ಆದಿಯೋಗಿ ಮತ್ತು ಆದಿಗುರುವಾದ ಶಿವನು, ಅತಿಶ್ರೇಷ್ಠವಾದ ಜ಼ೆನ್ ಗುರುವೂ ಹೌದು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ಶಿವನು ಸೃಷ್ಟಿಯ ಕಾರ್ಯವಿಧಾನವನ್ನು ಹೇಗೆ ವ್ಯಾಖ್ಯಾನಿಸಿದನು ಹಾಗೂ ಮನುಷ್ಯರು ತಮ್ಮ ಪರಮ ಮುಕ್ತಿಯನ್ನು ಹೊಂದಬಹುದಾದ 112 ದಾರಿಗಳನ್ನು ಅವನು ಹೇಗೆ ಅನ್ವೇಷಿಸಿದನು ಎಂಬ ಕಥೆಯನ್ನು ಅವರಿಲ್ಲಿ ಹೇಳುತ್ತಾರೆ.

Full Transcript:

ಪ್ರಶ್ನೆ : ಸದ್ಗುರು, ನೀವು ಶಿವನಿಗೆ ಅತಿಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೀರಿ.  ಯೇಸುಕ್ರಿಸ್ತ, ಬುದ್ಧ, ಅಥವಾ ಜ಼ೆನ್ ಗುರುಗಳು ತಮ್ಮ ಬೋಧನೆಗಳಲ್ಲಿ ಶಿವನ ಕುರಿತಾಗಿ ಪ್ರಸ್ತಾಪಿಸಿಲ್ಲ ಅಥವಾ ಉಪಯೋಗಿಸಿಕೊಂಡಿಲ್ಲ ಏಕೆ?

ಸದ್ಗುರು : ಈ ಪ್ರಶ್ನೆಗಳು ಮತ್ತು ಆಲೋಚನೆಗಳು ಸಂಘಟಿತ ಮತಧರ್ಮಗಳ ಹಿನ್ನೆಲೆಯಲ್ಲಿ ಬೆಳೆದ ಮನಸ್ಥಿತಿಯಿಂದ ಬರುತ್ತಿವೆ.  ನಾವು ಶಿವ ಮತ್ತು ಇತರರ ನಡುವೆ ಭೇದವನ್ನು ಕಲ್ಪಿಸುವ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ನಾವು ಶಿವ ಎಂದು ಏನನ್ನು ಕರೆಯುತ್ತೇವೆಯೋ ಅದು ನೀವು ಹೇಳುವ ಈ ಎಲ್ಲಾ ಸಂಗತಿಗಳನ್ನೂ ಸಹ ಒಳಗೊಂಡಿದೆ. ನೀವು ಹೇಳುತ್ತಿರುವವರೆಲ್ಲಾ ಕೇವಲ ಸೃಷ್ಟಿಯ ಒಂದು ಸಣ್ಣ ಆಯಾಮವನ್ನು ತಿಳಿದುಕೊಂಡು, ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿ ಪ್ರಸಿದ್ಧರಾದರು. ನಾನು ಅವರನ್ನು ಅವಗಣನೆ ಮಾಡುತ್ತಿಲ್ಲ; ಅವರೆಲ್ಲರೂ ಮನುಕುಲಕ್ಕೆ ಮಹತ್ತರವಾದ ಸೇವೆ ಸಲ್ಲಿಸಿದ ಮಹಾನುಭಾವರು. ಆದರೆ ಗ್ರಹಣಶಕ್ತಿಯ ದೃಷ್ಟಿಯಿಂದ ಹೇಳುವುದಾದರೆ, ಶಿವನಿಗೆ ಸಮಾನಾದವರು ಮತ್ತೊಬ್ಬರಿಲ್ಲ. ನಾನು ಬೆಲೆಕೊಡುವುದು ಗ್ರಹಣಶಕ್ತಿಗೆ ಮಾತ್ರ ಮತ್ತು ಅದಕ್ಕೆ ಮಾತ್ರ ನಾವು ಬೆಲೆಕೊಡಬೇಕಾಗಿರುವುದು. ಇನ್ನುಳಿದದ್ದನ್ನು ಸೃಷ್ಟಿಸಬಹುದು, ಅವೆಲ್ಲ ಕೇವಲ ರೆಕ್ಕೆ ಪುಕ್ಕಗಳಷ್ಟೆ.

