ಮನುಷ್ಯರ ಭವಿಷ್ಯವನ್ನು ನುಡಿಯುವ ಭೃಗು ಸಂಹಿತೆಯ ಹಿಂದಿರುವ ವಿಜ್ಞಾನದ ಕುರಿತಾದ ವಿವರಣೆಯನ್ನು ಸದ್ಗುರುಗಳು ಇಲ್ಲಿ ನೀಡುತ್ತಾರೆ.

ಸದ್ಗುರು : ಶಿವನ ಏಳು ಶಿಷ್ಯಂದಿರಾದ ಸಪ್ತ ಋಷಿಗಳಲ್ಲಿ ಭೃಗು ಮಹರ್ಷಿಗಳು ಸಹ ಒಬ್ಬರು. ತಮ್ಮ ಭಕ್ತಿ ಮತ್ತು ಶ್ರದ್ಧೆಯನ್ನು ಸಮರ್ಪಿಸುವ ಸಲುವಾಗಿ ಶಿವನ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕುವುದು ಅವರ ದೈನಂದಿನ ರೂಢಿಯಾಗಿತ್ತು. ಭೃಗು ಒಬ್ಬ ಮಹಾಭಕ್ತರಾಗಿದ್ದರು ಮತ್ತು ಅವರು ಶಿವನ ಬಗ್ಗೆ ಸ್ವಲ್ಪ ಹೆಚ್ಚು ಎನಿಸುವಷ್ಟು ಸ್ವಾಮ್ಯಭಾವನೆಯನ್ನು ಹೊಂದಿದ್ದರು. ಒಂದು ದಿನ ಅವರು “ನಾನು ಪಾರ್ವತಿಯ ಸುತ್ತ ಏಕೆ ಸುತ್ತಬೇಕು? ಶಿವನ ಹೆಂಡತಿಯ ಬಳಿ ನನಗೇನೂ ಕೆಲಸವಿಲ್ಲ. ನಾನು ಕೇವಲ ಶಿವನ ಸುತ್ತ ಮಾತ್ರ ಸುತ್ತುತ್ತೇನೆ.” ಎಂದು ಯೋಚಿಸತೊಡಗಿದರು. ಹಾಗಾಗಿ ಅವರು ಪಾರ್ವತಿಗೆ ದೂರಸರಿಯಲು ಹೇಳಿದರು. ಪಾರ್ವತಿಗೆ ಸಿಟ್ಟು ಬಂದು ನಿರಾಕರಿಸಿದಳು. ಹಾಗಾಗಿ, ಭೃಗು ಒಂದು ಸಣ್ಣ ಹಕ್ಕಿಯ ರೂಪತಾಳಿ ಪಾರ್ವತಿಯನ್ನು ಹೊರತುಪಡಿಸಿ, ಶಿವನ ಸುತ್ತ ಮಾತ್ರ ಪ್ರದಕ್ಷಿಣೆ ಮಾಡತೊಡಗಿದರು. ಶಿವ ಈ ತಮಾಷೆಯನ್ನು ನೋಡುತ್ತಿದ್ದರೆ, ಪಾರ್ವತಿಗೆ ಭೃಗುವಿನ ನಡವಳಿಕೆಯಿಂದಾಗಿ ಕೋಪ ಏರುತ್ತಿತ್ತು.

