ಆದಿಯೋಗಿ ಯಾರೆಂದು ಅರಿತುಕೊಳ್ಳಿ
ಈ ಲೇಖನದಲ್ಲಿ ಸದ್ಗುರುಗಳು ಆದಿಯೋಗಿಯನ್ನು ಯೋಗದ ಸಂಸ್ಥಾಪಕನೆಂದು ಗುರುತಿಸುವುದರ ಪ್ರಾಮುಖ್ಯತೆಯ ಬಗ್ಗೆ ಬರೆಯುತ್ತಾರೆ. “ಯೋಗ ವಿಜ್ಞಾನವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು ಅವನೆ ಎನ್ನುವುದನ್ನು ಭೂಮಿ ಮೇಲಿನ ಪ್ರತಿಯೊಬ್ಬರೂ ಸಹ ತಿಳಿಯಬೇಕು. ಕಳೆದ ಐದು-ಆರು ವರ್ಷಗಳಲ್ಲಿ (ಇದು 2013-ರಲ್ಲಿ ಹೇಳಿದ್ದು) ಭಾರತವು ಯೋಗದ ಮೂಲವಲ್ಲವೆಂದು, ಅದು ಯುರೋಪಿನ ವ್ಯಾಯಾಮ ವ್ಯವಸ್ಥೆಯ ವಿಕಸನವೆಂದು ಯುರೋಪಿನಲ್ಲಿ ನಾಲ್ಕು ಪ್ರಮುಖ ಪುಸ್ತಕಗಳು ಪ್ರಕಟಗೊಂಡಿವೆ”. ಎಂದವರು ಹೇಳುತ್ತಾರೆ.
ಮಾನವನು ಪ್ರಕೃತಿ ನಿರ್ಧಾರಿತ ಮಿತಿಗಳ ಹಿಡಿತದಲ್ಲಿರುವ ಅಗತ್ಯವಿಲ್ಲವೆಂಬ ಸಾಧ್ಯತೆಯನ್ನು ಆದಿಯೋಗಿಯು ಹೊರತಂದನು. ಭೌತಿಕತೆಯಲ್ಲಿದ್ದೂ ಅದರ ಭಾಗವಾಗದಿರಲು ಒಂದು ಮಾರ್ಗವಿದೆ. ದೇಹದಲ್ಲಿದ್ದುಕೊಂಡೇ ದೇಹವಾಗದಿರಲು ಒಂದು ದಾರಿಯಿದೆ. ಮನಸ್ಸಿನ ದುಃಖಗಳನ್ನರಿಯದೇ, ಅದನ್ನು ಅಧಿಕತಮ ಸಂಭವನೀಯ ರೀತಿಯಲ್ಲಿ ಬಳಸಲು ಒಂದು ಮಾರ್ಗವಿದೆ. ಅಸ್ತಿತ್ವದ ಯಾವುದೇ ಆಯಾಮದಲ್ಲಿ ನೀವಿದ್ದರೂ, ಅದನ್ನು ಮೀರಿಹೋಗಬಹುದು - ಜೀವಿಸಲು ಬೇರೊಂದು ಮಾರ್ಗವಿದೆ. ಅವನಂದ, "ನಿಮ್ಮ ಮೇಲೆ ನೀವು ಅಗತ್ಯವಾದ ಕಾರ್ಯಗೈದರೆ, ನಿಮ್ಮ ಈಗಿನ ಮಿತಿಗಳಾಚೆಗೆ ನೀವು ವಿಕಸಿತರಾಗಬಹುದು." ಮತ್ತು ಹೇಗೆ ವಿಕಸಿತರಾಗಬೇಕೆನ್ನುವುದಕ್ಕೆ ಅವನು ವಿಧಾನಗಳನ್ನು ನೀಡಿದನು. ಆದಿಯೋಗಿಯ ಮಹತ್ವ ಇದೇ.
