ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್‍ ಅವರು ಸದ್ಗುರುಗಳೊಂದಿಗೆ ಲಿಂಗ ಭೈರವಿ, ಯಂತ್ರಗಳು ಮತ್ತು ಪ್ರತಿಷ್ಠಾಪನೆಗೊಂಡ ಸ್ಥಳಗಳ ಬಗ್ಗೆ ಮಾತನಾಡುತ್ತಾರೆ.

ಶೇಖರ್ ಕಪೂರ್: ಸದ್ಗುರು, ಲಿಂಗ ಭೈರವಿಯ ಪ್ರತಿಷ್ಠಾಪನೆ ನಡೆಯುವ ಸಂಧರ್ಭದಲ್ಲಿ, “ಶೇಖರ್, ಸೃಜನಶೀಲ ವ್ಯಕ್ತಿಯಾದ ನೀವು ಬರಲೇಬೇಕು” ಎಂದು ನನಗೆ ಹೇಳಿದ್ದಿರಿ, ಆದ್ದರಿಂದ ನನ್ನ ಮೊದಲ ಪ್ರಶ್ನೆಯೆಂದರೆ, ಭೈರವಿ ಮತ್ತು ಸೃಜನಶೀಲತೆಯ ನಡುವಿನ ಸಂಬಂಧದ ಬಗ್ಗೆ.

ಸದ್ಗುರು: ಈ ಗ್ರಹದಲ್ಲಿ ನಮಗೆ ತಿಳಿದಿರುವ ಭೌತಿಕ ಸೃಷ್ಟಿಯ ಅತ್ಯಂತ ಶ್ರೇಷ್ಠ ಕಲಾಕೃತಿ, ಮಾನವ ದೇಹ. ಈ ರೀತಿಯ ಅತ್ಯಾಧುನಿಕ ಮತ್ತು ಅದ್ಭುತವಾದ ಯಾವುದೇ ಭೌತಿಕ ಕಾರ್ಯವಿಧಾನವಿಲ್ಲ. ಇದರಲ್ಲಿ ಪುರುಷ ತತ್ವದ ಪಾತ್ರವಿದ್ದರೂ ಸಹ, ಇದನ್ನು ಮೂಲಭೂತವಾಗಿ ಸ್ತ್ರೀತತ್ವದ ಗರ್ಭದಲ್ಲಿ ತಯಾರಿಸಲಾಗುತ್ತದೆ. ಸ್ತ್ರೀತತ್ವದ ಪರಮ ಸ್ವರೂಪವೇ ಭೈರವಿ – ಸೃಜನಶೀಲತೆಯ ಸಾರವೇ ಅವಳು.

ಶೇಖರ್ ಕಪೂರ್: ನನ್ನಲ್ಲಿನ ಸ್ತ್ರೀತತ್ವದ ಸ್ವಭಾವವೇ ನನ್ನ ಸೃಜನಶೀಲತೆಯ ಮೂಲ ಎಂದು ನೀವು ಹೇಳುತ್ತಿರುವಿರಾ?