The Bhrigu Samhita – Predicting Humanity’s Future

ಭೃಗು ಏನು ಮಾಡುತ್ತಾನೋ ನೋಡೋಣ ಎಂದುಕೊಂಡ ಶಿವ ಪಾರ್ವತಿಯನ್ನು ತನ್ನ ಎಡ ತೊಡೆಯ ಮೇಲೆ ಇಬ್ಬರ ನಡುವೆ ಸ್ಥಳಾವಕಾಶವಿಲ್ಲದಂತೆ ಕೂರಿಸಿಕೊಂಡನು. ಆಗ ಭೃಗು ಒಂದು ದುಂಬಿಯ ರೂಪ ತಾಳಿ ಶಿವನ ತಲೆಯ ಸುತ್ತಲೂ ಪ್ರದಕ್ಷಿಣೆ ಮಾಡಲಾರಂಭಿಸಿದರು. ಪಾರ್ವತಿಗೆ ಇನ್ನಷ್ಟು ಕೋಪ ಬಂದು, “ಇದೇನು ಕುಚೇಷ್ಟೆ?” ಎಂದಳು. ಈ ನಾಟಕದಿಂದ ಇನ್ನಷ್ಟು ಮುದಗೊಂಡ ಶಿವ ಪಾರ್ವತಿಯನ್ನು ತನ್ನೊಳಕ್ಕೆ ಸೆಳೆದುಕೊಂಡು ತನ್ನರ್ಧ ಭಾಗವನ್ನಾಗಿಸಿಕೊಂಡ. ತನ್ನ ಒಂದು ಭಾಗವನ್ನು ತೊರೆದ ಶಿವ ಪಾರ್ವತಿಯನ್ನು ತನ್ನಲ್ಲಿ ಸೇರಿಸಿಕೊಂಡು ಅರ್ಧನಾರಿಯಾದ. ಆಗ ಭೃಗು ಆ ಶರೀರದಲ್ಲಿ ಒಂದು ರಂಧ್ರವನ್ನು ಕೊರೆದು ಅದರ ಮೂಲಕ ಶಿವನಿಗೆ ಪ್ರದಕ್ಷಿಣೆ ಹಾಕಲು ಪ್ರಾರಂಭಿಸುತ್ತಾರೆ. ಕೋಪಾವಿಷ್ಟಳಾದ ಪಾರ್ವತಿ ಭೃಗುವಿಗೆ “ನಿನ್ನ ಶರೀರ ಕೃಶವಾಗಿಹೋಗಲಿ! ಶಿವನ ಸುತ್ತ ಸುತ್ತುವುದಿರಲಿ, ನೀನು ಒಂದು ಹೆಜ್ಜೆಯನ್ನೂ ಇಡುವಂತಾಗಬಾರದು” ಎಂದು ಶಪಿಸಿಬಿಟ್ಟಳು.

ಭೃಗು ತನ್ನ ಶರೀರದಲ್ಲಿನ ಎಲ್ಲಾ ಮಾಂಸಖಂಡಗಳನ್ನು ಕಳೆದುಕೊಂಡು ಬರೀ ಮೂಳೆ ಮತ್ತು ಚರ್ಮದ ಮುದ್ದೆಯಂತಾದರು. ಅವರಿಗೆ ನಿಂತುಕೊಳ್ಳಲೂ ಸಾಧ್ಯವಾಗಲಿಲ್ಲ. ಆಗ ಶಿವ ಪಾರ್ವತಿಯನ್ನು ಉದ್ದೇಶಿಸಿ “ಇದೇನು ಮಾಡಿಬಿಟ್ಟೆ? ಅವನೊಬ್ಬ ಭಕ್ತ. ಭಕ್ತರು ಹುಚ್ಚರಿದ್ದಂತೆ. ಅವನು ನಿನ್ನನ್ನು ಅಗೌರವಿಸಲು ಹಾಗೆ ಮಾಡಿದ್ದಲ್ಲ. “ನಾನೂ ಸಹ ಶಿವನೇ” ಎಂದು ನೀನು ಹೇಳಿದಿದ್ದರೆ, ಅವನು ನಿನ್ನ ಸುತ್ತಲೂ ಸುತ್ತುತ್ತಿದ್ದ. ನೀನೇಕೆ ಅವನಿಗೆ ಹೀಗೆ ಮಾಡಬೇಕಿತ್ತು?” ಎಂದನು.

