ಲಿಪ್ಯಂತರ:

ಸದ್ಗುರು: ಬಾಬಾ ರಾಮ್-ದೇವ್ ಹಾಗೂ ಆಚಾರ್ಯಾಜಿಯವರು ಇಲ್ಲಿರುವುದು ನಮ್ಮ ದೊಡ್ಡ ಭಾಗ್ಯ. ಬಾಬಾ ರಾಮ್-ದೇವ್ ಯಾರೆಂದು ತಿಳಿಯದವರು ಈ ದೇಶದಲ್ಲಿ ಬಹುಶಃ ಯಾರೂ ಇಲ್ಲವೇನೋ. ಅವರನ್ನು ಅವರ ಪಾಡಿಗೆ ಬಿಡೋಣ. ಆದರೆ, ಕೇವಲ ೧೨ – ೧೩ ವರ್ಷಗಳಲ್ಲಿ, ಆಚಾರ್ಯಾಜಿಯವರು ಪತಂಜಲಿ ಬ್ರಾಂಡ್-ನ ರೂಪದಲ್ಲಿ ಏನನ್ನು ಸೃಷ್ಟಿಸಿರುವುವರೋ, ಅದು ಅಮೋಘವಾದದ್ದು. ದೇಶದಲ್ಲಿ ಅತಿ ದೊಡ್ಡ ಬ್ರ್ಯಾಂಡ್-ಗಳ ಪೈಕಿ ಇದೂ ಒಂದು. ಭಾರತದ ಉದ್ಯಮ ಹಾಗೂ ವ್ಯಾಪಾರಕ್ಕೆ ಇದೊಂದು ನೂತನ ಆಯಾಮವನ್ನು ತರುತ್ತಿದೆ. ಎರಡು ಶತಕೋಟಿ ಡಾಲರ್-ಗಿಂತಲೂ ಹೆಚ್ಚಿನ ವ್ಯವಹಾರ! ಇಲ್ನೋಡಿ, ಅವರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ).

ಸ್ವಾಮಿ ರಾಮ್-ದೇವ್: ಸಂಬಳವಿಲ್ಲದ ಸಿಇಒ.

ಸದ್ಗುರು: ಸಂಬಳವಿಲ್ಲದ ಸಿಇಒ. ಸೂಟ್, ಜಾಕೆಟ್ ಮತ್ತು ಟೈ ಧರಿಸಿಲ್ಲದಿರುವ ಸಿಇಒ. ಇದೊಂದು ದೇಸಿ ಸಂಸ್ಥೆಯ ಆದರ್ಶಪ್ರಾಯ ಮಾದರಿಯಾಗಿದೆ; ಚೆನ್ನಾಗಿ ಗಳಿಕೆ ಮಾಡುತ್ತಿರುವ ಒಂದು ಭಾರತೀಯ ಸಂಸ್ಥೆ. ನೀವು ಏನನ್ನು ಸೃಷ್ಟಿಸುವಿರೋ, ಅದನ್ನು ಸಂಪೂರ್ಣವಾದ ಶ್ರದ್ಧೆ ಮತ್ತು ಸರಳತೆಯಿಂದ ಮಾಡಿದರೆ, ಅತ್ಯದ್ಭುತವಾದದ್ದನ್ನು ನೀವು ಸೃಷ್ಟಿಸಬಹುದು ಎಂಬುದನ್ನು ಪ್ರಪಂಚದ ವ್ಯಾಪಾರೋದ್ಯಮದ ಸಮುದಾಯ, ಅದರಲ್ಲೂ ವಿಶೇಷವಾಗಿ ಭಾರತದಲ್ಲಿರುವವರು ಕಲಿಯಬೇಕಾಗಿದೆ. ಅವರಿರುವ FMCG-ಯ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಕಣದಲ್ಲಿ, ನನಗೆ ತಿಳಿದಿರುವಂತೆ, ಕೇವಲ ೧೦-೧೨ ವರ್ಷಗಳ ಸಮಯದಲ್ಲಿ, ಅವರಂತೆ ಬೇರೆ ಯಾವುದೇ ಸಂಸ್ಥೆಯು ೨ ಶತಕೋಟಿ ಡಾಲರ್ ಸಂಸ್ಥೆಯಾಗಿ ಮಾರ್ಪಟ್ಟಿಲ್ಲ. ಅವರು ವಿಶ್ವದಲ್ಲೇ ಅತಿ ದೊಡ್ಡ ಆಹಾರ ಸಂಸ್ಕರಣಾ ಉದ್ಯಮವನ್ನು ಹೊಂದಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಷಯವೇ.

