ದೀಪಾವಳಿಯನ್ನು ನರಕ ಚತುರ್ದಶಿ ಎಂದೂ ಕರೆಯಲಾಗುತ್ತದೆ. ಏಕೆಂದರೆ, ನರಕಾಸುರ, ‘ತನ್ನ ಮರಣದ ದಿನವನ್ನು’ ಆಚರಣೆ ಮಾಡಬೇಕಾಗಿ ವಿನಂತಿಸಿದ್ದ. ಅನೇಕ ಜನರು ತಮ್ಮ ಮಿತಿಗಳನ್ನು ಸಾವಿನ ಕ್ಷಣದಲ್ಲಿ ಮಾತ್ರ ಅರಿತುಕೊಳ್ಳುತ್ತಾರೆ. ಅವರು ಈಗಲೇ ಅರಿತುಕೊಂಡರೆ, ಜೀವನವನ್ನು ಸುಧಾರಿಸಿಕೊಳ್ಳಬಹುದು. ಆದರೆ, ಬಹಳಷ್ಟು ಜನರು ತಮ್ಮ ಕೊನೆಯ ಕ್ಷಣದವರೆಗೂ ಕಾಯುತ್ತಾರೆ. ನರಕಾಸುರ ಈ ರೀತಿಯ ಜನರಲ್ಲಿ ಒಬ್ಬನಾಗಿದ್ದ. ಅವನು, ತನ್ನ ಜೀವನವನ್ನು ಹೇಗೆ ವ್ಯರ್ಥಮಾಡಿಕೊಂಡನು ಮತ್ತು ಹೇಗೆ ಮೂರ್ಖನಾಗಿ ಬದುಕುತ್ತಿದ್ದನು ಎಂದು ಮರಣಕಾಲದಲ್ಲಿ ಅವನಿಗೆ ಇದ್ದಕ್ಕಿದ್ದಂತೆ ಅರಿವಾಯಿತು. ಅವನು ಕೃಷ್ಣನನ್ನು, "ಇಂದು ನೀನು ನನ್ನನ್ನಷ್ಟೇ ಅಲ್ಲದೇ ನಾನು ಮಾಡಿದ ಎಲ್ಲಾ ತಪ್ಪುಗಳನ್ನೂ ಸಹ ಕೊಲ್ಲುತ್ತಿದ್ದೀಯ, ಆದ್ದರಿಂದ ಇದನ್ನು ಆಚರಿಸಬೇಕು" ಎಂದು ವಿನಂತಿಸಿದನು. ಆದ್ದರಿಂದ ನೀವು ನರಕಾಸುರನ ತಪ್ಪುಗಳು ನಾಶವಾಗಿದ್ದನ್ನು ಮಾತ್ರ ಆಚರಿಸಬಾರದು, ನಿಮ್ಮೊಳಗಿನ ಎಲ್ಲಾ ತಪ್ಪುಗಳನ್ನು ನಾಶಪಡಿಸುವ ಸಲುವಾಗಿ ಈ ದಿನವನ್ನು ಆಚರಿಸಬೇಕು. ಆಗಲೇ, ನಿಜವಾದ ರೀತಿಯಲ್ಲಿ ದೀಪಾವಳಿ ಆಚರಿಸಿದಂತಾಗುವುದು. ಇಲ್ಲದಿದ್ದರೆ, ಇದು ಕೇವಲ ಎಣ್ಣೆ ಮತ್ತು ಪಟಾಕಿಗಾಗಿ ಮಾಡಿದ ಸಾಕಷ್ಟು ಖರ್ಚು ಅಷ್ಟೇ.

ನೀವು ನರಕಾಸುರನ ತಪ್ಪುಗಳು ನಾಶವಾಗಿದ್ದನ್ನು ಮಾತ್ರ ಆಚರಿಸಬಾರದು, ನಿಮ್ಮೊಳಗಿನ ಎಲ್ಲಾ ತಪ್ಪುಗಳನ್ನು ನಾಶಪಡಿಸುವ ಸಲುವಾಗಿ ಈ ದಿನವನ್ನು ಆಚರಿಸಬೇಕು.

