ಜೀವನ ಹೆಣಗಾಟವಾಗಿದೆಯೇ? ಕೂಡಿಡುವುದನ್ನು ನಿಲ್ಲಿಸಿ, ಜೀವಿಸಲು ಆರಂಭಿಸಿ!

ನಮ್ಮ ಹೊಟ್ಟೆಪಾಡಿನ ಪ್ರಕ್ರಿಯೆಯನ್ನು ನಾವು ತ್ವರಿತವಾಗಿ ನಿಭಾಯಿಸಬೇಕು ಮತ್ತು ಆನಂತರದಲ್ಲಿ ಮಾನವ ಸಂಭಾವ್ಯತೆಯನ್ನು ಸಂಪೂರ್ಣವಾಗಿ ಪರಿಶೋಧಿಸಲು ನಾವು ನಮ್ಮ ಸಮಯವನ್ನು ವಿನಿಯೋಗಿಸಬೇಕು ಎಂಬುದರ ಕಡೆಗೆ ಸದ್ಗುರುಗಳು ಇಲ್ಲಿ ಗಮನಹರಿಸುತ್ತಾರೆ.
Über den Materialismus hinausgelangen | Isha Sadhguru
 

ಪ್ರಶ್ನೆ: ಇಂದಿನ ಜಗತ್ತಿನಲ್ಲಿ ಸಮಯದ ಅಭಾವವಿರುವುದರಿಂದ, ನಾವು ಕಷ್ಟಪಡದಂತೆ ಮತ್ತು ಆಯಾಸವಾಗದಂತೆಯೇ ನಮ್ಮ ದಿನನಿತ್ಯದ ಕೆಲಸದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಲು ನಮ್ಮನ್ನು ನಾವು ಸಮರ್ಥರನ್ನಾಗಿಸಿಕೊಳ್ಳುವುದು ಹೇಗೆ?

ಸದ್ಗುರು: ನಿಮಗೆ ಯಾವುದರ ಬಗ್ಗೆಯಾದರೂ ನಿಜವಾದ ಕಾಳಜಿಯಿದ್ದರೆ ಮತ್ತು ನೀವದನ್ನೇ ಸೃಷ್ಟಿಸುತ್ತಿದ್ದೀರಿ ಎಂದಾದರೆ, ನೀವು ಬಳಲಿ ಸತ್ತರೂ ಪರವಾಗಿಲ್ಲ. ಅದೇ ನೀವು ನಿಜವಾಗಿಯೂ ಮಹತ್ವವಾದುದನ್ನು ಮತ್ತು ನಿಮಗೆ ಕಳಕಳಿ ಇರುವುದನ್ನು ಸೃಷ್ಟಿಸುತ್ತಿಲ್ಲವೆಂದಾದರೆ, ನೀವು ಕೇವಲ ಹೊಟ್ಟಪಾಡಿಗೋಸ್ಕರ ದುಡಿಯುತ್ತ ಬಳಲಿಕೆಯಿಂದ ಸತ್ತರೆ, ಅದು ಸಾಯಲು ಮೂರ್ಖತನದ ರೀತಿ.

