ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಮತ್ತು ಒಬ್ಬ ಲೌಕಿಕ ವ್ಯಕ್ತಿಯ ನಡುವೆ ಇರುವ ವ್ಯತ್ಯಾಸದತ್ತ ಸದ್ಗುರುಗಳು ಇಲ್ಲಿ ಗಮನಹರಿಸುತ್ತಾರೆ ಮತ್ತು ಆಧ್ಯಾತ್ಮವು ಹೇಗೆ ಬದುಕಿನೊಂದಿಗೆ ಬಿಡಿಸಲಾರದಂತಹ ಒಂದು ಪ್ರೇಮ ಸಂಬಂಧವಾಗಿದೆ ಎನ್ನುವುದನ್ನವರು ವಿವರಿಸುತ್ತಾರೆ.

ಸದ್ಗುರು: ಕೆಲ ಸಮಯದ ಹಿಂದೆ ನಾನು ಸಿಂಗಪೂರಿನ ಒಂದು ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಮತ್ತು ಆಡಳಿತ ತರಬೇತಿ ಕಾಲೇಜಿನ ಸಿಬ್ಬಂದಿ ವರ್ಗಕ್ಕೆ ಭಾಷಣ ನೀಡುತ್ತಿದ್ದೆ. ನಾನು ಆಗ ಒಂದರ ಮೇಲೊಂದು ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದರಿಂದ, ಅಲ್ಲಿ ಒಳಗೆ ಹೋಗುವ ಮುಂಚೆ “ನಾನು ಇಂದು ಇಲ್ಲಿ ಯಾವುದರ ಬಗ್ಗೆ ಮಾತನಾಡಬೇಕಿದೆ?” ಎಂದು ಕೇಳಿದೆ. ಅವರು “ನಾಯಕತ್ವದ ಬಗ್ಗೆ“ ಎಂದು ಹೇಳಿದರು. ನಾನು ಹಾಗೆ ಅವಸರದಲ್ಲಿ ಒಳಗೆ ಹೋಗುತ್ತಿದ್ದಾಗ, ನನ್ನ ಭಾವಚಿತ್ರವಿದ್ದ ಒಂದು ಬ್ಯಾನರ್ ನೋಡಿದೆ. ಅದರ ಒಕ್ಕಣೆ ಹೀಗಿತ್ತು, “ನಾಯಕತ್ವದ ಬಗ್ಗೆ ಭಾರತದ ಪ್ರಭಾವೀ ವಾಗ್ಮಿಯಿಂದ ಉಪನ್ಯಾಸ”. ಆಗ ನಾನು ಯೋಚಿಸಿದೆ, ಜನರು ಯಾವುದರಿಂದ ಪ್ರಭಾವಿತರಗುತ್ತಾರೆ? ನಿಮಗೆ ಏನಾದರು ಮಾಡುವುದು ಬೇಡವೆನಿಸಿದಾಗಷ್ಟೇ ನಿಮಗೆ ಪ್ರೇರಣೆ ಬೇಕಾಗುತ್ತದೆ, ನೀವು ಇಷ್ಟ ಪಟ್ಟು ಏನಾದರು ಮಾಡಬೇಕೆಂದುಕೊಂಡಾಗ ನಿಮಗೆ ಅದರ ಅಗತ್ಯವಿಲ್ಲ. ನೀವು ಊಟ ಮಾಡಲು ಯಾರಾದರೂ ಪ್ರೇರೇಪಿಸಬೇಕೇ? ಇಲ್ಲ, ಆದರೆ, ಬೆಳಗ್ಗೆ ಬೇಗ ಎದ್ದು ನಿಮ್ಮ ಸಾಧನೆಗಳನ್ನು ಮಾಡಲು ನಿಮಗೆ ಬೇರೆಯವರ ಪ್ರೇರಣೆಯ ಅಗತ್ಯವಿದೆ.