ಆದರೆ ಅದಾಗಲೇ ತಡವಾಗಿತ್ತು ಮತ್ತು ಆಗ ಏನೂ ಮಾಡಲು ಸಾಧ್ಯವಿರಲಿಲ್ಲ, ಹಾಗಾಗಿ ಶಿವ ಭೃಗುವಿಗೆ ನಿಂತುಕೊಳ್ಳಲು ಮೂರನೇ ಕಾಲೊಂದನ್ನು ನೀಡಿದ. ಕೆಲವು ಶಿವನ ದೇವಸ್ಥಾನಗಳಲ್ಲಿ, ಮೂರು ಕಾಲುಗಳುಳ್ಳ ಒಬ್ಬ ಮನುಷ್ಯನ ಆಕೃತಿಯನ್ನು ನೀವು ನೋಡಿರಬಹುದು. ಆ ಮೂರನೇ ಕಾಲು ಕೇವಲ ನಿಂತುಕೊಳ್ಳಲು ಮಾತ್ರವಲ್ಲದೇ, ಮೂರು ಲೋಕಗಳನ್ನು ತಿಳಿಯುವ ಸಾಧನವಾಗಿದ್ದಿತು. ಅದೊಂದು ಸಾಂಕೇತಿಕ ಕಾಲು.

ಮನುಷ್ಯಪ್ರಜ್ಞೆಯ ಚಿತ್ರಣ

ಈ ಗ್ರಹಣಸಾಮರ್ಥ್ಯದಿಂದಾಗಿ ಭೃಗು ಮಹರ್ಷಿಗಳು ಭೃಗು ಸಂಹಿತೆಯನ್ನು ಸೃಷ್ಟಿಸಿದರು – ಸೌರವ್ಯೂಹದ ಅಂತ್ಯದವರೆಗೆ ಮನುಷ್ಯರು ಹೇಗೆ ಜೀವಿಸುತ್ತಾರೆ ಎಂಬುದರ ಚಿತ್ರಣ ಅದಾಗಿತ್ತು. ಅವರು ಅದರಲ್ಲಿ ಒಬ್ಬೊಬ್ಬ ವ್ಯಕ್ತಿಯ ಬಗ್ಗೆ ಹೇಳಿಲ್ಲ, ಬದಲಿಗೆ ಅವರು ಇಡೀ ಮಾನವತೆಯ ಬಗ್ಗೆ ಹೇಳುತ್ತಾರೆ – ಅದು ಹೇಗೆ ವಿಕಾಸಗೊಳ್ಳುತ್ತದೆ, ಏನು ಮಾಡುತ್ತದೆ, ಯಾವ ಯಾವ ರೀತಿಯ ಮನುಷ್ಯರು ಹುಟ್ಟುತ್ತಾರೆ, ಜೀವನದ ಹಲವಾರು ಪ್ರಕ್ರಿಯೆಗಳ ಕ್ರಮಯೋಜನೆ ಮತ್ತು ಸಂಯೋಜನೆಗಳಿಂದ, ಜನರಿಗೆ ಯಾವ ಯಾವ ಪರಿಸ್ಥಿತಿಗಳು ಬಂದೊದಗುತ್ತವೆ ಎಂಬುದನ್ನು ಹೇಳುತ್ತಾರೆ.

ಇದಕ್ಕೆ ಒಂದು ಹೋಲಿಕೆ ನೀಡಿ ವಿವರಿಸುವುದಾದರೆ, ನೀವು ಗಾಳಿಯ ಚಲನೆಯ ನಕ್ಷೆಯೊಂದನ್ನು ತಯಾರಿಸಿದರೆ, ಹೆಚ್ಚಿನ ಮತ್ತು ಕಡಿಮೆ ಒತ್ತಡದ ಪ್ರದೇಶಗಳ ಸ್ಥಳವನ್ನಾಧರಿಸಿ ಗಾಳಿ ಹೇಗೆ ಚಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದೇ ರೀತಿಯಲ್ಲಿ, ಭೃಗು ಮನುಷ್ಯ ಪ್ರಜ್ಞೆಯ ನಕ್ಷೆಯನ್ನು ತಯಾರಿಸಿದರು – ಒಬ್ಬ ಮನುಷ್ಯ ಯಾವ ರೀತಿಯ ಗರ್ಭದೊಳಗೆ ಹೋಗುತ್ತಾನೆ, ಮುಂದೆ ಏನಾಗುತ್ತದೆ ಇತ್ಯಾದಿ. ಇದನ್ನು ವಿಷದವಾಗಿ ವಿವರಿಸಿದ ಅವರು ಈ ನಕ್ಷೆಗಳನ್ನು ಓದಲು ಬೇಕಾದ ತರಬೇತಿಯನ್ನೂ ಜನರಿಗೆ ನೀಡಿದರು.

