ತಮ್ಮ ಇರುವಿಕೆಯಿಂದ ನಮ್ಮ ಜಗತ್ತನ್ನು ಶ್ರೀಮಂತಗೊಳಿಸಿದ ಜ್ಞಾನೋದಯ ಹೊಂದಿದ ಗುರುಗಳ ಬಗೆಗಿನ ಲೇಖನ ಸರಣಿ - ಮಹಾನ್ ಸಂತರು. ಸದ್ಗುರುಗಳು ಮಹಾನ್ ಸಂತರ ಜೀವನದ ಕೆಲವು ಪ್ರಮುಖ ಅಂಶಗಳನ್ನು ಮತ್ತು ನಾವು ಅವರಿಂದ ಏನು ಕಲಿಯಬಹುದು ಎಂಬುದರ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ.

ಗೋರಖನಾಥ ಮತ್ತು ಮತ್ಸ್ಯೇಂದ್ರನಾಥ

Sadhguru: ಗೋರಖನಾಥರು ಉನ್ನತ ಸಾಧನೆ ಮಾಡಿದ ಯೋಗಿಯಾಗಿದ್ದರು. ಯೋಗ ಸಂಸ್ಕೃತಿಯ ಇತಿಹಾಸದಲ್ಲಿ, ಅನೇಕ ವಿಧಗಳಲ್ಲಿ ಅವರೊಬ್ಬ ಎದ್ದು ಕಾಣುವ ನಕ್ಷತ್ರ. ಗೋರಖನಾಥರ ಗುರುಗಳು ಮತ್ಸ್ಯೇಂದ್ರನಾಥರು. ಅವರೊಬ್ಬ ಶ್ರೇಷ್ಠ ಯೋಗಿಯಾಗಿದ್ದರು ಮತ್ತು ಅವರನ್ನು ಶಿವನ ಅವತಾರ ಎಂದು ಜನ ಪರಿಗಣಿಸುತ್ತಾರೆ. ಇದರರ್ಥ ಶಿವ ಮತ್ತೆ ಹುಟ್ಟಿ ಬಂದನು ಎಂದಲ್ಲ. ಅರಿವು ಮತ್ತು ಸಾಮರ್ಥ್ಯದ ವಿಷಯದಲ್ಲಿ ಅವರು ಶಿವನಿಗಿಂತ ಬೇರೆಯಾಗಿರಲಿಲ್ಲ, ಆದ ಕಾರಣವೇ ಅವರನ್ನು ಶಿವನ ಅವತಾರ ಎಂದು ಕರೆಯುತ್ತೇವೆ. ನಮಗೆ ಶಿವನಲ್ಲಿ ಆಸಕ್ತಿ ಇರುವದು ಅವನ ಗುಣಗಳಿಂದಲೇ ಹೊರತು, ಒಬ್ಬ ವ್ಯಕ್ತಿಯಾಗಿ ಅಲ್ಲ. ಮತ್ಸ್ಯೇಂದ್ರನಾಥರು ಅದಕ್ಕೆ ತುಂಬಾ ಹತ್ತಿರವಾಗಿದ್ದರು, ಆದ ಕಾರಣ ಜನರು ಅವರನ್ನು ಶಿವ ಎಂದೇ ಕರೆದರು. ಗೋರಖನಾಥರು ಗುರುಗಳ ಆಪ್ತ ಶಿಷ್ಯರಾಗಿದ್ದರು, ಮುಂದೆ ಅವರು ದೇಶದ ಅತ್ಯಂತ ಪ್ರಸಿದ್ಧ ಯೋಗಿಯಾಗಿ ದಂತ ಕಥೆಯಾದರು. ಗೋರಖನಾಥರು ಉಪಖಂಡದಾದ್ಯಂತ ಅದ್ಭುತ ಕೆಲಸ ಮಾಡಿದರು. ಭಾರತದಲ್ಲಿ ಅವರ ಹೆಸರನ್ನು ಕೇಳದ ವ್ಯಕ್ತಿಯೇ ಇಲ್ಲ.

ಗೋರಖನಾಥರು ಜಗತ್ತನ್ನೇ ಬದಲಾಯಿಸುವ ಶಕ್ತಿಯುಳ್ಳ ವ್ಯಕ್ತಿಯಾಗಿದ್ದರು. ಅವರಿಗೆ ಆ ಮಟ್ಟದ ಸಾಮರ್ಥ್ಯವಿತ್ತು. ಆದರೆ ಅವರ ಅಪಾರ ಶಕ್ತಿಯು ಸ್ಥಿರತೆಯನ್ನು ಪಡೆದಿರಲಿಲ್ಲ ಮತ್ತು ಸರಿಯಾದ ಮಾರ್ಗದಲ್ಲಿ ಹರಿಯುವ ಅವಶ್ಯಕತೆ ಇತ್ತು.

