ಪ್ರಶ್ನೆ: ಅಗರಬತ್ತಿ ಅಥವಾ ಧೂಪವನ್ನು ಸುಡುವುದರ ಮಹತ್ವವೇನು ಮತ್ತು ಈಗಿನ ಕಾಲದಲ್ಲಿ ಇವನ್ನು ಬಳಸುವುದರಲ್ಲಿ ಮಹತ್ವವಿದೆಯೇ?

ಸದ್ಗುರು: ಕೆಲವು ಪದಾರ್ಥಗಳು ಉರಿದಾಗ, ಮೂಗಿಗೆ ಆಹ್ಲಾದಕರವಾದ ಸುವಾಸನೆ ಇರುತ್ತದೆ. ಆದರೆ ಧೂಪವನ್ನು ಉರಿಸುವುದು ವಾತಾವರಣದ ಬಗ್ಗೆ, ನಿಮ್ಮ ಬಗ್ಗೆ ಅಲ್ಲ. ಒಂದು ಅಂಶವೆಂದರೆ ಅದು ಸುವಾಸನೆ ಬೀರುತ್ತದೆ - ವಿಶೇಷವಾಗಿ ಒಳಾಂಗಣದಲ್ಲಿ - ಕೋಣೆಯ ಆಕಾರ ಮತ್ತು ಗಾತ್ರದಿಂದಾಗಿ ವಿವಿಧ ಸ್ಥಳಗಳಲ್ಲಿ ಸಂಭವಿಸುವ ವಿವಿಧ ರೀತಿಯ ಶಕ್ತಿ ರಚನೆಗಳು ಸಹ ಇವೆ. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ, ನೀವು ವಾಸಿಸುವ ಕೋಣೆಯ ಆಕಾರ ಮತ್ತು ಗಾತ್ರಕ್ಕೆ ಅಂತಹ ಗಮನ ನೀಡಲಾಗುತ್ತದೆ. ಇದು ಹೆಚ್ಚು ಗಾಳಿಯಾಡುವಂತಿದ್ದರೆ, ಎರಡು ಗೋಡೆಗಳು ತೆರೆದಿದ್ದರೆ, ಅದು ಬಹುತೇಕ ಹೊರಾಂಗಣದಂತೆ ಭಾಸವಾಗುತ್ತದೆ. ಅದು ಬೇರೆ. ಹೆಚ್ಚಿನ ಮನೆಗಳನ್ನು ಈ ರೀತಿ ಕಟ್ಟಲಾಗಿಲ್ಲ. ನಿಮ್ಮ ನೆರೆಹೊರೆಯವರು, ಅಥವಾ ಹವಾನಿಯಂತ್ರಣ ಅಥವಾ ಹವಾಮಾನ ಪರಿಗಣನೆಗಳು ಇರುವುದರಿಂದ ನೀವು ಹೆಚ್ಚು ಕಿಟಕಿಗಳನ್ನು ತೆರೆಯಲು ಸಾಧ್ಯವಿಲ್ಲ. ವಿಭಿನ್ನ ಆಕಾರಗಳು ಮತ್ತು ಗಾತ್ರಗಳು ವಿಭಿನ್ನ ರೀತಿಯ ಶಕ್ತಿಯ ರಚನೆಗಳನ್ನು ಸೃಷ್ಟಿಸುತ್ತವೆ. ಅದು ತುಂಬಾ ಬಲಶಾಲಿಯಾದರೆ, ಈ ಶಕ್ತಿಯ ರಚನೆಗಳು ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ನಿರ್ಧರಿಸಬಹುದು, ಅದು ನಿಮಗೆ ಅನುಕೂಲಕರವಾಗಬಹುದು ಅಥವಾ ನೀವು ಯಾರಾಗಬಯಸತ್ತೀರೋ ಆ ದಾರಿಗೆ ಅಡ್ಡಿಯಾಗಲೂಬಹುದು.