ನರಕಾಸುರನ ಉತ್ತಮ ಹಿನ್ನೆಲೆಯಿಂದ ಬಂದವನು. ಅವರು ವಿಷ್ಣುವಿನ ಮಗ ಎಂದು ದಂತಕಥೆ ಹೇಳುತ್ತದೆ. ಆದರೆ ವಿಷ್ಣು ಕಾಡುಹಂದಿಯ ರೂಪವನ್ನು ತಾಳಿದಾಗ ಅವನ ಜನ್ಮ ಸಂಭವಿಸಿದ್ದರಿಂದ ಅವನಿಗೆ ಕೆಲವು ಪ್ರವೃತ್ತಿಗಳು ಇದ್ದವು. ಅದಕ್ಕಿಂತ ಮಖ್ಯವಾಗಿ, ನರಕಾಸುರನು ಮುರ ಎಂಬ ರಾಕ್ಷಸನೊಂದಿಗೆ ಸ್ನೇಹ ಹೊಂದಿದ್ದನು, ನಂತರ ಮುರ ಅವನ ಸೈನ್ಯಾಧಿಕಾರಿ ಆದನು. ಇಬ್ಬರೂ ಒಟ್ಟಾಗಿ ಅನೇಕ ಯುದ್ಧಗಳನ್ನು ಮಾಡಿ ಸಾವಿರಾರು ಜನರನ್ನು ಕೊಂದಿದ್ದರು. ಇಬ್ಬರೂ ಒಟ್ಟಿಗೆ ಇದ್ದರೆ ನರಕಾಸುರನನ್ನು ಎದುರಿಸಲು ಯಾವುದೇ ಮಾರ್ಗವಿಲ್ಲದ ಕಾರಣ ಕೃಷ್ಣನು ಮೊದಲು ಮುರನನ್ನು ಕೊಂದನು. ಇದೇ ಕಾರಣಕ್ಕಾಗಿ ಕೃಷ್ಣನಿಗೆ ಮುರಾರಿ ಎಂಬ ಹೆಸರು ಬಂದಿತು. ದಂತಕಥೆಯಲ್ಲಿ, ಮುರ ಯುದ್ಧದಲ್ಲಿ ಮಾಂತ್ರಿಕ ಶಕ್ತಿಯನ್ನು ಹೊಂದಿದ್ದಾನೆಂದು ಹೇಳಲಾಗುತ್ತಿತ್ತು, ಅದು ಅವನ ಎದುರು ಯಾರೂ ನಿಲ್ಲಲು ಸಾಧ್ಯವಾಗದ ರೀತಿಯಲ್ಲಿ ಅವನನ್ನು ಮಾಡಿತ್ತು. ಮುರನನ್ನು ಕೊಂದ ನಂತರ, ನರಕಾಸುರನನ್ನು ಕೊಲ್ಲುವುದು ಕಷ್ಟವೇನಾಗಿರಲಿಲ್ಲ.