ಗೋರಖನಾಥ ನಡೆದ ದಾರಿ (ಪಂಥ) ಇಂದಿಗೂ ಯೋಗ ಸಂಪ್ರದಾಯಗಳಲ್ಲಿ ಅತ್ಯಂತ ದೊಡ್ಡ ಪಂಥಗಳಲ್ಲಿ ಒಂದಾಗಿದೆ. ಇದು ಗರಿಷ್ಟ ಸಂಖ್ಯೆಯ ನಾಥಿಗಳನ್ನು ಹೊಂದಿದೆ ಮತ್ತು ಅವರು ತೀವ್ರವಾದ ಸಾಧನೆಯಲ್ಲಿ ತೊಡಗಿರುತ್ತಾರೆ. ಈ ಪಂಥ ಕಾಲಾಂತರದಲ್ಲಿ ಹಲವಾರು ಗುಂಪುಗಳಾಗಿ ವಿಭಜನೆ ಹೊಂದಿದ್ದರೂ, ಈಗಲೂ ಅದೊಂದು ತೀವ್ರ ಉಗ್ರ ಸ್ವಭಾವ ಹೊಂದಿರುವ ಜನರ ತಂಡವಾಗಿದೆ.

sadhguru-wisdom-article-gorakhnath-with-stick-and-black-dog-illustrative-img

ಗೋರಖನಾಥಿಗಳು ಯಾವಾಗಲೂ ತಮ್ಮೊಂದಿಗೆ ಒಂದು ಕೋಲು ಮತ್ತು ನಾಯಿಯನ್ನು ಕರೆದೊಯ್ಯುತ್ತಾರೆ. ಅವರ ನಾಯಿಗಳು ಕಡುಗಪ್ಪು ಬಣ್ಣದ್ದಿರುತ್ತವೆ. ಅವರ ಜೊತೆ ಬೇರೆ ಯಾವ ಬಣ್ಣದ ನಾಯಿಗಳೂ ಇರುವದಿಲ್ಲ. ಅವರು ತಮ್ಮ ನಾಯಿಗಳನ್ನು ತುಂಬಾ ಪ್ರೀತಿಸುತ್ತಾರೆ. ಅವುಗಳಿಗೆ ಚನ್ನಾಗಿ ಆಹಾರ ತಿನ್ನಿಸುತ್ತಾರೆ ಮತ್ತು ಅವುಗಳಿಗೆ ನಡೆಯಲು ಬಿಡುವದಿಲ್ಲ - ತಮ್ಮ ಹೆಗಲ ಮೇಲೆ ನಾಯಿಗಳನ್ನು ಹೊತ್ತುಕೊಂಡು ನೂರಾರು ಕಿಲೋಮೀಟರ್ ನಡೆಯುತ್ತಾರೆ. ಸಾಮಾನ್ಯ ಜನ ಹಿಂದಿ ಭಾಷೆಯಲ್ಲಿ ಅವರನ್ನು ‘ಕಾನ್ ಫಟ್’ ಎಂದು ಕರೆಯುತ್ತಾರೆ. ‘ಕಾನ್ ಫಟ್’ ಎಂದರೆ ಕನ್ನಡದಲ್ಲಿ ಕಿವಿಗೆ ರಂಧ್ರ ಹೊಂದಿರುವವನು ಎಂದರ್ಥ. ಕಿವಿ ಹಾಲೆಯಲ್ಲಿ ದೊಡ್ಡ ರಂದ್ರ ಹೊಂದಿರುವ ಕಾರಣ ಜನರು ಅವರನ್ನು ಸಾಮಾನ್ಯವಾಗಿ ಹೀಗೆ ಕರೆಯುತ್ತಾರೆ.

ಗೋರಖನಾಥರು ಜಗತ್ತನ್ನೇ ಬದಲಾಯಿಸುವ ಶಕ್ತಿಯುಳ್ಳ ವ್ಯಕ್ತಿಯಾಗಿದ್ದರು. ಅವರಿಗೆ ಆ ಮಟ್ಟದ ಸಾಮರ್ಥ್ಯವಿತ್ತು. ಆದರೆ ಅವರ ಅಪಾರ ಶಕ್ತಿಯು ಸ್ಥಿರತೆಯನ್ನು ಪಡೆದಿರಲಿಲ್ಲ ಮತ್ತು ಆ ಶಕ್ತಿ ಸರಿಯಾದ ಮಾರ್ಗದಲ್ಲಿ ಹರಿಯುವ ಅವಶ್ಯಕತೆ ಇತ್ತು. ಮತ್ಸ್ಯೇಂದ್ರನಾಥರು ತಮ್ಮ ಶಿಷ್ಯ ಗೋರಖನಾಥರಿಗೆ ತಮ್ಮ ಬಗ್ಗೆ ಇದ್ದ ಪ್ರೀತಿಯನ್ನು ಯಾವ ರೀತಿ ಹದಗೊಳಿಸಿದರು ಎನ್ನುವದಕ್ಕೆ ಹಲವಾರು ಕಥೆಗಳಿವೆ, ಗುರುಗಳ ಬಗ್ಗೆ ಇದ್ದ ಅಪಾರ ಉಗ್ರ ಸ್ವರೂಪದ ಪ್ರೀತಿ ಅವರನ್ನು ಸಮಾಜದ ರೀತಿ ನೀತಿ ನಿಯಮಗಳನ್ನು ಮೀರುವಂತೆ ಮಾಡುತ್ತಿತ್ತು. ಮತ್ಸ್ಯೇಂದ್ರನಾಥರು ಅವರನ್ನು ಹಲವಾರು ವಿಧದಲ್ಲಿ ನಿಯಂತ್ರಿಸುತ್ತಿದ್ದರು ಏಕೆಂದರೆ ಅವರಿಗೆ ತಮ್ಮ ಶಿಷ್ಯನ ಸಾಮರ್ಥ್ಯ ತಿಳಿದಿತ್ತು.

