ಗ್ಯಾರಿ ಪ್ಲೇಯರ್ (ಗಾಲ್ಫಿನ ಬ್ಲ್ಯಾಕ್ ನೈಟ್) ಜೊತೆ ಮಾತುಕತೆ

ಗ್ಯಾರಿ ಪ್ಲೇಯರ್: ನನಗೀಗ 83 ವರ್ಷ, ಆದ್ರೆ ನನಗ್ ವಯಸ್ಸಾಗಿದೆ ಅಂತ ಅನ್ಸಲ್ಲ. ನನಗ್ ತುಂಬಾ ಶಕ್ತಿ, ಉತ್ಸಾಹ ಇದೆ. ಕಷ್ಟ ಪಟ್ ಕೆಲಸ ಮಾಡ್ತೀನಿ, ಜಿಮ್ಮಿಗ್ ಹೋಗ್ತೀನಿ, ಎಲ್ಲಾ ಕಡೆ ತಿರುಗಾಡ್ತೀನಿ.

ಸದ್ಗುರು: ಸಾಯೋದ್ ಪರ್ವಾಗಿಲ್ಲ. ಆದ್ರೆ ನಿಮಗ್ ವಯಸ್ಸಾಗೋದೇನ್ ಬೇಡ.

ಗ್ಯಾರಿ ಪ್ಲೇಯರ್: ಆದ್ರೆ, ನಿಮಗ್ ಸಾವಿನ ಭಯ ಇದ್ಯ? ಸಾವಿನ ಭಯ ಇದ್ಯ?

ಸದ್ಗುರು: ಇಲ್ವೇ ಇಲ್ಲ. ಯಾಕೆ?

ಗ್ಯಾರಿ ಪ್ಲೇಯರ್: ಇಲ್ವೇ ಇಲ್ವ?

ಸದ್ಗುರು: ನಾನು ಪರಿಪೂರ್ಣವಾಗಿ ಜೀವಿಸಿದ್ದೀನಿ. (ನಗು) ಪ್ರತಿ ದಿನ ನನ್ನ ಕೊನೆ ದಿನ ಅನ್ನೋ ರೀತೀಲಿ ಜೀವಿಸ್ತೀನಿ. (ನಗು) ಹಾಗಾಗಿ ನನಗ್ಯಾವ ಸಮಸ್ಯೇನೂ ಇಲ್ಲ.

ಗ್ಯಾರಿ ಪ್ಲೇಯರ್: ನೀವು ಚೆನ್ನಾಗ್ ಮಲಗ್ತೀರ?

ಸದ್ಗುರು: ಹೌದು. ಸುಮಾರು 25 ವರ್ಷಗಳ ಕಾಲ, ನಾನು ದಿನಕ್ಕೆ ಸರಾಸರಿ ಎರಡೂವರೆ- ಮೂರು ಗಂಟೆ ಮಲಗಿ manage ಮಾಡಿದೀನಿ.

ಗ್ಯಾರಿ ಪ್ಲೇಯರ್: ಒಂದ್ ದಿನಕ್ಕೆ ಬರೀ ಎರಡೂವರೆ ಗಂಟೆಗಳಾ?

ಸದ್ಗುರು: ಈ ನಡುವೆ, ಸೋಮಾರಿ ಆಗ್ತಿದೀನಿ. ಸುಮಾರು ನಾಕೂವರೆ ಗಂಟೆ ಮಲಗ್ತೀನಿ.

ಗ್ಯಾರಿ ಪ್ಲೇಯರ್: ನಾನು ನನ್ ಹೆಂಡ್ತಿ ಒಂಭತ್ ಗಂಟೆ ಮಲಗ್ತೀವಿ.

ಸದ್ಗುರು: ಅಂದ್ರೆ, ಅರ್ಧಕ್ಕರ್ಧ ಜೀವನ ಮಲಗೇ ಕಳೆದ್ ಬಿಡ್ತೀರ. (ನಗು)

ಗ್ಯಾರಿ ಪ್ಲೇಯರ್: ನಾನೇನಾದ್ರೂ ಎರಡೂವರೆ ಗಂಟೆ ಮಾತ್ರ ನಿದ್ದೆ ಮಾಡಿದ್ರೆ, ಈಗ್ ನಾನು... (ಸನ್ನೆ ಮಾಡುತ್ತಾ) ಹೀಗ್ ಕೂತಿರ್ತಿದ್ದೆ.

