Students of Mount Carmel College, Bengaluru

 

ಕಾರ್ಯಕ್ರಮದ ಸುರಕ್ಷತಾ ವ್ಯವಸ್ಥೆಗೆ ಜವಾಬ್ದಾರರಾದ ವಿದ್ಯಾರ್ಥಿಗಳ ಗುಂಪು ನಿರ್ವಹಣಾ ಸಿದ್ಧತೆಯನ್ನು ಮತ್ತು ಯೂತ್ ಅಂಡ್ ಟ್ರೂತ್ ಕಾರ್ಯಕ್ರಮದ ಉದ್ಘಾಟನೆಯ ಯೋಜನೆಗಳನ್ನು ಕೊನೆಯ ಬಾರಿಗೆ ಪರಿಶೀಲಿಸುತ್ತಿದ್ದಂತೆ, ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜಿನ ಕ್ಯಾಂಪಸ್ ಉತ್ಸಾಹದಿಂದ ಗುಂಯ್ ಗುಟ್ಟಿತು. ಕಾರ್ಯಕ್ರಮದ ಪೂರ್ವಸಿದ್ಧತೆ ಹಾಗೂ ಸಂಘಟನೆಯು ಸಂಪೂರ್ಣವಾಗಿ ಸಮರ್ಪಕವಾಗಿತ್ತು - “ಸುರಕ್ಷತಾ ಸಿಬ್ಬಂದಿ”ಗಳಾದ ಯುವತಿಯರು ಕೂಡ ಸಮವಸ್ತ್ರವಾಗಿ ಕಪ್ಪು ಮತ್ತು ಕೆಂಪು ಕುರ್ತಾವನ್ನು ಧರಿಸಿದ್ದರು.

The security girls for the Youth and Truth event at Mount Carmel College, Bengaluru

 

ಯೋಗಿಯ ಹರಟೆಯನ್ನು ಕೇಳಲು ನೂಕುನುಗ್ಗಲು!

ಕಾರ್ಯಕ್ರಮವು ಬೆಳಗ್ಗೆ 9:30-ಕ್ಕೆ ಪ್ರಾರಂಭವಾಗಲು ನಿಗದಿತವಾಗಿತ್ತಾದರೂ, ವಿವಿಧ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಜನಸ್ತೋಮವು ನುಗ್ಗಾಡುತ್ತ, ಆಡಿಟೋರಿಯಂನ ಹೊರಗೆ, ಕಾರ್ಯಕ್ರಮ ಆರಂಭವಾಗುವ ಒಂದು ಗಂಟೆಗೂ ಮೊದಲೇ ಕಾತರ ಉತ್ಸಾಹಗಳಿಂದ ಕಾಯುತ್ತಿದ್ದರು.

ಅವರ ನಡುವೆ ಯೋಗಿಯೊಬ್ಬರ ಉಪಸ್ಥಿತಿಯು ಅವರಿಗೆ ಬಹಳ ರೋಮಾಂಚನವನ್ನು ಉಂಟುಮಾಡಿದೆ ಎಂದವರು ಹೇಳಿದರು. ವಿದ್ಯಾರ್ಥಿಗಳು ಅವರನ್ನು ಒಂದು ಕ್ಷಣವಾದರೂ ನೋಡಿ, ಮಾತನಾಡಿಸಿ, ಅವರ ಮಾತುಗಳನ್ನು ಕೇಳಿ, ಅವರೊಡನೆ ಸೆಲ್ಫಿಗಳನ್ನು ತೆಗೆದುಕೊಳ್ಳುವ ಇಚ್ಛೆಯಲ್ಲಿದ್ದರು. ಮತ್ತು ಸಹಜವಾಗಿ, ಸದ್ಗುರುಗಳ ಬಳಿ ತಮ್ಮ ಪ್ರಶ್ನೆಗಳನ್ನು ಕೇಳಿ ಅವರ ಸಂದಿಗ್ಧತೆಗಳ ಬಗ್ಗೆ ಸ್ಪಷ್ಟತೆಯನ್ನು ಪಡೆಯುವ ಆಶಯವನ್ನು ವ್ಯಕ್ತಪಡಿಸಿದರು.  

