ಸದ್ಗುರು: ಉಪಕರಣಗಳಲ್ಲಿ ಪವಾಡಸದೃಶವಾದ ವಸ್ತುವೆಂದರೆ ಕಂಪ್ಯೂಟರ್, ಕಾರು ಅಥವಾ ಆಕಾಶನೌಕೆ ಇವ್ಯಾವುದೂ ಅಲ್ಲ, ಮನುಷ್ಯನ ಮನಸ್ಸು ಎನ್ನುತ್ತಾರೆ ಸದ್ಗುರು. ನೀವು ಅದನ್ನು ಪ್ರಜ್ಞಾಪೂರ್ವಕವಾಗಿ ಉಪಯೋಗಿಸಲು ಸಾಧ್ಯವಾದರೆ ಮಾತ್ರ ಅದು ಅತ್ಯಂತ ಪವಾಡಸದೃಶವಾದ ಸಂಗತಿ.

ನಿಮ್ಮ ಮನಸ್ಸು ಐದು ವಿಭಿನ್ನ ಸ್ಥಿತಿಗಳಲ್ಲಿರಬಲ್ಲದು. ಅದು ಮಂದವಾಗಿರಬಹುದು. ಅಂದರೆ ಅದು ಸಚೇತನಗೊಂಡಿರುವುದೇ ಇಲ್ಲ, ಅದು ಪ್ರಾಥಮಿಕ ಸ್ಥಿತಿಯಲ್ಲಿರುತ್ತದೆ. ಸರಳ ಮನಸ್ಥಿತಿಯ ಮತ್ತು ಅಷ್ಟೇನೂ ಚುರುಕು ಬುದ್ಧಿಯವರಲ್ಲದ ಜನರಿಗೆ ಏನೂ ಸಮಸ್ಯೆಯಿರುವುದಿಲ್ಲ. ಅಂತಹವರು ಚೆನ್ನಾಗಿ ತಿನ್ನುತ್ತಾರೆ, ಚೆನ್ನಾಗಿ ನಿದ್ರಿಸುತ್ತಾರೆ. ಯೋಚನೆ ಮಾಡಬಲ್ಲವರಿಗೇ ನಿದ್ರೆಯ ಸಮಸ್ಯೆ ಬರುವುದು. ಸರಳ ಮನಸ್ಸಿನ ಜನರು ಬುದ್ಧಿವಂತರು ಎಂದು ಕರೆಯಲ್ಪಡುವ ಜನರಿಗಿಂತ ಶಾರೀರಿಕ ಚಟುವಟಿಕೆಗಳನ್ನು ಎಷ್ಟೋ ಪಾಲು ಚೆನ್ನಾಗಿ ಮಾಡಬಲ್ಲರು ಏಕೆಂದರೆ ಮನಸ್ಸಿನಲ್ಲಿ ತೊಂದರೆ ಮತ್ತು ಗಲಭೆಯನ್ನು ಸೃಷ್ಟಿಸಲು ಸ್ವಲ್ಪ ಬುದ್ಧಿ ಬೇಕಾಗುತ್ತದೆ. ಆದರೆ ಮಂದ ಮನಸ್ಸು ಮನುಷ್ಯನಾಗುವುದರ ಸಾಧ್ಯತೆಗಿಂತ ಪಶುಸ್ವಭಾವಕ್ಕೆ ಹತ್ತಿರವಾಗಿರುತ್ತದೆ.