ಈಗ ನೀವು ಜ಼ೆನ್‌ನ ಬಗ್ಗೆ ಮಾತನಾಡುತ್ತಿದ್ದೀರಿ. ಶಿವನಿಗಿಂತ ದೊಡ್ಡ ಜ಼ೆನ್ ಗುರು ಯಾರಿದ್ದಾರೆ? ನೀವು ಗ್ಯುಟಿ ಎಂಬ ಜ಼ೆನ್ ಗುರುವಿನ ಬಗ್ಗೆ ಕೇಳಿದ್ದೀರಾ? ಗ್ಯುಟಿ ಯಾವಾಗಲೂ ತಮ್ಮ ತೋರು ಬೆರಳನ್ನು ತೋರಿಸುತ್ತಾ ಮಾತನಾಡುತ್ತಿದ್ದರು, ಜನರು ಅದನ್ನು ನೋಡಿ ‘ಅವರೇಕೆ ನಮಗೆ ತಮ್ಮ ಬೆರಳನ್ನು ತೋರಿಸುತ್ತಿದ್ದಾರೆ?’ ಎಂದು ಯೋಚಿಸುತ್ತಿದ್ದರು. ವಿಷಯವೇನೆಂದರೆ, ಅವರು ಎಲ್ಲವೂ ಒಂದೇ ಎಂಬ ವಿಷಯವನ್ನು ಸೂಚಿಸುತ್ತಿದ್ದರು. ಅದನ್ನು ಬಿಟ್ಟು ಇನ್ಯಾವ ಮಾತುಗಳೂ ಮುಖ್ಯವಲ್ಲ, ಅದೇ ಅವರ ಬೋಧನೆಯಾಗಿತ್ತು. ಅವರ ಮಠದಲ್ಲೊಬ್ಬ ಸಣ್ಣ ಹುಡುಗನಿದ್ದ - ಬೌದ್ಧ ಮತ್ತು ಜ಼ೆನ್ ಆಶ್ರಮಗಳಲ್ಲಿ ನಾಲ್ಕು, ಐದು ವರ್ಷ ವಯಸ್ಸಿನ ಸಣ್ಣ ಮಕ್ಕಳು ಸನ್ಯಾಸಿಗಳಾಗಿರುತ್ತಾರೆ. ಹಾಗಾಗಿ, ಆಶ್ರಮದಲ್ಲಿ ಬೆಳೆಯುತ್ತಿದ್ದ ಆ ಸಣ್ಣ ಹುಡುಗ ಗ್ಯುಟಿ ಅವರನ್ನು ನೋಡಿ ತಾನೂ ಹಾಗೆಯೇ ಮಾಡಲು ಪ್ರಾರಂಭಿಸಿದ. ಯಾರಾದರು ಏನಾದರೂ ಹೇಳಿದರೆ, ಅವನು ಅವನ ಬೆರಳನ್ನು ತೋರಿಸಿಕೊಂಡು ಓಡಾಡುತ್ತಿದ್ದ. ಗ್ಯುಟಿ ಇದನ್ನೆಲ್ಲಾ ನೋಡುತ್ತಿದ್ದರು. ಅವರು ಆ ಹುಡುಗನಿಗೆ ಹದಿನಾರು ವರ್ಷವಾಗುವವರೆಗೆ ಕಾದರು. ಒಂದು ದಿನ ಅವರು ಆ ಹುಡುಗನನ್ನು ಕರೆದು ತಮ್ಮ ಬೆರಳನ್ನು ತೋರಿಸಿದರು, ತಕ್ಷಣವೇ ಆ ಹುಡುಗನೂ ಹಾಗೆಯೇ ಮಾಡಿದ, ಏಕೆಂದರೆ ಅವನದನ್ನು ಎಲ್ಲಾ ಕಡೆ ಮಾಡುತ್ತಿದ್ದ, ಅವನಿಗದೊಂದು ಅಭ್ಯಾಸವಾಗಿಬಿಟ್ಟಿತ್ತು. ಆಗ ಗ್ಯುಟಿ ಒಂದು ಚಾಕುವನ್ನು ತೆಗೆದುಕೊಂಡು ಆ ಹುಡುಗನ ಬೆರಳನ್ನು ಕತ್ತರಿಸಿಬಿಟ್ಟರು, ಮತ್ತು ಅವನಿಗೆ ಜ್ಞಾನೋದಯವಾಯಿತು ಎಂದು ಹೇಳಲಾಗುತ್ತದೆ. ಬೆರಳನ್ನು ತೋರಿಸುವುದರ ಅರ್ಥ ಎಲ್ಲಾ ಒಂದೇ ಎನ್ನುವುದನ್ನು ಸೂಚಿಸುವುದಲ್ಲ, ಬದಲಾಗಿ ಶೂನ್ಯವನ್ನು ಸೂಚಿಸುವುದಾಗಿದೆ ಎಂಬುದು ಅವನಿಗೆ ಆ ಕ್ಷಣದಲ್ಲಿ ಥಟ್ಟನೆ ಮನದಟ್ಟಾಯಿತು.