 ನೀವಿಲ್ಲಿ ಏನನ್ನು ನೋಡುತ್ತಿದ್ದೀರೋ, ಅದು ಭಾರತದಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಗಳ ಭವಿಷ್ಯದ ಸಾಧ್ಯತೆ.

ಜನರಿಗೆ ತಿಳಿಯದ ವಿಷಯವೆಂದರೆ ಇದು – ನನಗೆ ಅವರ ಪ್ರಯೋಗಾಲಯಕ್ಕೆ ಭೇಟಿ ನೀಡುವ ಸುಯೋಗ ದೊರಕಿತ್ತು. ಅಲ್ಲಿ, ಅವರು ೭೨,೦೦ ಔಷಧೀಯ ಸಸ್ಯಗಳ ಮಾಹಿತಿಯನ್ನು ದಾಖಲಿಸಿಕೊಂಡಿದ್ದಾರೆ. ಇದನ್ನು ವೈಜ್ಞಾನಿಕವಾದ ರೀತಿಯಲ್ಲಿ ಹಿಂದೆಂದೂ ಮಾಡಲಾಗಿಲ್ಲ. ನೋಡಿ, ಈ ಸರಳತೆಯನ್ನು. ಒಬ್ಬರೋ, ಷರ್ಟನ್ನು ಧರಿಸಿಲ್ಲ, ಇನ್ನೊಬ್ಬರು ಹೀಗಿರುವರು. ಆಚಾರ್ಯಾಜಿಯವರು ಈ ಸಂಸ್ಥೆಯ ಉತ್ಪಾದನೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ, ಬಾಬಾ ರಾಮ್-ದೇವ್ರವರು ಮಾರ್ಕೆಟಿಂಗ್-ಅನ್ನು ನೋಡಿಕೊಳ್ಳುತ್ತಾರೆ. ಇದು ಕಲಿಯಬೇಕಾದ ವಿಷಯ. ಇದರ ಬಗ್ಗೆ ನಾನು ಮಾತಾಡುತ್ತಲೇ ಇರುತ್ತೇನೆ, ಪ್ರಮುಖ ಉದ್ಯಮಗಳನ್ನು ನಡೆಸಲು ಇವರು ಆದರ್ಶ ಮಾದರಿಗಳು – ಟೈ ಕಟ್ಟಿಕೊಂಡು ನಿಮ್ಮನ್ನು ನೀವು ನೇಣಿಗೆ ಹಾಕಿಕೊಳ್ಳುವ ಅಗತ್ಯವಿಲ್ಲ.

ನೀವಿಲ್ಲಿ ಏನನ್ನು ನೋಡುತ್ತಿದ್ದೀರೋ, ಅದು ಭಾರತದಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಗಳ ಭವಿಷ್ಯದ ಸಾಧ್ಯತೆ.

