ಮಾನವಕುಲಕ್ಕೆ ಯೋಗವನ್ನು ಪರಿಚಯಿಸಿದ ಮೊದಲ ಯೋಗಿ – ಆದಿಯೋಗಿ – ಶಿವನನ್ನು, ಸದ್ಗುರುಗಳು ನೀಡಿರುವ ಸ್ಪಷ್ಟ ವಿವರಣೆಯ ಮೂಲಕ, ನಾವಿಲ್ಲಿ ಪರಿಚಯಿಸುತ್ತೇವೆ.

 

ಸದ್ಗುರು: ಯೋಗ ಸಂಸ್ಕೃತಿಯಲ್ಲಿ, ಶಿವವನ್ನು ದೇವರು ಎಂದು ಗುರುತಿಸಲಾಗುವುದಿಲ್ಲ, ಆದರೆ ಯೋಗಕ್ಕೆ ಜನ್ಮ ನೀಡಿದ ಮೊದಲ ಯೋಗಿ - ಆದಿಯೋಗಿಯಾಗಿ ಪರಿಗಣಿಸಲಾಗುತ್ತದೆ. ಯೋಗದ ಬೀಜವನ್ನು ಮಾನವರ ಮನಸ್ಸಿನಲ್ಲಿ ಮೊಟ್ಟಮೊದಲಿಗೆ ಬಿತ್ತಿದವನೇ ಶಿವ. ಯೋಗ ಸಿದ್ಧಾಂತದ ಪ್ರಕಾರ, ಹದಿನೈದು ಸಾವಿರ ವರ್ಷಗಳಿಗೂ ಹಿಂದೆ, ಶಿವನು ಸಂಪೂರ್ಣವಾದ ಜ್ಞಾನೋದಯವನ್ನು ಹೊಂದಿದನು ಮತ್ತು ಹಿಮಾಲಯ ಪರ್ವತಗಳ ಮೇಲೆ ಅತ್ಯಂತ ತೀವ್ರವಾದ ಹಾಗೂ ಭಾವಪರವಶತೆಯಿಂದ ಕೂಡಿದ ನೃತ್ಯದಲ್ಲಿ ಮೈಮರೆತನು. ಅವನ ಭಾವಪರವಶತೆ ಅವನಿಗೆ ಸ್ವಲ್ಪ ಚಲನೆಯ ಅವಕಾಶವನ್ನು ನೀಡಿದಾಗಲೆಲ್ಲಾ, ಅವನು ತೀವ್ರವಾದ ನೃತ್ಯವನ್ನು ಮಾಡಿದನು. ಅದು ಚಲನೆಯನ್ನು ಮೀರಿ ಹೋದಾಗ, ಅವನು ಸಂಪೂರ್ಣವಾಗಿ ಅಚಲವಾದನು.

ಹಿಂದೆಂದೂ ಯಾರಿಗೂ ತಿಳಿದಿಲ್ಲದಂತಹ, ಯಾರ ಅನುಭವಕ್ಕೂ ಬಾರದಂತಹ ಏನೋ ಒಂದನ್ನು ಅವನು ಅನುಭವಿಸುತ್ತಿದ್ದಾನೆ ಎನ್ನುವುದನ್ನು ಜನ ಕಂಡುಕೊಂಡರು. ಆದರೆ ಅದೇನಿರಬಹುದು ಎಂದು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಜನರು ಅವನ ಬಳಿ ಬಂದರು, ಕಾದರು ಮತ್ತು ಹೊರಟುಹೋದರು, ಏಕೆಂದರೆ ಜನರ ಉಪಸ್ಥಿತಿ ಅವನ ಗಮನಕ್ಕೆ ಬರಲೇ ಇಲ್ಲ. ಒಂದೋ ಅವನು ಅವನ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ಅರಿಯದಂತಹ ತೀವ್ರವಾದ ನೃತ್ಯದಲ್ಲಿ ಮಗ್ನನಾಗಿರುತ್ತಿದ್ದನು ಅಥವಾ ಸಂಪೂರ್ಣವಾದ ನಿಶ್ಚಲ ಸ್ಥಿತಿಯಲ್ಲಿರುತ್ತಿದ್ದನು. ಹಾಗಾಗಿ, ಬಂದಷ್ಟೇ ಬೇಗ ಜನರೆಲ್ಲಾ ಅಲ್ಲಿಂದ ಹೊರಟುಹೋದರು...

