ಪ್ರಶ್ನೆ: ಯೋಗ ಮತ್ತು ಧ್ಯಾನದ ನಡುವಿನ ವ್ಯತ್ಯಾಸವೇನು?


ಸದ್ಗುರು: ಇಂಗ್ಲೀಷ್ ಶಬ್ದದ ಪ್ರಕಾರವಾಗಿ ನೋಡಿದರೆ “meditation” ಎನ್ನುವ ಪದಕ್ಕೆ ಯಾವ ಅರ್ಥವೂ ಇಲ್ಲ ಏಕೆಂದರೆ ಅದರ ಪ್ರಕಾರ, ನೀವು ಸುಮ್ಮನೆ ಕಣ್ಣು ಮುಚ್ಚಿ ಕುಳಿತುಕೊಂಡರೆ ನೀವು ಧ್ಯಾನ ಮಾಡುತ್ತಿದ್ದೀರಿ ಎಂದಾಗುತ್ತದೆ. ಆದರೆ ನೀವು ಕಣ್ಣು ಮುಚ್ಚಿಕೊಂಡು ಬಹಳಷ್ಟು ವಿಷಯಗಳನ್ನು ಮಾಡಬಹುದು – ಜಪ, ತಪ, ಧಾರಣ, ಧ್ಯಾನ, ಸಮಾಧಿ, ಶೂನ್ಯ. ಅಥವಾ ನೀವು ನೆಟ್ಟಗಿನ ಭಂಗಿಗಳಲ್ಲಿ ನಿದ್ರಿಸುವುದನ್ನು ಕರಗತ ಮಾಡಿಕೊಂಡಿರಲೂಬಹುದು!  Meditation ಎಂದರೆ ಧ್ಯಾನವೆಂದು ನೀವು ಅರ್ಧೈಸಿಕೊಂಡಿದ್ದರೆ, ಅದು ಯೋಗದಲ್ಲಿನ ಒಂದು ಅಂಶ ಮಾತ್ರ.

ಧ್ಯಾನವು ನೀವು ಮಾಡುವಂತದ್ದಲ್ಲ. ಆದರೆ ನೀವು ಧ್ಯಾನಸ್ಥರಾಗಬಹುದು. ಧ್ಯಾನವೆನ್ನುವುದು ಒಂದು ವಿಶಿಷ್ಟವಾದ ಗುಣ, ಯಾವುದೇ ರೀತಿಯ ಕೆಲಸವಲ್ಲ.

ಧ್ಯಾನದ ಮುಖ್ಯ ವಿಷಯವೆಂದರೆ, ಸದ್ಯದಲ್ಲಿ ನಿಮ್ಮ ಮನಸ್ಸು ಯಜಮಾನ ಮತ್ತು ನೀವು ಅದರ ಸೇವಕನಾಗಿದ್ದೀರಿ. ನೀವು ಹೆಚ್ಚು ಹೆಚ್ಚು ಧ್ಯಾನಸ್ಥರಾದರೆ, ನೀವು ಯಜಮಾನನಾಗುತ್ತೀರಿ ಮತ್ತು ನಿಮ್ಮ ಮನಸ್ಸು ಸೇವಕನಾಗುತ್ತದೆ – ಯಾವಾಗಲೂ ಇರಬೇಕಾಗಿರುವುದು ಹೀಗೆಯೇ. ನೀವು ನಿಮ್ಮ ಮನಸ್ಸನ್ನು ಆಳಲು ಬಿಟ್ಟರೆ, ಅದೊಂದು ಭಯಂಕರ ಯಜಮಾನನಾಗುತ್ತದೆ. ಅದು ನಿಮ್ಮನ್ನು ಎಲ್ಲಾ ರೀತಿಯ, ಕೊನೆಯೇ ಇರದಂತಹ ಚಿತ್ರಹಿಂಸೆಗೆ ಗುರಿಪಡಿಸುತ್ತದೆ. ಆದರೆ ಒಬ್ಬ ಸೇವಕನಾಗಿ, ಮನಸ್ಸು ತುಂಬ ಅದ್ಭುತ - ಅದೊಂದು ಚಮತ್ಕಾರಿ ಸೇವಕ.


