ಆಂತರ್ಯದ ಅನ್ವೇಷಣೆಗಾಗಿ ೫ ನಿಮಿಷಗಳು - ಪಂಚಭೂತಗಳ ಶುದ್ಧೀಕರಣ "ಅಧ್ಯಾತ್ಮ ಪ್ರಕ್ರಿಯೆ ಎಂದು ಕರೆಯಲ್ಪಡುವ ಏನನ್ನೇ ಆದರೂ ನೀವು ಪ್ರಯತ್ನಿಸುವ ಮೊದಲು, ಮುಖ್ಯವಾದ ವಿಷಯವೇನೆಂದರೆ ನಮ್ಮೊಳಗಿನ ಪಂಚಭೂತಗಳನ್ನು ಸ್ಥಿರಗೊಳಿಸುವುದು" ಎಂದು ಸ್ಪಷ್ಟಪಡಿಸುತ್ತಾ, ಪಂಚಭೂತಗಳ ಶುದ್ಧಿಗಾಗಿ ಸರಳವಾದ ವಿಧಾನಗಳನ್ನೂ, ಅವುಗಳು ನಮ್ಮ ಶರೀರ ವ್ಯವಸ್ಥೆಯಲ್ಲಿ ಯಾವ ರೀತಿಯ ಪರಿವರ್ತನೆಗಳನ್ನು ಉಂಟುಮಾಡಬಲ್ಲವು ಎಂಬುದನ್ನೂ ಸದ್ಗುರುಗಳು ಇಲ್ಲಿ ತಿಳಿಸಿಕೊಡುತ್ತಾರೆ.

Panchabhutagalalli Untaaguva Doshagalige Parihaaravenu?

ಲಿಪ್ಯಂತರ:

ಸದ್ಗುರು: ಅಧ್ಯಾತ್ಮ ಬರುವುದು ಪೌರ್ವಾತ್ಯ ರಾಷ್ಟ್ರಗಳಿಂದಲ್ಲ, ನಮ್ಮೊಳಗಿನಿಂದ. ಅಧ್ಯಾತ್ಮ ಪ್ರಕ್ರಿಯೆ ಎಂದು ಕರೆಯಲ್ಪಡುವ ಏನನ್ನೇ ಆದರೂ ನೀವು ಪ್ರಯತ್ನಿಸುವ ಮೊದಲು, ಮುಖ್ಯವಾದ ವಿಷಯವೇನೆಂದರೆ ನಮ್ಮೊಳಗಿನ ಪಂಚಭೂತಗಳನ್ನು ಸ್ಥಿರಗೊಳಿಸುವುದು. ಇದನ್ನು ಯೋಗದಲ್ಲಿ ಮಹಾತತ್ತ್ವಗಳೆಂದೂ ಕರೆಯುತ್ತಾರೆ. ಈ ಶರೀರ, ಈ ಭೂಮಿ, ಮತ್ತು ಬ್ರಹ್ಮಾಂಡ - ಎಲ್ಲವೂ ಕೂಡ ಪಂಚಭೂತಗಳ ಆಟವಷ್ಟೆ. ನಮ್ಮ ಶರೀರದ ರಚನೆ ಹೇಗಿದೆ ಅಂದರೆ, ಅದರ 72 ಪ್ರತಿಶತ ಭಾಗ ನೀರು. ಸರಿಸುಮಾರು 12 ಪ್ರತಿಶತ ಭೂಮಿ. 6 ಪ್ರತಿಶತ ವಾಯು. 4 ಪ್ರತಿಶತ ಅಗ್ನಿ. ಉಳಿದದ್ದು ಆಕಾಶ.

ಈ ಪಂಚಭೂತಗಳು ನಿಮ್ಮೊಳಗೆ ಹೇಗೆ ವರ್ತಿಸುತ್ತವೆ ಎಂಬುದು ಎಲ್ಲವನ್ನೂ ನಿರ್ಧರಿಸುತ್ತದೆ.