ಆದರೆ, ಶಿವ ಬಹಳ ಹಿಂದೆಯೇ ಇದನ್ನೂ ಮೀರಿದ್ದ.  ಅವನು ಎಲ್ಲಿಂದಲೋ ಬಂದವನಾಗಿದ್ದು, ತನ್ನ ಬಳಿ ಯಾವಾಗಲೂ ಒಂದು ತ್ರಿಶೂಲವನ್ನು ಹೊಂದಿರುತ್ತಿದ್ದ. ನಮ್ಮಲ್ಲಿ ಮೂರು ಆಯಾಮಗಳಿವೆ ಎಂಬುದನ್ನು ಜನರಿಗೆ ತಿಳಿಸಲು ಅವನು ಯಾವಾಗಲೂ ತ್ರಿಶೂಲವನ್ನು ಹಿಡಿದಿರುತ್ತಿದ್ದ – ಒಂದು ನೀವು, ಇನ್ನೊಂದು ನಿಮ್ಮ ಸ್ವಭಾವ, ಮತ್ತೊಂದು ನಿಮಗೆ ತಿಳಿದಿರುವ ಮತ್ತು ತಿಳಿಯದಿರುವ ಸಂಗತಿಗಳು. ನಿಮಗೆ ಗೊತ್ತಿರದ ಸಂಗತಿಗಳೇ ನಿಮ್ಮನ್ನು ಆಳುತ್ತವೆಯೇ ವಿನಃ ಗೊತ್ತಿರುವ ಸಂಗತಿಗಳಲ್ಲ. ಒಮ್ಮೆ ಹೀಗಾಯಿತು: ಬಹಳ ಕಾಲದ ವಿರಾಮದ ನಂತರ, ಒಂದು ದಿನ ಶಿವ ತನ್ನ ಮನೆಯ ಕಡೆ ಹೋದ. ಅವನು ತನ್ನ ಮಗನನ್ನು ನೋಡಿರಲಿಲ್ಲ. ಅವನಿಗಾಗಲೇ ಹತ್ತು-ಹನ್ನೊಂದು ವರ್ಷ ವಯಸ್ಸಾಗಿತ್ತು. ಶಿವ ಬಂದಾಗ, ಆ ಹುಡುಗ ಒಂದು ತ್ರಿಶೂಲವನ್ನು ಹಿಡಿದುಕೊಂಡಿದ್ದ ಮತ್ತು ಅದನ್ನು ಬಳಸಿ ಶಿವನನ್ನು ತಡೆಯಲು ಅವನು ಪ್ರಯತ್ನಿಸಿದ. ಶಿವ ಆ ಹುಡುಗನ ತ್ರಿಶೂಲದ ಬದಲಾಗಿ ಅವನ ತಲೆಯನ್ನೇ ಕತ್ತರಿಸಿಬಿಟ್ಟ. ಆನಂತರ ಏನೇನೋ ನಾಟಕ ನಡೆಯಿತು, ಮತ್ತು ಅವನು ತನ್ನ ಒಬ್ಬ ಗಣನ ತಲೆಯನ್ನು ತೆಗೆದು ಆ ಹುಡುಗನ ಮುಂಡದ ಮೇಲೆ ಜೋಡಿಸಿದ. ಆ ಹುಡುಗ ಮುಂದೆ ಒಬ್ಬ ಅಪ್ರತಿಮ ಬುದ್ಧಿಶಾಲಿಯಾದ. ನಮ್ಮಲ್ಲಿ ಈಗಲೂ ಸಹ ಜನ ವಿದ್ಯಾಭ್ಯಾಸವನ್ನು ಪ್ರಾರಂಭಿಸುವಾಗ ಅಥವಾ ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ ಆ ಹುಡುಗನನ್ನು ಮೊದಲು ಪೂಜಿಸುತ್ತಾರೆ. ಗಣದ ತಲೆಯನ್ನು ಹೊಂದಿದವನಾದ್ದರಿಂದ ಅವನ ಹೆಸರು ಗಣೇಶ ಎಂದಾಗಬೇಕಿತ್ತು, ಆದರೆ ಜನ ಅವನಿಗೆ ಆನೆಯ ತಲೆಯನ್ನಿರಿಸಿ, ಅವನನ್ನು ಗಜೇಶ ಮಾಡಿಬಿಟ್ಟಿದ್ದಾರೆ. ಅದೇನೇ ಇರಲಿ, ಅವನು ಬುದ್ಧಿ ಮತ್ತು ಪ್ರತಿಭೆಯ ಸ್ವರೂಪವೇ ಆಗಿಹೋದ. ಅವನಿಗೆ ತಿಳಿಯದ್ದು ಅಸ್ತಿತ್ವದಲ್ಲಿ ಏನೂ ಇಲ್ಲವೆಂದು ಹೇಳುತ್ತಾರೆ.