ನಕ್ಷೆಯನ್ನು ಓದುವುದು

ಒಂದು ವಿವರವಾದ ನಕ್ಷೆಯನ್ನು ಓದಲು ತರಬೇತಿ ಬೇಕು. ನೀವು ವೈಮಾನಿಕ ನಕ್ಷೆಗಳನ್ನು ನೋಡಿದ್ದರೆ, ಅದು ಬಹಳ ಸಂಕೀರ್ಣತೆಯಿಂದ ಕೂಡಿರುತ್ತದೆ – ಭೂಮಿ ಗುಂಡಾಗಿರುತ್ತದೆ, ಅಲ್ಲದೆ ತಿರುಗುತ್ತಿರುತ್ತದೆ, ಸಮಯದ ವಲಯಗಳು ಬದಲಾಗುತ್ತಿರುತ್ತವೆ – ಇವೆಲ್ಲವೂ ನಕ್ಷೆಯಲ್ಲಿ ಉಲ್ಲೇಖಿತವಾಗಿರುತ್ತವೆ. ಅದನ್ನು ಹೇಗೆ ಓದಬೇಕೆಂದು ತಿಳಿದವರು ಎರಡು ನಿಮಿಷಗಳಲ್ಲಿ ನಿಮಗೆ ಬೇಕಾದದ್ದನ್ನು ಹೇಳಬಲ್ಲರು. ನಿಮಗೆ ಸಾಕಷ್ಟು ತರಬೇತಿ ಇಲ್ಲದೇ ಹೋದರೆ, ನೀವು ಹಲವಾರು ದಿನಗಳ ಕಾಲ ಪ್ರಯತ್ನಿಸಿದರೂ ನಿಮಗೇನೂ ತಿಳಿಯದೇ ಹೋಗಬಹುದು.

ಭೃಗು ಮನುಷ್ಯ ಪ್ರಜ್ಞೆಯ ನಕ್ಷೆಯನ್ನು ತಯಾರಿಸಿದರು – ಒಬ್ಬ ಮನುಷ್ಯ ಯಾವ ರೀತಿಯ ಗರ್ಭದೊಳಗೆ ಹೋಗುತ್ತಾನೆ, ಮುಂದೆ ಏನಾಗುತ್ತದೆ ಇತ್ಯಾದಿ.