ಭೂತ ಎಂದರೆ ಮೂಲವಸ್ತು. ಭೂತಶುದ್ಧಿ ಎಂದರೆ ಈ ಮೂಲವಸ್ತುಗಳ ದೋಷಗಳನ್ನು ತೊಡೆದು ಹಾಕುವುದು, ಅಥವಾ ಮೂಲವಸ್ತುಗಳನ್ನು ಶುದ್ಧೀಕರಿಸುವುದು. ಇದರರ್ಥ ಭೌತಿಕ ಪ್ರಕೃತಿಯಿಂದ ಮುಕ್ತರಾಗುವುದು. ಪ್ರಸ್ತುತದಲ್ಲಿ ಶಾರೀರಿಕ ಮತ್ತು ಮಾನಸಿಕ ಕ್ರಿಯೆಗಳು ಹೆಚ್ಚಿನ ಮನುಷ್ಯರ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿವೆ. ನಾವು ಶಾರೀರಿಕ ವ್ಯವಸ್ಥೆ ಎಂದು ಕರೆಯುವುದು ನಾವು ಸಂಗ್ರಹಿಸಿದಂತಹ ವಿಷಯವಷ್ಟೆ. ನಾವು ಮಾನಸಿಕ ಕ್ರಿಯೆ ಎಂದು ಕರೆಯುವುದರ ಸಂಪೂರ್ಣ ಸಂಘಟನೆಯೂ ಕೂಡ ಸಂಸ್ಕಾರಗಳ ರೂಪದಲ್ಲಿ ಸಂಗ್ರಹಸಿದಂತಹ ವಿಷಯಗಳೇ ಆಗಿವೆ. ಇವೆರಡರ ಮಧ್ಯದಲ್ಲಿ, ನೀವು ಯಾರು ಎಂಬುದು, ಅಥವಾ ನಿಮ್ಮ ಅಸ್ತಿತ್ವದ ನೈಜ ಸ್ವಭಾವವು ಸಂಪೂರ್ಣವಾಗಿ ಮುಚ್ಚಿಹೋಗಿದೆ. ನೀವು ಸದ್ಯದಲ್ಲಿ ನಿಮ್ಮ ಅನುಭವದಲ್ಲಿಲ್ಲದ ಆಯಾಮಗಳನ್ನು, ಅಧ್ಯಾತ್ಮವೆಂದು ಕರೆಯಲ್ಪಡುವ ಆಯಾಮಗಳನ್ನು, ಅನುಭವಿಸಲು ಬಯಸುವಿರಾದರೆ, ಮಾಡಬೇಕಾದ ಮೊದಲನೆಯ ವಿಷಯವೆಂದರೆ ಪಂಚಭೂತಗಳನ್ನು ಶುದ್ಧೀಕರಿಸುವುದು. ಯಾಕೆಂದರೆ, ಪಂಚಭೂತಗಳು ಶುದ್ಧವಾದಾಗ, ನಿಮಗೆ ಭೌತಿಕ, ಮಾನಸಿಕ ಮತ್ತು ನಿಮ್ಮ ನೈಜ ಸ್ವರೂಪಗಳ ನಡುವಿನ ಅಂತರ ಸ್ಪಷ್ಟವಾಗಿ ಗೋಚರಿಸುತ್ತದೆ.