ನೀವು ಮಂದ ಮನಸ್ಸಿಗೆ ಸ್ವಲ್ಪ ಶಕ್ತಿಯನ್ನು ತುಂಬಿದರೆ, ಅದು ಚುರುಕಾಗುತ್ತದೆ, ಆದರೆ ಅದು ಚದುರಿ ಹೋಗಬಹುದು. ನೀವು ಮನಸ್ಸನ್ನು ಇನ್ನೂ ಸ್ವಲ್ಪ ಹೆಚ್ಚು ಶಕ್ತಿಯುತಗೊಳಿಸಿದರೆ, ಮನಸ್ಸು ಅಷ್ಟೇನೂ ಚದುರಿಹೋಗದ ಸ್ಥಿತಿಗೆ ಬರುತ್ತದೆ, ಆದರೆ ಅದು ತೂಗಾಡುತ್ತಿರುತ್ತದೆ – ಒಂದು ದಿನ ಹೀಗೆ, ಮತ್ತೊಂದು ದಿನ ಹಾಗೆ ಇರುತ್ತದೆ. ಆದರೆ ಇದು ಯಾವಾಗಲೂ ಚದುರಿದ ಸ್ಥಿತಿಯಲ್ಲಿರುವುದಕ್ಕಿಂತ ಉತ್ತಮ ಸುಧಾರಣೆಯಾಗಿದೆ. ನೀವು ಅದನ್ನು ಇನ್ನಷ್ಟು ಶಕ್ತಿಯುತಗೊಳಿಸಿದರೆ, ಅದು ನಿಧಾನವಾಗಿ ಏಕಾಗ್ರವಾಗುತ್ತದೆ – ಅದು ಅತ್ಯಂತ ಒಳ್ಳೆಯದು. ಆದರೆ ಮನಸ್ಸು ಒಂದು ಪ್ರಜ್ಞಾಪೂರ್ವಕವಾದ ಪ್ರಕ್ರಿಯೆಯಾಗಬೇಕಾದದ್ದು ಅತ್ಯಂತ ಮುಖ್ಯ.

 

ಒಬ್ಬ ವ್ಯಕ್ತಿಗೆ ಯಶಸ್ಸು ಬಹಳ ಸುಲಭವಾಗಿ ಮತ್ತು ಸಹಜವಾಗಿ ಬರುತ್ತದೆ, ಹಾಗೂ ಇನ್ನೊಬ್ಬನಿಗೆ ಅದು ಒಂದು ಹೋರಾಟವಾಗಿರುತ್ತದೆ, ಏಕೆಂದರೆ, ಒಬ್ಬನು ತನಗೆ ಬೇಕಾದಂತೆ ಯೋಚಿಸುವ ಸಾಮರ್ಥ್ಯ ಹೊಂದಿರುತ್ತಾನೆ ಮತ್ತು ಇನ್ನೊಬ್ಬನು ತನ್ನ ವಿರುದ್ಧವಾಗಿ ಯೋಚಿಸುತ್ತಿರುತ್ತಾನೆ.

ಮನಸ್ಸಿನ ಮರ್ಕಟ ಸ್ವಭಾವ

ಯೋಗ ಪರಂಪರೆಯಲ್ಲಿ ಒಂದು ಸುಂದರ ಕಥೆಯಿದೆ. ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದ ಮತ್ತು ಹಾಗೇ ನಡೆಯುತ್ತಾ ಆಕಸ್ಮಿಕವಾಗಿ ಸ್ವರ್ಗಕ್ಕೆ ಹೋಗಿಬಿಟ್ಟ. ದೀರ್ಘಕಾಲದ ನಡಿಗೆಯಿಂದ ಅವನಿಗೆ ಸ್ವಲ್ಪ ಆಯಾಸವಾಯಿತು, ವಿಶ್ರಾಂತಿ ಬೇಕೆನಿಸಿತು. ಅವನು ಒಂದು ಚೆಂದದ ಮರವನ್ನು ನೋಡಿದ, ಅದರ ಕೆಳಗೆ ಸುಂದರವಾದ ಹುಲ್ಲಿನ ಹಾಸು ಇತ್ತು. ಹಾಗಾಗಿ ಅವನು ಹುಲ್ಲಿನ ಮೇಲೆ ಹೋಗಿ ಮಲಗಿಕೊಂಡ. ಸ್ವಲ್ಪ ಸಮಯದ ನಂತರ ಅವನು ಒಳ್ಳೆಯ ನಿದ್ಧೆಯನ್ನು ಮಾಡಿ ಎದ್ದ. ಆಗ ಅವನಿಗೆ ತಾನು ಹಸಿದಿದ್ದೇನೆ, ತಿನ್ನಲು ಏನಾದರೂ ಇದ್ದಿದ್ದರೆ ಚೆನ್ನಾಗಿತ್ತು ಎನಿಸಿತು. ಅವನು ತಾನು ಇಷ್ಟಪಡುವ ಆಹಾರ ಪದಾರ್ಥಗಳೆಲ್ಲವನ್ನೂ ನೆನಪಿಸಿಕೊಂಡ, ಅವೆಲ್ಲವೂ ಅವನೆದರು ಪ್ರತ್ಯಕ್ಷವಾಯಿತು. ಭರ್ಜರಿ ಭೋಜನವಾದ ನಂತರ ಅವನಿಗೆ ಕುಡಿಯಲು ಏನಾದರೂ ಬೇಕೆನಿಸಿತು. ಅವನಿಗೆ ಇಷ್ಟವಾದ ಪಾನೀಯಗಳೆಲ್ಲವನ್ನೂ ನೆನಪಿಸಿಕೊಂಡ, ಅವೆಲ್ಲವೂ ಅವನೆದುರು ಪ್ರತ್ಯಕ್ಷವಾದುವು.

