ಮಕ್ಕಳು ಯಾವ ವಯಸ್ಸಿನಲ್ಲಿ ಯೋಗವನ್ನು ಕಲಿಯಲು ಪ್ರಾರಂಭಿಸಬೇಕು?

 

ಪ್ರಶ್ನೆ: ನನ್ನ ಮಗಳಿಗೀಗ ಒಂಭತ್ತು ವರ್ಷ. ಅವಳು ತನ್ನ ಜೀವನದ ಹಾದಿಯನ್ನು ಸಾಧ್ಯವಾದಷ್ಟು ಬೇಗ ಕಂಡುಕೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕೆಂದರೆ ನಾನವಳಿಗೆ ಈ ವಯಸ್ಸಿನಲ್ಲಿಯೇ ಯೋಗಕ್ಕೆ ಪರಿಚಯಿಸಬೇಕೇ?

ಸದ್ಗುರು: ಯೋಗ ನಿಮ್ಮನ್ನು ಜೀವನದಿಂದ ದೂರಮಾಡುವಂತಹದಲ್ಲ. ಬದಲಾಗಿ, ಇದು ನಿಮಗೆ ಜೀವನದ ಕಡೆಗೆ ಆಳವಾದ ಸೆಳೆತವನ್ನು ನೀಡುವಂತಹದು. ಹಾಗಿದ್ದರೆ ನೀವೇ ಹೇಳಿ, ಇದನ್ನು ಕಲಿಯಲು ಶುರುಮಾಡಬೇಕಿರುವುದು ಯಾವಾಗ? ಅರವತ್ತನೇ ವಯಸ್ಸಿನಲ್ಲೋ ಅಥವಾ ಸಾಧ್ಯವಾದಷ್ಟು ಮುಂಚಿತವಾದ ಸಮಯದಲ್ಲೋ?

ಸಾಮಾನ್ಯವಾಗಿ ಮಕ್ಕಳು ಏಳು ವರ್ಷದವರಾದಾಗ ಯೋಗವನ್ನು ಕಲಿಯಲು ಉತ್ತಮವಾದ ಸಮಯವೆಂದು ಪರಿಗಣಿಸಲಾಗುತ್ತದೆ. ಆದರೆ ನಿಮ್ಮ ಮಗಳಿಗೆ ಒಂಭತ್ತು ವರ್ಷವಾಗುವವರೆಗೆ ನೀವು ಕಾದಿದ್ದೀರಿ. ಹಾಗಾಗಿ, ಯೋಗಾಭ್ಯಾಸವನ್ನು ಪ್ರಾರಂಭಿಸುವ ಸಮಯ ಬಂದಾಗಿದೆ, ಏಕೆಂದರೆ ಮಕ್ಕಳಿಗೆ ಹತ್ತು ಹಲವು ವಿಷಯಗಳನ್ನು ಪರಿಚಯಿಸುವುದು ಮತ್ತು ಅವರು ಆ ವಿಷಯಗಳ ಕುರಿತಾಗಿ ಬುದ್ಧಿವಂತ ಆಯ್ಕೆಗಳನ್ನು ಮಾಡಲು ಸಾಧ್ಯವಾಗುವುದು ಮುಖ್ಯವಾಗಿದೆ. ನೀವು ಮಕ್ಕಳಿಗೆ ಈ ಆಯ್ಕೆಗಳನ್ನು ನೀಡದೇ ಹೋದರೆ, ಅವರು ನೋಡಿರುವ ಕೆಲವೇ ಕೆಲವಾರು ಅಂಶಗಳು ಮಾತ್ರವೇ ಜಗತ್ತಿನಲ್ಲಿರುವುದು ಎಂದು ನಂಬಿಸುವ ಮನವೊಲಿಸುವಿಕೆಗೆ ಒಳಗಾಗುತ್ತಾರೆ. ಅವರ ಆಯ್ಕೆಗಳೇನಿದ್ದರೂ ತಂಪು ಪಾನೀಯಗಳು ಮತ್ತು ಪಿಜ್ಜಾಗಳ ನಡುವೆ ಮಾತ್ರ ಸೀಮಿತವಾಗಿರುತ್ತದೆ. ಮತ್ತೇನದರ ಬಗ್ಗೆಯೂ ಇರುವುದಿಲ್ಲ!
 