ನೀರು

ಇಂದು ನೀರಿಗೆ ಜ್ಞಾಪಕಶಕ್ತಿಯಿದೆ ಎಂದು ತೋರಿಸುವ ಸಾಕಷ್ಟು ಪ್ರಮಾಣಗಳಿವೆ. ನೀರಿನ ಸುತ್ತ ನಡೆಯುವಂತಹ ಸಂಗತಿಗಳೆಲ್ಲ ಯಾವುದೋ ಒಂದು ರೀತಿಯಲ್ಲಿ ನೀರಿನ ಅಣುಗಳಲ್ಲಿ ಅಚ್ಚೊತ್ತಲ್ಪಡುತ್ತವೆ. ಅದನ್ನಿಂದು ಕಂಪ್ಯೂಟರ್ ದ್ರವವೆಂದೇ ಕರೆಯುತ್ತಿದ್ದಾರೆ. ಪಂಚಭೂತಗಳಲ್ಲಿ ನೀರು ಹೆಚ್ಚಿನ ಮಹತ್ತ್ವವನ್ನು ಪಡೆಯುತ್ತದೆ, ಯಾಕೆಂದರೆ ಶರೀರದ 72 ಪ್ರತಿಶತ ನೀರೇ ಆಗಿದೆ. ನಾವು ಸೇವಿಸುವ ನೀರಿನ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸಬೇಕು -- ಬರೀ ಶುದ್ಧತೆ, ಬ್ಯಾಕ್ಟೀರಿಯಾ ಮುಕ್ತವಾಗಿರುವುದು ಇತ್ಯಾದಿ ಅಷ್ಟೆ ಅಲ್ಲ -- ನೀರು ಹೇಗೆ ಇಡಲ್ಪಟ್ಟಿದೆ, ಯಾವ ತರದ ಪಾತ್ರೆಯಲ್ಲಿಟ್ಟಿದ್ದೀರಿ, ಅದನ್ನು ಹೇಗೆ ಸ್ಪರ್ಶಿಸುತ್ತೀರಿ, ಹೇಗೆ ಅದರೊಂದಿಗೆ ವರ್ತಿಸುತ್ತೀರಿ ಎಲ್ಲವೂ. ಯಾಕೆಂದರೆ ಇಂದು ಸಾಕಷ್ಟು ವೈಜ್ಞಾನಿಕ ಪ್ರಮಾಣಗಳಿವೆ. ಒಂದು ಯೋಚನೆ, ಭಾವನೆ, ಸ್ಪರ್ಶ, ಇವು ನೀರಿನ ಅಣುಗಳ ಸಂರಚನೆಯನ್ನು ಪರಿವರ್ತಿಸಬಲ್ಲವು, ಹಾಗೂ ನೀರು ನಿಮ್ಮ ಶರೀರದೊಳಗೆ ಹೇಗೆ ವರ್ತಿಸುತ್ತದೆ ಎಂಬುದನ್ನು ಬದಲಾಯಿಸಬಲ್ಲದು. ನಾವು ಅರ್ಥ ಮಾಡಿಕೊಳ್ಳಬೇಕು, ನಾವು ವ್ಯವಹರಿಸುತ್ತಿರುವುದು ಜೀವವನ್ನು ರಚಿಸುವ ಪದಾರ್ಥದೊಡನೆ, ಬರೀ ಒಂದು ಭೌತಿಕ ವಸ್ತುವಿನೊಂದಿಗಲ್ಲ. ನೀರು ಜೀವವೇ. ಈಗ ಅದು ನಿಮ್ಮ ಹೊರಗಿದೆ ಅಷ್ಟೆ. ಹಾಗಾಗಿ ಅದು ನಿಮ್ಮ ಶರೀರವನ್ನು ಪ್ರವೇಶಿಸುವ ಮೊದಲು ಅದರೊಂದಿಗೆ ಚೆನ್ನಾಗಿ ನಡೆದುಕೊಳ್ಳಬೇಕು.

ನೀರನ್ನು ಲೋಹದ ಪಾತ್ರೆಯಿಲ್ಲಿಡಬೇಕು. ತಾಮ್ರ ಅಥವಾ ತಾಮ್ರದ ಮಿಶ್ರಲೋಹವಾಗಿದ್ದರೆ ಒಳ್ಳೆಯದು. ಅದನ್ನು ಪ್ರತಿದಿನ ಜೈವಿಕ ಪದಾರ್ಥಗಳಿಂದ ತೊಳೆಯಿರಿ. ಪಾತ್ರೆಯ ಹತ್ತಿರ ಬೇರೆ ವಸ್ತುಗಳು ಇರಬಾರದು, ಸುತ್ತ ಸಾಕಷ್ಟು ಸ್ಥಳಾವಕಾಶವಿರಲಿ. ಅದರ ಬಳಿ ಹೋದಾಗ ಈ ಪಾತ್ರೆಯನ್ನು ಕೃತಜ್ಞತಾಭಾವದಿಂದಲೂ, ಗೌರವಾದರದಿಂದಲೂ ಕೈಗಳಲ್ಲಿ ಹಿಡಿದುಕೊಳ್ಳಿ -- ಯಾಕೆಂದರೆ ಇದು ಜೀವವನ್ನು ನಿರ್ಮಿಸುವ ಪದಾರ್ಥ -- ಅನಂತರವೇ ನೀರನ್ನು ಸೇವಿಸಿ. ನೀವು ನೋಡಬಹುದು, ಇದು ನಿಮ್ಮ ವ್ಯವಸ್ಥೆಯಲ್ಲಿ ಚಮತ್ಕಾರವನ್ನುಂಟು ಮಾಡುತ್ತದೆ. ಇದರಿಂದ ಆರೋಗ್ಯ ಮತ್ತು ಸಮತ್ವ ಸಹಜವಾಗಿಯೇ ಉಂಟಾಗುತ್ತದೆ.

