ನಾವು ನಮ್ಮ ವಿಧಿ ಅಥವಾ ಅದೃಷ್ಟವನ್ನು ನಮಗೆ ಬೇಕಾದ ಹಾಗೆ ಸೃಷ್ಟಿಸಿಕೊಳ್ಳಬಹುದೆ? ಇದನ್ನು ಸಾಧಿಸುವುದು ಹೇಗೆ? ನೋಡೋಣ ಬನ್ನಿ.

ಸದ್ಗುರು: ಪ್ರತಿಯೊಬ್ಬರಿಗೂ ಸಹ, ಅದು ಯಾರೇ ಆಗಿರಲಿ, ಅವರ ಜೀವನ ಅವರಿಗೆ ಮುಖ್ಯ. ಜೀವನ ಮುಖ್ಯವೆಂದಾಗ, ಅವರ ಯೋಗಕ್ಷೇಮವೂ ಕೂಡ ಮುಖ್ಯವಾಗುತ್ತದೆ. ಜನರು ತಮ್ಮ ಯೋಗಕ್ಷೇಮಕ್ಕಾಗಿ ಬಹಳಷ್ಟು ಸಮಯವನ್ನು ಹೂಡುತ್ತಾರೆ. ಒಬ್ಬ ಇಂಜಿನಿಯರ್ ಆಗಿ, ಕೇವಲ ಹೊಟ್ಟೆಪಾಡಿಗಾಗಿ ದುಡಿಯಲು, ಕೆಲವರು ತಮ್ಮ ಪೂರ್ತಿ ಇಪ್ಪತ್ತೈದು ವರ್ಷಗಳನ್ನು ಕಳೆಯುವುದನ್ನು ನೀವು ನೋಡಿರುತ್ತೀರ. ಮತ್ತೆ ಕೆಲವರು ಅವರ ಕುಟುಂಬವನ್ನು ಕಟ್ಟಿ ಬೆಳೆಸಲು ತಮ್ಮ ಅರ್ಧದಷ್ಟು ಜೀವನವನ್ನೇ ವ್ಯಯಿಸಿರುತ್ತಾರೆ. ಆದರೆ ಅವರ ಆಂತರ್ಯದ ಹಿತ ಮತ್ತು ಸೌಖ್ಯಕ್ಕೋಸ್ಕರ ಅವರೆಷ್ಟು ಸಮಯವನ್ನು ನೀಡಿದ್ದಾರೆ?

