[ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ ವಿಭಿನ್ನ ಜನರಿಗೆ ವಿಭಿನ್ನವಾದ ಸಂಗತಿಗಳಾಗಿವೆ. ಆಧ್ಯಾತ್ಮಿಕ ಪ್ರಕ್ರಿಯೆಯೆಂದರೆ ಯಾವಾಗಲೂ ಪ್ರೀತಿಯಿಂದಿರಬೇಕು, ಯಾವಾಗಲೂ ಮುಗುಳ್ನಗುತ್ತಿರಬೇಕು, ಯಾವಾಗಲೂ ನಿಧಾನವಾಗಿ ನಡೆಯಬೇಕು ಎಂದು ಬಹಳಷ್ಟು ಜನ ಭಾವಿಸುತ್ತಾರೆ. ಇನ್ನು ಕೆಲವರು ಆಧ್ಯಾತ್ಮಿಕತೆಯು ಒಂದು ರೀತಿಯ ಅಂಗವೈಕಲ್ಯ ಎಂದುಕೊಂಡಿರುತ್ತಾರೆ. ಮತ್ತೊಂದು ಸಾಮಾನ್ಯ ನಂಬಿಕೆಯೆಂದರೆ ಆಧ್ಯಾತ್ಮಿಕತೆ ಎಂದರೆ ಒಳ್ಳೆಯವರಾಗಿರಲು ಪ್ರಯತ್ನಿಸುವುದು ಎಂದು. ಕೆಲವರು ಆಧ್ಯಾತ್ಮಿಕತೆ ಎಂದರೆ ಗಾಂಜಾ ಸೇದುವುದು, ಹುಚ್ಚರಾಗುವುದು, ಬೇಜವಾಬ್ದಾರಿಯಿಂದಿರುವುದು - ಸ್ವಚ್ಛಂದವೃತ್ತಿಯಿಂದ ಏನನ್ನಾದರೂ ಮಾಡುವುದು ಎಂದಿರುತ್ತದೆ. ಇನ್ನು ಕೆಲವರಿಗೆ, ಆಧ್ಯಾತ್ಮಿಕವಾಗಿರುವುದು ಎಂದರೆ ಸಂತೋಷ, ಶಾಂತಿಯುತ ಅಥವಾ ಭಾವಪರವಶವಾಗಿರಲು ಪ್ರಯತ್ನಿಸುವುದು. ಇವು ಯಾವುದೂ ಕೂಡ ಆಧ್ಯಾತ್ಮಿಕವಾಗಿರುವುದರ ಅರ್ಥವಲ್ಲ. ಆಧ್ಯಾತ್ಮಿಕರಾಗಿರುವುದು ಎಂದರೆ ಒಂದು ರೀತಿಯಲ್ಲಿ ಹೆಚ್ಚು ಚೇತನವಾಗಿರುವುದು ಮತ್ತು ಕಡಿಮೆ ಭೌತಿಕರಾಗುವುದು.

ನಿಮ್ಮನ್ನು ಭೌತಿಕತೆಯಿಂದ ಹೆಚ್ಚು ಚೇತನವಾಗಿಸಲು ತೆರವುಗೊಳಿಸಬೇಕಾದ ಒಂದು ಮುಖ್ಯ ಅಡಚಣೆಯನ್ನು ಗುರುತಿಸಿ.