Sadhguru with the Principal and faculty of Mount Carmel College, Bengaluru

 

ಈ ಹಿಂದೆ ಕ್ಯಾಂಪಸ್-ಗೆ ಭೇಟಿ ನೀಡಿದ ಪ್ರಸಿದ್ಧ ವ್ಯಕ್ತಿಗಳನ್ನು ನೋಡಲು ವಿದ್ಯಾರ್ಥಿಗಳು ಹೀಗೆ ಗುಂಪುಸೇರುತ್ತಿದ್ದುದನ್ನು ನೋಡಿದ್ದೇವೆ, ಆದರೆ ಕಾಲೇಜಿನ ವಿದ್ಯಾರ್ಥಿನಿಯರು ಗುರುಗಳೊಬ್ಬರನ್ನು ನೋಡಲು ಈ ರೀತಿಯಾಗಿ ಸುತ್ತುಗಟ್ಟಿರುವುದನ್ನು ಇದೇ ಮೊದಲ ಬಾರಿ ನೋಡುತ್ತಿರುವುದಾಗಿ ಕಾಲೇಜಿನ ಶಿಕ್ಷಕವರ್ಗದವರೊಬ್ಬರು ಹೇಳಿದರು.

 

ಕಾರ್ಯಕ್ರಮದ ಕುರಿತಾಗಿ ಅವರ ನಿರೀಕ್ಷೆಗಳ ಬಗ್ಗೆ ಕೇಳಿದಾಗ, ಆ ವಿದ್ಯಾರ್ಥಿನಿಯರಿಂದ ವಿವಿಧ ಪ್ರತಿಕ್ರಿಯೆಗಳು ಹೊರಹೊಮ್ಮಿದವು: “ನೂರು ಗಂಟೆಗಳ ಕಾಲ ಧ್ಯಾನವನ್ನು ಮಾಡಿ ಎಂದು ಹೇಳುವ ಬದಲು ಅವರು ಜೀವನದ ನೈಜ ವಿಷಯಗಳ ಬಗ್ಗೆ ಮಾತಾಡುತ್ತಾರೆ.” ಹಾಗೂ “ಅವರ ಉತ್ತರಗಳು ನಮ್ಮ ಸಂದಿಗ್ಧತೆಗಳನ್ನು ಪರಿಹರಿಸಿ ನಮಗೆ ಒಳ್ಳೆಯ ನಿರ್ದೇಶವನ್ನು ಕೊಡುತ್ತವೆ." ಎನ್ನುವ ಪ್ರತಿಕ್ರಿಯೆಗಳು ಬಂದವು. ಯುವಜನರಲ್ಲಿ ಸ್ಪಷ್ಟತೆ ಮತ್ತು ಸಮತೋಲನವನ್ನು ತರಲು ಅವರೊಂದಿಗೆ ಹರಟಲು ಸದ್ಗುರುಗಳು ಕ್ಯಾಂಪಸ್-ಗೆ ಬಂದಿರುವುದು ಅಲ್ಲಿನ ಶಿಕ್ಷಕವರ್ಗದವರನ್ನೂ ಸಹ ಉತ್ಸಾಹಭರಿತರನ್ನಾಗಿಸಿತ್ತು. 

Sadhguru having a chat with the Principal of Mount Carmel College before the commencement of the Youth and Truth event

 

ಅವರ ಕೆಲ “ಅಭಿಮಾನಿಗಳು” ಸಭಾಂಗಣದೊಳಕ್ಕೆ ಬರಲು ಅಕ್ಷರಶಃ ಭಾವೋದ್ವೇಗದಿಂದ ನೆಗೆದಾಡುತ್ತಿದ್ದರು, ಇನ್ನೂ ಕೆಲವರು ಒಳಗೆ ಸೀಟ್ ಪಡೆಯಲು ಹರಸಾಹಸ ಪಡುತ್ತಿದ್ದರು. ಹಲವರು ಈ ಪ್ರಭಾವಶಾಲಿ ಗುರುಗಳ ಕ್ಷಣಿಕ ದರ್ಶನವನ್ನಾದರೂ ಪಡೆಯಲು ಅಲ್ಲಿ ಇಲ್ಲಿ ನುಸುಳುತ್ತಿದ್ದರು. ವಿದ್ಯಾರ್ಥಿಗಳು ಉಪನ್ಯಾಸ ಮತ್ತು ಭಾಷಣಗಳನ್ನು ತಪ್ಪಿಸಿಕೊಳ್ಳಲು ಕ್ಲಾಸ್-ನಿಂದ ಸದ್ದಿಲ್ಲದೆ ಹೊರಹೋಗುವುದರ ಬಗ್ಗೆ ಕೇಳಿದ್ದೆವು, ಆದರಿಲ್ಲಿ ಅದಕ್ಕೆ ವಿರುದ್ಧವಾದದ್ದು ಘಟಿಸುತ್ತಿತ್ತು!