ಹಾಗಾಗಿ, ಜ಼ೆನ್‌ ತರಹದ ಮೊದಲ ಕಾರ್ಯವೆಸಗಿದ್ದು ಶಿವನೇ. ನೀವು ಜಗತ್ತಿನ ಬಗ್ಗೆ ಏನೇ ಮಾತನಾಡಿದರೂ, ಯಾವುದೂ ಶಿವನ ಜೀವನದಿಂದ ಹೊರತಾಗಿಲ್ಲ. ಅವನು ಅತ್ಯಂತ ಸಂಕೀರ್ಣ ಮತ್ತು ಪರಿಪೂರ್ಣವಾದವನು ಮತ್ತವನ ಬಳಿ ಯಾವುದೇ ಬೋಧನೆಗಳಿರಲಿಲ್ಲ, ಕೇವಲ ವಿಧಾನಗಳಿದ್ದವು ಅಷ್ಟೆ. ಅದೇ ಬಹಳ ಮುಖ್ಯವಾದದ್ದು. ಇತರರ ಬಳಿ ಬೋಧನೆಗಳಿವೆ. ನೀವು ಗ್ಯುಟಿಯ ಹಾಗೆ ಎಷ್ಟು ಬೆರಳುಗಳನ್ನು ಕತ್ತರಿಸಬಹುದು? ಅವನ ವಿಧಾನವನ್ನು ನೀವು ಅನುಸರಿಸಬಹುದೇ? ನಿಮಗೆ ಆ ವಿಧಾನವನ್ನು ಅನುಸರಿಸಲು ಸಾಧ್ಯವೇ? ಒಬ್ಬ ಹುಡುಗನ ಬೆರಳನ್ನು ನೀವು ಕತ್ತರಿಸಿದಿರಿ, ಅವನಿಗೆ ಜ್ಞಾನೋದಯವಾಯಿತು. ನೀವು ಬೆರಳುಗಳನ್ನು ಹಾಗೆಯೇ ಕತ್ತರಿಸುತ್ತಾ ಹೋದರೆ, ಬರೀ ಅಂಗವಿಹೀನ ಜನರನ್ನು ತಯಾರುಮಾಡುತ್ತೀರಿ ಅಷ್ಟೆ, ಬೇರಿನ್ನೇನೂ ಆಗುವುದಿಲ್ಲ. ಹಾಗಾಗಿ ಶಿವ ಯಾವ ಬೋಧನೆಯನ್ನೂ ನೀಡುವುದಿಲ್ಲ, ಅವನು ಕೇವಲ ವಿಧಾನಗಳನ್ನು ನೀಡುತ್ತಾನೆ ಮತ್ತು ಆ ವಿಧಾನಗಳು ನೂರಕ್ಕೆ ನೂರರಷ್ಟು ವೈಜ್ಞಾನಿಕವಾಗಿರುತ್ತವೆ. ಅವನು 108 ವಿಧಾನಗಳನ್ನು ನೀಡಿದ್ದಾನೆ, ಜೊತೆಗೆ ಇನ್ನೂ ಆರನ್ನು ಸೇರಿಸಿ, 114 ವಿಧಾನಗಳಿವೆಯೆಂದು ಹೇಳಿದ್ದಾನೆ. ಮಾನವ ಶರೀರದಲ್ಲಿ 114 ಚಕ್ರಗಳಿರುವುದರಿಂದ 114 ವಿಧಾನಗಳು. ಆದರೆ ಎರಡು ಚಕ್ರಗಳು ಭೌತಿಕ ಶರೀರದ ಹೊರಗಿವೆ. ಭೌತಿಕ ಜಗತ್ತಿನಾಚೆ ಇರುವವರಿಗೆ ಮಾತ್ರವೇ ಆ ಎರಡು ಆಯಾಮಗಳು ಎಂದು ಅವನು ಹೇಳಿದ. ಹಾಗಾಗಿ ಮನುಷ್ಯರಿಗೆ 112 ವಿಧಾನಗಳಿವೆ ಅಷ್ಟೆ.  ಈ ಜೀವದ ಅಸ್ತಿತ್ವಕ್ಕೆ ಕಾರಣವಾಗಿರುವ ಈ 112 ಆಯಾಮಗಳನ್ನು ಉಪಯೋಗಿಸಿಕೊಳ್ಳುವ ಖಚಿತ ವಿಧಾನಗಳನ್ನು ಮತ್ತು ಪ್ರತಿಯೊಂದು ಆಯಾಮದ ಮೂಲಕ ಹೇಗೆ ನಾವು ಮುಕ್ತಿಯನ್ನು ಹೊಂದಬಹುದು ಎಂಬುದನ್ನು ಅವನು ತೋರಿಸಿಕೊಟ್ಟಿದ್ದಾನೆ. ಒಂದು ಸುಂದರವಾದ ಕಥೆಯಿದೆ.