ಸದ್ಯಕ್ಕೆ ಇದನ್ನು ಅನುಭವಕ್ಕೆ ತಂದುಕೊಳ್ಳಲು ನಿಮಗೆ ಅನುಮತಿಸದ ಕೆಲವು ಅಡೆತಡೆಗಳಿರಬಹುದು. ನಿಮ್ಮ ವಿಕಲತೆ ಏನೆಂದು ನೀವು ತಿಳಿದಿರಬೇಕು. ನಿಮ್ಮ ಸುತ್ತಲಿನ ಜೀವದ ಬಗ್ಗೆ ನಿಮಗೆ ಯಾವುದೇ ಪ್ರಜ್ಞೆಯಿಲ್ಲದಷ್ಟು ನೀವು ತುಂಬಾ ಒಳ್ಳೆಯವರಾಗಿರಬಹುದು. ಅಥವಾ ನಿಮ್ಮೊಳಗಿನ ಮತ್ತು ನಿಮ್ಮ ಹೊರಗಿನ ಜೀವದ ಬಗ್ಗೆ ನಿಮಗೆ ಯಾವುದೇ ಪ್ರಜ್ಞೆಯಿಲ್ಲದಷ್ಟು ನೀವು ಹುಚ್ಚರಾಗಿರಬಹುದು. ಅಥವಾ ನಿಮ್ಮೊಂದಿಗೆ ಏನೂ ನಡೆಯದಷ್ಟು ನೀವು ನಿಯಂತ್ರಿಸಲ್ಪಟ್ಟಿರಬಹುದು. ನೀವು ಜೀವನದಲ್ಲಿ ಹೆಚ್ಚು ಆಧ್ಯಾತ್ಮಿಕವಾಗಿರಲು ಅನುಮತಿಸದ, ಆ ಪಥವನ್ನು ಸರಾಗವಾಗಿ ಮತ್ತು ಸುಲಭವಾಗಿ ನಡೆಸಲು ನಿಮಗೆ ಅನುಮತಿಸದ ಒಂದು ವಿಕಲತೆ ಏನು? ನೀವು ಹೀಗೆ ಮಾಡಿ: ನಿಮ್ಮ ಕಣ್ಣುಗಳನ್ನು ಮುಚ್ಚಿ, ನಿಮ್ಮೊಳಗೆ ನೋಡಿಕೊಳ್ಳಿ, ಮತ್ತು ನಿಮ್ಮ ಆಧ್ಯಾತ್ಮಿಕತೆಯ ಕಲ್ಪನೆ ಏನೆಂದು ಅವಲೋಕಿಸಿಕೊಳ್ಳಿ, ಮತ್ತು ನೀವು ಸ್ವಲ್ಪ ಹೆಚ್ಚು ಆಧ್ಯಾತ್ಮಿಕರಾಗಲು, ನಿಮ್ಮೊಳಗಿರುವ ಜೀವಕ್ಕೆ ಹೆಚ್ಚು ಸಂವೇದನಾಶೀಲರಾಗಲು ಏನಾಗಬೇಕು ಎಂಬುದನ್ನು ನೋಡಿ. ನಿಮ್ಮನ್ನು ಭೌತಿಕತೆಯಿಂದ ಹೆಚ್ಚು ಚೇತನವಾಗಿಸಲು ತೆರವುಗೊಳಿಸಬೇಕಾದ ಒಂದು ಮುಖ್ಯ ಅಡಚಣೆಯನ್ನು ಗುರುತಿಸಿ. ನೀವು ನಿಜವಾಗಿಯೂ ಅದನ್ನು ಗುರುತಿಸಿದರೆ, ನಿಮಗಾಗಿ ನಾನದನ್ನು ಸರಿಪಡಿಸುತ್ತೇನೆ.

ಈಗ ನಾವು ಕೆಲವು ಸಾಮಾನ್ಯ ಅಡೆತಡೆಗಳನ್ನು ನೋಡೋಣ. ನಿಮ್ಮ ಶರೀರವು ಬಿಗಿಯಾಗಿದ್ದರೆ ಅಥವಾ ಅದರಲ್ಲಿ ಘರ್ಷಣೆಯಿದೆಯೆಂದು ನಿಮಗನಿಸಿದರೆ, ಬೆಳಗಿನ ಹೊತ್ತು ಹಠಯೋಗವನ್ನು ಅಭ್ಯಾಸ ಮಾಡುವ ಮೂಲಕ ನೀವದನ್ನು ನಿವಾರಿಸಿಕೊಳ್ಳಬಹುದು. ಈ ಶರೀರವು ಬಳಕೆಯಿಂದ ಉತ್ತಮಗೊಳ್ಳುವಂತಹ ಒಂದು ಯಂತ್ರವಾಗಿದೆ. ಶರೀರದಲ್ಲಿ ಬಿಗಿತನ ಮತ್ತು ಘರ್ಷಣೆ ಇದೆ ಎಂದರೆ, ನಿಧಾನವಾಗಿ ಅದರಲ್ಲಿ ಶವದ ಕಠಿಣತೆ ಉಂಟಾಗುತ್ತಿದೆಯೆಂದು ಅರ್ಥ. ಹಠಯೋಗವು ಹಾಗಾಗಲು ಬಿಡುವುದಿಲ್ಲ. ನೀವು ಜೀವಂತವಿದ್ದಾಗ, ನೀವು ಪೂರ್ತಿಯಾಗಿ ಜೀವಂತವಾಗಿರಬೇಕು. ಜೀವಂತವಾಗಿರುವುದರ ಒಂದು ಅಂಶವೆಂದರೆ, ನೀವು ನಿಮ್ಮ ಶರೀರವನ್ನು ಬಿಗಿಯಾಗಲು ಬಿಡದಿರುವುದು. ನಿಮ್ಮ ಶರೀರ, ಮನಸ್ಸು ಮತ್ತು ಪ್ರಾಣಶಕ್ತಿಗಳು ಸಾಧ್ಯವಾದಷ್ಟೂ ನಮ್ಯವಾಗಿರಬೇಕು. ಆಗ ಮಾತ್ರ ನೀವು ಜೀವನವನ್ನು ಆಳವಾದ ರೀತಿಯಲ್ಲಿ ತಿಳಿಯಬಹುದು.

