ಸದ್ಗುರುಗಳು ನಿಶ್ಚಲತೆ ಹಾಗೂ ಚಲನೆಯ ಸ್ವರೂಪದ ಬಗ್ಗೆ ಇಲ್ಲಿ ವಿವರಿಸುತ್ತಾರೆ. ಚಲಿಸುವ ಎಲ್ಲವನ್ನೂ ಅಂತಿಮವಾಗಿ ನಿಲುಗಡೆಗೆ ತರಲಾಗುತ್ತದೆ, ಆದರೆ ಅಚಲವಾಗಿರುವುದು ಸದಾಕಾಲಕ್ಕೂ ಹಾಗೆಯೇ ಇರುತ್ತದೆ. ಧ್ಯಾನವು ಈ ನಿಶ್ಚಲತೆಯ ಕಡೆಗೆ ಸಾಗಲು ಒಂದು ವಿಧಾನವಾಗಿದೆ. ಇಂದು ಮನುಷ್ಯ ಅಸ್ವಸ್ಥನಾಗಿರುವುದು ಅವನಿಗೆ ನಿಶ್ಚಲವಾಗಿರುವುದು ಹೇಗೆಂದು ತಿಳಿದಿಲ್ಲದ ಕಾರಣಕ್ಕಾಗಿಯೇ.


ಸದ್ಗುರು: ಈ ವಿಶ್ವದಲ್ಲಿ, ಚಲಿಸುವಂತಹ ಎಲ್ಲವನ್ನೂ ಅಂತಿಮವಾಗಿ ಹೇಗಿದ್ದರೂ ನಿಲುಗಡೆಗೆ ತರಲಾಗುತ್ತದೆ, ಆದರೆ ನಿಶ್ಚಲವಾಗಿ ಇರುವಂತದ್ದು ಸದಾಕಾಲಕ್ಕೂ ಹಾಗೆಯೇ ಇರುತ್ತದೆ. ಅಸ್ತಿತ್ವದಲ್ಲಿನ ಯಾವುದೇ ಚಲನೆ ಶಾಶ್ವತವಾದುದಲ್ಲ. ಕೆಲವು ವಿಷಯಗಳು ದೀರ್ಘಕಾಲದವರೆಗೆ ಸಕ್ರಿಯವಾಗಿರಬಹುದು ಆದರೆ ಎಂದಿಗೂ ಶಾಶ್ವತವಾಗಲ್ಲ. ಚಲಿಸುವಂತದ್ದೆಲ್ಲವೂ ತಮ್ಮ ಚಲನೆಯ ಶಕ್ತಿಯನ್ನು ಎಂದಾದರೂ ಬರಿದುಮಾಡಿಕೊಂಡು ನಿಂತುಹೋಗುತ್ತವೆ, ಆದರೆ ನಿಶ್ಚಲವಾಗಿರುವಂತದ್ದು ಎಂದೆಂದಿಗೂ ಹಾಗೇ ಇರುತ್ತದೆ. ಎಲ್ಲೆಡೆ ಜನಪ್ರಿಯವಾಗಿರುವ, ಮತ್ತು ನಾವು ಧ್ಯಾನವೆಂದು ಕರೆಯುವ ಪ್ರಕ್ರಿಯೆಯು ಆ ಸ್ಥಿರತೆಯ ಕಡೆ ಸಾಗುವುದಕ್ಕೇ ಆಗಿದೆ. ಧ್ಯಾನವು ನಾವು ಅಸ್ತಿತ್ವದ ಜೀವಾಳದಂತಾಗುವ ಸಲುವಾಗಿದೆ. ನೀವು ಹಾಗಾಗಲು ಶ್ರಮಿಸಬೇಕು ಎಂದಲ್ಲ. ಇದು ನೀವು ಬುದ್ಧಿಯಿಂದ ಭೇದಿಸುವಂತದ್ದಲ್ಲ. ಇದು ನೀವು ಮಾಡುವಂತಹ ವಿಷಯವಲ್ಲ, ಏಕೆಂದರೆ ಏನನ್ನಾದರೂ ಮಾಡುವುದೆಂದರೆ ಅದು ಚಲನೆ. ಧ್ಯಾನವೆಂದರೆ ನೀವು ಮೂಲಕ್ಕೆ ಹಿಂದಿರುಗುವುದು ಎಂದರ್ಥ, ಏಕೆಂದರೆ ಆ ನಿಶ್ಚಲವಾದ ಮೂಲದಿಂದಲೇ ಚಲನೆಯು ಹುಟ್ಟಿಕೊಂಡಿರುವುದು, ಆ ನಿಶ್ಚಲವಾದ ಮೂಲದಿಂದಲೇ ಮೇಲ್ಪದರವು ಚಲನೆಯ ಸ್ಥಿತಿಯಲ್ಲಿರುವುದು.

