ಮಾತಾ, ಪಿತಾ, ಗುರು, ದೈವ – ಹಾಗೆಂದರೇನು?

ತಾಯಿಯಿಂದ ತಂದೆಯವರೆಗೂ, ಗುರುವಿನಿಂದ ದೈವದವರೆಗೂ, ಈ ಹೇಳಿಕೆಯು ಏನನ್ನು ಸೂಚಿಸುತ್ತದೆ? ಎಂದು ಸದ್ಗುರು ವಿವರಿಸುತ್ತಾರೆ.
Mata, Pita, Guru, Daivam – What Does it Mean?
 

ಪ್ರ: ನಮ್ಮ ಸಂಪ್ರದಾಯವು ಯಾವಾಗಲೂ ನಮಗೆ “ಮಾತಾ, ಪಿತಾ, ಗುರು, ದೈವ” – ಇವುಗಳ ಬಗ್ಗೆ ಹೇಳುತ್ತದೆ. ಇದರ ಅರ್ಥವೇನು?  

ಸದ್ಗುರು: “ಮಾತಾ, ಪಿತಾ, ಗುರು, ದೈವ” ಎಂದಾಗ, ಅವರು ಏನು ಹೇಳುತ್ತಾರೆ ಎಂದರೆ, “ತಂದೆ, ತಾಯಿ, ಗುರುಗಳು ಮತ್ತು ದೇವರು” ಎಂದು. ನೀವು ಇದನ್ನು ಸಂದರ್ಭೋಚಿತವಗಿ ಅರ್ಥ ಮಾಡಿಕೊಳ್ಳಬೇಕು. ನೀವು ಹುಟ್ಟಿದ ಕ್ಷಣ, ನಿಮ್ಮ ಜೀವನದಲ್ಲಿ ಯಾರು ಮುಖ್ಯ? ಖಂಡಿತವಾಗಿಯೂ ದೇವರೂ ಅಲ್ಲ, ಗುರುವೂ ಅಲ್ಲ, ತಂದೆಯೂ ಅಲ್ಲ, ಅದು, ತಾಯಿ. ಆ ಘಳಿಗೆಯಲ್ಲಿ ನಿಮಗೆ ಹಾಲುಣಿಸಿ, ನಿಮ್ಮನ್ನು ಅಪ್ಪಿ ಮುದ್ದಾಡಿ, ಓಲೈಸಲು, ತಾಯಿಯೇ ಬೇಕಾಗುವುದು. ಇದನ್ನು ನಾನೇನು ವಿವರಿಸಬೆಕಾಗಿಲ್ಲ. ಜೀವನವೇ ಹೇಳುತ್ತದೆ, ಹುಟ್ಟಿದ ಮಗುವಿಗೆ ಬೇಕಾಗಿರುವುದು ತಾಯಿ ಎಂದು.

“ಮಾತಾ, ಪಿತಾ, ಗುರು, ದೈವ” ಎಂದಾಗ, ಜೀವನದ ಸಹಜ ಪ್ರಕ್ರಿಯೆಯ ಬಗ್ಗೆ ಹೇಳುತ್ತಾರೆ.

ಒಮ್ಮೆ ಮಗುವು ನಡೆಯಲು ಪ್ರಾರಂಭಿಸಿದರೆ, ಆಗ ಅದಕ್ಕೆ ತಂದೆಯ ಅವಶ್ಯಕತೆ ಮುಖ್ಯವಾಗುತ್ತದೆ, ಏಕೆಂದರೆ, ಹೊರ ಜಗತ್ತಿನ ಪರಿಸ್ಥಿತಿಗಳ ಅರಿವು ತಂದೆಗೆ ಹೆಚ್ಚಾಗಿ ಇರುತ್ತದೆ. ನೀವು ಇಂದಿನ ದಿನಗಳ ಬಗ್ಗೆ ಯೋಚಿಸಬೇಡಿ. ಆದರೆ, ಅಂದಿನ ದಿನಗಳಲ್ಲಿ ಪ್ರಪಂಚಜ್ಞಾನ ಪಡೆಯಲು, ಬದುಕುವ ಕಲೆಯನ್ನು ಅರ್ಥ ಮಾಡಿಕೊಳ್ಳಲು, ಸಮಾಜದಲ್ಲಿ ಹೇಗಿರಬೇಕೆಂಬುದನ್ನು ಕಲಿಯಲು ತಂದೆಯ ಪಾತ್ರ ಬಹಳ ಮುಖ್ಯವಗಿತ್ತು . ಇವುಗಳೆಲ್ಲಾ ಆದಮೇಲೆ, ಇನ್ನೂ ಹೆಚ್ಚಿನದನ್ನು ಕಲಿಯಲು ಗುರುವಿನ ಅಗತ್ಯವಿದೆ. ಈ ಹೆಚ್ಚಿನ ಸಾಧ್ಯತೆಗಳತ್ತ ನೀವು ನೆಡೆದಾಗ ಮತ್ತು ನೀವು ಅದರಲ್ಲಿ ಯಶಸ್ವಿಯಾದಾಗ ದೈವವು ಸಹಜವಾಗಿಯೇ ನಿಮಗೆ ವಾಸ್ತವವೆನಿಸುತ್ತದೆ.  

