ಪ್ರಶ್ನೆ: ಪ್ರೀತಿ ಮತ್ತು ಮದುವೆಗಳು ಅನೇಕಸಲ ಜನರ ನಡುವೆ ಎಲ್ಲಕ್ಕಿಂತ ಹೆಚ್ಚಿನ ಸಂಘರ್ಷವನ್ನು ಉಂಟುಮಾಡುವುದು ಏಕೆ?

ಸದ್ಗುರು: “ಗಂಡು” ಮತ್ತು “ಹೆಣ್ಣು”, ದೈಹಿಕವಾಗಿ, ಒಂದು ರೀತಿಯಲ್ಲಿ ವಿರುದ್ಧವಾಗಿದ್ದಾರೆ. ಪ್ರಕೃತಿ ನಮ್ಮನ್ನು ಈ ರೀತಿಯಲ್ಲಿ ಸೃಷ್ಟಿ ಮಾಡಿದೆ ಏಕೆಂದರೆ ಅದರಿಂದ ಸಂತಾನೋತ್ಪತ್ತಿಯ ಪ್ರಕ್ರಿಯೆಯು ಸಂಭವಿಸುತ್ತದೆ ಮತ್ತು ಮುಂದಿನ ಪೀಳಿಗೆ ಸಾಧ್ಯವಾಗುತ್ತದೆ. ಅದು ಅಗತ್ಯವಿಲ್ಲದೇ ಹೋಗಿದ್ದರೆ - ಕೊಕ್ಕರೆಗಳು ಆಕಾಶದಿಂದ ಮಕ್ಕಳನ್ನು ಉದುರಿಸುವಹಾಗಿದಿದ್ದರೆ - ಮುಂದಿನ ಪೀಳಿಗೆಯನ್ನು ಹುಟ್ಟಿಸುವ ಕೆಲಸ ಮಾಡಲು ನಮಗೆ ಒಬ್ಬ ಗಂಡು ಮತ್ತು ಹೆಣ್ಣಿನ ಅಗತ್ಯವಿರುತ್ತಿರಲಿಲ್ಲ.

ಮತ್ತು ಸಂತಾನೋತ್ಪತ್ತಿಯ ಪ್ರಕ್ರಿಯೆಯ ಬಗ್ಗೆ ಬಲವಾದ ಪ್ರಚೋದನೆ ಇಲ್ಲದೇ ಹೋಗಿದ್ದರೆ, ಜನ ಅದನ್ನು ಮಾಡಲು ಹೋಗುತ್ತಿರಲಿಲ್ಲ. ನಿಮ್ಮ ಮೆದುಳಿನ ಕೋಶಗಳನ್ನೂ ಒಳಗೊಂಡಂತೆ, ನಿಮ್ಮ ದೇಹದ ಪ್ರತಿಯೊಂದು ಕೋಶವನ್ನು ಹಾರ್ಮೋನುಗಳು ಸ್ವಾಧೀನಪಡಿಸಿಕೊಳ್ಳುತ್ತವೆ ಮತ್ತು ಅವು ನಿಮ್ಮನ್ನು ಆ ದಿಕ್ಕಿನಲ್ಲೇ ಒತ್ತಾಯಿಸುತ್ತವೆ ಮತ್ತು ಮುಂದೂಡುತ್ತವೆ. ಒಬ್ಬ ವ್ಯಕ್ತಿಗೆ ಅದನ್ನು ಮೀರಿ ಮೇಲಕ್ಕೇರಲು ಅಗಾಧವಾದ ಬುದ್ಧಿಶಕ್ತಿ ಬೇಕಾಗುತ್ತದೆ. ಇಲ್ಲದಿದ್ದರೆ ನಿಮಗೆ ಅದೇ ಜೀವನ ಎಂದು ತೋರುವಂತೆ ಅದು ಮಾಡುತ್ತದೆ.