ಧ್ಯಾನವನ್ನು ಪ್ರಯತ್ನಿಸಿದ ಬಹಳಷ್ಟು ಜನರು ಅದು ತುಂಬ ಕಷ್ಟ ಅಥವಾ ಅಸಾಧ್ಯವೆನ್ನುವ ತೀರ್ಮಾನಕ್ಕೆ ಬರಲು ಕಾರಣವೇನೆಂದರೆ ಅವರು ಧ್ಯಾನವನ್ನು ಮಾಡಲು ಯತ್ನಿಸುತ್ತಿದ್ದಾರೆ. ಧ್ಯಾನವು ನೀವು ಮಾಡುವಂತದ್ದಲ್ಲ. ಆದರೆ ನೀವು ಧ್ಯಾನಸ್ಥರಾಗಬಹುದು. ಧ್ಯಾನವೆನ್ನುವುದು ಒಂದು ವಿಶಿಷ್ಟವಾದ ಗುಣ, ಯಾವುದೇ ರೀತಿಯ ಕೆಲಸವಲ್ಲ. ನಿಮ್ಮ ದೇಹ, ಮನಸ್ಸು, ಚೈತನ್ಯ ಮತ್ತು ಭಾವನೆಗಳನ್ನು ಒಂದು ನಿರ್ದಿಷ್ಟ ಮಟ್ಟದ ಪ್ರೌಢತೆಗೆ ಕೊಂಡೊಯ್ಯಲು ಪೋಷಣೆಯನ್ನು ನೀಡಿದರೆ, ಧ್ಯಾನವು ಸಹಜವಾಗಿಯೇ ನಡೆಯುತ್ತದೆ. ಇದು ಹೇಗೆಂದರೆ, ಮಣ್ಣನ್ನು ನೀವು ಫಲವತ್ತಾಗಿಟ್ಟರೆ, ಅದಕ್ಕೆ ಬೇಕಾದ ಗೊಬ್ಬರ ಮತ್ತು ನೀರನ್ನು ನೀಡಿದರೆ ಹಾಗೂ ಸರಿಯಾದ ರೀತಿಯ ಬೀಜವು ಅಲ್ಲಿದ್ದಿದ್ದೇ ಆದರೆ, ಅದು ಬೆಳೆದು, ಹೂ ಹಣ್ಣುಗಳನ್ನು ಬಿಡುತ್ತದೆ. 


ಒಂದು ಗಿಡದಲ್ಲಿ ಹೂ ಮತ್ತು ಹಣ್ಣುಗಳು ಬಿಡುವುದು ಅವು ನಿಮಗೆ ಬೇಕಾಗಿವೆ ಎಂದಲ್ಲ, ಆದರೆ ನೀವದಕ್ಕೆ ಒಂದು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿದಿರಿ ಎಂಬ ಕಾರಣಕ್ಕಾಗಿ. ಅದೇ ರೀತಿ, ನೀವು ನಿಮ್ಮೊಳಗೆ ನಿಮ್ಮ ದೇಹ, ಮನಸ್ಸು, ಭಾವನೆಗಳು ಮತ್ತು ಚೈತನ್ಯದ ನಾಲ್ಕೂ ಆಯಾಮಗಳಿಗೆ ಅಗತ್ಯವಾದ ಸನ್ನಿವೇಶವನ್ನು ನಿರ್ಮಿಸಿಕೊಂಡರೆ, ಸಹಜವಾಗಿಯೇ ಧ್ಯಾನವು ನಿಮ್ಮೊಳಗೆ ಅರಳುತ್ತದೆ. ಒಬ್ಬರು ತಮ್ಮೊಳಗೆ ತಾವು ಆನಂದಿಸಬಹುದಾದ ವಿಶಿಷ್ಟವಾದ ಸುಗಂಧವೇ ಧ್ಯಾನ.