ಒಂದು ಮಗುವನ್ನು ತನ್ನ ಬಾಲ್ಯದಿಂದಲೇ ಸರಿಯಾದ ರೀತಿಯ ವಿಷಯಗಳಿಗೆ ಮತ್ತು ತನ್ನೊಳಗಿನಿಂದ ಕೆಲಸ ಮಾಡುವಂತಹ ವಿಷಯಗಳಿಗೆ ಒಡ್ಡುವುದು ಬಹಳ ಮುಖ್ಯ. ಏಕೆಂದರೆ, ನಮ್ಮ ಸುತ್ತಲಿನ ಜಗತ್ತಿನಲ್ಲಿ ನಾವು ಮಾಡಿಕೊಂಡಿರುವ ವ್ಯವಸ್ಥೆಗಳನ್ನು ಸ್ವಲ್ಪ ಮಟ್ಟಿಗಷ್ಟೇ ನಮಗೆ ನಿರ್ವಹಿಸಲು ಸಾಧ್ಯ.

ಒಂದು ಮಗುವನ್ನು ತನ್ನ ಬಾಲ್ಯದಿಂದಲೇ ಸರಿಯಾದ ರೀತಿಯ ವಿಷಯಗಳಿಗೆ ಮತ್ತು ತನ್ನೊಳಗಿನಿಂದ ಕೆಲಸ ಮಾಡುವಂತಹ ವಿಷಯಗಳಿಗೆ ಒಡ್ಡುವುದು ಬಹಳ ಮುಖ್ಯ. ಏಕೆಂದರೆ, ನಮ್ಮ ಸುತ್ತಲಿನ ಜಗತ್ತಿನಲ್ಲಿ ನಾವು ಮಾಡಿಕೊಂಡಿರುವ ವ್ಯವಸ್ಥೆಗಳನ್ನು ಸ್ವಲ್ಪ ಮಟ್ಟಿಗಷ್ಟೇ ನಮಗೆ ನಿರ್ವಹಿಸಲು ಸಾಧ್ಯ. ಎಲ್ಲಿಯವರೆಗೆ ನಿಮ್ಮ ಯೋಗಕ್ಷೇಮವು ಬಾಹ್ಯ ಪರಿಸ್ಥಿತಿಯ ಅಡಿಯಾಳಾಗಿರುತ್ತದೆಯೋ, ನಿಮ್ಮ ಯೋಗಕ್ಷೇಮವೂ ಸಹ ಒಂದು ಆಕಸ್ಮಿಕದಂತಿರುತ್ತದೆ, ಏಕೆಂದರೆ ಬಾಹ್ಯ ಪರಿಸ್ಥಿತಿಗಳ ಮೇಲೆ ನೂರಕ್ಕೆ ನೂರರಷ್ಟು ನಿಯಂತ್ರಣವನ್ನು ಸಾಧಿಸುವುದು ಯಾರಿಂದಲೂ ಸಾಧ್ಯವಿಲ್ಲ. ಅದಲ್ಲದೇ, ಜನಸಂಖ್ಯೆಯು ಹೆಚ್ಚಾಗುತ್ತಿರುವ ರೀತಿಯನ್ನು ನೋಡಿದರೆ, ಮುಂದಿನ ಪೀಳಿಗೆಯವರು ಯಾವ ತರಹದ ಬಾಹ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆಂದು ನಮಗೆ ತಿಳಿದಿಲ್ಲ. 2050ನೇ ಇಸವಿಯ ಹೊತ್ತಿಗೆ, ಭೂಮಿಯ ಮೇಲಿನ ಜನಸಂಖ್ಯೆ 9.6 ಬಿಲಿಯನ್ ಮುಟ್ಟುತ್ತದೆಯೆಂದು ನಿರೀಕ್ಷಿಸಲಾಗಿದೆ. ಅಲ್ಲಿಯವರೆಗೆ ನಾನಿರಬೇಕೆಂದು ಬಯಸುವುದಿಲ್ಲ, ಆದರೆ ನಿಮ್ಮ ಮಗಳಿರುತ್ತಾಳೆ. ಹಾಗಾಗಿ ಬದುಕುಳಿಯಲು ಅವಳು ಕೆಲವು ವಿಶೇಷ ಕುಶಲತೆಗಳನ್ನು ಹೊಂದಿರಲೇಬೇಕಾಗುತ್ತದೆ. ಜೀವನ ನಡೆಸುವುದು ಖಂಡಿತವಾಗಿಯೂ ಸುಲಭವಾಗಿರುವುದಿಲ್ಲ.

