ಪ್ರಶ್ನೆ: ಸದ್ಗುರು, ಈ ದಿನಗಳಲ್ಲಿ ಮೊಬೈಲ್ ಫೋನ್, ಫೇಸ್‍ಬುಕ್, ವಾಟ್ಸಾಪ್ ಹೀಗೆ ನಾನಾ ರೀತಿಯ ಅಡಚಣೆಗಳಿವೆ. ಇಂತಹ ಪರಿಸ್ಥಿತಿ ಇರುವಾಗ ಧ್ಯಾನ ಮಾಡುವುದಾದರೂ ಹೇಗೆ?

ಸದ್ಗುರು: ನಿಮಗೆ ನಿಮ್ಮ ಫೋನ್ ಅಡಚಣೆಯೆನಿಸಿದರೆ, ಕೈಲಾಸದಲ್ಲಿರುವ ಆದಿಯೋಗಿಯಂತೆ ಮೈನಸ್ ಐದು ಸೆಲ್ಷಿಯಸ್! ತಾಪಮಾನದಲ್ಲಿ ಕುಳಿತಿರುವಂತೆ ಊಹಿಸಿಕೊಳ್ಳಿ. ಅದು ಇನ್ನೂ ಹೆಚ್ಚಿನ ಅಡಚಣೆಯೆನಿಸುತ್ತದೆ. ಮೊಬೈಲ್ ಫೋನ್ ಇರುವುದು ನಿಮ್ಮ ಅನುಕೂಲಕ್ಕಾಗಿ. ನಮ್ಮನ್ನು ನಾವೇ ತಾಂತ್ರಿಕವಾಗಿ ಸಬಲಗೊಳಿಸಿಕೊಳ್ಳುವುದು ಮತ್ತು ನಮ್ಮ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿ ನಮ್ಮ ಜೀವನವನ್ನು ವೃದ್ಧಿಸಿಕೊಳ್ಳುವ ಸಲುವಾಗಿ. ನಿಮ್ಮ ಕೆಲಸಗಳು ಬೇಗನೇ ಮುಗಿದಲ್ಲಿ ನಿಮಗೆ ಧ್ಯಾನ ಮಾಡಲು ಹೆಚ್ಚಿನ ಸಮಯ ದೊರೆಯುತ್ತದೆ.

ನಮ್ಮನ್ನು ನಾವೇ ತಾಂತ್ರಿಕವಾಗಿ ಸಬಲಗೊಳಿಸಿಕೊಳ್ಳುವುದು ಮತ್ತು ನಮ್ಮ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿ ನಮ್ಮ ಜೀವನವನ್ನು ವೃದ್ಧಿಸಿಕೊಳ್ಳುವ ಸಲುವಾಗಿ.

ನಿಮಗೆ ನೆನಪಿರಬಹುದು ಕೆಲವು ದಶಕಗಳ ಹಿಂದೆ ಭಾರತದಲ್ಲಿ ದೂರದೂರುಗಳಿಗೆ ಒಂದು ದೂರವಾಣಿ ಕರೆ ಮಾಡಬೇಕೆಂದರೆ ಎಷ್ಟು ಪ್ರಯಾಸಕರವಾಗಿತ್ತೆಂದು. ತೊಂಬತ್ತರಲ್ಲಿ, ನಾವು ಈಶ ಫೌಂಡೇಶನ್ ಅನ್ನು ಅಡಿಪಾಯದಿಂದ ಕಟ್ಟಲು ಪ್ರಾರಂಭ ಮಾಡಿದಾಗ, ನಾನು ಯಾವಾಗಲು ಹೆದ್ದಾರಿಯಲ್ಲೇ ಇರುತ್ತಿದ್ದೆ, ಊರಿಂದ ಊರಿಗೆ ಪ್ರಯಾಣಿಸುತ್ತ. ವಾರದಲ್ಲಿ ಒಂದು ದಿನ ನಾನು ಸುಮಾರು ಐವತ್ತರಿಂದ ನೂರು ದೂರವಾಣಿ ಕರೆಗಳನ್ನು ದೇಶದಾದ್ಯಂತವಲ್ಲದೆ ವಿದೇಶಕ್ಕೂ ಮಾಡಬೇಕಿತ್ತು. ನಾನು "ಇಂದು ನನ್ನ ದೂರವಾಣಿ ಕರೆಗಳ ದಿನ" ಎಂದು ನಿರ್ಧರಿಸಿದಾಗ ಒಂದು ಸಣ್ಣ ಪಟ್ಟಣ ಅಥವಾ ಹಳ್ಳಿಯ “STD” ಎಂದು ದಪ್ಪ ಅಕ್ಷರಗಳಲ್ಲಿ ಬರೆದಿರುತ್ತಿದ್ದ ನೀಲಿ ಮಳಿಗೆಯ ಮುಂದೆ ನಿಲ್ಲಿಸುತ್ತಿದ್ದೆ.