ಜನರು ಬಹಳ ಉತ್ಸುಕರಾದಾಗ, ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ- ಅಥವಾ ಅತ್ಯಂತ ಮೂರ್ಖತನದ ಕೆಲಸಗಳನ್ನೂ ಮಾಡಬಹುದು. ಉತ್ಸುಕತೆಯು ಯಾವಾಗಲೂ ಬುದ್ಧಿವಂತಿಕೆಯೊಡನೆ ಬರುವುದಿಲ್ಲ. ನಾವು ಏನನ್ನಾದರೂ ಬಹಳಷ್ಟು ಗಮನವಿಟ್ಟು, ಉದ್ದೇಶಪೂರ್ವಕವಾಗಿ ಮಾಡಬೇಕೆಂದುಕೊಂಡಾಗ, ನಮಗೆ ಪ್ರಜ್ಞಾವಂತರೂ, ಏಕಾಗ್ರ ಮನಸ್ಸಿನವರೂ, ಯಾವುದೇ ರೀತಿಯ ಪ್ರೇರಣೆಯಿಲ್ಲದೇ “ನಾನು ಇದನ್ನೇ ಮಾಡಬೇಕು“ ಎಂಬ ಸ್ಪಷ್ಠತೆ ಇರುವವರು ಬೇಕು. ನಾವು ಏನನ್ನು ಮಾಡಬೇಕು ಎಂಬ ಸ್ಪಷ್ಟ ಅರಿವು ನಮಗಿದ್ದರೆ, ನಮಗೆ ಬೇಕಾದನ್ನು ರೂಪಿಸಿಕೊಳ್ಳುವ ಸ್ವ-ಸಾಮರ್ಥ್ಯವು, ಪ್ರೇರಿತರಾಗಿ ಮಾಡುವುದಕ್ಕಿಂತ ಉತ್ತಮವಾಗಿರುತ್ತದೆ. ಪ್ರೇರೇಪಿತ ಗುಂಪು ಅಲ್ಪಾವಧಿಯ ಚಟುವಟಿಕೆಗೆ ಮಾತ್ರ ಉತ್ತಮ. ದೀರ್ಘಾವಧಿಯ ಚಟುವಟಿಕೆಗಳನ್ನು ಮಾಡುವುದು, ಏನಾದರೂ ಅಂದುಕೊಂಡಿದ್ದನ್ನು ಮಾಡಿ ಮುಗಿಸುವ ಸುಸ್ಪಷ್ಟ ಮನಸ್ಸಿನವರಿಂದ ಮಾತ್ರ ಸಾಧ್ಯ.

ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ: ಏನು ವ್ಯತ್ಯಾಸ?

ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳ ನಡುವೆ ವ್ಯತ್ಯಾಸವೆಂದರೆ - ಪ್ರಾಪಂಚಿಕ ವ್ಯಕ್ತಿಗಳು, ರೇಸನ್ನು ಗೆಲ್ಲಲು ತನ್ನ ಮುಂದೆ ನೇತಾಡುತ್ತಿರುವ ಮೂಳೆಗಾಗಿ ಒಂದೇ ಸಮನೆ ಓಡುತ್ತಿರುವ ನಾಯಿಯಂತೆ. ಆ ನಾಯಿಯು ಮೂಳೆಯನ್ನು ಹಿಡಿಯುವುದಕ್ಕೆ ಹೆಚ್ಚು ಹೆಚ್ಚು ವೇಗವಾಗಿ ಓಡುತ್ತಲೇ ಇರುತ್ತದೆ ಆದರೆ ಅದು ಎಂದಿಗೂ ಆಗುವುದಿಲ್ಲ. ಪ್ರಾಪಂಚಿಕ ವ್ಯಕ್ತಿಗಳು ಸದಾ ಕಾಲ ಬಾಹ್ಯ ಸನ್ನಿವೇಶಗಳಿಂದ ಹೊಡೆತ ತಿನ್ನುತ್ತಲೇ ಇರುತ್ತಾರೆ. ಆದರೆ, ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಯಾವುದೇ ಬಾಹ್ಯ ಹೊಡೆತಗಳಿಗೀಡಾಗುವುದಿಲ್ಲ, ಏಕೆಂದರೆ, ಅವನು ತನಗೇನು ಇಷ್ಟವೋ ಅದನ್ನೇ ಮಾಡುತ್ತಿರುತ್ತಾನೆ.