ಸದ್ಗುರು: ಮನುಷ್ಯರು ಸೃಜನಶೀಲ ಎಂಬುದನ್ನು ನಾನು ಒಪ್ಪುವುದಿಲ್ಲ. ನಮ್ಮ ಸುತ್ತಲಿನ ಸೃಷ್ಟಿಯನ್ನು ನಾವು ಆಳದಿಂದ ಗ್ರಹಿಸಿದರೆ, ನಾವು ಅದನ್ನು ಅನೇಕ ವಿಧಗಳಲ್ಲಿ, ಕ್ರಮಪಲ್ಲಟನೆಗಳು ಮತ್ತು ಸಂಯೋಜನೆಗಳಲ್ಲಿ ಅನುಕರಿಸಬಹುದು. ಈ ಮೂಲಕ ಸಮಾಜದಲ್ಲಿಯಷ್ಟೇ ಸೃಜನಶೀಲರಾಗಿ ಕಾಣಿಸಬಹುದು, ಆದರೆ ವಾಸ್ತವವಾಗಿ, ನಾವು ನಿಜವಾಗಿಯೂ ಸೃಜನಶೀಲರಲ್ಲ. ಇಲ್ಲಿ ರಚಿಸಬಹುದಾದ ಎಲ್ಲವೂ ಈಗಾಗಲೇ ಸೃಷ್ಟಿಯಲ್ಲಿ ರಚಿಸಲ್ಪಟ್ಟಿದೆ. ನಾವು ಹೆಚ್ಚು ಬುದ್ಧಿವಂತ ಕುಶಲಕರ್ಮಿಗಳು. “ಸೃಜನಶೀಲತೆ” ಎಂಬ ಪದವನ್ನು ನಿಜವಾಗಿಯೂ ಏನನ್ನಾದರೂ ರಚಿಸುವಲ್ಲಿ ಎಂದು ನೀವು ವ್ಯಾಖ್ಯಾನಿಸಿದರೆ - ನೀವು ಚಲನಚಿತ್ರವನ್ನು ನಿರ್ಮಿಸಬಹುದು ಅಥವಾ ನೀವು ಏನನ್ನಾದರೂ ಚಿತ್ರಿಸಬಹುದು ಅಥವಾ ನಾನು ಕಟ್ಟಡವನ್ನು ನಿರ್ಮಿಸಬಹುದು, ನಾನು ಮಾತನಾಡಬಹುದು, ಅಥವಾ ನಾನು ಇನ್ನೇನು ಮಾಡಿದರೂ - ಇದು ನೈಜವಾಗಿ ಸೃಜನಶೀಲತೆಯಲ್ಲ- ಇದು ಚತುರ ಅನುಕರಣೆಯಷ್ಟೇ. ನಾವು ಜೀವನದ ವಿವಿಧ ಆಯಾಮಗಳತ್ತ ಗಮನ ಹರಿಸಿದ್ದರಿಂದ, ಬೇರೆಯವರು ಇದು ಸಾಧ್ಯವೆಂದು ಭಾವಿಸದ ರೀತಿಯಲ್ಲಿ ಅನುಕರಿಸಲು ಸಾಧ್ಯವಾಗುತ್ತದೆ. ಅಥವಾ “ಅನುಕರಣೆ” ಎಂಬ ಪದ ನಿಮಗೆ ಇಷ್ಟವಾಗದಿದ್ದರೆ, ನೀವು “ಪುನರ್ರಚನೆ” ಎಂದು ಹೇಳಬಹುದು.

ಶೇಖರ್ ಕಪೂರ್: “ಪುನರ್ರಚನೆ” ಬದಲು ನಾನು "ಅನುಕರಣೆ" ಎಂಬ ಪದ ಉತ್ತಮ ಎಂದು ಭಾವಿಸುತ್ತೇನೆ. ಅಥವಾ ಸೃಜನಶೀಲ ವ್ಯಕ್ತಿಯಾಗಿ ನನ್ನನ್ನು “ವ್ಯಾಖ್ಯಾನಿಸುವವ” ಎಂಬ ಪದಬಳಕೆ ಒಪ್ಪುತ್ತೀರ?

ಸದ್ಗುರು: ಇಲ್ಲ, ನಾನು ನಿಮಗೆ “ಪ್ರಸಾರಣೆ” ಪದ ನೀಡುತ್ತೇನೆ. ಪ್ರಸಾರಣೆಯಲ್ಲಿ, ನೀವು ಬಣ್ಣ ಮತ್ತು ರೂಪಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.

ಶೇಖರ್ ಕಪೂರ್: ಸರಿ, ನಾನು “ಸೃಜನಶೀಲತೆ” ಎಂಬ ಪದವನ್ನು “ಪ್ರಸಾರಣೆ” ಎಂಬ ಪದದೊಂದಿಗೆ ಬದಲಾಯಿಸಲಿದ್ದೇನೆ. ಪ್ರಸಾರಣೆಯ ಬಗ್ಗೆ ಮಾತನಾಡೋಣ. ನಾನು ಹೇಗೆ ಪ್ರಸಾರ ಮಾಡುವುದು? ಪ್ರಸಾರಣೆ ಮತ್ತು ಭೈರವಿಯ ನಡುವೆ ಸಂಬಂಧವಿದೆಯೇ? ನಾನು ಹೇಗೆ ಆ ಮೂಲವನ್ನು ತಲುಪಬಹುದು ಅಥವಾ ಅದರ ಭಾಗವಾಗಬಹುದು?

