ಸದ್ಗುರು: ಈ ಅಸ್ತಿತ್ವವು “ಇರುವುದು” ಮತ್ತು “ಇಲ್ಲದಿರುವುದ”ರಿಂದ ಮಾಡಲ್ಪಟ್ಟಿದೆ. "ಇರುವುದು" ರೂಪ, ಆಕಾರ, ಗುಣ, ಸೌಂದರ್ಯವನ್ನು ಹೊಂದಿದೆ. "ಇಲ್ಲದಿರುವುದು" ಈ ಯಾವುದನ್ನೂ ಹೊಂದಿಲ್ಲ, ಮತ್ತದು ಅವೆಲ್ಲವುದರಿಂದ ಮುಕ್ತವಾಗಿದೆ. ಕೆಲವೊಂದು ಕಡೆ, “ಇಲ್ಲದಿರುವುದು” “ಇರುವುದ”ರೊಂದಿಗೆ ಮಿಳಿತವಾಗಿರುತ್ತದೆ. ಮತ್ತು “ಇರುವುದು” ಹೆಚ್ಚು ಹೆಚ್ಚು ಜಾಗೃತವಾದಂತೆಲ್ಲಾ, ಅದು “ಇಲ್ಲದಿರುವುದು” ಆಗಲು ಹಾತೊರೆಯುತ್ತದೆ. "ಇರುವುದಕ್ಕೆ" ಇರುವ ರೂಪ, ಗುಣಗಳು, ಗುಣವಿಶೇಷಗಳು ಮತ್ತು ಸೌಂದರ್ಯವನ್ನು ಒಬ್ಬರು ಆನಂದಿಸುತ್ತಿದ್ದರೂ ಸಹ, ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಗೆ ತಲುಪಬೇಕೆಂಬ ಹಂಬಲ ಅನಿವಾರ್ಯ ಮತ್ತು ಸ್ವಾಭಾವಿಕ. ಆ ಹಂಬಲ ಎಷ್ಟು ಬೇಗ ಉದ್ಭವಿಸುತ್ತದೆ ಎಂಬುದಷ್ಟೇ ಪ್ರಶ್ನೆ. ಕಾಲ ಮತ್ತು ಸ್ಥಳದ ಬಂಧನಗಳೂ ಸಹ "ಇರುವುದರ" ಭ್ರಮೆಯೇ ಆಗಿದೆ. "ಇಲ್ಲದಿರುವುದು" ಕಾಲ ಅಥವಾ ಸ್ಥಳವನ್ನು ಗ್ರಹಿಸುವುದಿಲ್ಲ. ಏಕೆಂದರೆ ಅದು ಅಪರಿಮಿತ ಹಾಗು ಶಾಶ್ವತವಾಗಿದ್ದು, ಕಾಲ ಮತ್ತು ಸ್ಥಳದ ಮಿತಿಗಳಿಂದ ಬಂಧಿಸಲ್ಪಟ್ಟಿಲ್ಲ.

ಅಸ್ತಿತ್ವದ ಮೂಲಭೂತ ಪ್ರಕ್ರಿಯೆಯಿಂದ ವಿಮೋಚನೆ ಪಡೆಯಬೇಕೆಂಬ ಈ ಹಂಬಲವು ಹೆಚ್ಚಾದಾಗ, ಮನಸ್ಸು ಮತ್ತು ಭಾವನೆಗಳ ಪುಕ್ಕಲು ಸ್ವಭಾವವು ಅದನ್ನು ಸ್ವಯಂ ವಿನಾಶವೆಂದು ಮಾತ್ರ ಗ್ರಹಿಸಬಲ್ಲದು. ಯೋಚಿಸುವ ಮನಸ್ಸಿಗೆ, ಆಧ್ಯಾತ್ಮಿಕ ಪ್ರಕ್ರಿಯೆಯು ಮನಃಪೂರ್ವಕ ಆತ್ಮಹತ್ಯೆಯಲ್ಲದೆ ಮತ್ತೇನಲ್ಲ. ಆದರೆ ಇದು ಆತ್ಮಹತ್ಯೆಯಲ್ಲ - ಇದು ಅದಕ್ಕಿಂತ ಹೆಚ್ಚು. ತನ್ನನ್ನು ತಾನು ಕೊನೆಗೊಳಿಸಿಕೊಳ್ಳಲು ಬಯಸುವ ಅತ್ಯಂತ ಕಳಪೆ ಮಾರ್ಗವೆಂದರೆ ಆತ್ಮಹತ್ಯೆ. ನಾನದನ್ನು ಕಳಪೆ ಎಂದು ಏಕೆ ಹೇಳುತ್ತೇನೆಂದರೆ ಅದೊಂದು ವೈಫಲ್ಯವಾಗಿಯೇ ಉಳಿದುಬಿಡುತ್ತದೆ. ಅದು ಕೆಲಸ ಮಾಡುವುದಿಲ್ಲ. ಆದರೆ ಈ ಸಂಸ್ಕೃತಿಯಲ್ಲಿ, ಅದನ್ನು ನಿಜವಾಗಿಯೂ ಕೆಲಸ ಮಾಡುವ ರೀತಿಯಲ್ಲಿ ಮಾಡುವುದರಲ್ಲಿ ಬಹಳಷ್ಟು ಪರಿಣಿತರಿದ್ದಾರೆ - ಇದೊಂದು ಆಧ್ಯಾತ್ಮಿಕ ಪ್ರಕ್ರಿಯೆ.

