ಯೋಗಿ ಮತ್ತು ಅನುಭಾವಿ ಸದ್ಗುರುರವರು ವಿಭೂತಿಯನ್ನು ತಯಾರಿಸುವ ವಿಧಾನಗಳು, ಅದನ್ನು ಬಳಸುವ ರೀತಿ ಹಾಗೂ ಶರೀರದ ಮೇಲೆ ಎಲ್ಲಿ ಧಾರಣೆ ಮಾಡಬೇಕು ಎಂಬುದರ ಕುರಿತು ತಿಳಿಸಿದ್ದಾರೆ.

ಸದ್ಗುರು: ವಿಭೂತಿ ಅಥವಾ ಪವಿತ್ರ ಭಸ್ಮದ ಬಳಕೆಗೆ ಅನೇಕ ಅಂಶಗಳಿವೆ. ಮೊಟ್ಟಮೊದಲಿಗೆ ಅದು ಶಕ್ತಿಯನ್ನು ವರ್ಗಾಯಿಸುವ ಅಥವಾ ಸಂವಹನಮಾಡುವ ಮಹತ್ತರವಾದ ಮಾಧ್ಯಮವಾಗಿದೆ. ಅದು ಚೇತನಾ ಶರೀರವನ್ನು ನಿರ್ದೇಶಿಸುವಲ್ಲಿ ಅಥವಾ ನಿಯಂತ್ರಿಸುವಲ್ಲಿ ನೆರವಾಗುವ ಸಾಮರ್ಥ್ಯವನ್ನು ಪಡೆದಿದೆ. ಅದಲ್ಲದೆ, ಅದನ್ನು ಶರೀರದ ಮೇಲೆ ಧರಿಸಲು ಒಂದು ಸಾಂಕೇತಿಕ ಮಹತ್ವವಿದೆ. ಅದು ಜೀವನದ ನಶ್ವರತೆಯ ಕುರಿತು ನಿರಂತರವಾಗಿ ನೆನಪು ನೀಡುವಂತಹುದ್ದಾಗಿದೆ. ಅಂದರೆ ನೀವು ನಿಮ್ಮ ಶರೀರದ ಮೇಲೆ ಸದಾ ಮರ್ತ್ಯತೆಯ ಧಾರಣೆ ಮಾಡಿಕೊಂಡಿರುವಂತಿರುತ್ತದೆ.

 

ಸಾಧಾರಣವಾಗಿ ಯೋಗಿಗಳು ಮಸಣದ ಭಸ್ಮವನ್ನು ತೆಗೆದುಕೊಂಡು ಅದನ್ನು ವಿಭೂತಿಯಂತೆ ಬಳಸುತ್ತಾರೆ. ಈ ಭಸ್ಮವನ್ನು ಬಳಸಲಾಗದೆ ಹೋದರೆ, ಅದಕ್ಕೆ ಪರ್ಯಾಯವಾಗಿ ಗೋವಿನ ಸಗಣಿಯನ್ನು ಉಪಯೋಗಿಸಬಹುದು. ಇತರ ವಸ್ತುಗಳನ್ನೂ ಬಳಸುವರು, ಆದರೆ ಮೂಲವಸ್ತು, ಅದರ ಮುಖ್ಯ ಭಾಗವು ಗೋವಿನ ಸಗಣಿಯಾಗಿದೆ. ಈ ಭಸ್ಮವು ದೊರಕದಿದ್ದ ಪಕ್ಷದಲ್ಲಿ, ಭತ್ತದ ಹೊಟ್ಟನನ್ನು ಪರ್ಯಾಯವಾಗಿ ಬಳಸಬಹುದು. ಶರೀರವು ಅಂತಸ್ಸಾರವಲ್ಲ, ಅದು ಕೇವಲ ಹೊರಹೊದಿಕೆ ಎಂಬುದನ್ನು ಸೂಚಿಸುತ್ತದೆ.

ನಾವು ಪವಿತ್ರ ಭಸ್ಮ / ವಿಭೂತಿಯನ್ನು ಏಕೆ ಬಳಸಬೇಕು?