ಪ್ರಶ್ನೆ: ನಾನು ಮಾಂಸಾಹಾರ ಸೇವನೆ ಮತ್ತು ಮದ್ಯಪಾನವನ್ನು ಮಾಡುತ್ತಿದ್ದರೆ ಯೋಗವನ್ನು ಮಾಡಬಹುದೆ?


ಸದ್ಗುರು: ಯೋಗವೆಂದರೆ ನಿರ್ಬಂಧನೆಯಲ್ಲ, ಅದು ಬದುಕಿನ ಒಂದು ಆಳವಾದ ಅರಿವು. ಕೇವಲ ನಿಮ್ಮದೇ chemistryಯಿಂದ ಸಂಪೂರ್ಣವಾಗಿ ಪರಮಾನಂದದಲ್ಲಿರುವುದು ಹೇಗೆಂದು ನಿಮಗೆ ತಿಳಿದಿದ್ದರೆ, ನೀವು ನಿಮ್ಮ ಜೀವನದಲ್ಲಿ ಧೂಮಪಾನ ಅಥವಾ ಮದ್ಯಪಾನವನ್ನು ಮಾಡುತ್ತಿರಲಿಲ್ಲ. ನಾನು ಯಾವತ್ತೂ ಸಹ ಯಾವುದೇ ಮಾದಕ ದ್ರವ್ಯವನ್ನು ಮುಟ್ಟಿದವನಲ್ಲ ಆದರೆ ನೀವು ನನ್ನ ಕಣ್ಣುಗಳನ್ನು ನೋಡಿದರೆ, ನಾನು ಸದಾ ಅಮಲಿನಲ್ಲಿರುತ್ತೇನೆ. ಯೋಗಿಗಳು ಈ ಮದ್ಯ, ಮಾದಕ ವಸ್ತುಗಳು ಮತ್ತು ಈ ಥರಹದ ವಸ್ತುಗಳನ್ನು ಮಕ್ಕಳಾಟಿಕೆಯ ವಸ್ತುಗಳೆಂದು ಭಾವಿಸುತ್ತಾರೆ ಏಕೆಂದರೆ ನಾವು ಇವುಗಳಿಗಿಂತ ಸಾವಿರ ಪಟ್ಟು ಹೆಚ್ಚಿನಷ್ಟು ಮಾದಕತೆಯನ್ನು ಕೇವಲ ನಮ್ಮ ಜಾಗೃತಾವಸ್ಥೆಯಿಂದಲೇ ಹೊಂದಬಹುದು. ಬರೀ wine ಏಕೆ? ನೀವು di-vineಅನ್ನು ಕುಡಿದು ಅಮಲಿನಲ್ಲಿರಬಹುದು!


ಪ್ರಶ್ನೆ: ಯೋಗವು ಸಮಗ್ರವಾದ ಬೆಳವಣಿಗೆಯಲ್ಲಿ ಹೇಗೆ ಸಹಕಾರಿಯಾಗಿದೆ?