ಸದ್ಗುರು: ದೇಹಕ್ಕೆ ನಿದ್ದೆ ಬೇಡ, ಅದಕ್ ಬೇಕಿರೋದು ವಿಶ್ರಾಂತಿ. ವಿಶ್ರಮಿಸೋದು ಹೇಗೆ ಅಂತ ನಿಮಗೆ ಗೊತ್ತಿದ್ರೆ, ನಿದ್ದೆ ಸಮಯ ಕಡಿಮೆ ಆಗತ್ತೆ. ನಾವು ಕೆಲಸ ಮಾಡ್ದಾಗ, ಅದು ಸಫಲವಾಗ್ಬೇಕು ಅಂತಿರತ್ತೆ. ಸಂದೇಹ ಇಲ್ಲ. ಆದ್ರೆ ಇವತ್ ನೀವು ಯಶಸ್ವಿ ಜನರನ್ನ ನೋಡಿದ್ರೆ, ಅವ್ರ ಸಂದೇಶ ಇದು: ಯಶಸ್ಸು ಅಂದ್ರೆ ದುಃಖ, ಯಶಸ್ಸು ಅಂದ್ರೆ ನರಳಾಟ. ಒಂದು ಸರ್ತಿ ನೀವಿಂತ ಸಂದೇಶ ಹರಡಿದ್ರೆ, ಮುಂದಿನ ಪೀಳಿಗೆ ಯಶಸ್ಸನ್ನ ಅರಸೋದಿಲ್ಲ. ಅವ್ರ ಮನಸ್ಸಿನಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಗದೇ ಇರ್ಬಹುದು, ಆದ್ರೆ ಅವ್ರು ಯಶಸ್ಸನ್ನ ಅರಸೋದಿಲ್ಲ. ಯಾಕಂದ್ರೆ, ಯಶಸ್ವಿಯಾದ ನಿಮ್ಮನ್ನ ಅವ್ರು ನೋಡ್ತಿದಾರೆ. ಅವ್ರಿಗೆ ನಿಮ್ ತರ ಆಗೋದ್ ಇಷ್ಟ ಇಲ್ಲ. ಗಾಂಜಾ ಸೇದೋದೇ ಒಳ್ಳೇದು ಅಂದ್ಕೊತಾರೆ. ಅದಿಕ್ಕೆ ಡ್ರಗ್ಸ್ ತಗೊತಿದಾರೆ.

ಗ್ಯಾರಿ ಪ್ಲೇಯರ್: ಅದ್ ನಿಜ.

ಸದ್ಗುರು: ನೀವು ಯಶಸ್ವಿ ಆಗೋದಿಕ್ಕೆ ಬಹಳ ಮುಖ್ಯವಾದ್ದು ಇದು: ನಿಮ್ ದೇಹದಲ್ಲಿ ಮಾಧುರ್ಯ ಇರ್ಬೇಕು; ನಿಮ್ ಮನಸ್ಸು, ಭಾವನೆಗಳಲ್ಲಿ ಮಾಧುರ್ಯ ಇರ್ಬೇಕು; ನಿಮ್ಮ ಪ್ರಾಣಶಕ್ತಿಯಲ್ಲಿ ಮಾಧುರ್ಯ ಇರ್ಬೇಕು. ‘ತುಂಬಾ ಜಾಸ್ತಿ’ ಅಂತೇನೂ ಇಲ್ಲ. ಮಾನವರು ಬಹಳಷ್ಟನ್ನ ಮಾಡೋದಿಕ್ಕೆ ಸಮರ್ಥರು. ಸಮಸ್ಯೆ ಏನಂದ್ರೆ – ಹೆಚ್ಚಿನವ್ರಿಗೆ, ಅವರದೇ ಮನಸ್ಸು ಅವರಿಗೆ ವಿರುದ್ಧವಾಗಿದೆ. ನಿಮ್ಮ ಬುದ್ಧಿ ನಿಮಗೇ ವಿರುದ್ಧವಾದಾಗ, ನಿಮ್ ಕಥೆ ಮುಗೀತು. ನೀವು ಅದನ್ನ ಒತ್ತಡ ಅನ್ಬಹುದು, ಆತಂಕ ಅನ್ಬಹುದು, ದುಃಖ, ಹುಚ್ಚು ಅಂತ ಏನ್ ಬೇಕಾದ್ರೂ ಅನ್ಬಹುದು. ಮೂಲತಃ ಅದು, ನಿಮ್ಮ ಬುದ್ಧಿ ನಿಮಗೇ ವಿರುದ್ಧವಾಗಿರೋದು, ಅಲ್ವ? ಬೇರೆ ಏನಾದ್ರೂ ಕಾರಣ ಇದೆಯಾ?