ಸದ್ಗುರು: ಆಚಾರ್ಯ ಬಾಲಕೃಷ್ಣಾಜಿ ಅವರನ್ನು ಆಹ್ವಾನಿಸುವ ಸ್ವಾತಂತ್ರ್ಯವನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ಈ ವರ್ಷ, ಎಲ್ಲವನ್ನೂ ನಿರ್ಧರಿಸಲಾಗಿಬಿಟ್ಟಿದೆ. ಆದರೆ, ಮುಂದಿನ ವರ್ಷ ನಡೆಯುವ ಈಶ ಇನ್-ಸೈಟ್ ಕಾರ್ಯಕ್ರಮಕ್ಕೆ ಅವರು ಈ ದೇಶದ ಕಾರ್ಪೊರೇಟ್ ಮುಖಂಡರಾಗಿ ಇಲ್ಲಿ ಬರುತ್ತಿದ್ದಾರೆ. ಇನ್-ಸೈಟ್ ಕಾರ್ಯಕ್ರಮವು ವ್ಯಾಪಾರೋದ್ಯಮಿಗಳ ಸಭೆಯಾಗಿದ್ದು, ರತನ್ ಟಾಟಾ, ನಾರಾಯಣ ಮೂರ್ತಿ, ಕೆ.ವಿ. ಕಾಮತ್ ಮತ್ತು ಇನ್ನೂ ಹಲವಾರು ಉನ್ನತ ಕಾರ್ಪೊರೇಟ್ ನಾಯಕರು ಈ ಹಿಂದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಕಂಗನಾ: ಅನೇಕ ವರ್ಷಗಳ ಹಿಂದೆ ನಾನು ನಿಮ್ಮ ಬಗ್ಗೆ ಮೊದಲ ಬಾರಿಗೆ ಕೇಳಿದಾಗ, “ಓಹ್! ಮತ್ತೊಬ್ಬ ಗುರುಗಳು” ಎಂದು ತಾತ್ಸಾರಿಂದ ನನ್ನೊಳಗೆ ಗೊಣಗಿಕೊಂಡಿದ್ದೆ. ಕೆಲ ತಿಂಗಳ ಹಿಂದೆ ನನ್ನ ಸಹೋದರಿ, “ಇನ್ನರ್ ಇಂಜಿನಿಯರಿಂಗ್” ಅನ್ನುವ ನಿಮ್ಮ ಪುಸ್ತಕವನ್ನು ನೀಡಿದಳು – ಇದು ನ್ಯೂಯಾರ್ಕ್ ಟೈಮ್ಸ್ ಪ್ರಕಟಣೆಯ “ಅತ್ಯುತ್ತಮವಾಗಿ ಮಾರಾಟವಾದ ಪುಸ್ತಕ” ಎಂದು ಪ್ರಸಿದ್ಧಿ ಪಡೆದ ಪುಸ್ತಕ. ಈ ಪುಸ್ತಕವು ನನ್ನ ದೃಷ್ಟಿಕೋನವನ್ನೇ ಬದಲಾಯಿಸಿತು. ನಿಜ ಹೇಳಬೇಕೆಂದರೆ, ಇದು ನ್ಯೂಯಾರ್ಕ್ ಟೈಮ್ಸ್-ನ ಪ್ರಕಟಣೆಯಲ್ಲದಿದ್ದರೆ, ನಾನಿದನ್ನು ಓದುತ್ತಿರಲಿಲ್ಲವೇನೋ. ಅದೇಕೆ, ಪಾಶ್ಚಿಮಾತ್ಯರು,  ಪಾಶ್ಚಿಮಾತ್ಯರ ಅಚ್ಚೊತ್ತನ್ನು ನಮಗೆ ಬಿಟ್ಟಿರಲು ಆಗದು? ಎಷ್ಟೆಲ್ಲಾ ಪುಸ್ತಕಗಳಿವೆ, ಆದರೆ, ಅಮೇರಿಕನ್ನರು ಅದನ್ನು ಅನುಮೋದಿಸದ ಹೊರತು ಅದಕ್ಕೆ ಅರ್ಥವಿರುವುದಿಲ್ಲ – ಹೀಗೇಕೆ?

ಸದ್ಗುರು: ನಾವಿನ್ನೂ ಪಾಶ್ಚಾತ್ಯ ಗೀಳಿನಿಂದ ಹೊರಬಂದಿಲ್ಲ. ಎಲ್ಲವೂ ಅಲ್ಲಿಂದಲೇ ಬರಬೇಕು. ಇಂದು, ಬಹಳಷ್ಟು ಜನರು ಯೋಗದ ಬಗ್ಗೆ ಮಾತನಾಡುತ್ತಿರುವುದು ಯಾಕೆ? ಭಾರತದಲ್ಲಿ ಅವರು ಚರ್ಚಿಸುತ್ತಿರುವ ಯೋಗವು, ಅಮೇರಿಕದ ಕಡಲತೀರದಿಂದ ಪುಟಿದೆದ್ದು ಬಂದಿದ್ದು. ಇಲ್ಲಿರುವ ಯೋಗದ ಬಗ್ಗೆ ಅವರು ಮಾತನಾಡುತ್ತಿಲ್ಲ. ನಮ್ಮ ದೇಶವು ಯೋಗದ ಮೂಲವಾಗಿದೆ.