ಕೆಲವರಿಗೆ ಸಾಧನೆಯನ್ನು ಮಾಡಬೇಕೆಂಬ ಉದ್ದೇಶವೇನೋ ಇರುತ್ತದೆ ಆದರೆ ಆಲಸ್ಯದ ಕಾರಣದಿಂದಾಗಿ ಅವರಿಗದನ್ನು ಮುಂದುವರೆಸಲಾಗುವುದಿಲ್ಲ. ಎಲ್ಲರೂ ಒಂದೇ ಮಟ್ಟದ ತೀವ್ರತೆಯನ್ನು ಹೊಂದಿರುವುದಿಲ್ಲ, ಆದರೆ ಏನಾಗಬೇಕೋ ಅದು ಆಗಲೇಬೇಕು. ಅದನ್ನು ಹೀಗೆ ಸರಿಪಡಿಸಿ : ಶಾಂಭವಿ ಮಾಡಲಿಲ್ಲವಾದರೆ - ಆಹಾರ ಸೇವನೆ ಇಲ್ಲ. ಇದು ಬಹಳ ಕಠಿಣ ಎಂದುಕೊಳ್ಳಬೇಡಿ. ಯೋಗದ ಪಥದಲ್ಲಿ, ಜನ ಅತ್ಯಂತ ತೀವ್ರತರವಾದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇಪ್ಪತ್ತನಾಲ್ಕು ಗಂಟೆಗಳೂ ಧ್ಯಾನ ಮಾಡಲು ಬಯಸುವ ಯೋಗಿಗಳು ಸದಾಕಾಲ ಎಚ್ಚರದಿಂದಿರಲು ತಮ್ಮೊಂದಿಗೆ ಚೇಳುಗಳನ್ನು ಇಟ್ಟುಕೊಂಡು ಅವುಗಳಿಂದ ಕುಟುಕಿಸಿಕೊಳ್ಳುತ್ತಾರೆ, ಅಥವಾ ತಮ್ಮ ಬೆರಳನ್ನು ಗಾಯಗೊಳಿಸಿಕೊಂಡು ಅದಕ್ಕೆ ಒಂದು ನಿಂಬೆಹಣ್ಣನ್ನು ಸಿಕ್ಕಿಸಿಕೊಳ್ಳುತ್ತಾರೆ. ನಿಮಗೆ ಇರುವುದು ಕೇವಲ ಇಪ್ಪತ್ತೊಂದು ನಿಮಿಷಗಳ ಶಾಂಭವಿ. ಹಾಗಾಗಿ ನಿಮಲ್ಲಿ ಅಷ್ಟಾದರೂ ಬದ್ಧತೆಯಿರಬೇಕು. ಇದು ಆಲೋಚಿಸುವ ಅಥವಾ ಮಾತನಾಡುವ ಆಧ್ಯಾತ್ಮಿಕತೆಯಲ್ಲ. ಇದು ಅಭ್ಯಾಸ ಮಾಡುವ ಮತ್ತು ಜೀವಿಸುವ ಆಧ್ಯಾತ್ಮಿಕತೆ.

ಈ ಶರೀರವು ಬಳಕೆಯಿಂದ ಉತ್ತಮಗೊಳ್ಳುವಂತಹ ಒಂದು ಯಂತ್ರವಾಗಿದೆ.

