ಪ್ರಶ್ನೆ: ನಮಸ್ಕಾರ ಸದ್ಗುರು. ವೇಳಾಪಟ್ಟಿಯಂತೆ ವಿದ್ಯಾಭ್ಯಾಸ ಮಾಡುತ್ತಿರುವ ನನ್ನಂತಹವರಿಗೆ, ನಮ್ಮ ವಿದ್ಯಾಭ್ಯಾಸಕ್ಕೂ ಆಕಾಂಕ್ಷೆಗಳಿಗೂ ಯಾವ ರೀತಿಯ ಸಂಬಂಧವೂ ಇಲ್ಲದಿದ್ದಾಗ, ಅದರ ಬಗ್ಗೆ ಏನು ಮಾಡಬೇಕು?

ನಿಮ್ಮ ಆಕಾಂಕ್ಷೆಗಳನ್ನು ಅನುಸರಿಸುತ್ತಾ ಹೇಗೆ ಯಶಸ್ವಿಯಾಗುವುದು

ಸದ್ಗುರು: ಒಬ್ಬರು ನಿರ್ದಿಷ್ಟ ಮಟ್ಟದ ಸಾಮರ್ಥ್ಯ, ಪ್ರತಿಭೆ ಮತ್ತು ಸೂಕ್ತವಾದ ಆಕಾಂಕ್ಷೆಯನ್ನು ಹೊಂದಿರಬೇಕಾಗುತ್ತದೆ. ನೀವು ಹೆಚ್ಚು ಆಕಾಂಕ್ಷೆ ಹೊಂದಿದ್ದು, ಅದಕ್ಕೆ ಬೇಕಾದ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಹೊಂದಿಲ್ಲದಿದ್ದರೆ, ಆ ರೀತಿಯ ಆಕಾಂಕ್ಷೆ ನಿಮ್ಮನ್ನು ಖಿನ್ನರನ್ನಾಗಿಸುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಬೇಕೇ ವಿನಹ ನಿಮ್ಮ ಆಕಾಂಕ್ಷೆಯನ್ನಲ್ಲ. ಉದಾಹರಣೆಗೆ, ನೀವು ಉತ್ತಮ ಸಂಗೀತಗಾರರಾಗುವ ಆಕಾಂಕ್ಷೆ ಹೊಂದಿದ್ದು, ನೀವು ಹಾಡಲು ಪ್ರಾರಂಭಿಸಿದಾಕ್ಷಣ ಎಲ್ಲರೂ ಆಸಕ್ತಿಯಿಂದ ಕುಳಿತುಕೊಳ್ಳುವ ರೀತಿ ಮಾಡಿದರೆ, ನಿಮ್ಮ ಶಿಕ್ಷಕರೂ ಸಹ ನಿಮಗೆ ಬೇರೆ ಏನನ್ನಾದರೂ ಕಲಿಸುವುದನ್ನು ಬಿಟ್ಟು ನಿಮ್ಮ ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳುತ್ತಾರೆ. ಆದ್ದರಿಂದ, ಕೇವಲ ಆಕಾಂಕ್ಷೆಗಳನ್ನು ಹೊಂದುವ ಬದಲು, ನಿಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಒತ್ತನ್ನು ಕೊಡಿ. ನೀವು "ಓಹ್, ಅವರು ನನಗೆ ಸಮಯ ನೀಡುತ್ತಿಲ್ಲ. ಅವರು ನನ್ನನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ ಕಲಿಯಲು ಹೇಳುತ್ತಿದ್ದಾರೆ" ಅನ್ನಬಹುದು. ನಿಮಗೆ ತಿಳಿದಿದೆಯೇ, ಸತ್ಸಂಗದಲ್ಲಿ ಯಾರಾದರೂ ನೀರಸವಾದ ಪ್ರಶ್ನೆಯನ್ನು ಕೇಳಿದರೆ, ತಕ್ಷಣ ನಾನು ಯಾವುದಾದರೂ ಹಾಡನ್ನು ನನ್ನೊಳಗೆಯೇ ಹಾಡಿಕೊಳ್ಳುತ್ತಿರುತ್ತೇನೆ.

ನೀವು ಆಕಾಂಕ್ಷೆಯನ್ನು ತೋರಿಸಬೇಕಾಗಿಲ್ಲ. ನೀವು ಯೋಗ್ಯತೆಯನ್ನು ಮಾತ್ರ ತೋರಿಸಬೇಕು.