ಆಧ್ಯಾತ್ಮದ ಹಾದಿಯು ಬಹಳ ಬುದ್ಧಿವಂತಿಕೆಯ ಆಯ್ಕೆಯಾಗುತ್ತದೆ ಏಕೆಂದರೆ ನೀವು ಆಗ ಸೃಷ್ಟಿಕರ್ತನ ಬುದ್ಧಿವಂತಿಕೆಯೊಂದಿಗೇ ಸಾಗುತ್ತೀರಿ. ನೀವು ಎಷ್ಟೇ ಉತ್ತಮವಾಗಿ ಯೋಚಿಸಿದರೂ, ಈ ಸೃಷ್ಟಿಕರ್ತನ ಬುದ್ಧಿವಂತಿಕೆಯೊಂದಿಗೆ ಸರಿದೂಗಲಾಗದು, ಏಕೆಂದರೆ ಅದು ಮಣ್ಣಿನಿಂದ ಹೂವು, ಮಣ್ಣಿನಿಂದ ಆಹಾರ, ಆಹಾರದಿಂದ ಈ ಮಾನವ ಶರೀರ ಮತ್ತು ಪುನಃ ಈ ಶರೀರವನ್ನು ಮಣ್ಣಾಗಿಯೇ ಬದಲಾಯಿಸುತ್ತದೆ; ಗ್ರಹಗಳನ್ನು ಸುತ್ತುವಂತೆ ಮಾಡುತ್ತದೆ, ಹಾಗೂ ನಕ್ಷತ್ರ ಮಂಡಲಗಳನ್ನು ಕೆಲಸ ನಿರ್ವಹಿಸುವಂತೆ ಮಾಡುತ್ತದೆ - ಇವೆ ಮುಂತಾದ ಸೃಷ್ಟಿಯ ಅತ್ಯಂತ ಮೂಲಭೂತ ಕಾರಣಗಳು. ನೀವು ಯಾವುದೇ ರೀತಿಯ ಬುದ್ಧಿವಂತ ಆಲೋಚನೆಗಳು, ಯಾವುದೇ ಸಮೀಕರಣಗಳು, ಸೂತ್ರಗಳು ಏನನ್ನೇ ಅಳವಡಿಸಿ, ಅವುಗಳೆಲ್ಲ ಕೇವಲ ನೀವು ಈ ಸೃಷ್ಟಿಯ ಮೂಲವನ್ನು ಅರಿತುಕೊಳ್ಳುವ ಪ್ರಯತ್ನವಾಗುತ್ತದೆ ಅಷ್ಟೇ.

ಅಧ್ಯಾತ್ಮ ಪ್ರಕ್ರಿಯೆ ಎಂದರೆ, ಜೀವನದಿಂದ ವಿರಕ್ತಿಯಾಗಲೀ, ವಿಚ್ಛೇದನವಾಗಲೀ ಅಲ್ಲ. ಇದೊಂದು ಬದಲಾಯಿಸಲಾಗದ ಜೀವನದ ಜೊತೆಗಿನ ಅನುಬಂಧ.