ಹಾಗಾಗಿಯೇ, ಭೃಗು ಮಹರ್ಷಿಗಳು ಇದನ್ನು ಓದಲು ಒಂದು ನಿರ್ದಿಷ್ಟ ಆಯಾಮದ ಅಂತರ್ದೃಷ್ಟಿಯನ್ನು ಹೊಂದಿದ ಜನರನ್ನು ತರಬೇತುಗೊಳಿಸಿದರು, ಏಕೆಂದರೆ ಇದು ಪೂರ್ತಿಯಾಗಿ ತಾರ್ಕಿಕವಾದ ವಿಷಯವಲ್ಲ. ನೀವು ಆ ಜನರ ಮುಂದೆ ಕುಳಿತರೆ, ಅವರು ನಿಮ್ಮ ಹಿನ್ನೆಲೆ ಅಥವಾ ನಿಮ್ಮ ಭವಿಷ್ಯವನ್ನು ನೋಡುತ್ತಿರುವುದಿಲ್ಲ, ಅವರು ಕೇವಲ ಒಂದು ನಕ್ಷೆಯನ್ನು ಓದುತ್ತಿರುತ್ತಾರೆ – ಒಂದು ಅಂತರ್ದೃಷ್ಟಿಯ ನಕ್ಷೆ – ಮತ್ತು ಸನ್ನಿವೇಶಗಳು ಹೇಗೆ ತೆರೆದುಕೊಳ್ಳುತ್ತವೆ ಎನ್ನುವುದನ್ನು ಹೇಳುತ್ತಾರೆ. ಆ ವಿವರಣೆ ಯಾವಾಗಲೂ ಖಚಿತವಾಗಿರುವುದಿಲ್ಲ ಏಕೆಂದರೆ ಅದು ವಿವರಿಸುವವನ ಪರಿಣತಿಯನ್ನು ಅವಲಂಬಿಸಿರುತ್ತದೆ – ಎಲ್ಲರೂ ಒಂದೇ ರೀತಿಯಾಗಿ ವಿವರಣೆಯನ್ನು ನೀಡಲು ಸಾಧ್ಯವಿಲ್ಲ. ಆದರೆ ಮೂಲಭೂತವಾದ ವಿವರಣೆ ಸರಿಯಾಗಿರುತ್ತದೆ. ಉದಾಹರಣೆಗೆ, ಹವಾಮಾನ ತಜ್ಞರು ಗಾಳಿಯ ಒತ್ತಡ, ಆರ್ದ್ರತೆ ಮತ್ತಿತರ ಅಂಶಗಳನ್ನು ಆಧರಿಸಿ ಮಳೆ ಬರಬಹುದು ಎಂದು ಹೇಳುತ್ತಾರೆ, ಆದರೆ ಅದು ನೂರಕ್ಕೆ ನೂರರಷ್ಟು ನಿಜವಾಗುವುದಿಲ್ಲ. ಅವರ ಮುನ್ಸೂಚನೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಇಲ್ಲಿ ಮಳೆಯಾಗುವ ಬದಲು, ಅಲ್ಲೆಲ್ಲೋ ಮಳೆಯಾಗಬಹುದು, ಏಕೆಂದರೆ ಪ್ರಕೃತಿಯು ಸ್ವಲ್ಪ ಮಟ್ಟಿಗೆ ಚಲಿಸುತ್ತಿರುತ್ತದೆ, ಆದರೆ ವಾತಾವರಣದಲ್ಲಿ ನಿರ್ದಿಷ್ಟವಾದ ಬದಲಾವಣೆಗಳಾದಾಗ ಎಲ್ಲೋ ಒಂದು ಕಡೆ ಮಳೆಯಾಗಲೇಬೇಕು. ಇದೂ ಹಾಗೆಯೇ.

ಈ ವ್ಯಕ್ತಿಗಳು ಒಂದು ನಿರ್ದಿಷ್ಟ ಸ್ಥಿತಿಯಲ್ಲಿಲ್ಲದಿದ್ದರೆ ಇದನ್ನು ಮಾಡಲಾರರು. ಸಾಮಾನ್ಯವಾಗಿ, ಅದು ಕೆಲವು ವಿಶಿಷ್ಟ ದೇವಸ್ಥಾನಗಳ ಸುತ್ತ ನಡೆಯಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಅವರು ವಾಣಿಜ್ಯ ಕಾರಣಗಳಿಗಾಗಿ ಎಲ್ಲೆಡೆ ಸಂಚರಿಸುತ್ತಿದ್ದಾರೆ, ಮತ್ತು ಅದು ಅಷ್ಟೇನೂ ಪರಿಣಾಮಕಾರಿಯಾಗಿರುವುದಿಲ್ಲ, ಆದರೂ ಸಹ ಈ ವಿಷಯದಲ್ಲಿ ಕರಾರುವಾಕ್ಕಾಗಿರುವವರು ಇನ್ನೂ ಇದ್ದಾರೆ. 

ಹಾಗಾದರೆ ಎಲ್ಲವೂ ಪೂರ್ವನಿರ್ಧಾರಿತವೇ?