ದುರದೃಷ್ಟವಶಾತ್ ಅನೇಕ ಸ್ಥಳಗಳು ಒಂದು ವಿಶಿಷ್ಟವಾದ ಬಿಳಿಕಲ್ಲಿನ ಪುಡಿಯನ್ನು ವಿಭೂತಿಯೆಂಬುದಾಗಿ ನೀಡಿ ಕಳಂಕ ತರುವ ವ್ಯವಹಾರ ಕ್ಷೇತ್ರಗಳಾಗಿವೆ. ಆದರೆ ಅದನ್ನು ಸರಿಯಾಗಿ ತಯಾರಿಸಿ, ಅದನ್ನು ಹೇಗೆ ಎಲ್ಲಿ ಧರಿಸಬೇಕು ಎಂಬುದರ ಅರಿವು ನಿಮಗಿದ್ದರೆ, ನೀವು ತೀವ್ರ ಗ್ರಹಣಶಕ್ತಿಯುಳ್ಳವರಾಗುವಿರಿ. ಶರೀರದ ಮೇಲೆ ಧರಿಸಿದ ಸ್ಥಳವು ಹೆಚ್ಚು ಸಂವೇದನಾಶೀಲವಾಗುತ್ತದೆ ಮತ್ತು ಉನ್ನತ ಸ್ವಭಾವದೆಡೆಗೆ ಸಾಗುತ್ತದೆ. ಪ್ರಪ್ರಥಮವಾಗಿ ನೀವು ಬೆಳಗಿನ ಹೊತ್ತು ಮನೆಯಿಂದಾಚೆ ಹೋಗುವ ಸಮಯದಲ್ಲಿ, ವಿಭೂತಿಯನ್ನು ನಿರ್ದಿಷ್ಟ ಜಾಗಗಳಲ್ಲಿ ಧಾರಣೆ ಮಾಡಿಕೊಂಡಾಗ, ನಿಮ್ಮ ಸುತ್ತಲೂ ಇರುವ ದೈವೀ ಶಕ್ತಿಯನ್ನು ಸ್ವೀಕರಿಸುವಿರಿ, ಪೈಶಾಚಿಕ ಶಕ್ತಿಯನ್ನಲ್ಲ. ಆ ಕ್ಷಣದಲ್ಲಿ ನಿಮ್ಮ ಯಾವ ಅಂಶವು ಗ್ರಹಣ ಶಕ್ತಿಯನ್ನು ಹೊಂದಿರುವುದೋ, ನೀವು ಯಾರೆಂಬುದರ ಅನೇಕ ಆಯಾಮಗಳ ಮೂಲಕ ಚೇತನವನ್ನು ವಿವಿಧ ಬಗೆಗಳಲ್ಲಿ ನೀವು ಸ್ವೀಕರಿಸಬಹುದು. ಒಮ್ಮೆ ನೀವು ಏನನ್ನೋ ನೋಡಿ ಒಂದು ನಿರ್ದಿಷ್ಟ ರೀತಿಯಲ್ಲಿ ಅದರ ಅನುಭವ ಪಡೆದಿರುವುದನ್ನು ನೀವು ಖಂಡಿತ ಗಮನಿಸಿರುತ್ತೀರಿ. ಮತ್ತೊಂದು ಬಾರಿ ನೀವು ಅದನ್ನೇ ನೋಡಿದಾಗ, ಸಂಪೂರ್ಣವಾಗಿ ಮತ್ತೊಂದು ವಿಧವಾದ ಅನುಭವವನ್ನು ಪಡೆದಿರುತ್ತೀರಿ. ನೀವು ಯಾವ ರೀತಿ ಬದುಕನ್ನು ಸ್ವೀಕರಿಸುವಿರೋ ಅದರಿಂದ ವ್ಯತ್ಯಾಸ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಉನ್ನತ ದೃಷ್ಟಿಕೋನಕ್ಕೆ ನೀವು ಗ್ರಹಣಶೀಲರಾಗಿರಬೇಕು, ಕೆಳಗಿನದ್ದಕ್ಕಲ್ಲ.

