ಸತ್ಯಕ್ಕೆ ವಿಪರ್ಯಾಸವಾದ ಗ್ರಹಿಕೆಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದೊಳಕ್ಕೆ ಪ್ರವೇಶಿಸಿ, ಆಧ್ಯಾತ್ಮಿಕ ಪಥದಲ್ಲಿ ಸಾಗುವ ಮಹಿಳೆಯರ ವಿರುದ್ಧ ಪಕ್ಷಪಾತವನ್ನು ಹೇಗೆ ಸೃಷ್ಟಿಸಿವೆ ಎಂಬುದರ ಬಗ್ಗೆ ಸದ್ಗುರುಗಳು ಇಲ್ಲಿ ಮಾತನಾಡುತ್ತಾರೆ.

Sadhguru:
ಭಾರತೀಯ ಆಧ್ಯಾತ್ಮಿಕತೆಯು ಹಿಂದಿನಿಂದಲೂ ಸಹ ಪ್ರಜ್ಞೆಯ ಉತ್ತುಂಗವನ್ನು ತಲುಪಿದಂತಹ ಸ್ತ್ರೀ ಮತ್ತು ಪುರುಷರ ಶ್ರೀಮಂತ ಸಮೂಹದಿಂದ ತುಂಬಿದೆ. ಆಂತರ್ಯದ ಸ್ವಭಾವಕ್ಕೆ ಬಂದಾಗ ಒಬ್ಬ ಮಹಿಳೆ ಒಬ್ಬ ಪುರುಷನಷ್ಟೇ ಸಮರ್ಥಳು. ನೀವು ಸ್ತ್ರೀ ಅಥವಾ ಪುರುಷ ಎಂದು ಕರೆಯುವ ಶರೀರವು ಹೊರಗಿನ ಸಿಪ್ಪೆ ಮಾತ್ರವೇ ಆಗಿದೆ. ಇಬ್ಬರ ಒಳಗಿರುವುದು ಒಂದೇ. ಒಬ್ಬರ ಆಧ್ಯಾತ್ಮಿಕ ಸಾಮರ್ಥ್ಯಗಳು ಏನೆಂಬುದನ್ನು ಸಿಪ್ಪೆ ನಿರ್ಧರಿಸುವುದಿಲ್ಲ.

ಹಿಂದಿನ ಕಾಲದಲ್ಲಿ, ಮಹಿಳೆಯರೂ ಜನಿವಾರವನ್ನು ದಾರವನ್ನು ಧರಿಸುತ್ತಿದ್ದರು, ಏಕೆಂದರೆ ಅದಿಲ್ಲದೆ, ಅವರು ಧರ್ಮಗ್ರಂಥಗಳನ್ನು ಓದಲು ಸಾಧ್ಯವಿರಲಿಲ್ಲ. ಒಬ್ಬ ಪುರುಷನಂತೆ, ಅವಳೂ ಸಹ ಹತ್ತಿಪ್ಪತ್ತು ವರ್ಷಗಳ ಕಾಲ ವೈವಾಹಿಕ ಜೀವನದಲ್ಲಿದ್ದು, ನಂತರ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಬೇಕೆಂಬ ಹಂಬಲ ಉದ್ಭವಿಸಿದಾಗ, ಕುಟುಂಬವನ್ನು ತ್ಯಜಿಸಬಹುದಾಗಿತ್ತು. ಆದರೆ, ಹಲವಾರು ಅನಾಗರಿಕ ಗುಂಪುಗಳು ಭಾರತವನ್ನು ಆಕ್ರಮಿಸಲು ಶುರುಮಾಡಿದಾಗ, ಮಹಿಳೆಯರು ನಿಧಾನವಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡರು. ನಿಯಮಗಳು ಬದಲಾಗಲಾರಂಭಿಸಿದವು. ಬಹುಶಃ ಇದು ಒಂದು ನಿರ್ದಿಷ್ಟ ಅವಧಿಗೆ ಅಗತ್ಯವಿದ್ದಿರಬಹುದು, ಏಕೆಂದರೆ ಬಾಹ್ಯ ಪರಿಸ್ಥಿತಿಗಳ ಕಾರಣದಿಂದಾಗಿ, ಮಹಿಳೆಯರ ಸುರಕ್ಷತೆಗೋಸ್ಕರ ಕೆಲವು ನಿರ್ಬಂಧಗಳನ್ನು ವಿಧಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಅದು ಕಾನೂನಾಗಿ ಹೋಯಿತು. ಇನ್ನು ಮುಂದೆ ಜನಿವಾರವನ್ನು ಅವಳು ಧರಿಸುವಂತಿಲ್ಲ ಎಂದವರು ಘೋಷಿಸಿದಾಗ ಮಹಿಳೆಗೆ ಮೊದಲ ನಿರಾಸೆಯಾಯಿತು. ಪತಿಗೆ ಸೇವೆ ಸಲ್ಲಿಸುವ ಮೂಲಕ ಮಾತ್ರವೇ ಅವಳು ತನ್ನ ಮುಕ್ತಿ ಅಥವಾ ಪರಮಗುರಿಯನ್ನು ಸಾಧಿಸಲು ಸಾಧ್ಯ ಎಂದೂ ಸಹ ಹೇಳಲಾಯಿತು. ಒಬ್ಬ ಪುರುಷ ಮಾತ್ರ ಐಹಿಕ ಜೀವನವನ್ನು ಪರಿತ್ಯಜಿಸಬಹುದು ಎಂಬ ನಿರ್ಬಂಧವನ್ನು ವಿಧಿಸಲಾಯಿತು.