ಮೇಲ್ನೋಟದಲ್ಲಿ ಹಲವಾರು ಬಗೆಯ ಕ್ರಿಯೆಗಳು, ಅನೇಕ ವಿಧವಾದ ಬಣ್ಣಗಳು, ಹಲವು ರೀತಿಯ ತರಂಗಗಳಿವೆ. ಇವು ನಿಶ್ಚಲತೆಗೆ ವಿರುದ್ಧವಾದವಲ್ಲ. ನೀವು ಜೀವನವೆಂದು ಕರೆಯುವ ಹಾಗೂ ತಿಳಿದಿರುವ ಎಲ್ಲವೂ ಸಹ ಕೇವಲ ಮೇಲ್ಮೈಯ ತರಂಗಗಳಷ್ಟೆ, ಆದರೆ ಒಮ್ಮೆ ನೀವು ನಿಶ್ಚಲತೆಯ ರುಚಿಯನ್ನು ಕಂಡುಕೊಂಡರೆ, ನೀವು ಮೇಲ್ಗಡೆ ಆಡಲು ಬಯಸಿದರೆ ಆಡಬಹುದು; ಇಲ್ಲದಿದ್ದರೆ ನಿಶ್ಚಲತೆಯ ಮಡಿಲಿಗೆ ಮರಳಬಹುದು. ನಿಮಗೆ ಜೀವನದ ತಿರುಳು ತಿಳಿದಿಲ್ಲದಿದ್ದರೆ, ನೀವು ಆ ನಿಶ್ಚಲ ತಿರುಳಿನ ರುಚಿಯನ್ನೆಂದಿಗೂ ಸವಿಯದೇ ಇದ್ದರೆ, ನಿಮ್ಮ ಜೀವನವು ನಿರಂತರವಾಗಿ ಒಂದು ರೀತಿಯ ಅನಿಯಂತ್ರಿತ ಚಲನೆಯಲ್ಲಿರುತ್ತದೆ. ನನ್ನನ್ನು ನಂಬಿ, ನಿಮ್ಮ ಜೀವನವು ಇದೀಗ ಎಷ್ಟೇ ರೋಮಾಂಚನಕಾರಿ ಎಂದು ನಿಮಗನಿಸಿದರೂ, ಒಂದು ದಿನ ನೀವು ಅದರಿಂದ ಬೇಸತ್ತು ಹೋಗುತ್ತೀರಿ. ನೀವು ಬೇಸತ್ತುಹೋದ ಕಾರಣ ನೀವು ಜೀವನದಿಂದ ದೂರಾಗದೇ ಇರಲಿ ಎಂದು ನಾನು ಆಶಿಸುತ್ತೇನೆ. ಜೀವನದಿಂದ ಮುಕ್ತರಾಗಬೇಕಾಗಿರುವುದು ಜೀವನದ ಪ್ರಕ್ರಿಯೆಯಿಂದ ನೀವು ಮಾಗಿ ಹಣ್ಣಾಗಿದ್ದರೆ. ಒಂದು ಹಣ್ಣು ಚೆನ್ನಾಗಿ ಮಾಗಿದ ನಂತರವೇ ಮರದಿಂದ ಕೆಳಕ್ಕೆ ಬೀಳಬೇಕೇ ಹೊರತು ಬೇಸತ್ತು ಉದುರಿಹೋಗಬಾರದು; ಏಕೆಂದರೆ ಹಣ್ಣು ಪಕ್ವವಾದಾಗ ಅದರ ಜೊತೆ ಸವಿಯೂ ಬರುತ್ತದೆ, ಮತ್ತು ಅದರ ಜೊತೆ ಹೊಸ ಸಾಧ್ಯತೆಯೂ ಸಹ ಬರುತ್ತದೆ. ನೀವು ಜೀವನದಿಂದ ಬೇಸತ್ತು ಬಿದ್ದುಹೋದರೆ, ಅದು ಜೀವನದಿಂದ ಮುಕ್ತವಾಗುವ ಸರಿಯಾದ ಮಾರ್ಗವಲ್ಲ.

