ಮನುಷ್ಯರು ಕೇವಲ ಒಬ್ಬ ಸಂಗಾತಿಯನ್ನು ಹೊಂದುವುದೇ ಸ್ವಾಭವಿಕವೇ ಮತ್ತು ಪ್ರತ್ಯೇಕವಾದ ಹಾಗೂ ಬದ್ಧತೆಯಿಂದಿರುವ ಸಂಬಂಧವನ್ನು ಹೊಂದುವುದು ಉತ್ತಮವೇ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.

ಪ್ರಶ್ನೆ: ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಒಬ್ಬ ಸಂಗಾತಿ ಮಾತ್ರ ಹೊಂದಬೇಕೆಂದು ದೇವರು ಉದ್ದೇಶಿಸುತ್ತಾನೆಯೇ? ಒಬ್ಬ ವ್ಯಕ್ತಿಯು ಪ್ರತ್ಯೇಕವಾದ ಹಾಗೂ ಬದ್ಧತೆಯಿಂದಿರುವ ಸಂಬಂಧವನ್ನು ಹೊಂದುವುದು ಉತ್ತಮವೇ ?

ಸದ್ಗುರು: ದೇವರು ನಿಮಗಾಗಿ ಯಾವುದೇ ಉದ್ದೇಶಗಳನ್ನು ಹೊಂದಿಲ್ಲದಿರಬಹುದು. ಇಲ್ಲಿನ ವಿಚಾರವೇನೆಂದರೆ, ನೀವು ಮಾಡುವುದು ಸಂವೇದನಾಶೀಲವಾಗಿದೆಯೆ? ಇದಕ್ಕೆ ಎರಡು ಅಂಶಗಳಿವೆ - ಮೊದಲನೆಯದು ಸಾಮಾಜಿಕ. ಸಾಮಾನ್ಯವಾಗಿ, ಯಾವಾಗಲೂ ಸಮಾಜವನ್ನು ಸುಸ್ಥಿರಗೊಳಿಸುವ ಸಲುವಾಗಿ “ಒಬ್ಬ ಪುರುಷನಿಗೆ - ಒಬ್ಬ ಮಹಿಳೆ” ಎಂದು ಹೇಳುತ್ತಿದ್ದರು. "ಒಬ್ಬ ಪುರುಷನಿಗೆ - ಹಲವಾರು ಮಹಿಳೆಯರು" ಎಂದು ಸಾರಿದ ಪ್ರಪಂಚದ ಕೆಲವು ಭಾಗಗಳಲ್ಲಿ, ಸಮಾಜದ ಸುಸ್ಥಿರತೆ ಕಾಪಾಡಲು ತಮ್ಮ ಬಲದಿಂದಷ್ಟೇ ಆಳಬೇಕಾಯಿತು. ಈ ವಿಷಯದಲ್ಲಿ ಹೆಚ್ಚು ಮುಂದುವರೆಯುವುದು ಬೇಡ.

ಇನ್ನೊಂದು ಅಂಶವೆಂದರೆ, ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳು ನೆನಪನ್ನು ಹೊಂದಿರುತ್ತವೆ. ಲಕ್ಷಾಂತರ ವರ್ಷಗಳ ಹಿಂದೆ ಏನಾಯಿತು ಎಂಬುದನ್ನು ನಿಮ್ಮ ದೇಹವು ಇನ್ನೂ ಸಕ್ರಿಯವಾಗಿ ನೆನಪಿಸಿಕೊಳ್ಳುತ್ತಿದೆ. ಅನುವಂಶೀಯತೆ ಕೇವಲ ನೆನಪು. ಭಾರತೀಯ ಸಂಸ್ಕೃತಿಯಲ್ಲಿ, ಈ ಭೌತಿಕ ನೆನಪನ್ನು ಋಣಾನುಬಂಧ ಎಂದು ಕರೆಯಲಾಗುತ್ತದೆ. ನಿಮ್ಮ ಸುತ್ತಲೂ ನಡೆಯುತ್ತಿರುವ ವಿಷಯಗಳಿಗೆ ಈ ನೆನಪೇ ನಿಮ್ಮನ್ನು ಬಂಧಿಸುತ್ತಿದೆ. ಒಂದು ವೇಳೆ, ನೀವು ಮನೆಗೆ ಹೋದಾಗ, ನಿಮ್ಮ ತಂದೆ ಮತ್ತು ತಾಯಿ ಯಾರೆಂಬ ನೆನಪು ಕಳೆದುಕೊಂಡಿರಿ ಎಂದು ಭಾವಿಸೋಣ, ನೀವು ಏನು ಮಾಡುತ್ತೀರಿ? ನಿಮ್ಮ ತಾಯಿ ಅಥವಾ ತಂದೆ ಎಂಬ ತಿಳುವಳಿಕೆ ನಿಮ್ಮಲ್ಲಿನ ನೆನಪೇ ವಿನಃ ನಿಮ್ಮ ರಕ್ತವೋ ಅಥವಾ ಪ್ರೀತಿಯೋ ಅಲ್ಲ. ನಿಮ್ಮಲ್ಲಿನ ಸಂಬಂಧ ಮತ್ತು ಬಾಂದವ್ಯವನ್ನು ವೃದ್ಧಿಸುವುದು ನಿಮ್ಮ ನೆನಪಷ್ಟೇ. ನಿಮ್ಮ ನೆನಪನ್ನು ನೀವು ಕಳೆದುಕೊಂಡರೆ, ಎಲ್ಲರೂ ನಿಮಗೆ ಸಂಪೂರ್ಣ ಅಪರಿಚಿತರಂತೆಯೇ ಕಾಣುತ್ತಾರೆ.