ನಾನು ಸಾವನ್ನಪ್ಪುವ ಮುನ್ನ, ಮಾನವತೆಗೆ ಅವನು ನೀಡಿದ ಕೊಡುಗೆಯು ಗುರುತಿಸಲ್ಪಡುವುದನ್ನು ನಾನು ಖಚಿತಪಡಿಸಿಕೊಳ್ಳಬೇಕು. ಇದನ್ನು ಕಾರ್ಯಗತಗೊಳಿಸುವ ಹಲವಾರು ಹಂತಗಳಿಲ್ಲಿದ್ದೇವೆ. ಒಂದು ವಿಷಯವೆಂದರೆ ನಾವು ಆದಿಯೋಗಿಯ ದೇವಾಲಯಗಳನ್ನು ನಿರ್ಮಿಸುತ್ತಿದ್ದೇವೆ. ಇದು ಇಪ್ಪತ್ತೊಂದು ಅಡಿ ಎತ್ತರದ ಕಂಚಿನ ಆದಿಯೋಗಿಯ ಜೊತೆ ಆತನ ಮುಂದೆ ಒಂದು ಪ್ರಾಣ ಪ್ರತಿಷ್ಠಿತಗೊಳಿಸಿದ ಲಿಂಗವನ್ನು ಹೊಂದಿರುತ್ತದೆ. ಇದೊಂದು ಶಕ್ತಿಯುತ ಸ್ಥಳ. ಮೊದಲನೆಯದು ಅಮೇರಿಕಾದ ಟೆನೆಸ್ಸಿಯಲ್ಲಿನ ನಮ್ಮ ಆಶ್ರಮದಲ್ಲಿ ಸ್ಥಾಪಿತವಾಗಿದೆ.
ಈ ಜಗತ್ತಿನಲ್ಲಿರುವವರೆಲ್ಲರಿಗೂ ಯೋಗ ವಿಜ್ಞಾನವನ್ನು ನಮಗೆ ಕೊಟ್ಟವನು ಅವನು ಎಂದು ತಿಳಿಯಬೇಕು. ಕಳೆದ ಐದು-ಆರು ವರ್ಷಗಳಲ್ಲಿ (ಇದು 2013-ರಲ್ಲಿ ಹೇಳಿದ್ದು) ಭಾರತವು ಯೋಗದ ಮೂಲವಲ್ಲವೆಂದು, ಅದು ಯುರೋಪಿನ ವ್ಯಾಯಾಮ ವ್ಯವಸ್ಥೆಯ ವಿಕಸನವೆಂದು ಯುರೋಪಿನಲ್ಲಿ ನಾಲ್ಕು ಪ್ರಮುಖ ಪುಸ್ತಕಗಳು ಪ್ರಕಟವಾದವು. ಇದೇ ರೀತಿ, ಅವರು ಇನ್ನೂ ಹತ್ತು ಹದಿನೈದು ಪುಸ್ತಕಗಳನ್ನು ಬರೆದರೆ, ಅದೇ ಸತ್ಯವಾಗಿಬಿಡುತ್ತದೆ. ನಿಮ್ಮ ಪಠ್ಯಕ್ರಮದಲ್ಲಿ ನೀವೇನನ್ನು ಇತಿಹಾಸವೆಂದು ಓದುತ್ತೀರೋ, ಅದನ್ನೇ ಸತ್ಯವೆಂದು ನಂಬುತ್ತೀರಿ. ಅದು ಸತ್ಯವಲ್ಲ, ಅದು ಹೆಚ್ಚಾಗಿ ಪಟ್ಟಭದ್ರ ಹಿತಾಸಕ್ತಿಗಳಿಂದ ಬರೆಯಲ್ಪಟ್ಟಿದೆ. ಹಾಗಾಗಿ, ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಇಪ್ಪತ್ತೈದರಿಂದ ಐವತ್ತು ಪುಸ್ತಕಗಳನ್ನು ಬರೆದರೆ, ಕಾಲ ಕಳೆದಂತೆ, ಎಲ್ಲರೂ ಯೋಗ ಹುಟ್ಟಿದ್ದು ಕ್ಯಾಲಿಫೋರ್ನಿಯದಲ್ಲಿ, ಅಥವಾ ಯೋಗವನ್ನು ಆವಿಷ್ಕರಿಸಿದ್ದು ಮಡೋನಾ ಎಂದು ಹೇಳುತ್ತಾರೆ. ಇದು ನಗುವ ವಿಷಯವಲ್ಲ, ಇದನ್ನು