ಕಂಗನಾ ರನೌತ್: ಕೃಷ್ಣ, ಮುಹಮ್ಮದ್, ರಾಮ, ಕ್ರಿಸ್ತ, ಬುದ್ಧ - ಈ ಭೂಮಿಯ ಮೇಲಿದ್ದ ಎಲ್ಲಾ ಜ್ಞಾನಿಗಳ ಹುಟ್ಟು ಅಥವಾ ಸಾವಿನ ಬಗ್ಗೆ ಯಾವುದಾದರೊಂದು ರೀತಿಯ ಉಲ್ಲೇಖಗಳಿವೆ. ಆದರೆ ಶಿವನ ವಿಷಯದಲ್ಲಿ, ಅವನು ತನ್ನನ್ನು ತಾನೇ ಸೃಷ್ಟಿಸಿಕೊಂಡನೆಂದು ನಾನು ಓದಿದ್ದೇನೆ. ಶಿವನು ಅನ್ಯಲೋಕದವನೆಂದು ಹೇಳುವ ಒಂದು ಸಿದ್ಧಾಂತವಿದೆ. ಅಷ್ಟೇ ಅಲ್ಲದೆ ಮನುಷ್ಯರ ಮನಸ್ಸಿನಲ್ಲಿ ಮೂಡುವ ಪ್ರತಿಯೊಂದು ಕಲ್ಪನೆ, ಚಿಂತನೆ, ಅಥವಾ ಬೇರೇನೇ ಆಗಿದ್ದರೂ, ಅದೆಲ್ಲವನ್ನೂ ಬಾಹ್ಯಾಕಾಶದ ಮೂಲಕ ಅನ್ಯಲೋಕ ಜೀವಿಗಳಿಂದ ನಮಗೆ ಪ್ರಸಾರಣೆ ಮಾಡಲಾಗಿದೆಯೆಂದು ಪ್ರತಿಪಾದಿಸುವ ಒಂದು ಸಿದ್ಧಾಂತವಿದೆ. ನಾವು ಅನ್ಯಲೋಕ ಜೀವಿಗಳಿಂದ ನಿಯಂತ್ರಿಸಲ್ಪಡುತ್ತಿದ್ದೇವೆಯೇ?

ಸದ್ಗುರು: ಮನುಷ್ಯನ ಬುದ್ಧಿವಂತಿಕೆಯಲ್ಲಿ ನಂಬಿಕೆ ಇಲ್ಲದವರು ಮೇಲೆ ನೋಡುತ್ತಾರೆ, ಮತ್ತು ಬುದ್ಧಿವಂತಿಕೆಯು ಇನ್ನೆಲ್ಲಿಂದಲೋ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ದುರದೃಷ್ಟವಶಾತ್, ಈಗಿನ ಪೀಳಿಗೆಯ ಜನ ಹೆಚ್ಚಾಗಿ ಮರೆತೇಹೋಗಿರುವ ಬಹಳಷ್ಟು ಮುಖ್ಯವಾದ ವಿಷಯಗಳಿವೆ. ಉದಾಹರಣೆಗೆ, ಯೋಗದಲ್ಲಿ, ನಾವು ಬೆನ್ನುಹುರಿಯನ್ನು ಮೇರುದಂಡ ಎಂದು ಕರೆಯುತ್ತೇವೆ - ಅದರರ್ಥ ಬ್ರಹ್ಮಾಂಡದ ಅಕ್ಷ ಎಂದು. ಬ್ರಹ್ಮಾಂಡವು ಅನಂತವಾದುದು ಎಂಬುದನ್ನು ಇಂದು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ, ನಾವೆಂದಿಗೂ ಸಹ ಈ ವಿಶ್ವವು ನಿರಂತರವಾಗಿ ವಿಸ್ತರಣೆಯಾಗುತ್ತಿರುವಂತದ್ದು ಎಂದು ಹೇಳುತ್ತಲೇ ಇದ್ದೇವೆ. 

