ಕೇಳುಗ: ಪ್ರೀತಿಯ ಸದ್ಗುರುಗಳೇ, ಈಗ ಹಲವಾರು ವರ್ಷಗಳಿಂದ ನನಗೆ ಅನೇಕ ಗಹನವಾದ ಆಧ್ಯಾತ್ಮಿಕ ಅನುಭವಗಳಾಗಿವೆ. ನಾನು ಕಣ್ಣು ಮುಚ್ಚಿದಾಗ ನನಗೆ ಏನೇನೋ ಕಾಣುತ್ತದೆ.

ಸದ್ಗುರು: ದೇವದೂತರು ನಿಮ್ಮನ್ನು ಭೇಟಿ ಮಾಡುತ್ತಿದ್ದಾರೆಯೇ (ನಗು)??

ಕೇಳುಗ: ಇಲ್ಲ, ಅಂತದ್ದೇನೂ ಇಲ್ಲ…

ಸದ್ಗುರು:ದೆವ್ವಗಳು ಮಾತ್ರವೇ (ನಗು)??

ಕೇಳುಗ: ಇಲ್ಲ, ವಸ್ತುಗಳ ಅಥವಾ ಮುಖಗಳ ಶಕ್ತಿಯ ಬಾಹ್ಯರೇಖೆಗಳು. ನನಗೇನು ಕಾಣುತ್ತದೆ ಎನ್ನುವುದರ ಮೇಲೆ ನನಗೆ ನಿಯಂತ್ರಣವಿರುವುದಿಲ್ಲ.

ಸದ್ಗುರು: ನಿಮ್ಮ ಮನಸ್ಸಿನ ಸ್ವಭಾವ ಹೇಗಿದೆಯೆಂದರೆ, ಅದು ನಿಮಗೆ ಬೇಕಾದ್ದನ್ನು ನೋಡಲು ಸಾಧ್ಯವಾಗುವಂತೆ ಮಾಡುತ್ತದೆ. ಅದೊಂದು ಪ್ರಚಂಡವಾದ ಸಾಧನ, ಮತ್ತು ಅದಕ್ಕೆ ಹಲವಾರು ಪದರಗಳಿವೆ. ಅದರಲ್ಲಿ ಅನೇಕ ವಿಷಯಗಳ ಅಚ್ಚೊತ್ತುಗಳಿರುವ ಕಾರಣ, ಅದು ನಿಮಗೆ ಪ್ರಜ್ಞಾಪೂರ್ವಕವಾಗಿ ಕಲ್ಪಿಸಿಕೊಳ್ಳಲು ಸಾಧ್ಯವಾಗದ ವಿಷಯಗಳನ್ನು ನೋಡಲು ಸಾಧ್ಯವಾಗಿಸುತ್ತದೆ. ಆದ್ದರಿಂದ, ನಮ್ಮ ಸುತ್ತಲಿನ ಭೌತಿಕ ವಿಷಯಗಳನ್ನು ಮೀರಿದ ಅನುಭವದ ಯಾವುದೇ ಆಯಾಮಕ್ಕೆ ನೀವು ಪ್ರವೇಶಿಸುವ ಮುನ್ನ ನಿಮ್ಮ ಮನಸ್ಸಿಗೆ ಒಂದು ಉತ್ತಮವಾದಂತಹ ಅಡಿಪಾಯವನ್ನು ಸೃಷ್ಟಿಸಿಕೊಳ್ಳುವುದು ಬಹಳ ಮುಖ್ಯ; ಮನಸ್ಸಿನ ತಾರ್ಕಿಕ ಆಯಾಮ - ಅಂದರೆ ನಿಮ್ಮ ಬುದ್ಧಿಶಕ್ತಿಯು ಒಂದು ಸ್ಥಿರವಾದ ಅಡಿಪಾಯದ ಮೇಲಿರುವುದು ತುಂಬಾ ಮುಖ್ಯ.

ನೀವು ಕಣ್ಣು ಮುಚ್ಚಿದರೆ, ಜಗತ್ತು ಕಣ್ಮರೆಯಾಗಬೇಕು.