ನಿಮಗೆ ದೈಹಿಕವಾದ ಕಾಯಿಲೆಗಳಿದ್ದರೆ, ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಏಕೆಂದರೆ ಶರೀರವೊಂದು ಸಮಸ್ಯೆಯಾಗಿ ಬಿಟ್ಟರೆ, ಅದು ಜೀವನದಲ್ಲಿ ಸಂಪೂರ್ಣ ಗಮನವನ್ನು ತನ್ನತ್ತ ಬೇಡುತ್ತದೆ. ನಿಮಗೆ ಉಸಿರಾಡಲು ಕಷ್ಟಪಡುವಂತಹ ಅಸ್ತಮಾ ಕಾಯಿಲೆಯಿದೆಯೆಂದು ಭಾವಿಸೋಣ – ಆಗ ನಿಮಗೆ ಕೇವಲ ಉಸಿರಾಡಿದರೆ ಸಾಕೆನಿಸುತ್ತಿರುತ್ತದೆ, ಬೇರೇನೂ ಬೇಕೆನಿಸುವುದಿಲ್ಲ. ಇದು ಎಲ್ಲಾ ರೀತಿಯ ನೋವು ಅಥವಾ ಖಾಯಿಲೆಗಳಿಗೆ ಅನ್ವಯಿಸುತ್ತದೆ. ಶರೀರದ ಬಗ್ಗೆ ಸರಿಯಾಗಿ ಕಾಳಜಿವಹಿಸದಿದ್ದರೆ, ಅದು ನಿಮ್ಮ ಎಲ್ಲಾ ಗಮನವನ್ನು ಸೆಳೆಯುತ್ತದೆ. ನಿಮ್ಮ ಬಳಿ ಇರುವ ಎಲ್ಲವೂ ಶರೀರವನ್ನು ನಿರ್ವಹಿಸುವುದರಲ್ಲಿ ಕಳೆಯುತ್ತದೆ. ಇದು ಶರೀರದ ಸ್ವಭಾವ. ಅದನ್ನು ಚೆನ್ನಾಗಿಟ್ಟುಕೊಳ್ಳುವುದೆಂದರೆ ಅದನ್ನು ಸುಂದರವಾಗಿಟ್ಟುಕೊಳ್ಳಬೇಕೆಂದಲ್ಲ ಅಥವಾ ಇನ್ನೊಬ್ಬರ ಮುಂದೆ ಪ್ರದರ್ಶನಕ್ಕಿಡುವುದಲ್ಲ. ನಿಮ್ಮ ಜೀವನದಲ್ಲಿ ಶರೀರವೊಂದು ಅಡ್ಡಿಯಾಗಬಾರದು ಎಂಬುದಷ್ಟೇ ಇಲ್ಲಿನ ಮುಖ್ಯಾಂಶ. ಅದೊಂದು ಮೆಟ್ಟಿಲಾಗಬೇಕು. ಶರೀರವೊಂದು ಅಡ್ಡಿಯಾದರೆ, ಮುಂದುವರಿಯುವುದು ಕಷ್ಟವಾಗುತ್ತದೆ. ಹಾಗಿದ್ದರೂ ನೀವು ಆಧ್ಯಾತ್ಮಿಕರಾಗಬಹುದು, ಆದರೆ ಅದಕ್ಕೆ ಬಹಳ ಪ್ರಯತ್ನ ಬೇಕಾಗುತ್ತದೆ. ಹಾಗೂ ನಿಮ್ಮ ಶರೀರ ಯಾವಾಗ ಬೇಕಾದರೂ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದನ್ನು ನೀವು ಒಮ್ಮೆ ತಿಳಿದರೆ, ಶರೀರವನ್ನು ಮೀರಿಹೋಗುವ ಹಂಬಲ ನಿಮ್ಮಲ್ಲಿ ಸಹಜವಾಗಿಯೇ ವೃದ್ಧಿಸುತ್ತದೆ.