ಸಾಂಬ್ರಾಣಿ ಮತ್ತು ಅದರ ಪ್ರಯೋಜನಗಳು

ಸಾಂಬ್ರಾಣಿ ಎಂದು ಕರೆಯಲ್ಪಡುವ ಒಂದು ವಸ್ತು ಅತ್ಯಂತ ಶಕ್ತಿಯುತ ವಸ್ತುವಾಗಿದೆ. ಜನರು ಕೆಲವು ಶುಭ ಸಮಾರಂಭಗಳನ್ನು ಮಾಡಲು ಬಯಸಿದರೆ, ಅವರು ಸಾಂಬ್ರಾಣಿಯನ್ನು ಉರಿಸುತ್ತಾರೆ. ಜನರು ಅನಾರೋಗ್ಯಕ್ಕೆ ಒಳಗಾದಾಗ, ಅವರು ಮಾಡುವ ಮೊದಲ ಕೆಲಸವೆಂದರೆ ಸಾಂಬ್ರಾಣಿಯನ್ನು ಉರಿಸುವುದು. ಇದು ಕೆಲವು ವಿಧದ ಬ್ಯಾಕ್ಟೀರಿಯಾಗಳನ್ನು ಗಾಳಿಯಲ್ಲಿ ಮತ್ತು ಮೇಲ್ಮೈಗಳಲ್ಲಿ ಕೊಲ್ಲುತ್ತದೆ ಎಂದು ಈಗ ಕಂಡುಬಂದಿದೆ.

ವಿಶೇಷವಾಗಿ ಕುಟುಂಬದಲ್ಲಿ ಸಾವು ಸಂಭವಿಸಿದರೆ, ಸಾಂಬ್ರಾಣಿಯನ್ನು ಹನ್ನೆರಡು ದಿನಗಳವರೆಗೆ ಸುಡಲಾಗುತ್ತದೆ, ಏಕೆಂದರೆ ಅವರು ಆ ಗಾಳಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಬಯಸುತ್ತಾರೆ.

ಇದು ಒಂದು ರೀತಿಯ ರಾಳ ಅಥವ ಮರದ ಅಂಟು, ಅದು ನಿರ್ದಿಷ್ಟ ಮರದಿಂದ ತೊಟ್ಟಿಕ್ಕುತ್ತದೆ. ಸಾಂಬ್ರಾಣಿಯ ಹುಡುಕಾಟದಲ್ಲಿ ಜನರು ದೊಡ್ಡ ಮರಗಳನ್ನು ಕೆತ್ತಿರುವುದನ್ನು ನೀವು ಕಾಡಿನಲ್ಲಿ ನೋಡಬಹುದು. ಮರಗಳು ಹೊರಗೆ ಗಟ್ಟಿಯಾಗಿ ಕಾಣುತ್ತವೆ, ಆದರೆ ಈ ರಾಳ ತೊಟ್ಟಿಕ್ಕುವ ಜಾಗದಲ್ಲಿ ಒಂದು ಪೊಳ್ಳಾದ ಜಾಗವಿರುತ್ತದೆ. ಈ ರಾಳಗಳು ಹೊರಬರಲು ನೈಸರ್ಗಿಕ ಕಾರಣ ನನಗೆ ಗೊತ್ತಿಲ್ಲ, ಆದರೆ ಜನರು ಇದನ್ನು ಸಂಗ್ರಹಿಸುತ್ತಾರೆ. ಇದು ಅಮೂಲ್ಯವಾದ ಚಿಕ್ಕ ವಸ್ತುವಾಗಿದೆ ಮತ್ತು ಗಣನೀಯ ಪ್ರಮಾಣದ ರಾಳವನ್ನು ಪಡೆಯಲು ನೀವು ಮೈಲಿಗಟ್ಟಲೆ ನಡೆಯಬೇಕು, ಏಕೆಂದರೆ ಈ ಮರಗಳು ಹಳೆಯದಾಗಿರಬೇಕು. ಅಂದರೆ ಅವು ಕನಿಷ್ಠ ಮೂವತ್ತರಿಂದ ಐವತ್ತು ವರ್ಷಕ್ಕಿಂತ ಮೇಲ್ಪಟ್ಟಿರಬೇಕು, ಇಲ್ಲದಿದ್ದರೆ ನಿಮಗೆ ರಾಳ ಸಿಗುವುದಿಲ್ಲ.