ನಿಮ್ಮ ಸುತ್ತಲಿನ ದೈವೀ ಶಕ್ತಿಯನ್ನು ಪಡೆಯಲು ನಿಮ್ಮ ಶರೀರದ ಮೇಲೆ ನೀವು ನಿರ್ದಿಷ್ಟ ಭಾಗಗಳಲ್ಲಿ ವಿಭೂತಿಯನ್ನು ಧರಿಸುವಿರಿ

ನಿಮ್ಮ ಶರೀರದೊಳಗೆ, ಚೇತನವನ್ನು ಅನುಭವಿಸುವ ಏಳು ಆಯಾಮಗಳನ್ನು ಪ್ರತಿನಿಧಿಸುವ ಸಪ್ತ ಕೇಂದ್ರಗಳಿವೆ. ಈ ಕೇಂದ್ರಗಳನ್ನು ಚಕ್ರಗಳು ಎಂದು ಕರೆಯುವರು. ಚೇತನಾ ವ್ಯವಸ್ಥೆಯಲ್ಲಿ ಚಕ್ರವು ಒಂದು ನಿರ್ದಿಷ್ಟ ಸಂಧಿಸ್ಥಳವಾಗಿದೆ. ಈ ಚಕ್ರಗಳು ಭೌತಿಕವಾಗಿಲ್ಲ, ಅವು ಸೂಕ್ಷ್ಮ ರೂಪಗಳಲ್ಲಿರುತ್ತವೆ. ವ್ಯಕ್ತಿಯು ಅನುಭವಾತ್ಮಕವಾಗಿ ಈ ಚಕ್ರಗಳನ್ನು ಅರಿತುಕೊಳ್ಳಬಹುದು, ಆದರೆ ನೀವು ದೇಹವನ್ನು ಕತ್ತರಿಸಿ ನೋಡಿದರೆ ಅಲ್ಲಿ ಯಾವುದೇ ಚಕ್ರವಿರುವುದಿಲ್ಲ. ನೀವು ತೀವ್ರತೆಯ ಉನ್ನತ ಸ್ತರಗಳಿಗೆ ಸಾಗಿದಂತೆಲ್ಲಾ, ಸ್ವಾಭಾವಿಕವಾಗಿಯೇ ಈ ಶಕ್ತಿಗಳು ಒಂದು ಚಕ್ರದಿಂದ ಮತ್ತೊಂದು ಚಕ್ರಕ್ಕೆ ಏರುವುದು. ನೀವು ಉನ್ನತ ಚಕ್ರಗಳಿಂದ ಚೇತನವನ್ನು ಸ್ವೀಕರಿಸಿದರೆ, ಅದೇ ಸನ್ನಿವೇಶವು ನಿಮಗೆ ಕೆಳಗಿನ ಚಕ್ರಗಳಿಂದ ಚೇತನವನ್ನು ಸ್ವೀಕರಿಸುವುದಕ್ಕಿಂತಲೂ ಭಿನ್ನವಾಗಿರುತ್ತದೆ.

ನಾವು ಹೇಗೆ ವಿಭೂತಿ ಧಾರೆಣೆ ಮಾಡಬೇಕು?