ಮೆದುಳನ್ನು ಮನಸ್ಸು ಎಂದು ಭಾವಿಸಬೇಡಿ - ಮೆದುಳು ದೇಹವೇ ಆಗಿದೆ.

ನಿಮ್ಮ ದೇಹದ ನೆನಪಿಗೆ ಹೋಲಿಸಿದರೆ ನಿಮ್ಮ ಮನಸ್ಸಿನ ನೆನಪು ಅತ್ಯಂತ ಕಿರಿದಾದುದು. ನೀವು ಏನನ್ನಾದರೂ ಅಥವಾ ಯಾರನ್ನಾದರೂ ಒಮ್ಮೆ ಮುಟ್ಟಿದರೆ, ಮನಸ್ಸು ಅದನ್ನು ಮರೆತುಬಿಡಬಹುದು, ಆದರೆ ದೇಹದಲ್ಲಿ ಅ ನೆನಪು ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಉದಾಹರಣೆಗೆ, ಜನರು ಪರಸ್ಪರ ಸಂಭೋಗಿಸಿದಾಗ, ಮನಸ್ಸು ಅದನ್ನು ಮರೆತುಬಿಡಬಹುದು, ಆದರೆ ದೇಹವು ಎಂದಿಗೂ ಮರೆಯುವುದಿಲ್ಲ. ನೀವು ವಿಚ್ಛೇದನ ಪಡೆದರೂ ಸಹ, ನಿಮ್ಮ ಸಂಗಾತಿಯನ್ನು ನೀವು ಎಷ್ಟೇ ದ್ವೇಷಿಸುತ್ತಿರಲಿ - ನೀವು ನೋವಿನಿಂದ ಬಳಲುತ್ತೀರಿ, ಏಕೆಂದರೆ ದೈಹಿಕ ನೆನಪನ್ನು ಎಂದಿಗೂ ಕಳೆದುಕೊಳ್ಳಲಾಗುವುದಿಲ್ಲ.

ಕೆಲವೇ ಸಮಯದವರೆಗೆ ನೀವು ಯಾರೊಬ್ಬರ ಕೈಯನ್ನು ಅನ್ಯೋನ್ಯವಾಗಿ ಹಿಡಿದಿದ್ದರೂ ಸಹ, ಇದನ್ನು ಎಂದಿಗೂ ಮರೆಯಲಾಗುವುದಿಲ್ಲ, ಏಕೆಂದರೆ ನಿಮ್ಮ ಅಂಗೈಗಳು ಮತ್ತು ಅಂಗಾಲು ಬಹಳ ಪರಿಣಾಮಕಾರಿ ಗ್ರಾಹಕಗಳಾಗಿವೆ. ನೀವು ಯಾರನ್ನಾದರೂ ಭೇಟಿ ಮಾಡಿದಾಗ ಅವರೊಡನೆ ಹೆಚ್ಚು ತೊಡಗಿಸಿಕೊಳ್ಳಲು ಇಷ್ಟಪಡದಿದ್ದರೆ, ಕೇವಲ “ನಮಸ್ಕಾರ” ಮಾಡಿ, ಏಕೆಂದರೆ ನೀವು ನಿಮ್ಮ ಎರಡು ಕೈಗಳನ್ನು ಹೀಗೆ ಒಟ್ಟಿಗೆ ತಂದಾಗ (ಹೆಬ್ಬೆರಳುಗಳನ್ನು ಒಟ್ಟಿಗೆ ತಂದಾಗ), ಅದು ದೇಹವನ್ನು ನೆನಪಿನಲ್ಲಿ ನೆಲೆಸುವುದನ್ನು ತಡೆಯುತ್ತದೆ.

ದೈಹಿಕ ನೆನಪನ್ನು ಕನಿಷ್ಠ ಮಟ್ಟದಲ್ಲಿರಿಸುವುದು ಇದರ ಉದ್ದೇಶ, ಇಲ್ಲದಿದ್ದರೆ, ನಿಮ್ಮನ್ನು ಹೆಚ್ಚಿನ ಹಂತದ ಅನುಭವಕ್ಕೆ ಕೊಂಡೊಯ್ಯುವುದು ಕಷ್ಟವಾಗುತ್ತದೆ. ವಿಪರೀತ ಆನಂದದಲ್ಲಿ ತೊಡಗಿರುವವರು ಅವರ ಮುಖದ ಮೇಲೆ ಒಂದು ನಿರ್ದಿಷ್ಟವಾದ ನಗೆಯನ್ನು ಹೊಂದಿರುತ್ತಾರೆ, ಅದೊಂದು ಕುಹಕತನದ ಹಿರಿಮೆಯಾಗಿದೆ, ಆದರೆ ಅವರಲ್ಲಿ ಯಾವುದೇ ಆನಂದವಿರುವುದಿಲ್ಲ. ಅದನ್ನು ತೊಡೆದುಹಾಕಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ, ಏಕೆಂದರೆ ನಿಮ್ಮ ಮನಸ್ಸು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ದೈಹಿಕ ನೆನಪು ನಿಮ್ಮನ್ನು ಸಿಕ್ಕಿಹಾಕಿಸುತ್ತದೆ. ಆದ್ದರಿಂದ ನಿಮ್ಮ ದೇಹವನ್ನು ನೀವು ಯಾವುದಕ್ಕೆ ಒಡ್ಡಿಕೊಳ್ಳುತ್ತೀರಿ ಎಂಬುದರ ಬಗ್ಗೆ ಜಾಗೃತರಾಗಿರಲು ನೀವು ಕಲಿಯುವುದು ಬಹಳ ಮುಖ್ಯ.