ಹಾಗಾಗಿ ಧ್ಯಾನವು ಒಂದು ಆಯ್ಕೆಯಲ್ಲ, ಮತ್ತದು ಒಬ್ಬರ ಜೀವನದಲ್ಲಿ ಮಾಡಬಹುದಾದ ರಂಜನೀಯ ವಿಷಯವಲ್ಲ. ನಿಮಗೆ ನಿಶ್ಚಲವಾಗಿರುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ನೀವು ಕೇವಲ ಅಸ್ವಸ್ಥರಾಗಿರಬಹುದು ಅಷ್ಟೆ. ಬೇರೆ ದಾರಿಯೇ ಇಲ್ಲ. ನಿಮ್ಮ ಅನಾರೋಗ್ಯಕ್ಕೆ ವಿವಿಧ ಹೆಸರುಗಳನ್ನು ನೀವು ಇಟ್ಟುಕೊಂಡಿರಬಹುದು. ನಿಮಗಿದು ಗೊತ್ತೇ? 17 ನೇ ಶತಮಾನದಲ್ಲಿ ಕ್ಷಯರೋಗವನ್ನು ಹೊಂದುವುದು ಇಂಗ್ಲೆಂಡ್‌ನಲ್ಲಿ ಫ್ಯಾಶನ್ ಆಗಿತ್ತು? ನಿಜವಾಗಿಯೂ! ಅದೇ ರೀತಿ, ಇಂದು ಇತರ ಅನೇಕ ಕಾಯಿಲೆಗಳನ್ನು ಹೊಂದಿರುವುದು ಫ್ಯಾಶನ್ ಆಗಿಹೋಗಿದೆ. ಅದು ಎಷ್ಟೇ ನೋವು ಮತ್ತು ಯಾತನೆಯನ್ನು ಕೊಟ್ಟರೂ ಅದು ಫ್ಯಾಶನ್ ಆಗಿಬಿಟ್ಟಿದೆ. ಹಾಗೆಂದ ಮಾತ್ರಕ್ಕೆ ಖಾಯಿಲೆಗಳು ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ನಿಮಗಿರುವ ಆಯ್ಕೆಗಳು ಇಷ್ಟೆ – ಒಂದೋ ನೀವು ನಿಶ್ಚಲವಾಗಿರುವುದನ್ನು ಕಲಿಯುವುದು ಅಥವಾ ನೀವು ಒಂದಲ್ಲಾ ಒಂದು ರೀತಿಯ ಅನಾರೋಗ್ಯದಿಂದಿರುವುದು. ಒಬ್ಬ ಮನುಷ್ಯನಿಗೆ ನಿಶ್ಚಲವಾಗಿರುವುದು ಹೇಗೆಂದು ತಿಳಿದಿಲ್ಲದ ಕಾರಣ ಅವನು ರೋಗಗ್ರಸ್ಥನಾಗಿದ್ದಾನೆ. ಅವನಿಗೆ ನಿಶ್ಚಲವಾಗಿರುವುದು ಹೇಗೆಂದು ತಿಳಿದಿದ್ದರೆ, ದೇಹವು ಕೊಳೆಯುತ್ತಿದ್ದರೂ ಸಹ ಅವನು ಅಸ್ವಸ್ಥನಾಗಿರುವುದಿಲ್ಲ. ಆದ್ದರಿಂದ ನಿಶ್ಚಲವಾಗಿರುವುದು ನೀವು ಮಾಡಬಹುದಾದ ಒಂದು ಮೋಹಕವಾದ ಆಯ್ಕೆಯಲ್ಲ. ಅದು ಜೀವನದ ಮೂಲಭೂತ ಅಗತ್ಯತೆ.