ನಿಮಗೆ ಹತ್ತು ಅಥವಾ ಹನ್ನೊಂದು ವರ್ಷವಿದ್ದ ತನಕ, ನೀವು ಅದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಇತರ ಜನರು ಮಾಡುತ್ತಿದ್ದುದೆಲ್ಲವೂ ನಿಮಗೆ ತಮಾಷೆಯಾಗಿ ಕಾಣುತ್ತಿತ್ತು. ಆದರೆ ಇದ್ದಕ್ಕಿದ್ದಂತೆ, ಈ ಹೊಸ ರಾಸಾಯನಿಕವು ನಿಮ್ಮ ದೇಹವನ್ನು ಸ್ವಾಧೀನಪಡಿಸಿಕೊಂಡು ಬಿಟ್ಟಿತು, ಮತ್ತೀಗ ನಿಮಗದು ನಿಶ್ಚಲ ಸತ್ಯವಾಗಿಬಿಟ್ಟಿದೆ. ಪ್ರಭೇದಗಳ ಸಂತಾನೋತ್ಪತ್ತಿ, ಜೀವ ಸಂಕುಲಗಳ ಮುಂದುವರಿಕೆ ಮತ್ತು ಶಾಶ್ವತತೆಯ ತನ್ನದೇ ಆದ ಉದ್ದೇಶಗಳನ್ನು ಪೂರೈಸುವ ಸಲುವಾಗಿ ಪ್ರಕೃತಿಯು ನಿಮ್ಮ ರಾಸಾಯನಿಕ ವ್ಯವಸ್ಥೆಯನ್ನು ವಶಪಡಿಸಿಕೊಂಡುಬಿಟ್ಟಿದೆ. ಒಮ್ಮೆ ಅದು ಸಂಭವಿಸಿದ ನಂತರ, ಹೇಗಾದರೊಂದು ರೀತಿಯಲ್ಲಿ, ಗಂಡು ಮತ್ತು ಹೆಣ್ಣು ಒಂದಾಗುವಂತೆ ಒತ್ತಾಯಿಸಲಾಗುತ್ತದೆ. ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಒಮ್ಮೆ ಈ ಪ್ರಚೋದನೆಯು ಬಂದ ನಂತರ, ಸ್ವಾಭಾವಿಕವಾಗಿ ಮನಸ್ಸು ಅದರಿಂದ ಉತ್ತಮವಾದುದನ್ನು ಪಡೆಯುವುದು ಹೇಗೆ ಎಂಬುದರ ಕಡೆಗೆ ಕೆಲಸ ಮಾಡಲು ಪ್ರಾರಂಭಿಸುತ್ತದೆ.

 