ಸದ್ಗುರು: ದೇವಿಯೇ ಸ್ವತಃ ಒಂದು ಪ್ರಸಾರಣೆಯಿದ್ದಂತೆ. ನಾವು ಯಾವಾಗಲೂ ಯೋಗದಲ್ಲಿ “ವಿಂಡೋ”(ಕಿಟಕಿ) ಪದವನ್ನು ಬಳಸಿದ್ದೇವೆ. ಹೇಗೋ, ಬಿಲ್ ಗೇಟ್ಸ್ ಅದನ್ನು ನಮ್ಮಿಂದ ಕದ್ದಿದ್ದಾರೆ, ಏಕೆಂದರೆ ನಾವು ಅದನ್ನು ಅವರಂತೆ ಹೆಚ್ಚು ಜನಪ್ರಿಯಗೊಳಿಸಲಿಲ್ಲ! ಇದು ಹೊಸದೊಂದು ಕಿಟಕಿಯನ್ನು ತೆರೆಯುವಂತೆ. ನೀವು ಹೊಸ ಕಿಟಕಿಯನ್ನು ತೆರೆದರೆ, ಇದ್ದಕ್ಕಿದ್ದಂತೆ ಅಸ್ತಿತ್ವವು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕಾಣುತ್ತದೆ. ನಿಮ್ಮ ಜೀವನದುದ್ದಕ್ಕೂ ನೀವು ಮನೆಯ ಒಳಡೆಯೇ ವಾಸಿಸುತ್ತಿದ್ದೀರಿ ಎಂದು ಭಾವಿಸೋಣ. ಈಗ ನೀವು ಒಂದು ಕಿಟಕಿ ತೆರೆದರೆ, ನೀವು ದೇವಾಲಯವನ್ನು ನೋಡುತ್ತೀರಿ, ಜಗತ್ತೇ ದೇವಾಲಯವೆಂದು ನೀವು ಭಾವಿಸುವಿರಿ. ನೀವು ಇನ್ನೊಂದನ್ನು ತೆರೆದರೆ, ಜಗತ್ತು ಒಂದು ಪರ್ವತ ಎಂಬಂತೆ ಎಂದು ಭಾಸವಾಗುತ್ತದೆ. ನೀವು ಇನ್ನೊಂದು ಕಿಟಕಿಯನ್ನು ತೆರೆದರೆ, ಜಗತ್ತು ಕಾಡು ಎಂಬಂತೆ ಭಾವಿಸುವಿರಿ. ನೀವು ಬೇರೆ ಕಿಟಕಿಯನ್ನು ತೆರೆದರೆ, ಜಗತ್ತು ಒಂದು ಪಟ್ಟಣ ಎಂಬಂತೆ ಭಾವಿಸುವಿರಿ. ಅಂತೆಯೇ, ನೀವು ಕೋಟಿಕೋಟಿ ವಿಭಿನ್ನ ಕಿಟಕಿಗಳನ್ನು ತೆರೆಯಬಹುದು ಮತ್ತು ಅದು ಇನ್ನೂ ಹೊಸತನ್ನು ತೋರಿಸಬಲ್ಲದು, ಏಕೆಂದರೆ ಸೃಷ್ಟಿಯ ವಿದ್ಯಮಾನ ಸಾಕಷ್ಟು ವ್ಯಾಪಕವಾಗಿದೆ.

ಜನರು ತಾವು ಸ್ವತಃ ಮಾಡಲು ಸಾಧ್ಯವಾಗದಂತಹ ವಿಷಯಗಳನ್ನು ಅನುಭವಿಸಲು, ತಿಳಿದುಕೊಳ್ಳಲು ಮತ್ತು ಸಾಧಿಸಲು ಭೈರವಿಯ ಮೂಲಕ ಸಾಧ್ಯವಾಗುತ್ತದೆ.

ಭೈರವಿ ಸ್ವತಃ ಒಂದು ಕಿಟಕಿಯಿದ್ದಂತೆ. ಪ್ರಪಂಚದಲ್ಲಿ ಯಾವುದನ್ನಾದರೂ ಕಿಟಕಿಯನ್ನಾಗಿ ಮಾಡಬಹುದು, ಆದರೆ ಹಾಗೆ ಮಾಡಲಾಗಿಲ್ಲ. ನಾವು ಒಂದು ಕಿಟಕಿಯನ್ನು ಸ್ಥಾಪಿಸಿದ್ದೇವೆ ಹಾಗೂ ಹೆಚ್ಚಿನ ಜನರು ನೋಡುವಂತೆ ಅದನ್ನು ತೆರೆದಿರುವಂತೆ ನೋಡಿಕೊಂಡಿದ್ದೇವೆ. ಜನರು ಎಂದಿಗೂ ತಾವು ಸ್ವತಃ ಮಾಡಲು ಸಾಧ್ಯವಾಗದಂತಹ ವಿಷಯಗಳನ್ನು ಅನುಭವಿಸಲು, ತಿಳಿದುಕೊಳ್ಳಲು ಮತ್ತು ಸಾಧಿಸಲು ಭೈರವಿಯ ಮೂಲಕ ಸಾಧ್ಯವಾಗುತ್ತದೆ. ಭೈರವಿ ಯಂತ್ರ ಮತ್ತು ಭೈರವಿ ಸಾಧನದ ಮೂಲಕ ಪ್ರತಿದಿನ ಬಹಳಷ್ಟು ಜನರ ಕಥೆಗಳನ್ನು ನೀವು ಕೇಳಬೇಕು – ನಂಬಲಸಾಧ್ಯ ಸಂಗತಿಗಳು! ನೀವು ಅವಳನ್ನು ಕಿಟಕಿಯಾಗಿ ಬಳಸಿದರೆ, ಇದ್ದಕ್ಕಿದ್ದಂತೆ ಅವಳು ನಿಮಗಾಗಿ ಹೊಸ ಆಯಾಮವನ್ನು ತೆರೆಯುತ್ತಾಳೆ, ಇದು ಶಕ್ತಿರೂಪ ಮತ್ತು ಸಾಮರ್ಥ್ಯದ ವರ್ಧಿಸಿದ ಮಟ್ಟ.