ನಿಮ್ಮ ಮನಸ್ಸೂ ಸಹ ಒಂದು ಮುಖ್ಯವಾದ ಅಡ್ಡಿಯಾಗಿರಬಹುದು. ವಿಕಸನದ ಪ್ರಕ್ರಿಯೆ ಮಿಲಿಯಾಂತರ ವರ್ಷಗಳನ್ನು ತೆಗೆದುಕೊಂಡಿದೆ. ಆದರೆ ಮಂಗನಿಂದ ಮಾನವನಿಗೆ ಆದ ಸ್ಥಿತ್ಯಂತರ ಅತ್ಯಂತ ಶೀಘ್ರವಾಗಿ ಆಯಿತು. ಶಾರೀರಿಕವಾಗಿ, ಒಂದು ಚಿಂಪಾಂಜಿ ಮತ್ತು ಮನುಷ್ಯನ ಡಿಎನ್ಎ ನಡುವೆ ಕೇವಲ ಶೇಕಡ 1.23 ರಷ್ಟು ವ್ಯತ್ಯಾಸವಿದೆ. ಆದರೆ ನಮ್ಮ ಬುದ್ಧಿಶಕ್ತಿ ಮತ್ತು ಅರಿವಿನ ದೃಷ್ಟಿಯಲ್ಲಿ ನೋಡುವುದಾದರೆ, ನಾವು ಚಿಂಪಾಂಜಿಗಳಿಗಿಂತ ಸಂಪೂರ್ಣವಾಗಿ ಬೇರೆಯೇ ಆಗಿದ್ದೇವೆ. ಹೋಲಿಕೆಯ ದೃಷ್ಟಿಯಿಂದ ಈ ಮಟ್ಟದ ಬುದ್ಧಿಶಕ್ತಿಯು ನಮಗಿನ್ನೂ ಹೊಸದು. ನಿಮಗೆ ಒಂದು ಉತ್ತಮ ಅಡಿಪಾಯವಿಲ್ಲದ ಬುದ್ಧಿಶಕ್ತಿ ಇರುವುದೇ ದೊಡ್ಡ ಸಮಸ್ಯೆಯಾಗಿರುವುದು. ಅದಕ್ಕಾಗಿಯೇ ಯೋಗ – ಅದು ನಿಮ್ಮ ಬುದ್ಧಿಗೆ ನಿಮ್ಮ ಪರವಾಗಿ ಕೆಲಸ ಮಾಡಲು, ನಿಮಗೆ ಬೇಕಾದಂತೆ ವರ್ತಿಸಲು ಒಂದು ಸ್ಥಿರವಾದ ತಳಪಾಯವನ್ನು ಸೃಷ್ಟಿಸುತ್ತದೆ. ನಿಮ್ಮ ಕೈ ನಿಮ್ಮ ಆಣತಿಯಂತೆ ಕೆಲಸ ಮಾಡಿದಾಗ ಮಾತ್ರ, ಅದು ಉಪಯುಕ್ತ. ಅದೇ ರೀತಿ, ನಿಮ್ಮ ಮನಸ್ಸು ನಿಮ್ಮ ಆದೇಶದಂತೆ ವರ್ತಿಸಿದಾಗ ಮಾತ್ರ ಅದು ಉಪಯುಕ್ತ. ಹತೋಟಿಯಿಲ್ಲದಂತೆ ವರ್ತಿಸಿದರೆ, ಅದೊಂದು ಕಿರಿಕಿರಿಯೇ ಸರಿ.

ಇನ್ನೊಂದು ತೊಡಕು ನಿಮ್ಮ ಕರ್ಮವೂ ಆಗಿರಬಹುದು. ಕರ್ಮವೆಂದರೆ ಸುಮ್ಮನೆ ಆಗುವಂತಹ ಸಂಗತಿಯಲ್ಲ. ನಿಮ್ಮ ಜೀವನದ ನಿಯಂತ್ರಣವನ್ನು ನೀವೇ ತೆಗೆದುಕೊಳ್ಳುವುದೇ ಕರ್ಮ. ನಿಮ್ಮ ಜೀವನ ಎನ್ನುವುದು ನಿಮ್ಮದೇ ಕೃತ್ಯ ಎನ್ನುವುದನ್ನು ನೀವು ತಿಳಿದರೆ, ನೀವು ನಿಮ್ಮ ವಿಧಿಯನ್ನು ನಿಮ್ಮ ಕೈಗೆ ತೆಗೆದುಕೊಳ್ಳಬಹುದು. ಆಗಲೂ ಸಹ, ಕೆಲವು ಅರ್ಹತೆಯ ಸಮಸ್ಯೆಗಳಿರಬಹುದು – ಆ ಕುರಿತು ನಾವು ನಿಮಗೆ ಸಹಾಯ ಮಾಡಬಹುದು. ನಾನಿಲ್ಲಿರುವುದು ಅದೇ ಉದ್ದೇಶಕ್ಕಾಗಿ. ಆದರೆ, ನೀವು ನಿಮ್ಮ ಜೀವನವನ್ನು ನಿಮ್ಮ ಕೈಗೆ ತೆಗೆದುಕೊಳ್ಳದಿದ್ದರೆ, ನಾನೇಕೆ ಅದನ್ನು ನನ್ನ ಕೈಗೆ ತೆಗೆದುಕೊಳ್ಳಬೇಕು? ಆಗ ಹೇಗಿದ್ದರೂ ಅದು ಕೆಲಸ ಮಾಡುವುದಿಲ್ಲ. ನೀವದನ್ನು ನಿಮ್ಮ ಕೈಗೆ ತೆಗೆದುಕೊಂಡರೆ ಮತ್ತು ನೀವು ಮಾಡಬೇಕಾದುದನ್ನು ಮಾಡಲು ಸಾಧ್ಯವಾಗದೇ ಹೋದರೆ, ಆಗ ನಾನು ಮಧ್ಯಪ್ರವೇಶಿಸಿ, ನಿಮಗೋಸ್ಕರ ಏನನ್ನಾದರೂ ಮಾಡಬಹುದು.