ತೆರಬೇಕಾದ ಬೆಲೆ

ನಿಮ್ಮ ದೇಹ ಮತ್ತು ನಿಮ್ಮ ಮಧ್ಯೆ ಒಂದು ಅಂತರವನ್ನು ಹೇಗೆ ಇರಿಸಿಕೊಳ್ಳಬೇಕೆಂದು ನಿಮಗೆ ತಿಳಿದಿರದ ಹೊರತು, ನಿಮ್ಮಲಿರುವ ಎಲ್ಲ ತರಹದ ಅನ್ಯೋನ್ಯತೆಗಾಗಿಯೂ ನೀವು ಬೆಲೆಯನ್ನು ತೆರಬೇಕಾಗುತ್ತದೆ. ಆದರೆ, ಅದನ್ನು ತಿಳಿದಿಕೊಂಡ ವ್ಯಕ್ತಿಗೆ ಅವರು ಏನೇ ಕೆಲಸ ಮಾಡಿದರೂ ಅದು ಅಪ್ರಸ್ತುತವಾಗುತ್ತದೆ. ಆದರೆ ಅಂತಹ ವ್ಯಕ್ತಿಗೆ ಯಾವುದೇ ಕೆಲಸಗಳನ್ನು ಮಾಡಲು ಒಲವು ಇರುವುದಿಲ್ಲ. ದೇಹದ ಮಿತಿಗಳು ಮತ್ತು ಕಡ್ಡಾಯಗಳಿಂದ ಅವರು ನಿರ್ಭಂಧ ಹೊಂದುವುದಿಲ್ಲ - ಅವರು ದೇಹವನ್ನು ಸಾಧನವಾಗಿ ಬಳಸುತ್ತಾರೆ. ಇಲ್ಲದಿದ್ದರೆ, ಅನ್ಯೋನ್ಯತೆಯನ್ನು ಸಾಧ್ಯವಾದಷ್ಟು ಸೀಮಿತಗೊಳಿಸುವುದು ಉತ್ತಮ. ಅದಕ್ಕಾಗಿಯೇ ಇಬ್ಬರಲ್ಲಿ ಒಬ್ಬರು ಸತ್ತಾಗ, ಇನ್ನೊಬ್ಬರು ಮರುಮದುವೆಯಾಗುವಂತಹ ಕೆಲವು ಪ್ರತ್ಯೇಕ ಸಂಧರ್ಭಗಳನ್ನು ಹೊರತು ಪಡಿಸಿ, ಒಬ್ಬರಿಗೆ ಒಬ್ಬರೇ ಸಂಗಾತಿ ಎಂದು ನಮ್ಮಲ್ಲಿರುವುದು. ಆದರೆ ಈಗ, ನೀವು 25 ವಯಸ್ಸಾಗುವಷ್ಟರಲ್ಲೇ, 25 ಸಂಗಾತಿಗಳನ್ನು ಹೊಂದಿದ್ದರೆ - ಜನರು ಈಗಾಗಲೇ ಅದಕ್ಕೆ ಬೆಲೆ ತೆರುತ್ತಿದ್ದಾರೆ – ಈಗಾಗಲೇ ಅಮೆರಿಕಾದ ಹತ್ತು ಪ್ರತಿಶತಕ್ಕೂ ಹೆಚ್ಚಿನ ಜನಸಂಖ್ಯೆ ಖಿನ್ನತೆ-ಶಮನಕಾರಿ ಔಷಧದ ಮೇಲೆ ಅವಲಂಬಿತರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ತಾವು ಯಾವ ಪಂಗಡಕ್ಕೆ ಸೇರುತ್ತಾರೆಂಬುದೇ ಗೊತ್ತಿಲ್ಲದಿರುವುದು, ಏಕೆಂದರೆ ಸ್ವತಃ ಅವರ ದೇಹವು ಆ ಮಟ್ಟಕ್ಕೆ ಗೊಂದಲಕ್ಕೊಳಗಾಗಿದೆ.

ಜನರು “ದೇಹಕ್ಕೆ ಸ್ಥಿರವಾದ ನೆನಪು ಬೇಕು” ಎಂದು ಭಾವಿಸುತ್ತಾರೆ. ಅವರ ಸಂಗಾತಿಯು ದೈಹಿಕ ರೀತಿಯಲ್ಲಿ ವಿಶೇಷವಾಗಿಲ್ಲದಿರಬಹುದು ಅಥವಾ ತಾರ್ಕಿಕವಾಗಿ ಯಾವುದೇ ರೀತಿ ವಿಶೇಷತೆ ಹೊಂದಿಲ್ಲದಿರಬಹುದು, ಅವರು ಮೇಲ್ಮೈಯಲ್ಲಿ ಜಗಳವಾಡುತ್ತಿರಬಹುದು, ಇವೆಲ್ಲದರ ಹೊರತಾಗಿಯೂ ತಮ್ಮ ಸಂಗಾತಿಯೊಂದಿಗೆ ಇರಲು ಏನನ್ನಾದರೂ ತ್ಯಾಗ ಮಾಡಲು ಸಿದ್ಧರಿರುತ್ತಾರೆ, ಏಕೆಂದರೆ ಯಾವುದೋ ರೀತಿಯಲ್ಲಿ ಅದು ಅವರಿಗೆ ಹೆಚ್ಚು ಆರಾಮ ಮತ್ತು ಯೋಗಕ್ಷೇಮವನ್ನು ನೀಡುತ್ತದೆ ಎಂದು ಅವರು ಅರ್ಥೈಸುತ್ತಾರೆ. ನಿಮ್ಮ ಮಾನಸಿಕ ನೆನಪಿಗಿಂತ ಬಹುಪಾಲು ಹೆಚ್ಚು ದೈಹಿಕ ನೆನಪು ನಿಮ್ಮ ಜೀವನವನ್ನು ನಿಯಂತ್ರಿಸುತ್ತದೆ. ನೀವು ಇದೀಗ ಇರುವ ಸ್ಥಿತಿಯನ್ನು ನಿಮ್ಮ ದೈಹಿಕ ನೆನಪಿನಿಂದ ನಿಯಂತ್ರಿಸಲಾಗುತ್ತದೆ, ನಿಮ್ಮ ಮಾನಸಿಕ ನೆನಪಿನಿಂದಲ್ಲ. ಮಾನಸಿಕ ನೆನಪನ್ನು ನಾಳೆ ಬೆಳಿಗ್ಗೆ ಎಸೆಯಬಹುದು, ಆದರೆ ನಿಮ್ಮ ದೈಹಿಕ ನೆನಪನ್ನು ನೀವು ಎಸೆಯಲು ಸಾಧ್ಯವಿಲ್ಲ. ಅದನ್ನು ಹೊರದಬ್ಬಲು ನಿಮ್ಮೊಳಗೆ ಸಂಪೂರ್ಣವಾಗಿ ವಿಭಿನ್ನ ಮಟ್ಟದ ಆಧ್ಯಾತ್ಮಿಕ ವಿಕಸನದ ಅಗತ್ಯವಿರುತ್ತದೆ.