ಜೀವಿಸಲು ಹೆಣಗಾಟ

ಹೈದರಾಬಾದಿ‌ನಲ್ಲಿ ವಾಸವಾಗಿದ್ದ ಒಬ್ಬ ವ್ಯಕ್ತಿಯ ಪರಿಚಯ ನನಗಾಗಿತ್ತು. ಅವರ ಕುಟುಂಬದವರೂ ನನಗೆ ಚೆನ್ನಾಗಿ ಗೊತ್ತಿತ್ತು. ನಾನು ಅವರೊಂದಿಗಿ ತಂಗಿದ್ದಾಗ, ಅವರು ಸದಾ ಕಾಲ ಉದ್ವಿಗ್ನರಾಗಿ ಇರುತ್ತಿದ್ದನ್ನು ಗಮನಿಸುತ್ತಿದ್ದೆ. ಒಂದು ದಿನ, ಅವರ ಹೆಂಡತಿ ಮತ್ತು ನಾನು ಮಾತನಾಡುತ್ತಿದ್ದಾಗ, ಅವರ ಗಂಡ ಯಾವಾಗಲೂ ಅತ್ತಿಂದಿತ್ತ ಜಿಗಿಯುತ್ತಿರುವುದರ ಬಗ್ಗೆ ನಾನು ತಮಾಷೆ ಮಾಡುತ್ತಿದ್ದೆ. ಅದಕ್ಕವರು, " ಸದ್ಗುರು, ಅವರು ಕೇವಲ ಬದುಕುಳಿಯಲು ಪ್ರತಿದಿನ ಸಾಯುತ್ತಿದ್ದಾರೆ" ಎಂದರು. ಅದಕ್ಕೆ ನಾನು "ಸರಿಯಾಗಿ ಹೇಳಿದಿರಿ. ನೀವು ನಿಮ್ಮ ಗಂಡನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ. ಅವರು ಜೀವಿಸಲು ಸಾಯತ್ತಿರುವವರೇ." ಎಂದೆ. ನೀವು ಜೀವಿಸಿದರೆ, ಹೇಗಿದ್ದರೂ ಸತ್ತೇ ಸಾಯುತ್ತೀರಿ. ನೀವು ಜೀವಿಸಲು ಪ್ರತಿದಿನ ಹೆಣಗಾಡುತ್ತ ಸಾಯಬೇಕಿಲ್ಲ. ನೀವು ಕೇವಲ ಜೀವಿಸಬೇಕಷ್ಟೆ, ಏಕೆಂದರೆ, ನೀವೊಂದು ಜೀವ. ಇಂದು ಹೇಗಾಗಿದೆಯೆಂದರೆ, ಒಂದೋ ಜನ ತಮ್ಮನ್ನು ತಾವು ಅರ್ಧ ಜೀವವಾಗಿಸಿಕೊಳ್ಳುತ್ತಾರೆ ಅಥವಾ ಜೀವಿಸಲು ದಿನೇ ದಿನೇ ಸಾಯುತ್ತಿರುತ್ತಾರೆ. ಅದರ ಅಗತ್ಯವಿಲ್ಲ. ನೀವು ಈ ಜೀವವನ್ನು ಅದರ ಸಂಪೂರ್ಣ ಸಾಮರ್ಥ್ಯಕ್ಕೆ ಕಾರ್ಯನಿರ್ವಹಿಸಲು ಬಿಟ್ಟರೆ, ಅದು ಅನೇಕ ಅದ್ಭುತವಾದ ವಿಷಯಗಳನ್ನು ಮಾಡುತ್ತದೆ.

ನೀವು ನಿಮ್ಮ ಇಡೀ ಜೀವಿತಾವಧಿಯನ್ನು ಕೇವಲ ನಿಮ್ಮ ಹೊಟ್ಟೆಪಾಡಿಗಾಗಿ ಮೀಸಲಿಟ್ಟರೆ, ನೀವು ಬಹಳ ದಣಿದುಹೋಗುತ್ತೀರಿ ಎಂಬುದನ್ನು ದಯಮಾಡಿ ಅರ್ಥ ಮಾಡಿಕೊಳ್ಳಿ.

ನೀವು ನಿಮ್ಮ ಇಡೀ ಜೀವಿತಾವಧಿಯನ್ನು ಕೇವಲ ನಿಮ್ಮ ಹೊಟ್ಟೆಪಾಡಿಗಾಗಿ ಮೀಸಲಿಟ್ಟರೆ, ನೀವು ಬಹಳ ದಣಿದುಹೋಗುತ್ತೀರಿ ಎಂಬುದನ್ನು ದಯಮಾಡಿ ಅರ್ಥ ಮಾಡಿಕೊಳ್ಳಿ. ನೀವು ಇಪ್ಪತ್ತು, ಹತ್ತು, ಎಂಟು ಅಥವಾ ಐದು ಗಂಟೆಗಳ ಕಾಲ ಕೆಲಸ ಮಾಡಿದರೂ ಸಹ, ಅದು ಬಹಳ ಪ್ರಯಾಸದಿಂದ ಕೂಡಿರುತ್ತದೆ. ಆದರೆ, ನೀವು ನಿಜವಾಗಿಯೂ ನಿಮಗೆ ಮುಖ್ಯವಾದುದನ್ನು ಮಾಡಿದಾಗ, ಅದು ದೈಹಿಕವಾಗಿ ಬಹಳ ಶ್ರಮದಾಯಕವೆನ್ನಿಸಬಹುದು, ಆದರೆ ಜೀವನವೇ ಒಂದು ಶ್ರಮದಂತೆ ಭಾಸವಾಗುವುದಿಲ್ಲ ಏಕೆಂದರೆ ನೀವು ಸದಾ ಮಹತ್ವವಾದುದನ್ನೇ ಮಾಡುತ್ತಿರುತ್ತೀರಿ.