ಘಟನೆ #1: ಗೋರಖನಾಥರು ತಮ್ಮ ಅತೀಂದ್ರಿಯ ಶಕ್ತಿಯನ್ನು ದುರುಪಯೋಗ ಮಾಡಿದ ಪ್ರಸಂಗ

ಗೋರಖನಾಥರು ತಮ್ಮ ಗುರುಗಳ ಬಗ್ಗೆ ಅತೀವ ಭಕ್ತಿ ಹೊಂದಿದ್ದರು. ಮತ್ಸ್ಯೇಂದ್ರನಾಥರು ತಮ್ಮ ಶಿಷ್ಯನ ಪ್ರೀತಿ ಉಗ್ರಸ್ವರೂಪ ಪಡೆಯುತ್ತಿದ್ದುದನ್ನು ನೋಡಿದರು. ಗೋರಖನಾಥರ ಗುರುಭಕ್ತಿ ಎಷ್ಟು ತೀವ್ರವಾಗಿತ್ತೆಂದರೆ, ಅವರು ಯೋಗಿ ಆಗಿರದೆ, ಒಬ್ಬ ಸೈನಿಕನಂತೆ ಆಗಿದ್ದರು. ಮತ್ಸ್ಯೇಂದ್ರನಾಥರು ಗೋರಖನಾಥರನ್ನು ಹದಿನಾಲ್ಕು ವರ್ಷ ಸಾಧನೆ ಮಾಡುವಂತೆ ಹೇಳಿ ಹಿಮಾಲಯಕ್ಕೆ ಕಳುಹಿಸಿದರು. ಗೊರಖನಾಥರಿಗೆ ಗುರುವಿನ ಆಜ್ಞೆ ಪಾಲಿಸುವುದೇ ಪರಮ ಸಾಧನೆಯಾಗಿತ್ತು. ಗುರುವನ್ನು ಬಿಟ್ಟರೆ ಬೇರೆ ಏನೂ ಮುಖ್ಯವಾಗಿರಲಿಲ್ಲ. ಗುರುವಿನ ಮೇಲೆ ಅಪಾರ ಭಕ್ತಿ. ಹಿಮಾಲಯ ಪರ್ವತದಲ್ಲಿ ಸಾಧನೆ ಮಾಡುತ್ತಿದ್ದಾಗ, ಹದಿನಾಲ್ಕು ವರ್ಷ ಯಾವಾಗ ಮುಗಿಯುತ್ತದೆಯೋ ಮತ್ತು ಯಾವಾಗ ತಮ್ಮ ಗುರುಗಳ ಬಳಿಗೆ ಹಿಂತಿರುಗಬಹುದು ಎಂದು ಅವರು ಪ್ರತಿ ದಿನ, ಪ್ರತಿ ನಿಮಿಷ, ಪ್ರತಿ ಕ್ಷಣ ಎಣಿಕೆ ಮಾಡುತ್ತಿದ್ದರು. ಜೊತೆಗೆ, ಅವರು ತಮ್ಮ ಸಾಧನೆ ಮುಂದುವರಿಸಿದ್ದರು ಮತ್ತು ಈ ಹದಿನಾಲ್ಕು ವರ್ಷಗಳ ಸಾಧನೆಯಿಂದ, ಅವರು ಅನೇಕ ಅತೀಂದ್ರಿಯ ಶಕ್ತಿಗಳ ಸಿದ್ಧಿಯಾಯಿತು. ಅವುಗಳ ಉಪಯೋಗ ಮಾಡದಿದ್ದರೂ, ಅವುಗಳ ಸಾಧ್ಯತೆಗಳನ್ನು ಅವರು ಅರಿತಿದ್ದರು. ನಂತರ ಅವರು ಮುಂಬೈಯ ದಕ್ಷಿಣಕ್ಕೆ ಕೇವಲ 200 ಕಿಲೋಮೀಟರ್ ದೂರದಲ್ಲಿರುವ, ಪಶ್ಚಿಮ ಘಟ್ಟ ​​ಆರಂಭವಾಗುವ ಪರ್ವತಶ್ರೇಣಿಗೆ ಈಗ ಆ ಪರ್ವತಕ್ಕೆ ಗೋರಖನಾಥ ಪರ್ವತ ಎಂದು ಹೆಸರಿಡಲಾಗಿದೆ.

“ನೀನು ನಿನ್ನ ಅತೀಂದ್ರಿಯ ಶಕ್ತಿಯ ದುರುಪಯೋಗ ಮಾಡಿರುವೆ, ಆದ ಕಾರಣ ನೀನು ಮತ್ತೆ ಹಿಮಾಲಯಕ್ಕೆ ಹೋಗಬೇಕು ಏಕೆಂದರೆ ನಾನು ಕಲಿಸಿದ ಯೋಗದ ಅತ್ಯಂತ ಕೆಳ ಮಟ್ಟದ ಅಭಿವ್ಯಕ್ತಿಯನ್ನು ನೀನು ಕಂಡು ಕೊಂಡಿದ್ದಿ.”