ಬ್ಲೇಕ್ ಮೈಕೋಸ್ಕಿ (ಟಾಮ್ಸ್ ಶೂಸ್ - ಸಂಸ್ಥಾಪಕರು) ಜೊತೆ ಮಾತುಕತೆ

ಸದ್ಗುರು: ಪ್ರಜ್ಞೆ ಅನ್ನೋದು ಎಲ್ಲೋ ನಡಿತಿರೋ ಒಂದು ವಿಚಿತ್ರವಾದ ವಿಷಯವಲ್ಲ. ನೀವು ಜೀವಂತವಾಗಿದೀರ, ಮತ್ ನೀವು ಜೀವಂತವಾಗಿದೀರ ಅಂತ ನಿಮಗೆ ಗೊತ್ತಿದೆ. ಯಾಕಂದ್ರೆ ನಿಮಗೆ ಪ್ರಜ್ಞೆಯಿದೆ. ನಿಮಗೆ ಪ್ರಜ್ಞೆ ಇಲ್ದೆ ಇದ್ರೆ, ನಿಮಗೆ ನೀವು ಬದುಕಿದೀರೋ ಸತ್ತಿದೀರೋ ಅಂತಾನೂ ಗೊತ್ತಿರಲ್ಲ, ಅಲ್ವ? ನೀವ್ ಇದೀರೋ ಇಲ್ವೋ ಅಂತಾನೂ ಗೊತ್ತಿರಲ್ಲ. ನಿಮಗೆ ಪ್ರಜ್ಞೆ ಇದೆ. ಪ್ರಶ್ನೆ ಎಷ್ಟು ಪ್ರಜ್ಞಾಪೂರ್ವಕವಾಗಿದೀರ ಅನ್ನೋದಷ್ಟೆ.

ಈಗ ನಾವು ಬೆಳಕನ್ನ ಪ್ರಜ್ಞೆ ಅಂದ್ಕೊಳೊಣ. ಈ ಹಾಲ್-ನಲ್ಲಿ ಒಂದೇ ದೀಪ ಉರೀತಿದೆ ಅಂದ್ಕೊಳೊಣ. ಬೆಳಕನ್ನ ಮಬ್ಬು ಮಾಡಿದ್ರೆ, ಆಗ ಬರೀ ಇವರಿಬ್ರು ಕಾಣ್ತಾರೆ. ಬೇರೆಯವ್ರು ನನ್ ದೃಷ್ಟಿಗೆ ಕಾಣ್ಸಲ್ಲ. ನಾನೇನ್ ಅಂದ್ಕೊತೀನಿ? ಈ ಹಾಲ್-ನಲ್ಲಿ ಇರೋದು ಇವರಿಬ್ರೇ ಅಂದ್ಕೊತೀನಿ. ಪ್ರಕಾಶ ಹೆಚ್ ಮಾಡಿದ್ರೆ, ನನಗೆ ಇದ್ದಕ್ಕಿದಂಗೆ ನಾಲ್ಕು ಜನ ಕಾಣ್ತಾರೆ. ಆಗ ನಾಲ್ಕು ಜನ ಇದಾರೆ ಅಂದ್ಕೊತೀನಿ. ಯಾರೋ ಬೆಳಕನ್ನ ಇನ್ನೂ ಹೆಚ್ ಮಾಡಿದ್ರು. ಓಹ್! ಹತ್ತು ಜನ ಇದಾರೆ. ಬೆಳಕಿನ ಪ್ರಕಾಶ ಪೂರ್ತಿ ಇಟ್ರೆ, ಈಗ ನನಗೆ ಪ್ರತಿಯೊಂದೂ, ಪ್ರತಿಯೊಬ್ರೂ ಸ್ಪಷ್ಟವಾಗಿ ಕಾಣ್ತಾರೆ.