ಸದ್ಯದಲ್ಲಿ, ಎಲ್ಲರೂ ಸಹ ತಮ್ಮ ಹೊರಗಿನ ಸನ್ನಿವೇಶಗಳನ್ನು ರಿಪೇರಿ ಮಾಡುವುದರಲ್ಲಿ ಮತ್ತು ನಿಭಾಯಿಸುವುದರಲ್ಲಿ ಮಗ್ನರಾಗಿದ್ದಾರೆ. ಆದರೆ ಹೊರಗಿನ ಸನ್ನಿವೇಶಗಳನ್ನು ನೀವೆಷ್ಟೇ ಸರಿಮಾಡಿದರೂ, ಅವುಗಳನ್ನು ನೂರಕ್ಕೆ ನೂರರಷ್ಟು ಸರಿಮಾಡಲು ನಿಮಗೆಂದಿಗೂ ಸಾಧ್ಯವಾಗುವುದಿಲ್ಲ. ಜಗತ್ತಿನ ಶ್ರೀಮಂತ ಸಮಾಜಗಳು ಇದಕ್ಕೆ ಜೀವಂತ ನಿದರ್ಶನಗಳಾಗಿವೆ. ಅವರು ಬಾಹ್ಯ ಪರಿಸರ ಮತ್ತು ಪರಿಸ್ಥಿತಿಗಳನ್ನು ಸಾಕಷ್ಟು ಒಳ್ಳೆಯ ಮಟ್ಟಕ್ಕೆ ಹೊಂದಿಸಿಕೊಂಡಿದ್ದಾರೆ, ಆದರೆ ಅಲ್ಲಿನ ಜನರ ಸ್ಥಿತಿಯನ್ನೊಮ್ಮೆ ಗಮನಿಸಿ. ಉದಾಹರಣೆಗೆ ಅಮೇರಿಕಾದಲ್ಲಿ, ಹೊರಗಿನ ಸ್ಥಿತಿಗತಿಗಳನ್ನು ಅವರಿಗೆ ಬೇಕಾದ ರೀತಿಯಲ್ಲಿ ಅವರು ಸರಿಪಡಿಸಿಕೊಂಡಿದ್ದಾರೆ. ಆದರೆ ಅಲ್ಲಿನ ಜನಸಂಖ್ಯೆಯ ಹೆಚ್ಚಿನಷ್ಟು ಜನ ಖಿನ್ನತೆಯಿಂದ ಬಳಲುತ್ತಿದ್ದು, ಅದನ್ನು ನಿವಾರಿಸಲು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೇವಲ ತಮ್ಮ ಸ್ಥಿಮಿತದಲ್ಲಿರಲು ಪ್ರತಿದಿನ ಅವರು ಔಷಧಗಳ ಮೊರೆ ಹೋಗಬೇಕಾಗುತ್ತದೆ! ಇದನ್ನು ಸೌಖ್ಯವೆಂದು ಪರಿಗಣಿಸಲಾಗುವುದಿಲ್ಲ.

ಬಾಹ್ಯ ಜಗತ್ತಿನಲ್ಲಿ ನಮ್ಮ ಯೋಗಕ್ಷೇಮಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನಗಳಿರುವಂತೆಯೇ, ಆಂತರ್ಯದ ಯೋಗಕ್ಷೇಮಕ್ಕಾಗಿ ಮತ್ತು ನಿಮ್ಮ ಹಣೆಬರಹಕ್ಕೆ ನೀವೇ ಒಡೆಯರಾಗಲು “ಯೋಗ ವಿಜ್ಞಾನ”ವೆಂಬ ಒಂದಿಡೀ ವಿಜ್ಞಾನ ಮತ್ತು ತಂತ್ರಜ್ಞಾನವೇ ಇದೆ.

ತಮ್ಮ ಭೌತಿಕ ಜೀವನದಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿರುವವರಿಗೆ ಸರಿಯಾದ ಕೆಲಸ ಮಾಡದಿದ್ದರೆ ತಕ್ಕ ಫಲಿತಾಂಶ ಸಿಗುವುದಿಲ್ಲ ಎನ್ನುವುದು ಅರ್ಥವಾಗಿರುತ್ತದೆ. ಅಥವಾ ಅವಿವೇಕತನದ ಕೆಲಸಗಳನ್ನು ಮಾಡಿಯೂ ಸಹ ದೇವರಿಗೊಂದು ಪ್ರಾರ್ಥನೆ ಸಲ್ಲಿಸಿಬಿಟ್ಟರೆ ಎಲ್ಲವೂ ಸರಿಹೋಗುತ್ತದೆ ಎಂದು ನೀವಿನ್ನೂ ನಂಬಿದ್ದೀರ? ಇಲ್ಲ ತಾನೆ? ಹೊರಗಿನ ಪ್ರಪಂಚದಲ್ಲಿ ಯಶಸ್ವಿಯಾಗಲು ನೀವು ಸರಿಯಾದ ಕೆಲಸಗಳನ್ನು ಮಾಡಬೇಕು, ಇಲ್ಲದಿದ್ದರೆ ಸೋಲಬೇಕಾಗುತ್ತದೆ ಎನ್ನುವುದು ನಿಮಗೆ ಚೆನ್ನಾಗಿ ಗೊತ್ತಿದೆ. ಹೀಗಿರುವಾಗ, ನಿಮ್ಮ ಅಂತರಂಗದ ಸೌಖ್ಯಕ್ಕೂ ಸಹ ಇದು ಅನ್ವಯಿಸುತ್ತದೆ ಎಂದು ನೀವು ಯೋಚಿಸದೇ ಇರುವುದಕ್ಕೆ ಏನು ಕಾರಣ?