ನಿಮ್ಮ ಭದ್ರತೆಗಾಗಿ ನೀವು ಐದು ಅಥವಾ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರೆ, ಅದು ಒಪ್ಪತಕ್ಕದ್ದೇ. ಆದರೆ ನೀವು ನಿಮ್ಮ ಸುರಕ್ಷತೆಗಾಗಿ ನಿಮ್ಮ ಜೀವನದುದ್ದಕ್ಕೂ ಕೆಲಸ ಮಾಡುತ್ತೇನೆಂದರೆ, ನೀವು ಸಾವನ್ನು ಅರಸುತ್ತಿದ್ದೀರಿ ಎಂದರ್ಥ,  ಏಕೆಂದರೆ ಅಸ್ತಿತ್ವದಲ್ಲಿರುವ ಒಂದೇ ಒಂದು ಸುರಕ್ಷಿತ ವಿಷಯವೆಂದರೆ ಅದು ಸಾವು ಮಾತ್ರ. ಜೀವನ ಎಂದಿಗೂ ಸುರಕ್ಷಿತವಲ್ಲ. ನೀವು ಮೇಲ್ನೋಟಕ್ಕೆ ಬದುಕಲು ಪ್ರಯತ್ನಿಸುತ್ತಿದ್ದೀರಿ ಆದರೆ ನಿಮಗೇ ಅರಿಯದಂತೆ ನೀವು ಸಾಯಲು ಕೆಲಸ ಮಾಡುತ್ತಿದ್ದೀರಿ ಅಷ್ಟೆ. ಆ ಮಹಿಳೆ ಯುಕ್ತವಾಗಿ ಹೇಳಿದಂತೆ ಈಗ ನೀವು ಜೀವಿಸಲು ಸಾಯುತ್ತಿದ್ದೀರಿ. ಆ ಮಹಿಳೆಯ ಗಂಡ ನಿಜವಾಗಿಯೂ ಕೆಲ ವರ್ಷಗಳ ನಂತರ ನಿಧನವಾದ.

 

 

ಮುಖ್ಯವಾದುದನ್ನು ಮಾಡುವುದು

ದಯವಿಟ್ಟು ಇದನ್ನು ಗಮನಿಸಿ: ನಿಮ್ಮ ದಿನಚರಿಯು ನಿಮ್ಮನ್ನು ಕೊಲ್ಲುತ್ತಿಲ್ಲ. ನೀವು ನಿಮ್ಮ ತಲೆಯಲ್ಲಿ ಹಲವಾರು ವಿಷಯಗಳನ್ನು ತುಂಬಿಸಿಕೊಂಡಿರುತ್ತೀರಿ - ಅದೇ ನಿಮ್ಮನ್ನು ಕೊಲ್ಲುತ್ತಿರುವುದು. ನಿಮಗೂ ಹಾಗೂ ನಿಮ್ಮ ಸುತ್ತಲಿರುವವರಿಗೂ ಏನಾದರು ಮುಖ್ಯವಾದುದನ್ನು ಮಾಡಿ. ಆಗ ಅಪರಿಮಿತವಾದ ಜ್ಞಾನ ಮತ್ತು ಶಕ್ತಿ ಪ್ರತಿಯೊಬ್ಬರಿಗೂ ಲಭ್ಯವಿದೆ ಎಂಬುದನ್ನು ನೀವೇ ನೋಡುವಿರಿ. ತಮ್ಮ ಸುತ್ತ ಗೋಡೆಗಳನ್ನು ಕಟ್ಟಿಕೊಳ್ಳುವುದರಲ್ಲಿ ಪ್ರತಿಯೊಬ್ಬರೂ ತಾವು ಜಾಣರು ಎಂದೆಣಿಸುತ್ತಾರೆ. ನೀವು ನಿಮ್ಮ ಕುಟುಂಬಕ್ಕಾಗಿ ಒಂದು ತಿಂಗಳಿಗಾಗುವಷ್ಟು ಆಹಾರವನ್ನು ಶೇಖರಿಸಿದರೆ, ಅದು ಸರಿ. ಆದರೆ, ನೀವು ನೂರು ವರ್ಷಗಳಿಗಾಗುವಷ್ಟನ್ನು ಶೇಖರಿಸಿದರೆ, ನೀವು ಹುಚ್ಚರು, ಅಲ್ಲವೇ?

ಇಂದು ನೀವು ಸಂಪೂರ್ಣವಾಗಿ ಜೀವಿಸಿ, ನಾಳೆ ದಣಿವಿನಿಂದಾಗಿ ಸತ್ತರೆ, ಅದು ಪರವಾಗಿಲ್ಲ. ಕಡೇ ಪಕ್ಷ, ಒಂದು ದಿನವಾದರೂ ನೀವು ಸಂಪೂರ್ಣವಾಗಿ ಜೀವಿಸಿರುತ್ತೀರಿ.

