ನಮಸ್ಕಾರ ಸದ್ಗುರು, ಜನರೊಂದಿಗೆ ಬೇರೆ ಬೇರೆ ಸಾಧ್ಯತೆಗಳ ಕಡೆಗೆ ಕೆಲಸ ಮಾಡುವುದು ನಿಮ್ಮ ಉದ್ದೇಶವಾಗಿದ್ದು, ಅದರೆಡೆಗೆ ನೀವು ಆತುರದಲ್ಲಿದ್ದೀರಿ ಎಂದು ನೀವು ಹೇಳಿದ್ದೀರಿ. ಈ ವಿಷಯದಲ್ಲಿ ನಾವೇನು ಮಾಡಬಹುದು?

ಎಲ್ಲಕ್ಕಿಂತ ಮೊದಲನೆಯದು ಮತ್ತು ಅತಿಮುಖ್ಯವಾದದ್ದು ಇಚ್ಛೆ. ಇಚ್ಛೆಯೆಂದರೆ ಒಂದು ಪ್ರಬಲವಾದ ಆಕಾಂಕ್ಷೆ ಅಥವಾ ಆಸೆ. ಇಚ್ಛೆಯು ಸಾಕಷ್ಟು ಬಲವಾಗಿಲ್ಲದಿದ್ದರೆ, ನಿಮ್ಮ ಹಾದಿಯಲ್ಲಿ ಒಂದು ಸಣ್ಣ ತೊಂದರೆ ಬಂದರೂ, ನೀವು ಬದಿಗೆ ಸರಿದುಬಿಡುವಿರಿ. ನೀವು ಬೆಟ್ಟಗಳಲ್ಲಿ ಚಾರಣ ಮಾಡುವಾಗ ಹೀಗಾಗುತ್ತದೆ. ಹಿಂದಿನ ನಮ್ಮ ಕೈಲಾಸ ಚಾರಣದಲ್ಲಿ, ನಾವು ಮನಾಂಗ್ ಕಣಿವೆಯಿಂದ ತೊರಾಂಗ್ ಲಾ ಪಾಸ್ ನ ಮೂಲಕ ತೊರಾಂಗ್ ಲಾಕ್ಕೆ ಹೋದೆವು. ಅದು 18000 ಅಡಿಗಳ ಎತ್ತರದಲ್ಲಿ, ಅರವತ್ತು ಡಿಗ್ರಿಗಳ ಇಳಿಜಾರುಗಳ ಬೆಟ್ಟವಾಗಿತ್ತು. ನೀವು ಚಾರಣ ಮಾಡುವಾಗ, “ಮನಾಂಗ್ ಕಣಿವೆ ಸಾಕಷ್ಟು ಸುಂದರವಾಗಿದೆ! ನಾವು ಇಲ್ಲಿಂದ ಮೇಲಕ್ಕೆ ಹೋಗುವುದು ನಿಜವಾಗಿಯೂ ಅವಶ್ಯವೇ? ಅದು ನಿರ್ಜನವಾದ ಏರುಪ್ರದೇಶ, ಬರೀ ಕಲ್ಲುಬಂಡೆಗಳು, ಎಲ್ಲೂ ಹಸಿರಿನ ಸುಳಿವೇ ಇಲ್ಲ. ಆದರೆ ಇಲ್ಲಿ ಮನಾಂಗ್ ಕಣಿವೆಯಲ್ಲಿ, ತುಂಬಾ ಚೆನ್ನಾಗಿದೆ ಮತ್ತಿದು ಪೂರ್ತಿ ಹೂಗಳಿಂದ ತುಂಬಿದೆ” ಎಂದು ನಿಮ್ಮ ಮನಸ್ಸು ಹೇಳುತ್ತದೆ. ನಿಮ್ಮ ಜೀವನದಲ್ಲೂ, ಮನಸ್ಸಿನದು ಯಾವಾಗಲೂ ಇದೇ ಕಪಟ ತಂತ್ರಗಾರಿಕೆ. ಈ ತಂತ್ರಗಾರಿಕೆಯನ್ನು ಮೀರಿದವರು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಾರೆ – ಇತರರು ಸುಮ್ಮನೆ ತಿಂದು ಮಲಗುತ್ತಾರೆ ಅಷ್ಟೆ. ಅದು ಆಧ್ಯಾತ್ಮಿಕತೆಯಾಗಲಿ, ವ್ಯಾಪಾರ, ಸಂಗೀತ, ಕಲೆ – ಅಥವಾ ಮತ್ತಿನ್ಯಾವುದೇ ಸಂಗತಿಯಾಗಿರಲಿ – ನೀವು ನಿಮ್ಮ ಮಿತಿಗಳನ್ನು ಮೀರಿಹೋಗಲು ಪ್ರಯತ್ನಿಸಿದಾಗ ಹೀಗಾಗುತ್ತದೆ. ನಿಮ್ಮ ಮನಸ್ಸು, “ಅದು ನಿಜವಾಗಿಯೂ ಬೇಕೇ? ಇಲ್ಲೇ ಚೆನ್ನಾಗಿದೆಯಲ್ಲ, ಸುಮ್ಮನೆ ಬೆಟ್ಟ ಹತ್ತುವ ಅಗತ್ಯವಾದರೂ ಏನಿದೆ?” ಎಂದು ಹೇಳುತ್ತದೆ.

ಮೊಟ್ಟಮೊದಲ ಸಂಗತಿಯೆಂದರೆ ಒಂದು ಮಹತ್ವಾಕಾಂಕ್ಷೆಯನ್ನು ಸೃಷ್ಟಿಸುವುದು. “ನಾನು ತಿಳಿದುಕೊಳ್ಳಬೇಕು, ನಾನು ತಿಳಿದುಕೊಳ್ಳಬೇಕು, ನಾನು ತಿಳಿದುಕೊಳ್ಳಬೇಕು.” ಎಂಬ ಬಯಕೆಯನ್ನು ಹೊಂದುವುದು. ಅದು ನಿಮಗೆ ಒಳಗಿನಿಂದ ತೊಂದರೆಯನ್ನು ನೀಡಬೇಕು. ನಿಮ್ಮ ಆಕಾಂಕ್ಷೆ ನಿಮ್ಮನ್ನು ಬಾಧಿಸದೇ ಇದ್ದರೆ, ನಿಮ್ಮ ಅರಸುವಿಕೆ ನಿಮ್ಮನ್ನು ಮಿತಿಗಳಿಂದಾಚೆಗೆ ಕರೆದುಕೊಂಡು ಹೋಗುವುದಿಲ್ಲ ಏಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ಮಿತಿಗಳಿವೆ. “ನಾನು ಮಿತಿಗಳನ್ನು ಮೀರುತ್ತೇನೆಯೇ ಅಥವಾ ಅವುಗಳ ವಶವಾಗುತ್ತೇನೆಯೇ?” ಅದೇ ಇಲ್ಲಿನ ಪ್ರಶ್ನೆ. ಬದಲಾಗಿ, ಜನರು, “ಅದರಲ್ಲಿ ಅಂತಹದ್ದೇನಿದೆ, ಅದರಿಂದ ನಾನೇನು ಸಾಧಿಸುತ್ತೇನೆ?” ಎಂದು ಕೇಳುತ್ತಾರೆ. ಅದು ಒಂದು ಸಾಧನೆಯಲ್ಲ. ಒಂದು