ನೀವು ಈಗಿರುವ ಜಾಗದಲ್ಲಿ 35 ಪ್ರತಿಶತದಷ್ಟು ಹೆಚ್ಚು ಜನರಿರುವುದನ್ನು ಊಹಿಸಿಕೊಳ್ಳಿ - ಆ ಅನುಭವವನ್ನು ಕಣ್ಣಮುಂದೆ ತಂದುಕೊಳ್ಳಿ. ನೀವು ಜನರ ನಡುವೆ ತುಂಬ ಹತ್ತಿರದಲ್ಲಿ ಕುಳಿತುಕೊಳ್ಳಬೇಕಾಗಿ ಬಂದರೆ, ನಿಮಗೆ ಕಡೇಪಕ್ಷ ಯೋಗವಾದರೂ ಗೊತ್ತಿರಬೇಕು ಏಕೆಂದರೆ ನಿಮ್ಮನ್ನು ನೀವು ಹೇಗೆ ಬೇಕಾದರೂ ಹಾಗೆ ತಿರುಚಿಕೊಂಡು ಯಾವ ಭಂಗಿಯಲ್ಲಾದರೂ ಸಹ ಆರಾಮವಾಗಿ ಕುಳಿತುಕೊಳ್ಳಬಹುದು! ಭಂಗಿಗಳ ಬಗ್ಗೆ ಹೆಚ್ಚು ಆಯ್ಕೆಗಳಿರುವುದಿಲ್ಲ ಅಷ್ಟೆ.

ಯೋಗವು ನಮ್ಮ ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಬೇಕೆಂದು ನಾನು ಆಶಿಸುತ್ತೇನೆ. ಈ ವರ್ಷ, ಈಶದವರ ಅಂತರ್ರಾಷ್ಟ್ರೀಯ ಯೋಗ ದಿನದ ಚಟುವಟಿಕೆಗಳ ಭಾಗವಾಗಿ, ಭಾರತದಲ್ಲಿನ 25,000 ಶಾಲೆಗಳ 30 ದಶಲಕ್ಷ ಮಕ್ಕಳಿಗೆ ಸರಳ ಮತ್ತು ಶಕ್ತಿಯುತವಾದ ಯೋಗಾಭ್ಯಾಸಗಳನ್ನು ಹೇಳಿಕೊಡುವ ಉಪಕ್ರಮಗಳನ್ನು ನಾವು ಪ್ರಾರಂಭಿಸಿದ್ದೇವೆ.

ಮಕ್ಕಳು ಯಾವ ರೀತಿಯ ಯೋಗವನ್ನು ಕಲಿಯಬೇಕು?

 

ಪ್ರಶ್ನೆ: ಮಕ್ಕಳಿಗಾಗಿ ಯಾವುದಾದರೂ ನಿರ್ದಿಷ್ಟ ರೀತಿಯ ಯೋಗವಿದೆಯೇ?

