ಸಸ್ಯ ಸಂಕುಲವು ಬಹಳ ಸಂವೇದನಾಶೀಲವಾಗಿದ್ದು, ಧ್ಯಾನಕ್ಕೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಅವು ಹೇಗೆ ಸಹಕಾರಿಯಾಗಿವೆ ಎಂಬುದರ ಬಗ್ಗೆ ಸದ್ಗುರುಗಳು ಗಮನವನ್ನು ಹರಿಸುತ್ತಾರೆ ಮತ್ತು ನಾವು ಬೇರೆಲ್ಲದರೊಂದಿಗೆ  ಬೆಸೆದುಕೊಂಡಿರುವ ಜೀವವೆಂದು ಒಮ್ಮೆ ನಮಗೆ ಮನದಟ್ಟಾದಲ್ಲಿ, ನಮ್ಮ ಜೀವ ಪರಿಸರದ ಜವಾಬ್ದಾರಿಯು ಹೇಗೆ ಒಂದು ಹೊರೆಯಾಗಿ ಉಳಿಯುವುದಿಲ್ಲ ಎನ್ನುವುದರ ಬಗ್ಗೆ ಮಾತನಾಡುತ್ತಾರೆ.

ಸದ್ಗುರು: ಸಸ್ಯಜೀವಗಳು ನಿಮ್ಮ ಭಾವನೆ ಮತ್ತು ಆಲೋಚನೆಗಳಿಗೆ ಬಹಳ ಸೂಕ್ಷ್ಮ ಸಂವೇದನೆಗಳನ್ನು ಹೊಂದಿವೆ – ವಿಷೇಶವಾಗಿ ಕೆಲವು ವಿಧದ ಸಸ್ಯಗಳು. ಸಾಮಾನ್ಯವಾಗಿ Ficus ಜಾತಿಯ ಸಸ್ಯಗಳು, ಉದಾಹರಣೆಗೆ ಆಲ ಮತ್ತದೇ ಕುಟುಂಬಕ್ಕೆ ಸೇರಿದ ಮರಗಳು ತುಂಬ ಸೂಕ್ಷ್ಮಗ್ರಾಹಿಗಳಾಗಿವೆ. ಇದೇ ಕಾರಣಕ್ಕಾಗಿ ಭಾರತದಲ್ಲಿ ಯಾವಾಗಲೂ ಅವುಗಳನ್ನು ಧ್ಯಾನದ ಉದ್ದೇಶಕ್ಕಾಗಿ ಆರಿಸಿಕೊಳ್ಳಲಾಗುತ್ತದೆ, ಏಕೆಂದರೆ ನೀವು ನಿಮ್ಮ ಸಾಧನೆಯನ್ನು ಆ ಮರದ ಕೆಳಗೆ ಮಾಡಿದರೆ, ಅದೆಂತಹ ವಾತಾವರಣವನ್ನು ಸೃಷ್ಟಿಸುತ್ತದೆಂದರೆ, ತನ್ನಷ್ಟಕ್ಕೆ ತಾನೆ ಅದೊಂದು ಧ್ಯಾನ ಕೇಂದ್ರದಂತಾಗುತ್ತದೆ. 

ನೀವು ಅಗತ್ಯವಾದ ಶಕ್ತಿಯನ್ನು ಉಂಟುಮಾಡಿದರೆ, ಸಸ್ಯಗಳು ಅದಕ್ಕೆ ಬಹಳ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತವೆ. ಧ್ಯಾನಲಿಂಗವನ್ನು ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದ ಸಮಯದಲ್ಲಿ ನಾನು ಕಂಡಿದ್ದೇನೆಂದರೆ, ಹೇಗೋ ಏನೋ ಕೆಲವು ಸಸ್ಯಗಳು ಸಂಪೂರ್ಣ ಪ್ರಕ್ರಿಯೆಗೆ ಸ್ಪಂದಿಸುತ್ತಿದ್ದವು ಹಾಗೂ ಸಹಕರಿಸುತ್ತಿದ್ದವು. ಅದು ನಿಜಕ್ಕೂ ಅದ್ಭುತವಾಗಿತ್ತು. ನಿಮ್ಮ ಹತ್ತಿರದಲ್ಲಿ ಬಹಳಷ್ಟು ಮರಗಳಿದ್ದು ಮತ್ತು ಅಲ್ಲಿ ಬಹಳಷ್ಟು ಧ್ಯಾನವು ನಡೆಯುತ್ತಿದ್ದರೆ, ಆ ಸ್ಥಳದಲ್ಲಿ ಧ್ಯಾನದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ತುಂಬ ಸುಲಭವಾಗುತ್ತದೆ ಏಕೆಂದರೆ, ಗಿಡಮರಗಳು ಆ ಗುಣವನ್ನು ಬಹಳ ಸಲೀಸಾಗಿ ಹಿಡಿದಿಟ್ಟುಕೊಳ್ಳುತ್ತವೆ. ಇಂದಿಗೂ ಸಹ, ತುಂಬ ಶಕ್ತಿಯನ್ನು ಹೊಂದಿವೆಯೆಂದು ಹೇಳಲಾಗುವ ಕೆಲವು ಮರಗಳಿವೆ.