ಸಸಿ ಹೇಗೆ ಬೆಳೆಯುತ್ತದೆ ಎಂದು ತೋರಿಸುವ ಒಂದು ಸುಂದರವಾದ ವಿಡಿಯೋ ಇದೆ – ಒಂದು ಹೂ ಅಥವಾ ಒಂದು ಹಣ್ಣನ್ನು ಉತ್ಪಾದಿಸಲು ಗಿಡದ ಬೇರುಗಳು ಏನೇನು ಮಾಡುತ್ತವೆ ಎಂಬುದನ್ನೆಲ್ಲಾ ತೋರಿಸುವ ವಿಡಿಯೋ ಅದು. ಯಾರೋ ಒಬ್ಬರು ಅದನ್ನು ಚಿತ್ರೀಕರಣ ಮಾಡಿದ್ದಾರೆ ಮತ್ತು ಬೇರುಗಳು ಸಸ್ಯದ ಉಳಿವಿಗಾಗಿ ಮತ್ತು ಅರಳುವಿಕೆಗಾಗಿ ಏನೆಲ್ಲಾ ಮಾಡುತ್ತವೆ ಎಂಬುದನ್ನು ತೋರಿಸುವ ಸಲುವಾಗಿ ಅದನ್ನು ಫಾಸ್ಟ್ ಫಾರ್ವರ್ಡ್ ಮಾಡಿ ತೋರಿಸಲಾಗಿದೆ. ಈಗ ನೀವು ಏನಾಗಿದ್ದೀರೋ ಅದಕ್ಕಿಂತ ಹೆಚ್ಚಿನದಕ್ಕಾಗಿ ಹಂಬಲಿಸುವ ಈ ಹೋರಾಟ ಮತ್ತು ಈ ಆಕಾಂಕ್ಷೆಗೆ ಕಾರಣ ಯಾವುದೋ ಒಂದು ಬೋಧನೆಯಲ್ಲ – ಇದು ಜೀವನದ ಸಹಜ ಸ್ವಭಾವ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ, ಮನುಷ್ಯರು ಶ್ರಮಿಸಿದ್ದಾರೆ. ಕೆಲವು ಮನುಷ್ಯರ ಹೋರಾಟದಿಂದಲೇ ನೀವಿಂದು ವಿಜ್ಞಾನ, ತಂತ್ರಜ್ಞಾನ, ಭೂಗೋಳಶಾಸ್ತ್ರ ಮತ್ತು ಆಧ್ಯಾತ್ಮಿಕತೆಯಲ್ಲಿ ಹಲವಾರು ಸಂಗತಿಗಳನ್ನು ಅನುಭವಿಸಿ ಆನಂದಿಸುತ್ತಿದ್ದೀರಿ. ಹಲವರು ಪ್ರಯತ್ನ ಪಡುತ್ತಲೇ ಸತ್ತುಹೋಗಿದ್ದಾರೆ. ಭೂಮಿಯಲ್ಲಿ ಆಗಿರುವ ಬಹಳಷ್ಟು ಸಂಗತಿಗಳು ಆ ಕೆಲವು ಜನರಿಂದಾಗಿಯೇ ಸಾಧ್ಯವಾಗಿವೆ.

ಆಕಾಂಕ್ಷೆಯು ನಿಮ್ಮನ್ನು ಸುಡುತ್ತಿರುವ ಒಂದು ಆಕಾಂಕ್ಷೆಯಾದರೆ, ಉಳಿದದ್ದನ್ನು ನನಗೆ ಬಿಡಿ, ಮುಂದೇನು ಮಾಡಬೇಕೆಂದು ನಾನು ಹಂತ ಹಂತವಾಗಿ ಹೇಳುತ್ತೇನೆ.