ಅನುಭವದ ಕೇಂದ್ರ

ಮೇಲ್ನೋಟಕ್ಕೆ, ನಿಮ್ಮ ಬೆನ್ನುಹುರಿಯು ಬ್ರಹ್ಮಾಂಡದ ಅಕ್ಷ ಎಂದು ಹೇಳುವುದು ಹಾಸ್ಯಾಸ್ಪದವೆಂದನಿಸಬಹುದು. ಹಾಗಾದರೆ, ನಾವು ಹೀಗೇಕೆ ಹೇಳುತ್ತಿದ್ದೇವೆ? ಬ್ರಹ್ಮಾಂಡವಿದೆ ಎಂದು ನೀವು ಭಾವಿಸುವುದು ನಿಮ್ಮ ಅನುಭವದಿಂದ ಮಾತ್ರ. ನಿಮಗೆ ಏನನ್ನೂ ನೋಡಲು ಅಥವಾ ಅನುಭವಿಸಲು ಸಾಧ್ಯವಾಗಿರದಿದ್ದರೆ, ವಿಶ್ವವಿದೆ ಎಂದು ನಿಮಗೆ ತಿಳಿಯುತ್ತಿರಲಿಲ್ಲ. ಕೇವಲ ನಿಮ್ಮ ಅನುಭವದಿಂದಾಗಿ ಮಾತ್ರ ವಿಶ್ವವಿದೆ. ಮತ್ತು ನಿಮ್ಮ ಅನುಭವವನ್ನು ಪ್ರಸಾರಣ ಮಾಡುವ ಕೇಂದ್ರ ನಿಮ್ಮ ಬೆನ್ನುಹುರಿಯಾಗಿದೆ.

 

ನಿಮ್ಮ ಬೆನ್ನುಹುರಿಯಲ್ಲಿನ ನರಗಳನ್ನು ನಾವು ಕತ್ತರಿಸಿಬಿಟ್ಟರೆ, ವಿಶ್ವದ ವಿಷಯ ಬಿಡಿ, ನಿಮ್ಮ ದೇಹದ ಅನುಭವವೂ ನಿಮಗಿರುವುದಿಲ್ಲ. ನಿಮ್ಮ ಬೆನ್ನುಹುರಿಯನ್ನು ಬ್ರಹ್ಮಾಂಡ ಅಕ್ಷವೆಂದು ನಾವು ಏತಕ್ಕಾಗಿ ಹೇಳುತ್ತೇವೆಂದರೆ, ಅದನ್ನು ಅನುಭವಿಸುವ ನಿಮ್ಮ ಸಾಮರ್ಥ್ಯವು ನಿಮ್ಮ ಬೆನ್ನುಹುರಿಯಲ್ಲಿ ಬೇರೂರಿದೆ ಮತ್ತು ಅಲ್ಲಿಯೇ ಕೇಂದ್ರೀಕೃತವಾಗಿದೆ.

ಈ ಆಧಾರದ ಮೇಲೆ, ನಾವು ಮಾನವರಿಗಾಗೊಂದು ಸಂಪೂರ್ಣ ಸಾಧ್ಯತೆಯನ್ನು ಅಭಿವೃದ್ಧಿಪಡಿಸಿದೆವು, ಕೇವಲ ಅವುಗಳನ್ನು ನಂಬಲಷ್ಟೇ ಅಲ್ಲ, ಆದರೆ ಅವುಗಳನ್ನು ಒಂದು ಜೀವಂತ ಅನುಭವವನ್ನಾಗಿಸುವ ಸಲುವಾಗಿ. "ಯೋಗ" ಎನ್ನುವ ಪದ ಬಂದಿದ್ದು ಇಲ್ಲಿಂದಲೇ. ನೀವು ನಿಮ್ಮ ಪ್ರತ್ಯೇಕತೆಯ ಗಡಿಗಳನ್ನು ಅಳಿಸಿಹಾಕುವುದರಿಂದ ಮಾತ್ರ ಒಳಗೂಡಿಸಿಕೊಳ್ಳವಿಕೆ ಉಂಟಾಗುತ್ತದೆ. 

"ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನನ್ನು ಪ್ರೀತಿಸು, ನಾನು ನಿನ್ನನ್ನು ಅಪ್ಪಿಕೊಳ್ಳುತ್ತೇನೆ, ನೀನು ನನ್ನನ್ನು ಅಪ್ಪಿಕೊ." ಎನ್ನುವುದರಿಂದ ನಮ್ಮಲ್ಲಿ ಒಳಗೂಡಿಸಿಕೊಳ್ಳುವಿಕೆ ಬರುವುದಿಲ್ಲ. ಅವೆಲ್ಲಾ ಸ್ವಲ್ಪ ಸಮಯದವರೆಗೆ ಮಾತ್ರ. ನಾಳೆ ದಿನ, ಅವರೇನಾದರು ನಿಮಗಿಷ್ಟವಿಲ್ಲದಿರುವುದನ್ನು ಮಾಡಿದರೆ, ಆ ಸಂಬಂಧವು ಇಲ್ಲವಾಗುತ್ತದೆ. ಯೋಗವೆಂದರೆ ನಿಮ್ಮ ದೇಹವನ್ನೂ ಸೇರಿದಂತೆ, ನಿಮ್ಮ ಪ್ರತ್ಯೇಕತ್ವದ ಗಡಿಗಳನ್ನು ಅಳಿಸಿಹಾಕುವುದೇ ಆಗಿದೆ. ಹಾಗಾದಾಗ, ನಿಮ್ಮ ವ್ಯಕ್ತಿತ್ವದ ಗಡಿಗಳೊಂದಿಗೆ ನಿಮ್ಮನ್ನು ನೀವು ಗುರುತಿಸಿಕೊಳ್ಳದೆಯೇ ಇಲ್ಲಿರುವುದು ಹೇಗೆಂದು ನಿಮಗೆ ತಿಳಿಯುತ್ತದೆ.

ಶಿ-ವ – “ಯಾವುದಿಲ್ಲವೋ ಅದು”

ನಿಮ್ಮ ಭೌತಿಕ ರಚನೆ, ಮಾನಸಿಕ ರಚನೆ ಮತ್ತು ಭಾವನಾತ್ಮಕ ರಚನೆಗೆ ಗಡಿರೇಖೆ ಇದೆ - ಅದು ದೊಡ್ಡದು ಅಥವಾ ಚಿಕ್ಕದಾಗಿರಬಹುದು. ಆದರೆ ಯಾವುದೇ ಗಡಿಗಳಿಲ್ಲದ ಆಯಾಮಗಳೂ ಈ ಅಸ್ತಿತ್ವದಲ್ಲಿವೆ. ಯಾವುದಕ್ಕೆ ಗಡಿಗಳಿರುವುದಿಲ್ಲವೋ, ಅದು ಅಭೌತಿಕವಾದ್ದು. ಈ ಸಂಸ್ಕೃತಿಯಲ್ಲಿ ನಮ್ಮ ಗಮನ ಸದಾ ಅಭೌತಿಕವಾದ ಆ ಆಯಾಮದ ಮೇಲೆಯೇ ಇತ್ತು. ಅದಕ್ಕಾಗಿಯೇ ಶಿವ ಎನ್ನುವುದು ಅತ್ಯಂತ ಮಹತ್ವಪೂರ್ಣವಾದ ವಿಷಯವಾಯಿತು, ಏಕೆಂದರೆ ಶಿ-ವ ಎಂದರೆ "ಯಾವುದಿಲ್ಲವೋ ಅದು", ಯಾವುದು ಅಭೌತಿಕವೋ ಅದು ಎಂದರ್ಥ.