ಸಂಪಿಗೆ (Magnolia Champaca)

ಈ ರೀತಿಯ ಬಹಳಷ್ಟು ದಂತ ಕಥೆಗಳಿವೆ. ಗೌತಮ ಬುದ್ಧ ನಡೆದಲ್ಲೆಲ್ಲಾ, ಮರಗಳು ತಮ್ಮ ಋತುವಿಂದಾಚೆಗೆ ಹೂ ಬಿಡುತ್ತಿದ್ದವು ಎಂದು ಹೇಳಲಾಗುತ್ತದೆ. ಅದು ಕೇವಲ ಒಂದು ಕಾವ್ಯಾತ್ಮಕ ಅಭಿವ್ಯಕ್ತಿಯಾಗಿರಬಹುದು ಆದರೆ ಅದು ಸತ್ಯವಾಗಿರಲು ಸಹ ಬಹಳಷ್ಟು ಸಾಧ್ಯತೆಗಳಿವೆ. ದಕ್ಷಿಣ ಭಾರತದ ಕರ್ನಾಟಕದಲ್ಲಿನ ಬಿಳಿಗಿರಿರಂಗನ ಬೆಟ್ಟದಲ್ಲಿ ದೊಡ್ಡ ಸಂಪಿಗೆ ಎಂದು ಕರೆಯಲಾಗುವ ಒಂದು ಮರವಿದೆ. ಅದು ಕೆಲವು ಸಾವಿರ ವರ್ಷಗಳಷ್ಟು ಹಳೆಯದೆಂದು ಹೇಳಲಾಗುವ ಒಂದು ಬಹು ದೊಡ್ಡ ಸಂಪಿಗೆ ಮರ. ಈ ಮರವನ್ನು ಅಗಸ್ತ್ಯ ಮುನಿಗಳು ನೆಟ್ಟಿದ್ದರು ಎಂದು ಹೇಳಲಾಗುತ್ತದೆ ಮತ್ತು ಅದರ ಬಗ್ಗೆ ಬಹಳಷ್ಟು ಕಥೆಗಳಿವೆ. ಸಾಮಾನ್ಯವಾಗಿ ಈ ಮರದ ಆಯುಷ್ಯ ಕೆಲವು ಶತಮಾನಗಳಷ್ಟಿರಬಹುದು, ಆದರೆ ಇದೊಂದು ಮರ ಬಹಳ ಕಾಲದವರೆಗೆ ಜೀವಂತವಾಗಿದೆ. ಅದು ಗಂಟಾಗಿರುವ ರೀತಿ ಮತ್ತು ಅಷ್ಟು ದೊಡ್ಡದಾಗಿ ಹಾಗೂ ಬೃಹತ್ತಾಗಿ ಬೆಳೆದಿರುವ ರೀತಿ, ಬಹುಶಃ ನೀವಿಂತಹ ಸಂಪಿಗೆ ಮರವನ್ನೆಂದಿಗೂ ಸಹ ನೋಡುವುದಿಲ್ಲ.