ದೈಹಿಕ ಮಟ್ಟದ ನೆನಪನ್ನು ಕಡಿಮೆ ಮಾಡುವುದು

ನೀರು, ಗಾಳಿ, ಭೂಮಿ ಮುಂತಾದ ಪಂಚ ಭೂತಗಳು – ಅಪಾರ ನೆನಪಿನ ಶಕ್ತಿಯನ್ನು ಹೊಂದಿರುತ್ತವೆಯಂದು ಆಧುನಿಕ ವಿಜ್ಞಾನವು ಹೇಳುತ್ತದೆ. ಯೋಗ ವ್ಯವಸ್ಥೆಯಲ್ಲಿ, ನಾವು ಇದನ್ನು ಹಿಂದಿನಿಂದಲೂ ತಿಳಿಸುತ್ತಲೇ ಬಂದಿದ್ದೇವೆ. ಶಕ್ತಿಯ ಮಟ್ಟದಲ್ಲಿ ಸ್ವಲ್ಪ ಪ್ರಾಮುಖ್ಯತೆ ಇರುವ ಯಾವುದೇ ಸ್ಥಳಕ್ಕೆ ನಾನು ಹೋದರೆ, ನಾನು ಆ ಸ್ಥಳದ ಕುರಿತು ಜನರನ್ನು ವಿಚಾರಿಸುವುದಿಲ್ಲ - ನನ್ನ ಕೈಗಳನ್ನು ಒಂದು ಬಂಡೆಯ ಮೇಲೆ ಇಡುತ್ತೇನೆ. ಅದರೊಂದಿಗಿನ ಸ್ಪರ್ಶದಿಂದಲೇ, ನಾನು ಆ ಸ್ಥಳದ ಸಂಪೂರ್ಣ ವಿವರವನ್ನು ತಿಳಿಯುತ್ತೇನೆ. ಮರದ ಕಾಂಡದ ಉಂಗುರಗಳು ಆ ಸ್ಥಳದ ಪರಿಸರ ಇತಿಹಾಸವನ್ನು ಹೇಳುವ ತರ, ಬಂಡೆಗಳು ಇನ್ನೂ ಉತ್ತಮವಾದ ನೆನಪನ್ನು ಹೊಂದಿರುತ್ತವೆ.

ಸಾಮಾನ್ಯವಾಗಿ, ವಸ್ತುವಿನ ಸಾಂದ್ರತೆ ಹೆಚ್ಚಿದ್ದಷ್ಟೂ, ನೆನಪನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಉತ್ತಮವಾಗಿರುತ್ತದೆ ಮತ್ತು ನಿರ್ಜೀವ ವಸ್ತುಗಳು ಜೀವಂತವಾದುವುಗಳಿಗಿಂತ ಉತ್ತಮ ನೆನಪನ್ನು ಹೊಂದಿರುತ್ತವೆ. ಇಂದಿನ ತಂತ್ರಜ್ಞಾನವು ಅದನ್ನು ಸಾಬೀತುಪಡಿಸುತ್ತಿದೆ - ನಿಮ್ಮ ಕಂಪ್ಯೂಟರ್ ನಿಮಗಿಂತ ಉತ್ತಮ ನೆನಪಿನ ಶಕ್ತಿಯನ್ನು ಹೊಂದಿದೆ. ಮಾನವ ಮನಸ್ಸು ನೆನಪಿಗಾಗಿ ಅಲ್ಲ - ಅದು ಗ್ರಹಿಕೆಗಾಗಿ. ನಿರ್ಜೀವ ವಸ್ತುಗಳು ಗ್ರಹಿಸಲು ಸಾಧ್ಯವಿಲ್ಲ, ಅವು ನೆನಪಿಟ್ಟುಕೊಳ್ಳುತ್ತವೆ. ದೇವತಾ ವಿಗ್ರಹಗಳು ಮತ್ತು ಇತರ ಪ್ರತಿಷ್ಠೀಕರಿಸಿದ ವಸ್ತುಗಳನ್ನು ಸೃಷ್ಟಿಸಿರುವುದು ಏಕೆಂದರೆ ಅವುಗಳು ಶಕ್ತಿಯುತವಾದ ನೆನಪಿನ ರೂಪಗಳಾಗಿವೆ.