ಅಲ್ಲಿಯೂ ಕೂಡ ನೀವು ಸರಿಯಾದ ಕೆಲಸಗಳನ್ನು ಮಾಡದೇ ಹೋದರೆ ಸರಿಯಾದ ಫಲಿತಾಂಶ ಸಿಗುವುದಿಲ್ಲ. ಬಾಹ್ಯ ಜಗತ್ತಿನಲ್ಲಿ ನಮ್ಮ ಯೋಗಕ್ಷೇಮಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನಗಳಿರುವಂತೆಯೇ, ಆಂತರ್ಯದ ಯೋಗಕ್ಷೇಮಕ್ಕಾಗಿ ಮತ್ತು ನಿಮ್ಮ ಹಣೆಬರಹಕ್ಕೆ ನೀವೇ ಒಡೆಯರಾಗಲು “ಯೋಗ ವಿಜ್ಞಾನ”ವೆಂಬ ಒಂದಿಡೀ ವಿಜ್ಞಾನ ಮತ್ತು ತಂತ್ರಜ್ಞಾನವೇ ಇದೆ. 

ಯಾವುದೂ ಪೂರ್ವನಿರ್ಧಾರಿತವಲ್ಲ

ಯಾವುದೂ ಪೂರ್ವನಿರ್ಧಾರಿತವಾಗಿಲ್ಲ, ನಿಮ್ಮ ಸಾವೂ ಸಹ! ಎಲ್ಲವನ್ನೂ ನೀವೇ ಸೃಷ್ಟಿಸಿಕೊಳ್ಳುತ್ತೀರಿ. ಸಮಸ್ಯೆಯೆಂದರೆ, ನೀವು ನಿಮ್ಮ ಜೀವನದ ಬಹುತೇಕ ಎಲ್ಲವನ್ನೂ, ನಿಮ್ಮ ಅರಿವಿಲ್ಲದಂತೆಯೇ ಸೃಷ್ಟಿ ಮಾಡಿಕೊಳ್ಳುತ್ತೀರಿ. ಆದ್ದರಿಂದ ಎಲ್ಲಿಂದಲೋ ನಿಮ್ಮ ಮೇಲದನ್ನು ಹೇರಲಾಗುತ್ತಿದೆ ಎಂದು ನೀವು ಭಾವಿಸುತ್ತೀರಿ. ನೀವು ಜೀವನದಲ್ಲಿ ಏನನ್ನಾದರೂ ಪ್ರಜ್ಞಾರಹಿತವಾಗಿ ಮಾಡಲು ಸಾಧ್ಯವಿದೆ ಎಂದಾದರೆ, ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡಲೂ ಸಹ ಸಾಧ್ಯವಿದೆ. ಇಡೀ ಆಧ್ಯಾತ್ಮಿಕ ಪ್ರಕ್ರಿಯೆಯ ಸಾಧನೆ ಇರುವುದೇ ಇದರ ಕಡೆಗೆ - ನಿಮ್ಮ ಜೀವನವನ್ನು ಅರಿವಿಲ್ಲದೆ ಸೃಷ್ಟಿಸಿಕೊಳ್ಳುತ್ತ, ಒಂದು ಪ್ರಮಾದದಂತೆ ನಡೆಸಿಕೊಂಡು ಹೋಗುವ ಬದಲು, ನೀವದನ್ನು ಪ್ರಜ್ಞಾಪೂರ್ವಕವಾಗಿ ನಿಮಗೆ ಬೇಕಾದ ರೀತಿಯಲ್ಲಿ ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿದೆ.

