ಕೆಲವರ ಜೀವನ ತಂಗಾಳಿಯಂತೆ ಸರಾಗವಾಗಿ ಸಾಗುತ್ತದೆ ಮತ್ತೆ ಕೆಲವರದ್ದು ಒದ್ದಾಟ ತೊಳಲಾಟದಿಂದ ಕೂಡಿರುತ್ತದೆ. ಹೀಗೇಕೆ ಎಂದು ನೀವು ಯೋಚಿಸಿದ್ದೀರಾ? ಸದ್ಗುರುಗಳು ನಮಗೆ ಆಕಾಶಿಕ ಅಥವಾ ಆಕಾಶ ಅಂಶದ ಬುದ್ಧಿವಂತಿಕೆಯ ಕುರಿತು ಮತ್ತು ಈ ಬೃಹತ್ ಜ್ಞಾನವನ್ನು ನಮ್ಮ ಜೀವನದಲ್ಲಿ ಹೇಗೆ ಜಾಗೃತಗೊಳಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತಾರೆ.

ಸದ್ಗುರು: ಆಧುನಿಕ ವಿಜ್ಞಾನವು ಆಕಾಶದ ಬುದ್ಧಿವಂತಿಕೆಯನ್ನು ಗುರುತಿಸಲು ಪ್ರಾರಂಭಿಸಿದೆ. ಅಂದರೆ ಆಕಾಶದ ಖಾಲಿ ಜಾಗದಲ್ಲೂ ಒಂದು ಬುದ್ಧಿವಂತಿಕೆಯಿದೆ ಎಂದು. ಈ ಆಕಾಶಿಕ ಬುದ್ಧಿವಂತಿಕೆಯು ನಿಮಗೆ ಹೇಗೆ ಅನ್ವಯವಾಗುತ್ತದೆ? ಅದು ನಿಮಗೆ ಪೂರಕವಾಗಿರುತ್ತದೆಯೋ, ಮಾರಕವಾಗಿರುತ್ತದೆಯೋ ಎಂಬುದು ನಿಮ್ಮ ಜೀವನ ಸ್ವರೂಪವನ್ನು ನಿರ್ಧರಿಸುತ್ತದೆ. ನೀವು ಅದೃಷ್ಟವಂತರೋ ಅಥವಾ ಜೀವನದುದ್ದಕ್ಕೂ ತೊಳಲಾಟಗಳನ್ನು ಅನುಭವುವಿರೋ ಎಂಬುದು ಜಾಗೃತವಾಗಿಯೋ ಅಥವಾ ಸುಪ್ತವಾಗಿಯೋ ನಿಮ್ಮ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ. ಈ ಅಗಾಧವಾದ ಜ್ಞಾನದ ನಿರ್ವಹಣೆಗನುಸಾರವಾಗಿ ಆಗುತ್ತದೆ.

ಸೂರ್ಯೋದಯದ ನಂತರ, ಸೂರ್ಯನು ಮೂವತ್ತು ಡಿಗ್ರಿಯಷ್ಟು ಮೇಲೇರುವಷ್ಟರಲ್ಲಿ ಆಕಾಶದತ್ತ ಒಮ್ಮೆ ನೋಡಿ, ನಿಮ್ಮನ್ನು ಇಲ್ಲಿ ಇರಿಸಿರುವುದಕ್ಕೆ ಆಕಾಶಕ್ಕೆ ತಲೆಬಾಗಿ ನಮಸ್ಕರಿಸಿ.

