತ್ತು ಅತಿಯಾಗಿ ನೀರು ಹಾಕಬೇಡಿ

ಮನಿ ಪ್ಲಾಂಟ್

ಸಸ್ಯದ ಕಾಳಜಿ: ಹದವಾದ ತೇವಾಂಶ ಇರುವ ಕೋಣೆಯಲ್ಲಿಡಿ. ಆಗಾಗ ನೀರು ಹಾಕುತ್ತಿರಿ. ಇದರ ನಿರ್ವಹಣೆ ಬಹಳ ಸುಲಭ.

ಮನಿ ಪ್ಲಾಂಟ್ ಸಸ್ಯವು ಗಾಳಿಯಿಂದ ಫಾರ್ಮಾಲ್ಡಿಹೈಡ್ ಮತ್ತು ಇತರ ಆವಿಯಾಗುವ ರಾಸಾಯನಿಕಗಳನ್ನು ತೆಗೆದುಹಾಕುತ್ತದೆ.

ಮನಿ ಪ್ಲಾಂಟ್ ಅನ್ನು ದೆಹಲಿಯ ಕಟ್ಟಡವೊಂದರಲ್ಲಿ ಅಳವಡಿಸಿ, ಪ್ರಯೋಗಿಸಿ ನೋಡಿ ಅತ್ಯದ್ಭುತ ಫಲಿತಾಂಶಗಳನ್ನು ಪಡೆಯಲಾಗಿದೆ. ಬೇರೆ ಕಟ್ಟಡಗಳಿಗೆ ಹೋಲಿಸಿದರೆ, ಈ ಸಸ್ಯವನ್ನು ಇಟ್ಟ ಕಟ್ಟಡದಲ್ಲಿ ವಾಸಿಸುವ ಜನರಲ್ಲಿ ಕಣ್ಣಿನ ಉರಿ 52%, ಶ್ವಾಸಕೋಶಗಳ ಕಿರಿಕಿರಿ 34%, ತಲೆನೋವು 24%, ಶ್ವಾಸಕೋಶದ ತೊಂದರೆಗಳು 12% ಮತ್ತು ಅಸ್ತಮಾ 9% ರಷ್ಟು ಕಡಿಮೆ ಕಂಡುಬಂದಿದೆ.

ಈಗ ನಾವೇನು ಮಾಡಬಹುದು?

ಹೊಸದಾಗಿ ಪ್ರಾರಂಭಿಸುವವರು ಮೇಲ್ಕಂಡ ಒಂದೊಂದು ಸಸ್ಯದಿಂದ ಪ್ರಾರಂಭಿಸಿ ನಿಧಾನವಾಗಿ ಮೇಲೆ ಹೇಳಿದಂತೆ ಅಗತ್ಯವಿರುಷ್ಟು ಸಸ್ಯಗಳನ್ನು ತಂದು ಪೋಷಿಸಬಹುದು. ಗಿಡ ತುಂಬಾ ದೊಡ್ಡದಾಗಿ ಬೆಳೆದಾಗ (ಅದು ಹಲವಾರು ವರ್ಷ ತೆಗೆದುಕೊಳ್ಳುತ್ತದೆ) ಮತ್ತು ನೆಲದಲ್ಲಿ ಹೂಳಬೇಕಾಗಿ ಬಂದಾಗ, ನಿಮ್ಮ ಪರಿಸರದಲ್ಲಿ ಒಂದು ಸೂಕ್ತವಾದ ಸ್ಥಳದಲ್ಲಿ ನೆಟ್ಟು, ಅದು ಬಲವಾಗುವವರೆಗೆ ಪೋಷಿಸಿರಿ. ಈ ರೀತಿಯಲ್ಲಿ, ನಾವು ನಮ್ಮ ವೈಯಕ್ತಿಕ ಮತ್ತು ಪರಿಸರ ಗುರಿಗಳನ್ನು ಪರಸ್ಪರ ಹೊಂದಿಸಿಕೊಳ್ಳಬಹುದಾಗಿದೆ.

ಸಂಪಾದಕರ ಟಿಪ್ಪಣಿ: ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಯೋಜನೆಯಲ್ಲಿ ಕೈಜೋಡಿಸಲು, ಫೇಸ್ ಬುಕ್ ನಲ್ಲಿ ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್ ಗೆ ಭೇಟಿ ನೀಡಿ.