ಶಿವ ಸಪ್ತ ಋಷಿಗಳಿಗೆ ಜೀವವ್ಯವಸ್ಥೆಯ ಕಾರ್ಯವಿಧಾನವನ್ನು ವಿವರಿಸುತ್ತಿದ್ದಾಗ, ಅದಕ್ಕೆ ಸಾಕ್ಷಿಯಾಗಿ ಪಾರ್ವತಿ ಅಲ್ಲಿದ್ದಳು. ಅವಳು ಅದಾಗಲೇ ಜ್ಞಾನೋದಯವನ್ನು ಹೊಂದಿದವಳಾಗಿದ್ದಳು. ಶಿವ ಅವಳಿಗೆ ಬಹಳ ಆಪ್ತ ರೀತಿಯಲ್ಲಿ ಕಲಿಸಿ ಅರಿವುಂಟಾಗುವಂತೆ ಮಾಡಿದ್ದ. ಆದರೆ ಸಪ್ತರ್ಷಿಗಳು ಅವನೆದುರು ಕುಳಿತಾಗ, ಅವನು ಸಂಪೂರ್ಣವಾಗಿ ಬೇರೆಯದ್ದೇ ರೀತಿಯ ಅನ್ವೇಷಣೆಯ ಆಯಾಮದ ಬಗ್ಗೆ ಮಾತನಾಡುತ್ತಾನೆ. ತನಗೆ ಅಷ್ಟೊಂದು ಸರಳವಾಗಿ ಸಂಭವಿಸಿದ ಸಂಗತಿ ಎಷ್ಟು ಸಂಕೀರ್ಣವಾದ ಪ್ರಕ್ರಿಯೆಯೆಂಬುದನ್ನು ತಿಳಿದು ಅವಳು ಅಚ್ಚರಿಪಡುತ್ತಾಳೆ. ಇತ್ತ ಶಿವ ಸಪ್ತರ್ಷಿಗಳಿಗೆ ಬೇರೆ ಬೇರೆ ಆಯಾಮಗಳ ಕುರಿತು ತಿಳಿಹೇಳುತ್ತಾ ‘ಮನುಷ್ಯ ಜ್ಞಾನೋದಯವನ್ನು ಹೊಂದಲು ಒಂದು ನೂರಾ ಹನ್ನೆರಡು ಮಾರ್ಗಗಳಿವೆ.’ ಎಂದು ಹೇಳುತ್ತಾನೆ. ಒಬ್ಬ ಸ್ತ್ರೀಯಾಗಿ, ಜ್ಞಾನಿಯಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವನ ಹೆಂಡತಿಯಾಗಿ, ಅವಳು ‘ಕೇವಲ ನೂರ ಹನ್ನೆರಡಷ್ಟೇ ಯಾಕೆ? ಇನ್ನೂ ಹೆಚ್ಚಿನ ಮಾರ್ಗಗಳು ಇರಬಹುದು.’ ಎಂದು ಹೇಳುತ್ತಾಳೆ. ಆದರೆ ಶಿವ ಜೀವವ್ಯವಸ್ಥೆಯ ಕಾರ್ಯವಿಧಾನದ ಕುರಿತಾಗಿ ಅವಲೋಕಿಸುತ್ತಿದ್ದ ಹಾಗೂ ಶೋಧಿಸುತ್ತಿದ್ದ. ಅವನು ಯಾವ ಬೋಧನೆಯನ್ನಾಗಲಿ ಅಥವಾ ಯಾವುದೇ ಸಿದ್ಧಾಂತವನ್ನಾಗಲಿ ನೀಡುತ್ತಿರಲಿಲ್ಲ. ಅವನು ಹೀಗೆ ಅವಲೋಕಿಸುತ್ತಿರಬೇಕಾದರೆ, ಪಾರ್ವತಿಯ ಮಾತು ಅವನಿಗೆ ಕಿರಿಕಿರಿಯೆನಿಸಿತು. ಹಾಗಾಗಿ ಅವನು ಅವಳಿಗೆ ಸನ್ನೆ ಮಾಡಿದ ‘ಶ್! ಸುಮ್ಮನಿರು. ನೂರ ಹನ್ನೆರಡು ಮಾತ್ರ ಇವೆ.’ ಎಂದು ಹೇಳಿದ. ನೀವು ಏನೋ ಒಂದರಲ್ಲಿ ಮಗ್ನರಾಗಿರುವಾಗ ಯಾರೋ ಒಬ್ಬರು ವೈಯಕ್ತಿಕವಾದ ಟೀಕೆಯನ್ನು ಮಾಡಿದರೆ, ಅದರಲ್ಲೂ ಅವಾಸ್ತವಿಕ ಟೀಕೆಯನ್ನು ಮಾಡಿದರೆ ಹಾಗಾಗುವುದು ಸಹಜ. ಅದಕ್ಕವಳು ‘ನಾನು ಇನ್ನೂ ಹೆಚ್ಚಿನ ಮಾರ್ಗಗಳನ್ನು ಕಂಡುಹಿಡಿಯುತ್ತೇನೆ.’ ಎಂದಳು. ಅವನು, ‘ಆಯಿತು, ಹೋಗಿ ಕಂಡುಹಿಡಿ’ ಎಂದ.