ಭಾರತದಲ್ಲಿ, ಶಿವನ ದೇವಾಲಯವನ್ನು ಬೆತ್ತಲೆಯಾಗಿ ಮಾತ್ರ ಪ್ರವೇಶಿಸುವಂತಹ ಸಮಯವಿತ್ತು. ಬ್ರಿಟಿಷರು ಈ ಎಲ್ಲಾ ವಿಷಯಗಳನ್ನು ನಿಷೇಧಿಸಲು ಪ್ರಾರಂಭಿಸಿದ ನಂತರವೇ ನಾವು ಬಹಳ ಸಭ್ಯತೆಯುಳ್ಳವರಾಗಿದ್ದೇವೆ. ದೇವಾಲಯಕ್ಕೆ ಬೆತ್ತಲೆಯಾಗಿ ಹೋಗಬೇಕೆಂಬುದು ಏಕೆಂದರೆ, ಅಲ್ಲಿನ ದೈವಿಕ ನೆನಪನ್ನು ನಮ್ಮ ದೇಹಕ್ಕೆ ಸೆಳೆದುಕೊಳ್ಳಬಹುದು ಎಂಬುದಾಗಿತ್ತು. ನೀವು ಸ್ನಾನ ಮಾಡಿ ಒದ್ದೆ ದೇಹದಲ್ಲಿಯೇ ನೆಲದ ಮೇಲೆ ಮಲಗಿಕೊಂಡರೆ, ಇದರಿಂದ ಅದು ದೈವಿಕ ನೆನಪಿನೊಳಗೆ ನೆನೆಯುವುದನ್ನು ಕಂಡುಕೊಳ್ಳಬಹುದು. ನಿಮ್ಮ ಮನಸ್ಸು ಯಾವಾಗಲೂ ಸುತ್ತಲಿನ ಜನರ ಜೊತೆ ಏನಾಗುತ್ತಿದೆಯೆಂದು ನೋಡುತ್ತಿರುತ್ತದೆ, ಆದರೆ ದೇಹವು ಆ ಜಾಗದ ಶಕ್ತಿಯನ್ನು ಹೀರಿಕೊಳ್ಳುತ್ತದೆ.

ಧ್ಯಾನಲಿಂಗ ಮತ್ತು ಲಿಂಗ ಭೈರವಿಯ ಪ್ರವೇಶದ್ವಾರದಲ್ಲಿ, ಭಕ್ತರು ಸಾಷ್ಟಾಂಗ ನಮಸ್ಕಾರ ಮಾಡುವ ಶಿಲ್ಪಗಳಿವೆ. ಮನಸ್ಸಿಗೆ ಹೋಲಿಸಿದರೆ ದೇಹವು ದೈವದಲ್ಲಿ ಹೆಚ್ಚು ನೆಲೆಸುತ್ತದೆ ಎಂಬುದನ್ನು ಇದು ನಿಮಗೆ ತೋರಿಸುತ್ತದೆ. ನಾವು ತುಂಬಾ ಸುಸಂಸ್ಕೃತರಾಗಿರುವ ಕಾರಣ, ಇನ್ನು ಮುಂದೆ ದೇವಾಲಯಕ್ಕೆ ನಗ್ನವಾಗಿ ಹೋಗಲು ಸಾಧ್ಯವಿಲ್ಲ - ನಾವು ದೇಹವನ್ನು ಹೊಂದಿದ್ದೇವೆಯೇ ಅಥವಾ ಇಲ್ಲವೇ ಎಂದು ತಿಳಿಯದಷ್ಟು ಬಟ್ಟೆಗಳನ್ನು ನಾವು ಧರಿಸುತ್ತೇವೆ. ಲೈಂಗಿಕ ಪ್ರಚೋದನೆಗಳು ಬಂದಾಗ ಮಾತ್ರ, ಜನರು ತಮ್ಮ ದೇಹವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ದೈಹಿಕ ನೆನಪನ್ನು ಅಳಿಸುವಿಕೆ

ಆಳವಾದ ಭಕ್ತಿ ಅಥವಾ ಇತರ ಕೆಲವು ಅಭ್ಯಾಸಗಳ ಮೂಲಕ ನಿಮ್ಮ ದೈಹಿಕ ನೆನಪನ್ನು ಅಳಿಸಿಕೊಳ್ಳಬಹುದು. ನಾನು ಈ ರೀತಿಯ ಕೆಲವು ಭಕ್ತರನ್ನು ನೋಡಿದ್ದೇನೆ, ಆದರೆ ಒಬ್ಬ ವ್ಯಕ್ತಿ ನಿಜವಾಗಿಯೂ ನನ್ನ ಹೃದಯದಲ್ಲಿ ನಾಟಿದ್ದಾರೆ. ಭಾರತದ ದಕ್ಷಿಣ ತುದಿ ಕನ್ಯಾಕುಮಾರಿಗೆ ಒಬ್ಬ ಮಹಿಳೆ ಬಂದಿದ್ದಳು. ಅವಳು ನಿಖರವಾಗಿ ಯಾವ ಸ್ಥಳದವಳೆಂದು ನಮಗೆ ತಿಳಿದಿಲ್ಲವಾದರೂ, ಅವಳ ಮುಖವನ್ನು ನೋಡಿದರೆ, ಬಹುಶಃ ನೇಪಾಳದಿಂದ ಎಂದು ಅಂದಾಜಿಸಬಹುದು. ಅವಳು ಕನ್ಯಾಕುಮಾರಿಯಲ್ಲಿ ಸುಮ್ಮನೆ ಎಲ್ಲೆಡೆ ನಡೆದಾಡುತ್ತಿದ್ದಳು. ಒಂದು ಮಾತನ್ನೂ ಆಡುತ್ತಿರಲಿಲ್ಲ. ಯಾವಾಗಲೂ ನಾಯಿಗಳ ಒಂದು ಗುಂಪು ಅವಳನ್ನು ಹಿಂಬಾಲಿಸುತ್ತಿದ್ದವು. ಈ ನಾಯಿಗಳಿಗೆ ತಿನಿಸಲು ಅವಳು ಆಹಾರವನ್ನು ಕದಿಯುತ್ತಿದ್ದಳು. ಅನೇಕ ಬಾರಿ, ಈ ಕಾರಣಕ್ಕೆ ಅವಳನ್ನು ಹೊಡೆಯಲಾಗುತ್ತಿತ್ತು. ಆದರೆ, ಒಮ್ಮೆ ಜನರು ಅವಳನ್ನು ಅಲೆಗಳ ಮೇಲೆ ತೇಲುತ್ತಿದ್ದುದ್ದನ್ನು ನೋಡಿದರು. ಇದು ಮೂರು ಸಾಗರಗಳು ಸಂಧಿಸುವ ಕರಾವಳಿ ಪಟ್ಟಣವಾಗಿತ್ತು. ಅವಳು ಕಡಲ ತೀರಕ್ಕೆ ಹೋಗಿ, ನೀರಿನ ಮೇಲೆ ಕಾಲುಗಳನ್ನು ಮಡಚಿ ಕುಳಿತು ಸುತ್ತಲೂ ತೇಲುತ್ತಿದ್ದಳು. ನಂತರ ಜನರು ಅವಳನ್ನು ಪೂಜಿಸಲು ಪ್ರಾರಂಭಿಸಿದರು. ಅವಳು ಬರುವ ಸಮಯದಲ್ಲಿ, ಅಂಗಡಿಯವರು ತಮ್ಮ ಆಹಾರವನ್ನು ರಕ್ಷಿಸಿಕೊಳ್ಳುತ್ತಿದ್ದರಾದರೂ, ಅವಳ ಅತಿಮಾನುಶ ಶಕ್ತಿಯ ಕಾರಣ ಯಾರೂ ಅವಳನ್ನು ಹಿಂಸಿಸಲು ಹೋಗಲಿಲ್ಲ.