ಯೋಗದಲ್ಲಿ, ಮನುಷ್ಯನ ಮನಸ್ಸನ್ನು ಅದರ ಸ್ವಭಾವದ ಕಾರಣದಿಂದ ಮರ್ಕಟ ಅಥವಾ ಮಂಗ ಎನ್ನುತ್ತಾರೆ. ಇಂಗ್ಲೀಷಿನ ‘ಮಂಕಿ; ಎಂಬ ಪದವೂ ಅನುಕರಣೆ ಎಂಬರ್ಥವನ್ನು ಕೊಡುತ್ತದೆ. ನೀವು ಇನ್ನೊಬ್ಬರನ್ನು ಅನುಕರಿಸುತ್ತಿದ್ದರೆ, ಅದನ್ನು ಮಂಕೀಯಿಂಗ್ ಎನ್ನುತ್ತಾರೆ – ಅದು ನಿಮ್ಮ ಮನಸ್ಸಿನ ಪೂರ್ಣಾವಧಿ ಕೆಲಸವಾಗಿದೆ. ಹಾಗಾಗಿ, ಅಸ್ಥಿರವಾದ ಮನಸ್ಸನ್ನು ಮಂಗ ಎನ್ನುತ್ತಾರೆ.

ಮನುಷ್ಯನೊಳಗಿನ ಮಂಗ ಚುರುಕಾದಾಗ ಸ್ವರ್ಗಕ್ಕೆ ಹೋದ ಈ ಮನುಷ್ಯ ಯೋಚಿಸಿದ “ಇಲ್ಲೇನಾಗುತ್ತಿದೆ? ನಾನು ಆಹಾರ ಕೇಳಿದೆ, ಆಹಾರ ಬಂತು. ಪಾನೀಯವನ್ನು ಕೇಳಿದ, ಪಾನೀಯ ಬಂತು. ಇಲ್ಲೇನೋ ದೆವ್ವಗಳಿದ್ದಂತಿದೆ” ಎಂದುಕೊಂಡು ಸುತ್ತಲೂ ನೋಡಿದ. ಅಲ್ಲಿ ಭೂತಗಳು ಪ್ರತ್ಯಕ್ಷವಾದುವು. ಅವುಗಳನ್ನು ನೋಡಿದ ಕೂಡಲೇ ಅವನಿಗೆ ಭಯವಾಯಿತು “ಓಹ್! ಇಲ್ಲಿ ದೆವ್ವಗಳಿವೆ! ಅವು ನನ್ನನ್ನು ಹಿಂಸಿಸಬಹುದು” ಎಂದುಕೊಂಡ. ಮತ್ತು ದೆವ್ವಗಳು ಅವನನ್ನು ಹಿಂಸಿಸಲು ಪ್ರಾರಂಭಿಸಿದವು. ಅವನು ನೋವಿನಿಂದ ಅರಚತೊಡಗಿದ. ನಂತರ ಅವನು “ಈ ದೆವ್ವಗಳು ನನ್ನನ್ನು ಹಿಂಸಿಸುತ್ತಿವೆ, ಅವು ನನ್ನನ್ನು ಸಾಯಿಸುತ್ತವೆ” ಎಂದುಕೊಂಡ. ಅವನು ಸತ್ತುಹೋದ.