ನಾವು ಜೀವನ ಮತ್ತು ಜೀವನದ ಪ್ರಕ್ರಿಯೆಯನ್ನು ಹತ್ತಿರದಿಂದ ಗಮನಿಸಿದರೆ, ಅದರೊಳಗೆ ಆಳವಾಗಿ ಇಳಿಯುವುದು ಒಂದು ನೈಸರ್ಗಿಕವಾದ ಪ್ರಕ್ರಿಯೆಯಾಗುತ್ತದೆ, ಮತ್ತು ಅದರ ಮೂಲವನ್ನು ಸ್ಪರ್ಶಿಸುವುದೇ ಯಶಸ್ಸು. ನಿಮಗೆ ವೈಫಲ್ಯವೇ ಜೀವನದ ಆದರ್ಶವಾಗಿದ್ದರೆ, ವೈಫಲ್ಯವು ಫ್ಯಾಶನ್ ಆಗಿದ್ದರೆ, ನೀವು ಜೀವನವನ್ನು ನಡೆಸದೇ ಇರುವುದೇ ಉತ್ತಮ. ಹಾಗಿದ್ದಾಗ ಅದನ್ನು ಮುನ್ನೆಡೆಸುವುದು ಯೋಗ್ಯವಾಗಿರುವುದಿಲ್ಲ; ಏಕೆಂದರೆ ಎಲ್ಲವೂ ಕೂಡ, ಒಂದು ಸಣ್ಣ ಇರುವೆಯೂ ಕೂಡ, ತನ್ನ ಜೀವನದಲ್ಲಿ ಅದರದ್ದೇ ಆದ ತಿಳುವಳಿಕೆಯ ಪ್ರಕಾರ ಯಶಸ್ವಿಯಾಗಲು ಪ್ರಯತ್ನಿಸುತ್ತಿದೆ. ಇಲ್ಲಿ ಸೋಲನ್ನು ಹುಡುಕುತ್ತಿರುವ ಯಾವುದೇ ಮನುಷ್ಯನಿಲ್ಲ. ತಾನು ಏನಾಗಿರುವನೋ ಅದೆಲ್ಲದಕ್ಕೂ ಸಂಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಂಡಾಗ ಮಾತ್ರವೇ ಒಬ್ಬ ಮನುಷ್ಯ ಯಶಸ್ವಿಯಾಗುತ್ತಾನೆ ಮತ್ತು ಅವನು ಧ್ಯಾನಸ್ಥನಾಗದೆಯೇ ಅದೆಂದಿಗೂ ಸಂಭವಿಸುವುದಿಲ್ಲ. ನಾನು ಧ್ಯಾನಸ್ಥನಾಗುವುದು ಎಂದು ಹೇಳಿದಾಗ ಅದು ಅವಶ್ಯವಾಗಿ ಒಂದು ಸಂಘಟಿತವಾದ, ಸೂಚನೆಗಳಿಂದ ಕೂಡಿದ ಧ್ಯಾನ ಪ್ರಕ್ರಿಯೆಯೇ ಆಗಿರಬೇಕು ಎಂದು ಹೇಳುತ್ತಿಲ್ಲ. ಇಲ್ಲಿ ಮುಖ್ಯವಾದ ವಿಷಯವೆಂದರೆ, ನೀವು ಧ್ಯಾನಸ್ಥರಾಗಬೇಕು ಎನ್ನುವುದು. ಇಲ್ಲದೇ ಹೋದರೆ ನೀವು ನಿಮ್ಮ ಅಸ್ತಿತ್ವದ ಸ್ವರೂಪವನ್ನೆಂದಿಗೂ ತಿಳಿಯುವುದಿಲ್ಲ. ನೀವು ಯಾರೆಂಬುದರ ಸ್ವರೂಪವೇ ನಿಮಗೆ ತಿಳಿಯದಿದ್ದರೆ, ಅದಕ್ಕೆ ಸಂಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.