ಆಧ್ಯಾತ್ಮಿಕ ಪ್ರಕ್ರಿಯೆಯೂ ಹಾಗೆಯೇ – ಅದು ಕಠಿಣವೇ? ಅದು ಕಠಿಣವಲ್ಲ, ಆದರೆ ನೀವೊಬ್ಬ ಕಠಿಣ ವ್ಯಕ್ತಿಯಾಗಿದ್ದರೆ, ಅದು ಕಠಿಣ. ಕಠಿಣತೆಯಿರುವುದು ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಲ್ಲ; ಕಠಿಣತೆಯಿರುವುದು ನಿಮ್ಮೊಳಗೆ. ಆಕಾಂಕ್ಷೆಯು ನಿಮ್ಮನ್ನು ಸುಡುತ್ತಿರುವ ಒಂದು ಆಕಾಂಕ್ಷೆಯಾದರೆ, ಉಳಿದದ್ದನ್ನು ನನಗೆ ಬಿಡಿ, ಮುಂದೇನು ಮಾಡಬೇಕೆಂದು ನಾನು ಹಂತ ಹಂತವಾಗಿ ಹೇಳುತ್ತೇನೆ. ಆದರೆ ನಿಮ್ಮ ಆಕಾಂಕ್ಷೆ ಪ್ರತಿದಿನವೂ ಬದಲಾಗುತ್ತಿದ್ದರೆ, ಏನು ಮಾಡುವುದು? ಜನರಿಗೆ ಕೇವಲ ಒಂದು ಹದಿನೈದು ಇಪ್ಪತ್ತು ನಿಮಿಷಗಳ ಧ್ಯಾನ ಪ್ರಕ್ರಿಯೆಯ ದೀಕ್ಷೆ ನೀಡಲು ನಾನು ಬಯಸಿದ್ದರೆ, ನಾವದನ್ನು ಮಾಡಬಹುದಿತ್ತು; ಅದು ಬಹಳ ಸುಲಭ. ಆದರೆ ಬೆಂಕಿಯಂತೆ ಜ್ವಲಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಮಾತ್ರ ಅಂತಿಮ ಗಮ್ಯಕ್ಕೆ ಕರೆದೊಯ್ಯಬಹುದು. ನನ್ನ ಉದ್ದೇಶ ಎಲ್ಲರೂ ಸಂತೋಷದಿಂದ, ಆರೋಗ್ಯದಿಂದ ಇದ್ದು, ಚೆನ್ನಾಗಿ ನಿದ್ದೆ ಮಾಡುತ್ತಿರಬೇಕೆಂದಲ್ಲ. ಅವರು ಒಂದು ವಿಭಿನ್ನವಾದ ಬೆಳಕಿನಿಂದ ಪ್ರಜ್ವಲಿಸುತ್ತಿರಬೇಕೆಂಬುದು ನನ್ನ ಆಶಯ! ನೀವು ಮೂವತ್ತು, ನಲವತ್ತು ಅಥವಾ ನೂರು ವರ್ಷಗಳ ಕಾಲ ಬದುಕಿರಬಹುದು, ಅದು ನನಗೆ ಮುಖ್ಯವಲ್ಲ. “ನೀವು ನಿಮ್ಮ ಜೀವನದಲ್ಲಿ ದೈವಿಕತೆಯನ್ನು ಸಂಪರ್ಕಿಸಿದಿರಾ? ನೀವು ಮೂಳೆ-ಮಾಂಸಗಳನ್ನು ಮೀರಿದ ಒಂದು ಬೆಳಕಿನಿಂದ ಪ್ರಜ್ವಲಿಸಿದಿರಾ?” ಎಂಬುದಷ್ಟೇ ನನಗೆ ಮುಖ್ಯ. ಇದು ನಿಮ್ಮ ಜೀವನದಲ್ಲಿ ಸಂಭವಿಸಬೇಕು, ಅಲ್ಲವಾದರೆ ನಿಮ್ಮ ಜೀವನಕ್ಕೆ ಅರ್ಥವೇನಿದೆ? ಈ ಮೂಳೆ-ಮಾಂಸಗಳ ತಡಿಕೆಯಲ್ಲಿ, ನೀವು ನೂರು ವರ್ಷಗಳ ಕಾಲ ಬದುಕಿದರೂ, ನಿಮಗೆ ಅದೇ ಹಳೆಯ ಸಮಸ್ಯೆಗಳಿರುತ್ತವೆ, ನನ್ನನ್ನು ನಂಬಿ. ಇನ್ನೂ ಹೆಚ್ಚು ನೋವಿನಿಂದ ಕೂಡಿದ ಸಮಸ್ಯೆಗಳಿರುತ್ತವೆ, ಅಷ್ಟೆ!