ಇಲ್ಲಿ ಸಮಸ್ಯೆಯೇನೆಂದರೆ, ಅವನು ಒಂದು ವರ ನೀಡುವ ಮರ ಅಥವಾ ಕಲ್ಪವೃಕ್ಷದ ಕೆಳಗೆ ಕುಳಿತಿದ್ದ. ಅವನು ಅಂದುಕೊಂಡಿದ್ದೆಲ್ಲಾ ಆಗುತ್ತಿತ್ತು. ಒಂದು ಸುಸ್ಥಿರವಾದ ಮಾನವ ಮನಸ್ಸು “ಕಲ್ಪವೃಕ್ಷ” ಎಂದು ಕರೆಯಲ್ಪಡುತ್ತದೆ. ಈ ಮನಸ್ಸಿನಲ್ಲಿ, ನೀವು ಏನನ್ನು ಕೇಳಿದರೂ ಅದು ಮೂರ್ತರೂಪಕ್ಕೆ ಬರುತ್ತದೆ. ಜೀವನದಲ್ಲಿ ನೀವು ಸದಾಕಾಲ ಒಂದು ಕಲ್ಪವೃಕ್ಷದ ಕೆಳಗೆ ಕುಳಿತಿರುತ್ತೀರಿ, ಹಾಗಾಗಿ ನೀವು ನಿಮ್ಮ ಮನಸ್ಸನ್ನು ಕಲ್ಪವೃಕ್ಷವಾಗುವಂತೆ ರೂಪಿಸಿಕೊಳ್ಳಬೇಕು, ಹುಚ್ಚಿನ ಮೂಲವಾಗಿಯಲ್ಲ.

ಸಂಪಾದಕರ ಟಿಪ್ಪಣಿ:  “ಚಿತ್ ಶಕ್ತಿ” ಧ್ಯಾನವು, ಸದ್ಗುರುಗಳು ನೀಡಿದ ವಿಶೇಷವಾದ ಕಾಣಿಕೆಯಾಗಿದ್ದು, ನಾವು ನಮ್ಮ ದೀರ್ಘಕಾಲದ ಬಯಕೆಗಳನ್ನು ಮೂರ್ತರೂಪಕ್ಕೆ ತರಲು ನಮಗೆ ಬೆಂಬಲ ನೀಡಿ ನಮ್ಮ ವಿಧಿಯ ನಾಯಕರು ನಾವೇ ಆಗುವಂತೆ ಸಬಲಗೊಳಿಸುತ್ತದೆ. ಚಿತ್ ಶಕ್ತಿ ಧ್ಯಾನದಲ್ಲಿ ಆರೋಗ್ಯ, ಪ್ರೀತಿ, ಶಾಂತಿ ಮತ್ತು ಯಶಸ್ಸನ್ನು ಸಾಧಿಸುವ ನಾಲ್ಕು ರೀತಿಯ ಧ್ಯಾನಕ್ರಮಗಳಿವೆ. ಈ ಧ್ಯಾನಕ್ರಮಗಳು ಸದ್ಗುರು ಆ್ಯಪ್ ನಲ್ಲಿ ಉಚಿತವಾಗಿ ಲಭ್ಯವಿವೆ. ಸದ್ಗುರು ಆ್ಯಪ್ ಅನ್ನು ಈಗ ಡೌನ್ಲೋಡ್ ಮಾಡಿಕೊಳ್ಳಿರಿ.