ಗುರು ಪಾದುಕ ಸ್ತೋತ್ರವು "ಅಂತ್ಯವಿಲ್ಲದ ಸಂಸಾರಸಾಗರವನ್ನು ದಾಟಲು ಸಹಾಯ ಮಾಡುವ ದೋಣಿ" ಎಂದು ಸಾಂಕೇತಿಕವಾಗಿ ಪ್ರತಿನಿಧಿಸಲಾಗಿರುವ "ಗುರುವಿನ ಪಾದರಕ್ಷೆ"ಯನ್ನು ವೈಭವೀಕರಿಸುವ ಒಂದು ಶಕ್ತಿಯುತ ಸ್ತೋತ್ರವಾಗಿದೆ. ನಾವು ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಈ ಮಂತ್ರವು ಸಾಧ್ಯವಾಗಿಸುತ್ತದೆ. ಈಶ ಬ್ರಹ್ಮಾಚರಿಗಳು ಹಾಡಿರುವ ಈ ಸ್ತೋತ್ರವು, ವೈರಾಗ್ಯ ಆಲ್ಬಮ್-ನ ಭಾಗವಾಗಿ ಲಭ್ಯವಿದೆ. ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು. ಇದು ಈಶ ಚಾಂಟ್ಸ್-ನ (Isha Chants) app ನಲ್ಲಿ ಕೂಡ ಲಭ್ಯವಿದೆ. ಸ್ತೋತ್ರದ ಸಾಹಿತ್ಯವನ್ನುಸಹ ಕೆಳಗೆ ಕನ್ನಡದಲ್ಲಿ ನೀಡಲಾಗಿದೆ. 

ಸದ್ಗುರು: ಅನುಗ್ರಹ ನಿಮಗೆ ದೊರಕದೆ ಇದ್ದಲ್ಲಿ ಅಥವಾ ನೀವು ಅನುಗ್ರಹಕ್ಕೆ ದೊರಕದೆ ಇದ್ದಲ್ಲಿ, ನಿಮ್ಮ ಬಳಿ ಎಷ್ಟೇ ಹಣವಿರಲಿ, ಸಂಪತ್ತಿರಲಿ, ಬೇರೆ ಏನಾದರೂ ಇರಲಿ ನಿಮಗೆ ಸುಂದರವಾದ ಜೀವನವನ್ನು ನಡೆಸಲಾಗುವುದಿಲ್ಲ. ಗುರುವಿನ ಅನುಗ್ರಹವೆನ್ನುವುದು ನೀವು ಊಹಿಸುವ ಯಾವುದೋ ಒಂದು ಕಲ್ಪನೆಯಲ್ಲ. ಅದು ಭೌತಿಕ ವಸ್ತುಗಳಷ್ಟೆ ನೈಜವಾದ ಸಂಗತಿ. ನೀವು ಅನುಭವಿಸುವ ತಂಗಾಳಿಯಷ್ಟೇ ಭೌತಿಕವಾಗಿದೆ, ಸೂರ್ಯನ ಬೆಳಕಿನಷ್ಟೇ ಭೌತಿಕವಾಗಿದೆ. 

ನೀವು ಅನುಗ್ರಹಕ್ಕೆ ಪಾತ್ರರಾದರೆ, ನಿಮ್ಮ ಜೀವನದಲ್ಲಿ ಕೀಲೆಣ್ಣೆ ಹಾಕಿದಂತಾಗಿ ನಿಮಗೆ ಎಲ್ಲವೂ ಅನಾಯಾಸವಾಗಿರುವಂತೆ ಕಾಣುತ್ತದೆ

