ನಿಮ್ಮನ್ನು ಬದುಕಿನ ಹೆಚ್ಚಿನ ಆಯಾಮ ಅಥವಾ ಹೆಚ್ಚಿನ ಅಂತರ್ದೃಷ್ಟಿಯತ್ತ ಕೊಂಡೊಯ್ಯುವ ಮಾರ್ಗವೇ ಯೋಗ. ಆಸನವೆಂದರೆ ಒಂದು ಭಂಗಿ. ನಿಮ್ಮನ್ನು ಹೆಚ್ಚಿನ ಸಾಧ್ಯತೆಗೆ ಕರೆದೊಯ್ಯುವಂತಹ ಒಂದು ಭಂಗಿಯನ್ನು ಯೋಗಾಸನವೆಂದು ಕರೆಯಲಾಗುತ್ತದೆ. ಯೋಗಾಸನಗಳಲ್ಲಿ ಎಂಬತ್ನಾಲ್ಕು ಮೂಲಭೂತ ಆಸನಗಳಿದ್ದು, ಅವು ನಿಮ್ಮ ಜಾಗೃತಾವಸ್ಥೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಿವೆ. ನಾವು ಎಂಬತ್ನಾಲ್ಕು ಆಸನಗಳು ಎಂದಾಗ, ಅವುಗಳನ್ನು ಕೇವಲ ಎಂಬತ್ನಾಲ್ಕು ಭಂಗಿಗಳೆಂದು ತಿಳಿಯಬೇಡಿ. ಇವು ಎಂಬತ್ನಾಲ್ಕು ಪದ್ಧತಿಗಳು, ಮುಕ್ತಿಯನ್ನು ಪಡೆಯಲು ಎಂಬತ್ನಾಲ್ಕು ದಾರಿಗಳಾಗಿವೆ. ಒಬ್ಬ ಯೋಗಿಯು ಕೇವಲ ಒಂದು ಆಸನವನ್ನು ಕರಗತ ಮಾಡಿಕೊಳ್ಳುತ್ತಾನೆ. ಇದನ್ನು ಆಸನ ಸಿದ್ಧಿ ಎಂದು ಕರೆಯುತ್ತಾರೆ. ಒಬ್ಬ ವ್ಯಕ್ತಿಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಸಂಪೂರ್ಣವಾದ ಅನಾಯಾಸದಿಂದ ಕುಳಿತುಕೊಳ್ಳಲು ಸಾಧ್ಯವಾದರೆ ಅದನ್ನು ಆಸನ ಸಿದ್ಧಿ ಎನ್ನಲಾಗುತ್ತದೆ. ಸದ್ಯದಲ್ಲಿ, ನೀವು ನಿಮ್ಮ ದೇಹವನ್ನು ಯಾವುದೇ ರೀತಿಯಲ್ಲಿ ಇರಿಸಿಕೊಂಡರೂ ಸಹ, ಅದು ಆರಾಮವಾಗಿರುವುದಿಲ್ಲ. ನೀವು ಕುಳಿತುಕೊಂಡರೆ ಅದು ಸರಿಹೋಗುವುದಿಲ್ಲ. ನೀವು ನಿಂತುಕೊಂಡರೂ ಅದು ಸರಿಹೋಗುವುದಿಲ್ಲ. ನೀವು ಮಲಗಿಕೊಂಡರೂ ಸಹ ಅದು ಆರಾಮವಾಗಿರುವುದಿಲ್ಲ. ಹಾಗಾದರೆ, ಇದರ ಜೊತೆ ಹೇಗೆ ಏಗುವುದು? ನೀವು ನಿಮ್ಮ ದೇಹವನ್ನು ಯೋಗ ಪ್ರಕ್ರಿಯೆಗೆ ನೀಡಿದರೆ, ಮೆಲ್ಲಗೆ ನಿಮ್ಮ ದೇಹವು ಆರಾಮ ಸ್ಥಿತಿಗೆ ಬರುವುದನ್ನು ನೀವು ನೋಡುತ್ತೀರಿ. ನೀವೊಂದು ರೀತಿಯಲ್ಲಿ ಕುಳಿತುಕೊಂಡರೆ, ನಿಮ್ಮ ದೇಹ ಸಂಪೂರ್ಣ ಆರಾಮದಲ್ಲಿರುತ್ತದೆ. ಅದು ಬೇರಿನ್ಯಾವ ರೀತಿಯಲ್ಲಿರಲೂ ಪ್ರಯತ್ನಿಸುವುದಿಲ್ಲ.

ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿರುವ ಹಠ ಯೋಗದ ರೀತಿಯು ನನ್ನನ್ನು ಆತಂಕಕ್ಕೀಡು ಮಾಡುತ್ತದೆ, ಏಕೆಂದರೆ ಎಲ್ಲಾ ಥರದ ಯೋಗವು ಅಲ್ಲಿ ನಡೆಯುತ್ತಿದೆ. ನೀವಿದನ್ನು ಅರ್ಥ ಮಾಡಿಕೊಳ್ಳಬೇಕು: ಯೋಗಾಸನಗಳು ವ್ಯಾಯಾಮಗಳಲ್ಲ. ಯೋಗಾಸನಗಳು ನಿಮ್ಮ ಚೈತನ್ಯವನ್ನು ಒಂದು ನಿರ್ದಿಷ್ಟ ದಿಕ್ಕಿನೆಡೆಗೆ ಕೊಂಡೊಯ್ಯುವ ಮತ್ತು ಅದನ್ನು ಸಕ್ರಿಯಗೊಳಿಸುವಂತಹ ಸೂಕ್ಷ್ಮ ಪ್ರಕ್ರಿಯೆಗಳಾಗಿವೆ. ನಾನಿದರ ಮೇಲೆ ಏಕಿಷ್ಟು ಒತ್ತನ್ನು ನೀಡುತ್ತಿದ್ದೇನೆಂದರೆ, ಸಾಮಾನ್ಯವಾಗಿ ವ್ಯಾಯಾಮದ ಬಗ್ಗೆ “ನಾನದನ್ನು ಎಷ್ಟು ಕಠಿಣವಾಗಿ ಮಾಡುತ್ತೇನೋ, ಅದು ಅಷ್ಟು ಒಳ್ಳೆಯದು.” ಎಂಬ ಮನೋಭಾವನೆ ಇದೆ. ಆಸನಗಳನ್ನು ಅಥವಾ ಯೋಗವನ್ನು ಕಠಿಣವಾಗಿ ಅಭ್ಯಾಸ ಮಾಡಬಾರದು. ಇದು ಬೇರಿನ್ಯಾರ ಜೊತೆಯೋ ನಡೆಸುವ ಸ್ಪರ್ಧೆಯಲ್ಲ. ಆ ನಿಮ್ಮ ಅಭಿಪ್ರಾಯವನ್ನು ಇಂದೇ ಸಂಪೂರ್ಣವಾಗಿ ಕಿತ್ತುಹಾಕಿಬಿಡಿ. ನೀವದನ್ನು ಪೂರ್ತಿ ಜಾಗೃತವಾಗಿ, ತುಂಬ ನಾಜೂಕಾಗಿ ಮತ್ತು ನಿಮಗೆ ಸಾಧ್ಯವಾದಷ್ಟು ಅರಿವನ್ನಿಟ್ಟುಕೊಂಡು ಮಾಡುವುದು ಬಹಳ ಮುಖ್ಯ.

ಸಂಪಾದಕರ ಟಿಪ್ಪಣಿ: ಈ ಲೇಖನವು ಈಶ ಹಠ ಯೋಗ ಸ್ಕೂಲ್-ನ ಇಪ್ಪತ್ತೊಂದು ವಾರಗಳ ಹಠ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಕ್ರಮದಲ್ಲಿ ಸದ್ಗುರುಗಳು ನೀಡಿದ ಪ್ರವಚನೆಯ ಆಯ್ದ ಭಾಗವಾಗಿದೆ. ಈ ಕಾರ್ಯಕ್ರಮವು ಯೋಗ ಪದ್ಧತಿಯ ಆಳವಾದ ತಿಳುವಳಿಕೆಯನ್ನು ಗಳಿಸಲು ಸಾಟಿಯಿಲ್ಲದ ಅವಕಾಶವನ್ನು ಹಾಗೂ ಹಠ ಯೋಗವನ್ನು ಹೇಳಿಕೊಡುವ ಕುಶಲತೆಯನ್ನು ನಿಮಗೆ ನೀಡುತ್ತದೆ. ಮುಂದಿನ ಇಪ್ಪತ್ತೊಂದು ವಾರಗಳ ಹಠ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಕ್ರಮವು ಜುಲೈ 16, 2019ರಿಂದ ಡಿಸೆಂಬರ್ 11, 2019ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ, www.ishahathayoga.com ವೆಬ್ಸೈಟ್-ಅನ್ನು ನೋಡಿ ಅಥವಾ info@ishahatayoga.com ಇಮೇಲ್ ವಿಳಾಸಕ್ಕೆ ಬರೆಯಿರಿ.