ಹಾಗಾದರೆ ವಿಧಿಯು ನಿಗದಿತವೇ? ವಿಧಿ ಎಂದರೆ ಯಾರಿಂದಲೋ ನಿರ್ಧಾರಿತವಾದದ್ದಲ್ಲ. ಅದು ನಿಮ್ಮದೇ ಕರ್ಮ. ನಿಮ್ಮ “ಸಾಫ್ಟ್ ವೇರ್” ಒಂದು ನಿರ್ದಿಷ್ಟ ರೀತಿಯಲ್ಲಿದ್ದರೆ, ಅದು ಸಹಜವಾಗಿಯೇ ಆ ರೀತಿಯಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, “ನೀವು ಇಷ್ಟು ವರ್ಷ ಬದುಕಿರುತ್ತೀರಿ” ಎಂದು ಯಾರೋ ಭವಿಷ್ಯ ಹೇಳಿದರೆಂದಿಟ್ಟುಕೊಳ್ಳೋಣ. ಆದರೆ ಮರುಕ್ಷಣವೇ ನೀವು ಒಂದು ಬೆಟ್ಟದಿಂದ ಹಾರಿಬೀಳಬಹುದು! ಶಾರೀರಿಕ ಮತ್ತು ಮಾನಸಿಕ ರಚನೆಗಳು ನೀವೇ ನಿರ್ಮಿಸಿಕೊಂಡಂತವುಗಳು, ಹಾಗಾಗಿ ನೀವು ಈ ಎರಡನ್ನು ಯಾವಾಗ ಬೇಕಾದರೂ ನಾಶಮಾಡಿಕೊಳ್ಳಬಹುದು. ಆದರೆ, ನೀವು ಜೀವನದ ಇತರ ಅಂಶಗಳನ್ನು ಮುಟ್ಟಲು ಸಾಧ್ಯವಿಲ್ಲ. ಅವೆಲ್ಲಾ ಏನಿದ್ದರೂ ನಿಮ್ಮ ಸಾಫ್ಟವೇರ್ ನ ಪ್ರಕಾರವಾಗಿ ನಡೆಯುತ್ತವೆ. ಭವಿಷ್ಯವನ್ನು ನುಡಿಯುವವರು ನಿಮ್ಮ ಸಾಫ್ಟವೇರ್ ಅನ್ನು ಓದುತ್ತಾರೆ.

ಯಾವುದೂ ಪೂರ್ವನಿರ್ಧಾರಿತವಲ್ಲ, ಸಾವೂ ಸಹ. ಎಲ್ಲವೂ ನಿಮ್ಮಿಂದಲೇ ಸೃಷ್ಟಿಸಲ್ಪಟ್ಟಿದೆ.

ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಒಂದು ರೀತಿಯ ಸಾಫ್ಟವೇರ್ ಅನ್ನು ಹಾಕಿರುತ್ತೀರಿ ಎಂದಿಟ್ಟುಕೊಳ್ಳೋಣ. ಒಂದು ವೇಳೆ ನೀವು ನಿಮ್ಮ ಕಂಪ್ಯೂಟರ್ ಅನ್ನು ಪೂರ್ತಿಯಾಗಿ ಧ್ವಂಸಗೊಳಿಸಿದರೂ ಸಹ, ಅದರ ಹಾರ್ಡ್ ಡ್ರೈವನ್ನು ಹೊಸದೊಂದು ಕಂಪ್ಯೂಟರಿಗೆ ಹಾಕಿದರೆ ಮೊದಲಿನ ಕಂಪ್ಯೂಟರಿನಲ್ಲಿದ್ದ ಮಾಹಿತಿಯೇ ಹೊಸದರಲ್ಲೂ ಬರುತ್ತದೆ. ಹಾಗಾಗಿ, ನೀವು ಇವತ್ತು ಬೆಟ್ಟದಿಂದ ಜಿಗಿದುಬಿಡಬಹುದು, ಆದರೆ ಸ್ವಲ್ಪ ಸಮಯದ ನಂತರ ನಿಮಗೆ ಅದೇ ಸಾಫ್ಟವೇರ್ ಇರುವ ಹೊಸದೊಂದು ಕಂಪ್ಯೂಟರ್ ಸಿಗುತ್ತದೆ. ಮೊದಲಿದ್ದದ್ದೇ ಆಗುತ್ತದೆ, ಹೊಸದೇನೂ ಆಗುವುದಿಲ್ಲ.