ಈ ಉಲ್ಲಾಸಭರಿತವಾದ ಕ್ಷಣಗಳ ನಡುವಲ್ಲಿ, ಸದ್ಗುರುಗಳ ತಿಳುವಳಿಕೆಯ ಮಾತುಗಳು ಹೇಗೆ ಅವರನ್ನು  ಜೀವನದ ಕೆಲ ಕಷ್ಟವಾದ ಪರಿಸ್ಥಿತಿಗಳನ್ನು ಎದುರಿಸಲು ಸಹಾಯ ಮಾಡಿವೆಯೆಂದು ಹಲವರು ಹೇಳಿದರು.  

ಬಾಗಿಲುಗಳೋ ಅಥವಾ ಪ್ರವಾಹ ದ್ವಾರಗಳೋ?! ಅಂತೂ ತೆರೆದುಕೊಂಡವು!

ಆಡಿಟೋರಿಯಂನ ಬಾಗಿಲುಗಳು ತೆರೆಯತ್ತಿದಂತೆ, 2500 ಆಸನಗಳ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದರು. ನಡುದಾರಿಗಳಲ್ಲೂ ಕುಳಿತುಕೊಳ್ಳಲು ಆರಂಭಿಸಿ, ಇದ್ದೆಲ್ಲಾ ಸ್ಧಳವನ್ನೂ ಆವರಿಸಿದಾಗ, ಸ್ವಯಂಸೇವಕರು ಜನಸಂದಣಿಯನ್ನು ನಿಯಂತ್ರಿಸಲು ಹೆಣಗಾಡಿದರು.

Sadhguru in conversation with students of Mount Carmel College, Bengaluru

 

ಕಾರ್ಯಕ್ರಮವು ಸೌಂಡ್ಸ್ ಆಫ್ ಈಶದವರ ಮಧುರವಾದ ಗಾಯನದ ಪ್ರಸ್ತುತಿಯೊಂದಿಗೆ ಪ್ರಾರಂಭವಾಯಿತು. ನಂತರ ಈಶ ಸಂಸ್ಕೃತಿ ತಂಡದವರು ಪ್ರದರ್ಶನವನ್ನು ನೀಡಿದರು. ಸಂತ ಕಬೀರರ ಹಾಡುಗಳೊಂದಿಗೆ ಮತ್ತೊಮ್ಮೆ ಸೌಂಡ್ಸ್ ಆಫ್ ಈಶದವರು ವೇದಿಕೆಗೆ ಬಂದು, “ಅಲ್ಲಾ ಕೆ ಬಂದೇ” ಹಾಡನ್ನು ಹಾಡಿದಾಗ, ಸಭಾಂಗಣವೆಲ್ಲ ಚಪ್ಪಾಳೆಯಿಂದ ಝೇಂಕರಿಸಿತು. ಆಡಿಟೋರಿಯಂನಲ್ಲಿದ್ದವರ ಉತ್ಸಾಹವು ಸ್ಪಷ್ಟವಾಗಿತ್ತು. 

