ಪ್ರಶ್ನೆ: ಅನೇಕ ವರ್ಷಗಳ ಕಾಲ ಸಾಧನೆ ಮಾಡಿದ ನಂತರವೂ, ನಾನು ಎಲ್ಲಿಯೂ ತಲುಪುತ್ತಿಲ್ಲವೆಂದು ಅನಿಸುತ್ತಿದೆ. ಇದಕ್ಕಾಗಿ ಏನು ಮಾಡಬಹುದು?

ಸದ್ಗುರು: ನೀವು ಎಷ್ಟು ವರ್ಷಗಳ ಸಾಧನೆ ಮಾಡಿದರೂ, ನೀವು ಎಲ್ಲಿಯೂ ತಲುಪುವುದಿಲ್ಲ. ನಿಮ್ಮಿಂದ ಸಾಧ್ಯವಾಗದಿರಬಹುದು ಎಂದಲ್ಲ, ನಿಮಗೆ ಅದು ಸಾಧ್ಯವೇ ಇಲ್ಲ. ಏಕೆಂದರೆ ಸಾಧನೆಗೈಯುವುದು ಎಲ್ಲಿಯೋ ತಲುಪುವುದಕ್ಕಾಗಲ್ಲ. ಸಾಧನೆಗೈಯುವುದರ ಕಾರಣವೇನೆಂದರೆ, ಇಲ್ಲಿ ನೀವು ಸುಮ್ಮನೆ ಇರಬಹುದಾದ ಸ್ಥಿತಿಗೆ ಬರುವುದಕ್ಕಾಗಿ -ಇಲ್ಲಿರುವುದು ಎಲ್ಲೆಡೆ ಇದೆ, ಇಲ್ಲಿ ಇಲ್ಲದಿರುವುದು ಎಲ್ಲಿಯೂ ಇಲ್ಲ ಎಂದು ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳುವುದಕ್ಕಾಗಿ. ಎಲ್ಲೋ ತಲುಪಬೇಕು ಎನ್ನುವ ಅಗತ್ಯವನ್ನು ಮೀರುವುದು, ಅದು ಸಾಧನೆ, ಏಕೆಂದರೆ ವಾಸ್ತವವಾಗಿ, ತಲುಪುವಂತಹುದು ಎಲ್ಲಿಯೂ ಇಲ್ಲ. ಇರುವುದು "ಇಲ್ಲಿ" ಮಾತ್ರ, ಮತ್ತು "ಈಗ" ಮಾತ್ರ. ಉಳಿದದ್ದೆಲ್ಲ ಇರುವುದು ನಿಮ್ಮ ತಲೆಯಲ್ಲಿ. ದಿನದಲ್ಲಿ ಕನಿಷ್ಠ ಸ್ವಲ್ಪ ಸಮಯದವರೆಗೆ, ಸುಮ್ಮನೆ ಕುಳಿತುಕೊಳ್ಳುವುದು ಸಾಕು ಎನ್ನುವಂತಹ ಸ್ಥಿತಿಗೆ ನಿಮ್ಮನ್ನು ಕರೆತರುವುದು ಸಾಧನೆಯ ಉದ್ದೇಶ. ನೀವು ಜೀವಂತವಾಗಿದ್ದರೆ, ನೀವಿರುವುದು ಇಲ್ಲಿ ಮತ್ತು ಈಗ, ನೀವು ಸತ್ತರೂ, ನೀವಿರುವುದು ಇಲ್ಲಿ ಮತ್ತು ಈಗ. ನೀವು ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ತಲುಪುವಂತಹುದು ಎಲ್ಲಿಯೂ ಇಲ್ಲ.