ಏಳು ಜನರನ್ನು ಹೊರತುಪಡಿಸಿ.

ಆ ಏಳು ಜನ ಮಾತ್ರ, ಇವನಲ್ಲಿ ಏನು ಅಡಗಿದೆಯೋ ಅದನ್ನು ಕಲಿಯಲೇಬೇಕೆಂದು ಪಟ್ಟುಹಿಡಿದು ಅಲ್ಲೇ ಕಾಯುತ್ತಾ ಕುಳಿತರು. ಆದರೆ ಶಿವ ಅವರನ್ನು ನಿರ್ಲಕ್ಷಿಸಿದ. "ದಯವಿಟ್ಟು, ನೀನು ತಿಳಿದಿರುವದನ್ನು ನಾವೂ ತಿಳಿದುಕೊಳ್ಳಲು ಬಯಸುತ್ತೇವೆ" ಎಂದು ಅವರು ಅವನನ್ನು ಬೇಡಿಕೊಂಡು ಕೇಳಿಕೊಂಡರು. ಶಿವ ಅವರ ಬೇಡಿಕೆಯನ್ನು ತಳ್ಳಿಹಾಕುತ್ತ, "ಅಯ್ಯೋ ಮೂರ್ಖರೆ. ನೀವಿರುವ ಸ್ಥಿತಿಯಲ್ಲಿ, ಲಕ್ಷಾಂತರ ವರ್ಷಗಳಾದರೂ ಸಹ ನೀವೇನನ್ನೂ ತಿಳಿಯಲಾಗುವುದಿಲ್ಲ. ಅದಕ್ಕಾಗಿ ಅಗಾಧ ಪ್ರಮಾಣದ ಸಿದ್ಧತೆಯನ್ನು ಮಾಡಿಕೊಳ್ಳುವ ಅಗತ್ಯವಿರುತ್ತದೆ. ಇದು ಮನರಂಜನೆಯ ವಿಷಯವಲ್ಲ." ಎಂದನು.

ಆದ್ದರಿಂದ ಅವರು ತಯಾರಿಯನ್ನು ಪ್ರಾರಂಭಿಸಿದರು. ದಿನಗಳು ಕಳೆದಂತೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ, ವರ್ಷಗಳು ಉರುಳಿದಂತೆ, ಅವರ ತಯಾರಿ ಸಾಗುತ್ತಲೇ ಇತ್ತು. ಶಿವ ಮಾತ್ರ ಅವರನ್ನು ನಿರ್ಲಕ್ಷಿಸಿದನು. ಎಂಭತ್ತನಾಲ್ಕು ವರ್ಷಗಳ ಸಾಧನೆಯ ನಂತರ, ಒಂದು ಹುಣ್ಣಿಮೆಯ ದಿನ, ಸೂರ್ಯನ ಚಲನೆ ಬೇಸಿಗೆಯ ಅಯನ ಸಂಕ್ರಾಂತಿಯಿಂದ ಚಳಿಗಾಲದ ಅಯನ ಸಂಕ್ರಾಂತಿಗೆ ಬದಲಾದಾಗ (ನಮ್ಮ ಸಂಪ್ರದಾಯದಲ್ಲಿ ಇದನ್ನು ದಕ್ಷಿಣಾಯನ ಎಂದು ಕರೆಯಲಾಗುತ್ತದೆ) ಆದಿಯೋಗಿಯು ಈ ಏಳು ಜನರತ್ತ ನೋಡಿದ. ಅವರೆಲ್ಲರೂ ಜ್ಞಾನವನ್ನು ಪಡೆಯಲು ಸಿದ್ಧವಾಗಿ ಹೊಳೆಯುತ್ತಿರುವ ಧಮನಿಗಳಂತಾಗಿರುವುದನ್ನು ಅವನು ಅಂದು ಕಂಡನು. ಜ್ಞಾನವನ್ನು ಸ್ವೀಕರಿಸಲು ಅವರು ಸಂಪೂರ್ಣವಾಗಿ ಮಾಗಿದ್ದರು. ಶಿವನಿಗೆ ಇನ್ನು ಮುಂದೆ ಅವರನ್ನು ನಿರ್ಲಕ್ಷಿಸಲಾಗಲಿಲ್ಲ. ಅವರು ಅವನ ಗಮನವನ್ನು ಸೆಳೆದುಬಿಟ್ಟಿದ್ದರು.
 