ಸಂಗೀತವು ಹಾಡುವುದರಿಂದಲೋ ಅಥವಾ ನುಡಿಸುವುದರಿಂದಲೋ ಬರುವುದಿಲ್ಲ. ನಿಮ್ಮ ಕೇಳುವ ಸಾಮರ್ಥ್ಯದಿಂದಾಗಿ ಸಂಗೀತ ಬರುತ್ತದೆ. ನಿಮ್ಮ ಕಿವಿಗಳು ಎಷ್ಟು ಉತ್ಸುಕವಾಗಿರುತ್ತದೆಯೋ, ಅಷ್ಟರ ಮಟ್ಟಕ್ಕೆ ನೀವು ಸಂಗೀತದೊಂದಿಗೆ ಉತ್ತಮವಾಗಿ ಹೊಂದಿಕೊಂಡಿರುತ್ತೀರಿ. ಸಂಗೀತಗಾರನಾಗಲು ನೀವು ಉತ್ತಮ ಧ್ವನಿ ಅಥವಾ ಮತ್ತೇನೋ ಹೊಂದಿರಬೇಕು ಎಂಬುದು ಅನಿವಾರ್ಯವಲ್ಲ. ನೀವು ಏನನ್ನಾದರೂ ಕೇಳಿದಾಗ ಸಂಗೀತದ ವಿವಿಧ ಪದರಗಳನ್ನು ಅರ್ಥೈಸಿಕೊಳ್ಳಬಹುದಾದ ಉತ್ತಮವಾದ ಕಿವಿಯನ್ನು ಹೊಂದಿರಬೇಕು. ಈ ಶಾಲೆಯಲ್ಲಿ ಯಾವುದೇ ಶಿಕ್ಷಕರು ಕಾ, ಕಾ (ಕಾಗೆಗಳ ಧ್ವನಿಯನ್ನು ಉಲ್ಲೇಖಿಸಿ) ಕೇಳಿ, ಒಂದು ಸಂಗೀತ ಸಂಯೋಜನೆಯನ್ನು ಮಾಡುವಂತಹ ಸಾಮರ್ಥ್ಯ ಹೊಂದಿಲ್ಲ. ನಾನು ಹೇಳುತ್ತಿರುವುದು ಕಾ, ಕಾ, ಕಾ, ಕಾ....... ಸ, ರಿ, ಗ, ಮ ಅಲ್ಲ.

ಕಾಗೆಯು ಕಾ, ಕಾ ಶಬ್ದವನ್ನು ಎಲ್ಲ ಸಮಯದಲ್ಲೂ ಒಂದೇ ರೀತಿ ಮಾಡುವುದಿಲ್ಲ. ಇದು ವಿಭಿನ್ನ ಸ್ಥಾಯಿಗಳಲ್ಲಿ ಶಬ್ದ ಮಾಡುತ್ತದೆ ಮತ್ತು ಅದು ತನ್ನದೇ ಶ್ರೇಣಿಯನ್ನು ಹೊಂದಿರುತ್ತದೆ. ನೀವು ಅದರ ಬಗ್ಗೆ ಸರಿಯಾಗಿ ಗಮನ ಹರಿಸಿ ಕೇಳಿದರೆ, ಅದರಲ್ಲಿ ಒಂದು ನಿರ್ದಿಷ್ಟ ಜ್ಯಾಮಿತಿ(ವಿನ್ಯಾಸ) ಇರುವುದನ್ನು ನೀವು ಕಾಣಬಹುದು. ಎಲ್ಲಾ ಶಬ್ದಗಳು ತನ್ನದೇ ನಿರ್ದಿಷ್ಟ ಜ್ಯಾಮಿತಿಯನ್ನು ಹೊಂದಿರುತ್ತವೆ. ನೀವು ಗಮನದಿಂದ ಕೇಳಿದರೆ, ಅದರಲ್ಲಿ ಸಂಗೀತವಿರುವುದನ್ನು ಕಾಣಬಹುದು. ಈ ರೀತಿಯಾಗಿ, ನೀವು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಸಾಮರ್ಥ್ಯವನ್ನು ಯಾರೂ ನಿರ್ಲಕ್ಷಿಸದ ಮಟ್ಟಕ್ಕೆ ಹೆಚ್ಚಿಸಿಕೊಂಡರೆ, ನಿಮ್ಮ ಆಕಾಂಕ್ಷೆಗಳ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ. ಜನರೇ ಅದನ್ನು ಮಂದಿನ ಹಂತಕ್ಕೆ ತಲುಪುವಂತೆ ನೋಡಕೊಳ್ಳತ್ತಾರೆ. ಆದ್ದರಿಂದ, ನೀವು ನಿಮ್ಮ ಆಕಾಂಕ್ಷೆಗಳನ್ನು ತೋರಿಸುವ ಅಗತ್ಯವಿಲ್ಲ, ನಿಮ್ಮ ಸಾಮರ್ಥ್ಯವನ್ನು ತೋರಿಸಬೇಕಷ್ಟೇ.

ಆಕಾಂಕ್ಷೆಗಳ ಪೂರೈಕೆಗಾಗಿ ಮುಂದುವರೆಯಬೇಕೇ?