ನೀವು ಇದರ ಸಂಪೂರ್ಣ ಹಿನ್ನಲೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದು ಅವರು ದೆಹಲಿಗೆ ಬಂದರು ಮತ್ತು ಮುಂಬೈಗೆ ವಿಮಾನದಲ್ಲಿ ಹಾರಿದರು ಮತ್ತು ಅಲ್ಲಿಂದ ಡ್ರೈವ್ ಮಾಡಿದರು ಅನ್ನುವಷ್ಟು ಸುಲಭವಲ್ಲ. ಗೋರಖನಾಥರು ಹಿಮಾಲಯದವರೆಗೆ ನಡೆದುಕೊಂಡು ಹೋದರು, ಅಲ್ಲಿ ಹದಿನಾಲ್ಕು ವರ್ಷ ಸಾಧನೆ ಮಾಡಿದರು, ಅಲ್ಲಿಂದ ತಮ್ಮ ಗುರುಗಳ ದರ್ಶನದ ತೀವ್ರ ಬಯಕೆ ಹೊತ್ತು ಹಿಮಾಲಯ ಪರ್ವತ ಇಳಿದು ಬಂದರು. ಹಿಮಾಲಯ ಪರ್ವತ ಹತ್ತುವುದು, ಹದಿನಾಲ್ಕು ವರ್ಷ ಸಾಧನೆ ಮಾಡುವುದು ಮತ್ತು ಅದೇ ಪರ್ವತವನ್ನು ನಡೆದೇ ಇಳಿದು ಬರುವುದು, ಇದು ಅಂಥಹ ಸರಳ ವಿಷಯವಲ್ಲ. ಗೋರಖನಾಥರು, ಮತ್ಸ್ಯೇಂದ್ರನಾಥರು ಇರುವ ಗುಹೆಯ ಹತ್ತಿರ ಬಂದಾಗ, ಅಲ್ಲಿ ಇನ್ನೊಬ್ಬ ಯೋಗಿ ಮತ್ತು ಅವರ ಶಿಷ್ಯ, ಅದನ್ನು ಕಾಯುತ್ತಿರುವದನ್ನು ನೋಡಿದರು.

ಗೋರಖನಾಥರು ತಮ್ಮ ಗುರುಗಳ ದರ್ಶನ ಮಾಡಲು ಬಯಸಿದ್ದರು. “ಇಲ್ಲ, ನೀವು ಒಳಗೆ ಹೋಗುವಂತಿಲ್ಲ” ಎಂದು ಬಾಗಿಲು ಕಾಯುತ್ತಿರುವ ಯೋಗಿ ಹೇಳಿದರು. “ನೀನು ನನ್ನನ್ನು ಅದು ಹೇಗೆ ತಡೆಯುವೆ? ಹದಿನಾಲ್ಕು ವರ್ಷದಿಂದ ನಾನು ಈ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ನಿನಗೆ ನನ್ನನ್ನು ತಡೆಯಲು ಸಾಧ್ಯವಿಲ್ಲ. ಯಾರು ನೀನು?” ಎಂದು ಕೋಪಾವಿಷ್ಠರಾಗಿ ಕೇಳಿದರು. ಯೋಗಿ ಹೇಳಿದರು, “ನಾನು ಯಾರು ಎನ್ನುವದು ಮುಖ್ಯವಲ್ಲ, ನೀವು ಒಳಗೆ ಹೋಗುವಂತಿಲ್ಲ ಮತ್ತು ನಾನು ನಿಮ್ಮನ್ನು ಒಳಕ್ಕೆ ಹೋಗಲು ಬಿಡುವುದೂ ಇಲ್ಲ”