ಕಾಂತಿ ಸರೋವರದಲ್ಲಿ ಸದ್ಗುರುಗಳು

ಮುಂದಿನ ಕೆಲವು ದಿನಗಳವರೆಗೆ ಶಿವ ಅವರನ್ನು ನಿಕಟವಾಗಿ ಗಮನಿಸಿದನು ಮತ್ತು ಮುಂದಿನ ಹುಣ್ಣಿಮೆ ಬಂದಾಗ, ಅವನು ಒಬ್ಬ ಗುರುವಾಗಲು ನಿರ್ಧರಿಸಿದನು. ಆದಿಯೋಗಿ ಸ್ವತಃ ಆದಿಗುರುವಾಗಿ ರೂಪಾಂತರಗೊಂಡನು; ಆ ದಿನದಂದು ಮೊದಲ ಗುರು ಜನಿಸಿದನು. ಇಂದು ಅದನ್ನು ಗುರು ಪೌರ್ಣಮಿ ಎಂದು ಕರೆಯಲಾಗುತ್ತದೆ. ಕೇದಾರನಾಥದಿಂದ ಕೆಲವು ಕಿಲೋಮೀಟರುಗಳಷ್ಟು ಮೇಲಿರುವ ಕಾಂತಿ ಸರೋವರದ ತೀರದಲ್ಲಿ, ಮಾನವ ಜನಾಂಗವನ್ನು ಅನುಗ್ರಹಿಸಲು ಅವನು ದಕ್ಷಿಣಕ್ಕೆ ತಿರುಗಿದನು, ಮತ್ತು ಈ ಏಳು ಜನರಿಗೆ ಯೋಗ ವಿಜ್ಞಾನದ ಪ್ರಸಾರಣೆ ಆರಂಭವಾಯಿತು. ಯೋಗ ವಿಜ್ಞಾನವೆಂದರೆ ನಿಮ್ಮ ದೇಹವನ್ನು ಹೇಗೆ ಬಗ್ಗಿಸುವುದು ಎಂಬುದನ್ನು ಕಲಿಯಲು ಹೋಗುವ ಯೋಗ ತರಗತಿಯ ಬಗ್ಗೆ ಅಲ್ಲ – ಆಗ ತಾನೆ ಹುಟ್ಟಿದ ಮಗುವಿಗೂ ಸಹ ತನ್ನ ದೇಹವನ್ನು ತಿರುಚುವ ಬಗ್ಗೆ ತಿಳಿದೇ ಇರುತ್ತದೆ. ಅಥವಾ ಯೋಗವೆಂದರೆ ನಿಮ್ಮ ಉಸಿರನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬ ಬಗ್ಗೆಯಲ್ಲ – ಇನ್ನೂ ಹುಟ್ಟಿರದ ಶಿಶುವಿಗೂ ಸಹ ಅದು ತಿಳಿದಿರುತ್ತದೆ. ಯೋಗವೆನ್ನುವುದು ಇಡೀ ಮಾನವ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳುವ ಬಗೆಗಿನ ಒಂದು ವಿಜ್ಞಾನವಾಗಿದೆ.