The moderators of Mount Carmel College, asking questions to Sadhguru

 

ಅಂತಿಮವಾಗಿ, ಸದ್ಗುರುಗಳು ಚಪ್ಪಾಳೆಗಳ ಆರ್ಭಟದ ನಡುವೆ ವೇದಿಕೆಯನ್ನೇರಿದರು. ಬಾಲ್ಕನಿಯಲ್ಲಿರುವ ವಿದ್ಯಾರ್ಥಿಗಳಿಗೆ "ಅಲ್ಲಿ ಸಾಕಷ್ಟು ಬೆಳಕಿಲ್ಲದಿದ್ದರೆ, ನಿಮ್ಮನ್ನು ನೀವೇ ಸ್ವಲ್ಪ ಬೆಳಗಿಸಿಕೊಳ್ಳಿ" ಎಂದು ತಮಾಷೆ ಮಾಡಿದರು. ಇಡೀ ಆಡಿಟೋರಿಯಂ ಇದನ್ನು ಕೇಳಿ ಹರ್ಷೋದ್ಗಾರ ಮಾಡಿತು. 

ಸದ್ಗುರುಗಳು ತಾವೂ ಒಬ್ಬ ಕಾರ್ಮಲೈಟ್ ಎಂದೂ, ಅವರ ಶಾಲೆಯ 2 ವರ್ಷಗಳನ್ನು ಕಾರ್ಮಲ್ ಶಾಲೆಗಳಾದ “ಕ್ರೈಸ್ಟ್ ದ ಕಿಂಗ್” ಹಾಗೂ “ನಿರ್ಮಲಾ ಕಾನ್ವೆಂಟ್”ನಲ್ಲಿ ವ್ಯಾಸಂಗ ಮಾಡಿದ್ದಾಗಿಯೂ ಹೇಳಿದಾಗ ಸಭಾಂಗಣದಲ್ಲಿ ಇನ್ನೊಂದು ಸುತ್ತು ಹರ್ಷೋದ್ಗಾರದ ಚಪ್ಪಾಳೆಯ ಕರತಾಡನವಾಯಿತು. 

ಕಾರ್ಯಕ್ರಮವು ಬಹಳ ಸಂವಾದಾತ್ಮಕ ಮತ್ತು ಉತ್ಸಾಹಭರಿತವಾಗಿತ್ತು. ಅವರೊಂದಿಗೆ ಸ್ಪಂದಿಸಿದ ಪ್ರತಿಯೊಂದು ಉತ್ತರಕ್ಕೂ, ಪ್ರೇಕ್ಷಕರು ಜೋರಾದ ಚಪ್ಪಾಳೆಯ ಮೂಲಕ ಸಮ್ಮತಿಸುತ್ತಿದ್ದರು. ಕಾರ್ಯಕ್ರಮವು ಚರ್ಚೆಯ ನಿರ್ವಾಹಕರ ಪ್ರಶ್ನೆಗಳಿಂದ ಆರಂಭವಾಗಿ, ಅಲ್ಲಿ ನೆರೆದಿದ್ದ ವಿದ್ಯಾರ್ಥಿವೃಂದವೂ ಪ್ರಶ್ನೆಗಳನ್ನು ಕೇಳುವ ತನಕ ಮುಂದುವರೆಯಿತು. ಯೋಗಿಯೊಡನೆ ಮೂರು ಗಂಟೆಗಳ ಕಾಲವನ್ನು ಪ್ರಶ್ನೋತ್ತರದಲ್ಲಿ ಕಳೆದಿದ್ದರೂ, ಅದು ಅವರಿಗೆ ಸಾಕೆನಿಸಲಿಲ್ಲ.

Students of Mount Carmel College viewing the Youth and Truth conversation in their campus

 

ಸೆಕ್ಷನ್‌ 377-ರ ರದ್ದುಗೊಳಿಸುವಿಕೆ, ಕೇವಲ ದೈಹಿಕ ಸುಖಕ್ಕಾಗಿ ಬೆಳೆಸುವಂತ ಸಂಬಂಧಗಳು, ಮಹಿಳೆಯರೊಂದಿಗಿನ ಅನಾಗರಿಕ ವರ್ತನೆ, ಏಕರೂಪ ಮೌಲ್ಯಮಾಪನ ವಿಧಾನಗಳನ್ನೊಳಗೊಂಡಿರುವ ಶಿಕ್ಷಣ ವ್ಯವಸ್ಥೆ, ಖಿನ್ನತೆಗೆ ಒಳಗಾದವರಿಗೆ ಮನಃಶಾಸ್ತ್ರದ ಹಾಗೂ ಮಾತ್ರೆಗಳ ಮೂಲಕ ಚಿಕಿತ್ಸೆಯ ಪ್ರಾಮುಖ್ಯತೆ – ಈ ರೀತಿಯಲ್ಲಿ ಹಲವಾರು ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಕೇಳಲಾಯಿತು. 

ಸಭಾಂಗಣದಲ್ಲಿದ್ದ ಕುರ್ಚಿಗಳಿಗೆ ಅಂಟನ್ನು ಹಾಕಿದ್ದರೆ?

ಕಾರ್ಯಕ್ರಮವು ಮುಗಿಯುವ ಹಂತಕ್ಕೆ ಬಂದರೂ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕುಳಿತಲ್ಲಿಂದ ಕದಲುವ ಸೂಚನೆಯಿರಲಿಲ್ಲ - ಅವರಿಗಿನ್ನೂ ಸದ್ಗುರುಗಳ ಜಾಣ್ನುಡಿಗಳನ್ನು ಕೇಳುವ ಆಸೆಯಿದ್ದ ಹಾಗೆ ತೋರುತ್ತಿತ್ತು. ಸದ್ಗುರುಗಳು ಸಭಾಂಗಣದಿಂದ ಹೊರಬರುತ್ತಿರುವಾಗ, ವಿದ್ಯಾರ್ಥಿಗಳು ಅವರ ಮೇಲೆ ಮುಗಿ ಬೀಳುವುದನ್ನು ತಡೆಯಲು ಭದ್ರತಾತಂಡವು ಅವರ ಸುತ್ತ ಮಾನವ ಸರಪಳಿಯನ್ನು ರಚಿಸಬೇಕಾಯಿತು. 

ಸದ್ಗುರುಗಳು ಕಾರ್ಯಕ್ರಮದ ಮುಕ್ತಾಯದ ಹಂತದಲ್ಲಿ ಎದ್ದು ನಿಂತು ಹೊರಡಲುನುವಾದಾಗ, ವಂದಾನರ್ಪಣೆಯನ್ನು ಮಾಡಲು ಸಿದ್ಧರಾಗಿದ್ದ ಶಿಕ್ಷಕರೊಬ್ಬರು ವಿನಮ್ರವಾಗಿ ಅವರನ್ನು ಕುಳಿತುಕೊಳ್ಳಲು ಹೇಳಿದರು. ಅದಕ್ಕೆ ಸದ್ಗುರುಗಳು, ”ಯೆಸ್ ಮೇಡಮ್, ನಾನು ಮತ್ತೆ ಶಾಲೆಗೆ ಬಂದಿದ್ದೇನೆ, ಹಾಗಾಗಿ....” ಎಂದು ತಮಾಷೆ ಮಾಡಿದರು.

 

ಕೊನೆ ಘಳಿಗೆಯ ಹರಟೆ, ಸೆಲ್ಫಿ ಮತ್ತು ಚಪ್ಪಾಳೆ!  

Sadhguru interacting with students of Mount Carmel College, Bengaluru after the Youth and Truth conversation

 

ಕಾಲೇಜಿನಿಂದ ಹೊರಡುವ ಮುನ್ನ, ಕಾಲೇಜಿನ ಆಂಫಿಥಿಯೇಟರ್-ನಲ್ಲಿ, ಸಭಾಂಗಣದ ಒಳಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳೊಂದಿಗೆ ಸದ್ಗುರುಗಳು ಸ್ವಲ್ಪ ಕಾಲವನ್ನು ಕಳೆದರು. ಸದ್ಗುರುಗಳನ್ನು ನೋಡಲು, ಅವರ ಆಶೀರ್ವಾದವನ್ನು ಪಡೆಯಲು, ಅವರೊಡನೆ ಸೆಲ್ಫಿಯನ್ನು ತೆಗೆದುಕೊಳ್ಳಲು ಅಥವಾ ಅವರ ಶಾಲ್-ಅನ್ನು ಹತ್ತಿರದಿಂದ ನೋಡಲು ಎಲ್ಲರೂ ಅವರ ಸುತ್ತು ಕಿಕ್ಕಿರಿದು ಸೇರಿದರು. 