ಕಂಗನಾ: ಸದ್ಗುರು, ಯೋಗ ಮತ್ತು ಆಧ್ಯಾತ್ಮಿಕತೆಯಲ್ಲಿ ಬೇರೂರಿರುವ ನಮ್ಮ ಮೂಲದ ಬಗ್ಗೆ ಮಾತನಾಡೋಣ. ಆದರೆ, ನಮ್ಮನ್ನು ಒಂದು ದೇಶವಾಗಿ, ಒಂದು ರಾಷ್ಟ್ರವಾಗಿ, ಒಂದು ಖಂಡವಾಗಿ, ಅದು ನಮ್ಮನ್ನೆಲ್ಲಿಗೆ ಕರೆದೊಯ್ದಿದೆ?

ಸದ್ಗುರು: ನಾವು ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳೋಣ. ಇಲ್ಲಿ, ನಾವು ಯಾವಾಗಲೂ ವೈಯಕ್ತಿಕ ಅಭಿವೃದ್ಧಿಯ ಮೇಲೆ ಗಮನಹರಿಸಿದ್ದೆವು. ಅತ್ಯುತ್ತಮ ಮಾನವರನ್ನು ಸೃಷ್ಟಿಸಿದ ಹೊರತು ಮಹಾನ್ ರಾಷ್ಟ್ರವಿರುವುದಿಲ್ಲ, ಅತ್ಯುತ್ತಮ ಸಂಸ್ಕೃತಿಯಿರುವುದಿಲ್ಲ, ಅಸಾಧಾರಣವಾದ ಪ್ರಪಂಚವಿರುವುದಿಲ್ಲ. ಪ್ರಪಂಚ, ರಾಷ್ಟ್ರ, ಸಮಾಜ - ಇವುಗಳು ಕೇವಲ ಪದಗಳು. ನೀವು ಮತ್ತು ನಾನು, ಅಷ್ಟೆ. ನಾವು ಯಾವ ಪ್ರಕಾರದ ಜನರೋ, ಅದೇ ತೆರನಾದ ಸಮಾಜ, ರಾಷ್ಟ್ರ, ಪ್ರಪಂಚದಲ್ಲಿ ನಾವು ಜೀವಿಸುತ್ತೇವೆ.

ಹೀಗೆ, ನಾವು ಯಾವಾಗಲೂ ವೈಯಕ್ತಿಕ ಅಭಿವೃದ್ಧಿಯ ಮೇಲೆ ಕೇಂದ್ರಿತವಾಗಿದ್ದೆವು. ಇದರಲ್ಲಿ, ನಾವು ಉತ್ಕೃಷ್ಟರಾದ ಮಾನವರನ್ನು ಸೃಷ್ಟಿಸಿದ್ದೇವೆ. ಉತ್ಕೃಷ್ಟರಾದ ಮಾನವರನ್ನು ಸಾವಿರಾರು ವರ್ಷಗಳಿಂದ ಸೃಷ್ಟಿಸುತ್ತಿರುವೆವು – ಇವರುಗಳೇ ನಮ್ಮ ಅತ್ಯದ್ಭುತವಾದ ಸಂಸ್ಕೃತಿಯನ್ನು ಸೃಷ್ಟಿಸಿದ್ದು.

ಕಂಗನಾ: ಸದ್ಗುರು, ಇಂದಿನ ದಿನಗಳಲ್ಲಿ, ನಡೆಯುತ್ತಿರುವ ವ್ಯಾಪಕವಾದ ಚರ್ಚೆಯು ನಿರಾಶ್ರಿತರ ಬಗ್ಗೆಯಾಗಿದೆ. ನಮ್ಮವರೇ ಹಸಿವಿನಿಂದ ಕಂಗಾಲಾಗಿರುವಾಗ, ಅವರುಗಳು ಲಕ್ಷೋಪಲಕ್ಷವಾಗಿ, ಲಕ್ಷೋಪಲಕ್ಷವಾಗಿ ಬರುತ್ತಿದ್ದಾರೆ.