ಸಾಧನೆಯು ಒಂದು ಉಪಕರಣ

ಸಾಧನೆಯು ಒಂದು ಉಪಕರಣ. ಎಲ್ಲೋ ಹೋಗಬೇಕಾದ ಅಗತ್ಯವು ಇಲ್ಲದಿರುವ ಒಂದು ನಿರ್ದಿಷ್ಟ ಮಟ್ಟದ ಪ್ರೌಢತೆಗೆ ನಿಮ್ಮನ್ನು ಕರೆತರುವ ವಿಧಾನವಿದು. ಅದಕ್ಕಾಗಿಯೇ ಸಾಧನೆಯಲ್ಲಿ ಮುಳುಗಿರುವ ಜನರು ಎಲ್ಲಿಯೂ ಸಂಚರಿಸುವುದಿಲ್ಲ. ನೀವು ಜಗತ್ತಿನಾದ್ಯಂತ ಸಂಚರಿಸಿದರೆ, ಜೀವನದ ಸಂಕೀರ್ಣತೆಗಳನ್ನು ತಿಳಿದುಕೊಳ್ಳುವುದರ ವಿಷಯವನ್ನು ಮರೆತುಬಿಡಿ, ಜಗತ್ತು ಗುಂಡಗಿದೆಯೋ ಅಥವಾ ಸಮತಟ್ಟಾಗಿದೆಯೋ ಎನ್ನುವುದೂ ನಿಮಗೆ ತಿಳಿಯುವುದಿಲ್ಲ. ಆದರೆ ನೀವು ನಿಜವಾಗಿಯೂ ಇಲ್ಲಿದ್ದರೆ, ತಿಳಿದುಕೊಳ್ಳಬೇಕಾದುದೆಲ್ಲವೂ ಇಲ್ಲಿಯೇ ಇದೆ, ಏಕೆಂದರೆ ನಿಮಗೆ ಹೊರಗಿರುವುದನ್ನು ಗ್ರಹಿಸಲು ಸಾಧ್ಯವಿಲ್ಲ. ನೀವು ಇಲ್ಲಿ ಕುಳಿತ್ತಿದ್ದೀರೋ ಅಥವಾ ಹಿಮಾಲಯ, ಆಫ್ರಿಕಾ, ಅಮೇರಿಕಾ ಅಥವಾ ದಕ್ಷಿಣ ಧ್ರುವ, ಉತ್ತರ ಧ್ರುವದಲ್ಲಿ ಕುಳಿತ್ತಿದ್ದೀರೋ, ಅದು ಅಪ್ರಸ್ತುತ. ಬಹಶಃ ಕೆಲ ಪರಿಸರಗಳು ಬೆಂಬಲಾತ್ಮಕವಾಗಿರಬಹುದು, ಕೆಲ ಪರಿಸರಗಳು ಅಲ್ಲದಿರಬಹುದು, ಆ ವಿಷಯ ಬೇರೆ - ಆದರೆ ಮೂಲಭೂತವಾಗಿ, ನಿಮ್ಮೊಳಗೆ ಏನಾಗುತ್ತದೆಯೋ ಅದನ್ನು ಮಾತ್ರ ನೀವು ಅನುಭವಿಸಬಹುದು.

ಸಾಧನೆ ಎಂಬುದು ಆಶಿರ್ವಾದದಂತಹ ಪ್ರಕ್ರಿಯೆಯಾಗಿದ್ದು, ಅದರ ಮೂಲಕ ತಲುಪುವಂತಹುದು ಎಲ್ಲಿಯೂ ಇಲ್ಲ ಎಂಬುದನ್ನು ನೀವು ಅರಿಯುತ್ತೀರಿ. ಎಲ್ಲಿಯೋ ತಲುಪಬೇಕು ಎಂಬ ಅಗತ್ಯವು ಇಲ್ಲವಾದಾಗ ನಿಮ್ಮ ಸಾಧನೆಯು ಯಶಸ್ವಿಯಾಗುತ್ತದೆ. ಆಗ ನೀವು ಸುಮ್ಮನೆ ಕುಳಿತುಕೊಳ್ಳುವಿರಿ.