ಅನೇಕ ವರ್ಷಗಳ ನಂತರ, ಶಿವ ತನ್ನ ಜ್ಞಾನದ ಸಂವಹನವನ್ನು ಪೂರ್ಣಗೊಳಿಸಿದಾಗ, ಏಳು ಸಂಪೂರ್ಣ ಜ್ಞಾನೋದಯವಾದ ಜೀವಿಗಳ ಸೃಷ್ಟಿಯಾಯಿತು – ಈ ಏಳು ಜನರೇ ಇಂದು ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯರಾಗಿರುವ, ಸಪ್ತರ್ಷಿಗಳೆಂದು ಕರೆಯಲ್ಪಡುವ ಏಳು ಋಷಿಗಳಾಗಿದ್ದಾರೆ. ಈ ಏಳು ಜನರಲ್ಲಿ, ಪ್ರತಿಯೊಬ್ಬರಿಗೂ ಶಿವನು ಯೋಗದ ವಿಭಿನ್ನ ಅಂಶಗಳನ್ನು ತಿಳಿಸಿಕೊಟ್ಟನು ಮತ್ತು ಈ ಅಂಶಗಳು, ಯೋಗದ ಏಳು ಮೂಲ ಪ್ರಕಾರಗಳಾಗಿ ಮಾರ್ಪಟ್ಟವು. ಇಂದಿಗೂ ಸಹ ಯೋಗವು ಈ ಏಳು ವಿಶಿಷ್ಟ ಸ್ವರೂಪಗಳನ್ನು ಉಳಿಸಿಕೊಂಡಿದೆ.

ಸಪ್ತಋಷಿಗಳಿಗೆ ಯೋಗ ವಿಜ್ಞಾನದ ಸಂವಹನೆ

ಮಾನವ ತನ್ನ ಸದ್ಯದ ಮಿತಿ ಹಾಗೂ ನಿರ್ಬಂಧಗಳನ್ನು ಮೀರಿ ವಿಕಾಸಗೊಳ್ಳಬಹುದಾದ ಈ ಆಯಾಮವನ್ನು ಎಲ್ಲೆಡೆ ಹರಡುವ ಸಲುವಾಗಿ ಸಪ್ತರ್ಷಿಗಳನ್ನು ವಿಭಿನ್ನ ದಿಕ್ಕುಗಳಲ್ಲಿ, ವಿಶ್ವದ ವಿಭಿನ್ನ ಭಾಗಗಳಿಗೆ ಕಳುಹಿಸಲಾಯಿತು. ಮನುಷ್ಯರು ಸ್ವತಃ ಸೃಷ್ಟಿಕರ್ತರಾಗಿ ಹೇಗೆ ಅಸ್ತಿತ್ವದಲ್ಲಿರಬಹುದು ಎಂಬ ಅರಿವು ಮತ್ತು ತಂತ್ರಜ್ಞಾನವನ್ನು ಜಗತ್ತಿನೆಲ್ಲೆಡೆ ತೆಗೆದುಕೊಂಡು ಹೋಗುವ ಮೂಲಕ ಅವರು ಶಿವನ ಅಂಗಗಳಾದರು. ಸಮಯವು ಅನೇಕ ವಿಷಯಗಳನ್ನು ಹಾಳುಗೆಡವಿದೆ, ಆದರೆ ಅವರು ನಡೆದಾಡಿದ ಪ್ರದೇಶಗಳ ಸಂಸ್ಕೃತಿಗಳನ್ನು ಎಚ್ಚರಿಕೆಯಿಂದ ನೋಡಿದಾಗ, ಅವರು ಮಾಡಿದ ಕೆಲಸಗಳ ಸಣ್ಣ ಎಳೆಗಳು ಇನ್ನೂ ಜೀವಂತವಾಗಿರುವುದನ್ನು ನಾವು ಕಾಣಬಹುದು. ಅವರು ಮಾಡಿದ ಕೆಲಸಗಳು ಈಗ ವಿವಿಧ ಬಣ್ಣಗಳು ಮತ್ತು ರೂಪಗಳನ್ನು ತಾಳಿವೆ, ಮತ್ತು ಲಕ್ಷಾಂತರ ವಿಭಿನ್ನ ರೀತಿಗಳಲ್ಲಿ ಅವುಗಳ ಸ್ವರೂಪವನ್ನು ಬದಲಿಸಿಕೊಂಡಿವೆ, ಆದರೆ ಅವುಗಳ ಎಳೆಗಳನ್ನು ನಾವಿನ್ನೂ ಸಹ ಕಾಣಬಹುದಾಗಿದೆ.