ಯಂತ್ರಗಳು: ಶಕ್ತಿಯ ಯಂತ್ರೋಪಕರಣ (ಮೆಷೀನ್)

ಇನ್ನೊಂದು ವಿಧದಲ್ಲಿ, ಎಲ್ಲಾ ವಿಗ್ರಹಗಳನ್ನು ಯಂತ್ರ ಎಂದೂ ಕರೆಯಬಹುದು. ಒಂದು ರೀತಿಯಲ್ಲಿ, ಯಂತ್ರವು ಒಂದು ಯಂತ್ರೋಪಕರಣ ಅಥವಾ ಮೆಷೀನ್ ನಂತೆ. “ಯಂತ್ರ” ಎಂಬ ಪದ “ರೂಪ” ಎಂಬ ಅರ್ಥವನ್ನೂ ಕೊಡುತ್ತದೆ. ಯಂತ್ರವು ಹಲವು ರೂಪಗಳ ಸಂಯುಕ್ತ ಜೋಡಣೆಯಾಗಿದೆ. ನಾವು ಯಂತ್ರಗಳನ್ನು ಏಕೆ ಆವಿಷ್ಕರಿಸುತ್ತೇವೆ ಎಂದು ಗಮನಿಸಿದರೆ, ಮಾನವರು ಇದುವರೆಗೆ ಮಾಡಿದ ಎಲ್ಲಾ ಯಂತ್ರಗಳು ಈಗಾಗಲೇ ಒಂದು ನಿರ್ದಿಷ್ಟ ರೀತಿಯಲ್ಲಿ ಮಾಡಬಹುದಾದ ಕೆಲಸಗಳ ಸಾಮರ್ಥ್ಯವನ್ನು ಹೆಚ್ಚಿಸುವುದರ ಕುರಿತು. ನಾವು ಕೆಲವು ಕೆಲಸಗಳನ್ನು ಸಣ್ಣ ರೀತಿಯಲ್ಲಿ ಮಾಡಬಹುದು - ಯಂತ್ರವು ಅದನ್ನು ದೊಡ್ಡ ರೀತಿಯಲ್ಲಿ ಮಾಡುತ್ತವೆ ಅಷ್ಟೆ. ನಮಗೆ ನಡೆಯುವ ಸಾಮರ್ಥ್ಯ ಇರುವುದರಿಂದಲೇ ನಾವು ಬೈಸಿಕಲ್‍ನ ಆವಿಷ್ಕಾರ ಮಾಡಲು ಸಾಧ್ಯವಾಯಿತು. ಮರದಂತೆ ಸ್ಥಿರವಾಗಿದ್ದಿದ್ದರೆ, ನಾವು ಎಂದಿಗೂ ಬೈಸಿಕಲ್ ಬಗ್ಗೆ ಯೋಚಿಸುತ್ತಿರಲಿಲ್ಲ.