“ಮಾತಾ, ಪಿತಾ, ಗುರು, ದೈವ” ಎಂದಾಗ, ಜೀವನದ ಸಹಜ ಪ್ರಕ್ರಿಯೆಯ ಬಗ್ಗೆ ಹೇಳುತ್ತಾರೆ. ಜನರು ತಮ್ಮ ಅರ್ಧ ಬೆಂದ ಸಂಸ್ಕೃತ ಪ್ರಾವೀಣ್ಯದಿಂದ ನಾನಾ ರೀತಿಯ ಅರ್ಥಗಳನ್ನು ಕಂಡುಕೊಳ್ಳುತ್ತಾರೆ. ತಾಯಿ ಹೇಳುತ್ತಾಳೆ, “ತಾಯಿಯೇ ಮೊದಲು ಎಂದು ಹೇಳುತ್ತಾರೆ, ಆದ್ದರಿಂದ ನಾನೇ ನಿನ್ನ ಮೊದಲ ಆದ್ಯತೆಯಾಗಿರಬೇಕು” ಎಂದು. ತಂದೆ ಹೇಳುತ್ತಾನೆ, “ ನಾನು ಎರಡನೆಯ ಆದ್ಯತೆ, ಆದ್ದರಿಂದ ನೀನು ಮುಂದುವರೆದು, ಗುರು, ದೈವ ಎಂದೆಲ್ಲಾ ಹೋಗಬೇಕಾಗಿಲ್ಲ” ಎಂದು. ಜನರು ಹೀಗೆಲ್ಲಾ ವ್ಯಾಖ್ಯಾನಿಸುವುದು ದುರದೃಷ್ಟಕರ, ಏಕೆಂದರೆ ನಿಮ್ಮ ತಾಯಿಯು ತಾಯಿಯಷ್ಟೇ ಅಲ್ಲ, ತಂದೆಯು ತಂದೆಯಷ್ಟೇ ಅಲ್ಲ, ನಿಮ್ಮ ಅಸ್ತಿತ್ವ ಎಷ್ಟು ಮುಖ್ಯವೋ ಅವರದೂ ಅಷ್ಟೇ ಮುಖ್ಯ. ಅವರೂ ನಿಮ್ಮೊಂದಿಗೆ ಬೆಳೆಯಬೇಕು. ಅವರು ನಿಮಗಿಂತ ಹೆಚ್ಚು ಬೆಳೆಯಬೇಕಿತ್ತು. ಒಂದು ವೇಳೆ ತಂದೆ ತಾಯಿಯರು ತಮ್ಮ ಬೆಳಣಿಗೆಯನ್ನು ಮರೆತಿದ್ದು, ಮಕ್ಕಳು ಅದಕ್ಕೆ ಅವಕಾಶ ಕೊಟ್ಟರೆ, ಆಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ತಂದೆ ತಾಯಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು.  

ಮನೆಗೆ ಮರಳುವ ಪಯಣ

ನಿಮ್ಮದೊಂದು ನೀರಸ ಜೀವನವಾದರೆ, ನಿಮ್ಮ ಬದುಕಿನ ಪಯಣ, ಬರೀ ಗರ್ಭದಿಂದ ಸಮಾಧಿಯವರೆಗಷ್ಟೇ ಆಗುತ್ತದೆ. ಅದೇ ನೀವು ಪ್ರಜ್ಞಾಪೂರ್ವಕ ಅನ್ವೇಷಣೆಯ ಜೀವನ ನಡೆಸಿದರೆ, ಅದು ಹುಟ್ಟಿನಿಂದ ದೈವದವರೆಗೂ ಸಾಗುತ್ತದೆ ಮತ್ತು ಮರಳಿ ಮನೆಗೆ ಬರುವ ಪ್ರಯಾಣವಾಗುತ್ತದೆ. ಈ ಹೇಳಿಕೆಯು ನಿಮ್ಮ ಪ್ರಜ್ಞಾಪೂರ್ವಕ ಪ್ರಯಾಣದ ಅನುಕ್ರಮವನ್ನು ಹೇಳುತ್ತದೆ –ಮೊದಲು ತಾಯಿಯ ಪಾತ್ರ, ನಂತರ ತಂದೆಯ ಪಾತ್ರ, ನಂತರ ಗುರುವಿನ ಪಾತ್ರ ಮತ್ತು ಅನಂತರ ದೈವದ ಪಾತ್ರ.