ಪ್ರಜ್ಞೆ ಅಂದ್ರೆ ಇಷ್ಟೇನೇ. ಎಲ್ರೂ ಪ್ರಜ್ಞಾಪೂರ್ವಕವಾಗಿದಾರೆ. ಆದ್ರೆ, ಎಷ್ಟು ಪ್ರಜ್ಞಾಪೂರ್ವಕವಾಗಿದೀರ ಅನ್ನೋದೇ ಪ್ರಶ್ನೆ. ಎಲ್ರೂ ಎಚ್ಚರವಾಗಿದಾರೆ, ಎಷ್ಟು ಎಚ್ಚರವಾಗಿದಾರೆ ಅನ್ನೋದೇ ಪ್ರಶ್ನೆ. ಅದಿಕ್ಕೆ ಭಾರತದಲ್ಲಿ ನಾವ್ ಬಳಸೋ ಪದ “ಜಾಗೃತನಾಗೋದು” ಅಂತ. ಈಗ್ ನಾನು ಎಚ್ಚರವಾಗಿಲ್ವ? ನಾನ್ ಎಚ್ಚರವಾಗಿದೀನಿ. ಆದ್ರೆ, ನೀವು ಈಗಿರೋದಕ್ಕಿಂತ ಹೆಚ್ಚು ಎಚ್ಚರವಾಗ್ಬಹುದು. ನೀವು ಇನ್ನೂ ಹೆಚ್ಚು ಹೆಚ್ಚು ಎಚ್ಚೆತ್ಕೊಳ್ಬಹುದು. ಎಲ್ಲಿವರ್ಗೂ ಅಂದ್ರೆ, ನೀವು ಸಂಪೂರ್ಣವಾಗಿ ಎಚ್ಚೆತ್ಕೊಂಡ್ರೆ, ಇಡೀ ಸೃಷ್ಟಿ ನಿಮ್ಮ ಗ್ರಹಿಕೆಯಲ್ಲಿ ಇರತ್ತೆ.

ಮಾನವತೆಯ ವಿರುದ್ಧ ನಾವ್ ಮಾಡಿರೋ ಅತಿ ದೊಡ್ಡ ಅಪರಾಧ ಅಂದ್ರೆ, ಸ್ವರ್ಗದ ವಿಚಾರಾನ ಜನರ ತಲೆಗೆ ಹಾಕಿದ್ದು. ಬಾಳೋದಿಕ್ಕೆ ಇಲ್ಲಿಗಿಂತ ಉತ್ತಮವಾದ ಬೇರೊಂದ್ ಜಾಗ ಇದೆ ಅಂತಂದ್ವಿ. ಇಲ್ಲಿ ಬೇಜವಾಬ್ದಾರಿಯಿಂದ ಬದುಕ್ಬಹುದು; ಒಬ್ರಿಗೊಬ್ರು ಕೆಟ್ಟದ್ ಮಾಡ್ಬಹುದು. ಬೇರೆಲ್ಲೋ ಎಲ್ಲಾನೂ ಚೆನ್ನಾಗಿರತ್ತೆ. ಈ ಒಂದ್ ವಿಚಾರ, ನಮ್ಮನ್ನ ನಮ್ ಸುತ್ತ ಇರೋದಕ್ಕೆಲ್ಲಾ ಒರಟು ಮತ್ತು ನಿರ್ದಯಿಗಳಾಗಿ ಮಾಡಿದೆ. ನೀವಿಲ್ಲಿ ಚೆನ್ನಾಗ್ ತಿನ್ತಿಲ್ಲ ಅಂದ್ರೆ ಪರ್ವಾಗಿಲ್ಲ; ಅಲ್ಲಿ ಅದ್ಭುತವಾಗಿರುತ್ತೆ. ಇವತ್ತು ಇಲ್ಲಿ ಕುಡಿಯೋದಿಕ್ಕೆ ಸಿಗ್ಲಿಲ್ವಾ, ಪರ್ವಾಗಿಲ್ಲ, ಅಲ್ಲಿ ಮದ್ಯದ ನದೀನೇ ಹರಿಯತ್ತೆ. ಬೇರೆ ಏನ್ ಸುಖ ಬೇಕೋ, ತಲೆ ಕೆಡಿಸ್ಕೊಬೇಡಿ. ಅಲ್ಲಿ ಡಜನ್‌ಗಟ್ಟಲೆ ಕನ್ಯೆಯರು ನಿಮಗಾಗಿ ಕಾಯ್ತಿದಾರೆ ಅನ್ನೋ ಅಪಲಾಪ.