ಅವನನ್ನು ಬದುಕಲು ಬಿಟ್ಟರೆ ಅವನು ಮಾಡುತ್ತಿದ್ದ ಹೀನ ಕೃತ್ಯಗಳನ್ನು ಅದೇ ರೀತಿ ಮುಂದುವರಿಸುತ್ತಾನೆ ಎಂದು ಕೃಷ್ಣನು ಮನಗಂಡು ನರಕಾಸುರನನ್ನು ಕೊಂದನು. ಆದರೆ ಯಾರಾದರೂ ಅವನನ್ನು ಸಾವಿನ ಸಮೀಪ ತಂದರೆ, ಅವನು ಅರಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದನು. ಇದ್ದಕ್ಕಿದ್ದಂತೆ ಅವನು ಅನಗತ್ಯವಾಗಿ ಅಸಹ್ಯ ವಿಷಯಗಳನ್ನು ಸಂಗ್ರಹಿಸಿದ್ದನ್ನು ಅರಿತುಕೊಂಡನು. ಆದುದರಿಂದಲೇ ಅವನು ಕೃಷ್ಣನನ್ನು ಕುರಿತು, “ನೀನು ನನ್ನನ್ನು ಕೊಲ್ಲುತ್ತಿಲ್ಲ, ಬದಲಿಗೆ ನನ್ನ ನಕಾರಾತ್ಮಕ ಸಂಗತಿಗಳನ್ನು ಹೊರ ತೆಗೆಯುತ್ತಿದ್ದೀಯ. ನೀನು ನನಗೆ ಮಾಡುತ್ತಿರುವುದು ಒಳ್ಳೆಯದೇ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಆದ್ದರಿಂದ ನಾನು ಸಂಗ್ರಹಿಸಿದ ಎಲ್ಲ ನಕಾರಾತ್ಮಕತೆಯೂ ನಾಶವಾಗುತ್ತಿರುವುದನ್ನು ಎಲ್ಲರೂ ಆಚರಿಸಬೇಕು. ಏಕೆಂದರೆ ಇದು ನನಗೆ ಹೊಸ ಬೆಳಕನ್ನು ತಂದಿದೆ ಮತ್ತು ಅದು ಎಲ್ಲರಿಗೂ ಇದೇ ರೀತಿ ಬೆಳಕನ್ನು ತರಬೇಕು” ಎಂದು ವಿನಂತಿಸಿಕೊಂಡನು. ಈ ಕಾರಣಕ್ಕಾಗಿಯೇ ಇದು ದೀಪಗಳ ಹಬ್ಬವಾಯಿತು. ಈ ದಿನ ಇಡೀ ದೇಶವು ಬೆಳಕಿನಿಂದ ಕಂಗೊಳಿಸುತ್ತದೆ, ಆದ್ದರಿಂದ ನೀವು ನಿಮ್ಮ ಎಲ್ಲ ಕೆಟ್ಟ(ನಕಾರಾತ್ಮಕ) ವಿಷಯಗಳನ್ನು ಸುಡಬೇಕು. ನೀವಿದನ್ನು ಈಗಲೇ ಮಾಡುವುದು ಒಳ್ಳೆಯದು. ನರಕಾಸುರನಿಗಾದರೋ, ಕೃಷ್ಣನು “ನಾನು ನಿನ್ನನ್ನು ಕೊಲ್ಲುತ್ತೇನೆ” ಎಂದು ಎಚ್ಚರಿಸಿದ್ದನು. ಆದರೆ ನಿಮಗೆ, ಯಾವುದೇ ಮುನ್ನೆಚ್ಚರಿಕೆಯಿಲ್ಲದೆಯೇ ಸಾವು ಸಂಭವಿಸಬಹುದು.

ಟೆನ್ನೆಸ್ಸೀಯಲ್ಲಿ ಒಂದು ಘಟನೆ ಸಂಭವಿಸಿತು. ಒಬ್ಬ ಮಹಿಳೆ ಬಂದೂಕು ಅಂಗಡಿಗೆ ಹೋದಳು. ಜನರು ಹೊಸ ಬಂದೂಕುಗಳನ್ನು ಖರೀದಿಸುವುದು ಟೆನ್ನೆಸ್ಸೀಯಲ್ಲಿ ಬಹಳ ಸಾಮಾನ್ಯ. ಅವಳು ಗನ್ ಅಂಗಡಿಗೆ ಹೋಗಿ, “ನನ್ನ ಗಂಡನಿಗಾಗಿ ರಿವಾಲ್ವರ್ ಮತ್ತು ಕೆಲವು ಗುಂಡುಗಳು ಬೇಕು” ಎಂದು ಕೇಳಿದಳು. ಅಂಗಡಿಯವನು "ಯಾವ ಬ್ರಾಂಡ್ ಅನ್ನು ನಿಮ್ಮ ಗಂಡ ಇಷ್ಟ ಪಡುತ್ತಾರೆ?" ಎನ್ನಲು, "ನಾನು ಅವನನ್ನು ಸುಡಲು ಹೋಗುತ್ತಿದ್ದೇನೆ ಎಂಬ ವಿಷಯವನ್ನು ಇನ್ನೂ ಅವನಿಗೆ ತಿಳಿಸಿಲ್ಲ" ಎಂದಳು.

ನಾವೆಲ್ಲರೂ ಒಂದೇ ಅಂಶದಿಂದ ಮಾಡಲ್ಪಟ್ಟಿದ್ದರೂ ಸಹ, ಪ್ರತಿಯೊಬ್ಬರೂ ಎಷ್ಟು ವಿಭಿನ್ನವಾಗಿ ಮಾರ್ಪಟ್ಟಿದ್ದೇವೆ ಎಂಬುದನ್ನು ಗಮನಿಸಬೇಕು.