ಗೋರಖನಾಥರಿಗೆ ವಿಪರೀತ ಕೋಪ ಬಂದಿತು, ಅವರನ್ನು ಜೋರಾಗಿ ತಳ್ಳಿ, ಗುರುಗಳು ಇದ್ದಾರೆ ಎಂದು ತಿಳಿದುಕೊಂಡಿದ್ದ ಗುಹೆಯ ಒಳಗೆ ಹೋದರು. ಗುಹೆಯಲ್ಲಿ ಯಾರೂ ಇರಲಿಲ್ಲ. ಗೋರಖನಾಥರು ದುಃಖದಿಂದ ಹೊರಗೆ ಬಂದು, “ಗುರುಗಳು ಎಲ್ಲಿದ್ದಾರೆ ?” ಎಂದು ಕೇಳಿದರು. ಯೋಗಿ ಹೇಳಿದರು, “ನಿಮಗೆ ಹೇಳುವ ಇಚ್ಛೆ ನನಗೆ ಇಲ್ಲ, ನಿಮ್ಮಲ್ಲಿ ತುಂಬಾ ಉದ್ಧಟತನವಿದೆ”. ಗೋರಖನಾಥರು ಪರಿ ಪರಿಯಾಗಿ ಬೇಡಿಕೊಂಡರು. ಯೋಗಿ ಹೇಳಲಿಲ್ಲ. ಅವರು ತಮ್ಮ ಅತೀಂದ್ರಿಯ ಶಕ್ತಿಯನ್ನು ಉಪಯೋಗಿಸಿ, ಯೋಗಿಯ ಮನಸ್ಸಿನಲ್ಲಿ ಹೊಕ್ಕಿನೋಡಿ ತಮ್ಮ ಗುರುಗಳು ಎಲ್ಲಿದ್ದಾರೆ ಎನ್ನುವುದನ್ನು ತಿಳಿದು, ನೇರವಾಗಿ ಗುರುಗಳ ಹತ್ತಿರ ಧಾವಿಸಿದರು. ಮತ್ಸ್ಯೇಂದ್ರನಾಥರಿಗೆ ಎಲ್ಲ ವಿಷಯವೂ ತಿಳಿದಿತ್ತು. “ನಾನು ಕೊಟ್ಟಿರುವ ಸಾಧನೆಯನ್ನು, ನಿನಗೆ ದೊರೆತ ಮೊದಲ ಅವಕಾಶದಲ್ಲೇ, ನಿನ್ನ ಸಹಚರ ಯೋಗಿಯ ಮನಸ್ಸಿನಲ್ಲಿರುವುದನ್ನು ತಿಳಿಯಲು, ದುರುಪಯೋಗ ಪಡಿಸಿಕೊಂಡಿರುವೆ. ಅವನ ಮನಸ್ಸಿನಲ್ಲಿರುವುದನ್ನು ನಿನ್ನ ಅತೀಂದ್ರಿಯ ಶಕ್ತಿಯನ್ನು ಉಪಯೋಗಿಸಿ ತಿಳಿಯುವ ಅಧಿಕಾರ ನಿನಗಿಲ್ಲ. ಹೀಗಾಗಿ ನಿನ್ನ ಶಕ್ತಿಯನ್ನು ನೀನು ದುರುಪಯೋಗ ಪಡಿಸಿಕೊಂಡಿದ್ದೀಯ. ಹೀಗಾಗಿ ನೀನು ಮತ್ತೆ ಹದಿನಾಲ್ಕು ವರ್ಷದ ಸಾಧನೆ ಮಾಡಲು ಹಿಮಾಲಯಕ್ಕೆ ಹೋಗಬೇಕು ಏಕೆಂದರೆ ನಾನು ನಿನಗೆ ಕಲಿಸಿದ ಯೋಗದ ಅಭಿವ್ಯಕ್ತಿಯ ಅತ್ಯಂತ ಕೆಳ ಮಟ್ಟವನ್ನಷ್ಟೇ ನೀನು ಕಂಡುಕೊಂಡಿರುವೆ. ಏಕೆಂದರೆ, ಯೋಗದಿಂದ ದೊರಕುವ ಅತೀಂದ್ರಿಯ ಶಕ್ತಿಗಳು, ಯೋಗದ ಅತ್ಯಂತ ಕೆಳ ಮಟ್ಟದ ಸಾಧನೆಯ ಅಭಿವ್ಯಕ್ತಿಗಳು. ಮೊಟ್ಟಮೊದಲನೆಯದಾಗಿ ಜನರು ಮಾಡಲು ಬಯಸುವುದು ಅದನ್ನೇ. ಬೇರೆಯವರಿಗೆ ಮಾಡಲು ಅಸಾಧ್ಯವಾದದ್ದನ್ನು ಜನರು ಮಾಡಲು ಬಯಸುತ್ತಾರೆ. ನೀನು ಮೂಲಾಧಾರ ಚಕ್ರದ ಮೂಲಕ ಅಭಿವ್ಯಕ್ತಿ ಮಾಡಿರುವೆ. ಆದಕಾರಣ, ಮೂಲಾಧಾರ ಚಕ್ರವನ್ನು ನಿಯಂತ್ರಿಸಿ, ಮತ್ತೆ ಹದಿನಾಲ್ಕು ವರ್ಷ ಸಾಧನೆ ಮಾಡಿ ಬಾ” ಎಂದು ಯೋಗದ ಪರಿಭಾಷೆಯಲ್ಲಿ ಹೇಳಿದರು.

ಗೋರಖನಾಥರು ತಿರುಗಿ ಬಂದು, ಇಂದು ಪ್ರಸಿದ್ಧಿಯಲ್ಲಿರುವ ಅತ್ಯಂತ ಕಠಿಣವಾದ “ಗೋರಖನಾಥ ಆಸನ” ದಲ್ಲಿ ಕುಳಿತರು. ತಮ್ಮ ಎಡ ಹಿಮ್ಮಡಿಯನ್ನು ಮೂಲಾಧಾರದಲ್ಲಿರಿಸಿ, ತಮ್ಮ ಎಡ ಪಾದದ ಬೆರಳುಗಳ ಮೇಲೆ ಕುಳಿತು, ಬಲಗಾಲನ್ನು ಎಡ ತೊಡೆಯ ಮೇಲಿರಿಸಿ, ಅದೇ ಆಸನದಲ್ಲಿ, ಹದಿನಾಲ್ಕು ವರ್ಷಗಳು ಸಾಧನೆ ಮಾಡಿದರು. ತನ್ನ ಅಭಿವ್ಯಕ್ತಿ ಅತ್ಯಂತ ಕೆಳಮಟ್ಟದಲ್ಲಿ ಆಗಬಾರದೆಂದು, ಮೂಲಾಧಾರ ಚಕ್ರವನ್ನು ಸತತವಾಗಿ ನಿರ್ಬಂಧಿಸಿ ಕುಳಿತರು.