ಸಾಂಬ್ರಾಣಿ ವಾತಾವರಣದ ಮೇಲೆ ಪ್ರಬಲ ಪ್ರಭಾವ ಬೀರುತ್ತದೆ. ಸುವಾಸನೆಯಿಂದಲ್ಲ ಆದರೆ ಗಾಳಿಯನ್ನು ಶುದ್ಧೀಕರಿಸುವ ಮತ್ತು ವಾತಾವರಣವನ್ನು ಜೀವಂತವಾಗಿರುವಂತೆ ಮಾಡುವ ವಸ್ತುವಾಗಿದೆ. ನೀವು ಮನೆಯಲ್ಲಿ ಸೌಮ್ಯವಾದ ಸಾಂಬ್ರಾಣಿಯನ್ನು ಉರಿಸಿದರೆ, ನೀವು ಒಳಾಂಗಣದಲ್ಲಿದ್ದರೂ, ಅದು ಹೊರಾಂಗಣ, ಅನಿಯಂತ್ರಿತ ಸ್ಥಳದಂತೆ ಭಾಸವಾಗುತ್ತದೆ. 

ಸದ್ಗುರುಗಳ ಮೊದಲ "ಆಧ್ಯಾತ್ಮಿಕ" ಪ್ರದರ್ಶನ!

ಈ ಸೂಕ್ಷ್ಮ ಅಂಶಗಳ ಬಗ್ಗೆ ಮಾತನಾಡಲು ನನಗೆ ಸ್ವಲ್ಪ ಆತಂಕವಿದೆ ಏಕೆಂದರೆ ಈಗಾಗಲೇ ಸಾಕಷ್ಟು ಹೊಸ-ಹಳೆಯ ಸಂಗತಿಗಳು ಸುತ್ತುತ್ತಿವೆ. ನಾನು ಮೊದಲ ಬಾರಿಗೆ ಅಮೇರಿಕಾದ ನ್ಯಾಶ್‌ವಿಲ್‌ಗೆ ಹೋದಾಗ, ಯಾರೋ ಒಬ್ಬರು ನನಗೆ ಹೇಳಿದರು, "ಸದ್ಗುರು, ಒಂದು ಆಧ್ಯಾತ್ಮಿಕ ಪ್ರದರ್ಶನ ನಡೆಯುತ್ತಿದೆ".

ನಾನು ಹೇಳಿದೆ, "ಏನು, ಆಧ್ಯಾತ್ಮಿಕ ಪ್ರದರ್ಶನವೇ? ಭಾರತದಲ್ಲಿ ಕೂಡ ಇದು ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ.

"ಇಲ್ಲ, ಇಲ್ಲಿ ನಾವು ಪ್ರತಿವರ್ಷ ಅದನ್ನು ನಡೆಸುತ್ತೇವೆ."

ನಾನು ಹೇಳಿದೆ, "ನಾನು ನೋಡಲು ಬಯಸುತ್ತೇನೆ."

ಅವರು ಹೇಳಿದರು, "ಸರಿ, ಹೋಗೋಣ." ನಂತರ ಅವರು ಮಧ್ಯಾಹ್ನ ನನ್ನನ್ನು ಕರೆದೊಯ್ಯಲು ಬಂದರು ಮತ್ತು ಅವರು ಹೇಳಿದರು, "ಸದ್ಗುರು, ಆಧ್ಯಾತ್ಮಿಕ ಪ್ರದರ್ಶನದಲ್ಲಿ ನೀವು ಮಾತನಾಡಲು ಸಾಧ್ಯವಾಗುವಂತೆ ನಮಗೆ ಒಂದು ಅವಕಾಶ ಸಿಕ್ಕಿದೆ."