ಸದ್ಗುರು: ನಾವು ನಮ್ಮ ಅಸಾಮರ್ಥ್ಯವನ್ನು ಸಹಾನುಭೂತಿಯೆಂದು ತೋರಿಸಲು ಪ್ರಯತ್ನಿಸುತ್ತಿದ್ದೇವೆ. ನನಗಿದು ಇಷ್ಟವಿಲ್ಲ. ನಮ್ಮ ಗಡಿಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ತಿಳಿದಿಲ್ಲ, ಆದರೆ ಸಹಾನುಭೂತಿಯ ಬಗ್ಗೆ ಮಾತನಾಡುತ್ತಿದ್ದೇವೆ - ಅದು ಸತ್ಯವಲ್ಲ. ಎಲ್ಲೋ ಹಿಂಸಾತ್ಮಕವಾಗಿ ಶೋಷಣೆಗೆ ಒಳಗಾದವರು ನಮ್ಮ ದೇಶದ ಬಾಗಿಲಿಗೆ ಬಂದರೆ, ಅವರನ್ನು ಬೇರೆಯಾದ ರೀತಿಯಲ್ಲಿ ಪರಿಗಣಿಸಬೇಕು. ಎಷ್ಟಾದರೂ, ಅವರು ಮನುಷ್ಯರು ತಾನೇ. ಆದರೆ, ಆರ್ಥಿಕ ಸಮೃದ್ಧಿಗೆ, ಪ್ರವೇಶಸಾಧ್ಯವಾದ ಗಡಿಗಳಾದ್ಯಂತ ಜನರು ಅಲ್ಲಿ ಇಲ್ಲಿ ನುಸುಳುತ್ತಲೇ ಇರುತ್ತಾರೆ – ಅದರ ಬಗ್ಗೆ ನಾವು ಏನನ್ನಾದರೂ ಮಾಡಬೇಕಿದೆ. ಜನರಿಗೆ ಒಳಗೆ ಬರಲು ಅನುಮತಿ ನೀಡಿ, ಅವರಿಗೆ ರೇಷನ್ ಕಾರ್ಡ್ ಮತ್ತು ಗುರುತಿನ ಚೀಟಿಗಳನ್ನು ಹೊಣೆಗಾರಿಕೆಯಿಲ್ಲದೆ ಕೊಟ್ಟಿದ್ದೇ ಆದರೆ, ಅದೊಂದು ದುರಂತವಾಗುತ್ತದೆ. ಭವಿಷ್ಯದಲ್ಲಿ ಇದು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಶದಲ್ಲಿ ಯಾರಿದ್ದಾರೆಂದು ಗೊತ್ತಿಲ್ಲದೆ ದೇಶವನ್ನು ನಡೆಸುವುದು ಸಾಧ್ಯವಿಲ್ಲ.

ಸದ್ಗುರು: ನೋಡಿ, ನಿಮಗೆ ನಿಜವಾಗಿಯೂ ಒಳಗೊಳ್ಳುವಿಕೆಯು ಬೇಕಿದ್ದಲ್ಲಿ, ಎರಡು ದೇಶಗಳನ್ನು ಒಂದನ್ನಾಗಿ ಮಾಡಬಹುದು. ಹೌದು. ನಾವು ಬಾಂಗ್ಲಾದೇಶವನ್ನು ಒಂದು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿ ನಮ್ಮ ದೇಶದ ಭಾಗವನ್ನಾಗಿ ಮಾಡಬಹುದು. ನೀವಿದಕ್ಕೆ ಸಿದ್ಧರಿದ್ದರೆ - ಭಾರತವು ಇದಕ್ಕೆ ಸಿದ್ಧವಾಗಿದೆಯೆಂದು ನಾನು ಭಾವಿಸುತ್ತೇನೆ. ನೀವು ಒಳಗೊಳ್ಳುವಿಕೆಯ ಬಗ್ಗೆ ಮಾತನಾಡಿದರೆ, ಅದೇ ಸೇರಿಸಿಕೊಳ್ಳುವ ಮಾರ್ಗ, ಅಲ್ಲವೇ? ಹಿಂಬಾಗಿಲಿನಿಂದ ನನ್ನ ಮನೆಯೊಳಗೆ ನುಗ್ಗಿ, “ನನ್ನನ್ನು ಸೇರಿಸಿಕೊಳ್ಳಿ." ಎಂದು ಹೇಳುವುದಲ್ಲ. ಅದು ಹಾಗೆ ನಡೆಯುವುದಿಲ್ಲ.

ಕಂಗನಾ: ಸರಿ, ಈಗ, ನಿಮಗೆ ತುಂಬಾ ಇಷ್ಟವಾದ ವಿಷಯಕ್ಕೆ ಬರೋಣ.