ಮತ್ತು ತಮ್ಮನ್ನು ತಾವು ಸದಾಕಾಲ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಅದೆಷ್ಟೋ ಜನರಿದ್ದಾರೆ, ಅವರಿಗೆ ತಮ್ಮನ್ನು ಯಾರಾದರೂ ಉಪಯೋಗಿಸಿಕೊಳ್ಳಬಹುದೆಂಬ ಭಯ. ಅವರು ಉಪಯೋಗಿಸಿಕೊಳ್ಳಲಿ ಬಿಡಿ. ನನ್ನ ಸುತ್ತಲೂ ಸ್ವಯಂ-ನೇಮಿತ ಸಲಹೆಗಾರರಿದ್ದಾರೆ, ಮತ್ತವರು ಯಾವಾಗಲೂ ’ಸದ್ಗುರುಗಳೇ ಹುಷಾರಾಗಿರಿ, ಯಾರಾದರೂ ನಿಮ್ಮನ್ನು ಉಪಯೋಗಿಸಿಕೊಳ್ಳಬಹುದು ಅಥವಾ ಮತ್ತಿನ್ನೇನಾದರೂ ಮಾಡಬಹುದು’ ಎಂದು ಹೇಳುತ್ತಿರುತ್ತಾರೆ. ಉಪಯೋಗಿಸಿಕೊಳ್ಳಲಿ ಬಿಡಿ ಎಂದು ನಾನವರಿಗೆ ಹೇಳುತ್ತೇನೆ. ನಾನಿಲ್ಲಿರುವುದೇ ಅದಕ್ಕೆ. ಅದರ ಬಗ್ಗೆ ಚಿಂತಿಸಬೇಡಿ. ಜೀವನವನ್ನು ಅಂಗೀಕರಿಸಿ. ಅಂಗೀಕರಿಸುವುದರಿಂದ ನೀವೇನನ್ನೂ ಕಳೆದುಕೊಳ್ಳುವುದಿಲ್ಲ. ನಿರಾಕರಿಸಿದರೆ ನೀವು ಕಳೆದುಕೊಳ್ಳುವಿರಿ. ನಿರಾಕರಣೆ ಎನ್ನುವುದು ಒಂದು ಮುಚ್ಚಿದ ಬಾಗಿಲು. ಯಾವುದೇ ಕಾರಣಕ್ಕೂ ಬಾಗಿಲನ್ನು ಮುಚ್ಚಬೇಡಿ. ಇದೊಂದು ಸಂಕ್ಷಿಪ್ತವಾದ ಜೀವನ – ಇಲ್ಲಿ ಬಾಗಿಲು ಮುಚ್ಚುತ್ತಾ, ತೆರೆಯುತ್ತಾ ಇರುವುದಕ್ಕೆ ಸಮಯವಿಲ್ಲ.

ಇದು ಆಲೋಚಿಸುವ ಅಥವಾ ಮಾತನಾಡುವ ಆಧ್ಯಾತ್ಮಿಕತೆಯಲ್ಲ. ಇದು ಅಭ್ಯಾಸ ಮಾಡುವ ಮತ್ತು ಜೀವಿಸುವ ಆಧ್ಯಾತ್ಮಿಕತೆ.