ಕೊಡುವುದು ಮತ್ತು ತೆಗೆದುಕೊಳ್ಳುವುದು 
ದುರದೃಷ್ಟವಶಾತ್, ಮೂಲಭೂತವಾಗಿ ಪರಸ್ಪರರನ್ನು ಹೇಗಾದರೂ ಬಳಸಿಕೊಳ್ಳುವ ಉದ್ದೇಶದಿಂದಲೇ ಸಂಬಂಧಗಳು ನಡೆಯುತ್ತಿವೆ. ಅದು ಕೊಡುವ ಮತ್ತು ತೆಗೆದುಕೊಳ್ಳುವ ಸಂಬಂಧವಾಗಿದೆ. ನೀವು ಪ್ರತಿದಿನ ಕೊಟ್ಟು ತೆಗೆದುಕೊಳ್ಳುವಾಗ, ಒಬ್ಬ ವ್ಯಕ್ತಿಗೆ "ನಾನು ಹೆಚ್ಚು ನೀಡುತ್ತಿದ್ದೇನೆ, ಇನ್ನೊಬ್ಬರು ಕಡಿಮೆ ನೀಡುತ್ತಿದ್ದಾರೆ" ಎಂಬ ಭಾವನೆ ಸದಾ ಉಂಟಾಗುತ್ತದೆ. ಕಡಿಮೆ ಕೊಡುವುದು ಮತ್ತು ಹೆಚ್ಚಿನದನ್ನು ತೆಗೆದುಕೊಳ್ಳುವುದೇ ಬುದ್ಧಿವಂತಿಕೆಯ ಲಕ್ಷಣ ಎಂದು ಸಮಾಜವು ಯಾವಾಗಲೂ ನಿಮಗೆ ಕಲಿಸಿದೆ. ಅದು ಮಾರುಕಟ್ಟೆಯಾಗಲಿ ಅಥವಾ ಮದುವೆಯೇ ಆಗಿರಲಿ, ಒಂದೇ ಲೆಕ್ಕಾಚಾರ. ಇದರಿಂದಾಗಿಯೇ ಪ್ರೀತಿಗೆ ಹೆಚ್ಚಿನ ಮಹತ್ವವನ್ನು ನೀಡಿ ಮಾತನಾಡುವುದು, ಏಕೆಂದರೆ ಪ್ರೀತಿ ಇದ್ದಲ್ಲಿ ನೀವು ಕೊಟ್ಟು ತೆಗೆದುಕೊಳ್ಳುವ ಲೆಕ್ಕಾಚಾರವನ್ನು ಮೀರಿ ಹೋಗುತ್ತೀರಿ. ನೀವು ಯಾರೊಂದಿಗಾದರೂ ಭಾವನಾತ್ಮಕವಾಗಿ ಬೆಸೆದುಕೊಂಡಾಗ, ನೀವು ಲೆಕ್ಕಾಚಾರಗಳನ್ನು ಮೀರುತ್ತೀರಿ.

ಆಗ ಅದು, "ನಾನು ತೆಗೆದುಕೊಳ್ಳುವುದು ಮುಖ್ಯವಲ್ಲ, ನಾನು ಕೊಡುವುದು ಮುಖ್ಯ." ಎಂದಾಗುತ್ತದೆ. ಕಡಿಮೆ ಕೊಡುವುದು ಮತ್ತು ಹೆಚ್ಚಿನದನ್ನು ತೆಗೆದುಕೊಳ್ಳುವುದೇ ಬುದ್ಧಿವಂತಿಕೆಯ ಲಕ್ಷಣ ಎಂದು ಸಮಾಜವು ಯಾವಾಗಲೂ ನಿಮಗೆ ಕಲಿಸಿದೆ. ಅದು ಮಾರುಕಟ್ಟೆಯಾಗಲಿ ಅಥವಾ ಮದುವೆಯೇ ಆಗಿರಲಿ, ಒಂದೇ ಲೆಕ್ಕಾಚಾರ. ಇದರಿಂದಾಗಿಯೇ ಪ್ರೀತಿಗೆ ಹೆಚ್ಚಿನ ಮಹತ್ವವನ್ನು ನೀಡಿ ಮಾತನಾಡುವುದು, ಏಕೆಂದರೆ ಪ್ರೀತಿ ಇದ್ದಲ್ಲಿ ನೀವು ಕೊಟ್ಟು ತೆಗೆದುಕೊಳ್ಳುವ ಲೆಕ್ಕಾಚಾರವನ್ನು ಮೀರಿ ಹೋಗುತ್ತೀರಿ. ನೀವು ಯಾರೊಂದಿಗಾದರೂ ಭಾವನಾತ್ಮಕವಾಗಿ ಬೆಸೆದುಕೊಂಡಾಗ, ನೀವು ಲೆಕ್ಕಾಚಾರಗಳನ್ನು ಮೀರುತ್ತೀರಿ. ಆಗ ಅದು, "ನಾನು ತೆಗೆದುಕೊಳ್ಳುವುದು ಮುಖ್ಯವಲ್ಲ, ನಾನು ಕೊಡುವುದು ಮುಖ್ಯ." ಎಂದಾಗುತ್ತದೆ.