ನೀವು ಏನನ್ನು ವಿಜ್ಞಾನ ಎಂದು ಹೇಳುತ್ತೀರೋ, ಅದು ನೀವು ಈ ಸೃಷ್ಟಿಕರ್ತನ ಬುದ್ಧಿವಂತಿಕೆಯನ್ನು ಅರ್ಥ ಮಾಡಿಕೊಳ್ಳುವ ಒಂದು ಪ್ರಯತ್ನ ಅಷ್ಟೇ. ನೀವು ತಂತ್ರಜ್ಞಾನ ಎಂದು ಕರೆಯುವುದು, ಈಗಾಗಲೇ ಇರುವ ಈ ಸೃಷ್ಟಿಯ ತಂತ್ರಜ್ಞಾನದ ಒಂದು ತೃಣದಷ್ಟು ಮಾತ್ರ ಇರುತ್ತದೆ. ಆದ್ದರಿಂದ ನೀವು ಮಾನವ ಬುದ್ಧಿಶಕ್ತಿಯನ್ನೂ, ತಾರ್ಕಿಕ ಜಾಣ್ಮೆಯನ್ನೂ - ಈ ಸೃಷ್ಟಿಯ ಜಾಣ್ಮೆಗೆ ಹೋಲಿಸುವಂತಿಲ್ಲ. ನೀವು ಈ ಸೃಷ್ಟಿಯ ಬುದ್ಧಿವಂತಿಕೆಯಲ್ಲಿ ಒಂದಾಗಬೇಕೆಂದರೆ, ಅಧ್ಯಾತ್ಮವೇ ಉತ್ತರ. ಸಾಮಾನ್ಯವಾಗಿ ಪ್ರಾಪಂಚಿಕ ಬದುಕು ಈ ಬುದ್ಧಿಮತ್ತೆಗೆ ಹೊಂದುವುದಿಲ್ಲ. ಇದು ತಪ್ಪೇನು? ಆಹಾರ ಸೇವನೆ, ಬಟ್ಟೆ ತೊಡುವುದು, ವಾಸಕ್ಕೆ ಮನೆ ಮಾಡುವುದು - ಇದೆಲ್ಲಾ ತಪ್ಪೇನು? ಇದು, ಅದು ಮಾಡುವುದು ಎಲ್ಲಾ ತಪ್ಪೇನು? ವಿಷಯ ಅದಲ್ಲ. ಹೆಚ್ಚುವರಿ ಭಕ್ಷ್ಯಗಳನ್ನೇ ಬದುಕಿನ ಮುಖ್ಯ ಆಹಾರವನ್ನಾಗಿ ಮಾಡಿಕೊಂಡರೆ, ಅದು ಮೂರ್ಖತನವಾಗುತ್ತದೆ. ನಾವು ಮನೆ ಕಟ್ಟುತ್ತೇವೆ. ಆಹಾರ ಸೇವಿಸುತ್ತೇವೆ, ಬಟ್ಟೆಗಳನ್ನು ತೊಡುತ್ತೇವೆ, ಎಲ್ಲವನ್ನೂ ಮಾಡುತ್ತೇವೆ. ನಾವು ಇದೆಲ್ಲವನ್ನೂ ಪರಿಪೂರ್ಣವಾಗಿ ಬದುಕಲು ಮಾಡುತ್ತೇವೆ. ನಾವು ಸುಮ್ಮನೆ ಬದುಕುವುದಷ್ಟೇ ಅಲ್ಲ, ನಾವು ಬದುಕಿನ ಸಾರ್ಥಕತೆಯನ್ನು ತಿಳಿದುಕೊಳ್ಳಲು ಬಯಸುತ್ತೇವೆ.

ನೀವು ಕೇವಲ ಬದುಕಿನ ಹೊರ ಪದರವನ್ನು ಮಾತ್ರ ತಿನ್ನುತ್ತಿದ್ದರೆ, ಆಗ ದಡ್ಡತನದಲ್ಲಿ ಬದುಕುತ್ತಿದ್ದೀರಿ ಎಂದು ಅರ್ಥ. ಆಧ್ಯಾತ್ಮವೆಂದರೆ, ಜೀವನದ ಹಣ್ಣು, ಬದುಕಿನ ಸಾರ, ಬದುಕಿನ ತಿರುಳನ್ನೇ ಆಸ್ವಾದಿಸುವ ಒಂದು ಪ್ರಕ್ರಿಯೆ. ಅದನ್ನು ಬರಿ ಆಸ್ವಾದಿಸುವುದಷ್ಟೇ ಅಲ್ಲ, ಅದನ್ನು ಸಂಪೂರ್ಣವಾಗಿ ಅನುಭವಿಸುವುದು ಕೂಡ.

ಆಧ್ಯಾತ್ಮ ಪ್ರಕ್ರಿಯೆ: ಬದುಕಿನೊಂದಿಗಿನ ಪ್ರೇಮ ಸಂಬಂಧ

ಆಧ್ಯಾತ್ಮ ಪ್ರಕ್ರಿಯೆ ಎಂದರೆ, ಜೀವನದಿಂದ ವಿರಕ್ತಿಯಾಗಲೀ, ವಿಚ್ಛೇದನವಾಗಲೀ ಅಲ್ಲ. ಇದೊಂದು ಬದಲಾಯಿಸಲಾಗದ ಜೀವನದ ಜೊತೆಗಿನ ಅನುಬಂಧ. ಇದರ ಅವಶ್ಯಕತೆಯೇನು? ಇದು ಬದುಕಲು ಇರುವ ಒಂದು ಜಾಣ್ಮೆಯ ದಾರಿ. ಪ್ರಜ್ಞಾಪೂರ್ವಕವಾಗಿ ಯಾವ ಮನುಷ್ಯನೂ ಮೂರ್ಖನಾಗಲು ಬಯಸುವುದಿಲ್ಲ. ಎಂತಹ ಮೂರ್ಖನೇ ಆದರೂ ತನ್ನ ಜಾಣ್ಮೆಯನ್ನು ಪ್ರದರ್ಶಿಸಲೇ ಇಚ್ಚಿಸುತ್ತಾನೆ. ಆದರೆ, ನೀವು ಸೃಷ್ಟಿಯ ಒಂದು ಪ್ರತ್ಯೇಕವಾದ ವಿಶೇಷ ತುಣುಕು ಎಂದುಕೊಂಡರೆ, ಒಂದು ವೇಳೆ ಹಾಗೆ ಯೋಚಿಸಿದರೆ ಅಥವಾ ನೀವು ಈ ಸೃಷ್ಟಿಯಲ್ಲೇ ಏಕಾಂಗಿ ಅಂದುಕೊಂಡರೆ, ಆಗ ನಿಮ್ಮ ತಿಳುವಳಿಕೆ ನಿಮಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ.