ದುರದೃಷ್ಟವಶಾತ್, ಇದು ಇಂದಿಗೂ ಮುಂದುವರಿಯುತ್ತಿದೆ. ಒಬ್ಬ ಹೆಣ್ಣು ತನ್ನ ತಂದೆ ಅಥವಾ ಗಂಡನ ಸೇವೆಗಾಗಿ ಮಾತ್ರವೇ ಜನಿಸಿದ್ದಾಳೆ ಎಂದು ಹೇಳಲಾಗುತ್ತದೆ. ಜನರು ಅಸ್ತಿತ್ವದ ಏಕತೆ ಬಗ್ಗೆ ಮಾತನಾಡುತ್ತಾರೆ ಮತ್ತು "ಎಲ್ಲವೂ ಒಂದೇ, ಆದರೆ ಮಹಿಳೆಯರು ಮಾತ್ರ ಸ್ವಲ್ಪ ಕಡಿಮೆ" ಎಂದು ಹೇಳುತ್ತಾರೆ. ತನ್ನ ಅಸ್ತಿತ್ವ ಅವಳ ಮೇಲೆ ಅವಲಂಬಿತವಾಗಿದೆ ಎಂಬ ಸತ್ಯ ತಿಳಿದಿದ್ದರೂ ಸಹ, ಒಬ್ಬ ಪುರುಷನಿಗೆ ಸ್ತ್ರಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಅವನು ಅಸ್ತಿತ್ವದಲ್ಲಿನ ಏಕತೆಯನ್ನು ಸ್ವೀಕರಿಸುವುದು ಅಸಾಧ್ಯವಾದ ಮಾತು. ಮೇಲು ಅಥವಾ ಕೀಳು ಎನ್ನುವ ಪ್ರಶ್ನೆ ಪೂರ್ವಾಗ್ರಹ ಪೀಡಿತ ಮನಸ್ಸಿನಲ್ಲಿ ಮಾತ್ರ ಉದ್ಭವಿಸುತ್ತದೆ. ಇದು ಕೇವಲ ಎರಡು ಗುಣಗಳ ಪ್ರಶ್ನೆಯಷ್ಟೆ. ಮಹಿಳೆಯು ಕೀಳೆಂದಾದರೆ, ಒಬ್ಬ ಮಹಿಳೆಯಿಂದ ಜನಿಸಿದ ಪುರುಷ ಮೇಲಾಗಲು ಹೇಗೆ ಸಾಧ್ಯ? ಆ ಸಾಧ್ಯತೆಯೇ ಉದ್ಭವಿಸುವುದಿಲ್ಲ. ಈ ಮೇಲು ಕೀಳೆಂಬ ಸಮಸ್ಯೆ ಸಾರ್ವತ್ರಿಕವಾಗಿದೆ. ಇದು ಕೇವಲ ಒಬ್ಬ ಗಂಡಸು ಆ ರೀತಿಯಾಗಿ ಯೋಚಿಸುವ ಬಗ್ಗೆಯಾಗಿಲ್ಲ. ಇದು ಪುರುಷರ ಜೀವನ ವಿಧಾನವಾಗಿಬಿಟ್ಟಿದೆ, ಮತ್ತಿದು ಅವರ ಸಂಸ್ಕೃತಿ ಹಾಗೂ ಧರ್ಮದ ಒಂದು ಭಾಗವೇ ಆಗಿಹೋಗಿದೆ.

ಒಮ್ಮೆ, ಸಾಮಾಜಿಕ ಸುಧಾರಕರೊಬ್ಬರು ಸ್ವಾಮಿ ವಿವೇಕಾನಂದರ ಬಳಿ ಹೋಗಿ, “ನೀವೂ ಸಹ ಮಹಿಳೆಯರನ್ನು ಬೆಂಬಲಿಸುತ್ತಿರುವುದು ಅದ್ಭುತವಾದ ವಿಷಯ. ಆ ನಿಟ್ಟಿನಲ್ಲಿ ನಾನೇನು ಮಾಡಬಹುದು? ನಾನವರನ್ನು ಸುಧಾರಿಸಲು ಬಯಸುತ್ತೇನೆ. ನಾನವರನ್ನು ಬೆಂಬಲಿಸಲು ಬಯಸುತ್ತೇನೆ.” ಎಂದು ಕೇಳಿದರು. ಅದಕ್ಕೆ ವಿವೇಕಾನಂದರು, “ನೀವು ಅವರ ಬಗ್ಗೆ ಏನೂ ಮಾಡಬೇಕಿಲ್ಲ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಆಗ ಅವರು ಮಾಡಬೇಕಾದುದನ್ನು ತಾವಾಗಿಯೇ ಮಾಡುತ್ತಾರೆ.” ಎಂದರು. ಹಾಗಾಗಿ ನಾವು ಮಾಡಬೇಕಾಗಿರುವುದು ಇಷ್ಟೆ. ಪುರುಷ ಮಹಿಳೆಯನ್ನು ಸುಧಾರಿಸಬೇಕಾಗಿಲ್ಲ. ಅವನು ಕೇವಲ ಅವಳಿಗೆ ಅವಕಾಶವನ್ನು ನೀಡಿದರೆ ಸಾಕು, ಅಗತ್ಯವಿರುವುದನ್ನು ಅವಳು ಮಾಡುತ್ತಾಳೆ.