ಈ ಸಂಸ್ಕೃತಿಯಲ್ಲಿ, ಮರಗಳನ್ನು ಸಾವಿರಾರು ವರ್ಷಗಳ ಕಾಲ ಸಂರಕ್ಷಿಸುವ ಸಂಪ್ರದಾಯವಿತ್ತು ಹಾಗೂ ಅವುಗಳನ್ನು ಜೀವ ಮತ್ತು ಬುದ್ಧಿವಂತಿಕೆಯ ಮೂರ್ತರೂಪವಾಗಿ ನೋಡಲಾಗುತ್ತಿತ್ತು. ಇಂದು ಆ ಯಾವುದೇ ಅಂಶಗಳನ್ನು ಬಹಳವಾಗಿ ಉಳಿಸಿಕೊಳ್ಳಲಾಗಿಲ್ಲ ಮತ್ತು ಅವು ಹೆಚ್ಚಾಗಿ ಕಳೆದೇ ಹೋಗಿವೆ. ಆದರೆ, ಮನುಷ್ಯರು ಮರಗಳಿಂದ ಬಹಳಷ್ಟು ವಿಷಯಗಳನ್ನು ಅರಿತುಕೊಳ್ಳುವ ಸಲುವಾಗಿ ಅವುಗಳತ್ತ ನೋಡುತ್ತಿದ್ದ ಸಂಪ್ರದಾಯವಿತ್ತು.

ಪರಿಸರ ಮತ್ತು ನೀವು

ನಾನು ಆರ್ಥಿಕ ಶೃಂಗಸಭೆಗಾಗಿ ಯೂರೋಪ್-ನಲ್ಲಿದ್ದೆ ಮತ್ತು ಬಹಳ ಪ್ರಸಿದ್ಧವಾದ ಪ್ರೊಫೆಸರ್ ಒಬ್ಬರು ನನ್ನ ಬಳಿಗೆ ಬಂದು “ಓಹ್, ನೀವು ಮರಗಳನ್ನು ನೆಡುವ ಅದ್ಭುತವಾದ ವ್ಯಕ್ತಿಯಲ್ಲವೆ?” ಎಂದು ಕೇಳಿದರು. ಅದಕ್ಕೆ ನಾನು, “ಇಲ್ಲ, ನಾನು ಮರಗಳನ್ನು ನೆಡುವವನಲ್ಲ.” ಎಂದೆ. ಅವರು ಪುನಃ, “ಇಲ್ಲ, ಇಲ್ಲ, ನೀವು ಲಕ್ಷಗಟ್ಟಲೆ ಮರಗಳನ್ನು ನೆಟ್ಟಿದ್ದೀರ” ಎಂದರು. ಅದಕ್ಕೆ ನಾನು “ಹೌದು, ಆದರೆ ನಾನು ಮರಗಳನ್ನು ನೆಡುವವನಲ್ಲ” ಎಂದೆ. “ಹಾಗಾದರೆ ನೀವೇನು ಮಾಡುತ್ತೀರಿ?” ಎಂದವರು ಕೇಳಿದರು. ಅದಕ್ಕೆ ನಾನು “ನನ್ನ ಕೆಲಸ ಮನುಷ್ಯರನ್ನು ಅರಳುವಂತೆ ಮಾಡುವುದು” ಎಂದು ಹೇಳಿದೆ. ಮನುಷ್ಯರು ಅವರು ಜೀವಿಸುತ್ತಿರುವ ಪರಿಸರದೊಂದಿಗೆ ಹೆಚ್ಚಿನ ಮಟ್ಟದ ತಿಳುವಳಿಕೆ, ಅರಿವು ಮತ್ತು ತೊಡಗಿಸಿಕೊಳ್ಳುವಿಕೆಗೆ ತೆರೆದುಕೊಂಡರೆ, ಪರಿಸರ ಹಾಗೂ ನಾವು ಎನ್ನುವುದು ಎರಡು ಪದಗಳಾಗಿ ಉಳಿಯುವುದಿಲ್ಲ. ಅವೆರಡೂ ಸಹ ನಾವಾಗುತ್ತೇವೆ. ಬಹಳ ಸರಳವಾಗಿ ಹೇಳಬೇಕೆಂದರೆ, ನೀವು ಉಸಿರಾಡುತ್ತಿರುವಾಗ, ನೀವು ಹೊರಬಿಡುವುದನ್ನು ಮರಗಳು ಒಳಗೆಳೆದುಕೊಳ್ಳುತ್ತಿವೆ. ಮರಗಳು ಹೊರಬಿಡುತ್ತಿರುವುದನ್ನು ನಾವು ಒಳಗೆಳೆದುಕೊಳ್ಳುತ್ತಿದ್ದೇವೆ. ಕೇವಲ ಒಂದರಲರ್ಧದಷ್ಟು ಶ್ವಾಸಕೋಶದ ಉಪಕರಣವು ನಿಮ್ಮ ಎದೆಯಲ್ಲಿದೆ. ಉಳಿದರ್ಧ ಭಾಗವು ಮರದ ಮೇಲೆ ನೇತಾಡುತ್ತಿದೆ. ಆ ಅರ್ಧ ಭಾಗವನ್ನು ನೀವು ಕಡೆಗಣಿಸಿದರೆ, ನಮ್ಮ ಅರ್ಧ ಭಾಗವು ಸ್ವತಃ ಅಸ್ತಿತ್ವದಲ್ಲಿರುವುದಿಲ್ಲ.