ಭೂಮಿ

ನೀವು ನಡೆದಾಡುವಂತಹ ಮಣ್ಣಿಗೆ ಒಂದು ತರಹದ ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿಯಿದೆ. ಹಾಗಾಗಿ ನೀವು ಕಾಂಕ್ರೀಟ್ ಕಾಡಿನಲ್ಲಿ ವಾಸಿಸುತ್ತಿದ್ದರೂ ನೀವು ಜೀವಿಸುತ್ತಿರುವಂತಹ ಭೂಮಿಯೊಂದಿಗೆ ಸಂಪರ್ಕದಲ್ಲಿರುವುದು ಮುಖ್ಯವಾದುದು. ಹೇಗಾದರೂ ಮಾಡಿ ನೀವಿರುವಲ್ಲಿ ನೀವು ಮಣ್ಣು, ಭೂಮಿಯೊಂದಿಗೆ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಿ, ನೀವು ವಾಸಿಸುವ ಪ್ರದೇಶದಲ್ಲೇ. ಬರಿಗೈ ಮತ್ತು ಬರಿಗಾಲುಗಳು, ವಿಶೇಷವಾಗಿ ಅಂಗೈ ಮತ್ತು ಪಾದಗಳು ಭೂಮಿಯೊಂದಿಗೆ ನಿತ್ಯ ಸಂಪರ್ಕದಲ್ಲಿದ್ದರೆ, ಕನಿಷ್ಟ ಪಕ್ಷ ಕೆಲ ನಿಮಿಷಗಳ ಕಾಲ, ನಿಮ್ಮ ಶಾರೀರಿಕ ವ್ಯವಸ್ಥೆಯಲ್ಲಿ ಒಂದು ತರಹದ ಸಾಮರಸ್ಯ ಏರ್ಪಡುತ್ತದೆ. ಕೇವಲ ಭೂಮಿಯೊಂದಿಗೆ ಸಂಪರ್ಕದಲ್ಲಿರುವುದರಿಂದ. ಉದ್ಯಾನಗಳಲ್ಲಿ ಕೆಲನಿಮಿಷಗಳನ್ನು ಬರಿಗಾಲಿನಲ್ಲಿ, ಕೈಗಳಿಂದ ಮರಗಿಡಗಳನ್ನು ಮುಟ್ಟುತ್ತಾ ಕಳೆಯಿರಿ. ಯಾಕೆಂದರೆ ಇದೇ ನಿಮ್ಮ ಜೀವದ ಮೂಲಾಧಾರ. ಎಲ್ಲಾ ಜೀವಗಳೂ, ನೀವು ಮತ್ತು ಬೇರೆ ಎಲ್ಲ ಜೀವಜಂತುಗಳೂ, ಈ ಭೂಮಿಯಿಂದಲೇ ಹುಟ್ಟಿವೆ. ಅದರ ಸಂಪರ್ಕದಲ್ಲಿರಿ. ಮತ್ತು ನಿಮ್ಮ ವ್ಯವಸ್ಥೆಯನ್ನು ಸಮರಸಗೊಳಿಸಿ.