ತನ್ನ ಜೀವನವಿಡೀ ಅವಳು ಹೊರಗಡೆಯೇ ವಾಸಿಸುತ್ತಿದ್ದಳು. ಯಾವುದೇ ರೀತಿಯ ಆಶ್ರಯವಿಲ್ಲದೆ, ಬೀದಿಯಲ್ಲಿ ಅಥವಾ ಕಡಲತೀರದಲ್ಲಿ ಮಲಗುತ್ತಿದ್ದಳು. ಅವಳು ಹವಾಮಾನದ ಹೊಡೆತಗಳಿಂದ ತೀವ್ರವಾಗಿ ಬಳಲಿದ್ದು, ಅವಳ ಮುಖ ಒಂದು ರೀತಿ ರೆಡ್ ಇಂಡಿಯನ್ಸ್ ರನ್ನು ಹೋಲುತ್ತಿತ್ತು. ತನ್ನ ಜೀವನದ ಅಂತ್ಯದ ವೇಳೆ, ಅವಳು 70 ವರ್ಷವಾಗಿದ್ದಾಗ, ದಕ್ಷಿಣ ಭಾರತದ ಪ್ರಸಿದ್ಧ ಸಂಗೀತಗಾರರೊಬ್ಬರು ಅವಳ ಭಕ್ತನಾದರು. ಅವಳನ್ನು ತಮಿಳುನಾಡಿನ ಸೇಲಂಗೆ ಕರೆತಂದು, ಅವಳಿಗಾಗಿ ಒಂದು ಸಣ್ಣ ಮನೆಯನ್ನು ನಿರ್ಮಿಸಿಕೊಟ್ಟರು. ಕಾಲಕ್ರಮೇಣ, ಕೆಲವು ಭಕ್ತರು ಅವಳ ಸುತ್ತಲೂ ಒಟ್ಟುಗೂಡಿದರು.

ಸುಮಾರು 15, 16 ವರ್ಷಗಳ ಹಿಂದೆ, ನಾನು ಸೇಲಂ ಬಳಿಯ ಒಂದು ಗಿರಿಧಾಮದಲ್ಲಿದ್ದೆ. ಅಲ್ಲಿ, ಈ ಮಹಿಳೆಯ ಬಗ್ಗೆ ಯಾರೋ ಹೇಳಿದರು - ಅವಳ ಹೆಸರು ಮಾಯಮ್ಮ. ಈಗಾಗಲೇ ಅವಳು ಮರಣಿಸಿದ್ದಳು. ಅದು ಹುಣ್ಣಿಮೆಯ ರಾತ್ರಿಯಾಗಿದ್ದು, ಮಾಯಮ್ಮಳ ಸಮಾಧಿಯ ಬಳಿ ಪೂಜೆ ಇರುತ್ತದೆ ಎಂದು ಅವರು ಹೇಳಿದರು. ಆ ಸಮಯದಲ್ಲಿ ನನ್ನ ಹೆಂಡತಿ ಮತ್ತು ಐದಾರು ವಯಸ್ಸಾಗಿದ್ದ ನನ್ನ ಮಗಳ ಜೊತೆ ಸಂಜೆಯನ್ನು ಕಳೆಯಲು ನಾನು ಅಲ್ಲಿಗೆ ಹೋದೆ. ಒಂದು ಕಾಂಕ್ರೀಟ್ ಸಮಾಧಿ ಹೊಂದಿದ್ದ ಇದು ಅಷ್ಟೇನು ಪ್ರಭಾವಶಾಲಿಯಲ್ಲದ ಒಂದು ಸಣ್ಣ ಸ್ಥಳ. ನಾನು ಅಲ್ಲಿಗೆ ಹೋದಾಕ್ಷಣವೇ, ಅದು ನನ್ನ ಮುಖಕ್ಕೆ ಬಡಿಯಿತು - ಆ ಸ್ಥಳದ ಶಕ್ತಿಯು ಸ್ಫೋಟಕದಂತೆಯೇ ಇತ್ತು. ನಾವು ಅಲ್ಲಿ ಕುಳಿತು ಕೆಲವು ಗಂಟೆಗಳು ಕಳೆದೆವು. ನಂತರ ಉಚಿತ ಭೋಜನವಿತ್ತು. ಅವಳ ಭಕ್ತನೊಬ್ಬನು ನಮಗೆ ಆಹಾರವನ್ನು ನೀಡುತ್ತಿದ್ದನು. ನಾನು ಈ ಮನುಷ್ಯನ ಮುಖವನ್ನು ನೋಡಿದಾಕ್ಷಣ ನಂಬಲಾಗಲಿಲ್ಲ – ಅವನ ಮುಖವು ಮಾಯಮ್ಮಳ ಮುಖವನ್ನು ಹೋಲುತ್ತಿತ್ತು! ಅವನು ದಕ್ಷಿಣ ಭಾರತದ ಪುರುಷನಾಗಿದ್ದು, ನೇಪಾಳಿ ಮಹಿಳೆಯಂತೆ ಕಾಣುತ್ತಿದ್ದನು. ತೀವ್ರ ಭಕ್ತಿಯ ಕಾರಣ, ಅವನ ಮುಖವು ಬಹುತೇಕ ಅವಳಂತೆಯೇ ಮಾರ್ಪಾಡಾಗಿತ್ತು.