ಆಕಾಶ ಮಲ್ಲಿಗೆ (Millintonia)

ಸದ್ಯದಲ್ಲಿ, ಪರಿಸರದ ಕಾಳಜಿಯನ್ನು ನಾವು ನೆರವೇರಿಸಬೇಕಾದ ಒಂದು ಜವಾಬ್ದಾರಿಯಾಗಿ ನೋಡುತ್ತಿದ್ದೇವೆ. ಅದು ನಮ್ಮ ಜವಾಬ್ದಾರಿಯಲ್ಲ, ಅದು ನಮ್ಮ ಜೀವ. ಎಲ್ಲೋ ಒಂದು ಕಡೆ ನಾವು ಮಾತ್ರ ಜೀವ, ಮತ್ತೆಲ್ಲವೂ ಸಹ ಜೀವವಲ್ಲವೆಂದು ನಾವು ನಂಬಿದ್ದೇವೆ. ಇದಕ್ಕೆ ಕಾರಣ, ನಮ್ಮಿಡೀ ಜೀವನದ ಅನುಭವವು ದೈಹಿಕ ಸಂವೇದನೆಗಳಿಗೆ ಮಾತ್ರ ಸೀಮಿತವಾಗಿದೆ. ಬಹಳಷ್ಟು ಜನರು ಜೀವವೆಂದು ತಿಳಿದಿರುವುದು ಅವರ ದೇಹವನ್ನು ಮಾತ್ರ, ಆದ್ದರಿಂದ ಅವರು ತಾವು ಮಾತ್ರ ಜೀವ, ಬೇರಾವುದೂ ಸಹ ಜೀವವಲ್ಲವೆಂದು ಯೋಚಿಸುತ್ತಾರೆ. ಆಧ್ಯಾತ್ಮಿಕ ಅರಿವು ನಿಮ್ಮಲ್ಲಿದ್ದರೆ, ಎಲ್ಲವೂ ಸಹ ನಿಮ್ಮಂತೆಯೇ ಒಂದು ಜೀವವೆಂದು ಸಹಜವಾಗಿಯೇ ನಿಮಗೆ ತಿಳಿಯುತ್ತದೆ. ಪರಿಸರವನ್ನು ಸಂರಕ್ಷಿಸಲು ಯಾರೂ ಕೂಡ ನಿಮಗೆ ಹೇಳಬೇಕಾಗುವುದಿಲ್ಲ. ಪರಿಸರ ಜಾಗೃತಿಯ ಬಗ್ಗೆ ಜನಗಳು ಇಂದು ಮಾತನಾಡುತ್ತಿರುವುದು ಬೇರೆ ಜೀವಿಗಳ ಮೇಲಿನ ಅಗಾಧವಾದ ಪ್ರೀತಿಯಿಂದಲ್ಲ, ಆದರೆ “ನನ್ನ ಜೀವವು ಅಪಾಯದಲ್ಲಿದೆ. ಹೀಗೇ ಮುಂದುವರೆದರೆ ನಾನು ಮತ್ತು ನನ್ನ ಮಕ್ಕಳು ಬದುಕುಳಿಯುವುದಿಲ್ಲ. ಇದರ ಬಗ್ಗೆ ನಾವೇನನ್ನಾದರೂ ಮಾಡಬೇಕು” ಎಂಬುದನ್ನವರು ಮನಗಾಣಲು ಶುರುಮಾಡಿದ್ದಾರೆ. ನಿಮ್ಮ ಅಸ್ತಿತ್ವವು ಅಪಾಯದಲ್ಲಿದೆ ಎನ್ನುವುದನ್ನು ಯಾರೋ ಒಬ್ಬರು ನಿಮಗೆ ನೆನಪಿಸಿದ್ದಾರೆ. ಈ ರೀತಿಯಾಗಿ ನಾವು ನಮ್ಮ ಸುತ್ತಲಿರುವ ಬೇರೆ ಜೀವಗಳನ್ನು ಸಂರಕ್ಷಿಸಲು ಮುಂದಾಗಿರುವುದು ದುರದೃಷ್ಟಕರವಾಗಿದೆ.