ವಾಯು

ವಾಯು ನಿಮ್ಮ ಶರೀರದ ಸಂರಚನೆಯ ಬರೀ 6 ಪ್ರತಿಶತ ಇದ್ದರೂ ಅದು ಪಂಚಭೂತಗಳಲ್ಲಿ ಅತ್ಯಂತ ಕ್ರಿಯಾಶೀಲವಾದುದು, ಮತ್ತು ಶರೀರದಲ್ಲಿ ಪ್ರತಿ ನಿಮಿಷದ ಆಗುಹೋಗುಗಳಲ್ಲೂ ಅದು ಭಾಗವಹಿಸುತ್ತದೆ. ನೀವು ಯಾವ ತರದ ಗಾಳಿಯನ್ನು ಉಸಿರಾಡುತ್ತೀರಿ ಅನ್ನೋದು ಖಂಡಿತ ಮುಖ್ಯ, ಅದು ಎಲ್ಲರಿಗೂ ಗೊತ್ತಿದೆ. ಆದರೆ ಹೇಗೆ ಉಸಿರಾಡುತ್ತೀರಿ, ಮತ್ತು ಎಷ್ಟು ಪ್ರಜ್ಞಾಪೂರ್ವಕವಾಗಿ ಉಸಿರಾಡುತ್ತೀರಿ ಎಂಬುದು ಅಷ್ಟೇ ಮುಖ್ಯ. ವಿಶೇಷವಾಗಿ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವವರು, ನೀವು ಉಸಿರಾಡುವ ಗಾಳಿಯ ಗುಣಮಟ್ಟ ನಿಮ್ಮ ಕೈಯಲ್ಲಿಲ್ಲ. ಆದ್ದರಿಂದ ಕನಿಷ್ಟ ಪಕ್ಷ ಕೆಲವು ನಿಮಿಷಗಳಾದರೂ ಪಾರ್ಕ್ ನಲ್ಲಿ ಓಡಾಡಿ, ಅಥವಾ ಕೆರೆ-ನದಿ ದಡದಲ್ಲಿ ಅಥವಾ ನಿಮಗೆ ಏನು ಲಭ್ಯವಿದೆಯೋ ಅಲ್ಲಿ. ನಿಮಗೆ ಮಕ್ಕಳಿದ್ದರೆ, ಅವರನ್ನು ತಿಂಗಳಿಗೊಮ್ಮೆಯಾದರೂ ನಗರದಿಂದ ದೂರ ಕರೆದುಕೊಂಡು ಹೋಗುವುದು ಬಹಳ ಮುಖ್ಯ. ಸಾಕಷ್ಟು ದೂರ, ಪ್ರಕೃತಿ ಒಂದು ಮಟ್ಟಿಗೆ ನಿರ್ಮಲವಾಗಿರುವಷ್ಟು. ಅಲ್ಲಿ ಅವರು ಸಣ್ಣ ಬೆಟ್ಟಗಳಿದ್ದರೆ ಹತ್ತಬಹುದು, ಅಥವಾ ಕಾಡಿನಲ್ಲಿ ಸ್ವಲ್ಪ ನಡೆದಾಡಬಹುದು, ನದಿಯಲ್ಲಿ ಈಜಾಡಬಹುದು. ಈ ರೀತಿ ನಿಸರ್ಗದೊಂದಿಗೆ ಸಂಪರ್ಕದಲ್ಲಿರುವಂತೆ ಏನೋ ಒಂದನ್ನು ಮಾಡಬಹುದು. ಇದರಿಂದ ಉಸಿರಾಟವೂ ಕೂಡ ಕ್ರಿಯಾಶೀಲಗೊಳ್ಳುತ್ತದೆ. ಇದು ಬರೀ ವ್ಯಾಯಾಮವಲ್ಲ. ಯಾಕೆಂದರೆ, ಗಾಳಿಯು