ಸದ್ಗುರು: ಅದ್ಯಾವುದು.......? ನೀವು ಅದನ್ನೆಲ್ಲ ಗೊತ್ತುಮಾಡಿಕೊಂಡಿದ್ದೀರೆಂದು ನನಗೆ ತಿಳಿದಿರಲಿಲ್ಲ.

ಕಂಗನಾ: ಶಿವನ ಬಗ್ಗೆ ಮಾತನಾಡೋಣ.

ಸದ್ಗುರು: ಓಹ್!

ಕಂಗನಾ: ಶಿವ ಇದರ ಬಗ್ಗೆ ಓದಿ, ಯೋಗಾಭ್ಯಾಸಗಳನ್ನು ಮಾಡಿ ಮತ್ತು ನಿಮ್ಮ ಜೊತೆ ಕಾಲ ಕಳೆಯುವುದರಿಂದ ನಾನು ಅರ್ಥ ಮಾಡಿಕೊಂಡಿರುವುದು ಏನೆಂದರೆಯಾರೋ ಅಲ್ಲಿ ಮೇಲೆ ಕುಳಿತು ನಮ್ಮೆಲ್ಲರನ್ನು ನೋಡುತ್ತಿರುವವನು ಶಿವನಲ್ಲ. ಶಿವನೆಂದರೆ ಒಂದು ಆಯಾಮ. ವಿಜ್ಞಾನದಲ್ಲಿ ಹೇಳಿರುವಂತೆ, ಅದೊಂದು ಕಪ್ಪುಕುಳಿ– ಎಲ್ಲಿ ಶೂನ್ಯವೇ ಬ್ರಹ್ಮಾಂಡದ ಮೂಲವೆಂದು ತೋರುತ್ತದೆ. ಆದಿಯೋಗಿಗೆ ಈ ಆಯಾಮದ ಲಭ್ಯತೆಯಿದೆ. ಆದರೆ, ನಿಮಗೆ ಆದಿಯೋಗಿಯ ಬಗ್ಗೆ ಈ ಗೀಳೇಕೆ? ಪೆಟ್ಟಿಗೆಯೊಳಗೇನಿದೆಯೆಂದು ನೋಡುವ ಬದಲಾಗಿ ಬರೀ ಪೆಟ್ಟಿಗೆಯನ್ನು ನೋಡಿದಂತಾಗುವುದಿಲ್ಲವೆ? ಹಾಗಲ್ಲವೆ ಇದು?

ಸದ್ಗುರು: ಇಲ್ಲಿಯವರೆವಿಗೂ ಅವನ ಬಗ್ಗೆ ಚಕಾರ ಎತ್ತಿಲ್ಲ. ನೀವೇ ಅವನ ವಿಷಯ ಶುರು ಮಾಡಿದ್ದು!

ಕಂಗನಾ: ಹಾಗಾಲ್ಲ, ನೀವು ಆದಿಯೋಗಿಯ ಮೂರ್ತಿಯನ್ನು ಸ್ಥಾಪಿಸಿದ್ದೀರ ಮತ್ತು......

ಸದ್ಗುರು: ಹೌದು. ಅದಾಗಿ ಇನ್ನೂ ಒಂದೂವರೆ ವರ್ಷವಾಗಿದೆ ಅಷ್ಟೆ. ಆದರೆ, ನಾನು ಮೂವತ್ತಾರು ವರ್ಷಗಳ ಕಾಲ ಏನು ಮಾಡುತ್ತಿದ್ದೆ ಎಂದು ನೀವು ಸರಿಯಾಗಿ ನೋಡಿಲ್ಲ. ಆ ವಿಷಯಕ್ಕೆ ಬರೋಣ, ಅದು ಪರವಾಗಿಲ್ಲ. ನೋಡಿ, ಆದಿಯೋಗಿ ಒಂದು ಗೀಳಲ್ಲ, ಆದಿಯೋಗಿಯು ಒಂದು ಪೂರ್ವಸಿದ್ಧತೆ.