ಫ್ರೆಂಚ್ ಕ್ರಾಂತಿಯ ನಂತರ ಹೀಗೊಂದು ಘಟನೆ ನಡೆಯಿತು. ಫ್ರೆಂಚರು ಶಿರಚ್ಛೇದನ ಯಂತ್ರವನ್ನು ಕಂಡುಹಿಡಿದಿದ್ದರು. ಅವರು ಆ ಯಂತ್ರವನ್ನು ಮಾಡಿದ್ದರಿಂದ ಆಗಾಗ ಅದನ್ನು ಬಳಸಲೇ ಬೇಕಿತ್ತು. ಯಾರ ತಲೆಯನ್ನಾದರೂ ಕಂಡರೆ ಸಾಕು, ಅವರಿಗೆ ಆ ತಲೆಯನ್ನು ಕಡಿಯಬೇಕೆನಿಸುತ್ತಿತ್ತು. ಒಂದು ದಿನ, ಮೂರು ಜನರನ್ನು - ಒಬ್ಬ ವಕೀಲ, ಒಬ್ಬ ಪಾದ್ರಿ, ಮತ್ತು ಒಬ್ಬ ಇಂಜಿನಿಯರ್ ಅನ್ನು ಶಿರಚ್ಛೇದನಕ್ಕಾಗಿ ಕರೆದುಕೊಂಡು ಬಂದರು. ಮೊದಲು ಅವರು ವಕೀಲನನ್ನು ಮುಖಕ್ಕೆ ಮುಸುಕು ಹಾಕಿ ಹಲಗೆಯ ಮೇಲೆ ಮಲಗಿಸಿ ಕತ್ತಿಯನ್ನು ಎಳೆದರು - ಆದರೆ ಅದು ಕೆಳಗೆ ಬರಲಿಲ್ಲ. ತಾಂತ್ರಿಕ ದೋಷ! ಕಾನೂನಿನ ಪ್ರಕಾರ ಅವನನ್ನು ತಕ್ಷಣ ಸಾಯಿಸಬೇಕಿತ್ತು. ಆದರೆ, ಅವರು ಅವನಿಗೆ ಆ ಹಲಗೆಯ ಮೇಲೆ ಹತ್ತುನಿಮಿಷಗಳ ಕಾಲ ಕಾಯುವ ಹಿಂಸೆಯನ್ನು ಅನುಭವಿಸುವಂತೆ ಮಾಡಿದರು, ಅಂದರೆ ನಾಳೆಯ ದಿನ ಅವನು ಅವರ ಮೇಲೆ ದಾವೆ ಹಾಕಬಹುದು - ಹಾಗಾಗಿ ಅವನನ್ನು ಬಿಟ್ಟುಬಿಟ್ಟರು. ನಂತರ ಅವರು ಪಾದ್ರಿಯನ್ನು ಹಲಗೆಯ ಮೇಲೆ ಹಾಕಿ ಕತ್ತಿ ಎಳೆದರು. ಆಗಲೂ ಏನು ಆಗಲಿಲ್ಲ. ಅವರು ಇದು ದೇವರಕೃಪೆ ಎಂದುಕೊಡು ಅವನನ್ನೂ ಬಿಟ್ಟು ಬಿಟ್ಟರು. ಇಂಜಿನಿಯರ್ ಮುಸುಕಿಲ್ಲದೆ ಹಲಗೆಯ ಮೇಲೆ ಹೋಗಲು ನಿರ್ಧರಿಸಿದನು. ಅಲ್ಲಿ ಮಲಗಿಸಿದಾಗ, ಮೇಲೆ ನೋಡಿ ಅವನು, “ಹೆಲ್ಲೋ, ಇದರಲ್ಲಿ ಏನು ದೋಷವಿದೆ ಎಂದು ನಾನು ಹೇಳಬಲ್ಲೆ!” ಎಂದನು.