ನಿಮ್ಮ ದೇಹ ಮತ್ತು ನಿಮ್ಮ ಮಧ್ಯೆ ಒಂದು ಅಂತರವನ್ನು ಹೇಗೆ ಇರಿಸಿಕೊಳ್ಳಬೇಕೆಂದು ನಿಮಗೆ ತಿಳಿದಿರದ ಹೊರತು, ನಿಮ್ಮಲಿರುವ ಎಲ್ಲ ತರಹದ ಅನ್ಯೋನ್ಯತೆಗಾಗಿಯೂ ನೀವು ಬೆಲೆಯನ್ನು ತೆರಬೇಕಾಗುತ್ತದೆ.

ನಿಮ್ಮಲ್ಲಿನ ದೈಹಿಕ ನೆನಪನ್ನು ನೀವು ಅಳಿಸಿದರೆ, ದೇಹವು ನಿಮ್ಮ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತದೆಯೋ, ಆ ರೀತಿಯೇ ಆಗುತ್ತದೆ. ನಿಮ್ಮಲ್ಲಿನ ಎಲ್ಲದರ ಆಕಾರವೂ ಬದಲಾಗುತ್ತದೆ. ಅಂದರೆ ನಿಮ್ಮ ಆನುವಂಶಿಕ ಕಡ್ಡಾಯದ ಪ್ರವೃತ್ತಿಗಳನ್ನು ನೀವು ತೊಡೆದುಹಾಕುವಿರಿ. ಯಾರಾದರೂ ಸನ್ಯಾಸವನ್ನು ತೆಗೆದುಕೊಂಡಾಗ, ಮೊದಲನೆಯದಾಗಿ ಅವರ ಪೋಷಕರು ಮತ್ತು ಪೂರ್ವಜರಿಗಾಗಿ ಒಂದು ನಿರ್ದಿಷ್ಟ ಪ್ರಕ್ರಿಯೆಯನ್ನು ಮಾಡಲಾಗುವುದು. ಸಾಮಾನ್ಯವಾಗಿ, ನಾವು ಸತ್ತವರಿಗಾಗಿ ಈ ಪ್ರಕ್ರಿಯೆಯನ್ನು ನಡೆಸುತ್ತೇವೆ, ಆದರೆ ಸನ್ಯಾಸಿಗಳಿಗಾಗಿ, ಪೋಷಕರ ಜೀವಿತದಲ್ಲಿಯೇ ಇದನ್ನು ಮಾಡುತ್ತೇವೆ. ಇದು ಅವರು ಸಾಯುವ ಉದ್ದೇಶದಿಂದಲ್ಲ - ಒಬ್ಬರ ದೈಹಿಕ ನೆನಪನ್ನು ತೊಳೆಯುವುದು ಇದರ ಹಿಂದಿನ ವಿಚಾರ.

ನೀವು 18 ವರ್ಷದವರಾಗಿದ್ದಾಗ, ನಿಮ್ಮ ತಂದೆ ತಾಯಿಯ ವಿರುದ್ಧ ನೀವು ತಿರುಗಿ ಬಿದ್ದಿರಬಹುದು, ಆದರೆ ನೀವು 45 ವರ್ಷದ ಆಗುತ್ತಿದ್ದಂತೆ, ನೀವು ಇಷ್ಟಪಡುತ್ತೀರೋ ಇಲ್ಲವೋ, ನೀವು ಅವರಂತೆಯೇ ಮಾತನಾಡಲು ಮತ್ತು ಅವರಂತೆಯೇ ವರ್ತಿಸಲು ಪ್ರಾರಂಭಿಸುತ್ತೀರಿ. ನಿಮ್ಮ ಪೋಷಕರು ಮಾತ್ರವಲ್ಲ – ಅದಕ್ಕೂ ಹಿಂದಿನ ಪೂರ್ವಜರೂ ಇದೀಗ ನಿಮ್ಮ ಮೂಲಕ ವರ್ತಿಸುತ್ತಿದ್ದಾರೆ. ನಿಮ್ಮ ನಡವಳಿಕೆಗಳು ಅವರುಗಳಿಂದಲೇ ರಚಿಸಲ್ಪಟ್ಟಿದೆ ಮತ್ತು ನಿಯಂತ್ರಿಸಲ್ಪಡುತ್ತಿದೆ. ಆದ್ದರಿಂದ, ನೀವು ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಮುಂದುವರೆಯಲು ಗಂಭೀರವಾಗಿ ಚಿಂತಿಸುತ್ತಿದ್ದರೆ, ಮೊದಲ ಹೆಜ್ಜೆ ನಿಮ್ಮ ಆನುವಂಶಿಕ ನೆನಪಿನಿಂದ ದೂರವಿರುವುದು. ಅದಾಗದಿದ್ದರೆ, ನಿಮ್ಮಲ್ಲಿರುವ ನಿಮ್ಮ ಪೂರ್ವಜರ ಕಡ್ಡಾಯದ ನಡವಳಿಕೆಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ. ಅವರು ನಿಮ್ಮ ಮೂಲಕ ಜೀವಿಸುತ್ತಾರೆ ಮತ್ತು ನಿಮ್ಮನ್ನು ಹಲವು ವಿಧಗಳಲ್ಲಿ ಆಳುತ್ತಾರೆ.