sadhguru-wisdom-article-gorakhnath-asana-illustrative-img

ಘಟನೆ #2 - ಗೋರಖನಾಥರು ತಮ್ಮ ಗುರುಗಳನ್ನು ರಕ್ಷಿಸಿದ ಪ್ರಸಂಗ

ಒಂದು ದಿನ ಗೋರಖನಾಥರು ತಮ್ಮ ಗುರು ಮತ್ಸ್ಯೇಂದ್ರನಾಥರು ಯಾರನ್ನೋ ಆಸ್ಸಾಂನಲ್ಲಿ ಭೇಟಿಯಾಗಲು ಹೋದವರು ತಿರುಗಿ ಬರದೇ ಇದ್ದುದನ್ನು ಕಂಡರು. ತಮ್ಮ ಅತೀಂದ್ರಿಯ ನೋಟದಲ್ಲಿ ಗುರುಗಳು ದೈಹಿಕ ಸುಖದಲ್ಲಿ ಮುಳುಗಿರುವದನ್ನು ಕಂಡರು. ಅವರಿಗೆ ಆಘಾತವಾಯಿತು - “ನನ್ನ ಗುರುಗಳು ಈ ಸ್ಥಿತಿಯಲ್ಲಿ ಇರುವುದು ಹೇಗೆ ಸಾಧ್ಯ?” ಗೋರಖನಾಥರು ಪಶ್ಚಿಮ ಕರಾವಳಿಯಿಂದ ಮೂರು ಸಾವಿರ ಕಿಲೋಮೀಟರುಗಳಿಗಿಂತ ದೂರ ಇರುವ ಆಸ್ಸಾಂಗೆ ಹೋದರು. ಸಂಪೂರ್ಣ ದೂರವನ್ನು ನಡೆದುಕೊಂಡೇ ಹೋದರು. ಅಲ್ಲಿ ತಮ್ಮ ಗುರುಗಳು ಇಬ್ಬರು ವೇಶ್ಯೆಯರನ್ನು ತಮ್ಮ ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ಕಾಮುಕ ಸುಖಾಪೇಕ್ಷೆಯಿಂದ, ಅವರ ಜೊತೆ ಸಲ್ಲಾಪ ಮಾಡುತ್ತಿರುವದನ್ನು ಕಂಡರು. ಅವರಿಗೆ ನಂಬಲಿಕ್ಕೇ ಆಗಲಿಲ್ಲ. “ಶಿವ ಸ್ವರೂಪರಾದಂಥ ಮತ್ಸ್ಯೇಂದ್ರನಾಥರಿಗೆ ಹೀಗಾಗಲಿಕ್ಕೆ ಹೇಗೆ ತಾನೇ ಸಾಧ್ಯ ?” ಎಂದು ಯೋಚಿಸಿದರು. ತಮ್ಮ ಜೀವನದ ಮೇಲೆ ಅತ್ಯಂತ ಪ್ರಭಾವ ಬೀರಿದ ಮತ್ಸ್ಯೇಂದ್ರನಾಥರು ಇಬ್ಬರು ವೇಶ್ಯೆಯರ ಜೊತೆ ಕುಳಿತಿದ್ದಾರೆ !

“ನನ್ನ ಗುರುಗಳಿಗೆ ಏನಾಯಿತು?” ಎಂದು ಅತ್ಯಂತ ದುಃಖಿತರಾದರು.

ಆಮೇಲೆ ಗೋರಖನಾಥರು, ವೇಶ್ಯೆಯರನ್ನು ಹೆದರಿಸಿ ಓಡಿಸಿ ತಮ್ಮ ಗುರುಗಳಿಗೆ “ಬನ್ನಿ, ಹೋಗೋಣ” ಎಂದು ಅಲ್ಲಿಂದ ಹೊರಗೆಳೆದು ತಂದರು. ದಾರಿಯಲ್ಲಿ ಮತ್ಸೇಯೇಂದ್ರನಾಥರು ನದಿಯಲ್ಲಿ ಸ್ನಾನ ಮಾಡಲು ಹೋದರು. ಅವರು ತಮ್ಮ ಕೈಚೀಲವನ್ನು ಗೋರಖನಾಥರ ಕೈಯಲ್ಲಿ ಕೊಟ್ಟು, “ಇದರಲ್ಲಿ ಅಮೂಲ್ಯವಾದದ್ದಿದೆ, ಕಾಳಜಿಯಿಂದ ಇಟ್ಟುಕೋ” ಎಂದು ಹೇಳಿದರು. ಕೈಚೀಲ ತುಂಬಾ ಭಾರವಾಗಿತ್ತು. ಗೋರಖನಾಥರು ಚೀಲ ತೆರೆದು ನೋಡಿದರೆ, ಅದರಲ್ಲಿ ಎರಡು ಚಿನ್ನದ ಗಟ್ಟಿಗಳಿದ್ದವು. “ಏನಾಗಿದೆ ನಮ್ಮ ಗುರುಗಳಿಗೆ? ಮೊದಲು ವೇಶ್ಯೆಯರು, ಈಗ ನೋಡಿದರೆ ಬಂಗಾರ ಸಂಗ್ರಹಿಸುತ್ತಿದ್ದಾರೆ. ಮನಸ್ಸು ಮಾಡಿದರೆ, ಬಂಡೆಗಲ್ಲಿನ ಮೇಲೆ ಮೂತ್ರ ಮಾಡಿ, ಇಡೀ ಬಂಡೆಗಲ್ಲನ್ನೇ ಚಿನ್ನವನ್ನಾಗಿ ಪರಿವರ್ತಿಸುವ ಶಕ್ತಿ ಅವರಲ್ಲಿದೆ. ಆದರೆ ಇವರು ಎರಡು ಚಿನ್ನದ ತುಂಡುಗಳಿಗೆ ಅಂಟಿಕೊಂಡಿದ್ದಾರೆ. ಗೋರಖನಾಥರು ಚಿನ್ನದ ತುಂಡುಗಳನ್ನು ಕಾಡಿನಲ್ಲಿ ಎಸೆದು, ತಿರುಗಿ ತಮ್ಮ ಗುರುಗಳ ಹತ್ತಿರ ಬಂದರು.