ಅಮೇರಿಕಾದಲ್ಲಿ ನಾನು ಒಬ್ಬರ ಮನೆಯಲ್ಲಿದ್ದೆ. ಸಾಮಾನ್ಯವಾಗಿ ನನಗೆ ಆ ಮನೆಗಳ ವಿನ್ಯಾಸ ತಿಳಿದಿರುತ್ತದೆ - ಅವುಗಳನ್ನು ಹೇಗೆ ನಿರ್ಮಿಸಲಾಗಿದೆ, ಅದರ ವಾಸ್ತುಶಿಲ್ಪ ಹೇಗಿದೆ ಮತ್ತು ಬಚ್ಚಲುಮನೆ ಎಲ್ಲಿದೆಯೆಂದು ನನಗೆ ತಿಳಿದಿರುತ್ತದೆ. ಹಾಗಾಗಿ ಕೇಳದೆಯೇ ನಾನದನ್ನು ಕಂಡುಕೊಳ್ಳುತ್ತೇನೆ. ಆ ಮನೆಯಲ್ಲಿ ಬಚ್ಚಲುಮನೆಯನ್ನು ಹುಡುಕುತ್ತ ಹೋಗಿ, ಒಂದು ಬಾಗಿಲನ್ನು ತೆರೆದಾಗ ನನಗೆ ಕಂಡಿದ್ದು ಪಾದರಕ್ಷೆಗಳಿಂದ ತುಂಬಿಹೋಗಿದ್ದ ಒಂದು ದೊಡ್ಡ ಕೋಣೆ!! ನನ್ನ ಪ್ರಕಾರ ಅಲ್ಲಿ ಸುಮಾರು ಐನೂರು ಪಾದರಕ್ಷೆಗಳನ್ನು ಸಾಲಾಗಿ ಜೋಡಿಸಲಾಗಿತ್ತು.

ಇವುಗಳನ್ನು ಹೊಂದಿದ್ದ ಮಹಿಳೆಯೊಂದಿಗೆ ಮಾತನಾಡಿದಾಗ ನಾನು, "ಮನೆಯ ಸುತ್ತ ಓಡಾಡಲು, ಬೆಟ್ಟವನ್ನು ಹತ್ತಲು, ಗಾಲ್ಫ್ ಆಡಲು, ಪಾರ್ಟಿಗೆ ಹೋಗಲು ನಿಮಗೆ ಒಂದೊಂದು ಪಾದರಕ್ಷೆ ಬೇಕಾಗಬಹುದು ಎಂದು ನನಗರ್ಥವಾಗುತ್ತದೆ. ಆದರೆ ನಿಮ್ಮ ಬಳಿ ವೈವಿಧ್ಯಮಯ ಉಡುಪುಗಳಿವೆ ಆದ್ದರಿಂದ ನಿಮಗೆ ಎಲ್ಲಾ ಬಣ್ಣದ ಪಾದರಕ್ಷೆಗಳು ಬೇಕು ಎಂದಾದರೆ, ನಿಮಗೆ ಇಪ್ಪತ್ತರಿಂದ ಇಪ್ಪತ್ತೊಂದು ಪಾದರಕ್ಷೆಗಳು ಬೇಕಾಗಬಹುದು. ಆದರೆ ಐನೂರು ಪಾದರಕ್ಷೆಗಳು! ನಿಮ್ಮನ್ನು ನೋಡಿದರೆ, ನಿಮಗಿರುವುದು ಎರಡೇ ಕಾಲುಗಳು. ನೀವು ತುಂಬಾ ಶ್ರೀಮಂತರಾಗಿದ್ದು, ನಿಮ್ಮ ಜೀವನಶೈಲಿಗೆ ಅನುಗುಣವಾಗಿ ನಿಮ್ಮ ಬಳಿ ಇಪ್ಪತ್ತೊಂದು ಪಾದರಕ್ಷೆಗಳು ಇದ್ದರೆ, ಅದು ಯುಕ್ತವೇ. ಆದರೆ ಐನೂರು ಜೊತೆಗಳು!! ನೀವು ಐವತ್ತು ಬಾರಿ ಹುಟ್ಟಿ ಬಂದರೂ, ಇವೆಲ್ಲವನ್ನೂ ನಿಮಗೆ ಧರಿಸುವುದಕ್ಕಾಗುವುದಿಲ್ಲ." ಎಂದು ಹೇಳಿದೆ.