ದೇಹದ ನೆನಪು ನಿಮ್ಮನ್ನು ಅಷ್ಟರ ಮಟ್ಟಿಗೆ ಆಳಿದಾಗ, ಈ ಜೀವಿತಾವಧಿಯಲ್ಲಿ ಅದನ್ನು ಕನಿಷ್ಠ ಮಟ್ಟಕ್ಕೆ ಉಳಿಸಿಕೊಳ್ಳುವುದು ಉತ್ತಮ. ಹೇಗಿದ್ದರೂ, ನಿಮ್ಮ ಪೂರ್ವಜರಿಂದ ನೀವು ಇನ್ನೂ ಸಾವಿರಾರು ವರ್ಷಗಳ ನೆನಪನ್ನು ತೊಡೆದುಹಾಕಬೇಕಾಗಿದೆ. ನೀವು ಸರೀಸೃಪ ಮೆದುಳನ್ನು ಹೊಂದಿದ್ದೀರಿ - ತೆವಳುತ್ತಿರುವ ಹಾವು ಮತ್ತು ಹಲ್ಲಿ, ಮತ್ತು ಚೇಳು ಕೂಡ ನಿಮ್ಮ ಮೂಲಕ ಇನ್ನೂ ಜೀವಿಸುತ್ತದೆ. ಮೆದುಳನ್ನು ಮನಸ್ಸು ಎಂದು ಭಾವಿಸಬೇಡಿ - ಮೆದುಳು ದೇಹವೇ ಆಗಿರುತ್ತದೆ. ಕನಿಷ್ಠ ಈ ಜೀವಿತಾವಧಿಯಲ್ಲಿ, ನಿಮ್ಮ ದೇಹವು ಗೊಂದಲಕ್ಕೀಡಾಗದಂತೆ ನೀವು ನಿಮ್ಮ ಚಟುವಟಿಕೆಗಳನ್ನು ಮಿತಿಗೊಳಿಸಲು ಪ್ರಯತ್ನಿಸಿ.

ಈ ಸಂಗತಿಯ ಬಗ್ಗೆ ಅರಿತ್ತಿದ್ದ ಜನರು ದೇಹಕ್ಕೆ ಹೆಚ್ಚು ಅನುಕೂಲಕರವಾಗುವ ರೀತಿಯಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆಗಳನ್ನು ರಚಿಸಿದ್ದಾರೆ. ಪ್ರಪಂಚದೆಲ್ಲೆಡೆ, ಯಾರು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸುವರೋ, ಅವರು ಮಾಡುವ ಮೊದಲ ಕೆಲಸವೆಂದರೆ ಎಲ್ಲಾ ರೀತಿಯ ಸಂಬಂಧಗಳಿಂದ ದೂರವಿರುವುದು, ಏಕೆಂದರೆ ಯಾವುದೇ ರೀತಿಯ ದೈಹಿಕ ಸಂಬಂಧಗಳನ್ನು ನಿರ್ಮಿಸಿಕೊಂಡರೆ, ಸ್ವಾಭಾವಿಕವಾಗಿಯೇ, ಅದು ವಿಷಯಗಳನ್ನು ಜಟಿಲಗೊಳಿಸುತ್ತದೆ. ಯಾರು ತೀರ ನಿರ್ಬಂಧಿತರಾಗಿ, ಅದನ್ನು ಮೀರಿ ಹೋಗಲು ಆಗುವುದಿಲ್ಲವೋ, ಅಥವಾ ಯಾರು ತಮ್ಮ ದೇಹದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳದ ರೀತಿ ಇದ್ದಾರೆಯೋ, ಅವರನ್ನು ಹೊರತು ಪಡಿಸಿ ಬೇರೆಲ್ಲರಿಗೂ ಸಂಬಂಧ ಬೇಡವೆಂದೇ ಹೇಳುತ್ತೇವೆ. ನಿಮಗೆ ಬೇಕೇ ಬೇಕು ಎನಿಸಿದರೆ, ಯಾರಾದರೂ ಒಬ್ಬರ ಜೊತೆಯಷ್ಟೇ ಸಂಬಂಧ ಹೊಂದಿ, ಹಲವಾರು ಸಂಬಂಧಗಳು ನಿಮ್ಮ ದೈಹಿಕ ವ್ಯವಸ್ಥೆಯನ್ನು ಗೊಂದಲಗೊಳಿಸುತ್ತದೆ.

ಸಂಪಾದಕರ ಟಿಪ್ಪಣಿ: ಸಂಬಂಧಗಳ ಬಗೆಗಿನ ಸದ್ಗುರುಗಳ ಹೆಚ್ಚಿನ ಒಳನೋಟಗಳನ್ನು "ಸಂಬಂಧಗಳು: ನಂಟೋ... ಕಗ್ಗಂಟೋ..." ಎಂಬ ಪುಸ್ತಕದಲ್ಲಿ ಕಾಣಬಹುದು.

This article is based on an excerpt from the October 2014 issue of Forest Flower. Pay what you want and download. (set ‘0’ for free). Print subscriptions are also available.