ಈಗ, ನಾವು ಮಾತನಾಡುತ್ತಿರುವ ಯೋಗಿ ಶಿವ - ಅವನೊಬ್ಬ ಮನುಷ್ಯನೆ ಅಥವಾ ಅವನು ಬೇರೆಲ್ಲಿಂದಾದರೂ ಬಂದವನೆ? ಅದೊಂದು ದೀರ್ಘವಾದ ವೃತ್ತಾಂತ.

ಈಗ, ನಾವು ಮಾತನಾಡುತ್ತಿರುವ ಯೋಗಿ ಶಿವ - ಅವನೊಬ್ಬ ಮನುಷ್ಯನೆ ಅಥವಾ ಅವನು ಬೇರೆಲ್ಲಿಂದಾದರೂ ಬಂದವನೆ? ಅದೊಂದು ದೀರ್ಘವಾದ ವೃತ್ತಾಂತ. ಈ ಅಂಶಗಳನ್ನೊಳಗೊಂಡಿರುವ ಆದಿಯೋಗಿಯ ಬಗ್ಗೆಯಾದ ಒಂದು ಪುಸ್ತಕವನ್ನು ನಾವು ಹೊರತಂದಿದ್ದೇವೆ, ಮತ್ತು ನಾನು ಸಂಕ್ಷಿಪ್ತವಾಗಿ ಅದನ್ನಿಲ್ಲಿ ಹೇಳುತ್ತೇನೆ ಕೇಳಿ. ನಾವು ಶಿವನ ಬಗ್ಗೆ ಮಾತನಾಡುವಾಗ, ಅಲ್ಲಿ ಯಾವುದೇ ವಂಶಾವಳಿಯಿಲ್ಲ, ಹಾಗೂ ಹುಟ್ಟಿದ ಸ್ಥಳವೆನ್ನುವುದಿಲ್ಲ. ಅವನು ಚಿಕ್ಕವನಿದ್ದಾಗ ಅಥವಾ ಬೆಳೆದು ದೊಡ್ಡವನಾಗುತ್ತಿದ್ದಾಗ ಅವನನ್ನು ನೋಡಿದವರಿಲ್ಲ. ಜನ ಅವನನ್ನು ನೋಡಿದಾಗ, ಅವನಿಗೆಷ್ಟೋ ವಯಸ್ಸಾಗಿತ್ತು. ಅವನ ಸಾವು ಎಲ್ಲಾಯಿತು ಎಂಬುದೂ ಸಹ ನಮಗೆ ತಿಳಿದಿಲ್ಲ. ಅಂತಹ ಮಹಾಪುರುಷ,  ಆ ಕಾಲದಲ್ಲಿಯೂ ಕೂಡ, ಅವನೆಲ್ಲಾದರೂ ಸಾವನ್ನಪ್ಪಿದ್ದರೆ, ಜನ ಅವನ ಸ್ಮರಣಾರ್ಥವಾಗಿ ಒಂದು ದೇವಾಲಯವನ್ನೋ ಅಥವಾ ಸ್ಮಾರಕವನ್ನೋ ನಿರ್ಮಿಸಬೇಕಿತ್ತು - ಅಂತದ್ದೇನೂ ಆಗಲಿಲ್ಲ.