ಹಾಗಾಗಿ, ನೀವು ಎಲ್ಲಿಗೆ ಹೋದರೂ, ಇರುವುದು ಇದು ಮಾತ್ರ. ಇಲ್ಲಿರುವ ಈ ಪರ್ವತಗಳನ್ನುವೆಳ್ಳಿಯಂಗಿರಿ ಎಂದು ಕರೆಯುತ್ತಾರೆಂದು ನಿಮಗೆ ತಿಳಿದಿದೆ. ಇದರರ್ಥ“ಬಿಳಿ ಪರ್ವತ.” ಎಂದು. ನೀವು ಅದನ್ನು ಹಿಮಾಲಯ ಮಾಡಬಹುದು - ಅದೇ ಇದರ ಅರ್ಥ. ನಾವು ಅದನ್ನು “ದಕ್ಷಿಣದ ಕೈಲಾಸ” ಎಂದೂ ಕರೆಯುತ್ತೇವೆ. ನೀವು ಇಲ್ಲಿ ಸಾಕಷ್ಟು ಹೊತ್ತು ಕುಳಿತುಕೊಂಡರೆ ಅಥವಾ ಸಾಕಷ್ಟು ತೊಡಗಿಸಿಕೊಂಡರೆ, ಅದು ಕೈಲಾಸವಾಗುತ್ತಾದೆ; ನೀವು ಪ್ರಯಾಣ ಮಾಡುವ ಅಗತ್ಯವಿಲ್ಲ. ನಿಮ್ಮೊಳಗೆ ಏನಾಗುತ್ತದೆಯೋ ಅದನ್ನು ಮಾತ್ರವೇ ನೀವು ಅನುಭವಿಸಬಹುದು. ಪರ್ವತದಲ್ಲಿ ಏನಾಗುತ್ತದೆ ಎಂಬುದನ್ನು ನಿಮಗೆ ಅನುಭವಿಸಲು ಸಾಧ್ಯವಿಲ್ಲ, ಆಕಾಶದಲ್ಲಿ ಏನಾಗುತ್ತದೆ ಎಂಬುದನ್ನು ನಿಮಗೆ ಅನುಭವಿಸಲು ಸಾಧ್ಯವಿಲ್ಲ, ಎಲ್ಲಿ ಏನೇ ಆದರೂ, ನಿಮಗೆ ಅದನ್ನು ಅನುಭವಿಸಲು ಸಾಧ್ಯವಿಲ್ಲ.

ನೀವು ಇಲ್ಲಿ ಕುಳಿತು, ಯಾರನ್ನಾದರೂ ನೋಡಿ ಪ್ರೀತಿಯನ್ನು ಅನುಭವಿಸಬಹುದು. ನೀವು ಕಣ್ಣು ಮುಚ್ಚಿ, ಇನ್ನೊಬ್ಬರ ಬಗ್ಗೆ ಯೋಚಿಸಿ ಪ್ರೀತಿಯನ್ನು ಅನುಭವಿಸಬಹುದು, ಅಲ್ಲವೇ? ನೀವು ಅದನ್ನು ಹೊರಗಿನಿಂದ ಅಥವಾ ಒಳಗಿನಿಂದ ಉತ್ತೇಜಿಸಬಹುದು, ಎರಡೂ ಸಾಧ್ಯ. ಒಂದೋ ನೀವು “ಪುಶ್-ಸ್ಟಾರ್ಟ್”-ನಲ್ಲಿದ್ದಿರಿ ಅಥವಾ “ಸೆಲ್ಫ್-ಸ್ಟಾರ್ಟ್” ನಲ್ಲಿದ್ದೀರಿ. ಒಂದೋ ನೀವು ಈಗಿನ ಕಾಲದ ಯಂತ್ರ ಅಥವಾ ಹಿಂದಿನ ಕಾಲದ ಯಂತ್ರ. ನೀವು ಚಂದ್ರನನ್ನು ನೋಡಿ, ಭೂಮಿಯನ್ನು ನೋಡಿ, ಕಣ್ಣು ಮುಚ್ಚಿ, ಕಣ್ಣು ತೆರೆಯಿರಿ–ಆಗಲೂ ನಿಮ್ಮೊಳಗೆ ಏನಾಗುತ್ತಿದೆಯೋ ಅದೇ ಆಗುತ್ತಿರುತ್ತದೆ - ಹೆಚ್ಚು ಇಲ್ಲ, ಕಡಿಮೆನು ಇಲ್ಲ.