ನಾನ್ ಹೇಳೋದು, ಈ ಒಂದ್ ವಿಚಾರ - ಸಾಧ್ಯವಾದಷ್ಟು ಉತ್ತಮವಾಗಿ ಬದುಕೋದಿಕ್ಕೆ ನೀವು ಶ್ರಮಿಸಬೇಕಾದ ಸ್ಥಳ ಇದೇ; ಬದುಕೋದಿಕ್ಕೆ ಇದಕ್ಕಿಂತ ಉತ್ತಮವಾದ ಜಾಗ ಇಲ್ಲ ಅನ್ನೋದು ನಮ್ಮೆಲ್ರಿಗೂ ಅರ್ಥವಾಗ್ಬೇಕು. ನಾವು ಅತ್ಯದ್ಭುತವಾಗಿ ಬದುಕ್ಬೇಕೂಂತಿದ್ರೆ, ಅದನ್ನ ಮಾಡ್ಬೇಕಾಗಿರೋದು ಇಲ್ಲೇ, ಅಲ್ವ? ನಾನ್ ಕೇಳೋದು –ನೀವು ಈಗಾಗ್ಲೇ ಸ್ವರ್ಗದಲ್ಲಿದ್ದು, ಅದನ್ನ ನೀವು ಹಾಳುಗೆಡವ್ತಿಲ್ಲ ಅನ್ನೋದಿಕ್ಕೆ ನಿಮ್ ಬಳಿ ಏನಾದ್ರೂ ಸಾಕ್ಷಿ ಇದ್ಯ?

ಭಾರತದ ಚುನಾವಣಾ ಫಲಿತಾಂಶದ ಬಗ್ಗೆ ಸದ್ಗುರು:

ಗೆಲುವಿನಲ್ಲಿ ವಿನಮ್ರತೆ ಮತ್ತು ಸೋಲಿನಲ್ಲಿ ಸೌಜನ್ಯತೆ ಮಹಾನ್ ವ್ಯಕ್ತಿಗಳ ಗುರುತಾಗಿದೆ. ಮಹಾನ್ ವ್ಯಕ್ತಿಗಳಿಂದಲೇ ಮಹಾನ್ ರಾಷ್ಟ್ರವನ್ನ ರೂಪಿಸಲು ಸಾಧ್ಯವಾಗೋದು. ಜನರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ, ಚುನಾವಣಾ ಫಲಿತಾಂಶಗಳು ಹೊರಬಂದಿರುವಂತ ಈ ಸಮಯದಲ್ಲಿ, ನಾವೆಲ್ಲರೂ, ಮತ್ತು ಗೆದ್ದಿರುವ ಅಥ್ವಾ ಸೋತಿರುವ ಅಭ್ಯರ್ಥಿಗಳೂ ಕೂಡ, ಇದನ್ನ ನೆನಪಿನಲ್ಲಿಟ್ಕೊಳ್ಬೇಕು - ಭಾರತಕ್ಕೆ ಯಾರು ಉತ್ತಮವಾಗಿ ಸೇವೆ ಸಲ್ಲಿಸಬಲ್ಲರು ಅನ್ನೋದನ್ನ ನೀವು ತೂಗಿನೋಡ್ತಿದೀರ ಅಷ್ಟೆ. ಇದು ರಾಷ್ಟ್ರ ಮತ್ತು ರಾಷ್ಟ್ರದ ಪ್ರಜೆಗಳಿಗೆ ಸೇವೆ ಸಲ್ಲಿಸೋ ಬಗ್ಗೆಯಾಗಿದೆ.

Love & Grace