ಯಕ್ಷಸ್ವರೂಪ: ಬೇರೆಡೆಯಿಂದ ಬಂದ ಚೇತನ

ಜನನವಿಲ್ಲ, ಮರಣವಿಲ್ಲ; ತಂದೆತಾಯಿ, ಒಡಹುಟ್ಟಿದವರಿಲ್ಲ - ಅವನು ಇಲ್ಲಿದ್ದನೆಂದು ಹೇಳಲು ಯಾವುದೇ ಸಾಕ್ಷಿ ಪುರಾವೆಗಳಿಲ್ಲ. ಹಾಗೆಂದ ಮಾತ್ರಕ್ಕೆ, ಅವನು ಬೇರೆಡೆಯಿಂದ ಬಂದವನೆಂದು ನಾವು ಊಹಿಸಿಕೊಳ್ಳಬೇಕೇ? ಅಗತ್ಯವೇನಿಲ್ಲ. ಆದರೆ, ನೀವು ಪುರಾಣಗಳನ್ನು ಓದಿದರೆ, ಶಿವನನ್ನು ಸಾಮಾನ್ಯವಾಗಿ "ಯಕ್ಷಪುರುಷ" ಎಂದು ಉಲ್ಲೇಖಿಸಲಾಗಿದೆ. "ಯಕ್ಷ" ಎಂದರೆ ಮನುಷ್ಯರಲ್ಲದ ಚೇತನಗಳು ಅಥವಾ ಜೀವಿಗಳು ಎಂದರ್ಥ. ಹಾಗಿದ್ದರೂ ಅವರುಗಳು ಈ ಭೂಮಿಯ ನೈಸರ್ಗಿಕ ಪರಿಸರದಲ್ಲಿ, ಕಾಡುಗಳಲ್ಲಿ ಮತ್ತು ಬೇರೆಡೆಗಳಲ್ಲಿ ಬದುಕಿದ್ದರು ಎಂದು ಭಾವಿಸಲಾಗುತ್ತದೆ. ಹಲವಾರು ವಿಷಯಗಳು ಆ ದಿಕ್ಕಿನೆಡೆಗೆ ಕೈತೋರುತ್ತವೆ, ಆದರೆ ಅವನು ಅನ್ಯಲೋಕದಿಂದ ಬಂದನೆನ್ನುವುದಕ್ಕೆ ನಿರ್ದಿಷ್ಟವಾದ ಪುರಾವೆಯಿಲ್ಲ.

ಹಿಂದುಳಿದಿರುವ ಆಧುನಿಕ ವಿಜ್ಞಾನ

ಯೋಗ ಪುರಾಣದಲ್ಲಿ, ಶಿವ ಅಥವಾ ಆದಿಯೋಗಿಯು ಒಬ್ಬ ವ್ಯಕ್ತಿಯಾಗಿ ಸುಮಾರು 60,000 ದಿಂದ 75,000 ವರ್ಷಗಳ ಹಿಂದೆಯೇ ಈ ಭೂಮಿಯ ಮೇಲೆ ನಡೆದಾಡಿದ್ದನು ಎಂದು ಅಂದಾಜಿಸಲಾಗುತ್ತದೆ. ನಾನಿದರ ಬಗ್ಗೆ ಮೊದಮೊದಲು ಮಾತನಾಡಿದಾಗ, ನನ್ನ ಸುತ್ತಲಿದ್ದ ಪ್ರಜ್ಞಾವಂತ ಹಾಗೂ ಯುವ ಜನರು, "ಸದ್ಗುರು, ನೀವು 75,000 ವರ್ಷಗಳು ಎಂದು ಹೇಳಿದರೆ ಜನ ನಿಮ್ಮನ್ನು ಅಲ್ಲಗಳೆಯುತ್ತಾರೆ. ಆದಿಯೋಗಿ ಅಥವಾ ಶಿವ ಅಸ್ತಿತ್ವದಲ್ಲಿದ್ದ ಎನ್ನುವುದಕ್ಕೆ ಪುರಾತತ್ವ ಪುರಾವೆಯು ಕೇವಲ 12,600 ವರ್ಷಗಳಷ್ಟು ಹಿಂದಿನದ್ದಾಗಿದೆ. ನೀವು 12,600, 13,000, ಅಥವಾ 14,000 ಎಂದೆನ್ನಿ ಸಾಕು." ಎಂದರು. ನಾನದಕ್ಕೆ, "ಸರಿ - 15,000 ವರ್ಷಗಳು." ಎಂದೆ. 30,000 ವರ್ಷಗಳ ಹಿಂದೆಯೇ ನಾಗರಿಕ ಸಮಾಜವು ಈ ದೇಶದ ಕೆಲವು ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದ್ದವು ಎನ್ನುವುದಕ್ಕೆ ಇಂದು ಪುರಾತತ್ತ್ವಶಾಸ್ತ್ರದ ಪುರಾವೆ ಇದೆ.