ಆದ್ದರಿಂದ ನಿಮ್ಮ ಆಕಾಂಕ್ಷೆಗಳನ್ನು ಕುರಿತು ಚಿಂತೆ ಮಾಡಬೇಡಿ. ನಿಮ್ಮ ಆಕಾಂಕ್ಷೆಗಳು ನಿದ್ರೆಯಲ್ಲಿರಲಿ. ನಿಮ್ಮ ಸಾಮರ್ಥ್ಯದ ಕಿಚ್ಚು ಹೆಚ್ಚಲಿ. ನಿಮ್ಮ ಸಾಮರ್ಥ್ಯದ ಕಿಚ್ಚು ಹೆಚ್ಚಾದಂತೆ, ನಿಮ್ಮನ್ನು ಮೇಲಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ನಿಮ್ಮಲ್ಲಿ ಕೇವಲ ಆಕಾಂಕ್ಷೆಯ ಕಿಚ್ಚು ಹೆಚ್ಚಾಗುತ್ತಿದ್ದರೆ, ನಿಮ್ಮನ್ನು ಅದು ಒಂದು ದಿನ ನಿರಾಶೆಗೊಳಿಸುತ್ತದೆ. ಈ ಶಾಲೆಯಲ್ಲಿ ನಿಮಗಾಗಿ ಒಂದು ಸ್ಥಳವಿದೆ. ಇಲ್ಲಿ ಸಾಕಷ್ಟು ಗದ್ದಲವಿದೆ. ನೀವು ಅದರಿಂದ ಸಂಗೀತವನ್ನು ರಚಿಸಬಹುದು. ಒಂದು ಯಂತ್ರ ಶಬ್ದ ಮಾಡುತ್ತಿದ್ದರೆ, ಅದರಿಂದ ನೀವು ಸಂಗೀತವನ್ನು ರಚಿಸಲು ಸಾಧ್ಯವಿಲ್ಲವೇ? ನೀವು ಸರಿಯಾಗಿ ಗಮನವಿಟ್ಟು ನೋಡಿದರೆ, ಎಲ್ಲದರಲ್ಲೂ ನಿರ್ದಿಷ್ಟ ಸ್ಥಾಯಿ ಇರುತ್ತದೆ. ತನ್ನದೇ ಲಯವಿರುತ್ತದೆ. ನೀವು ನಿರಂತರವಾಗಿ ಗಮನ ಹರಸಿ ಪ್ರಯೋಗಗಳನ್ನು ನಡೆಸಿದರೆ, ಅದು ನಡೆಯುತ್ತದೆ. "ಓಹ್, ನಾನು ಸಂಗೀತ ಶಾಲೆಯಲ್ಲಿ ಇರಬೇಕಾಗಿತ್ತು. ನಾನು ಇದೀಗ ರಸಾಯನಶಾಸ್ತ್ರ ತರಗತಿಯಲ್ಲಿದ್ದೇನೆ" ಎಂದು ಚಿಂತಿಸುವದರಲ್ಲಿ ಪ್ರಯೋಜನವಿಲ್ಲ. "ನನಗೆ ಸಂಗೀತದ ಬಗ್ಗೆ ಆಕಾಂಕ್ಷೆ ಇದೆ, ಆದರೆ ನನಗೆ ಯಾವುದೇ ಸಾಮರ್ಥ್ಯ ಇಲ್ಲ" ಎಂದು ನಿಮ್ಮ ಆಕಾಂಕ್ಷೆಗಳನ್ನು ಹಚ್ಚಸಿಕೊಳ್ಳುವಲ್ಲಿ ಸಮಯ ವ್ಯರ್ಥ ಮಾಡಬೇಡಿ. ಬದಲಾಗಿ, ನಿಮ್ಮ ಸಂಗೀತವನ್ನು ಕೇಳಲು ಜನರು ಆಕಾಂಕ್ಷೆಯನ್ನು ವ್ಯಕ್ತಪಡಿಸುವಂತಿರಬೇಕು.

ಸಂಪಾದಕರ ಟಿಪ್ಪಣಿ: ಶಾಂತಿ, ಪ್ರೀತಿ, ಆರೋಗ್ಯ ಮತ್ತು ಯಶಸ್ಸಿಗಾಗಿ ಸದ್ಗುರುಗಳಿಂದ ವಿನ್ಯಾಸಗೊಳಿಸಲ್ಪಟ್ಟಿರುವ "ಚಿತ್ ಶಕ್ತಿ" ಧ್ಯಾನಗಳು ನಿಮ್ಮ ದೀರ್ಘಕಾಲಿಕ ಆಸೆಗಳನ್ನು ವಾಸ್ತವಕ್ಕೆ ಪರಿವರ್ತಿಸಲು ನಿಮಗೆ ಅಧಿಕಾರ ನೀಡುವ ಮೂಲಕ ನಿಮ್ಮ ಭಾವನೆಗಳನ್ನು ಹತೋಟಿಗೆ ತಂದುಕೊಳ್ಳಲು ಅನುವು ಮಾಡಿಕೊಡುತ್ತದೆ.  ಯಶಸ್ಸಿಗಾಗಿ ಚಿತ್ ಶಕ್ತಿ ಕನ್ನಡದಲ್ಲಿ ಲಭ್ಯವಿದೆ! ಒಮ್ಮೆ ಪ್ರಯತ್ನಿಸಿ!