ಯಾವುದೇ ಪೂರ್ವಗ್ರಹವಿಲ್ಲದೆ ಸುಮ್ಮನೆ ನೋಡುವಂತಹ ಪರಿಪಕ್ವತೆಯ ಮಟ್ಟಕ್ಕೆ ನಿಮ್ಮನ್ನು ತರುವುದು ಸಾಧನೆಯ ಉದ್ದೇಶ. ನೀವು ಏನು ಮಾಡುತ್ತಿದ್ದೀರಿ ಎನ್ನುವುದು ಮುಖ್ಯವಲ್ಲ, ನೀವು ಶಿಖರವನ್ನೇರುತ್ತೀರೋ ಅಥವಾ ಕಣಿವೆಯಲ್ಲಿರುತ್ತೀರೋ ಎನ್ನುವುದು ಮುಖ್ಯವಲ್ಲ, ಜಗತ್ತಿನಲ್ಲಿ ನೀವು ಯಶಸ್ವಿಯಾದರೋ ಇಲ್ಲವೋ ಎನ್ನುವುದು ಮುಖ್ಯವಲ್ಲ, ನೀವು ಹೆಸರುವಾಸಿಯಾಗಿದ್ದೀರೋ ಇಲ್ಲವೋ ಎನ್ನುವುದು ಮುಖ್ಯವಲ್ಲ, ನೀವು ಬಯಸಿದ್ದನ್ನು ತಿನ್ನುತ್ತಿದ್ದೀರೋ ಇಲ್ಲವೋ ಎನ್ನುವುದು ಮುಖ್ಯವಲ್ಲ, ಮುಖ್ಯವಾಗಿರುವುದು ಅದನ್ನು ನೀವು ಅನುಭವಿಸುವ ರೀತಿ. ಇದೇನೂ ಕುತಂತ್ರವಲ್ಲ, ಇದು ಜೀವನದ ಸೊಬಗು. ನಿಜವಾಗಿಯೂ ತಲುಪುವಂತಹುದು ಎಲ್ಲಿಯೂ ಇಲ್ಲ. ಇಲ್ಲಿ ಕುಳಿತು ನೀವು ಪರಮಾನಂದ, ಭಾವೋತ್ಕರ್ಷದಲ್ಲಿರಬಹುದು; ಇಲ್ಲಿ ಕುಳಿತು ನೀವು ದುಃಖತಪ್ತರಾಗಿರಬಹುದು. ನಿಮಗೆ ಸಾಲು ಸಾಲು ಆಯ್ಕೆ ಇದೆ. ನೀವಿಲ್ಲಿ ಕುಳಿತು, "ಇದು ನನ್ನ ಜೀವನದ ಅತ್ಯಂತ ಪೂಜಾರ್ಹ ಕ್ಷಣ." ಎಂದು ಯೋಚಿಸಬಹುದು. ನೀವಿಲ್ಲಿ ಕುಳಿತು, "ಇದು ನನ್ನ ಜೀವನದ ಅತ್ಯಂತ ದುಃಖಕರ ಕ್ಷಣ." ಎಂದೂ ಯೋಚಿಸಬಹುದು. ಜೀವನ ನಿಮ್ಮನ್ನು ಬಂಧನದಲ್ಲಿಟ್ಟಿಲ್ಲ. ಈ ಬಂಧನವೆಲ್ಲ ನೀವೇ ಮಾಡಿಕೊಂಡಿರುವಂತಹುದು. ಅಸ್ತಿತ್ವವು ನಿಮ್ಮನ್ನು ಮುಕ್ತವಾಗಿ, ಸಂಪೂರ್ಣವಾಗಿ ಮುಕ್ತವಾಗಿ ಬಿಟ್ಟಿದೆ. ನೀವು ಇಲ್ಲಿರಬಹುದು, ಅಷ್ಟೆ. ಬೇರೆ ಏನೂ ಸಂಭವಿಸುವ ಅಗತ್ಯವಿಲ್ಲ. ಆದರೂ, ನಿಮ್ಮೊಳಗೆ ಏನಾಗುತ್ತಿದೆ ಎಂಬ ಕಾರಣದಿಂದಾಗಿ ನೀವು ಬದುಕನ್ನು ಅತ್ಯದ್ಭುತವಾದ ರೀತಿಯಲ್ಲಿ ಬಾಳಬಹುದು. ಅಥವಾ ನೀವು ಎಲ್ಲೆಲ್ಲೋ ಹೋಗಿ, ಏನೇನೋ ಮಾಡಿಯೂ, ಬದುಕನ್ನು ಅತ್ಯಂತ ಶೋಚನೀಯವಾಗಿ ಬಾಳಬಹುದು. ನೀವೇ ಎರಡನ್ನೂ ಮಾಡುವುದು.