ಸತತವಾಗಿ ವಿನಿಮಯವಾಗುತ್ತಿರುತ್ತದೆ, ನಿಮ್ಮ ಮತ್ತು ಹೊರಗಿನ ನಡುವೆ. ನಿಮ್ಮ ಶರೀರದಲ್ಲಿನ ಬುದ್ಧಿಶಕ್ತಿಯೇ ಉಳಿದದ್ದನ್ನು ನೋಡಿಕೊಳ್ಳುತ್ತದೆ. ಗಾಳಿಯು ಶುದ್ಧ ಮತ್ತು ಜೀವಂತವಾಗಿದೆ ಎಂದು ಗ್ರಹಿಸಿದ ತಕ್ಷಣ, ದೇಹವು ಉಸಿರಾಡುವ ರೀತಿಯು ಬದಲಾಗುತ್ತದೆ. ನೀವಿದನ್ನು ಗಮನಿಸಬಹುದು. ಗಾಳಿ ವಿನಿಮಯವಾಗುತ್ತದೆ, ನಿಮ್ಮ ವ್ಯವಸ್ಥೆಯಲ್ಲಿ ಶುದ್ಧೀಕರಣ ಉಂಟಾಗುತ್ತದೆ. ಉಸಿರಾಟವು ಗಾಳಿಯ ವಿನಿಮಯದ ಬರೀ 1 ರಿಂದ 2 ಪರ್ಸೆಂಟ್ ಅಷ್ಟೆ. ಉಳಿದದ್ದು ಬೇರೆ ವಿಧಾನಗಳಲ್ಲಿ ಆಗುತ್ತದೆ. ಹಾಗಾಗಿ ನೀವು ಶುದ್ಧ ಗಾಳಿಗೆ ನಿಮ್ಮನ್ನು ಒಡ್ಡಿಕೊಂಡಾಗ, ಸ್ವಲ್ಪ ಚಟುವಟಿಕೆಯಲ್ಲಿ ತೊಡಗಿ, ಉಸಿರಾಟವನ್ನು ಸ್ವಲ್ಪ ಕ್ರಿಯಾಶೀಲಗೊಳಿಸುವುದು ಮುಖ್ಯ. ತುಂಬ ಶ್ರಮದ ಚಟುವಟಿಕೆಯಲ್ಲಿ ತೊಡಗುವುದೇನೂ ಬೇಡ. ನಿಮ್ಮ ಉಸಿರಾಟವು ಆಳವಾಗುವಷ್ಟು ಸಾಕು. ಸಾಮಾನ್ಯಕ್ಕಿಂತ ಸ್ವಲ್ಪ ಆಳವಾಗಿರಬೇಕು ಸ್ವಲ್ಪ ಹೊತ್ತು. ವಿಶೇಷವಾಗಿ ಬೆಳೆಯುವ ಮಕ್ಕಳಿಗೆ ಇದು ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಇದು ದೇಹದ ದೃಢತೆ ಮತ್ತು ಬಲವನ್ನು ಬಹುವಾಗಿ ವರ್ಧಿಸುತ್ತದೆ. ಆದರೆ ಪ್ರತಿನಿತ್ಯ ನೀವು ಹೊರಗೆ ಹೋಗಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲೇ ನೀವು ನಾಡಿ ಶುದ್ಧಿ ಎಂಬ ಒಂದು ಸರಳ ಯೋಗದ ಅಭ್ಯಾಸವನ್ನು ಮಾಡಿ, ಉಸಿರಾಟವನ್ನು ಶುದ್ಧೀಕರಿಸಬಹುದು.