ಈ ಯಂತ್ರಗಳು ಸಂಪೂರ್ಣವಾಗಿ ವಿಭಿನ್ನ ಆಯಾಮದಲ್ಲಿ ಕಾರ್ಯನಿರ್ವಹಿಸುವ ಯಂತ್ರೋಪಕರಣಗಳಾಗಿವೆ. ಅವು ಆಂತರಿಕ ಯೋಗಕ್ಷೇಮದ ಉಪಕರಣಗಳಾಗಿವೆ

ಯಾವುದೇ ಯಂತ್ರ ಅಥವಾ ಉಪಕರಣಗಳು, ಅದು ಫೋನ್, ಬೈಸಿಕಲ್, ಕಾರು, ಕಂಪ್ಯೂಟರ್ ಅಥವಾ ಇನ್ನಾವುದೇ ಆಗಿರಲಿ, ಅದು ನಮ್ಮ ಸ್ವಂತ ಶಕ್ತಿ ಮತ್ತು ಸಾಮರ್ಥ್ಯದ ವರ್ಧಕಗಳಾಗಿವೆ. ಆ ಅರ್ಥದಲ್ಲಿ ಭೈರವಿ ಯಂತ್ರವೂ ಒಂದು ಸಾಮರ್ಥ್ಯ ವರ್ಧಕ ಉಪಕರಣ. ಅವಳೊಂದಿಗೆ ಕೆಲಸ ಮಾಡಲು ಬೇರೆಯದೇ ಮಾರ್ಗವಿದೆ ಏಕೆಂದರೆ ಅವಳು ಭೌತಿಕ ಯಂತ್ರವಲ್ಲ - ಅವಳು ಶಕ್ತಿ ಯಂತ್ರ. ನೀವು ಸರಿಯಾದ ಸಂಹಿತೆ, ಮಂತ್ರ ಅಥವಾ ಅವಳೊಂದಿಗೆ ಸಂಪರ್ಕ ಸಾಧಿಸಲು ಒಂದು ನಿರ್ದಿಷ್ಟ ಮಾರ್ಗವನ್ನು ಬಳಸಿದರೆ, ಅವಳು ನಿಮಗಾಗಿ ಕೆಲಸ ಮಾಡುತ್ತಾಳೆ, ಇದ್ದಕ್ಕಿದ್ದಂತೆ, ವಿವಿಧ ಹಂತಗಳಲ್ಲಿ, ನಿಮ್ಮ ಸಾಮರ್ಥ್ಯವು ಹೆಚ್ಚಾಗುತ್ತದೆ.

ನಿಮಗೆ ನೆನಪಿದ್ದರೆ, ಬೈಸಿಕಲ್ ಸವಾರಿ ಮಾಡುವುದು ಹೇಗೆ ಎಂದು ನೀವು ಮೊದಲು ಕಲಿತಾಗ ಹೊಸ ಮಟ್ಟದ ಮಹತ್ತರವಾದ ಸ್ವಾತಂತ್ರ್ಯವು ನಿಮ್ಮಲ್ಲಿತ್ತು. ಬೈಸಿಕಲ್ ಅತ್ಯಂತ ಮೂಲಭೂತ ಯಂತ್ರಗಳಲ್ಲಿ ಒಂದು, ಆದರೂ ನೀವು ಅದನ್ನು ಮೊದಲು ಸವಾರಿ ಮಾಡುವಾಗ, ಚಲಿಸುವ ನಿಮ್ಮ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಪರಿವರ್ತಿಸಿದ ಅನುಭವವು ಅದ್ಭುತವಾಗಿರುತ್ತದೆ. ಈ ಗ್ರಹದಲ್ಲಿ ಮಾನವರು ಪ್ರಬಲ ಸ್ಥಾನದಲ್ಲಿರಲು ಏಕೈಕ ಕಾರಣವೆಂದರೆ ನಾವು ಉಪಕರಣಗಳು ಮತ್ತು ಯಂತ್ರಗಳನ್ನು ರಚಿಸಿದ್ದೇವೆ. ನೀವು ಚಿರತೆಯಂತೆ ವೇಗವಾಗಿ ಓಡಲು ಸಾಧ್ಯವಿಲ್ಲ. ನೀವು ಹುಲಿಯೊಂದಿಗೆ ಹೋರಾಡಲು ಸಾಧ್ಯವಿಲ್ಲ. ಆನೆಯ ಮುಂದೆ ನೀವು ಯಾವುದೇ ಹೊಂದಾಣಿಕೆಯೇ ಇಲ್ಲ. ಅದು ಏಕೆ, ನೀವು ಎತ್ತು ಅಥವಾ ಹಸುವಿಗೆ ಕೂಡ ಹೊಂದಾಣಿಕೆಯಾಗುವುದಿಲ್ಲ. ನಮ್ಮಲ್ಲಿ ಉಪಕರಣಗಳು ಮತ್ತು ಯಂತ್ರಗಳು ಇರುವುದರಿಂದ ಮಾತ್ರ, ನಮ್ಮ ಜೀವನವು ವರ್ಧಿತವಾಗಿದೆ.