ನಾನು ಹೇಳಿದೆ, "ಅದ್ಭುತ." ನಂತರ ಅಲ್ಲಿಗೆ ಹೋದೆವು. ಅಲ್ಲಿ ಒಂದು ದೊಡ್ಡ ಟೆಂಟ್ ಇತ್ತು ಮತ್ತು ನಾವು ಅಲ್ಲಿಗೆ ಹೋದಾಗ, ಒಂದು ದೇಶೀ ಸಂಗೀತದ ತಂಡವೊಂದು ಗಲಾಟೆ ಮಾಡುತ್ತಿತ್ತು. ಈ ತಂಡ ಖಂಡಿತವಾಗಿಯೂ ಯಾವುದೇ ಪಾವತಿಯನ್ನು ಗಳಿಸದ ತಂಡವಾಗಿರಬಹುದು. ಬಹುಶಃ ಉತ್ತಮವಾದ ಗುಂಪುಗಳು ಸಂಜೆ ಬರಬಹುದು. ಮಧ್ಯಾಹ್ನದ ವೇಳೆಗೆ ವೇದಿಕೆ ಖಾಲಿಯಾಗಿತ್ತು ಮತ್ತು ಯಾರಾದರೂ ಧ್ವನಿ ವ್ಯವಸ್ಥೆಯನ್ನು ಬಳಸಬಹುದಾಗಿತ್ತು, ಆದ್ದರಿಂದ ಅವರು ಬಡಿದಾಡುತ್ತಿದ್ದರು. ನಾನು ಹೇಳಿದೆ, "ಸಂಗೀತವು ಕೇವಲ ಸಾಂಸ್ಕೃತಿಕ ವಿಷಯವಾಗಿದೆ. ನಾನು ಆಧ್ಯಾತ್ಮಿಕ ಪ್ರದರ್ಶನದ ಮೇಲೆ ಗಮನ ಹರಿಸುತ್ತೇನೆ. ”

ನಾನು ಒಳಗೆ ಹೋದೆ. ಯಾರೋ ಒಬ್ಬರು ‘ಆಧ್ಯಾತ್ಮಿಕ’ ಸ್ನಾನದ ಸಾಬೂನನ್ನು ಮಾರಾಟ ಮಾಡುತ್ತಿದ್ದರು, ಬೇರೆಯವರು ಆಧ್ಯಾತ್ಮಿಕ ಕಲ್ಲು ಅಥವಾ ಬೆಣಚುಕಲ್ಲನ್ನು ಎಲ್ಲಿಂದಲೋ ತಂದು ಮಾರಾಟ ಮಾಡುತ್ತಿದ್ದರು. ಅವರು ಎಲ್ಲಾ ರೀತಿಯ ವಿಲಕ್ಷಣ ಧೂಪವನ್ನು ಮಾರಾಟ ಮಾಡುತ್ತಿದ್ದರು. ನಂತರ ನಾನು ಯೋಚಿಸಿದೆ, "ಓಹ್, ಇದೊಂದು ನಮ್ಮ ದೇಶದ ಸಂತೆಗಳಂತೆ." ಅಲ್ಲಿ ಎಲ್ಲಾ ರೀತಿಯ ವಿಲಕ್ಷಣ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ನಿಮ್ಮನ್ನು ಅದೃಶ್ಯ ಮಾಡುವ ಒಂದು ತಿರುಚಿದ ಬೇರು ಇರುತ್ತದೆ. ನೀವು ಈ ಬೇರನ್ನು ಹೆಣ್ಣು ತಿಮಿಂಗಿಲದ ಎಡ ದವಡೆಯ ಮೂಳೆಯ ಜೊತೆ ಪುಡಿಮಾಡಬೇಕು, ಮತ್ತು ಅದು ಬದುಕಿರುವ ತಿಮಿಂಗಿಲದ್ದಾಗಿರಬೇಕು! - ಅಂದರೆ ನೀವು ನಿಜವಾಗಿಯೂ ಅಲ್ಲಿ ಈಜಿಕೊಂಡು, ದವಡೆಯ ತುಂಡನ್ನು ಕತ್ತರಿಸಿ ಹೊರ ತರಬೇಕು. ನೀವು ಇದನ್ನು ಒಟ್ಟಿಗೆ ಪುಡಿಮಾಡಿ, ಕೆಲವು ಮಂತ್ರವನ್ನು ಪಠಿಸುತ್ತಾ, ಲೇಹ್ಯವನ್ನು ತಿಂದರೆ, ನೀವು ಅದೃಶ್ಯರಾಗುತ್ತೀರಿ ... ವಾಸ್ತವವಾಗಿ, ನೀವು ತಿಮಿಂಗಿಲದ ಬಾಯಿಗೆ ಹೋದರೆ, ನೀವು ಖಂಡಿತ ಅದೃಶ್ಯರಾಗುತ್ತೀರಿ!