ನೀವು ಗುರು ಎಂದು ಯಾರನ್ನು ಕೆರೆಯುತ್ತೀರೋ, ಅದು ಕೇವಲ ಒಂದು ನಿರ್ದಿಷ್ಟ ಶಕ್ತಿ, ಒಂದು ನಿರ್ದಿಷ್ಟ ಸಾಧ್ಯತೆಯಷ್ಟೆ. ಅದು ಒಬ್ಬ ವ್ಯಕ್ತಿಯ ಬಗ್ಗೆ ಅಲ್ಲ. ಒಬ್ಬ ವ್ಯಕ್ತಿಯು, ಆ ಸ್ಥಾನದ ಹಾಗೂ ಶಕ್ತಿಯ ಪ್ರತಿನಿಧಿ ಮಾತ್ರ. ನೀವು ಕಾಣಬೇಕಾದರೆ, ನಿಮಗೆ ಬೇಕಾಗಿರುವುದು ಬೆಳಕು, ಲೈಟ್ ಬಲ್ಬ್ ಅಲ್ಲ. ಆದರೆ ಈಗ, ಆ ಬಲ್ಬೇ ಬೆಳಕಿನ ಮೂಲವಾಗಿದೆ. ಆದ್ದರಿಂದ ನೀವು, “ಬಲ್ಬ್ ಇಲ್ಲದೆ ಬದುಕಿರುವುದು ನನಗೆ ಸಾಧ್ಯವಿಲ್ಲ” ಎಂದು ಯೋಚಿಸುವಿರಿ. ಒಂದು ಮಟ್ಟದಲ್ಲಿ ಇದು ಸತ್ಯ. ಆದರೆ, ಗುರುವಿನ ಸ್ವರೂಪ, ಒಂದು ಸ್ಥಳ ಹಾಗೂ ಸಮಯಕ್ಕೆ ಸೀಮಿತವಾಗಿಲ್ಲ. ಹಾಗಾಗಿ, ನೀವು ಬಲ್ಬಿನ ಸಮೀಪ ಕುಳಿತರೆ ನಿಮಗೆ ಹೆಚ್ಚಿನ ಬೆಳಕು ಬರಬೇಕೆಂದೇನು ಇಲ್ಲ. ಸಾವಿರ ಮೈಲಿಗಳಷ್ಟು ದೂರದಲ್ಲಿದ್ದೂ, ಸಮೀಪ ಕುಳಿತವರಿಗಿಂತ ನೀವು ಹೆಚ್ಚಿನ ಅನುಗ್ರಹವನ್ನು ಪಡೆಯಬಹುದು. 

ಅನುಗ್ರಹವಿಲ್ಲದೆ ನಿಮಗೆ ಯಶಸ್ಸು ಸಿಗಲು ಸಾಧ್ಯವಿಲ್ಲ. ಹೇಗಾದರೂ, ಒಂದಲ್ಲ ಒಂದು ರೀತಿಯಲ್ಲಿ, ಅನುಗ್ರಹಕ್ಕೆ ಪಾತ್ರರಾಗುವುದನ್ನು ನೀವು ಕಲಿತುಕೊಳ್ಳಲೇ ಬೇಕು. ಕೇವಲ ನಿಮ್ಮ ಮಾನಸಿಕ ಸ್ಥಿತಿಯು ನಿಮ್ಮನ್ನು ಸ್ವೀಕಾರಾರ್ಹರಾಗಿ ಮಾಡಬಹುದು, ನಿಮ್ಮ ದೇಹವನ್ನು ಪೋಷಿಸುವ ರೀತಿಯು ನಿಮ್ಮನ್ನು ಸ್ವೀಕಾರಾರ್ಹರಾಗಿ ಮಾಡಬಹುದು, ನಿಮ್ಮ ಭಾವನೆಗಳನ್ನು ಇರಿಸಿಕೊಳ್ಳುವ ರೀತಿಯು ನಿಮ್ಮನ್ನು ಸ್ವೀಕಾರಾರ್ಹರಾಗಿ ಮಾಡಬಹುದು ಅಥವಾ ನಿಮ್ಮ ಬಳಿ ಹೆಚ್ಚು ಸಂಕೀರ್ಣವಾದ ವಿಧಾನಗಳಿದ್ದು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಅರಿವಿದ್ದು, ನೀವು ಕೃಪೆಗೆ ಸ್ವೀಕಾರಾರ್ಹರಾಗಿರಬಹುದು. ಆದರೆ, ಅನುಗ್ರಹವಿಲ್ಲದೆ ಯಾವುದೇ ಯಶಸ್ಸಿರುವುದಿಲ್ಲ. ನೀವು ಪ್ರತಿಭಾವಂತರಾಗಿರದ್ದರೂ ಸಫಲರಾಗುವುದಿಲ್ಲ. ನೀವು ಅತ್ಯಂತ ಸಮರ್ಥರಾಗಿರದ್ದರೂ ಸಫಲರಾಗುವುದಿಲ್ಲ.