ಉತ್ಸಾಹಕ್ಕೆ ತಿರುಗಿದ ನಿರೀಕ್ಷೆ

ಕಾರ್ಯಕ್ರಮ ಮುಗಿದ ನಂತರದಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆಯು, ಸದ್ಗುರುಗಳೊಂದಿಗೆ ಯುವಜನರು ಹೇಗೆ ಸ್ಪಂದಿಸುತ್ತಾರೆಂಬುದರ ಸಾಕ್ಷಿಯಾಗಿತ್ತು. ಕಾರ್ಯಕ್ರಮ ಮುಗಿದ ನಂತರವೂ ಅವರೊಡನೆ ವೇದಿಕೆಯಲ್ಲಿದ್ದ ವಿದ್ಯಾರ್ಥಿನಿಯರಿಗೆ ಉತ್ಸಾಹವನ್ನು ಅಡಗಿಸಿಕೊಳ್ಳಲಾಗುತ್ತಿರಲಿಲ್ಲ. ಈ ಕಾರ್ಯಕ್ರಮದ ನಿರೀಕ್ಷೆಯಲ್ಲಿ ಅವರು ಕಳೆದ ಒಂದು ತಿಂಗಳಿನಿಂದ, ಸದ್ಗುರುಗಳ ಭೇಟಿಯ ಬಗ್ಗೆ ಉತ್ಸುಕರಾಗಿದ್ದು, ಕಾಲೇಜು ಬಳಗದವರ ಪ್ರಶ್ನೆಗಳನ್ನು ಸಂಗ್ರಹಿಸುತ್ತ, ಸಿದ್ಧತೆಯನ್ನು ನಡೆಸುತ್ತಿದ್ದರು. ಸದ್ಗುರುಗಳು ಹಾಗೂ ಅವರ ಮಾತುಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ, ಸತ್ಯ ಹಾಗೂ ಜೀವನವನ್ನು ಬದಲಾಯಿಸುವಂತಿದ್ದವು.

ಕಾರ್ಯಕ್ರಮವು ಮುಗಿದ ನಂತರ ಪ್ರಶ್ನೋತ್ತರವನ್ನು ನಡೆಸಿಕೊಟ್ಟ ವಿದ್ಯಾರ್ಥಿಗಳನ್ನು ಅವರ ಅನುಭವದ ಬಗ್ಗೆ ಕೇಳಿದಾಗ, “ಸದ್ಗುರುಗಳು ಬಿಂದಾಸ್”, “ಅವರು ನಮ್ಮ ಜೊತೆ ಸ್ನೇಹಪೂರ್ಣರಾಗಿದ್ದರು", “ಅವರ ಜೋಕುಗಳು ತುಂಬಾ ತಮಾಷೆಯಾಗಿದ್ದವು”, “ನಮ್ಮನ್ನು ಅವರ ಸಮಾನರಂತೆ ತಿಳಿದು ಮಾತನಾಡಿಸಿದರು”, “ನಮ್ಮ ಪ್ರಶ್ನೆಗಳು ಹಾಗೂ ಅಭಿಪ್ರಾಯಗಳನ್ನು ಅವರು ನಿರ್ಲಕ್ಷಿಸಲಿಲ್ಲ" ಎಂದು ಹೇಳಿದರು.

ಮೀಡಿಯಾದಲ್ಲಿ ಯೂತ್ ಅಂಡ್ ಟ್ರೂತ್ - ಮೌಂಟ್ ಕಾರ್ಮಲ್ ಕಾಲೇಜು

The New Indian Express ಪತ್ರಿಕೆಯು, ಯೂತ್ ಅಂಡ್ ಟ್ರೂತ್ ಕಾರ್ಯಕ್ರಮದ ಮುಂಚೆ ಮತ್ತು ನಂತರ, ಲೇಖನಗಳನ್ನು ಪ್ರಕಟಿಸಿತು.

Sadhguru Jaggi Vasudev to visit Mount Carmel

‘Reactionary feminism will not help’

ಯೂತ್ ಅಂಡ್ ಟ್ರೂತ್, ಮೌಂಟ್ ಕಾರ್ಮಲ್ ಕಾಲೇಜು - ಸದ್ಗುರುಗಳ ಕೆಲವು ಉತ್ತರಗಳನ್ನು ನೋಡಿ

 

 

 

 

 

 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ  UnplugWithSadhguru.org.

Youth and Truth Banner Image