ಸಮಾಧಿಯ ಅರ್ಥ

ಭಾರತದಲ್ಲಿ, "ಸಮಾಧಿ" ಪದ ಸಾಮಾನ್ಯವಾಗಿ ಮಣ್ಣು ಮಾಡಿರುವುದನ್ನು ಅಥವಾ ಒಂದು ಗೋರಿಶಿಲೆಯನ್ನು ಉಲ್ಲೇಖಿಸುತ್ತದೆ. ಯಾರನ್ನಾದರೂ ಒಂದು ಸ್ಥಳದಲ್ಲಿ ಮಣ್ಣು ಮಾಡಿದಾಗ ಮತ್ತು ಅಲ್ಲಿ ಒಂದು ರೀತಿಯ ಸ್ಮಾರಕವನ್ನು ಸ್ಥಾಪಿಸಿದಾಗ, ಅದನ್ನು ಸಮಾಧಿ ಎಂದು ಕರೆಯಲಾಗುತ್ತದೆ. ಆದರೆ “ಸಮಾಧಿ” ಎನ್ನುವುದು, ಒಬ್ಬ ವ್ಯಕ್ತಿಯು ಸಾಧಿಸಬಹುದಾದ ಅತ್ಯುನ್ನತ ಮನುಷ್ಯ ಪ್ರಜ್ಞೆಯ ಸ್ಥಿತಿಯನ್ನೂ ಸಹ ಸೂಚಿಸುತ್ತದೆ.

ಯಾರಾದರು ಸತ್ತಾಗ ಮತ್ತು ಅವರನ್ನು ಮಣ್ಣು ಮಾಡಿದಾಗ, ಆ ಸ್ಥಳಕ್ಕೆ ಆ ವ್ಯಕ್ತಿಯ ಹೆಸರನ್ನು ಇಡಲಾಗುತ್ತದೆ. ಆದರೆ ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸ್ಥಳದಲ್ಲಿ, ಒಂದು ನಿರ್ದಿಷ್ಟವಾದಂತಹ ಸ್ಥಿತಿಯನ್ನು ತಲುಪಿದಾಗ, ಆ ಸ್ಥಳದ ಹೆಸರನ್ನು ಆ ವ್ಯಕ್ತಿಗೆ ನೀಡಲಾಗುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ಅನೇಕ ಯೋಗಿಗಳು ಒಂದು ನಿರ್ದಿಷ್ಟ ಸ್ಥಳದ ಹೆಸರನ್ನು ಹೊಂದಿರುವುದನ್ನು ನೀವು ನೋಡುತ್ತೀರಿ. ಪಳನಿ ಎಂಬ ಸ್ಥಳದಲ್ಲಿ ಸಮಾಧಿಯ ಸ್ಥಿತಿಯಲ್ಲಿ ಕುಳಿತಿದ್ದರಿಂದ ಶ್ರೀ ಪಳನಿ ಸ್ವಾಮಿಯವರಿಗೆ ಆ ಹೆಸರು ಬಂತು. ಅವರು ತಮನ್ನು ಯಾರಿಗೂ ಪರಿಚಯಿಸಿಕೊಂಡಿರದ ಕಾರಣ, ಜನ ಅವರನ್ನು ಪಳನಿ ಸ್ವಾಮಿ ಎಂದು ಕರೆದರು. ಅವರು ತಮ್ಮ ಹೆಸರೇನೆಂದು ಯಾರಿಗೂ ಹೇಳಲಿಲ್ಲ ಏಕೆಂದರೆ ಅವರಿಗೆ ಯಾವ ಹೆಸರೂ ಇರಲಿಲ್ಲ. ಅವರು ಆ ಸ್ಥಳದಲ್ಲಿ ಸಿದ್ಧಿಯನ್ನು ಪಡೆದ ಕಾರಣ ಜನ ಅವರನ್ನು ಪಳನಿ ಸ್ವಾಮಿ ಎಂದು ಕರೆದರು. ಅಸಂಖ್ಯಾತ ಯೋಗಿಗಳು ಮತ್ತು ಋಷಿಮುನಿಗಳಿಗೆ ಈ ರೀತಿಯ ಹೆಸರುಗಳಿವೆ.