ತಮ್ಮ ಗುರುಗಳು ದಾರಿ ತಪ್ಪುತ್ತಿದ್ದಾರಲ್ಲ ಎಂದು ಗೋರಖನಾಥರಿಗೆ ತುಂಬಾ ಚಿಂತೆ ಆಯಿತು. ಜೊತೆಗೆ, ಮೂರು ಸಾವಿರ ಕಿಲೋಮೀಟರ್ ನಡೆದು ತಮ್ಮ ಗುರುಗಳು ದಾರಿ ತಪ್ಪುವುದರಿಂದ ಉಳಿಸಿದೆನಲ್ಲ ಎನ್ನುವ ಗರ್ವವೂ ಬಂದಿತು. ಈ ಗರ್ವದ ಭಾವನೆ ಅವರಲ್ಲಿ ಬಂದ ತಕ್ಷಣ, ಮತ್ಸ್ಯೆಂದ್ರನಾಥರು ಅವರ ತಲೆಯ ಮೇಲೆ ಕೈ ಇಟ್ಟರು. ತಕ್ಷಣವೇ ತಾವು ಎಲ್ಲೂ ಹೋಗಿಲ್ಲ, ಅಲ್ಲಿಯೇ ಇದ್ದೇನೆ ಎನ್ನುವ ಅರಿವು ಅವರಿಗೆ ಉಂಟಾಯಿತು. ಅವರು ಆಸ್ಸಾಂಗೆ ನಡೆದು ಹೋಗಿರಲೂ ಇಲ್ಲ, ವೇಶ್ಯೆಯರನ್ನೂ, ಚಿನ್ನವನ್ನೂ ನೋಡಿರಲೂ ಇಲ್ಲ - ಏನೂ ನಡೆದಿರಲಿಲ್ಲ. ಇವೆಲ್ಲವೂ ಅವರ ತಲೆಯಲ್ಲಿ ನಡೆದಿತ್ತು. ಆದರೆ ಇವೆಲ್ಲವೂ ಅವರಿಗೆ ಸತ್ಯವಾಗಿದ್ದವು - ಅವರು ನಿಜವಾಗಿ ನಡೆದು ಅಲ್ಲಿ ಹೋಗಿ ಅವೆಲ್ಲವನ್ನೂ ನೋಡಿದ್ದರು. ಆದರೆ ಇದೆಲ್ಲ ಆದದ್ದು ಅವರ ಗುರುಗಳ ಅತೀಂದ್ರಿಯ ಶಕ್ತಿಯಿಂದ.

ವಾಸ್ತವವಾಗಿ, ಮತ್ಸ್ಯೆಂದ್ರನಾಥರು ಅವರ ಸುತ್ತಲೂ ಎಲ್ಲವನ್ನೂ ಸೃಷ್ಟಿಸಿದ್ದರು. ಗೋರಖನಾಥರು ಸಂಪೂರ್ಣವಾಗಿ ಹತಾಶರಾಗಿದ್ದರು - “ನಾನು ಏನೆಲ್ಲಾ ಮಾಡಿದೆ. ನನ್ನ ಗುರುಗಳನ್ನು ವೇಶ್ಯೆಯರ ಜೊತೆ ಕಲ್ಪಿಸಿಕೊಂಡೆ, ನನ್ನ ಗುರುಗಳು ಬಂಗಾರಕ್ಕಾಗಿ ಆಸೆ ಪಡುತ್ತಿದ್ದಾರೆ ಎಂದು ಭಾವಿಸಿದೆ ಎಂದು ತುಂಬಾ ಸಂಕಟ ಪಟ್ಟರು. ಆಗ ಮತ್ಸ್ಯೆಂದ್ರನಾಥರು ಹೇಳಿದರು, “ಚಿಂತೆ ಮಾಡಬೇಡ. ನೀನು ನನ್ನನ್ನು ಉಳಿಸಲು ಮೂರು ಸಾವಿರ ಕಿಲೋಮೀಟರ್ ನಡೆಯಲು ಸಿದ್ಧರಿದ್ದೀಯ ಅನ್ನುವುದು ಅದ್ಭುತವಾದ ಸಂಗತಿ. ಅದು ನಿನ್ನಲ್ಲಿ ಸದಾ ಜಾಗೃತವಾಗಿರಲಿ”