ಕೇವಲ ಶರೀರಕ್ಕೆ ಮಾತ್ರ ರಕ್ಷಣೆಯ ಅಗತ್ಯವಿದೆ. ಮತ್ತು ಕೆಲವು ಸಂದರ್ಭಗಳಲ್ಲಿ, ನಿರ್ದಿಷ್ಟ ಸಂಗತಿಗಳು ಸಾಧ್ಯವಾಗುವುದಿಲ್ಲ. ಅದನ್ನು ಬಿಟ್ಟು, ಉಳಿದೆಲ್ಲಕ್ಕೂ ಅಂಗೀಕಾರ ನೀಡಬೇಕು. ನಿಮ್ಮ ಬೆಳವಣಿಗೆಗೆ ಒಂದು ಸಂಭಾವ್ಯ ಬಾಗಿಲಾಗದಂತಹ ಯಾವುದೇ ಒಂದು ಅಣವೂ ಈ ವಿಶ್ವದಲ್ಲಿಲ್ಲ. ಅಂಗೀಕಾರವನ್ನು ಒಂದು ಮನೋಧರ್ಮ ಎಂಬರ್ಥದಲ್ಲಿ ನಾನು ಹೇಳುತ್ತಿಲ್ಲ, ಬದಲಾಗಿ ಅದು ಅಸ್ತಿತ್ವದ ಪ್ರತಿಫಲನ ಎಂಬ ಅರ್ಥದಲ್ಲಿ ಹೇಳುತ್ತಿದ್ದೇನೆ. ಅಸ್ತಿತ್ವವು ಯಾವಾಗಲೂ ಅಂಗೀಕರಿಸುತ್ತದೆ. ನೀವೂ ಅದರ ಒಂದು ಭಾಗ ಎಂಬುದನ್ನು ಅರ್ಥಮಾಡಿಕೊಂಡಾಗ, ನೀವೂ ಅಂಗೀಕರಿಸುತ್ತೀರಿ. ನೀವು ಉಸಿರಾಡುವ ಗಾಳಿ ನಿಮಗೆ “ಇಲ್ಲ” ಎಂದು ಹೇಳಿದರೆ, ನೀವು ಸತ್ತುಹೋಗುತ್ತೀರಿ. ನಿಮ್ಮ ಸುತ್ತಲಿನ ಜೀವ ನಿಮಗೆ “ಇಲ್ಲ” ಎಂದರೆ, ನೀವು ಸತ್ತುಹೋಗುತ್ತೀರಿ. ನೀವು ಸೇವಿಸಿದ ಆಹಾರ ನಿಮಗೆ “ಇಲ್ಲ” ಎಂದರೆ, ನೀವು ಸತ್ತುಹೋಗುತ್ತೀರಿ. ಇಡೀ ಅಸ್ತಿತ್ವವೇ ನಿಮಗೆ “ಹೌದು” ಎನ್ನುವಾಗ, ನೀವೇಕೆ ಅಂಗೀಕರಿಸಲೋ ಬೇಡವೋ ಎಂಬ ಲೆಕ್ಕಾಚಾರ ಮಾಡುತ್ತಿದ್ದೀರಿ? ಜೀವನಕ್ಕೆ ನೂರಕ್ಕೆ ನೂರರಷ್ಟು “ಹೌದು” ಎನ್ನುವ ಸಮಯ ಬಂದಿದೆ.

ಕೆಲವರಿಗೆ, ಅತಿದೊಡ್ಡ ತೊಡಕೆಂದರೆ ವಿಮರ್ಶೆಯ ಭಯ ಅಥವಾ ಅಪಹಾಸ್ಯಕ್ಕೊಳಗಾಗುವ ಭಯ. ಎಲ್ಲಕ್ಕಿಂತ ಮೊದಲು, ಬೇರೆಯವರಿಗೆ ನಿಜವಾಗಿಯೂ ನೀವು ಮಾಡುತ್ತಿರುವುದರ ಬಗ್ಗೆ ಆಸಕ್ತಿಯಿದೆಯೇ, ಮತ್ತು ನಿಮ್ಮ ಬಗ್ಗೆ ವಿಮರ್ಶೆಗಳನ್ನು ಮಾಡಲು ಅವರಲ್ಲಿ ಸಮಯವಿದೆಯೇ? ಬೇರೆಯವರು ಏನು ಯೋಚಿಸುತ್ತಾರೆಂಬುದರ ಬಗ್ಗೆ ಚಿಂತಿಸಬೇಡಿ. ಅವರ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ಅವರ ಸಮಸ್ಯೆ. ನೀವು ನಿಮ್ಮ ಮನಸ್ಸಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಬೇಕು. ಅದು ನಿಮ್ಮ ಜೀವನವನ್ನು ಸುಧಾರಿಸುತ್ತದೆ. ಬೇರೆಯವರ ಮನಸ್ಸಿನ ಗುಣಮಟ್ಟ ಮತ್ತು ಸಂಗತಿಗಳ ಬಗ್ಗೆ ಚಿಂತಿಸಬೇಡಿ. ಬೇರೆಯವರು ಏನು