ಬದುಕುಳಿಯುವಿಕೆಯ ಪ್ರಕ್ರಿಯೆ ಅಥವಾ ಹೊಟ್ಟೆಪಾಡನ್ನು ಬೇಗನೆ ಇತ್ಯರ್ಥಮಾಡಿಬಿಡಬೇಕು. ತದನಂತರ ನಿಜವಾಗಿಯೂ ಯಾವುದು ಮುಖ್ಯವೋ ಅದನ್ನು ನೀವು ಮಾಡಬೇಕು. ಹಾಗೆ ಮಾಡದಿದ್ದರೆ, ಅಮಿತೋತ್ಸಾಹದ ಶಕ್ತಿಯ ಅರ್ಥವೇನೆಂಬದು ನಿಮಗೆ ತಿಳಿಯುವುದಿಲ್ಲ, ನೀವು ರಾತ್ರಿ ನಿದ್ದೆ ಮಾಡದಿದ್ದರೂ ಸಹ ಬೆಳಿಗ್ಗೆ ಉತ್ಸಾಹದಿಂದಿರುವುದು ಏನೆಂಬುದು ನಿಮಗೆ ತಿಳಿಯುವುದಿಲ್ಲ. ಅದು ನಿಮಗೆ ತಿಳಿಯುವುದೇ ಇಲ್ಲ, ಏಕೆಂದರೆ ನೀವು ಎಂಭತ್ತರವರೆಗೂ ಬದುಕಬೇಕಾದರೆ, ದಿನಕ್ಕೆ ಒಂಬತ್ತು ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು ಎಂದು ನಿಮಗೆ ವೈದ್ಯರು ಹೇಳಿಬಿಟ್ಟಿದ್ದಾರೆ. ದಿನದ ಉಳಿದಿರುವ ಭಾಗವು ಪ್ರತಿ ಎರಡು ಗಂಟೆಗಳಿಗೊಮ್ಮೆ ವಿಟಮಿನ್ ಮಾತ್ರೆಗಳನ್ನು ನುಂಗುವುದರಲ್ಲಿ, ಅದು ಇದು ಮಾಡುವುದರಲ್ಲಿ ಹೊರಟುಹೋಗುತ್ತದೆ - ಹೀಗಿದ್ದಾಗ ನೀವು ಜೀವಿಸದೆಯೇ ಸತ್ತುಹೋಗುತ್ತೀರಿ.

ನೀವು ಯಾವುದಕ್ಕಾಗಿ ಅಷ್ಟೊಂದು ಭಯಪಡುತ್ತಿದ್ದೀರಿ? ಇಂದು ನೀವು ಸಂಪೂರ್ಣವಾಗಿ ಜೀವಿಸಿ, ನಾಳೆ ದಣಿವಿನಿಂದಾಗಿ ಸತ್ತರೆ, ಅದು ಪರವಾಗಿಲ್ಲ. ಕಡೇ ಪಕ್ಷ, ಒಂದು ದಿನವಾದರೂ ನೀವು ಸಂಪೂರ್ಣವಾಗಿ ಜೀವಿಸಿರುತ್ತೀರಿ. ನೀವು ಈ ರೀತಿಯಲ್ಲಿ ಜೀವಿಸದೇ ಇದ್ದರೆ, ನಿಮಗೆ ಜೀವನ ಏನೆಂಬುದು ಎಂದಿಗೂ ಸಹ ತಿಳಿಯುವುದಿಲ್ಲ. ನಿಮ್ಮ ಜೀವವನ್ನು ಏತಕ್ಕಾಗಿ ಹಿಡಿದಿಟ್ಟುಕೊಂಡಿದ್ದೀರಿ? ನೀವು ಅದನ್ನು ಹಿಡಿದಿಟ್ಟುಕೊಂಡರೆ ಅದು ನಿಮ್ಮೊಂದಿಗಿರುವುದಿಲ್ಲ - ಜೀವದ ಸ್ವರೂಪವೇ ಅಂತಹದ್ದು.

ಇದು ನೀವು ಬೀಗ ಹಾಕಿ ಭದ್ರವಾಗಿಟ್ಟುಕೊಳ್ಳಬಹುದಾದ ವಸ್ತುವಲ್ಲ. ನೀವದಕ್ಕೆ ಬೀಗ ಹಾಕಿಟ್ಟರೆ, ಅದು ಸಾಯುತ್ತದೆ. ದಯಮಾಡಿ ಜೀವಿಸಿ. ಮುಂದಿನ ಜನ್ಮಗಳಿಗೆ ಶೇಖರಿಸಿ ಇಡಬೇಡಿ. ಇಪ್ಪತ್ತೊಂದಕ್ಕಿಂತ ಹೆಚ್ಚು ಪಾದರಕ್ಷೆಗಳನ್ನು ಇಟ್ಟುಕೊಳ್ಳಬೇಡಿ, ಸರಿಯೇ?