ಭಾವನಾತ್ಮಕ ತೀವ್ರತೆಯು ಆ ಮಟ್ಟದಲ್ಲಿದ್ದಾಗ ಸಂಬಂಧವು ಸುಂದರವಾಗಿ ನಡೆಯುತ್ತದೆ. ಆ ಭಾವನಾತ್ಮಕ ತೀವ್ರತೆಯು ಕಡಿಮೆಯಾದ ನಂತರ, ಅದು ಕೊಡುವುದು ಮತ್ತು ತೆಗೆದುಕೊಳ್ಳುವುದಷ್ಟೇ ಆಗಿಬಿಡುತ್ತದೆ. ನಿಮ್ಮ ವ್ಯವಹಾರದಲ್ಲಿ, ನಿಮ್ಮ ನೆರೆಹೊರೆಯವರೊಂದಿಗೆ, ಮತ್ತು ಹಲವಾರು ಜನರೊಂದಿಗೆ ನೀವು ಕೊಟ್ಟು ತೆಗೆದುಕೊಳ್ಳುವ ವ್ಯವಹಾರಗಳನ್ನು ಮಾಡುತ್ತೀರಿ, ಆದರೆ ಆ ವ್ಯವಹಾರಗಳು ಸೀಮಿತವಾಗಿರುತ್ತವೆ. ಆದರೆ ದಾಂಪತ್ಯದಲ್ಲಿ ಕೊಡುವುದು ಮತ್ತು ತೆಗೆದುಕೊಳ್ಳುವುದು ನಿರಂತರವಾಗಿರುತ್ತದೆ, ಮತ್ತು ನೀವು ಒಂದು ನಿರ್ದಿಷ್ಟ ವ್ಯಕ್ತಿಯೊಂದಿಗೆ ನಿರಂತರವಾಗಿ ಬಂಧಿಯಾಗಿರುತ್ತೀರಿ. ಆದ್ದರಿಂದ, ಯಾವುದೋ ಒಂದು ರೀತಿಯಲ್ಲಿ ನಿಮ್ಮನ್ನು ಬೇರೊಬ್ಬರು ಬಳಸಿಕೊಳ್ಳುತ್ತಿದ್ದಾರೆ ಎಂದು ನೀವು ಸ್ವಾಭಾವಿಕವಾಗಿಯೇ ಭಾವಿಸುತ್ತೀರಿ.

ಒಮ್ಮೆ ಹಾಗನಿಸಿದ ನಂತರ, ಅಲ್ಲಿ ಸಂಘರ್ಷವೇ ಸಂಘರ್ಷ. ಪ್ರೀತಿಯ ಆ ಕ್ಷಣಗಳಲ್ಲಿ ಮಾತ್ರ ಒಂದು ಗಂಡು ಹೆಣ್ಣು ನಿಜವಾಗಿಯೂ ಒಟ್ಟಿಗೆ ಇರಲು ಸಾಧ್ಯ. ಅದಿಲ್ಲದಿದ್ದರೆ, ಅದು ತುಂಬಾ ಕಷ್ಟ. ಆ ಸಂಬಂಧದ ದೈಹಿಕತೆ ಮತ್ತು ಭಾವನಾತ್ಮಕ ವಿಷಯಗಳು, ಪಾಲುದಾರಿಕೆ ಮತ್ತು ಬದುಕಿನ ಇತರ ಅಂಶಗಳು ಒಂದು ಹೋರಾಟವಾಗಿಬಿಡುತ್ತವೆ. ವಿಶೇಷವಾಗಿ ದೈಹಿಕತೆಯು ಅಲ್ಲಿ ಭಾಗಿಯಾಗಿರುವುದರಿಂದ, ಅವರನ್ನು ಯಾರಾದರೂ ಬಳಸಿಕೊಳ್ಳುಸುತ್ತಿದ್ದಾರೆ ಎಂದು ಒಬ್ಬರು ಸುಲಭವಾಗಿ ಭಾವಿಸಬಹುದು. ಅದು ಕೇವಲ ಹಣವಾಗಿದ್ದರೆ, ಅಥವಾ ಅದು ಕೇವಲ ಒಂದು ಮನೆಯಾಗಿದ್ದರೆ, “ಸರಿ, ನೀವು ಮನೆಯ ಆ ಭಾಗವನ್ನು ಬಳಸಿರಿ, ನಾನು ಮನೆಯ ಈ ಭಾಗವನ್ನು ಬಳಸುತ್ತೇನೆ.”, “ನೀವು ಅಡುಗೆ ಮಾಡಿ, ನಾನು ಗಳಿಸುತ್ತೇನೆ.” ಎಂಬ ರೀತಿಯ ಒಪ್ಪಂದವು ಸಾಧ್ಯವಿರುತ್ತಿತ್ತೇನೋ, ಆದರೆ ಅಲ್ಲಿ ದೇಹವು ಭಾಗಿಯಾಗಿರುವುದರಿಂದ, ನಮ್ಮನ್ನು ಬಳಸಿಕೊಳ್ಳುತ್ತಿರಬಹುದೆಂಬ ಭಾವನೆ ತುಂಬ ಸಲೀಸಾಗಿ ಬಂದುಬಿಡಬಹುದು, ಮತ್ತು ಅದರಿಂದಾಗಿ ಅಲ್ಲಿ ಸಂಘರ್ಷ ಉಂಟಾಗುತ್ತದೆ.