ಸದ್ಗುರು: ಯೋಗವು ಸ್ವಯಂ-ಬೆಳವಣಿಗೆಯ ಬಗ್ಗೆ ಅಲ್ಲ; ಅದು ಸ್ವ-ವಿಲೀನವಾಗುವ ಬಗ್ಗೆಯಾಗಿದೆ. ಪ್ರತ್ಯೇಕ ಜೀವದ ತುಣುಕೊಂದನ್ನು ವಿಶ್ವದೊಂದಿಗೆ ಒಂದುಗೂಡಿಸುವ ಅವಕಾಶವನ್ನು ನೀಡುವ ಒಂದು ವಿಧಾನ ಅಥವಾ ಪ್ರಕ್ರಿಯೆಯೇ ಯೋಗ. ನಿಮ್ಮ ಬದುಕಿನ ಅನುಭವವು ಸೀಮಿತವಾದ ಅಸ್ತಿತ್ವದಿಂದ ಸಾರ್ವತ್ರಿಕತೆಗೆ ಬದಲಾದರೆ, ಅದು ಯೋಗ. ನಮ್ಮೊಳಗೆ ಒಂದು ರೀತಿಯ ಏಕತೆ ಅಥವಾ ಸಂಪೂರ್ಣತೆಯಿದ್ದರೆ, ಅದು ಯೋಗ. ಹಾಗಾದಾಗ, ನಿಮಗೆ ನಿಮ್ಮ ಜೀವನದ ಜೊತೆ ಹೇಗೆ ಬೇಕೋ ಹಾಗೆ ಆಟವನ್ನಾಡಲು ಒಂದು ರೀತಿಯ ಸ್ವಾತಂತ್ರ್ಯವಿರುತ್ತದೆ, ಆದರೆ ಅದೇ ಸಮಯದಲ್ಲಿ ಜೀವನವು ನಿಮ್ಮ ಮೇಲೆ ಯಾವುದೇ ಗೆರೆಯನ್ನೂ ಸಹ ಬಿಟ್ಟುಹೋಗುವುದಿಲ್ಲ.


ಪ್ರಶ್ನೆ: ಸಂಸ್ಕೃತ ಭಾಷೆಯ ಪ್ರಕಾರ “ಯೋಗ”ವೆನ್ನುವ ಪದದ ಅರ್ಥ “ಐಕ್ಯತೆ”. ಐಕ್ಯತೆಯ ಕಡೆಗೆ ಸಾಗಲು ನಾವು ಮಾಡಬಹುದಾದಂತಹ ಯಾವುದಾದರು ಸರಳ ಅಭ್ಯಾಸಗಳಿವೆಯೇ?


ಸದ್ಗುರು: ಐಕ್ಯತೆಯನ್ನು ಸಾಧಿಸಲು ಲಭ್ಯವಿರುವ ಸರಳವಾದ ಯೋಗ ಪ್ರಕಾರವೆಂದರೆ “ನಮಸ್ಕಾರ”. ನಿಮ್ಮೊಳಗೆ ನಡೆಯುವ ಮೊದಲ ಹಂತದ ಹೋರಾಟವು ನಿಮ್ಮ ಇಡ ಮತ್ತು ಪಿಂಗಳ, ಪುರುಷತ್ವ ಮತ್ತು ಸ್ತ್ರೀತತ್ವ, ನಿಮ್ಮೊಳಗಿರುವ ಸೂರ್ಯ ಮತ್ತು ಚಂದ್ರ, ಯಿನ್ ಮತ್ತು ಯಾಂಗ್, ಬಲ ಮತ್ತು ಎಡ ಮೆದುಳಿನ ನಡುವೆ ನಡೆಯುತ್ತದೆ. ಈ ಎರಡು ಧ್ರುವೀಯತೆಗಳ ನಡುವೆ ಉಂಟಾಗುವ ಘರ್ಷಣೆಯು ನಿಮ್ಮ ಜೀವನದಲ್ಲಿ, ಲಕ್ಷಾಂತರ ರೀತಿಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯುತ್ತದೆ. ನಿಮ್ಮ ಕೈಗಳನ್ನು ಜೋಡಿಸುವುದರ ಮುಖಾಂತರ, ನಿಮ್ಮೊಳಗಿರುವ ಉಭಯತ್ವಗಳಲ್ಲಿ ಸಾಮರಸ್ಯವನ್ನು ತರಬಹುದು ಮತ್ತು ನೀವು ಜಗತ್ತನ್ನು ಒಂದುಗೂಡಿಸಬಹುದಾದ ಸಾಧ್ಯತೆಯೂ ಸಹ ಇದೆ. 


ಪ್ರಶ್ನೆ: ಯೋಗವನ್ನು ಕಲಿಯಲು ಒಬ್ಬ ಶಿಕ್ಷಕನ ಸಹಾಯದ ಅಗತ್ಯವಿದೆಯೆ ಅಥವಾ ಅದನ್ನು ಸ್ವತಃ ಕಲಿತುಕೊಳ್ಳಬಹುದೆ?