ಅವಳು ಹೋದಳು. ಅವಳು ಅದಾಗಲೇ ಸಾಕ್ಷಾತ್ಕಾರವನ್ನು ಹೊಂದಿದವಳಾಗಿದ್ದಳು, ಮತ್ತು ಅದನ್ನು ಪಡೆಯುವ ಇತರ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಳು. ಹಲವಾರು ವರ್ಷಗಳ ಸಾಧನೆಯ ನಂತರ ಅವಳು ಮರಳಿ ಬಂದಳು ಎಂದು ಹೇಳುತ್ತಾರೆ. ಇತ್ತ ಶಿವ ಇನ್ನೂ ಸಪ್ತ ಋಷಿಗಳೊಂದಿಗೆ ಮಾತನಾಡುತ್ತಲೇ ಇದ್ದ. ಅವನ ಹೆಂಡತಿಯಾಗಿ ಅವಳು ಅವನ ಪಕ್ಕದಲ್ಲಿ ಬಂದು ಕುಳಿತುಕೊಳ್ಳಬಹುದಿತ್ತು, ಆದರೆ ಅವಳು ಬಂದು ಅವನಿಗಿಂತ ಒಂದು ಮೆಟ್ಟಿಲು ಕೆಳಗೆ ಕುಳಿತಳು. ತಾನು ಸೋತಿರುವ ವಿಷಯ ಋಷಿಗಳಿಗೆ ಗೊತ್ತಾಗುವುದು ಅವಳಿಗೆ ಬೇಕಿರಲಿಲ್ಲ, ಆದರೆ ಶಿವನಿಗೆ ತಿಳಿಯಬೇಕಾಗಿತ್ತು. ತಾನು ಹಾಕಿದ ಸವಾಲಿನಲ್ಲಿ ತಾನು ಸೋತಿರುವುದಾಗಿ ಸೂಚಿಸಲು ಅವಳು ಸುಮ್ಮನೆ ಬಂದು ಅವನಿಗಿಂತ ಒಂದು ಮೆಟ್ಟಿಲು ಕೆಳಗೆ ಕುಳಿತುಕೊಳ್ಳುತ್ತಾಳೆ. 

ಹಾಗಾಗಿ ಮುಕ್ತಿಗೆ ನೂರ ಹನ್ನೆರಡು ಮಾರ್ಗಗಳಿವೆ. ಶಿವ ಮಾತನಾಡುತ್ತಿರುವುದು ಜೀವವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ, ಅದರಲ್ಲಿ ಯಾವುದೇ ಸಿದ್ಧಾಂತ ಅಥವಾ ಬೋಧನೆ ಅಥವಾ ಸಾಮಾಜಿಕ ಪ್ರಸ್ತುತತೆ ಇಲ್ಲ, ಅದು ಕೇವಲ ವಿಜ್ಞಾನವಷ್ಟೆ. ನಾವದಕ್ಕೆ ಸಾಮಾಜಿಕ ಪ್ರಸ್ತುತತೆಯ ಲೇಪ ನೀಡುವುದು ಕೇವಲ ತೋರಿಕೆಗಷ್ಟೆ, ಉಳಿದಂತೆ ಅದೊಂದು ಅತ್ಯಂತ ಖಚಿತವಾದ ವಿಜ್ಞಾನವಾಗಿದೆ.  ಈ ವಿಜ್ಞಾನವನ್ನು ಬಳಸಿ, ಒಬ್ಬೊಬ್ಬ ಗುರುವೂ ಒಂದೊಂದು ರೀತಿಯ ತಂತ್ರಜ್ಞಾನವನ್ನು ಸೃಷ್ಟಿಸಿದ್ದಾನೆ. ಶಿವ ಯಾವ ತಂತ್ರಜ್ಞಾನವನ್ನೂ ನೀಡಲಿಲ್ಲ, ಅವನು ಕೇವಲ ಅದರ ವಿಜ್ಞಾನವನ್ನಷ್ಟೇ ನೀಡಿದ. ನೀವು ಇಂದು ಉಪಯೋಗಿಸುತ್ತಿರುವ ಮೊಬೈಲ್ ಅಥವಾ ಕಂಪ್ಯೂಟರ್‌ನ ತಂತ್ರಜ್ಞಾನದ ಹಿಂದೆ ಒಂದು ವಿಜ್ಞಾನವಿದೆ. ನಿಮಗೆ ಆ ವಿಜ್ಞಾನವೆಲ್ಲ ಅಪ್ರಸ್ತುತ. ನೀವು ಕೇವಲ ತಂತ್ರಜ್ಞಾನವನ್ನು ಬಳಸುತ್ತಿದ್ದೀರಿ, ಆದರೆ ಯಾರೋ ಒಬ್ಬರು ಅದರ ಹಿಂದಿನ ವಿಜ್ಞಾನವನ್ನು ಗ್ರಹಿಸಿರದಿದ್ದರೆ, ನಿಮಗೆ ತಂತ್ರಜ್ಞಾನ ದೊರೆಯುತ್ತಿರಲಿಲ್ಲ. ಒಂದು ಸರಳ ತಂತ್ರಾಂಶವನ್ನು ತಯಾರಿಸಲು ಬೇಕಾದ ಲೆಕ್ಕಾಚಾರಗಳು ಬಹಳ ಸಂಕೀರ್ಣವಾಗಿರುತ್ತವೆ. ಕೆಲವು ಸಾರಿ ನಿಮ್ಮ ಇ-ಮೇಲ್ ಕೋಡ್ ಗಳ ರೂಪದಲ್ಲಿ ಕಾಣಿಸುತ್ತದೆ, ನೋಡಿದ್ದೀರಾ? ನಿಮಗೆ ಅದೇನೆಂದು ಗೊತ್ತಾಗುವುದೇ ಇಲ್ಲ, ‘ಇದು ನಾನು ಟೈಪ್ ಮಾಡಿದ್ದಾ?” ಎಂದು ಆಶ್ಚರ್ಯಪಡುತ್ತೀರ. ನಿಮಗೆ ಅದು ಅರ್ಥಹೀನವೆನಿಸಿದರೂ, ಆ ಬಗ್ಗೆ ಗೊತ್ತಿರುವವರಿಗೆ ಅದೇನೆಂದು ತಿಳಿಯುತ್ತದೆ. ಆ ವಿಜ್ಞಾನದ ಹಿಂದೆಯೇ ತಂತ್ರಜ್ಞಾನ ಕೆಲಸ ಮಾಡುತ್ತಿದೆ.