ಸದ್ಗುರು: ಆರು ಅಥವಾ ಏಳು ವರ್ಷ ಮೇಲ್ಪಟ್ಟ ಮಕ್ಕಳು ಮಾಡಬಹುದಾದ ಯೋಗದ ಸರಳ ಪ್ರಕಾರಗಳಿವೆ. ಆದರೆ ಕೆಲವು ಯೋಗಾಭ್ಯಾಸಗಳನ್ನು ಮಕ್ಕಳಿಗೆ ಕಲಿಸದೇ ಇರುವುದು ತುಂಬ ಮುಖ್ಯ. ಕೆಲವು ಕಡೆಗಳಲ್ಲಿ ಮಕ್ಕಳಿಗೆ ಪದ್ಮಾಸನವನ್ನು ಹೇಳಿಕೊಡುವುದನ್ನು ನಾನು ನೋಡಿದ್ದೇನೆ. ಇದನ್ನು ಮಾಡಬಾರದು. ಮೂಳೆಗಳು ಬೆಳೆಯುವ ಹಂತದಲ್ಲಿದ್ದು, ಇನ್ನೂ ಮೆತ್ತಗಿರುವಾಗ,  ಅವರ ಅಸ್ಥಿಪಂಜರದ ವ್ಯವಸ್ಥೆಯ ಮೇಲೆ ನಿರ್ದಿಷ್ಟವಾದ ಒತ್ತಡವನ್ನು ಹಾಕುವಂತಹ ಆಸನಗಳಲ್ಲಿ ಕುಳಿತುಕೊಳ್ಳುವುದರಿಂದ ಅದು ಅವರ ಮೂಳೆಗಳನ್ನು ವಕ್ರವಾಗುವಂತೆ ಮಾಡಬಹುದು.

ಯೋಗವನ್ನು ಪ್ರಸಾರಣ ಮಾಡುವ ಜನರಿಗೆ ಒಂದು ಮಗುವಿಗೆ ಸೂಕ್ತವಾದದ್ದೇನು ಎಂದು ತಿಳಿದಿರಬೇಕು. ಪ್ರತಿ ವ್ಯಕ್ತಿಯ ಅಗತ್ಯತೆ ಹಾಗೂ ಸನ್ನಿವೇಶಗಳಿಗೆ ತಕ್ಕಂತೆ ಯೋಗವನ್ನು ಕಲಿಸಲಾಗುತ್ತದೆ. ವಯಸ್ಕರಿಗೆ ಕಲಿಸುವುದೆಲ್ಲವನ್ನೂ ಮಕ್ಕಳಿಗೆ ಹೇಳಿಕೊಡಬಾರದು. ವಯಸ್ಕರಲ್ಲಿಯೂ ಸಹ, ನೀವು ಸಂಸಾರಸ್ತರಾಗಿದ್ದರೆ, ನಿಮಗೆ ಒಂದು ರೀತಿಯ ಯೋಗವನ್ನು ನಾವು ಕಲಿಸುತ್ತೇವೆ. ಒಬ್ಬ ಸನ್ಯಾಸಿಯು ಯೋಗವನ್ನು ಸಂಪೂರ್ಣವಾಗಿ ಬೇರೆಯದ್ದೇ ರೀತಿಯಲ್ಲಿ ಕಲಿಯುತ್ತಾನೆ. ನೀವು ಎಲ್ಲರಿಗೂ ಒಂದೇ ರೀತಿಯ ಯೋಗವನ್ನು ಕಲಿಸದಿರುವುದು ಬಹಳ ಮುಖ್ಯ.

ಮಕ್ಕಳಿಗೆ ಯೋಗವನ್ನು ಹೇಗೆ ಕಲಿಸಬೇಕು?

 

ಪ್ರಶ್ನೆ: ಯೋಗವನ್ನು ಮಕ್ಕಳಿಗೆ ನಾವು ಹೇಗೆ ಪರಿಚಯಿಸುವುದು? ಬಾಲ್ಯದಿಂದಲೆ ಯೋಗವನ್ನು ಕಲಿಯುವ ಆಸಕ್ತಿಯನ್ನು ನಾವು ಮಕ್ಕಳಲ್ಲಿ ಹೇಗೆ ಮೂಡಿಸುವುದು?