ನಾನು ಏತಕ್ಕಾಗಿ 15,000 ವರ್ಷಗಳಿಗೂ ಹಿಂದೆ ಎಂದು ಹೇಳುತ್ತಿದ್ದೇನೆಂದರೆ, ಆ ಸಂಖ್ಯೆಯನ್ನು ಪಾಶ್ಚಿಮಾತ್ಯ ದೇಶಗಳಲ್ಲೂ ಜನರು ಒಪ್ಪಿಕೊಳ್ಳಬಹುದು. ಆದರೆ ನಾನು 75,000 ವರ್ಷಗಳು ಎಂದರೆ ಅವರದನ್ನು ವಿರೋಧಿಸಬಹುದು, ಏಕೆಂದರೆ ಪ್ರಪಂಚದ ಅವರ ಕಲ್ಪನೆ ಕೇವಲ ಆರು ಸಾವಿರ ವರ್ಷಗಳಷ್ಟು ಹಳೆಯದ್ದಾಗಿದೆ ಅಷ್ಟೆ. ಸೃಷ್ಟಿಯು ಆರು ದಿನಗಳಲ್ಲಾಯಿತು ಮತ್ತು ಅದು ಕೇವಲ ಆರು ಸಾವಿರ ವರ್ಷಗಳಷ್ಟು ಹಿಂದಿನದು ಎಂದವರು ಹೇಳುತ್ತಾರೆ. ಈ ಎಲ್ಲಾ ಶತಮಾನಗಳ ಕಾಲ ಅವರು ಅದನ್ನೇ ಸಾಧಿಸಿದರು. ಈಗ, ನಿಧಾನವಾಗಿ ಅವರು ತಮ್ಮ ಹೇಳಿಕೆಯನ್ನು ಸರಿ ಪಡಿಸಿಕೊಳ್ಳುತ್ತಿದ್ದಾರೆ, ಏಕೆಂದರೆ, ಇಂದು ವಿಜ್ಞಾನವು ಬೇರೆಯದ್ದನ್ನೇ ಸಾಬೀತು ಪಡಿಸುತ್ತಿದೆ. ನೀವೇ ನೋಡುತ್ತೀರಿ, ಮುಂದಿನ ಐವತ್ತು ವರ್ಷಗಳಲ್ಲಿ, ನಾವು ಸಾವಿರಾರು ವರ್ಷಗಳಿಂದ ಹೇಳಿಕೊಂಡು ಬಂದಿರುವಂತಹ ಹಲವಾರು ವಿಷಯಗಳನ್ನು ಆಧುನಿಕ ವಿಜ್ಞಾನವು ಹೇಳತೊಡಗುತ್ತದೆ.

ಸಂಪಾದಕರ ಟಿಪ್ಪಣಿ: “ಆದಿಯೋಗಿ: ದ ಸೋರ್ಸ್ ಆಫ್ ಯೋಗ”, ಎಂಬ ಪುಸ್ತಕವು ಇಂದಿನ ಸಮಕಾಲಿನ ಯೋಗಿಗಳಾದ ಸದ್ಗುರುಗಳಿಂದ ಆದಿಯೋಗಿ - ಶಿವನ ಗೌರವ ಹಾಗೂ ಪ್ರಶಂಸೆಯಲ್ಲಿ ಬರೆಯಲಾಗಿರುವ ಒಂದು ಅದ್ಭುತವಾದ ದಾಖಲೆಯಾಗಿದೆ. ಈಶ ಶಾಪಿಯಲ್ಲಿ Ishashoppe ಇಬುಕ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಅಮೆಜಾನ್ ನಲ್ಲಿ Amazon India ಆರ್ಡರ್ ಮಾಡಿ.