ಅಗ್ನಿ

ಅಗ್ನಿಯು ನಿಮ್ಮ ಪಂಚಭೂತ ಸಂರಚನೆಯಲ್ಲಿ 4 ಪ್ರತಿಶತವಿದೆ. ನಿಮ್ಮೊಳಗೆ ಯಾವ ತರದ ಅಗ್ನಿಯು ಸುಡುತ್ತಿದೆ? ದುರಾಸೆಯ ಅಗ್ನಿಯೇ? ದ್ವೇಷದ್ದೇ? ಅಸಮಾಧಾನದ್ದೇ? ಕೋಪದ್ದೇ? ಕಾಮದ್ದೇ? ಪ್ರೇಮದ್ದೇ? ಕರುಣೆಯದ್ದೇ? ನೀವಿದಕ್ಕೆ ಗಮನವಿತ್ತರೆ, ನಿಮ್ಮ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಗಮನವಿತ್ತಂತೆಯೇ. ನೀವೊಬ್ಬ ಸಮತೋಲನದ ಮತ್ತು ಉತ್ಸಾಹಭರಿತ ಜೀವವಾಗುವಿರಿ. ನಿಮ್ಮೊಳಗಿನ ಅಗ್ನಿಯನ್ನು ಶುದ್ಧೀಕರಿಸಲು ನೀವು ಮಾಡಬಹುದಾದ ಒಂದು ಸರಳ ವಿಷಯವೇನೆಂದರೆ ಸೂರ್ಯನ ಬೆಳಕಿಗೆ ನಿಮ್ಮನ್ನು ಪ್ರತಿನಿತ್ಯ ಒಡ್ಡಿಕೊಳ್ಳುವುದು. ಅದೃಷ್ಟವಶಾತ್ ನಿಮಗೆ ಸೂರ್ಯನ ಬೆಳಕನ್ನು ಮಲಿನ ಮಾಡಲಿಕ್ಕಾಗುವುದಿಲ್ಲ. ಉಳಿದ ಪಂಚಭೂತಗಳನ್ನು ನಾವು ಮಲಿನಗೊಳಿಸಿದ್ದೇವೆ, ಆದರೆ ಬೆಳಕು ನಿರ್ಮಲವಾಗೇ ಉಳಿದಿದೆ. ಅದರ ಆದಷ್ಟು ಪ್ರಯೋಜನವನ್ನು ಪಡೆದುಕೊಳ್ಳಿ. ನಿಮಗೆ ಬೆಂಕಿಯನ್ನು ಉಪಯೋಗಿಸಬೇಕೆಂದರೆ, ಹುಲ್ಲು ಅಥವಾ ಕಟ್ಟಿಗೆಯಂತಹ ಜೈವಿಕ ವಸ್ತುಗಳಿಂದ ಬೆಂಕಿಯನ್ನು ಮಾಡಿಕೊಳ್ಳಬಹುದು. ಅದಕ್ಕೆ ಎಣ್ಣೆ ಹಾಕದೇ, ಬೆಂಕಿಗೆ ಮುಖ ಮಾಡಿ, ಅಂಗೈ ತೆರೆದು, ಕಣ್ಣು ತೆರೆದು ಮೂರು ನಿಮಿಷ ನಿಂತುಕೊಳ್ಳಿ. ಆಮೇಲೆ ಬೆನ್ನು ಮಾಡಿ ನಿಮ್ಮ ಬೆನ್ನೆಲುಬನ್ನು ಬೆಂಕಿಯ ಶಾಖಕ್ಕೆ ಒಡ್ಡಿ ಮೂರು ನಿಮಿಷ ನಿಂತುಕೊಳ್ಳಿ. ಇದು ನಿಮ್ಮ ಕಾಂತಿಯನ್ನು ಶುದ್ಧೀಕರಿಸುತ್ತದೆ, ಮತ್ತು ನಿಮ್ಮ ವ್ಯವಸ್ಥೆಯಲ್ಲಿ ಪುನರುಜ್ಜೀವನವನ್ನುಂಟುಮಾಡುತ್ತದೆ. ಇದು ನಿಮ್ಮ ಒಳಗಿರುವ ಅಗ್ನಿಯನ್ನು ಉದ್ದೀಪನಗೊಳಿಸಿ ಅದನ್ನು ಹೊರಗಿನ ಅಗ್ನಿಗಳೊಂದಿಗೆ ಮರುಸಂಪರ್ಕಿಸುವುದಕ್ಕಾಗಿದೆ. ಇದೇ ಪೌರ್ವಾತ್ಯ ದೇಶಗಳಲ್ಲಿರುವ ಎಲ್ಲ ಅಗ್ನಿ ವಿಧಿಗಳ ಮೂಲತತ್ತ್ವ. ಬೆಂಕಿಯನ್ನು ಮಾಡಿಕೊಳ್ಳುವುದು ಸಾಧ್ಯವಿಲ್ಲದಿದ್ದರೆ, ಕನಿಷ್ಟ ಪಕ್ಷ ತರಕಾರಿ ತೈಲಗಳ ಅಥವಾ ತುಪ್ಪದ ದೀಪವನ್ನು ಹಚ್ಚಿ ಅದರ ಪಕ್ಕ ಕುಳಿತುಕೊಳ್ಳಿ. ಮೊದಲು ಮುಖಮಾಡಿ ಕುಳಿತುಕೊಳ್ಳಿ, ನಂತರ ಬೆನ್ನುಮಾಡಿ ಕುಳಿತುಕೊಳ್ಳಿ. ಇದರಿಂದ ನಿಮ್ಮೊಳಗಿನ ಅಗ್ನಿಯು ಉದ್ದೀಪನಗೊಳ್ಳುತ್ತದೆ.