ಪ್ರಸ್ತುತ ಭೌತಿಕ ವಿಜ್ಞಾನಗಳಿಗಿಂತ ಹೆಚ್ಚು ಪ್ರಾಚೀನ, ಹೆಚ್ಚು ಆಳವಾದ ಮತ್ತು ಹೆಚ್ಚು ಸಂಕೀರ್ಣವಾದ ಈ ವಿಜ್ಞಾನದ ಸ್ವರೂಪವು ವ್ಯಕ್ತಿನಿಷ್ಠ ಸ್ವರೂಪದಲ್ಲಿದೆ.

ಈ ಯಂತ್ರಗಳು ಸಂಪೂರ್ಣವಾಗಿ ವಿಭಿನ್ನ ಆಯಾಮದಲ್ಲಿ ಕಾರ್ಯನಿರ್ವಹಿಸುವ ಯಂತ್ರಗಳಾಗಿವೆ. ಅವು ಆಂತರಿಕ ಯೋಗಕ್ಷೇಮದ ಯಂತ್ರಗಳಾಗಿವೆ. ನಾನು ಧ್ಯಾನಲಿಂಗವನ್ನು ಒಂದು ಉಪಕರಣವೆಂದು ಉಲ್ಲೇಖಿಸಿದಾಗಲೆಲ್ಲಾ ಜನರು ನೊಂದುಕೊಳ್ಳುತ್ತಾರೆ, “ಸದ್ಗುರು, ಇದನ್ನು ಉಪಕರಣವೆಂದು ಕರೆಯಬೇಡಿ - ನಮಗೆ ಅದು ದೇವರು!” ಎನ್ನುತ್ತಾರೆ, ಅದಕ್ಕೆ ನಾನು “ಅದು ಸರಿ - ದೇವರು ಕೂಡ ಒಂದು ಉಪಕರಣವೇ.”ಅನ್ನುತ್ತೇನೆ. ಜನರು ದೇವಸ್ಥಾನಕ್ಕೆ ಹೋಗಿ “ಶಿವ, ನನಗಾಗಿ ಇದನ್ನು ಮಾಡಿ, ಅದನ್ನು ಮಾಡಿ” ಎಂದು ಕೇಳಿಕೊಳ್ಳುವಾಗ ಅವರು ಆತನನ್ನು ತಮ್ಮ ಯೋಗಕ್ಷೇಮಕ್ಕೆ ಒಂದು ಉಪಕರಣವಾಗಿ ಬಳಸಲು ಪ್ರಯತ್ನಿಸುತ್ತಾರೆ. ಉಪಕರಣವು ಎಷ್ಟು ಅದ್ಭುತವಾದುದು ಎಂದು ಜನರಿಗೆ ಅರ್ಥವಾಗುವುದಿಲ್ಲ. ದೇವರು ಅಷ್ಟು ಅದ್ಭುತವಲ್ಲ – ಬದಲಾಗಿ ಉಪಕರಣಗಳು ಅದ್ಭುತವಾದವು. ಪೀಠೋಪಕರಣದಲ್ಲಿರುವ ಒಂದು ಸ್ಕ್ರೂವನ್ನು ಬಿಚ್ಚಲು ನಾನು ನಿಮ್ಮನ್ನು ಹೇಳೀದರೆ, ನಿಮ್ಮ ಎಲ್ಲಾ ಬೆರಳಿನ ಉಗುರುಗಳು ಮತ್ತು ಕೆಲವು ಹಲ್ಲುಗಳನ್ನು ಕೂಡ ನೀವು ಕಳೆದುಕೊಳ್ಳಬಹುದು, ಆದರೂ ಅದು ಹೊರಬರುವುದಿಲ್ಲ. ಅದೇ ನಾನು ನಿಮಗೆ ಒಂದು ಸಣ್ಣ ಸ್ಕ್ರೂಡ್ರೈವರ್ ನೀಡಿದರೆ – ಸುಲಭವಾಗಿ ಕೆಲಸ ಮುಗಿಯುವುದು! ಅದುವೇ ಉಪಕರಣದ ಶಕ್ತಿ - ಇದು ನಿಮ್ಮಿಂದಲೂ ಮಾಡಲಾಗದ ಕೆಲಸಗಳನ್ನು ಸುಲಭವಾಗಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