ಸುಲಭವಾಗಿ ಮಾಡಬಹುದು. ಏನನ್ನಾದರೂ ಬರೆಯಲು ಸಿದ್ಧರಿರುವ ಜನರಿದ್ದಾರೆ. ಕೆಲ ಪ್ರಸಿದ್ಧ ಪುಸ್ತಕಗಳು ಇದನ್ನೇ ಹೇಳುತ್ತಿವೆ. ಡ್ಯಾನ್ ಬ್ರೌನ್, ಅವರ ಎಂಜೆಲ್ಸ್ ಅಂಡ್ ಡೀಮನ್ಸ್ ಪುಸ್ತಕದಲ್ಲಿ, ಯೋಗವು ಪ್ರಾಚೀನ ಬೌದ್ಧಕಲೆಯೆಂದು ಹೇಳುತ್ತಾರೆ. ಗೌತಮನು ಇದ್ದಿದ್ದು ಕೇವಲ ಎರಡೂವರೆ ಸಾವಿರ ವರ್ಷಗಳ ಹಿಂದೆ, ಆದಿಯೋಗಿಯು ಹದಿನೈದು ಸಾವಿರ ವರ್ಷಗಳ ಹಿಂದಿದ್ದ. ಈಗ ಗೌತಮ ಎನ್ನುತ್ತೀರಿ, ನಾಳೆ ನೀವು ಮಡೋನಾ ಎನ್ನುವಿರಿ. ನೀವೊಂದಷ್ಟು ಪುಸ್ತಕಗಳನ್ನು ಬರೆದರೆ, ಅದೇ ಸತ್ಯವಾಗುತ್ತದೆ. ಹಾಗಾಗಿ ನಾನು ಸಾಯುವ ಮೊದಲು, ಯೋಗವು ಹುಟ್ಟಿದ್ದು ಅವನಿಂದ, ಅವನಿಂದಲ್ಲದೆ ಇನ್ಯಾರಿಂದಲೂ ಅಲ್ಲವೆಂದು ಎಲ್ಲರೂ ತಿಳಿಯುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಆಶಯ.
ನಾವಿದನ್ನು ಮಾಡಲೇ ಬೇಕಿದೆ, ಏಕೆಂದರೆ ಭಾರತದ ಗುಣವಿಶೇಷತೆಯೆಂದರೆ ಇದು ಜಿಜ್ಞಾಸುಗಳ ನಾಡು. ನಾವು ಮತಶ್ರದ್ಧಾಳುಗಳಲ್ಲ, ನಾವು ಮುಕ್ತಿಯ ಅನ್ವೇಷಕರು. ಅದೇ ನಮ್ಮನ್ನಿನ್ನೂ ಒಟ್ಟಿಗೆ ಇಟ್ಟಿರುವುದು. ನೀವು ಒಂದು ನೂರು ಕಿಲೋಮೀಟರ್ ದೂರ ಪ್ರಯಾಣಿಸಿದರೆ, ಜನರು ನೋಡಲು ವಿಭಿನ್ನವಾಗಿರುತ್ತಾರೆ, ಬೇರೆ ಬೇರೆ ಭಾಷೆ ಮಾತನಾಡುತ್ತಾರೆ, ಅವರ ಊಟ ಬೇರೆಯಾಗಿರುತ್ತದೆ, ಅವರು ಉಡುಪುಗಳು ಬೇರೆಯಾಗಿರುತ್ತದೆ, ಎಲ್ಲವೂ ಬೇರೆಯಾಗಿರುತ್ತದೆ. ರಾಜಕೀಯವಾಗಿ, ನಾವು ಒಂದು ಸಮಯದಲ್ಲಿ ಎರಡು ನೂರು ಭಾಗಗಳಾಗಿದ್ದರೂ, ಹೊರಗಿನ ಜನರು ಇದನ್ನು "ಹಿಂದೂಸ್ಥಾನ್" ಅಥವಾ "ಭಾರತ" ಎಂದೇ ಹೇಳುತ್ತಿದ್ದರು, ಏಕೆಂದರೆ ನಮ್ಮ ನಾಡಿನ ವಿಚಿತ್ರತೆಯೇನೆಂದರೆ ನಮ್ಮದು ಜಿಜ್ಞಾಸುಗಳ ನಾಡು, ನಾವು ನಂಬಿಕೆಯ ಕಟ್ಟುಪಾಡುಗಳಿಗೆ ಅಂಟಿಕೊಂಡವರಲ್ಲ.