ಈಗ, ನಾನಿಲ್ಲಿ ಮೈಕ್‌ನಲ್ಲಿ ಮಾತನಾಡುವಾಗ ನಾವು ಕೇವಲ ಶಬ್ದದ ತರಂಗಗಳನ್ನು ಬಳಸುತ್ತಿದ್ದೇವೆ. ನಾನು ಮಾತನಾಡಿದಾಗ, ಈ ಧ್ವನಿವರ್ಧಕಗಳು ನಾನು ಸೃಷ್ಟಿಸುವ ಶಬ್ದಗಳನ್ನು ವರ್ಧಿಸುತ್ತವೆ ಮತ್ತು ಅವು ಶಬ್ದದ ಅಲೆಗಳಾಗಿಯೇ ಮುಂದುವರಿಯುತ್ತವೆ. ಆದರೆ ನಾನು ಫೋನಿನಲ್ಲಿ ನಿಮ್ಮೊಂದಿಗೆ ಮಾತನಾಡಿದಾಗ ನನ್ನ ಮಾತುಗಳು ಶಬ್ದದ ಅಲೆಗಳ ರೂಪದಲ್ಲಿ ಸಾಗುವುದಿಲ್ಲ, ಬದಲಾಗಿ ಅವು ವಿದ್ಯುತ್ಕಾಂತೀಯ ಅಲೆಗಳಾಗಿ ಪರಿವರ್ತಿತವಾಗುತ್ತವೆ. ಹಾಗಾಗಿ ಅದು ಇಲ್ಲಿಂದ ಸಾಗುವಾಗ, ಅಂದರೆ ನೀವು ಸೆಲ್ ಫೋನ್‌ನಲ್ಲಿ ಮಾತನಾಡುವಾಗ, ಅದು ಇಲ್ಲಿಂದ ಬೆಂಗಳೂರಿಗೆ ಹೋಗುತ್ತದೆ, ಆದರೆ ಅದು ಶಬ್ದ ತರಂಗಗಳ ರೂಪದಲ್ಲಿರುವುದಿಲ್ಲ, ಅದು ಬೇರಿನ್ನೇನೋ ಆಗಿರುತ್ತದೆ. ನೀವದನ್ನು ಕೇಳಿಸಿಕೊಳ್ಳಲು ಅಥವಾ ಅನುಭವಿಸಲು ಸಾಧ್ಯವಾದರೆ, ಅದು ಸಂಪೂರ್ಣವಾಗಿ ಬೇರೆಯದ್ದೇ ಆಗಿರುತ್ತದೆ, ಆದರೆ ಇನ್ನೊಂದು ಉಪಕರಣ ಅದನ್ನು ನಿಮಗೆ ಅರ್ಥವಾಗುವ ಶಬ್ದ ತರಂಗಗಳನ್ನಾಗಿ ಪರಿವರ್ತಿಸುತ್ತದೆ.