ನೀವು ನಿಮ್ಮ ತಲೆಯ ಮೇಲೆ ನಿಂತು, ಎಲ್ಲಾ ರೀತಿಯ ತಿರುಚಿದ ರೂಪಗಳಲ್ಲಿ ಪ್ರಯತ್ನಿಸಿದರೂ ನಿಮಗೆ ಧ್ಯಾನ ಮಾಡಲು ಸಾಧ್ಯವಾಗಲಿಲ್ಲ. ಈಗ ನೀವು ಧ್ಯಾನಲಿಂಗದಲ್ಲಿ ಬಂದು ಕುಳಿತುಕೊಂಡರೆ ನೀವು ಧ್ಯಾನಸ್ಥರಾಗುತ್ತೀರಿ. ತಮ್ಮ ಇಡೀ ಜೀವನದಲ್ಲಿ ಧ್ಯಾನ ಮಾಡಲು ಸಾಧ್ಯವಾಗದ ಅನೇಕ ಜನರು ಅಲ್ಲಿ ಕುಳಿತು ಧ್ಯಾನಸ್ಥರಾಗುತ್ತಾರೆ. ಅದಕ್ಕಾಗಿಯೇ ಅದು ಆ ನಿಟ್ಟಿನಲ್ಲಿ ಪ್ರಬಲ ಉಪಕರಣವಾಗಿದೆ – ಆದ್ದರಿಂದಲೇ ಇದನ್ನು ಧ್ಯಾನಲಿಂಗ ಎಂದು ಕರೆಯಲಾಗುತ್ತದೆ. ಅಂತೆಯೇ, ಭೈರವಿ ವಿಭಿನ್ನ ಮಟ್ಟದಲ್ಲಿ ಯೋಗಕ್ಷೇಮಕ್ಕಾಗಿ ಒಂದು ಉಪಕರಣವಾಗಿದೆ. ನೀವೇ ಊಹಿಸಲು ಅಸಾಧ್ಯವೆನಿಸುವ ಸ್ಥಳಗಳಿಗೆ ನಿಮ್ಮನ್ನು ಕರೆದೊಯ್ಯಲು ಇಂತಹ ಅತ್ಯಾಧುನಿಕ ರೂಪಗಳನ್ನು ರಚಿಸಲಾಗಿದೆ.

ಪ್ರತಿಷ್ಠೆಗೊಂಡ ಸ್ಥಳಗಳು

ನಾನು ಅಂತಹ ಸ್ಥಳಗಳಿಗೆ ಹೋಗಿರದೆ ಇದ್ದಿದ್ದರೆ, ಭೈರವಿಯನ್ನು ಅವಳು ಈಗ ಇರುವ ರೀತಿಯಲ್ಲಿ ಅಭಿವ್ಯಕ್ತ ಪಡಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಬ್ಬರೂ ಯಾವುದೇ ಸಾಧನವಿಲ್ಲದೆ, ಯಂತ್ರವಿಲ್ಲದೆ ಪ್ರಯಾಣವನ್ನು ಮಾಡಬೇಕಾದರೆ, ಅದು ಪ್ರಯಾಸಕರವಾದ ಕೆಲಸವಾಗುತ್ತದೆ. ಮೂಲಭೂತವಾಗಿ, ಒಂದು ಪೀಳಿಗೆಯು ಉಪಕರಣಗಳು ಮತ್ತು ಯಂತ್ರಗಳನ್ನು ಒಂದು ನಿರ್ದಿಷ್ಟ ಹಂತದಲ್ಲಿ ಬಿಟ್ಟರೆ, ಮುಂದಿನ ಪೀಳಿಗೆಯು ಅದನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸದೆ ಅಥವಾ ಹಿಂದಿನ ಹಂತವನ್ನು ಪುನರಾವರ್ತಿಸದೆ ಮುಂದಿನ ಹಂತವನ್ನು ಸರಾಗವಾಗಿ ತೆಗೆದುಕೊಂಡು ಹೋಗಬಹದು.

ಜೀವನ ಇರುವುದು ಅದನ್ನು ಗ್ರಹಿಸಲು ಹಾಗು ಅನುಭವಿಸಲು ಮಾತ್ರ. ಆದ್ದರಿಂದ ನಿಮ್ಮ ಆಯ್ಕೆಯು ಅದನ್ನು ಹೆಚ್ಚು ಗಹನವಾಗಿ ಗ್ರಹಿಸುವುದು ಮತ್ತು ಅನುಭವಿಸುವುದರ ಕುರಿತಾಗಿ ಇರಬೇಕು.