ಸದ್ಗುರು: ನೀವೊಂದು ದೂರದ ಊರಿಗೆ ಹೋಗಲು ಬಯಸುತ್ತಿದ್ದೀರ ಎಂದಿಟ್ಟುಕೊಳ್ಳೋಣ. ನೀವೊಬ್ಬರೆ ಇದ್ದು, ಹೋಗಲು ಸರಿಯಾದ ದಿಕ್ಕು ತಿಳಿದಿಲ್ಲದಿದ್ದರೆ, ಖಂಡಿತವಾಗಿಯು ನೀವೊಂದು ನಕ್ಷೆಯನ್ನು ಅಪೇಕ್ಷಿಸುತ್ತೀರ. ನಿಮಗೆ ನೀವೇ ಅಲ್ಲಿಗೆ ಹೋಗಲಾಗುವುದಿಲ್ಲ ಎಂದೇನಲ್ಲ, ಆದರೆ ಅದು ಎಷ್ಟು ಸಮಯವನ್ನು ಹಿಡಿಯುತ್ತದೆ ಎಂದು ನಮಗೆ ತಿಳಿದಿಲ್ಲ. ಗುರುತಿರದ ದಾರಿಯಲ್ಲಿ ನೀವು ನಕ್ಷೆಯ ಸಹಾಯವಿಲ್ಲದೇ ಹೋದರೆ, ನೀವಲ್ಲಿಗೆ ತಲುಪಲು ಜೀವಮಾನಗಳನ್ನೇ ತೆಗೆದುಕೊಳ್ಳಬಹುದು. ನೀವು ನಕ್ಷೆಯೊಂದಿಗೆ ಹೋದರೆ, ಸಲೀಸಾಗಿ ನೀವು ನಿಮ್ಮ ನಿಲ್ದಾಣವನ್ನು ತಲುಪುತ್ತೀರ. ನೀವೊಬ್ಬ ಒಳ್ಳೆಯ ಬಸ್ ಡ್ರೈವರ್-ನ ಜೊತೆ ಹೋದರೆ, ತುಂಬ ಆರಾಮವಾಗಿ ಸಾಗುತ್ತೀರ; ಅಷ್ಟೇ ವ್ಯತ್ಯಾಸ. ಗುರುತಿರದ ದಾರಿಯಲ್ಲಿ ನೀವು ನಡೆಯಬೇಕೆಂದಾದರೆ, ಆ ದಾರಿಯಲ್ಲಿ ಈಗಾಗಲೇ ನಡೆದಂತಹ ವ್ಯಕ್ತಿಯನ್ನು ಅನುಸರಿಸುವುದು ಬುದ್ಧಿವಂತಿಕೆ.


ಪ್ರಶ್ನೆ: ಒಬ್ಬ ಗುರುವಾಗಲು ವೃತ್ತಿಪರ ಆಯ್ಕೆಗಳಿವೆಯೇ? 


ಸದ್ಗುರು: ಯಾರೋ ಒಬ್ಬರು ನನ್ನನ್ನು ಕೇಳಿದರು, “ಸದ್ಗುರು, ನಿಮ್ಮನ್ನು ನಮ್ಮ ಗುರುವಾಗಿ ಪಡೆದಿರುವುದು ಅದ್ಭುತವಾಗಿದೆ. ನಮ್ಮನ್ನು ನಿಮ್ಮ ಶಿಷ್ಯರಾಗಿ ಪಡೆದಿರುವುದು ನಿಮಗೆ ಹೇಗನಿಸುತ್ತದೆ?” ನಾನು ಹೇಳಿದೆ, “ಒಬ್ಬ ಯೋಗಿಯಾಗಿರುವುದು ಅದ್ಭುತ. ಒಬ್ಬ ಗುರುವಾಗಿರುವುದು ನಿರಾಶಾದಾಯಕ.” ತುಂಬ ಸರಳವಾಗಿರುವುದನ್ನು ಲಕ್ಷಾಂತರ ರೀತಿಗಳಲ್ಲಿ ನನ್ನ ಜೀವಮಾನವೆಲ್ಲಾ ನಾನು ಹೇಳಿದ್ದನ್ನೇ ಹೇಳುತ್ತಿರಬೇಕು. ಆದರೂ ಸಹ ಅದು ಜನಗಳಿಗೆ ಅರ್ಥವಾದಂತೆ ಕಾಣುತ್ತಿಲ್ಲ. 
ಮತ್ತು ಅದೊಂದು ವೃತ್ತಿಯಲ್ಲ ಏಕೆಂದರೆ ಅದು ನಿಮ್ಮ ಜೀವನಾಧಾರ ಮಾತ್ರವೇ ಆಗಿದ್ದಲ್ಲಿ, ನೀವು ಜನರಿಗೆ ಬದುಕಿನ ಕೆಲವು ಅಂಶಗಳ ಬಗ್ಗೆ ಮಾರ್ಗದರ್ಶನವನ್ನು ನೀಡಲು ಸಾಧ್ಯವಿಲ್ಲ.