ಬಿಡದೆ ಕೊರೆಯುವ ಹುಳುವನ್ನು ತಲೆಯಿಂದ ಹೊರಹಾಕುವುದು

ಸಾಧನೆ ಎಂಬುದು ಆಶಿರ್ವಾದದಂತಹ ಪ್ರಕ್ರಿಯೆಯಾಗಿದ್ದು, ಅದರ ಮೂಲಕ ತಲುಪುವಂತಹುದು ಎಲ್ಲಿಯೂ ಇಲ್ಲ ಎಂಬುದನ್ನು ನೀವು ಅರಿಯುತ್ತೀರಿ. ಎಲ್ಲಿಯೋ ತಲುಪಬೇಕು ಎಂಬ ಅಗತ್ಯವು ಇಲ್ಲವಾದಾಗ ನಿಮ್ಮ ಸಾಧನೆಯು ಯಶಸ್ವಿಯಾಗುತ್ತದೆ. ಆಗ ನೀವು ಸುಮ್ಮನೆ ಕುಳಿತುಕೊಳ್ಳುವಿರಿ. ಕುಳಿತುಕೊಳ್ಳುವುದು ಎಂದರೆ ನೀವು ದೈಹಿಕವಾಗಿ ಒಂದೇ ಸ್ಥಳದಲ್ಲಿ ಕುಳಿತಿದ್ದೀರಿ ಎಂದರ್ಥವಲ್ಲ. ಇಲ್ಲಿಗೆ ಅಲ್ಲಿಗೆ ತಲುಪುವ ಹಾತೊರೆತವು ಹೋಗಿದೆ ಎಂದರ್ಥ. ನೀವು ಕೂತಿದ್ದರೆ, ಚೆನ್ನಾಗಿರುತ್ತೀರಿ, ನೀವು ಓಡುತ್ತಿದ್ದರೆ, ಚೆನ್ನಾಗಿರುತ್ತೀರಿ, ನೀವು ಹಾರುತ್ತಿದ್ದರೆ, ಚೆನ್ನಾಗಿರುತ್ತೀರಿ, ನೀವು ನಡೆದಾಡಿದರೂ ನೀವು ಚೆನ್ನಾಗಿರುತ್ತೀರಿ. ನೀವು ಎಲ್ಲಿದ್ದರೂ ಚೆನ್ನಾಗಿರುತ್ತೀರಿ. ಆ ಹಾತೊರೆತ ಹೋದ ನಂತರ, ನೀವು ನಿರಾಳರಾಗುತ್ತೀರಿ. ಒಮ್ಮೆ ನಿಮ್ಮಲ್ಲಿ ನಿರಾಳತೆಯಿದ್ದರೆ, ನೀವು ಏನನ್ನೂ ಮಾಡಬೇಕಾಗಿಲ್ಲ. ಸ್ವಲ್ಪ ಸಮಯ ಕಾಯಬೇಕಾಗುತ್ತದೆ, ಅಷ್ಟೆ. ನೀವು ಪ್ರೀತಿಸುತ್ತಿದ್ದರಷ್ಟೆ, ನೀವು ಕಾಯಬಹುದು, ಏಕೆಂದರೆ ನೀವು ಯಾರನ್ನಾದರೂ ಪ್ರೀತಿಸುತ್ತಿರುವಾಗ, ನೀವು ಭಾವನಾತ್ಮಕವಾಗಿ ಉಲ್ಲಾಸಕರವಾಗಿರುತ್ತೀರಿ. ಪ್ರೀತಿ ಬಹಳಷ್ಟು ಮಾನಸಿಕ ಆತಂಕವನ್ನು ಉಂಟುಮಾಡುತ್ತದೆ ಏಕೆಂದರೆ ಅದು ನಿಮ್ಮ ಕಾಳಜಿಯ ಕಲ್ಪನೆ. ಆದ್ದರಿಂದ ನಿಮ್ಮ ಮನಸ್ಸು ಅಹಿತಕರವಾಗುತ್ತಿದೆ, ಆದರೆ ನಿಮ್ಮ ಭಾವನೆ ಹಿತಕರವಾಗಿರುತ್ತದೆ - ಹೀಗದ್ದರೂ ಇನ್ನೂ ಅದು ಮೌಲ್ಯಯುತವಾಗಿರುತ್ತದೆ.