ಅದೇ ನೀವು ಪ್ರಜ್ಞಾಪೂರ್ವಕ ಅನ್ವೇಷಣೆಯ ಜೀವನ ನಡೆಸಿದರೆ, ಅದು ಹುಟ್ಟಿನಿಂದ ದೈವದವರೆಗೂ ಸಾಗುತ್ತದೆ ಮತ್ತು ಮರಳಿ ಮನೆಗೆ ಬರುವ ಪ್ರಯಾಣವಾಗುತ್ತದೆ.

ತಾಯಿಯು ನಿಮ್ಮನ್ನು ಪಾಲಿಸಿ ಪೋಷಿಸುತ್ತಾಳೆ, ತಂದೆಯು ನಿಮಗೆ ಮಾರ್ಗದರ್ಶನ ನೀಡುತ್ತಾನೆ; ಗುರುವು ನಿಮ್ಮನ್ನು ಚೆನ್ನಾಗಿ ನಾದಿ, ಪಕ್ವವಾಗಿಸುತ್ತಾನೆ. ಪಕ್ವವಾಗದೆ, ನೀವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಿಮ್ಮನ್ನು ಹಾಗೆ ಚೆನ್ನಾಗಿ ನಾದದೇ ಹೋದರೆ, ನೀವು ಯಾರಾದರೂ ತಿನ್ನಲು ಬಯಸುವ ಒಳ್ಳೆಯ ಬ್ರೆಡ್ ಅಂತೂ ಆಗಲು ಸಾಧ್ಯವಿಲ್ಲ. ದೈವವು ಸ್ವೀಕರಿಸುವಂತಹ ಬ್ರೆಡ್ ನೀವಾಗಬೇಕಾದರೆ, ಒಳ್ಳೆಯ ಗುರು ಅತ್ಯವಶ್ಯಕ.

ಆದರೆ, ನಿಮ್ಮ ಅತೀತ ಪಯಣಕ್ಕೆ, ಗುರುವು ಬರೀ ಒಂದು ಸಾಧನ, ಒಂದು ಪಥ, ಒಂದು ದ್ವಾರ ಅಷ್ಟೇ. ಒಂದು ದ್ವಾರ ನಿಮಗಾಗಿ ಅತೀತದತ್ತ ತೆರೆದುಕೊಂಡು, ನೀವು ನಿಮ್ಮ ಸೀಮಿತತೆಯನ್ನು ದಾಟಿ ನೋಡುವಂತಾದರೆ, ಆ ದ್ವಾರವು ನಿಮಗೆ ಬಹಳ ಮುಖ್ಯವಗುತ್ತದೆ, ಏಕೆಂದರೆ, ಆ ದ್ವಾರದ ಚೌಕಟ್ಟಿನಿಂದಲೇ ನೀವು ಆಚೆಗೆ ನೋಡಲು ಸಾಧ್ಯವಾಗುವುದು. ಈ ದ್ವಾರವು ನಿಮ್ಮ ಸೀಮಿತ ಪರಿಧಿಯಿಂದ ಆಚೆಗೆ ನೋಡಲು ಅವಕಾಶ ಕಲ್ಪಿಸುವುದರಿಂದಲೇ ಈ ದ್ವಾರವು ಮುಖ್ಯವಾಗುತ್ತದೆ. ನೀವು ಒಂದು ಕೋಣೆಯಲ್ಲಿ ಬಂಧಿತರಾಗಿದ್ದರೆ, ಆ ಕೋಣೆಯಾಚೆ ನೋಡಲು ಆ ಬಾಗಿಲಷ್ಟೇ ನಿಮಗಿರುವ ಅವಕಾಶ. 

ಸಂಪಾದಕರ ಟಿಪ್ಪಣಿ: ಎಲ್ಲಾ ರೀತಿಯ ಸೀಮಿತತೆಯನ್ನು ದಾಟಿ ಹೋಗಲು ಸದ್ಗುರು ಒಂದು ಒಳ್ಳೆಯ ಅವಕಾಶವನ್ನು ಕೊಡುತ್ತಿದ್ದಾರೆ. ಅವರು ಸಾಧಕರನ್ನು ಮುಕ್ತಿಯತ್ತ ಒಯ್ಯುವ ಅತೀಂದ್ರಿಯ ಪ್ರಯಾಣದಲ್ಲಿ ನಡೆಸುತ್ತಾರೆ. “A Guru Always Takes You For a Ride” ಎಂಬ ಇ-ಪುಸ್ತಕದಲ್ಲಿ ಸದ್ಗುರು, ಗುರು-ಶಿಷ್ಯರ ಬಾಂಧವ್ಯದ ಅಪರೂಪದ ಒಳನೋಟಗಳನ್ನು ನೀಡಿದ್ದಾರೆ. ನಿಮ್ಮ ಬೆಲೆಯನ್ನು ನಮೂದಿಸಿ ಮತ್ತು ಡೌನ್ ಲೋಡ್ ಮಾಡಿಕೊಳ್ಳಿ. .