ಆದರೆ, ಒಂದು ಕ್ಷಣದ ಅನುಗ್ರಹ, ತಕ್ಷಣ ಎಲ್ಲವೂ ಯಶಸ್ವಿಯಾಗುವುದನ್ನು ನೀವು ನೋಡುವಿರಿ. ಶಾಂತಿಯಿಂದ ಇರಲು, ಸಂತೋಷವಾಗಿರಲು, ನೀವು ಇದನ್ನು ಒಳಗಿನಿಂದ ಮಾಡಬಹುದು. ನಿಮ್ಮ ದೇಹ ಹಾಗೂ ಮನಸ್ಸನ್ನು ಯಾವ ರೀತಿಯಲ್ಲಿ ಇಟ್ಟುಕೊಳ್ಳಬೇಕೆಂದು ನಿಮಗೆ ತಿಳಿದಿದ್ದರೆ, ನೀವು ಇವುಗಳನ್ನು ಮಾಡಬಹುದು. ಅನುಗ್ರಹವಿಲ್ಲದೆ, ನೀವೇನು ಮಾಡುತ್ತಿದ್ದರೂ ಅದರಲ್ಲಿ ಯಶಸ್ವಿಯಾಗುವುದಿಲ್ಲ. ಅನುಗ್ರಹದ ಸ್ನಿಗ್ಧತೆಯಿಲ್ಲದೆ ನೀವು ಬಹಳ ದೂರ ಹೋಗುವುದಿಲ್ಲ. ಜೀವನದಲ್ಲಿ ಎಲ್ಲವೂ ಕಠಿಣವಾಗಿರುತ್ತದೆ. ಹೆಚ್ಚಿನವರು ತಮಗೆ ತಾವೇ ಅತಿಯಾದ ಮಹತ್ವ ಕೊಟ್ಟುಕೊಳ್ಳುವುದರಿಂದ ಇದನ್ನು ತಮಗೆ ತಾವೇ ಮಾಡಿಕೊಳ್ಳುತ್ತಾರೆ. ಇಂತಹವರು ಕೃಪೆಗೆ ಪಾತ್ರರಾಗುವುದಿಲ್ಲ. ಅವರ ಜೀವನದಲ್ಲಿ ಎಲ್ಲವೂ ಕಷ್ಟಕರವಾಗಿರುತ್ತದೆ – ವಿದ್ಯಾಭ್ಯಾಸ ಕಷ್ಟವಾಗಿರುತ್ತದೆ, ಕೆಲಸಕ್ಕೆ ಹೋಗುವುದು ಕಷ್ಟವಾಗಿರುತ್ತದೆ, ಮದುವೆಯಂತೂ, ಬಹಳ ಕಷ್ಟಕರವಾಗಿರುತ್ತದೆ. ನೀವು ಅನುಗ್ರಹಕ್ಕೆ ಪಾತ್ರರಾದರೆ, ನಿಮ್ಮ ಜೀವನದಲ್ಲಿ ಕೀಲೆಣ್ಣೆ ಹಾಕಿದಂತಾಗಿ ನಿಮಗೆ ಎಲ್ಲವೂ ಅನಾಯಾಸವಾಗಿರುವಂತೆ ಕಾಣುತ್ತದೆ.