ನಿಮಗೆ ಕಿರಿಕಿರಿಯಾಗುತ್ತಿದ್ದರೆ, ಕಳವಳ, ಹತಾಶೆ ಅಥವಾ ಕೋಪವಿದ್ದರೆ, ನಿಮಗೆ ಕಾಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ನಿಮ್ಮ ಭಾವನೆಗಳು ಅಹಿತಕರವಾಗಿರುತ್ತವೆ. ನಿಮ್ಮ ಕರ್ಮಕ್ಕನುಗುಣವಾಗಿ ಮತ್ತು ಹೊರಗಿನಿಂದ ನೀವು ಪಡೆಯುವ ಸಕ್ರಿಯ ಮತ್ತು ಕ್ರಿಯಾತ್ಮಕ ಸಹಾಯವನ್ನು ಅವಲಂಬಿಸಿ, ಕಾಯುವ ಅವಧಿಯು ಬದಲಾಗಬಹುದು. ಅದು ಕೆಲ ಕ್ಷಣಗಳು, ಕೆಲ ವರ್ಷಗಳ ಕಾಲ… ಸುಮ್ಮನೆ ಕುಳಿತು ಕಾಯುತ್ತಿರಬಹುದು. ನಿಮ್ಮ ಆಂತರ್ಯವು ಉಲ್ಲಾಸಮಯವಾದಾಗ, ಕೆಲ ವರ್ಷಗಳವರೆಗೆ ಕಾಯುವುದು ದೊಡ್ಡ ವಿಷಯವಲ್ಲ. ನೀವು ಕಾಯುತ್ತೀರಷ್ಟೆ.

Editor’s Note: Excerpted from Sadhguru’s discourse at the Isha Hatha Yoga School’s 21-week Hatha Yoga Teacher Training program. The program offers an unparalleled opportunity to acquire a profound understanding of the yogic system and the proficiency to teach Hatha Yoga. The next 21-week session begins on July 16 to Dec 11, 2019. For more information, visit www.ishahathayoga.com or mail info@ishahatayoga.com