ನೀವು ಯಾವುದೇ ರೀತಿಯ ಅನುಭವಗಳಿಗಾಗಿ ಬಯಸುತ್ತಿದ್ದರೆ, ಮತ್ತು ನಿಮ್ಮ ಬುದ್ಧಿಶಕ್ತಿಯು ಒಂದು ಸ್ಥಿರವಾದ ಅಡಿಪಾಯದ ಮೇಲಿಲ್ಲದೇ ಇದ್ದರೆ, ನೀವು ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತೀರಿ. ಅದರ ನಂತರ, ನಿಮ್ಮನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀವು ಎಲ್ಲಾ ರೀತಿಯ ವಿಷಯಗಳನ್ನು ಕಲ್ಪಿಸಿಕೊಳ್ಳಬಹುದು. ವಾಸ್ತವಕ್ಕಿಂತ ಕಲ್ಪನೆಯು ಹೆಚ್ಚು ಶಕ್ತಿಯುತವಾದದ್ದು ಎಂದು ನಿಮಗೆ ಅರ್ಥವಾಗುತ್ತದೆಯೇ? ಒಂದು ರೀತಿಯ ಮಾನಸಿಕ ಅಸ್ವಸ್ಥತೆಯ ಸ್ಥಿತಿಯಲ್ಲಿರುವವರ ಸಂಪರ್ಕದಲ್ಲಿ ನೀವೆಂದಾದರೂ ಬಂದಿದ್ದರೆ, ಅವರ ಕಲ್ಪನೆ ವಾಸ್ತವಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ಹಾಗಿದ್ದಾಗ ಕಣ್ಣು ತೆರೆದು ನೋಡುವ ವಿಷಯಗಳು ಕಣ್ಣು ಮುಚ್ಚಿದಾಗ ಕಾಣುವ ವಿಷಯಗಳಷ್ಟು ಪ್ರಕಾಶಮಾನವಾಗಿ ಮತ್ತು ಸ್ಪಷ್ಟವಾಗಿರುವುದಿಲ್ಲ.

ಮೂಲಭೂತವಾಗಿ, ನಿಮಗೆ ಕಣ್ಣುರೆಪ್ಪೆಗಳಿರುವುದು - ನೀವು ಕಣ್ಣು ಮುಚ್ಚಿದರೆ ನೀವು ಏನನ್ನೂ ನೋಡಬಾರದು ಎಂಬ ಕಾರಣಕ್ಕಾಗಿ. ಇದನ್ನು ಪ್ರಯತ್ನಿಸಿ ನೋಡಿ. ನನಗೆ, ನಾನು ಕಣ್ಣು ಮುಚ್ಚಿದರೆ ಸಾಕು, ಜಗತ್ತು ಇಲ್ಲವಾಗಿಬಿಡುತ್ತದೆ; ಅದು ಅಸ್ತಿತ್ವದಲ್ಲಿರುವುದಿಲ್ಲ. ಕಣ್ಣು ಮುಚ್ಚುವುದರ ಹಿಂದಿರುವ ವಿಚಾರ ಇದು. ನೀವು ಕಣ್ಣು ಮುಚ್ಚಿದರೆ, ಜಗತ್ತು ಕಣ್ಮರೆಯಾಗಿಬಿಡಬೇಕು. ನೀವು ಕಣ್ಣು ಮುಚ್ಚಿ ಈ ಜಗತ್ತನ್ನು ಅಥವಾ ಬೇರೊಂದು ಜಗತ್ತನ್ನು ನೋಡುತ್ತಿದ್ದೀರಿ ಎಂದಾದರೆ, ನಿಮ್ಮ ಮನಸ್ಸು ಎಂಬ ಸಂಕೀರ್ಣವಾದ ಸಂಯೋಜನೆಯಲ್ಲಿ ಏನೋ ವಿಚಿತ್ರವಾದದ್ದು ನಡೆಯುತ್ತಿದೆ ಎಂದರ್ಥ. ಆದ್ದರಿಂದ, ಯಾರಿಗೇ ಆದರೂ ಮೊಟ್ಟಮೊದಲ ಸಾಧನೆಯೆಂದರೆ, ಅವರು ಕಣ್ಣು ಮುಚ್ಚಿದಾಗ, ಅವರಿಗೇನೂ ಕಾಣಿಸಬಾರದು. ನಿಮ್ಮ ಮನಸ್ಸು ಅಷ್ಟು ಸ್ಥಿರವಾಗಿದ್ದೇ ಆದರೆ, ನಿಮ್ಮ ಎರಡು ಕಣ್ಣುಗಳು ನೋಡಲು ಸಾಧ್ಯವಿರುವುದನ್ನು ಮೀರಿ ನೀವೇನನ್ನಾದರೂ ನೋಡಿದರೆ, ಅದನ್ನು ವಿಶ಼ನ ಎಂದು ಕರೆಯಲಾಗುತ್ತದೆ; ಇಲ್ಲದಿದ್ದರೆ ಅದೊಂದು ಹುಚ್ಚುತನವಾಗುತ್ತದೆ ಅಷ್ಟೆ.

ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ, ವಿವೇಕ ಮತ್ತು ಹುಚ್ಚುತನದ ನಡುವಿನ ಗೆರೆ ಬಹಳ ತೆಳುವಾಗಿದೆ. ಸಂಪೂರ್ಣವಾಗಿ ವಿವೇಕವಿರುವ ಯಾರೇ ಆರಾದರೂ, ದೃಢವಾಗಿ ಪ್ರಯತ್ನಿಸಿದರೆ, ಮೂರೇ ದಿನಗಳಲ್ಲಿ ಸುಲಭವಾಗಿ ಹುಚ್ಚರಾಗಿಬಿಡಬಹುದು, ಏಕೆಂದರೆ ಆ ಗೆರೆ ಬಹಳ ತೆಳ್ಳಗಿದೆ, ಮತ್ತು ಆ ದಿಕ್ಕಿನಲ್ಲಿ ಶ್ರಮಿಸಿದರೆ ಯಾರೇ ಆದರೂ ತಮ್ಮ ಚಿತ್ತಸ್ವಾಸ್ಥ್ಯವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಇದಕ್ಕಾಗಿಯೇ ಯಾವಾಗಲೂ ಸಹ, ಯಾರಾದರು ತಮಗಾಗಿದೆ ಎಂದು ಹೇಳುವ ಅನುಭವವನ್ನು ನಾವು ಕಡೆಗಣಿಸುತ್ತೇವೆ. ಅದು ನಿಜವೆಂದೆನಿಸಿದರೂ, ಅದರ ಅವಶ್ಯಕತೆಯಿಲ್ಲದ ಕಾರಣ ನಾನದನ್ನು ಕಡೆಗಣಿಸುತ್ತೇನೆ; ಅದು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ಒಂದು ವೇಳೆ ಮರದಿಂದ ಏನೋ ನೇತಾಡುತ್ತಿರುವುದನ್ನು ನೀವು ನೋಡಿದಿರಿ ಎಂದಿಟ್ಟುಕೊಳ್ಳೋಣ. ಬಹುಶಃ ಅದು ಕುತೂಹಲಕಾರಿಯಾಗಿರಬಹುದು, ಆದರದು ಯಾವ ಉದ್ದೇಶವನ್ನು ಪೂರೈಸುತ್ತದೆ? ಅದು ನಿಮ್ಮ ಬೆಳವಣಿಗೆ ಮತ್ತು ಶ್ರೇಯಸ್ಸಿನ ಯಾವ ಉದ್ದೇಶವನ್ನೂ ಪೂರೈಸುವುದಿಲ್ಲ.