ಪ್ರಶ್ನೆ: ಆಧ್ಯಾತ್ಮಿಕತೆಯು ಯುವಜನರಿಗೆ ಏನನ್ನು ನೀಡಲು ಸಾಧ್ಯ?


ಸದ್ಗುರು: ಯೌವನವೆಂದರೆ ಯಥೇಚ್ಛವಾದ ಚೈತನ್ಯ. ಆದರೆ ಸ್ಥಿರತೆ ಮತ್ತು ದಿಕ್ಕಿರದ, ಕಡಿವಾಣವಿಲ್ಲದ ಶಕ್ತಿಯು ಎಂದಿಗೂ ಸಹ ಅಪಾಯಕಾರಿ ಹಾಗೂ ವಿನಾಶಕಾರಿ. ಕೇವಲ ಸ್ಥಿರವಾಗಿರುವವರು ಮಾತ್ರ ಅವರಲ್ಲಿರುವ ಯಾವುದೇ ಗುಣ ಮತ್ತು ಪ್ರತಿಭೆಯನ್ನು ಸಂಪೂರ್ಣವಾದ ಮಟ್ಟದಲ್ಲಿ ಉಪಯೋಗಿಸಬಹುದು. ಹಾಗಾಗಿ ಯುವಕರಿಗೆ ಬಹು ಮುಖ್ಯವಾದ ಸಂಗತಿಯೆಂದರೆ, ಅವರು ಧ್ಯಾನಸ್ಥರಾಗುವುದು.
ಯುವಕರು ದೇಶವನ್ನು, ಜಗತ್ತನ್ನು ಹಾಗೂ ವ್ಯವಹಾರವನ್ನು ನಿರ್ವಹಿಸುವ ಮೊದಲು, ತಮ್ಮನ್ನು ತಾವು ನಿಭಾಯಿಸಿಕೊಳ್ಳುವುದನ್ನು ಕಲಿತುಕೊಳ್ಳುವುದು ತುಂಬ ಮುಖ್ಯ. ಯೋಗದ ಸಮಸ್ತ ಪ್ರಕ್ರಿಯೆಯು ಆಂತರ್ಯ ನಿರ್ವಹಣೆಯ ವಿಜ್ಞಾನವಾಗಿದೆ. ನಿಮ್ಮ ಸುತ್ತಲೂ ಏನು ನಡೆಯುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರದೆ, ನೀವು ನಿಮ್ಮ ಸಹಜ ಸ್ವಭಾವದಿಂದಲೇ ಆನಂದ, ಉಲ್ಲಾಸ ಮತ್ತು ಶಾಂತಿಯಿಂದ ಇರಬಹುದಾದಂತಹ ಆಂತರಿಕ ಸಾಧ್ಯತೆಯನ್ನು ಸೃಷ್ಟಿಸಿಕೊಳ್ಳುತ್ತೀರ. 