ವಯಸ್ಸಾದವರನ್ನು ನೋಡಿ, ಅವರು ತಮ್ಮ ಜೀವನದಲ್ಲಿ ಮಾಡಿದ ಎಲ್ಲಾ ಸಂಗತಿಗಳಿಂದ ಸಂತೃಪ್ತರಾದಂತೆ ಕಾಣುತ್ತಾರೆಯೇ? ನಾನು ಕೇಳುತ್ತಿರುವುದು ಒಂದಿಡೀ ಜೀವನವನ್ನು ಕಳೆದವರ ಬಗ್ಗೆ. ಅವರು ಪ್ರತಿಯೊಂದು ಹಂತದಲ್ಲೂ ನೊಂದಿರುವವರಂತೆ ಕಾಣುತ್ತಾರಲ್ಲವೇ? ಬಹುತೇಕ ಜನರ ಸಮಾಧಾನವೆಂದರೆ, ಅವರ ಪಕ್ಕದ ಮನೆಯವರು ಅನುಭವಿಸಿದ ತೊಂದರೆಗೆ ತಾವು ಸಿಕ್ಕಿಹಾಕಿಕೊಂಡಿಲ್ಲ ಎನ್ನುವುದಷ್ಟೆ. “ನಿಮಗೆ ಗೊತ್ತೆ, ನಾನು ತುಂಬಾ ಚೆನ್ನಾಗಿದ್ದೆ ಎನ್ನಿಸುತ್ತದೆ. ನಮಗೆಂದೂ ಅಂತಹ ಸಮಸ್ಯೆಗಳಿರಲಿಲ್ಲ!” ಎಂದು ನೀವು ಭಾವಿಸಿಕೊಳ್ಳಬಹುದು. ನೀವು ಜಗತ್ತಿನ ಅಂಕಿ-ಅಂಶಗಳಲ್ಲಿ ಒಂದಾಗಿರಬೇಕೆಂದಿದ್ದರೆ, ಹಾಗೇ ಇರಬಹುದು. ಆದರೆ ನೀವು ದೈವಿಕತೆಯ ಮೂರ್ತರೂಪವಾಗಿರಬೇಕೆಂದಾದರೆ, ಬದುಕಲು ಬೇರೊಂದು ವಿಧಾನವಿದೆ. ಎಲ್ಲಕ್ಕಿಂತ ಮೊದಲ ಮತ್ತು ಮಹತ್ವದ ಸಂಗತಿಯೆಂದರೆ ಆಕಾಂಕ್ಷೆ; ಅದೊಂದು ಜ್ವಲಿಸುತ್ತಿರುವ ಆಕಾಂಕ್ಷೆಯಾಗಿರಬೇಕು. ಒಂದು ಪ್ರಜ್ವಲಿಸುತ್ತಿರುವ ಆಕಾಂಕ್ಷೆ ಇಲ್ಲದಿದ್ದರೆ, ನಿಮ್ಮಲ್ಲಿ ಬೆಂಕಿಯಿಲ್ಲದಿದ್ದರೆ – ಏನು ಮಾಡುವುದು? ನಿಮ್ಮಲ್ಲಿ ಬೆಂಕಿಯೇ ಇಲ್ಲದಿದ್ದರೆ, ಹೇಗೆ ಮಾರ್ಗದರ್ಶನ ಮಾಡುವುದು? ಬೆಂಕಿ ಉಂಟಾಗುವಂತೆ ನೋಡಿಕೊಳ್ಳಿ. ಆ ಬೆಂಕಿಯನ್ನು ಹೊತ್ತಿಸಲು ಮೂವತ್ತೈದು ವರ್ಷಗಳನ್ನು ತೆಗೆದುಕೊಳ್ಳಬೇಡಿ.

ನೀವೆಷ್ಟು ಸಮಯ ತೆಗೆದುಕೊಳ್ಳುತ್ತೀರಿ?

Love & Grace