ಘಟನೆ #3 - ಅತ್ಯಂತ ಸ್ಪಷ್ಟವಾಗುವುದು

ಒಮ್ಮೆ ಗೋರಖನಾಥರು ಮತ್ಸ್ಯೇಂದ್ರನಾಥರ ಜೊತೆ ನಡೆದುಕೊಂಡು ಹೋಗುತ್ತಿದ್ದರು, ಅವರು ಒಂದು ಸಣ್ಣ ಹೊಳೆಯನ್ನು ದಾಟಿದರು. ಮತ್ಸ್ಯೇಂದ್ರನಾಥರು ಮರದ ಕೆಳಗೆ ಕುಳಿತು “ನನಗೆ ಸ್ವಲ್ಪ ನೀರು ಕೊಡು” ಎಂದರು. ಗೋರಖನಾಥರು ನೀರು ತರಲು ಧಾವಿಸಿದರು. ತಮ್ಮ ಗುರುಗಳು ನೀರು ಕೇಳಿದರೆ, ಗೋರಖನಾಥರಿಗೆ ಅದನ್ನು ತಕ್ಷಣ ಗುರುಗಳಿಗೆ ಕೊಡುವ ತವಕ. ತೊರೆಯಲ್ಲಿ ಕೆಲವು ಬಂಡಿಗಳು ಹಾದು ಹೋಗಿದ್ದ ಕಾರಣ, ನೀರು ಕೆಸರಾಗಿತ್ತು. ಹೀಗಾಗಿ ಅವರು ಓಡುತ್ತಾ ಗುರುಗಳ ಹತ್ತಿರ ಬಂದು, “ಆ ಜಾಗದಲ್ಲಿ ನೀರು ಕೆಸರಾಗಿದೆ. ಹತ್ತು ನಿಮಿಷದ ದೂರದಲ್ಲಿಯೇ ಒಂದು ನದಿ ಇದೆ. ನಾನು ಅಲ್ಲಿ ಹೋಗಿ ಬೇಗನೆ ನೀರು ತರುತ್ತೇನೆ” ಎಂದರು. ಮತ್ಸೇಂದ್ರನಾಥರು, “ಬೇಡ, ಈ ತೊರೆಯಿಂದಲೇ, ಈ ಸ್ಥಳದಿಂದಲೇ ನೀರು ತೆಗೆದುಕೊಂಡು ಬಾ” ಎಂದು ಹೇಳಿದರು. “ಆದರೆ ಗುರುಗಳೇ ಅದು ಕೆಸರಾಗಿದೆ.” ಆದರೆ ಗುರುಗಳು, “ನನಗೆ ಅದೇ ಹೊಳೆಯಿಂದ, ಅದೇ ಸ್ಥಳದಿಂದ, ನೀರು ಬೇಕು, ನನಗೆ ತುಂಬಾ ನೀರಡಿಕೆಯಾಗಿದೆ” ಎಂದರು. ಹೀಗಾಗಿ, ಏನು ಮಾಡಲು ತೋಚದೆ, ಗೋರಖನಾಥರು ಮತ್ತೆ ತೊರೆಗೆ ಓಡಿದರು, ನೀರು ಸ್ವಲ್ಪ ತಿಳಿಯಾದದ್ದನ್ನು ಕಂಡರು. ಸ್ವಲ್ಪ ಹೊತ್ತು ಕಾದರು. ಇನ್ನೂ ಐದು ನಿಮಿಷ ಕಳೆದವು. ನೀರು ತಿಳಿಯಾಗಿ ಸ್ವಚ್ಛವಾಯಿತು. ಅವರು ನೀರು ತಂದರು, ಆನಂದದಿಂದ, ಭಾವಪರವಶರಾಗಿ ತಮ್ಮ ಗುರುಗಳಿಗೆ ನೀರು ಕೊಟ್ಟರು. ಮತ್ಸೇಂದ್ರನಾಥರು ನೀರನ್ನು ಬದಿಯಲ್ಲಿಟ್ಟರು, ಕುಡಿಯಲಿಲ್ಲ. ಅವರಿಗೆ ಬಾಯಾರಿಕೆ ಆಗಿರಲಿಲ್ಲ.

ಅವರು ನೀರು ತಂದರು, ಆನಂದದಿಂದ, ಭಾವಪರವಶಶರಾಗಿ ತಮ್ಮ ಗುರುಗಳಿಗೆ ನೀರು ಕೊಟ್ಟರು. ಮತ್ಸೇಂದ್ರನಾಥರು ನೀರನ್ನು ಬದಿಯಲ್ಲಿಟ್ಟರು, ಕುಡಿಯಲಿಲ್ಲ. ಅವರಿಗೆ ಬಾಯಾರಿಕೆ ಆಗಿರಲಿಲ್ಲ.

ಗೋರಖನಾಥರು ಯಾವ ತರಹದ ಸಾಧಕರೆಂದರೆ, ನೀವು ಅವರಿಗೆ ಹತ್ತು ಬಾರಿ ಮಂತ್ರವನ್ನು ಜಪಿಸಲು ಹೇಳಿದರೆ, ಅವನು ಅದನ್ನು ಹತ್ತು ಸಾವಿರ ಬಾರಿ ಜಪ ಮಾಡುತ್ತಿದ್ದರು. ಅವರು ಯಾವಾಗಲೂ ಏನೂ ಮಾಡಲು ಸಿದ್ಧರಿರುತ್ತಿದ್ದರು. ನೀವು ಅವರಿಗೆ ಏನೇ ಹೇಳಿದರೂ ಅವರು ಅದನ್ನು ಬಹಳ ಉತ್ಸಾಹದಿಂದ ಮಾಡುತ್ತಿದ್ದರು, ಅದು ಉತ್ತಮ ಗುಣ, ಆದರೆ ಈಗ ಅವರು ಮತ್ತೊಂದು ಮಟ್ಟಕ್ಕೆ ಏರುವ ಸಮಯ ಬಂದಿತ್ತು. ಹೀಗಾಗಿ, ಮತ್ಸ್ಯೇಂದ್ರನಾಥರು ಅವರಿಗೆ ಹೇಳಲು ಪ್ರಯತ್ನಿಸುತ್ತಿದ್ದರು "ನೀನು ಕ್ರಿಯಾಶೀಲತೆಯಲ್ಲಿ ಮತ್ತು ಉತ್ಕಟ ಚಟುವಟಿಕೆಗಳನ್ನು ಮಾಡುವದರಲ್ಲಿ ಉತ್ತಮ ಸಾಧನೆ ಮಾಡಿದ್ದೀಯ. ಆದರೆ ಈಗ ಪ್ರತೀಕ್ಷೆ ಮಾಡಬೇಕಾದ ಸಮಯ ಬಂದಿದೆ, ಇದರಿಂದ ನಿಮ್ಮ ಮನಸ್ಸು ಅತ್ಯಂತ ಸ್ಪಷ್ಟವಾಗುತ್ತದೆ."

Editor's Note: ಜ್ಞಾನೋದಯ ಹೊಂದಿದ ಯೋಗಿಯ ಕಥೆಗಳಿಗಾಗಿ, ಸದ್ಗುರು ಎಕ್ಸ್ಕ್ಲೂಸಿವ್ ನಲ್ಲಿ “Realized Beings” ಸರಣಿಯನ್ನು ನೋಡಿ.