ಈ ಯಂತ್ರಗಳು ಶಕ್ತಿಯುತ ಉಪಕರಣಗಳಾಗಿವೆ. ಪ್ರಸ್ತುತ ಭೌತಿಕ ವಿಜ್ಞಾನಕ್ಕಿಂತ ಹೆಚ್ಚು ಪ್ರಾಚೀನ, ಹೆಚ್ಚು ಆಳವಾದ ಮತ್ತು ಹೆಚ್ಚು ಸಂಕೀರ್ಣವಾದ ಈ ವಿಜ್ಞಾನದ ಸ್ವರೂಪವು ವ್ಯಕ್ತಿನಿಷ್ಠ ಸ್ವರೂಪದ್ದಾಗಿದೆ. ಇಂದಿನ ವಿಜ್ಞಾನವು ಬ್ರಹ್ಮಾಂಡದ ಭೌತಿಕ ಸ್ವರೂಪವನ್ನು ಕುರಿತು ಮಾತ್ರ ಅಧ್ಯಯನದಲ್ಲಿ ತೊಡಗಿದೆ. ಭೌತಿಕತೆಯನ್ನು ಬದಲಾಯಿಸುವ ಮೂಲಕ, ನೀವು ಜೀವನದ ನೋಟವನ್ನು ಮಾತ್ರ ಬದಲಾಯಿಸಬಹುದು - ಜೀವನದ ಗುಣಮಟ್ಟವನ್ನು ಯಾವುದೇ ರೀತಿಯಲ್ಲಿ ಬದಲಾಯಿಸಲಾಗುವುದಿಲ್ಲ. ನೀವು ಪ್ರತಿದಿನ ಸೈಕ್ಲಿಂಗ್, ಓಟ, ವ್ಯಾಯಾಮ ಮತ್ತು ಸ್ನಾಯುಗಳ ಬಲಪಡಿಸುವಿಕೆ ಪ್ರಾರಂಭಿಸಿದರೆ, ನಿಮ್ಮ ನೋಟವು ಬದಲಾಗುತ್ತದೆ, ಸಾಮಾಜಿಕವಾಗಿ ಏನಾದರೂ ಬದಲಾಗಬಹುದು, ಆದರೆ ನಿಮ್ಮ ಜೀವನದ ಅನುಭವದಲ್ಲಿ, ಏನೂ ಬದಲಾಗುವುದಿಲ್ಲ. ದೊಡ್ಡ ಸ್ನಾಯುಗಳೊಂದಿಗೆ ಇದ್ದರೂ ಶೋಚನೀಯ ಸ್ಥಿತಿಯಲ್ಲಿಯೇ ಉಳಿದುಕೊಳ್ಳುತ್ತೀರಿ ಅಷ್ಟೆ.

ಆದರೆ ನೀವು ಭೌತಿಕತೆಯನ್ನು ಮೀರಿದ ಆಯಾಮವನ್ನು ಸ್ಪರ್ಶಿಸಿದರೆ, ನೀವು ಇರುವ ರೀತಿ, ಜೀವನವನ್ನು ನೀವು ಗ್ರಹಿಸುವ ರೀತಿ ಎಲ್ಲವೂ ಬದಲಾಗುತ್ತದೆ. ಬ್ರಹ್ಮಾಂಡದೊಂದಿಗಿನ ನಿಮ್ಮ ಸಂಪರ್ಕವು ಬದಲಾಗುತ್ತದೆ. ಹೇಗಾದರೂ, ನೀವು ಜೀವನವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜೀವನ ಇರುವುದು ಅದನ್ನು ಗ್ರಹಿಸಲು ಹಾಗು ಅನುಭವಿಸಲು ಮಾತ್ರ. ಆದ್ದರಿಂದ ನಿಮ್ಮ ಆಯ್ಕೆಯು ಅದನ್ನು ಹೆಚ್ಚು ಗಹನವಾಗಿ ಗ್ರಹಿಸುವುದು ಮತ್ತು ಅನುಭವಿಸುವುದರ ಕುರಿತಾಗಿ ಇರಬೇಕು. ದುರದೃಷ್ಟವಶಾತ್, ಭೌತಿಕತೆಗೆ ಹೆಚ್ಚು ಅಂಟಿಕೊಂಡಿರುವ ಈ ಹುಚ್ಚುತನದಿಂದಾಗಿ ಇಂದಿನ ಜಗತ್ತಿನಲ್ಲಿ ಆ ಆಯಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

 

Yantra 2019

 

Editor's note: The next Yantra Ceremony will be held at Isha Yoga Center on July 31, 2019. You will be initiated into a powerful process and receive the Yantra in Sadhguru's presence. For more details, click here or call 844 844 7708.

This article is based on an excerpt from the December 2014 issue of Forest Flower. Pay what you want and download. (set ‘0’ for free). Print subscriptions are also available.