ಜೀವನದಲ್ಲಿನ ಘಟನೆಗಳು ಯಾರಿಗೂ ಮುಂಚೆಯೇ ತಿಳಿಸಿ ಸಂಭವಿಸುವುದಿಲ್ಲ. ಮತ್ತಾರೋ ನಿಮ್ಮನ್ನು ಕೊಲ್ಲುವ ಬದಲಿಗೆ ನೀವೇ ಪ್ರಜ್ಞೆಯಿಂದ ಸಾವನ್ನಪ್ಪಿ ಮತ್ತೆ ಪ್ರಜ್ಞೆಯಿಂದ ಜನನ ಹೊಂದಬೇಕೆಂಬ ನೆನಪನ್ನು ದೀಪಾವಳಿ ಎಲ್ಲರಿಗೂ ತರುತ್ತದೆ. ಗಂಡಸೋ, ಹೆಂಗಸೋ, ಬ್ಯಾಕ್ಟೀರಿಯಾ, ವೈರಸ್ ಅಥವಾ ನಿಮ್ಮ ಸ್ವಂತ ಕೋಶಗಳು – ಯಾವುದು ನಿಮ್ಮ ಮೇಲೆ ಆಕ್ರಮಣ ಮಾಡಬಹುದು ಎಂಬುದು ತಿಳಿದಿಲ್ಲ. ಯಾರು ಬೇಕಾದರೂ ಆಕ್ರಮಣ ಮಾಡಬಹುದು. “ನನ್ನನ್ನು ನಾನು ಒಳ್ಳೆಯದಾಗಿ ಬೇಕಾದರೂ ರೂಪಿಸಿಕೊಳ್ಳಬಹುದಿತ್ತು. ಆದರೆ, ನಾನು ಕೆಟ್ಟ ಸಂಗತಿಗಳನ್ನು ಮಾತ್ರ ಸಂಗ್ರಹಿಸಿ ನನ್ನ ಜೀವನವನ್ನು ಹಾಗೆಯೇ ರೂಪಿಸಿಕೊಂಡೆ” – ನರಕಾಸುರನು ಈ ವಿಷಯವನ್ನು ಎಲ್ಲರೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಆಶಿಸಿದ್ದನನು. ನಾವು ನರಕಾಸುರನ ಬಯಕೆಯನ್ನು ಈ ದಿನ ಉತ್ತಮವಾಗಿ ಬಳಸಿಕೊಳ್ಳಬೇಕು.