ಆದರೆ ನೀವು ಆಧ್ಯಾತ್ಮಿಕ ಹಾದಿಯಲ್ಲಿದ್ದರೆ, ಮತ್ತು ಆ ಭವಿಷ್ಯ ನುಡಿಯುವ ಜನ ನಿಜವಾಗಿಯೂ ತಿಳುವಳಿಕೆ ಇರುವವರಾಗಿದ್ದರೆ, ಅವರು ನಿಮ್ಮ ಭವಿಷ್ಯವನ್ನು ಹೇಳಲು ನಿರಾಕರಿಸುತ್ತಾರೆ. ಏಕೆಂದರೆ, “ನಾನು ಆಧ್ಯಾತ್ಮಿಕ ಮಾರ್ಗದಲ್ಲಿದ್ದೇನೆ” ಎಂದು ಹೇಳಿದಾಗ, ಅದರ ಅರ್ಥವೇನೆಂದರೆ, “ನನ್ನ ಅಸಂಬದ್ಧ ಕರ್ಮವೇನೇ ಇರಲಿ, ನಾನು ನನ್ನಿಚ್ಛೆಯಂತೆಯೇ ಹೋಗುತ್ತೇನೆ. ನಾನು ನನ್ನ ಮುಕ್ತಿಯ ಕಡೆ ಹೋಗುತ್ತಿದ್ದೇನೆ. ಸಮಾಜ ಏನೇ ಹೇಳಲಿ, ನನ್ನ ವಂಶವಾಹಿಗಳು ಏನೇ ಹೇಳಲಿ, ನನ್ನ ಕರ್ಮವೇನೇ ಇರಲಿ, ಗ್ರಹಗಳು ಏನೇ ಹೇಳಲಿ – ನಾನು ಮಾತ್ರ ನನ್ನ ಇಚ್ಛೆಯಂತೆಯೇ ಸಾಗುತ್ತೇನೆ” ಎಂದು. ಆಧ್ಯಾತ್ಮಿಕತೆ ಎಂದರೆ ಇದೇ – ನಿಮ್ಮ ವಿಧಿಯನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು.

ಯಾವುದೂ ಪೂರ್ವನಿರ್ಧಾರಿತವಲ್ಲ, ಸಾವೂ ಸಹ. ಎಲ್ಲವೂ ನಿಮ್ಮಿಂದಲೇ ಸೃಷ್ಟಿಸಲ್ಪಟ್ಟಿದೆ. ನಿಮ್ಮ ಸಮಸ್ಯೆ ಏನೆಂದರೆ ನೀವು ಅದನ್ನು ಬಹುತೇಕ ಅರಿವಿಲ್ಲದೇ ಸೃಷ್ಟಿಸುತ್ತಿರುವುದರಿಂದಾಗಿ, ಅದನ್ನು ಎಲ್ಲಿಂದಲೋ ನಿಮ್ಮ ಮೇಲೆ ಹೇರಲಾಗುತ್ತಿದೆ ಎಂದು ನೀವು ಭಾವಿಸಿದ್ದೀರಿ. ನೀವು ಏನನ್ನಾದರೂ ಪ್ರಜ್ಞಾರಹಿತವಾಗಿ ಸೃಷ್ಟಿಸಬಹುದಾದರೆ, ನೀವದನ್ನು ಪ್ರಜ್ಞಾಪೂರ್ವಕವಾಗಿಯೂ ಸೃಷ್ಟಿಸಬಹುದು. ಎಲ್ಲಾ ಆಧ್ಯಾತ್ಮಿಕ ಪ್ರಕ್ರಿಯೆಗಳ ಪ್ರಯಾಸವು ಅದೇ ಆಗಿದೆ – ಪ್ರಜ್ಞಾರಹಿತವಾದ ಪ್ರಮಾದಕರ ಜೀವನವನ್ನು ನಡೆಸುವುದರ ಬದಲಾಗಿ, ನೀವು ನಿಮ್ಮ ಜೀವನವನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿಕೊಳ್ಳಬಹುದು.

ಸಂಪಾದಕರ ಟಿಪ್ಪಣಿ: “Mystic’s Musings” - ಜೀವನ, ಮರಣ ಮತ್ತು ಮನುಷ್ಯನ ಕಾರ್ಯವ್ಯವಸ್ಥೆಯ ಕುರಿತು ಸದ್ಗುರುಗಳ ಇನ್ನಷ್ಟು ಜಾಣ್ನುಡಿಗಳನ್ನು ಒಳಗೊಂಡಿರುವ ಇಬುಕ್ ಅನ್ನು ಇಲ್ಲಿ ಖರೀದಿಸಿ free sample or purchase the ebook.