ನಾವು ಆಕಾಶವನ್ನು ಪಂಚ ಭೂತಗಳಲ್ಲಿ ಐದನೇ ಅಂಶ ಎಂದರೆ ತಪ್ಪಾಗಬಹುದು. ಏಕೆಂದರೆ, ಅದುವೇ ಏಕೈಕ ಪ್ರಮುಖ ಅಂಶ. ಪಂಚಭೂತಗಳಲ್ಲಿನ ಇತರ ನಾಲ್ಕು ಅಂಶಗಳಾದ ಭೂಮಿ, ಜಲ, ಅಗ್ನಿ ಮತ್ತು ವಾಯು ಈ ಪ್ರಮುಖ ಅಂಶದ ಒಳಗಡೆಯೇ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ. ಅಂದರೆ ಈ ಪ್ರಮುಖ ಅಂಶದ ಮಡಿಲಲ್ಲೇ ಉಳಿದ ನಾಲ್ಕೂ ಅಂಶಗಳು ಕಾರ್ಯ ನಿರ್ವಹಿಸುತ್ತಿವೆ. ನಾವಿಲ್ಲಿ ಸದಾಕಾಲ ಸೌರವ್ಯೂಹದಲ್ಲಿ ಸುತ್ತುತ್ತಿರುವ ಭೂಮಿಯ ಮೇಲೆ ಹಾಯಾಗಿ ಕುಳಿತ್ತಿದ್ದೇವೆ. ಹೀಗೆ ಎಲ್ಲವೂ ಸ್ವಸ್ಥಾನದಲ್ಲಿ ಇರಲು ಸಾಧ್ಯವಾಗುವುದು ಈ ಆಕಾಶದಿಂದಲೇ. ಈ ಆಕಾಶವೇ ಇಡೀ ಭೂಗೋಳವನ್ನು, ಸೌರವ್ಯೂಹವನ್ನು, ತಾರಾಸಮೂಹವನ್ನು ಮತ್ತು ಈ ಇಡೀ ಬ್ರಹ್ಮಾಂಡವನ್ನು ಯಾವುದೇ ಸೂತ್ರ ಅಥವಾ ಹಗ್ಗದ ಸಹಾಯವಿಲ್ಲದೇ ತಮ್ಮ ತಮ್ಮ ಸ್ವಸ್ಥಾನದಲ್ಲೇ ಇರಿಸಿದೆ. ಇದೆಲ್ಲ ಸುಮ್ಮನೆ ಯಾವುದೇ ಆಧಾರವಿಲ್ಲದೇ ಸಾಧ್ಯವಾಗಿದೆ, ನೋಡಿ!

ಆಕಾಶವೆಂಬ ಈ ಅಂಶದ ಸಹಕಾರವನ್ನು ಪಡೆಯುವ ರೀತಿಯನ್ನು ನೀವು ಕರಗತ ಮಾಡಿಕೊಂಡರೆ, ನಿಮ್ಮದು ಅನುಗ್ರಹ ತುಂಬಿದ ಜೀವನವಾಗುತ್ತದೆ. ನೀವು ಮಾಡಬೇಕಾದ ಒಂದು ಸರಳ ಪ್ರಕ್ರಿಯೆ ಎಂದರೆ, ಸೂರ್ಯೋದಯದ ನಂತರ, ಸೂರ್ಯನು ಮೂವತ್ತು ಡಿಗ್ರಿಯಷ್ಟು ಮೇಲೇರುವಷ್ಟರಲ್ಲಿ ಆಕಾಶದತ್ತ ಒಮ್ಮೆ ನೋಡಿ, ನಿಮ್ಮನ್ನು ಇಲ್ಲಿ ಇರಿಸಿರುವುದಕ್ಕೆ ಆಕಾಶಕ್ಕೆ ತಲೆಬಾಗಿ ನಮಸ್ಕರಿಸಿರಿ. ಸೂರ್ಯನು ಮೂವತ್ತು ಡಿಗ್ರಿ ಕೋನವನ್ನು ದಾಟಿದ ನಂತರ, ಇನ್ನೊಮ್ಮೆ ದಿನದ ಯಾವುದಾದರೂ ಒಂದು ಸಮಯದಲ್ಲಿ ತಲೆ ಎತ್ತಿ ಮೇಲೆ ನೋಡಿ ಮತ್ತೊಮ್ಮೆ ತಲೆ ಬಾಗಿ ನಮಸ್ಕರಿಸಿರಿ. ಸೂರ್ಯಾಸ್ತದ ನಂತರ, ಮತ್ತೊಮ್ಮೆ ಮೇಲೆ ನೋಡಿ ತಲೆ ಬಾಗಿ ನಮಸ್ಕರಿಸಿರಿ. ಈ ನಿಮ್ಮ ನಮಸ್ಕಾರ ಮೇಲಿರುವ ಯಾವುದೋ ದೇವರಿಗಲ್ಲ, ಬದಲಾಗಿ ನಿಮ್ಮನ್ನು ಈ ಸ್ಥಾನದಲ್ಲಿರಿಸಿ ಕಾಪಾಡಿದ್ದಕ್ಕಾಗಿ, ಆ ಖಾಲಿ ಜಾಗಕ್ಕೆ ಅಂದರೆ, ಆಕಾಶಕ್ಕೆ. ಇಷ್ಟು ಮಾಡಿ ನಿಮ್ಮ ಜೀವನ ಹೇಗೆ ಬದಲಾಗುತ್ತದೆ ಎಂದು ನೋಡಿ.