ನಾವೆಲ್ಲರೂ ಒಂದೇ ಅಂಶದಿಂದ ಮಾಡಲ್ಪಟ್ಟಿದ್ದರೂ ಸಹ ಪ್ರತಿಯೊಬ್ಬರೂ ಎಷ್ಟು ವಿಭಿನ್ನವಾಗಿ ಮಾರ್ಪಟ್ಟಿದ್ದೇವೆ ಎಂಬುದನ್ನು ಗಮನಿಸಬೇಕು. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಯಾವ ಅಂಶಗಳನ್ನು ಸಂಗ್ರಹಿಸುತ್ತಿದ್ದೇವೆ ಎಂಬುದು ಪ್ರಶ್ನೆ. ನೀವು ನಿಮ್ಮೊಳಗೆ ವಿಷವನ್ನು ಸೃಷ್ಟಿಸಿಕೊಳ್ಳುತ್ತಿದ್ದೀರಾ ಅಥವಾ ದೈವಿಕ ಸುಗಂಧವನ್ನು ಸೃಷ್ಟಿಸಿಕೊಳ್ಳುತ್ತಿದ್ದೀರಾ? ಈ ಆಯ್ಕೆ ನಿಮ್ಮಲ್ಲಿಯೇ ಇರುತ್ತದೆ. ನರಕಾಸುರ ಒಳ್ಳೆಯ ಜನ್ಮವನ್ನು ಪಡೆದಿದ್ದರೂ, ಒಳ್ಳೆಯ ಬದುಕನ್ನು ಹೊಂದಲಿಲ್ಲ. ಕೃಷ್ಣ ಮತ್ತು ಅವನ ನಡುವಿನ ವ್ಯತ್ಯಾಸವೆಂದರೆ ಇಬ್ಬರೂ ತಮ್ಮದೇ ರೀತಿಯಲ್ಲಿ ತಮ್ಮನ್ನು ರೂಪಿಸಿಕೊಂಡಿದ್ದರು ಎಂಬುದನ್ನು ನರಕಾಸುರ ಅರಿತುಕೊಂಡನು. ಕೃಷ್ಣನು ತನ್ನನ್ನು ದೈವದಂತೆ ರೂಪಿಸಿಕೊಂಡಿದ್ದರೆ, ನರಕಾಸುರನು ರಾಕ್ಷಸನನ್ನಾಗಿ ರೂಪಿಸಿಕೊಂಡಿದ್ದನು. ನಮ್ಮೆಲ್ಲರಲ್ಲಿಯೂ ಈ ಆಯ್ಕೆಯಿದೆ. ನಮ್ಮಲ್ಲಿ ಈ ಆಯ್ಕೆಯಿಲ್ಲದಿದ್ದರೆ, ಯಶಸ್ಸನ್ನು ಪಡೆದ ಅನೇಕ ಮಹಾನ್ ಚೇತನಗಳ ಉದಾಹರಣೆಯ ಉಪಯೋಗವೇನು? ಒಬ್ಬ ವ್ಯಕ್ತಿಯು ಅದೃಷ್ಟಶಾಲಿ ಅಥವಾ ಯಾವ ರೀತಿ ಜನಿಸಿದ ಎಂಬುದು ಅದಕ್ಕೆ ಕಾರಣವಲ್ಲ. ಒಬ್ಬರು ಆ ರೀತಿಯಾಗಲು ಸಾಕಷ್ಟು ಪ್ರಯತ್ನಗಳ ಅಗತ್ಯವಿರುತ್ತದೆ.

ನಿಮ್ಮನ್ನು ನೀವೇ ಮರ್ದಿಸಿಕೊಂಡು ಬದುಕನ್ನು ಉತ್ತಮಗೊಳಿಸಿಕೊಳ್ಳಬೇಕು ಅಥವಾ ಬದುಕು ನಿಮ್ಮನ್ನು ಬಡಿದು ಮರ್ದಿಸಬೇಕು - ಈ ಆಯ್ಕೆ ಎಲ್ಲರಲ್ಲಿಯೂ ಇದೆ. ನರಕಾಸುರನು ಕೃಷ್ಣನು ಬಂದು ತನ್ನ ಜೀವನದಲ್ಲಿ ಚಾಟಿ ಬೀಸುವವರೆಗೂ ಕಾಯುತ್ತಿದ್ದ. ಆದರೆ ಕೃಷ್ಣ ತನ್ನ ಜೀವನವನ್ನು ತಾನೇ ಮರ್ದಿಸಿ ರೂಪಿಸಿಕೊಂಡ. ಇದುವೇ ಅವರ ನಡುವಿನ ದೊಡ್ಡ ವ್ಯತ್ಯಾಸ. ಒಬ್ಬನು ದೈವದಂತೆ ಪೂಜಿಸಲ್ಪಡುತ್ತಾನೆ, ಇನ್ನೊಬ್ಬನು ರಾಕ್ಷಸನಾಗಿ ಕೆಳಗಿಳಿಯುತ್ತಾನೆ - ಅಷ್ಟೆ. ಆದ್ದರಿಂದ, ಒಂದೋ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳುವಿರಿ ಅಥವಾ ಜೀವನವು ಒಂದಲ್ಲ ಒಂದು ದಿನ ನಿಮ್ಮನ್ನು ಮರ್ದಿಸುತ್ತದೆ. ದೀಪಾವಳಿ ಇದನ್ನು ನಮಗೆ ನೆನಪಿಸುತ್ತದೆ. ಈ ದೀಪಾವಳಿಯಲ್ಲಿ ನಾವೆಲ್ಲರೂ ಬೆಳಗೋಣ.

Love & Grace

Krishna Battles the Armies of the Demon Naraka, Wikipedia