ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆಂದು ಚಿಂತಿಸಬೇಡಿ!
ಇತರರು ನಿಮ್ಮ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಾರೋ ಎಂಬ ಚಿಂತೆಗೊಳಗಾಗಿದ್ದೀರ? ಅವರನ್ನು ಅವರ ಪಾಡಿಗೆ ಮಾತನಾಡಲು ಬಿಟ್ಟುಬಿಡಿ ಮತ್ತು ನೀವೇನನ್ನು ಮಾಡಲು ಬಯಸುತ್ತಿದ್ದೀರೊ ಅದರ ಮೇಲೆ ಗಮನ ಹರಿಸಿ ಎಂದು ಸದ್ಗುರುಗಳು ಈ ಲೇಖನದಲ್ಲಿ ಹೇಳುತ್ತಾರೆ.
ಪ್ರಶ್ನೆ: ನಮಸ್ಕಾರ ಸದ್ಗುರು. ಇತರ ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸುತ್ತೇನೆ. ಇದನ್ನು ನಿಭಾಯಿಸುವುದು ಹೇಗೆ?
ಸದ್ಗುರುಗಳು: ಮೊದಲನೆಯದಾಗಿ, ನಿಮ್ಮ ಬೆನ್ನ ಹಿಂದೆ ಏನು ನಡೆಯುತ್ತಿದೆ ಎನ್ನುವುದು ನಿಮಗೆ ಸರಿಯಾಗಿ ತಿಳಿದಿದೆಯೆ? ಅಥವಾ ಏನಾಗುತ್ತಿರಬಹುದು ಎಂದು ನೀವೇ ಸುಮ್ಮನೆ ಊಹಿಸಿಕೊಳ್ಳುತ್ತೀರೊ? ಊಹಿಸಿಕೊಳ್ಳುವುದನ್ನು ನಿಲ್ಲಿಸಿ. ನಿಮ್ಮ ಬಗ್ಗೆ ಮತ್ತೊಬ್ಬರು ಏನನ್ನಾದರೂ ಯೋಚಿಸುತ್ತಿದ್ದೇ ಆದರೆ ಅದು ಅವರ ಸಮಸ್ಯೆ, ನಿಮ್ಮದಲ್ಲ. ಅವರ ಯೋಚನೆಗಳು ಅವರ ಸಮಸ್ಯೆ. ಅವರಿಗೆ ಬೇಕಾದ್ದನ್ನು ಅವರು ಯೋಚಿಸಿಕೊಳ್ಳಲಿ ಬಿಡಿ.
ಪ್ರತಿಯೊಬ್ಬರು ಎಲ್ಲಾ ಸಮಯದಲ್ಲೂ ನಿಮ್ಮ ಬಗ್ಗೆಯೇ ಯೋಚಿಸುವಷ್ಟು ಆಸಕ್ತಿಕರ ವ್ಯಕ್ತಿ ನೀವೆಂದು ನೀವು ಭಾವಿಸಿದ್ದೀರಾ? ನಿಮ್ಮ ಬಗ್ಗೆ ಯಾರೂ ಸಹ ಯೋಚಿಸುತ್ತಿಲ್ಲವೆಂದಾದರೆ ಅದೇ ಪರಮ ಸ್ವಾತಂತ್ರ್ಯ. ಅವರೇನು ಯೋಚಿಸುತ್ತಿರಬಹುದು ಎಂದು ನೀವೇಕೆ ಯೋಚಿಸುತ್ತೀರಿ? ಅದರ ಅವಶ್ಯಕತೆಯೇ ಇಲ್ಲ. ನೀವೇನು ಮಾಡಬೇಕೆಂದುಕೊಂಡಿದ್ದೀರೋ ಅದರ ಬಗ್ಗೆ ಗಮನಕೊಡಿ. ಬೇರೆಯವರು ಅವರಿಗೇನು ಬೇಕೋ ಅದನ್ನು ಯೋಚನೆ ಮಾಡಲಿ. ಬಹುಶಃ ಅವರಿಗೆ ಯೋಚಿಸಲು ಒಳ್ಳೆಯ ವಿಷಯವೇನೂ ಇಲ್ಲ, ಹಾಗಾಗಿ ನಿಮ್ಮ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಯಾರಾದರೊಬ್ಬರು ಸದಾ ನನ್ನ ಬಗ್ಗೆ ಯೋಚಿಸುತ್ತಿರುತ್ತಾರೆ ಎಂಬುದು ಹೆಚ್ಚಾಗಿ ನಿಮ್ಮ ಕಲ್ಪನೆಯಷ್ಟೆ.