ಆಕಾಶದ ಸಹಕಾರ ನಿಮ್ಮದಾದರೆ, ನಿಮ್ಮ ಜೀವನವು ಚಮತ್ಕಾರದ ರೀತಿ ಬದಲಾಗುತ್ತದೆ.

ನೀವು ಗಮನಿಸಿದ್ದೀರಾ? ತಂಡೂಲ್ಕರ್ ಕೂಡ ಮೇಲೆ ನೋಡುತ್ತಾರೆ. ಅವರೊಬ್ಬರೇ ಅಲ್ಲ, ಪ್ರಾಚೀನ ಕಾಲದಿಂದಲೂ ಪ್ರತಿಯೊಬ್ಬರೂ ಏನನ್ನಾದರೂ ಸಾಧಿಸಿದಾಗ, ಯಶಸ್ಸಿನ ಅತ್ಯುನ್ನತ ಕ್ಷಣಗಳಲ್ಲಿ, ತಾವಾಗಿಯೇ ಮೇಲೆ ನೋಡುತ್ತಾರೆ. ಪ್ರತಿಯೊಬ್ಬರಲ್ಲಿಯೂ ಅರಿವಿಲ್ಲದೇ ಅಗುವ ಜಾಗೃತಿ ಅದು. ಕೆಲವರು “ಮೇಲಿರುವವನ” ಕಡೆ ನೋಡುತ್ತಿರಬಹುದು. ಆದರೆ, ಸಾಮಾನ್ಯವಾಗಿ, ಯಾವುದೇ ಉನ್ನತ ಸಾಧನೆ ಮಾಡಿದಾಗಲೂ ನಿಮಗರಿವಿಲ್ಲದೇ ನೀವು ಧನ್ಯತೆಯಿಂದ ಮೇಲೆ ನೋಡುತ್ತೀರಿ. ಎಲ್ಲೋ ಒಂದು ಕಡೆ ಅದಕ್ಕಾದ ಮಾನ್ಯತೆ ಇದೆ, ಅದನ್ನು ಗುರುತಿಸುವ ಬುದ್ಧಿವಂತಿಕೆ ಇಲ್ಲಿ ಇದೆ.

ಪ್ರಜ್ಞಾಪೂರ್ವಕವಾಗಿ ದಿನಕ್ಕೆ ಮೂರು ಸಲ ಈ ಕ್ರಿಯೆಯನ್ನು ಮಾಡಿ. ನಿಮ್ಮ ಜೀವನವು ಚಮತ್ಕಾರದ ರೀತಿಯಲ್ಲಿ ಬದಲಾಗುತ್ತದೆ. ನಿಮಗೆ ಇದುವರೆಗೂ ಅಸಾಧ್ಯವೆಂದು ತಿಳಿದಿದ್ದ ಒಂದು ಅದ್ಭುತ ಬುದ್ಧಿವಂತಿಕೆ ನಿಮ್ಮದಾಗುತ್ತದೆ.

ಸಂಪಾದಕರ ಟಿಪ್ಪಣಿ: ಈ ಲೇಖನವು 17ನೇ ನವೆಂಬರ್, 2013ರ ನ್ಯೂ ಇಂಡಿಯನ್ ಎಕ್ಸ್ಪ್ರೆಸ್‍ನಲ್ಲಿ ಪ್ರಕಟವಾಗಿತ್ತು.