ಆಕಾಶ

ಪಂಚಭೂತಗಳಲ್ಲಿ ಐದನೆಯ, ಮತ್ತು ಅತ್ಯಂತ ವಿಸ್ತೃತವಾದ ಆಯಾಮವೇ ಆಕಾಶ. ಇದಕ್ಕೆ ಒಂದು ವಿಶಿಷ್ಟವಾದ ಬುದ್ಧಿಶಕ್ತಿಯಿದೆ. ನಿಮ್ಮೊಳಗೆ ಆಕಾಶದ ಬುದ್ಧಿಶಕ್ತಿಯು ಹೇಗೆ ನಡೆದುಕೊಳ್ಳುತ್ತದೆ ಎಂಬುದು ನಿಮ್ಮ ಜೀವನದ ಗುಣಲಕ್ಷಣವನ್ನು ನಿರ್ಧರಿಸುತ್ತದೆ. ನಿಮ್ಮ ಜೀವನದ ಗುಣಲಕ್ಷಣ, ಗುಣಮಟ್ಟ ಮತ್ತು ಶಕ್ತಿಯು ಪ್ರಧಾನವಾಗಿ ನಿಮಗೆ ಆಕಾಶದ ಬುದ್ಧಿಶಕ್ತಿಯೊಂದಿಗೆ ಎಷ್ಟು ಸಂಪರ್ಕವಿದೆ ಎಂಬುದರಿಂದ ನಿರ್ಧರಿತವಾಗುತ್ತದೆ. ನಾನು ಹೇಳಿದಂತೆ ಇದು ಪಂಚಭೂತಗಳಲ್ಲಿ ಅತ್ಯಂತ ವಿಸ್ತೃತವಾದದ್ದು. ಅಂದರೆ, ಅದಕ್ಕೆ ಮಿತಿಯಿಲ್ಲ. ನೀರಿಗೆ ಮಿತಿಯಿದೆ, ಗಾಳಿಗೆ ಮಿತಿಯಿದೆ, ಭೂಮಿಗಿದೆ, ಅಗ್ನಿಗಿದೆ. ಆದರೆ ಆಕಾಶದ ಆಯಾಮವು ಮಿತಿಯಿಲ್ಲದ ಒಂದು ಸಾಧ್ಯತೆ. ಆದ್ದರಿಂದ ಇದರೊಂದಿಗೆ ನೀವು ಸಂಪರ್ಕವನ್ನು ಪಡೆದರೆ, ನಿಮ್ಮ ಗ್ರಹಣ ಮತ್ತು ಬುದ್ಧಿಶಕ್ತಿಗಳು ಮಿತಿಯಿಲ್ಲದೆ ಬೆಳೆಯಬಲ್ಲವು.

ಆಕಾಶದೊಂದಿಗೆ ಸಂಪರ್ಕವನ್ನು ಸಾಧಿಸಲು ನೀವು ಮಾಡಬಹುದಾದ ಒಂದು ಸರಳ ಪ್ರಕ್ರಿಯೆಯೆಂದರೆ, ಸೂರ್ಯೋದಯದ ನಂತರ, ಸೂರ್ಯನು 30 ಯನ್ನು ದಾಟುವ ಮುನ್ನ, ಮೇಲೆ ಆಕಾಶದೆಡೆಗೆ ನೋಡಿ ನಿಮ್ಮನ್ನು ಮತ್ತು ಭೂಮಿಯನ್ನು ಸುಸ್ಥಾನದಲ್ಲಿ ಧರಿಸಿರುವುದಕ್ಕಾಗಿ ಆಕಾಶಕ್ಕೆ ತಲೆಬಾಗಿ ನಮಸ್ಕರಿಸಿ. ಸೂರ್ಯನು 30 ಯನ್ನು ದಾಟಿದ ನಂತರ ಯಾವಾಗಾದರೂ ಒಮ್ಮೆ ಮೇಲ್ನೋಡಿ ಮತ್ತೆ ತಲೆಬಾಗಿರಿ. ಸೂರ್ಯಾಸ್ತವಾಗಿ 40 ನಿಮಿಷಗಳ ಒಳಗೆ ಮೇಲ್ನೋಡಿ ಮತ್ತೊಮ್ಮೆ ತಲೆಬಾಗಿರಿ. ನೀವೇನೂ ಮೇಲಿರುವ ಕಲ್ಪಿತ ದೇವತೆಗಳಿಗೆ ತಲೆಬಾಗುತ್ತಿಲ್ಲ. ಸುತ್ತಲಿರುವ ಆಕಾಶಕ್ಕಷ್ಟೆ. ಅದು ನಮ್ಮನ್ನೂ ಎಲ್ಲವನ್ನೂ ಸುಸ್ಥಾನದಲ್ಲಿ ಧರಿಸಿದೆ. ಆಕಾಶವು ನಿಮ್ಮ ಪ್ರಾಣಶಕ್ತಿಗಳೊಂದಿಗೆ ಸಹಕರಿಸುವಂತೆ ನೀವು ಮಾಡಿದರೆ, ಜೀವನವು ಚಮತ್ಕಾರವೆನಿಸುವಂತೆ ನಡೆಯುವುದು. ನೀವು ಸಾಧ್ಯವೆಂದು ಯಾವತ್ತೂ ಅಂದುಕೊಳ್ಳದಿದ್ದಂತಹ ಬುದ್ಧಿಶಕ್ತಿಯು ನಿಮ್ಮದಾಗುವುದು.