ನೀವು ಕೇವಲ ಬದುಕಿನ ಹೊರ ಪದರವನ್ನು ಮಾತ್ರ ತಿನ್ನುತ್ತಿದ್ದರೆ, ಆಗ ದಡ್ಡತನದಲ್ಲಿ ಬದುಕುತ್ತಿದ್ದೀರಿ ಎಂದು ಅರ್ಥ. ಅಧ್ಯಾತ್ಮವೆಂದರೆ, ಜೀವನದ ಹಣ್ಣು, ಬದುಕಿನ ಸಾರ, ಬದುಕಿನ ತಿರುಳನ್ನೇ ಆಸ್ವಾದಿಸುವ ಒಂದು ಪ್ರಕ್ರಿಯೆ

ಇಂದಿನ ದಿನಗಳಲ್ಲಿ ಮನುಷ್ಯನ ಜಾಣ್ಮೆ ಕೆಲಸ ಮಾಡುವುದು ಹೀಗೆಯೇ. ಅಂದರೆ, ನಾವು ಸಹಜವಾಗಿ ನಮ್ಮೊಳಗೆ ಮತ್ತು ಎಲ್ಲದರಲ್ಲೂ ಇರುವ ಸೃಷ್ಟಿಯ ಮೂಲದ ಜಾಣ್ಮೆಯಿಂದ ದೂರವಾಗುತ್ತಿದ್ದೇವೆ ಎಂದು ಅರ್ಥ. ಯಾರಾದರೂ ಸರಿಯಾಗಿ ಗಮನಿಸಿದರೆ, ಎಲ್ಲದರಲ್ಲಿಯೂ ಸೃಷ್ಟಿಕರ್ತನ ಕೈವಾಡ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ - ನಾವು ಯಾವುದೇ ವಸ್ತುವನ್ನು ಮುಟ್ಟಿದಾಗ ಇರಬಹುದು, ನಾವು ತಿನ್ನುವ ಆಹಾರವಾಗಬಹುದು, ನಾವು ಉಸಿರಾಡುವ ಗಾಳಿಯಾಗಬಹುದು ಅಥವಾ ನಾವು ಇರುವ ಈ ಪ್ರಪಂಚವೂ ಆಗಬಹುದು, ಎಲ್ಲದರಲ್ಲೂ ಕಾಣುತ್ತೇವೆ. ಮನುಷ್ಯನು ಮಾಡಬೇಕಾದ ಬಹಳ ಮುಖ್ಯವಾದ ಕೆಲಸವೆಂದರೆ ಈ ಸೃಷ್ಟಿಯ ಲಯದಲ್ಲಿಯೇ ಇರುವುದು ಮತ್ತು ಆ ಸೃಷ್ಟಿಕರ್ತನ ನಿರ್ಮಾಣಕ್ಕೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳುವುದು. “ಇಷ್ಟರಲ್ಲೇ ನನ್ನ ಬದುಕನ್ನು ನಡೆಸಬಹುದೇ? ನಾನು ನನಗೆ ಬೇಕಾದ್ದನ್ನು ಮಾಡಬಹುದೇ?“ ಹೌದು, ಆಗ ನೀವು ನಿಮಗೆ ಬೇಕಾದ್ದೆಲ್ಲವನ್ನು ಮಾಡಬಹುದು, ಸೃಷ್ಟಿಯ ಕೈಚಳಕಕ್ಕೆ ಯಾವುದೇ ಧಕ್ಕೆ ಬರದಂತೆ - ಅಂದರೆ ನೀವು ಅದರ ಲಯದಲ್ಲಿಯೇ ಇದ್ದರೆ ಮಾತ್ರ ಇದು ಸಾಧ್ಯ. ನೀವು ಹಾಗಿಲ್ಲದಿದ್ದಲ್ಲಿ, ನೀವು ಪ್ರತ್ಯೇಕ ಜಾಣ್ಮೆಯವರಾಗುತ್ತೀರಿ ಮತ್ತು ಸೃಷ್ಟಿಯು ಇದಕ್ಕೆ ಎಂದಿಗೂ ಅವಕಾಶ ಕೊಡುವುದಿಲ್ಲ.