ಈಶಚಾಂಟ್ಸ್– ಉಚಿತ ಮೊಬೈಲ್ app
ವೈರಾಗ್ಯ –mp3 ಡೌನ್ಲೋಡ್

ಗುರು ಪಾದುಕ ಸ್ತ್ರೋತ್ರ

ಅನಂತಸಂಸಾರ ಸಮುದ್ರತಾರ ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಮ್ |
ವೈರಾಗ್ಯಸಾಮ್ರಾಜ್ಯದಪೂಜನಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೧ ||

ಕವಿತ್ವವಾರಾಶಿನಿಶಾಕರಾಭ್ಯಾಂ ದೌರ್ಭಾಗ್ಯದಾವಾಂ ಬುದಮಾಲಿಕಾಭ್ಯಾಮ್ |
ದೂರಿಕೃತಾನಮ್ರ ವಿಪತ್ತತಿಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೨ ||

ನತಾ ಯಯೋಃ ಶ್ರೀಪತಿತಾಂ ಸಮೀಯುಃ ಕದಾಚಿದಪ್ಯಾಶು ದರಿದ್ರವರ್ಯಾಃ |
ಮೂಕಾಶ್ರ್ಚ ವಾಚಸ್ಪತಿತಾಂ ಹಿ ತಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೩ ||

ನಾಲೀಕನೀಕಾಶ ಪದಾಹೃತಾಭ್ಯಾಂ ನಾನಾವಿಮೋಹಾದಿ ನಿವಾರಿಕಾಭ್ಯಾಮ್ |
ನಮಜ್ಜನಾಭೀಷ್ಟತತಿಪ್ರದಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೪ ||

ನೃಪಾಲಿ ಮೌಲಿವ್ರಜರತ್ನಕಾಂತಿ ಸರಿದ್ವಿರಾಜತ್ ಝಷಕನ್ಯಕಾಭ್ಯಾಮ್ |
ನೃಪತ್ವದಾಭ್ಯಾಂ ನತಲೋಕಪಂಕತೇ: ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೫ ||

ಪಾಪಾಂಧಕಾರಾರ್ಕ ಪರಂಪರಾಭ್ಯಾಂ ತಾಪತ್ರಯಾಹೀಂದ್ರ ಖಗೇಶ್ರ್ವರಾಭ್ಯಾಮ್ |
ಜಾಡ್ಯಾಬ್ಧಿ ಸಂಶೋಷಣ ವಾಡವಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೬ ||

ಶಮಾದಿಷಟ್ಕ ಪ್ರದವೈಭವಾಭ್ಯಾಂ ಸಮಾಧಿದಾನ ವ್ರತದೀಕ್ಷಿತಾಭ್ಯಾಮ್ |
ರಮಾಧವಾಂಧ್ರಿಸ್ಥಿರಭಕ್ತಿದಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೭ ||

ಸ್ವಾರ್ಚಾಪರಾಣಾಮ್ ಅಖಿಲೇಷ್ಟದಾಭ್ಯಾಂ ಸ್ವಾಹಾಸಹಾಯಾಕ್ಷಧುರಂಧರಾಭ್ಯಾಮ್ |
ಸ್ವಾಂತಾಚ್ಛಭಾವಪ್ರದಪೂಜನಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೮ ||

ಕಾಮಾದಿಸರ್ಪ ವ್ರಜಗಾರುಡಾಭ್ಯಾಂ ವಿವೇಕವೈರಾಗ್ಯ ನಿಧಿಪ್ರದಾಭ್ಯಾಮ್ |
ಬೋಧಪ್ರದಾಭ್ಯಾಂ ದೃತಮೋಕ್ಷದಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೯ ||


ಸಂಪಾದಕರ ಟಿಪ್ಪಣಿ: ಮಂತ್ರಗಳ ಮಹತ್ವದ ಬಗ್ಗೆ ಓದಲು, Becoming A Mantra, ಇಲ್ಲಿಗೆ ಭೇಟಿ ಕೊಡಿ.

ಇತರ Mystic Chant ಗಳು.