ಬಹುತೇಕ ಜನ ತಮ್ಮದೇ ಆದ ಸಮಸ್ಯೆಗಳಲ್ಲಿ ಮುಳುಗಿ ಹೋಗಿರುತ್ತಾರೆ. ಅವರು ನಿಮ್ಮ ಬಗ್ಗೆ ಯಾವ ಯೋಚನೆಯನ್ನೂ ಮಾಡುತ್ತಿಲ್ಲ, ಮತ್ತದು ತುಂಬಾ ಒಳ್ಳೆಯದು. ಯಾರಾದರೂ ನಮ್ಮ ಬಗ್ಗೆ ಯೋಚಿಸುತ್ತಿದ್ದೇ ಆದರೆ, ಅದರಿಂದ ನಮಗೇನೂ ಆಗಬೇಕಿಲ್ಲ. ಬೇರೆಯವರ ಬಗ್ಗೆ ಚಿಂತಿಸಲು ಹೋಗಬೇಡಿ. ಅವರು ಯೋಚಿಸುತ್ತಿರುವುದನ್ನು ನೀವು ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದೇಕೆ?
ಅವರ ಮಾನಸಿಕ ಸಮಸ್ಯೆಗಳನ್ನು ಅವರಿಗೇ ಬಿಡಿ. ಅವುಗಳನ್ನು ಪರಿಹರಿಸಲು ಪ್ರಯತ್ನಿಸಬೇಡಿ. ಅವರಿಗೆ ಬೇಕಾದ ಯಾವುದೇ ಅಸಂಬದ್ಧ ವಿಷಯಗಳನ್ನವರು ಯೋಚಿಸಬಹುದು. ನೀವು ಯಾರೆಂಬ ಸಂಗತಿಗೆ ಅದೇಕೆ ಬಾಧಿಸಬೇಕು? ನೀವು ಸರಿಯಾಗಿದ್ದೀರಿ ಎಂದು ನಿಮಗನ್ನಿಸಿದರೆ ಸಾಕು. ನೀವು ಸರಿಯಿಲ್ಲ ಎಂದು ಬೇರೆಯವರು ಅಂದುಕೊಂಡರೆ, ಅದು ಅವರ ಸಮಸ್ಯೆ.
ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೊ ಎಂದು ನೀವು ಚಿಂತಿಸುವುದಾದರೆ, ನೀವು ಜೀವನದಲ್ಲಿ ಏನನ್ನು ಮಾಡುವುದಿಲ್ಲ. ನೀವು ಬಯಸುವುದನ್ನು ಮಾಡುವುದಕ್ಕೆ ಎಲ್ಲರಿಂದಲೂ ಒಪ್ಪಿಗೆಯನ್ನು ಪಡೆಯಲು ಎಂದಿಗೂ ಸಹ ಸಾಧ್ಯವಿಲ್ಲ. ಹಾಗಾಗಿ, ನೀವದರ ಬಗ್ಗೆ ಚಿಂತಿಸಬೇಡಿ. ನೀವು ಏನು ಮಾಡಾಬೇಕೆಂದು ಬಯಸಿದ್ದೀರೊ ಅದರ ಕಡೆಗೆ ಗಮನಹರಿಸಿ ಅಷ್ಟೆ.
< p="">
ಸಂಪಾದಕರ ಟಿಪ್ಪಣಿ: ಬಾಹ್ಯ ಪ್ರಭಾವಗಳಿಂದ ನಮ್ಮನ್ನು ಮುಕ್ತಗೊಳಿಸುವಂತಹ ಹೊಸ ಆಯಾಮವೊಂದನ್ನು ತೆರೆಯುವ ಬಗ್ಗೆ ಸದ್ಗುರುಗಳ ಮತ್ತಷ್ಟು ಜಾಣ್ನುಡಿಗಳು "ಇನ್ನರ್ ಮ್ಯಾನೇಜ್‌ಮೆಂಟ್" ಎಂಬ ಇ-ಪುಸ್ತಕದಲ್ಲಿವೆ. ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
A version of this article was originally published in Isha Forest Flower June 2017.