ಒಂದು ಆಧ್ಯಾತ್ಮ ಪ್ರಕ್ರಿಯನ್ನು ಪ್ರಾರಂಭಿಸುವುದೆಂದರೆ, ನಿಮ್ಮಲ್ಲಿರುವ ಆ ಸೃಷ್ಟಿಯ ಮೂಲ ಚೇತನವನ್ನು ಜಾಗೃತಗೊಳಿಸುವುದು. ನಿಮ್ಮ ಸ್ವಂತ ಮಂದಬುದ್ಧಿಯನ್ನು ಬಳಸಬೇಡಿ. ಹೀಗೆಂದ ಮಾತ್ರಕ್ಕೆ ನಾನು ಬುದ್ಧಿವಂತಿಕೆಯ ವಿರೋಧಿ ಎಂದಲ್ಲ. ಇಂದಿನ ದಿನಗಳಲ್ಲಿ ಕೃತಕ ಬುದ್ಧಿವಂತಿಕೆಯು ಹೆಚ್ಚಾಗಿದೆ. ಕಂಪ್ಯೂಟರ್ ಗಳು ಬಹಳವಾದ ಜಾಣ್ಮೆಯನ್ನು ಹೊಂದುತ್ತಿವೆ, ಆದರೆ ಅದು ಎಂದಿಗೂ ಮನುಷ್ಯನಿಗೆ ಸಾಟಿಯಾಗಲು ಸಾಧ್ಯವಿಲ್ಲ. ಮುಂದಿನ ಕೆಲ ದಿನಗಳಲ್ಲಿ ಮನುಷ್ಯನು ಮಾಡುವ ಎಲ್ಲ ಕೆಲಸಗಳನ್ನೂ ಮಾಡುವಂತಹ ಕಂಪ್ಯೂಟರ್ ತಯಾರಾಗಬಹುದು - ಆದರೆ ಮನುಷ್ಯನ ಮೂರ್ಖತನಕ್ಕೆ ಯಾವುದೇ ಕಂಪ್ಯೂಟರ್ ಸಾಟಿಯಾಗಲಾರದು. ಹಾಗಾಗಿ ನಾವು ಅಪ್ರತಿಮರು!

ಬುದ್ಧಿವಂತಿಕೆಯು ಪ್ರಶ್ನೆಯಲ್ಲ. ಪ್ರಶ್ನೆಯು ನಿಮ್ಮ ಪ್ರತ್ಯೇಕತೆ. ಸಹಯೋಗದಿಂದ ಇರುವ ಬುದ್ಧಿವಂತಿಕೆಯನ್ನು ಹೊಂದದೆ ಇರುವುದು. ಯೋಗ ಎಂಬ ಪದದ ಅರ್ಥ “ಸೇರುವುದು“. ಸಹಯೋಗದಿಂದ ಇರುವುದು, ಅಂದರೆ ನಿಮ್ಮ ಜಾಣ್ಮೆಯು ನಿಮ್ಮ ಆಂತರ್ಯ ಹಾಗು ನಿಮ್ಮ ಸುತ್ತಮುತ್ತಲಿನ ಎಲ್ಲದರೊಂದಿಗೂ - ಸೃಷ್ಟಿಯ ಮೂಲ ಜಾಣ್ಮೆಯಿಂದ ವ್ಯತಿರಿಕ್ತವಾಗದೇ - ಸಹಯೋಗದಿಂದ ಇರುವುದು.

ಸಂಪಾದಕರ ಸೂಚನೆ : “ಇನ್ನರ್ ಮ್ಯಾನೇಜ್ ಮೆಂಟ್“ ಪುಸ್ತಕವು, ನಮ್ಮನ್ನು ಬಾಹ್ಯ ಪ್ರಭಾವಗಳಿಂದ ಮುಕ್ತಗೊಳಿಸುವ ಒಂದು ಹೊಸ ಆಯಾಮದತ್ತ ಕರೆದೊಯ್ಯುವ ಸದ್ಗುರುಗಳ ಜ್ಞಾನಧಾರೆಯನ್ನು ಹೊಂದಿದೆ. ದರ ಕಾಲಂ ನಲ್ಲಿ - "0" ಎಂದು ಟೈಪ್ ಮಾಡಿ, ಉಚಿತ ಪುಸ್ತಕ ಡೌನ್ಲೋಡ್ ಆಗುತ್ತದೆ.

Inner Management