ಆದ್ದರಿಂದ, ಧೂಪಗಳು ಒಂದು ನಿರ್ದಿಷ್ಟ ಪರಿಣಾಮವನ್ನು ಬೀರುತ್ತದೆ, ಆದರೆ ಅದನ್ನು ಅತಿಯಾಗಿ ಬಳಸಬೇಡಿ. ಇದು ನಿಮ್ಮ ಆಧ್ಯಾತ್ಮಿಕ ಸ್ವಭಾವವನ್ನು ನಿರ್ಧರಿಸುತ್ತದೆ ಎಂದು ಯೋಚಿಸಬೇಡಿ. ಇದು ವಾತಾವರಣವನ್ನು ಸ್ವಲ್ಪ ಬದಲಿಸಬಹುದು ಆದರೆ ಅದನ್ನು ಅತಿಯಾಗಿ ಪ್ರಮಾಣೀಕರಿಸಬಾರದು.

ರಾಸಾಯನಿಕ ಧೂಪದ ಅಪಾಯಗಳು

ಧೂಪಗಳನ್ನು ಸಂವೇದನಾಶೀಲ ರೀತಿಯಲ್ಲಿ ಬಳಸಬೇಕು. ಆದರೆ ಈ ದಿನಗಳಲ್ಲಿ ಧೂಪಗಳನ್ನು ರಾಸಾಯನಿಕ ವಸ್ತುಗಳಿಂದ ಮಾಡಲಾಗುತ್ತಿದೆ. ಸಾಕಷ್ಟು ರಾಸಾಯನಿಕಗಳು ಬೀದಿಯಲ್ಲಿ, ಉದ್ಯಮದಲ್ಲಿ ಮತ್ತು ನೀವು ಕೆಲಸ ಮಾಡುತ್ತಿರುವ ಕಾರ್ಖಾನೆಯ ನೆಲದ ಮೇಲೆ ತೇಲುತ್ತಿವೆ. ಕನಿಷ್ಠ ನಿಮ್ಮ ಮನೆಯೊಳಗೆ ರಾಸಾಯನಿಕವಾಗಿ ಮಾಡಿದ ಧೂಪವನ್ನು ಸುಡಬೇಡಿ, ಏಕೆಂದರೆ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಮಾರು ಎಂಭತ್ತು ಪ್ರತಿಶತ  ಧೂಪಗಳು ರಾಸಾಯನಿಕವಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಅದನ್ನು ಸುಡುವ ಮೊದಲು ಅದನ್ನು ಪರೀಕ್ಷಿಸಬೇಕು ಏಕೆಂದರೆ ನೀವು ಮುಚ್ಚಿದ ಆವರಣಗಳಲ್ಲಿ ರಾಸಾಯನಿಕಗಳನ್ನು ಸುಟ್ಟರೆ, ಅದರ ಋಣಾತ್ಮಕ ಪರಿಣಾಮವು ತುಂಬಾ ದೊಡ್ಡದಾಗಿದೆ. ಇದನ್ನು ನೈಸರ್ಗಿಕ ರಾಳ ಅಥವಾ ಕೆಲವು ಇತರ ಸಾವಯವ ತೈಲಗಳು ಮತ್ತು ವಸ್ತುಗಳಿಂದ ಮಾಡಬೇಕು. ಇದು ಸೌಮ್ಯವಾದ ವ್ಯತ್ಯಾಸವನ್ನು ಉಂಟುಮಾಡುತ್ತದೆ. ನಿಮಗೆ ಅಂತಹ ವ್ಯತ್ಯಾಸ ಬೇಕಾದರೆ, ಅದು ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಸಂಪಾದಕರ ಟಿಪ್ಪಣಿ: ಶುದ್ಧ ಗಿಡಮೂಲಿಕೆ ಮತ್ತು ಸಾವಯವ ವಸ್ತುಗಳಿಂದ ಮಾಡಿದ ವಿವಿಧ ಸುಗಂಧಗಳ ಧೂಪ ಮತ್ತು ಕೋನ್‌ಗಳು ಈಶಾ ಲೈಫ್‌ನಲ್ಲಿ ಲಭ್ಯವಿವೆ.