 

ಪ್ರಶ್ನೆ: ಅರಿವನ್ನು ಹೆಚ್ಚಿಸಿಕೊಳ್ಳಲು ಮೊದಲ ಹೆಜ್ಜೆ ಏನು?


ಸದ್ಗುರು: ಪ್ರತಿ ಗಂಟೆ, “ವಾಹ್! ನಾನಿನ್ನೂ ಬದುಕಿದ್ದೇನೆ” ಎಂಬುದನ್ನು ನಿಮಗೆ ನೀವೇ ಜ್ಞಾಪಿಸಿಕೊಳ್ಳಿ. ಇದನ್ನು ಬೆಪ್ಪುತನವೆಂದು ನೀವು ತಿಳಿಯಬಹುದು, ಆದರೆ ಲಕ್ಷಾಂತರ ಜನರು ನಾಳೆ ಬೆಳಗ್ಗೆ ಎದ್ದೇಳುವುದಿಲ್ಲ. ಹಾಗಾಗಿ, ನಾಳೆ ಮುಂಜಾನೆ ನೀವಿನ್ನೂ ಸಹ ಬದುಕಿದ್ದೇ ಆದರೆ, ಸ್ಮೈಲ್ ಮಾಡಿ, ಏಕೆಂದರೆ ನಿಮಗೆ ಎಚ್ಚರವಾಯಿತು ಎನ್ನುವ ಸತ್ಯವು ಚಿಕ್ಕ ವಿಷಯವೇನಲ್ಲ. ನಂತರ, ನಿಮಗೆ ಪ್ರೀತಿಪಾತ್ರರಾದ ವ್ಯಕ್ತಿಗಳು ಜೀವಂತವಾಗಿದ್ದಾರೆಯೇ ಎಂದು ನೋಡಿ – ವಿಶೇಷ! ಕನಿಷ್ಟಪಕ್ಷ ಹತ್ತಾರು ಲಕ್ಷದಷ್ಟು ಜನ ಈ ದಿನ ತಮಗೆ ಪ್ರೀತಿಪಾತ್ರರಾದವರನ್ನು ಕಳೆದುಕೊಂಡಿರುತ್ತಾರೆ, ಆದರೆ ನಿಮಗೆ ಹತ್ತಿರವಾದ ಯಾರೊಬ್ಬರೂ ಸಹ ಇಂದು ಮೃತರಾಗಿಲ್ಲ, ಅದ್ಭುತ!
ನೀವು ನಿಮ್ಮ ಸಾವಿನ ಬಗ್ಗೆ ಜಾಗೃತವಾಗಿದ್ದಾಗ ಮಾತ್ರ, ಈ ಜೀವನದ ಸ್ವರೂಪವನ್ನು ನಿಜವಾಗಿ ತಿಳಿದುಕೊಳ್ಳಲು ಬಯಸುವಿರಿ. ನಿಮಗೆ ಮುಖ್ಯವಲ್ಲದ ಯಾವುದೇ ಅಸಂಬದ್ಧ ಕೆಲಸಗಳನ್ನು ಮಾಡಲು ನಿಮ್ಮ ಬಳಿ ಸಮಯವಿರುವುದಿಲ್ಲ. ನೀವು ನಿಮ್ಮ ಜೀವನಕ್ಕೆ ಯಾವುದು ನಿಜವಾಗಿ ಮುಖ್ಯವೋ ಅದನ್ನು ಮಾತ್ರ ಮಾಡುತ್ತೀರ. ಜೀವಂತವಾಗಿರುವುದರ ಮಹತ್ವವು ನಿಮ್ಮೊಳಗೆ ಅರಳುವುದರಿಂದಾಗಿ, ಸಹಜವಾಗಿಯೇ ನಿಮ್ಮಲ್ಲಿ ಅರಿವು ಮೂಡುತ್ತದೆ.
 

Editor’s Note: Check out the “5-minute Yoga Tools for Transformation” – simple upa-yoga practices for joy, peace, wellbeing, success and more. You can also download the app, or join or host a workshop on International Yoga Day, or train to become a facilitator for the practices.