ಮಾನವನು ಪ್ರಕೃತಿ ನಿರ್ಧಾರಿತ ಮಿತಿಗಳ ಹಿಡಿತದಲ್ಲಿರುವ ಅಗತ್ಯವಿಲ್ಲವೆಂಬ ಸಾಧ್ಯತೆಯನ್ನು ಆದಿಯೋಗಿಯು ಹೊರತಂದನು. ಭೌತಿಕತೆಯಲ್ಲಿದ್ದೂ ಅದರ ಭಾಗವಾಗದಿರಲು ಒಂದು ಮಾರ್ಗವಿದೆ. ದೇಹದಲ್ಲಿದ್ದುಕೊಂಡೇ ದೇಹವಾಗದಿರಲು ಒಂದು ದಾರಿಯಿದೆ. ಮನಸ್ಸಿನ ದುಃಖಗಳನ್ನರಿಯದೇ, ಅದನ್ನು ಅಧಿಕತಮ ಸಂಭವನೀಯ ರೀತಿಯಲ್ಲಿ ಬಳಸಲು ಒಂದು ಮಾರ್ಗವಿದೆ. ಅಸ್ತಿತ್ವದ ಯಾವುದೇ ಆಯಾಮದಲ್ಲಿ ನೀವಿದ್ದರೂ, ಅದನ್ನು ಮೀರಿಹೋಗಬಹುದು - ಜೀವಿಸಲು ಬೇರೊಂದು ಮಾರ್ಗವಿದೆ. ಅವನಂದ, "ನಿಮ್ಮ ಮೇಲೆ ನೀವು ಅಗತ್ಯವಾದ ಕಾರ್ಯಗೈದರೆ, ನಿಮ್ಮ ಈಗಿನ ಮಿತಿಗಳಾಚೆ ನೀವು ವಿಕಸಿತರಾಗಬಹುದು." ಮತ್ತು ಹೇಗೆ ವಿಕಸಿತರಾಗಬೇಕೆನ್ನುವುದಕ್ಕೆ ಅವನು ವಿಧಾನಗಳನ್ನು ನೀಡಿದನು. ಆದಿಯೋಗಿಯ ಮಹತ್ವ ಇದೇ.



ಸಂಪಾದಕರ ಟಿಪ್ಪಣಿ: ಸದ್ಗುರುಗಳ ಇಬುಕ್  Shiva - Ultimate Outlaw ವನ್ನು ಡೌನ್ಲೋಡ್ ಮಾಡಿಕೊಳ್ಳಿ. ಈ ಪುಸ್ತಕವು ಸೊಗಸಾದ ಗ್ರಾಫಿಕ್ಸ್ ಹಾಗೂ ಸದ್ಗುರುಗಳ ಜಾಣ್ನುಡಿಗಳಿಂದ ತುಂಬಿದ್ದು, ಶಿವನ ಬಗ್ಗೆ ನಮಗೆ ವಾಸ್ತವವಾಗಿ ಗೊತ್ತಿಲ್ಲದ ಅಂಶಗಳನ್ನು ಬಯಲು ಮಾಡುತ್ತದೆ. ಶಿವನನ್ನು ಯೋಗದ ಮೂಲ ಹಾಗೂ ಮೊದಲ ಯೋಗಿ – ಆದಿಯೋಗಿಯಾಗಿ ಮತ್ತು ಇನ್ನೂ ಹಲವಾರು, ಹಿಂದೆಂದು ಕಾಣದ ರೀತಿಗಳಲ್ಲಿ ಸಂಧಿಸಿ!