ಸದ್ಗುರು: ಮೂಲಭೂತವಾಗಿ ತೀರ್ಥಯಾತ್ರೆಯ ಹಿಂದಿನ ಉದ್ದೇಶ, ನೀವು ಯಾರು ಎಂಬುದರ ಬಗ್ಗೆ ನಿಮಗಿರುವ ಅಭಿಪ್ರಾಯ ಹಾಗೂ ಕಲ್ಪನೆಗಳನ್ನು ತೊಡೆದುಹಾಕುವುದೇ ಆಗಿದೆ. ಕೇವಲ ನಡೆಯುವ ಮತ್ತು ಬೆಟ್ಟಗುಡ್ಡಗಳನ್ನು ಏರುವ ಹಾಗೂ ಪ್ರಕೃತಿಯ ವಿವಿಧ ಪ್ರಯಾಸಕರ ಕ್ರಿಯೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವ ಪ್ರಕ್ರಿಯೆಯಲ್ಲಿ, ನಾವು ಶೂನ್ಯವಾಗಲು ಬಯಸುತ್ತೇವೆ. ಇಂದು ತೀರ್ಥಯಾತ್ರೆಗಳನ್ನು ಹೆಚ್ಚು ಅನುಕೂಲಕರವಾಗಿ ಮಾಡಲಾಗಿದೆ. ಹಾಗಾಗಿ ನಾವು ವಿಮಾನಗಳನ್ನು ಬಳಸಿ ಬೆಟ್ಟಗುಡ್ಡಗಳನ್ನು ಹತ್ತಿ ಇಳಿಯುತ್ತಿದ್ದೇವೆ ಮತ್ತು ಸ್ವಲ್ಪ ಮಾತ್ರವೇ ನಡೆಯುತ್ತಿದ್ದೇವೆ.  

ದೈಹಿಕವಾಗಿ ನೋಡಿದರೆ, ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಜರು ಇದ್ದ ಸ್ಥಿತಿಗಿಂತಲೂ ನಾವು ಹೆಚ್ಚು ದುರ್ಬಲ ಮನುಷ್ಯರಾಗಿದ್ದೇವೆ, ಏಕೆಂದರೆ ನಮ್ಮ ಬಳಿಯಿರುವ ಸೌಕರ್ಯ ಮತ್ತು ಅನುಕೂಲತೆಗಳನ್ನು ನಮ್ಮ ಯೋಗಕ್ಷೇಮಕ್ಕಾಗಿ ಹೇಗೆ ಬಳಸಬೇಕೆಂಬುದು ನಮಗೆ ತಿಳಿದಿಲ್ಲ. ನಮ್ಮನ್ನು ಕೃಶರನ್ನಾಗಿಸಿಕೊಳ್ಳಲು ಮತ್ತು ನಮ್ಮ ಹಾಗೂ ನಮ್ಮ ಸುತ್ತಲಿನ ಪರಿಸರದೊಂದಿಗೆ ಹೆಚ್ಚು ಕಠಿಣರಾಗಲು ನಾವವುಗಳನ್ನು ಬಳಸಿಕೊಂಡಿದ್ದೇವೆ. ಆದ್ದರಿಂದ, ತೀರ್ಥಯಾತ್ರೆಗಳ ಮೂಲಭೂತ ಉದ್ದೇಶ ಪುರಾತನ ಸಮಾಜಗಳಿಗಿಂತ ಆಧುನಿಕ ಸಮಾಜಗಳಿಗೇ ಇನ್ನೂ ಹೆಚ್ಚು ಸೂಕ್ತವಾಗುತ್ತದೆ. ತೀರ್ಥಯಾತ್ರೆಯ ಸ್ಥಳವನ್ನು ಆಯ್ದುಕೊಳ್ಳುವ ವಿಷಯಕ್ಕೆ ಬಂದಾಗ, ಕೈಲಾಸ ಮತ್ತು ಮಾನಸಸರೋವರ ಬಹುಶಃ ಒಬ್ಬರು ಮಾಡಬಹುದಾದ ಅತ್ಯುತ್ತಮವಾದ ಯಾತ್ರೆಯಾಗಿದೆ.