ಮೊದಲು ಅಂಡಗಡಿಯ ಮಾಲೀಕನಿಗೆ ಕೆಲವು ಸಾವಿರ ರೂಪಾಯಿಗಳನ್ನು ಕೊಟ್ಟು ನಂತರ ಕರೆ ಮಾಡಲು ಪ್ರಾರಂಭಿಸುತ್ತಿದ್ದೆ. ನಾನು ಅಗತ್ಯ ಕರೆಗಳನ್ನು ಮಾಡಿ ಮುಗಿಸುವಷ್ಟರಲ್ಲಿ ಡಯಲ್ ಮಾಡೀ ಮಾಡೀ ನನ್ನ ಕೈ ಬೆರಳುಗಳೆಲ್ಲಾ ನೋಯಲು ಶುರುವಾಗುತ್ತಿತ್ತು. ಅಷ್ಟೇ ಅಲ್ಲದೆ, ಆ ಗಬ್ಬು ನಾತದ ಕಪ್ಪು ಫೋನು, ಆ ಗಲೀಜು ಮಳಿಗೆ ಯಾವುದೂ ಖಂಡಿತ ಹಿತವಾಗಿರುತ್ತಿರಲಿಲ್ಲ. ಆದರೆ, ಇಂದು ನಾನು ಡಯಲ್ ಕೂಡ ಮಾಡಬೇಕಿಲ್ಲ - ಬರೀ ಹೆಸರು ಹೇಳಿದರೆ ಸಾಕು ನಮ್ಮ ಫೋನು ತಾನೇ ಕರೆ ಮಾಡುತ್ತದೆ.

ಅನುಕೂಲಗಳ ಬಗ್ಗೆ ದೂರುವುದು

ನಮಗೆ ಸಿಕ್ಕಿರುವ ಅನುಕೂಲಗಳನ್ನು ಅನುಭವಿಸುವ ಬದಲು ಯಾವಾಗಲು ಅದನ್ನು ದುರುವುದೇ ಹೆಚ್ಚಾಗಿದೆ. ಇದೊಂದು ಗೀಳಾಗಿ ಪರಿಣಮಿಸುತ್ತದೆ, ಏಕೆಂದರೆ, ನೀವು ಒಂದು ಕೆಲಸ ಪ್ರಾರಂಭಿಸಿದರೆ ಅದನ್ನು ಹೇಗೆ ಸೂಕ್ತವಾಗಿ ಮುಗಿಸುವುದೆಂದು ಗೊತ್ತಿಲ್ಲದೇ ಇರುವುದು - ಅದು ಒಂದು ಸರಳವಾದ ಕೆಲಸವೇ ಆಗಿರಬಹುದು. ನೀವು ತಿನ್ನಲು ಪ್ರಾರಂಭಿಸಿದರೆ ಯಾವಾಗ ನಿಲ್ಲಿಸಬೇಕೆಂದು ಗೊತ್ತಿಲ್ಲ. ಸಮಸ್ಯೆಯಿರುವುದು ನಮಗೆ ಸಿಕ್ಕಿರುವ ಅನುಕೂಲಗಳಿಂದಲ್ಲ, ನಮಗೆ ತಿಳುವಳಿಕೆಯ ಕೊರತೆಯಿಂದ. ನಮ್ಮ ಜೀವನವನ್ನು ವೃದ್ಢಿಸಿ ಸರಾಗಗೊಳಿಸುವ ವಸ್ತುಗಳನ್ನೂ ನಾವು ನಮ್ಮ ಅಜ್ಞಾನದಿಂದ ಸಮಸ್ಯೆಗಳಾಗುವಂತೆ ಮಾಡಿಕೊಳ್ಳುತ್ತಿದ್ದೇವೆ.

ನೀವು ಪ್ರಪಂಚದೊಂದಿಗೆ ಅತಿಯಾಗಿ ತಾಕಲಾಟ ನಡೆಸದಿದ್ದರೆ, ಜನರೂ ಸಹ ನಿಮ್ಮಿಂದ ಸಂತುಷ್ಟರಾಗಿರುತ್ತಾರೆ.

ವಾಟ್ಸ್ಯಾಪ್ ಸದಾಕಾಲ ಸಡ್ಡು ಮಾಡುತ್ತಿದ್ದರೆ ವಿಚಲಿತರಾಗದೇ ಕುಳಿತಿರಲು ಸಾಧ್ಯವೇ? ಸಾಧ್ಯ - ನೀವು ನಿಮ್ಮ ಫೋನನ್ನು ಸ್ವಿಚ್ ಆಫ್ ಮಾಡಿ. ನಿಮ್ಮ ಹಸ್ತಕ್ಷೇಪವಿಲ್ಲದೆಯೂ ಪ್ರಪಂಚ ನಿರಾಯಾಸವಾಗಿ ನಡೆಯುತ್ತಿರುತ್ತದೆ. ಈಗಲೇ ನೀವು ನಿಮ್ಮ ಫೋನನ್ನು ಸ್ವಿಚ್ ಆಫ್ ಮಾಡಿದರೆ ಇದು ನಿಮಗೆ ಮನದಟ್ಟಾಗುತ್ತದೆ. ಇದು ನಿಮಗೆ ಈಗಲೇ ಮನದಟ್ಟಾದರೆ ನೀವು ಬಹಳಷ್ಟು ಕೆಲಸಗಳನ್ನು ಹೆಚ್ಚು ಸಂವೇದನಾಶೀಲರಾಗಿ ಮಾಡುತ್ತೀರಿ.