ಪ್ರಶ್ನೆ: ಹಾಗಾದರೆ ಇದಕ್ಕೆ ಪರಿಹಾರವೇನು?

ಸದ್ಗುರು: ನೀವು ಯಾವಾಗಲೂ ಒಂದು ಗಂಡು ಅಥವಾ ಒಂದು ಹೆಣ್ಣಾಗಿರುವುದನ್ನು ಮೊದಲು ನಿಲ್ಲಿಸಬೇಕು. ನಿಮ್ಮ ಪುರುಷತ್ವ ಅಥವಾ ಸ್ತ್ರೀತ್ವವನ್ನು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ನೀವು ಹೊತ್ತು ತಿರುಗಬೇಕಾಗಿಲ್ಲ. ಜೀವನದ ಕೆಲವು ಅಂಶಗಳಲ್ಲಿ ನೀವು ಪುರುಷ ಅಥವಾ ಮಹಿಳೆಯಾಗಬೇಕಾದ ಕೆಲವು ನಿರ್ದಿಷ್ಟ ಸಂದರ್ಭಗಳಿವೆ. ಉಳಿದ ಸಮಯ, ನೀವು ಎರಡೂ ಆಗಿರಬೇಕಿಲ್ಲ. ಆದರೆ ಸಮಾಜಗಳು ನಿಮಗೆ ಸಾರ್ವಕಾಲಿಕವಾಗಿ ಈ ರೀತಿಯಾಗಿರಲು ತರಬೇತಿಯನ್ನು ನೀಡಿವೆ. ನೀವು ಧರಿಸುವ ಬಟ್ಟೆಗಳಿಂದ ಹಿಡಿದು, ನೀವು ಮಾಡುವ ಎಲ್ಲದರಲ್ಲೂ ಒಂದು ನಿರ್ದಿಷ್ಟ ಉದ್ದೇಶವನ್ನು ಪೂರೈಸಲು ನಿಮಗೆ ಒಂದು ನಿರ್ದಿಷ್ಟ ರೀತಿಯಲ್ಲಿ ತರಬೇತಿಯನ್ನು ನೀಡಲಾಗಿದೆ. ಇಪ್ಪತ್ನಾಲ್ಕು ಗಂಟೆಗಳ ಕಾಲ ಪುರುಷನಾಗಿರುವುದು ಅಥವಾ ಇಪ್ಪತ್ನಾಲ್ಕು ಗಂಟೆಗಳ ಕಾಲ ಮಹಿಳೆಯಾಗಿರುವುದು - ಒಮ್ಮೆ ನೀವು ಈ ರೀತಿಯಾಗಿಬಿಟ್ಟರೆ, ನೀವು ತೊಂದರೆಗೀಡಾಗುತ್ತೀರಿ.