ನೀವು ಶೂನ್ಯತೆಯ (ನಾಸ್ತಿ) ಕುರಿತಾಗಿ ಮಾತನಾಡಿದಿರಿ. ನಿಮಗೆ ಶೂನ್ಯತೆ ಅಥವಾ  ನಾಸ್ತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ, “ನ” ಮತ್ತು “ಅಸ್ತಿ” ಗಳ ಮಧ್ಯೆ ಒಂದು ಅಡ್ಡಗೆರೆಯನ್ನು ಹಾಕಿ. ಅದು “ಇಲ್ಲದಿರುವಿಕೆ”. ಹಾಗಂದರೆ, ಅದು ಅಸ್ತಿತ್ವದಲ್ಲಿಲ್ಲ ಎಂದರ್ಥವಲ್ಲ. ಈಗ ವಿಜ್ಞಾನವು ಶೂನ್ಯತೆಯ ಬಗ್ಗೆ - ಅಂದರೆ, ಅಸ್ತಿತ್ವದ ಅಭೌತಿಕ ಆಯಾಮದ ಬಗ್ಗೆ ಚರ್ಚಿಸುತ್ತಿದೆ; ಶೂನ್ಯವಾಗಿದ್ದೇ ಇರುವ ಪ್ರಬಲವಾದ ಶಕ್ತಿಯಿದು. ಇಲ್ಲಿರುವ ಎಲ್ಲಾ ಭೌತಿಕ ವಸ್ತುಗಳ ಮೂಲವು “ಶೂನ್ಯ” ಅಥವಾ “ನಾಸ್ತಿ” ಅಥವಾ “ಶಿವ”ನಿಂದ ಬರುತ್ತದೆ.

ಕಂಗನಾ: ಸರಿ, ನನ್ನ ಕೊನೆಯ ಪ್ರಶ್ನೆಯಿರುವುದು ನಮ್ಮ ಯುವಜನರ ಬಗ್ಗೆ. ಪ್ರತಿ ಗಂಟೆಗೂ, ಒಬ್ಬ ಯುವಕ / ಯುವತಿ ಆತ್ಮಹತ್ಯೆ ಮಾಡುಕೊಳ್ಳುತ್ತಿದ್ದಾರೆ ಎಂದು ಅಂಕಿಅಂಶಗಳು ನಮಗೆ ಸ್ಪಷ್ಟವಾಗಿ ಹೇಳುತ್ತಿವೆ. ಇದರ ಕಾರಣವೇನಿರಬಹುದು?

 ೨೦೧೭-ರಲ್ಲಿ, ನಮ್ಮ ದೇಶದಲ್ಲಿ, ಹದಿನೈದು ವರ್ಷದ ಕೆಳಗಿನ ೭೬೦೦ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಗುರು: ಆತ್ಮಹತ್ಯೆಯು ಸಂತೋಷದ ಅನುಭವವನ್ನು ನೀಡುವ ವಿಷಯವಲ್ಲ. ಆ ನಿರ್ಧಾರಕ್ಕೆ ಬರಲು ಮಾನಸಿಕವಾಗಿ ಆ ವ್ಯಕ್ತಿಯು ಏನನ್ನು ಸಹಿಸಿಕೊಂಡಿರುತ್ತಾರೆ ಎಂಬುದನ್ನು ನೀವು ನೋಡಬೇಕು. ಅವರ ಜೀವನದ ಅತ್ಯಂತ ಭಯಾನಕವಾದ ಭಾಗವಿದು. ಭೌತಿಕ ಸಂದರ್ಭಗಳು, ಹಣಕಾಸಿನ ಸನ್ನಿವೇಶಗಳು ಅಥವಾ ಭಾವನಾತ್ಮಕ ಸನ್ನಿವೇಶಗಳು – ಇವುಗಳಲ್ಲಿ ಯಾವುದೋ ಒಂದರ ಬಲೆಗೆ ಸಿಕ್ಕಿಹಾಕಿಕೊಂಡಿರುತ್ತಾರೆ. ಎಷ್ಟರ ಮಟ್ಟಿಗೆ ಸಿಕ್ಕಿಹಾಕಿಕೊಂಡಿರುತ್ತಾರೆ - ಬೇರೆ ದಾರಿಯೇ ಇಲ್ಲದೆ, ನಾವು ಆತ್ಮಹತ್ಯೆ ಎಂದು ಕರೆಯುವ, ಇಂತಹ ಘೋರವಾದ ವಿದಾಯಕ್ಕೆ ಶರಣಾಗುತ್ತಾರೆ.