ನಮ್ಮ ಜೀವಗಳು ಒಂದಕ್ಕೊಂದು ಪರಸ್ಪರ ಬೇರೆಯಾಗಿಲ್ಲ. ನಮ್ಮ ಜೀವನವು ಹಾಸುಹೊಕ್ಕಾಗಿ ಬೆಸೆದುಕೊಂಡಿರುವಂತಹ ಒಂದು ಬದುಕಾಗಿದೆ. ಇಂದು ಹುಳುಹುಪ್ಪಟೆಗಳು ಎಷ್ಟು ಆರೋಗ್ಯವಾಗಿವೆ ಎಂಬುದು ನಾಳೆ ನಾವೆಷ್ಟು ಆರೋಗ್ಯವಾಗಿರುತ್ತೇವೆ ಎನ್ನುವುದನ್ನು ನಿರ್ಧರಿಸುತ್ತದೆ. ಮೂಲಭೂತವಾಗಿ ಆಧ್ಯಾತ್ಮಿಕತೆ ಎನ್ನುವುದು, ಎಲ್ಲವನ್ನೂ ಸಹ ಒಳಗೂಡಿಸಿಕೊಂಡಂತಹ ಒಂದು ಅನುಭವ. ಒಮ್ಮೆ ಒಳಗೂಡಿಸಿಕೊಳ್ಳುವಿಕೆಯ ಅನುಭವವು ಉಂಟಾದಾಗ, ನಿಮ್ಮ ಸುತ್ತಲಿನ ಎಲ್ಲದರ ಬಗ್ಗೆ ಕಾಳಜಿಯನ್ನು ಹೊಂದುವುದು ಮತ್ತು ಸಂರಕ್ಷಿಸುವುದು ಬಹಳ ಸಹಜ, ಏಕೆಂದರೆ, ಯಾರೊಬ್ಬರಾದರೂ ಸಹ ಅವರ ಆಂತರ್ಯವನ್ನು ಗಮನಿಸಿದರೆ, ಅಂತರ್ಮುಖಿಯಾದರೆ, ಸ್ವಾಭಾವಿಕವಾಗಿಯೇ, ಅವರ ಒಳಗೆ ಮತ್ತು ಹೊರಗಿರುವ ಅಸ್ತಿತ್ವವು ಪ್ರತ್ಯೇಕವಾದುದಲ್ಲ ಎನ್ನುವುದನ್ನು ಅರಿತುಕೊಳ್ಳುತ್ತಾರೆ.

ಸಂಪಾದಕರ ಟಿಪ್ಪಣಿ: ಪರಿಸರದ ಅವಸ್ಥೆ ಮತ್ತು ಅದಕ್ಕಾಗಿ ನಾವೇನು ಮಾಡಬಹುದೆಂಬುದರ ಬಗ್ಗೆ ಇನ್ನಷ್ಟು ಓದಿ ತಿಳಿಯಲು ಈಬುಕ್-ಅನ್ನು ಇಲ್ಲಿ ಡೌನ್-ಲೋಡ್ ಮಾಡಿ A Tree Can Save The World.

ಈಶ ಫೌಂಡೇಷನ್-ನ ಪರಿಸರ ಕಾರ್ಯಕ್ರಮವಾದ Project GreenHands-ನೊಂದಿಗೆ ಕೈಜೋಡಿಸಲು, ಈ ಪೇಜನ್ನು ನೋಡಿ page.