ಸಾಂಪ್ರದಾಯಿಕವಾಗಿ ವಿಭೂತಿಯನ್ನು ನಿಮ್ಮ ಹೆಬ್ಬೆರಳು ಮತ್ತು ಉಂಗುರದ ಬೆರಳುಗಳಲ್ಲಿ ಒಂದು ಚಿಟಿಕೆಯಷ್ಟು ತೆಗೆದುಕೊಳ್ಳಬೇಕು. ನೀವು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅದನ್ನು ಆಜ್ಞಾ ಚಕ್ರವೆಂದು ಹೆಸರಿಸುವ ಎರಡು ಹುಬ್ಬುಗಳ ನಡುವಿನ ಜಾಗ, ಗಂಟಲಿನ ಕುಳಿಯಲ್ಲಿ ಅಂದರೆ ವಿಶುದ್ಧಿ ಚಕ್ರದಲ್ಲಿ ಮತ್ತು ಎದೆಯ ಮಧ್ಯಭಾಗದಲ್ಲಿ, ಎದೆಯೆಲುಬು ಸಂಧಿಸುವ ಸ್ಥಳವಾದ ಅನಾಹತ ಚಕ್ರದ ಮೇಲೆ ಧರಿಸಬೇಕು. ಭಾರತದಲ್ಲಿ, ಈ ಕೇಂದ್ರಗಳ ಮೇಲೆ ವಿಭೂತಿಯನ್ನು ಧರಿಸಿಕೊಳ್ಳಬೇಕೆನ್ನುವುದು ಸಾಮಾನ್ಯ ತಿಳುವಳಿಕೆಯಾಗಿದೆ. ಏಕೆಂದರೆ ಈ ನಿರ್ದಿಷ್ಟ ಬಿಂದುಗಳ ಮೇಲೆ ವಿಭೂತಿಯನ್ನು ಧರಿಸಿದಾಗ ಅವುಗಳ ಸಂವೇದನಾಶಕ್ತಿಯು ವೃದ್ಧಿಯಾಗುತ್ತದೆ.

ಇದು ಒಂದು ಗಹನ ವಿಜ್ಞಾನವಾಗಿದೆ. ಆದರೆ ಇಂದು ಅದರ ಹಿಂದೆ ಇರುವ ವಿಜ್ಞಾನದ ಅರಿವಿಲ್ಲದೆ, ಅದನ್ನು ನಾವು ಸುಮ್ಮನೆ ಹಣೆಯ ಮೇಲೆ ಪಟ್ಟಿಗಳಂತೆ ಧರಿಸುತ್ತೇವೆ

ವಿಭೂತಿಯನ್ನು ಸಾಮಾನ್ಯವಾಗಿ ಅನಾಹತ ಚಕ್ರದ ಮೇಲೆ ಧಾರಣೆ ಮಾಡಿಕೊಳ್ಳಲಾಗುತ್ತದೆ, ಏಕೆಂದರೆ ನೀವು ಚೇತನವನ್ನು ಪ್ರೀತಿಯಂತೆ ಸ್ವೀಕರಿಸುವಿರಿ. ವಿಶುದ್ಧಿ ಚಕ್ರದಲ್ಲಿ ನೀವು ಚೇತನವನ್ನೇ ಶಕ್ತಿಯಂತೆ ಸ್ವೀಕರಿಸುವಿರಿ; ಶಕ್ತಿಯೆಂದರೆ ಕೇವಲ ಶಾರೀರಿಕ ಅಥವಾ ಮಾನಸಿಕ ಶಕ್ತಿಯಲ್ಲ. ವ್ಯಕ್ತಿಯು ಅನೇಕ ರೀತಿಗಳಲ್ಲಿ ಶಕ್ತಿಯುತನಾಗಬಹುದು. ಪ್ರಾಣಶಕ್ತಿಗಳನ್ನು ಹೆಚ್ಚು ಬಲ ಮತ್ತು ಸಾಮರ್ಥ್ಯದಿಂದಿರುವಂತೆ ಮಾಡಿದಾಗ, ನಿಮ್ಮ ಸುತ್ತಮುತ್ತಲಿನ ಬದುಕಿನ ಮೇಲೆ ನಿಮ್ಮ ಉಪಸ್ಥಿತಿಯು ಪ್ರಭಾವವನ್ನು ಬೀರುತ್ತದೆ. ನಿಮ್ಮ ಮಾತು ಅಥವಾ ಕ್ರಿಯೆಗಳ ಅಗತ್ಯವಿಲ್ಲ - ನೀವು ಸುಮ್ಮನೆ ಕುಳಿತ್ತಿದ್ದರೂ ನೀವು ನಿಮ್ಮ ಸುತ್ತಲಿನ ಸನ್ನಿವೇಶದ ಮೇಲೆ ಪ್ರಭಾವನ್ನು ಬೀರುವಿರಿ. ಇಂತಹ ಶಕ್ತಿಯನ್ನು ವ್ಯಕ್ತಿಯ ಅಂತರ್ಯದಲ್ಲಿ ವೃದ್ಧಿಗೊಳಿಸಬಹುದು. ಆಜ್ಞಾ ಚಕ್ರದಲ್ಲಿ ವಿಭೂತಿ ಧಾರಣೆ ಮಾಡಿದರೆ ನೀವು ಚೇತನವನ್ನು ಜ್ಞಾನವಾಗಿ ಸ್ವೀಕರಿಸುವಿರಿ.