ಸದ್ಗುರು: ನಾದ ಯೋಗ ಎಂಬ ಯೋಗವಿದೆ, ಇದು ಶಬ್ದಗಳ ಕೌಶಲವನ್ನು ಹೊಂದುವಂತದ್ದಾಗಿದೆ. ಮಗುವಿಗೆ ಯೋಗವನ್ನು ಪರಿಚಯಿಸಲು ಇದೊಂದು ಅತ್ಯಂತ ಸರಳ ಹಾಗೂ ಸೂಕ್ಷವಾದ ಮಾರ್ಗ. ಇದು ಅವರ ಯೋಗಕ್ಷೇಮ ಮತ್ತು ದೇಹ ಹಾಗೂ ಮನಸ್ಸಿನ ಸರಿಯಾದ ಬೆಳವಣಿಗೆಗೆ ಎಡೆಮಾಡಿಕೊಡುತ್ತದೆ. ಆರು ಅಥವಾ ಏಳು ವರ್ಷ ವಯಸ್ಸಿನಲ್ಲಿಯೇ ಕಲಿಯಬಹುದಾದ "ಯೋಗ ನಮಸ್ಕಾರ"ದಂತಹ ಅಭ್ಯಾಸಗಳೂ ಸಹ ಇವೆ. ಮಕ್ಕಳು ಮತ್ತು ವಯಸ್ಕರಿಬ್ಬರಿಗೂ ಪ್ರಯೋಜನಕಾರಿಯಾಗಬಲ್ಲ "ಉಪ-ಯೋಗ" ವಿಧಾನಗಳೂ ಕೂಡ ಇವೆ.

ಒಂದು ಬಾರಿ ಮಕ್ಕಳು ಈ ಅಭ್ಯಾಸಗಳ ಉಪಯುಕ್ತತೆಯನ್ನು ಕಾಣಲು ಆರಂಭಿಸಿದಾಗ,  ಮತ್ತು ಜನಗಳ ಗುಂಪಿನಲ್ಲಿ ಈ ಅಭ್ಯಾಸಗಳು ಅವರನ್ನು ಸಾಮರ್ಥ್ಯದ ದೃಷ್ಟಿಯಿಂದ ಬೇರೆಯವರಿಗಿಂತ ಭಿನ್ನವಾಗಿಸಬಹುದು ಎಂದು ಅವರು ಅರ್ಥಮಾಡಿಕೊಂಡಾಗ, ಸಹಜವಾಗಿಯೇ ಅವರು ಯೋಗದ ಹೆಚ್ಚಿನ ಪ್ರಕಾರಗಳನ್ನು ಕಲಿಯಲು ಮುಂದಾಗುತ್ತಾರೆ. ಅವರು ಬೆಳೆದು ದೊಡ್ಡವರಾದಂತೆಯೇ, ಅವರ ಯೋಗವೂ ಸಹ ಬೆಳೆಯುತ್ತ ಹೋಗಬೇಕು.

ಸಂಪಾದಕರ ಟಿಪ್ಪಣಿ: ಉಚಿತ ಉಪಯೋಗ ಅಭ್ಯಾಸಗಳು ಆನ್-ಲೈನ್ ಹಾಗೂ yogayoga.org ಯಲ್ಲಿನ ಆಪ್ಸ-ನ ಮೂಲಕ ಲಭ್ಯವಿವೆ. ಈ ಐದು ನಿಮಿಷಗಳ ಪ್ರಕ್ರಿಯೆಗಳು ಕಲಿಯಲು ತುಂಬ ಸರಳವಾಗಿದ್ದು, ಆರೋಗ್ಯ, ಸಂತೋಷ, ಶಾಂತಿ, ಪ್ರೀತಿ, ಯಶಸ್ಸು ಮತ್ತು ಅಂತರಂಗದ ಅನ್ವೇಷಣೆಯನ್ನು ವರ್ಧಿಸುವಲ್ಲಿ ಶಕ್ತಿಯುತವಾದ ಸಾಧನಗಳಾಗಿವೆ. 

ಈಶ ಯೋಗ ಸಮ್ಮರ್ ಪ್ರೋಗ್ರಾಮ್-ನ ಬಗ್ಗೆ ಇಲ್ಲಿ ಹೆಚ್ಚು ತಿಳಿಯಿರಿ (ಈ ಹಿಂದೆ ಇದನ್ನು ’ನೇಚರ್ ಅವೇರ್ನೆಸ್ ಪ್ರೋಗ್ರಾಮ್’ ಎಂದು ಕರೆಯಲಾಗುತ್ತಿತ್ತು). Isha Yoga Summer Program for Children (earlier known as Nature Awareness Program) .