ಒಮ್ಮೆ ನೀವು ಆ ಪ್ರಯತ್ನವನ್ನು ಮಾಡಲು ಶುರುಮಾಡಿದರೆ, ನಿಮ್ಮ ಜೀವನವು ಹೆಚ್ಚೆಚ್ಚು ಸ್ವಯಂ-ನಿರ್ಧಾರಿತವಾಗುತ್ತ ಬರುತ್ತದೆ, ಪೂರ್ವ-ನಿರ್ಧಾರಿತವಾಗಿರುವುದಿಲ್ಲ. ನಿಮ್ಮ ದೈಹಿಕ ಶರೀರದ ಮೇಲೆ ನಿಮಗೆ ಹಿಡಿತವಿದ್ದರೆ, 15 ರಿಂದ 20 ಪ್ರತಿಶತದಷ್ಟು ನಿಮ್ಮ ಜೀವನ ಮತ್ತು ವಿಧಿ ನಿಮ್ಮ ಕೈಯಲ್ಲಿರುತ್ತದೆ. ನಿಮ್ಮ ಮನಸ್ಸಿನ ಮೇಲೆ ನಿಮಗೆ ಹಿಡಿತವಿದ್ದರೆ, 50 ರಿಂದ 60 ಪ್ರತಿಶತದಷ್ಟು ನಿಮ್ಮ ಜೀವನ ಮತ್ತು ವಿಧಿ ನಿಮ್ಮ ಕೈಯಲ್ಲಿರುತ್ತದೆ. ನಿಮ್ಮ ಜೀವಶಕ್ತಿಯ ಮೇಲೆ ನಿಮಗೆ ಹಿಡಿತವಿದ್ದರೆ, ನೂರಕ್ಕೆ ನೂರರಷ್ಟು ನಿಮ್ಮ ಜೀವನ ಮತ್ತು ವಿಧಿ ನಿಮ್ಮ ಕೈಯಲ್ಲಿರುತ್ತದೆ. ಎಷ್ಟರ ಮಟ್ಟಿಗೆಂದರೆ, ನೀವು ನಿಮ್ಮ ಸಾವಿನ ಸಮಯವನ್ನೂ ಸಹ ನಿರ್ಧರಿಸಬಹುದು. ಎಲ್ಲಿ, ಹೇಗೆ ಮತ್ತು ಯಾವಾಗ ಸಾಯುತ್ತೀರಿ ಎನ್ನುವುದನ್ನು ನೀವು ಸ್ವಯಂ ನಿರ್ಧರಿಸಬಹುದು. ನಾನಿಲ್ಲಿ ಆತ್ಮಹತ್ಯೆಯ ಕುರಿತಾಗಿ ಹೇಳುತ್ತಿಲ್ಲ! ನೀವು ಯಾರ ಗರ್ಭದಲ್ಲಿ ಜನ್ಮಿಸುತ್ತೀರಿ, ಹೇಗೆ ಜನ್ಮ ಪಡೆಯುತ್ತೀರಿ ಎನ್ನುವುದರಿಂದ ಹಿಡಿದು ನಿಮ್ಮ ಜೀವನದ ಪ್ರತಿಕ್ಷಣವೂ ಕೂಡ ಸ್ವಯಂ-ನಿರ್ಧಾರಿತವಾಗಬಹುದು.
 

ಸಂಪಾದಕರ ಟಿಪ್ಪಣಿ: ತರಗತಿಯ ರೂಪದಲ್ಲಿ ಮತ್ತು ಆನ್-ಲೈನ್ ಮೂಲಕವೂ ಲಭ್ಯವಿರುವ ಇನ್ನರ್ ಇಂಜಿನಿಯರಿಂಗ್-ನ ಕುರಿತಾಗಿ ಮತ್ತಷ್ಟನ್ನು ಇಲ್ಲಿ ತಿಳಿಯಿರಿ Inner Engineering