ಈಗ ನೀವು ನಿಮ್ಮ ಸುತ್ತಲಿನ ಪ್ರಪಂಚದೊಂದಿಗೆ ಅತಿಯಾಗಿ ತಾಕಲಾಟ ನಡೆಸದಿದ್ದರೆ, ಜನರೂ ಸಹ ನಿಮ್ಮಿಂದ ಸಂತುಷ್ಟರಾಗಿರುತ್ತಾರೆ. ನೀವು ಬಹಳ ಗೊಂದಲ ಮಾಡಿದಿರೆಂದುಕೊಳ್ಳಿ, ಆಗ ನೀವು ಸತ್ತ ಮೇಲೆ ಜನರು ಸಂತೋಷ ಪಡುತ್ತಾರೆ. ಆಯ್ಕೆ ನಿಮ್ಮದು. ನಾನು ಎಲ್ಲಿಂದಾದರೂ ಹೊರಟು ನಿಂತರೆ ಸಾಮಾನ್ಯವಾಗಿ ನಾನು ಯಾರಿಗೂ ತಿಳಿಸುವುದಿಲ್ಲ, ಆದರೂ ಹೇಗೋ, ಒಂದಷ್ಟು ಜನ ವಿಮಾನ ನಿಲ್ದಾಣಗೆ ಬಂದು ಬಿಡುತ್ತಾರೆ. ನಾನು ಅವರಿಗೆಲ್ಲಾ ಹೇಳುತ್ತಿರುತ್ತೇನೆ, “ನಾನು ಹೊರಟು ನಿಂತರೆ ನಿಮಗೆಲ್ಲ ಏಕಿಷ್ಟು ಸಂತೋಷ?“ ಕೂಡಲೇ ಎಲ್ಲರೂ ಅಳಲು ಶುರು ಮಾಡುತ್ತಾರೆ. ಆಗ ನಾನು ಹೇಳುತ್ತೇನೆ “ಇಲ್ಲ, ಇಲ್ಲ, ನನಗೆ ನಿಮ್ಮ ಭಾವನೆ ಅರ್ಥವಾಗುತ್ತದೆ” ಎಂದು. ಆಯ್ಕೆ ನಿಮಗೆ ಬಿಟ್ಟಿದ್ದು. ನೀವು ಸತ್ತ ನಂತರ ಜನ ಸಂತೋಷ ಪಡಲು ಕಾಯಿರಿ ಅಥವಾ ಈಗಲೇ ನೀವೇ ಸಂತೋಷವನ್ನು ಹಂಚಿ.

ಸಂಪಾದಕರ ಟಿಪ್ಪಣಿ: ’ಈಶ ಕ್ರಿಯಾ’ -ಮಾರ್ಗದರ್ಶನದೊಂದಿಗೆ ಧ್ಯಾನ ಮಾಡುವುದು, ಉಚಿತವಾಗಿ ಆನ್‍ಲೈನ್‍ನಲ್ಲಿ ಲಭ್ಯವಿದೆ. ಯಾರೇ ಆಗಲಿ ದಿನದಲ್ಲಿ ಕೆಲವೇ ನಿಮಿಷಗಳನ್ನು ಇದಕ್ಕೆ ಮೀಸಲಿಟ್ಟರೆ, ಅವರ ಜೀವನವನ್ನೇ ಪರಿವರ್ತಿಸುವಂತಹ ಸಾಮರ್ಥ್ಯ ಹೊಂದಿರುವ ಕ್ರಿಯೆ. ಪ್ರಯತ್ನಿಸಿ.

ಈ ಲೇಖನದ ಮೂಲ ಆವೃತ್ತಿ ‘ಈಶ ಫಾರೆಸ್ಟ್ ಫ್ಲವರ್’ -ಮೇ 2017ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. PDF ಡೌನ್‍ಲೋಡ್ ಮಾಡಲು Name Your Price ಜಾಗದಲ್ಲಿ ‘No’ ಎಂದು ಅಥವಾ ಕನಿಷ್ಠ ದರ ನಮೂದಿಸಿ ಅಥವಾ ಮುದ್ರಿತ ನಿಯತಕಾಲಿಕ ಬೇಕೆಂದರೆ ಚಂದಾದಾರರಾಗಿ.