ರಾಮ, ಕೃಷ್ಣರು ಏನು ಹೇಳಿದರು, ವೇದೋಪನಿಷತ್ತುಗಳು ಏನು ಹೇಳುತ್ತವೆ, ಯಾರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಾಗುವುದಿಲ್ಲ - ಈ ನಾಡಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಅವರದೇ ಸತ್ಯವನ್ನು ಹುಡುಕಬೇಕು. ನೀವೇ ನಿಮ್ಮ ಮುಕ್ತಿಯನ್ನು ಅರಸಬೇಕು, ಏಕೆಂದರೆ ನಮ್ಮದು ಜಿಜ್ಞಾಸುಗಳ ನಾಡು, ನಿಗ್ರಹಿಸುವವರ ನಾಡಲ್ಲ. ನೀವು, ಭೂಮಿ ಮೇಲಿನ ಮಾನವತೆಯನ್ನು ಮತಧರ್ಮಗಳಲ್ಲಿ ನಂಬಿಕೆಯನ್ನಿಟ್ಟವರಾಗಲ್ಲದೆ, ಎಲ್ಲರನ್ನೂ ಜಿಜ್ಞಾಸುಗಳನ್ನಾಗಿ ಮಾಡಿದರೆ, ವಶ ಪಡಿಸಿಕೊಳ್ಳವುದು ಎನ್ನುವಂತದ್ದೇನೂ ಇರುವುದಿಲ್ಲ. ಹಿಂಸೆಗಿರುವ ಮೂಲ ಉತ್ತೇಜನವು ಇಲ್ಲವಾಗುತ್ತದೆ. ಜನರು ಸಣ್ಣ ವಿಷಯಗಳಿಗೆ ಹೊಡೆದಾಡಬಹುದು, ಆದರೆ ದೊಡ್ಡ ಹೊಡೆದಾಟವು ನಿಂತಂತೆಯೇ. ನಾನು ಒಂದು ವಿಷಯವನ್ನು ನಂಬಿ, ನೀವು ಇನ್ನೊಂದು ವಿಷಯವನ್ನು ನಂಬುವುದರಿಂದ, ಅಂತ್ಯವಿಲ್ಲದ ಘರ್ಷಣೆಯಿರುತ್ತದೆ.
ವಿಜ್ಞಾನಿಗಳು ಇಂದು ಒಪ್ಪಿಕೊಳ್ಳುತ್ತಿರುವ ಹಾಗೆ, ವಿಶ್ವದ ಸ್ವರೂಪವೇನೆಂಬುದು ನಿಮಗೆ ತಿಳಿದಿಲ್ಲವೆಂದು ನೀವು ಅರಿತಾಗ, ಯಾರೊಂದಿಗೆ ಹೋರಾಡುತ್ತೀರ? "ವಿಶ್ವವನ್ನು ಸೃಷ್ಟಿಸಿದ್ದು ನನ್ನ ದೇವರು, ನಿಮ್ಮ ದೇವರಲ್ಲ." ಇದೇ ಈಗಿನ ಸಮಸ್ಯೆ. ತನಗೆ ತಿಳಿದಿಲ್ಲವೆನ್ನುವುದನ್ನು ಅರಿತವನೇ ಜಿಜ್ಞಾಸು. ಈ ಒಂದು ವಿಷಯವು ಮಾನವತೆಗೆ ಅರ್ಥವಾದರೆ, ಹಿಂಸೆಗೆ ಇರುವ 99 % ರಷ್ಟು ಉತ್ತೇಜನ ಕಡಿಮೆಯಾಗುತ್ತದೆ.
ಆದ್ದರಿಂದ ಇದನ್ನು ಮರಳಿ ತರಲು, ಆದಿಯೋಗಿಗಿಂತ ಉತ್ತಮ ಸ್ಫೂರ್ತಿ ಬೇರಿಲ್ಲ. ಮತ್ತು ನಾವು ಅವನನ್ನು ಅನೇಕ ವಿಧಗಳಲ್ಲಿ ವ್ಯಕ್ತಗೊಳಿಸಬೇಕು ಎಂದಿದ್ದೇವೆ.