“ನಿಮ್ಮ ಮನಸ್ಸು ಸ್ಥಿರವಾಗಿದ್ದು, ನಿಮ್ಮ ಎರಡು ಕಣ್ಣುಗಳು ನೋಡಲು ಸಾಧ್ಯವಿರುವುದನ್ನು ಮೀರಿ ನೀವೇನನ್ನಾದರೂ ನೋಡಿದ್ದೇ ಆದರೆ, ಅದನ್ನು ವಿಶ಼ನ (Vision) ಎಂದು ಕರೆಯಲಾಗುತ್ತದೆ; ಇಲ್ಲದಿದ್ದರೆ ಅದೊಂದು ಹುಚ್ಚುತನವಾಗುತ್ತದೆ ಅಷ್ಟೆ.”

 

ನಿಮ್ಮ ಕಣ್ಣುಗಳನ್ನು ಮುಚ್ಚಿಯೂ ನೀವು ಏನನ್ನೋ ಕಾಣುತ್ತಿರುವುದರಿಂದ, ಕಿವಿಗಳನ್ನು ಮುಚ್ಚಿಕೊಂಡೂ ನೀವು ಏನನ್ನೋ ಕೇಳುತ್ತಿರುವುದರಿಂದ, ಅಥವಾ ನೀವು ಬಾಯಿ ಮುಚ್ಚಿಯೂ ಮಾತನಾಡುತ್ತಿರುವ ಕಾರಣದಿಂದ ನೀವು ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಮುನ್ನಡೆಯುತ್ತಿದ್ದೀರಿ ಎಂದು ಭಾವಿಸಬೇಡಿ. ಇದರರ್ಥ ನೀವು ಮನಸ್ಸು ಎಂಬ ಅದ್ಭುತ ಸಾಧನದ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದಷೇ. ನಿಯಂತ್ರಣ ತಪ್ಪಿದರೆ ಈ ಅದ್ಭುತ ಸಾಧನವು ಮಾರಕವಾಗಿ ಪರಿಣಮಿಸಬಹುದು.

ನಿಮ್ಮ ಎಲ್ಲಾ ಆಂತರಿಕ ಅನುಭವಗಳು ಮತ್ತು ವಿಶ಼ನ-ಗಳು, ವಿಶೇಷವಾಗಿ ವಿಶ಼ನ-ಗಳನ್ನು ನನಗೆ ಬಿಡಿ. ಅದನ್ನು ನನಗೆ ಬಿಟ್ಟುಬಿಡುವುದು ಎಂದರೆ - ನೀವದನ್ನು ವಿಶ್ಲೇಷಿಸುವುದು, ತೀರ್ಮಾನಿಸುವುದು, ಹಂಚಿಕೊಳ್ಳುವುದು ಮಾಡುವುದಿಲ್ಲ ಅಥವಾ ಅದರ ಬಗ್ಗೆ ಆಳವಾಗಿ ಯೋಚಿಸುವುದಿಲ್ಲ ಎಂದರ್ಥ. ಅದನ್ನು ನನಗೆ ಬಿಡಿ. ನನ್ನ ಏಕೈಕ ಆಸಕ್ತಿಯಿರುವುದು ನೀವು ವಿಕಸನಗೊಂಡು ಅರಳಲಿ ಎಂಬುದರ ಬಗ್ಗೆಯಾಗಿದೆ. ನೀವು ಕೇವಲ ಅರಿತುಕೊಳ್ಳಲು ಮಾತ್ರವಲ್ಲದೇ ಅನ್ವೇಷಿಸಲೂ ಬಯಸುವುದಾದರೆ, ನೀವು ನನ್ನೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು. ನಿಮ್ಮ ಇಷ್ಟಾನಿಷ್ಟಗಳ ಎಲ್ಲಾ ಆಯ್ಕೆಗಳನ್ನು ನೀವು ಪಕ್ಕಕ್ಕೆ ಇಟ್ಟಾಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಸಮತೋಲನ ಮತ್ತು ಸ್ಥಿರತೆಯ ಮೇಲೆ ಕೆಲಸ ಮಾಡಿದಾಗ ಮಾತ್ರ ಅದೊಂದು ಯಶಸ್ವಿ ಸಾಧ್ಯತೆಯಾಗುತ್ತದೆ.

Love & Grace