ಯೋಚಿಸುತ್ತಿರಬಹುದು ಎಂಬುದರ ಬಗ್ಗೆ ನೀವು ಚಿಂತಿಸಿದರೆ, ನೀವು ಹುಚ್ಚರಾಗುವಿರಿ, ಏಕೆಂದರೆ ಅದೆಲ್ಲಾ ಊಹಾಪೋಹಗಳಷ್ಟೆ. ಯಾವುದೇ ಒಂದು ಕೆಲಸ ಮೌಲ್ಯಯುತವಾದದ್ದು ಎಂದು ನೀವು ಭಾವಿಸಿದರೆ, ಸುಮ್ಮನೆ ಅದನ್ನು ಮಾಡಿ, ಯಾರು ಏನು ಬೇಕಾದರೂ ಅಂದುಕೊಳ್ಳಲಿ. ಮತ್ತು ಯಾರಾದರೂ ನಿಮ್ಮನ್ನು ನೋಡಿ ನಕ್ಕರೆ, ನೀವವರನ್ನು ನೋಡಿ ನಕ್ಕುಬಿಡಿ. ಬಹುಶಃ, ನೀವು ಮಾಡುತ್ತಿರುವ ತಪ್ಪನ್ನು ತೋರಿಸುವ ಮೂಲಕ ಅವರು ನಿಮಗೆ ಸಹಾಯಮಾಡುತ್ತಿರಬಹುದು. ಆದರೆ, ಏನೇ ಆದರೂ, ಬಹುತೇಕ ಜನರು ನಿಮ್ಮ ಬಗ್ಗೆ ಯೋಚಿಸುತ್ತಿರುವುದಿಲ್ಲ. ಅವರು ತಮ್ಮದೇ ವಿಷಯಗಳಲ್ಲಿ ವ್ಯಸ್ತರಾಗಿರುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ, ನೀವು ಒಂದು ಸುಸ್ಥಿರವಾದ ಅಡಿಪಾಯವನ್ನು ಸೃಷ್ಟಿಸಿಕೊಳ್ಳಬೇಕು. ನಿಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು ಸಮತೋಲನ. ಸಮತೋಲನವಿಲ್ಲದಿದ್ದರೆ, ನಿಮ್ಮ ಶರೀರ ಮತ್ತು ಮನಸ್ಸು ನಿಮ್ಮ ವಿರುದ್ಧವೇ ಕೆಲಸ ಮಾಡುತ್ತವೆ. ಒಂದು ಸುಸ್ಥಿರವಾದ ಅಡಿಪಾಯವೆಂದರೆ - ನಿಮ್ಮಿಂದ ಸೂಚನೆಗಳನ್ನು ಸ್ವೀಕರಿಸುವಂತಹ ಮನಸ್ಸು ಮತ್ತು ಶರೀರ. ನೀವು ನಿಮ್ಮ ಜೀವವ್ಯವಸ್ಥೆಯಲ್ಲಿ ಸರಿಯಾದ ರಾಸಾಯನಿಕತೆಯನ್ನು ಸೃಷ್ಟಿಸಲು ಸಾಧ್ಯವಾಗಬೇಕು. ಇದು ನಿಮ್ಮ ಆರೋಗ್ಯ ಮತ್ತು ಶ್ರೇಯಸ್ಸಿಗೆ ಅತ್ಯಂತ ಅವಶ್ಯಕ. ನಿಮ್ಮ ಜೀವವ್ಯವಸ್ಥೆಯನ್ನು ನಿರ್ವಹಿಸಲು ನಿಮಗೆ ಕುಶಲತೆ ಬೇಕಾಗುತ್ತದೆ. ಅದಕ್ಕಾಗಿಯೇ ಯೋಗ. ಬಾಗುವ ಮತ್ತು ತಿರುಚುವ ಸರಳ ಪ್ರಕ್ರಿಯೆಗಳು ನಿಮ್ಮ ಮಾಂಸಖಂಡಗಳನ್ನು ಹದಗೊಳಿಸುವುದರ ಬಗ್ಗೆಯಲ್ಲ – ಅದು ನಿಮ್ಮ ಮೂಲಭೂತ ಅಂಶಗಳನ್ನು ಬದಲಾಯಿಸುವ ಕುರಿತಾದದ್ದು. ಅದರೊಂದಿಗೆ ಕೊನೆಯಪಕ್ಷ ಇಪ್ಪತ್ತೊಂದು ನಿಮಿಷಗಳ ಶಾಂಭವಿಯಿಂದ ಪ್ರಾರಂಭಿಸಿರಿ.

Love & Grace

Shambhavi Mahamudra, a powerful yogic practice offered in Isha’s Inner Engineering programs