ಇದು ಒಂದು ಅತ್ಯಂತ ಗಾಢವಾದ ವಿಜ್ಞಾನವಾಗಿದೆ, ಅದರ ಹಿಂದಿರುವ ವಿಜ್ಞಾನವನ್ನು ಅರಿಯದೆ, ನಾವು ಸುಮ್ಮನೆ ವಿಭೂತಿಯನ್ನು ಹಣೆಯ ಮೇಲೆ ಪಟ್ಟಿಗಳಂತೆ ಹಚ್ಚಿಕೊಳ್ಳುತ್ತೇವೆ. ಒಂದು ರೀತಿಯಲ್ಲಿ ವಿಭೂತಿ ಪಟ್ಟಿಯನ್ನು ಹಚ್ಚಿಕೊಳ್ಳುವ ವ್ಯಕ್ತಿಗೆ, ಮತ್ತೊಂದು ರೀತಿಯಲ್ಲಿ ಪಟ್ಟಿಯನ್ನು ಧರಿಸಿರುವ ವ್ಯಕ್ತಿಯೊಡನೆ ಸಮ್ಮತವಿರುವುದಿಲ್ಲ. ಇದು ಮೂರ್ಖತನ. ವಿಭೂತಿಯೆನ್ನುವುದು ಶಿವನಾಗಲಿ ಅಥವಾ ಯಾವುದೇ ದೇವರಾಗಲಿ ನೀಡಿದ ವಸ್ತುವಲ್ಲ. ಇದು ನಂಬಿಕೆಯ ಪ್ರಶ್ನೆಯಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಅದನ್ನು ವ್ಯಕ್ತಿಯ ಬೆಳವಣಿಗೆಯ ಒಂದು ಸಾಧನವೆಂದು ಭಾವಿಸಲಾಗಿದೆ. ಯುಕ್ತರೀತಿಯಲ್ಲಿ ಸಿದ್ಧಪಡಿಸಿದ ಪವಿತ್ರ ಭಸ್ಮವು ಬೇರೆ ರೀತಿಯ ಕಂಪನವನ್ನು ಹೊಂದಿರುತ್ತದೆ. ಇದರ ಹಿಂದಿರುವ ವಿಜ್ಞಾನವನ್ನು ಪುನಶ್ಚೇತನಗೊಳಿಸಿ ಅದರ ಉಪಯೋಗವನ್ನು ಪಡೆದುಕೊಳ್ಳುವ ಅಗತ್ಯವಿದೆ.

ಸಂಪಾದಕರ ಟಿಪ್ಪಣಿ: ವಿಭೂತಿಯು Isha Shoppe ಯಲ್ಲಿ ದೊರಕುತ್ತದೆ. ಅದನ್ನು ಬಹಳ ಎಚ್ಚರಕೆಯಿಂದ ಸಿದ್ಧಪಡಿಸಿ, ಅತ್ಯುತ್ತಮ ಪ್ರಯೋಜನಕ್ಕಾಗಿ ಶಕ್ತಿಯುತಗೊಳಿಸಲಾಗಿದೆ. ಈಶ ಮಳಿಗೆಯಲ್ಲಿ ಅದನ್ನು ಕೊಳ್ಳಬಹುದು.