ನಾನು ಯಾವುದೇ ತೀರ್ಥಯಾತ್ರೆಯನ್ನು ಮಾಡಬೇಕಾದಂತಹ ಆಂತರಿಕ ಸ್ಥಿತಿಯಲ್ಲಿಲ್ಲ, ಆದರೆ ಮಾನಸಸರೋವರ ಮತ್ತು ಕೈಲಾಸ ಪರ್ವತದ ತೀರ್ಥಯಾತ್ರೆಯು, ಅನುಭವದ ವಿಷಯದಲ್ಲಿ ನನಗೆ ಸಂಪೂರ್ಣವಾಗಿ ದಿಗ್ಭ್ರಮೆಯನ್ನು ಮೂಡಿಸಿದೆ. ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು ಸಾಕಷ್ಟನ್ನು ನೋಡಿದ್ದೇನೆ. ಹಲವು ಜೀವಿತಾವಧಿಯ ನೆನಪುಗಳು ಇನ್ನೂ ನನ್ನೊಂದಿಗೆ ಇರುವುದರಿಂದ, ನಾನು ಅಷ್ಟು ಸುಲಭವಾಗಿ ಯಾವುದರಿಂದಲೂ ಆಶ್ಚರ್ಯಕ್ಕೊಳಗಾಗುವ ಅಥವಾ ಉತ್ಸುಕನಾಗುವ ರೀತಿಯವನಲ್ಲ; ಆದರೆ ಇಲ್ಲಿ ಮಾಡಿದ 15 ದಿನಗಳ ಯಾತ್ರೆ ನನ್ನ ಅನುಭವದಲ್ಲಿ, ನಿಜವಾಗಿಯೂ ಕೇವಲ ಆಶ್ಚರ್ಯಕರವಷ್ಟೇ ಅಲ್ಲ, ಅಸಾಧಾರಣವಾಗಿದೆ.

ಸಾವಿರಾರು ವರ್ಷಗಳ ಕಾಲ, ಆತ್ಮ ಸಾಕ್ಷಾತ್ಕಾರವನ್ನು ಪಡೆದ ಜೀವಿಗಳು ಯಾವಾಗಲೂ ಕೈಲಾಸಕ್ಕೆ ಪ್ರಯಾಣ ಬೆಳೆಸಿ ತಮ್ಮ ಜ್ಞಾನವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ, ಒಂದು ನಿರ್ದಿಷ್ಟವಾದ ಶಕ್ತಿ ರೂಪದಲ್ಲಿ ಶೇಖರಿಸಿ ಇಟ್ಟಿದ್ದಾರೆ. ಶಿವ ಅಲ್ಲಿ ವಾಸಿಸುತ್ತಾನೆಂದು ಹಿಂದೂಗಳು ಹೇಳುತ್ತಾರೆ. ಮತ್ತು ಸಪ್ತ ಋಷಿಗಳು ಎಂದು ಕರೆಯಲ್ಪಡುವ ಶಿವನ ಏಳು ನೇರ ಶಿಷ್ಯರಲ್ಲಿ ಒಬ್ಬರಾದ, ದಕ್ಷಿಣ ಭಾರತದ ಆಧ್ಯಾತ್ಮದ ಮೂಲವಾಗಿರುವ ಅಗಸ್ತ್ಯ ಮುನಿಗಳು ಕೈಲಾಸದ ದಕ್ಷಿಣ ಮುಖದಲ್ಲಿ ವಾಸಿಸುತ್ತಾರೆ ಎಂದು ದಕ್ಷಿಣ ಭಾರತೀಯ ಆಧ್ಯಾತ್ಮವು ಯಾವಾಗಲೂ ಹೇಳುತ್ತದೆ. ಅದರರ್ಥ ಅವರು ವಾಸ್ತವವಾಗಿ ಅಲ್ಲಿ ವಾಸಿಸುತ್ತಿದ್ದಾರೆ ಎಂದಲ್ಲ, ಅವರು ತಮ್ಮ ಇಡೀ ಜೀವಮಾನದ ಕೆಲಸ ಹಾಗೂ ಜ್ಞಾನವನ್ನು ಅಲ್ಲಿ ಠೇವಣಿ ಮಾಡಿದರು, ಏಕೆಂದರೆ ಜನರಿಗೆ ಅದನ್ನು ಪ್ರಸಾರಣ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ.  ಹೀಗಾಗಿ ಕೈಲಾಸ ಪರ್ವತವು ಜ್ಞಾನದ ಒಂದು ನಿಧಿಯೇ ಆಗಿದೆ.