ಹಾಗಾಗಿ, ಶಿವ ಹೇಳಿದ್ದು ಶುದ್ಧ ವಿಜ್ಞಾನ. ಅವನು ತಂತ್ರಜ್ಞಾನದ ಕುರಿತಾಗಿ ಮಾತನಾಡುತ್ತಿಲ್ಲ. ಅವನ ಬಳಿ ಬರುವ ಜನರಿಗೆ ಸರಿಹೊಂದುವ ತಂತ್ರಜ್ಞಾನವನ್ನು ಸೃಷ್ಟಿಸುವ ಕೆಲಸವನ್ನು ಅವನು ಸಪ್ತ ಋಷಿಗಳಿಗೆ ಬಿಟ್ಟನು. ನಾವು ನಮಗೆ ಬೇಕಾದ ರೀತಿಯ ಉಪಕರಣವನ್ನು ಸೃಷ್ಟಿಸಿಕೊಳ್ಳುತ್ತೇವೆ, ಆದರೆ ಮೂಲಭೂತ ವಿಜ್ಞಾನ ಮಾತ್ರ ಒಂದೇ ಆಗಿರುತ್ತದೆ, ಅಲ್ಲವೇ? ಅದರಲ್ಲೇನೂ ಬದಲಾವಣೆಯಿಲ್ಲ. ಹಾಗಾಗಿ ನಾನು ಯಾವಾಗಲೂ ಶಿವನ ಬಗ್ಗೆ ಮಾತನಾಡುತ್ತಿರುತ್ತೇನೆ, ಏಕೆಂದರೆ ಇಲ್ಲಿ ತಂತ್ರಜ್ಞಾನ ಮುಖ್ಯವಲ್ಲ, ವಿಜ್ಞಾನ ಮುಖ್ಯ. ತಂತ್ರಜ್ಞಾನವನ್ನು ಸೃಷ್ಟಿಸಬಹುದು ಮತ್ತು ತಂತ್ರಜ್ಞಾನವು ಸೃಷ್ಟಿಸಲಾದ ವಿಷಯ. ಏಕೆಂದರೆ ಅಸ್ತಿತ್ವದಲ್ಲಿರುವ ಮೂಲಭೂತ ವಿಜ್ಞಾನವನ್ನು ಬಳಸಿಕೊಂಡು ನಾವು ಏನನ್ನಾದರೂ ಸೃಷ್ಟಿಸುತ್ತಿದ್ದೇವೆ. ಇವತ್ತು ಇರುವ ಉಪಕರಣಗಳು ನಾಳೆ ಕೆಲಸಕ್ಕೆ ಬಾರದೇಹೋಗಬಹುದು. ಈಗಾಗಲೇ ಹಾಗಾಗುತ್ತಿದೆ, ಅಲ್ಲವೇ? ಎಷ್ಟೋ ಉಪಕರಣಗಳು ಅಪ್ರಸ್ತುತವಾಗುತ್ತಿಲ್ಲವೇ? ನಾವು ಬಹಳ ಉಪಯುಕ್ತವೆಂದು ತಿಳಿದ ಎಷ್ಟೋ ವಸ್ತುಗಳು ಈಗ ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ, ಏಕೆಂದರೆ ಹೊಸ ಉಪಕರಣಗಳು ಬಂದಿವೆ. ಆದರೆ ವಿಜ್ಞಾನ ಮಾತ್ರ ಅದೇ. ಹಾಗಾಗಿ ನಮ್ಮ ಮುಂದೆ ಯಾರು ಕುಳಿತಿದ್ದಾರೆ, ಅವರಿಗೆ ಏನು ಬೇಕು ಎಂಬುದನ್ನು ಆಧರಿಸಿ ನಾವು ಅವರಿಗೆ ಸೂಕ್ತವಾದ ಉಪಕರಣವನ್ನು ರೂಪಿಸುತ್ತೇವೆ ಅಷ್ಟೆ.

ಹಾಗಾಗಿ ಈ ಸನ್ನಿವೇಶದಲ್ಲಿ, ನೀವು ಉಲ್ಲೇಖಿಸುತ್ತಿರುವ ಆದಿಯೋಗಿ ಮತ್ತು ಇತರ ಹೆಸರುಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸವಿದೆ. ಅವರೆಲ್ಲಾ ತಂತ್ರಜ್ಞಾನದ ಜನ, ಅವರು ಯಾವುದೋ ಒಂದು ಅಂಶವನ್ನು ಮಾತ್ರ ಗ್ರಹಿಸಿದವರು ಮತ್ತು ಅದನ್ನು ಬಳಸಿ ಆ ಸಮಯದಲ್ಲಿ ಅವರ ಮುಂದೆ ಕುಳಿತ ಜನರಿಗೆ ಸರಿಹೊಂದುವ ನಿರ್ದಿಷ್ಟವಾದ ತಂತ್ರಜ್ಞಾನವನ್ನವರು ಸೃಷ್ಟಿಸಿದರು. ಅದು ಆ ಕಾಲಕ್ಕೆ ಆ ಜನರಿಗೆ ಉಪಯುಕ್ತವಾಯಿತು. ಆದರೆ ನಾವು ಆದಿಯೋಗಿಯನ್ನು ಮೂಲಭೂತ ವಿಜ್ಞಾನವಾಗಿ ನೋಡುತ್ತಿದ್ದೇವೆ. ನಾವು ಈಗಿರುವ ಸಮಯದಲ್ಲಿ ಅದು ಬಹಳ ಮುಖ್ಯ. ಹಲವಾರು ಕಾರಣಗಳಿಂದಾಗಿ ಮನುಕುಲ ಸದ್ಯದಲ್ಲಿರುವ ಪರಿಸ್ಥಿತಿಗೆ, ಯೋಗದ ಸಾರಭೂತ ವಿಜ್ಞಾನವನ್ನು ಸ್ಥಾಪಿಸಿ ಬಲಪಡಿಸುವುದು ತುಂಬಾ ಮುಖ್ಯವಾಗಿದೆ.