“ಸಮಾಧಿ” ಎಂಬ ಪದವು "ಸಮ" ಮತ್ತು "ಧಿ" ಎಂಬುದರಿಂದ ಆಗಿದೆ. ಸಮ ಎಂದರೆ ಸಮಚಿತ್ತತೆ, ಧಿ ಎಂದರೆ ಬುದ್ಧಿ. ನೀವು ಬುದ್ಧಿಶಕ್ತಿಯ ಸಮಾನ ಸ್ಥಿತಿಗೆ ತಲುಪಿದರೆ ಅದನ್ನು ಸಮಾಧಿ ಎಂದು ಕರೆಯಲಾಗುತ್ತದೆ. ನಿಮ್ಮ ಬುದ್ಧಿಶಕ್ತಿ ಕಾರ್ಯನಿರ್ವಹಿಸುತ್ತಿರುವಾಗ, ನೀವು ಒಂದು ವಿಷಯ ಮತ್ತು ಇನ್ನೊಂದು ವಿಷಯದ ನಡುವೆ ತಾರತಮ್ಯವನ್ನು ತೋರಿಸಲು ಸಾಧ್ಯವಿರುತ್ತದೆ. ಇದು ಒಂದು ವಸ್ತು ಮತ್ತು ಅದು ಇನ್ನೊಂದು ವಸ್ತು ಎಂಬ ತಾರತಮ್ಯವು ನಿಮ್ಮ ಬುದ್ಧಿಶಕ್ತಿ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ಸಾಧ್ಯ.

ನೀವು ನಿಮ್ಮ ಬುದ್ಧಿಶಕ್ತಿಯನ್ನು ಮೀರಿದ ಮರುಕ್ಷಣವೇ, ಆ ತಾರತಮ್ಯಗಳು ಅಸ್ತಿತ್ವದಲ್ಲಿರುವುದಿಲ್ಲ. ಎಲ್ಲವೂ ಸಮಸ್ತವಾಗುತ್ತದೆ - ಸತ್ಯ ಇರುವುದೇ ಹಾಗೆ. ಈ ಸ್ಥಿತಿಯಲ್ಲಿ, ಕಾಲ ಮತ್ತು ಸ್ಥಳವೆಂಬುದಿಲ್ಲ. ಯಾರಾದರೂ ಮೂರು ದಿನಗಳಿಂದ ಸಮಾಧಿಯಲ್ಲಿದ್ದಾರೆ ಎಂದು ನೀವು ಭಾವಿಸಬಹುದು, ಆದರೆ ಅವರಿಗೆ, ಅದು ಕೆಲವೇ ಕ್ಷಣಗಳಾಗಿರುತ್ತವೆ - ಸಮಯವು ಹಾಗೆ ಸುಮ್ಮನೆ ಸರಿದು ಹೋಗುತ್ತದೆ. ಇರುವುದು ಮತ್ತು ಇಲ್ಲದಿರುವುದು ಎಂಬ ದ್ವಂದ್ವತೆಯನ್ನು ಅವರು ಮೀರಿದವರಾಗಿರುತ್ತಾರೆ. ಅವರು ತಮ್ಮ ಗಡಿಗಳನ್ನು ದಾಟಿ, ಇಲ್ಲದಿರುವುದರ ರುಚಿಯನ್ನು ನೋಡಿರುತ್ತಾರೆ - ಅದು ಯಾವುದೇ ರೂಪ, ಆಕಾರ, ಗುಣವಿಶೇಷಗಳು, ಗುಣಗಳು ಅಥವಾ ಮತ್ತಿನ್ಯಾವುದನ್ನೂ ಹೊಂದಿರುವುದಿಲ್ಲ.

ಬುದ್ಧಿಶಕ್ತಿ ಇರುವವರೆಗೂ ಇಡೀ ಅಸ್ತಿತ್ವ, ಸೃಷ್ಟಿಯ ಹಲವು ರೂಪಗಳು ಉಪಸ್ಥಿತವಾಗಿರುತ್ತವೆ. ನಿಮ್ಮ ಬುದ್ಧಿಶಕ್ತಿಯನ್ನು ನೀವು ಲೀನವಾಗಿಸಿದಾಕ್ಷಣ, ಎಲ್ಲವೂ ಒಂದರೊಳಗೆ ಲೀನವಾಗುತ್ತದೆ.