ಇದು ಏತಕ್ಕಾಗಿ ನಡೆಯತ್ತಿದೆ? ೨೦೧೭-ರಲ್ಲಿ, ನಮ್ಮ ದೇಶದಲ್ಲಿ, ಹದಿನೈದು ವರ್ಷದ ಕೆಳಗಿನ ೭೬೦೦ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹದಿನೈದು ವರ್ಷದ ಕೆಳಗಿನ ಮಕ್ಕಳು! – ಬದುಕುವ ಆಸೆ ಮತ್ತು ಉತ್ಸಾಹವು ಅವರಲ್ಲಿ ತುಂಬಿತುಳಕಾಡುತ್ತಿರುವಾಗ. ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸಿದರೆ, ಅದರ ಅರ್ಥವೇನು? ಎಲ್ಲೋ ಒಂದು ಕಡೆ, ನಮ್ಮನ್ನು ನಾವು ಹತಾಶೆಯ ಕಡೆಗೆ ಕೊಂಡೊಯ್ಯುತ್ತಿದ್ದೇವೆ. ಇವೆಲ್ಲದಕ್ಕೂ ಒಂದು ಪ್ರಮುಖ ಕಾರಣವೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆ.

ತಾರುಣ್ಯವೆಂದರೆ ಉತ್ಸಾಹಭರಿತ ಶಕ್ತಿ. ಆದರೆ, ಬಹಳಷ್ಟು ಸಮಯ, ನಮ್ಮ ಯುವಜನರೊಂದಿಗಿನ ಸಮಸ್ಯೆಯೆಂದರೆ, ಅಗತ್ಯವಾದ ಸ್ಪಷ್ಟತೆ ಅಥವಾ ಸಮತೋಲನವನ್ನು ಅವರು ಹೊಂದಿಲ್ಲದಿರುವುದು. ಸೆಪ್ಟೆಂಬರ್ ತಿಂಗಳಿನಲ್ಲಿ, ನಾವು “ಸತ್ಯ ಮತ್ತು ಯುವಶಕ್ತಿ” (Youth N Truth) ಎಂಬ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ. ದೇಶಾದ್ಯಂತ, ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ನಾವು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ನೀವು, ನಿಮ್ಮ ಉದ್ಯಮದಲ್ಲಿರುವ ನಿಮ್ಮೆಲ್ಲಾ ಸ್ನೇಹಿತರು ಮತ್ತು ಮಾಧ್ಯಮದವರು ಇದರ ಭಾಗವಾಗಿರಬೇಕೆನ್ನುವುದು ನಮ್ಮ ನಿರೀಕ್ಷೆ.

ಅವಶ್ಯಕ ಸ್ಪಷ್ಟತೆ, ಸಾಮರ್ಥ್ಯ ಮತ್ತು ಸಮತೋಲನವಿಲ್ಲದ ಇಂತಹ  ಭಾರಿ ಯುವಜನತೆ - ಇವರು ಜಗತ್ತಿನ ಅತಿ ದೊಡ್ಡ ಪ್ರಮಾದವಾಗಬಹುದು. ಆದರೆ ಇವರನ್ನೇ ನಾವು ಸರಿಯಾಗಿ ಸಂಘಟಿಸಿದರೆ, ನಾವು ಜಗತ್ತಿನ ಅತಿ ದೊಡ್ಡ ಪವಾಡವಾಗಬಹುದು.

ಕಂಗನಾ: ಹಾಗಾಗಿ, ಇದರಲ್ಲಿ ಭಾಗವಹಿಸುವ ಎಲ್ಲ ಯುವಜನರಿಗೆ ನನ್ನ ಸಂದೇಶವಿದು – ಸದ್ಗುರುಗಳನ್ನು ನೀವು ಎಲ್ಲಾ ರೀತಿಯ ಪ್ರಶ್ನೆಗಳು – ಋತುಚಕ್ರ, ಲೈಂಗಿಕತೆ ಮತ್ತು ಮಾದಕವಸ್ತುಗಳ ಬಗ್ಗೆ - ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳಬಹುದು.

ಸದ್ಗುರು: ಇದನ್ನು “Youth and Truth – Unplug with Sadhguru.” ಎಂದು ಸಾದರ ಪಡಿಸಲಾಗುತ್ತಿದೆ. ಯಾವ ಪ್ರಶ್ನೆ ಯನ್ನಾದರೂ ಕೇಳಿ, ಯಾವ ವಿಷಯವೂ ನಿಷಿದ್ಧವಲ್ಲ.

ಸಪ್ರೇಮ ಆಶೀರ್ವಾದಗಳೊಂದಿಗೆ