ಹಠಯೋಗ ವಿಮೋಚನೆಯ ಒಂದು ಮಾರ್ಗ ಎಂದು ಸದ್ಗುರು ಹೇಳುತ್ತಾರೆ. ಇದು ನಿರ್ಬಂಧಗಳನ್ನು ಮೀರಿ ನಮ್ಮನ್ನು ಜಾಗೃತಿಯೆಡೆಗೆ ಹೇಗೆ ಕರೆದೊಯ್ಯುತ್ತದೆ ಎಂದು ಅವರು ಇಲ್ಲಿ ವಿವರಿಸುತ್ತಾರೆ

ಕೇಳುಗ: ಧ್ಯಾನ ಮತ್ತು ಹಠಯೋಗಕ್ಕೆ ಏನಾದರೂ ಸಂಬಂಧವಿದೆಯೇ? ನೀವು ಹಠಯೋಗ ತನ್ನಲ್ಲಿಯೇ ಒಂದು ಮಾರ್ಗ ಎಂದು ಹೇಳಿದಿರಿ. ಇದನ್ನು ಸ್ವಲ್ಪ ವಿವರಿಸಬಹುದೇ?

ಸದ್ಗುರು:ಹಠಯೋಗಕ್ಕೆ ನಾನಾ ರೀತಿಯ ಆಯಾಮಗಳಿವೆ. ಅದರ ಮೂಲ ಅಂಶವೆಂದರೆ ದೇಹವನ್ನು ಪಕ್ವಗೊಳಿಸುವುದು ಅಥವಾ ಮರ್ದಿಸುವುದು ಎನ್ನಬಹುದು. ನಿಮಗೆ ಗೊತ್ತಲ್ಲ? ಚಪಾತಿ ಅಥವಾ ಬ್ರೆಡ್ ಹದವಾಗಿ ಬರಲು ಹಿಟ್ಟನ್ನು ಚೆನ್ನಾಗಿ ನಾದಬೇಕು. ಹಾಗೆಯೇ ನಿಮ್ಮ ಧ್ಯಾನದ ಗುಣಮಟ್ಟ ನಿಮ್ಮ ಪಕ್ವತೆಯ ಮೇಲೆ ಅವಲಂಬಿತವಾಗಿದೆ. ಬದುಕು ನಿಮ್ಮನ್ನು ನಾನಾ ರೀತಿಯಲ್ಲಿ ಪಕ್ವಗೊಳಿಸುತ್ತದೆ. ನೀವು ಇದನ್ನು ಆನಂದಿಸಬಹುದು ಅಥವಾ ನರಳಲೂಬಹುದು. ಇದರಿಂದ ನೀವು ಪ್ರಬುದ್ಧರಾಗಿ ವಿಕಸಿಸಬಹುದು ಅಥವಾ ಆ ಪ್ರಕ್ರಿಯೆಯಿಂದ ಬಳಲಿ ನಜ್ಜುಗುಜ್ಜಾಗಲೂಬಹುದು. ಈ ಎರಡು ಆಯ್ಕೆ ನಿಮ್ಮ ಮುಂದಿದೆ.

ಹಠಯೋಗ ಬರೀ ನಿಮ್ಮ ಅಂಗಗಳ ಮರ್ದನವಷ್ಟೇ ಅಲ್ಲದೇ ನಿಮ್ಮ ಎಲ್ಲಾ ಅಂಶಗಳನ್ನೂ ಪಕ್ವಗೊಳಿಸುತ್ತದೆ.

ಹಠಯೋಗ ಬರೀ ಒಂದು ರೀತಿಯ ಮರ್ದನವಷ್ಟೇ ಅಲ್ಲ, ಅದು ನಿಮ್ಮ ಮಾಂಸಖಂಡಗಳನ್ನಷ್ಟೇ ಅಲ್ಲದೇ ನಿಮ್ಮ ಎಲ್ಲಾ ಅಂಶಗಳನ್ನೂ ಪಕ್ವಗೊಳಿಸುತ್ತದೆ. ನೀವು ಕರ್ಮ ಎಂದು ಕರೆಯುವುದು ನಿಮ್ಮ ಶರೀರದ ಪ್ರತಿಯೊಂದು ಕೋಶದಲ್ಲೂ, ನಿಮ್ಮ ಚೈತನ್ಯದ ಎಲ್ಲ ಅಂಶಗಳಲ್ಲೂ ಇದೆ. ಇದು ಯಾವಾಗ ಗೋಚರಿಸುತ್ತದೆಯೆಂದರೆ ಒಂದೇ ಚಟುವಟಿಕೆಯಲ್ಲಿ ಬೇರೆ ಬೇರೆ ವ್ಯಕ್ತಿಗಳ ಜೀವಶಕ್ತಿ ವ್ಯವಸ್ಥೆಯಲ್ಲಿರುವ ನೆನಪಿನ ಅಂಶಗಳಿಗೆ ಅನುಗುಣವಾಗಿ ಅವರ ಜೀವಶಕ್ತಿ ಬೇರೆಬೇರೆ ರೀತಿಯಲ್ಲಿ ವರ್ತಿಸಿದಾಗ. ಪಕ್ವವಾಗುವುದು ಎಂದರೆ ನಿಮ್ಮ ಜೀವವ್ಯವಸ್ಥೆ ಎಷ್ಟು ಮೆದುವಾಗುತ್ತದೆಂದರೆ, ಅದು ನಿಮ್ಮ ಮೇಲೆ ಪ್ರಭಾವ ಬೀರಲು ಸಾಧ್ಯವಾಗದಷ್ಟು. ಅಂದರೆ ನೀವು ಶರೀರದ ಮೂಲಕ ನಿಮ್ಮ ಜೀವನವನ್ನು ನಿಮ್ಮ ಹಿಡಿತಕ್ಕೆ ತರಬಹುದು.

ನಿಮ್ಮ ಜೀವನವನ್ನು ನಿಮ್ಮ ಹಿಡಿತಕ್ಕೆ ತರಲು ನಾನಾ ವಿಧಾನಗಳಿವೆ - ಒಂದು ವಿಧಾನ ನಿಮ್ಮ ಶರೀರದ ಮೂಲಕ. ಶಾರೀರಿಕವಾಗಿ ಇದು ಸ್ವಲ್ಪ ಕಠಿಣವಾಗಿರಬಹುದು, ಆದರೆ ಅದು ಖಚಿತತೆಯಿರುವ ಹಾದಿ, ಏಕೆಂದರೆ, ಯಾವುದು ಕೆಲಸ ಮಾಡಿತು, ಯಾವುದು ಮಾಡಲಿಲ್ಲ ಎಂಬ ಅರಿವು ನಿಮಗೆ ಒಡನೆಯೇ ಆಗುತ್ತದೆ. ನೀವು ನಿಮ್ಮ ಜೀವನದ ಹಿಡಿತವನ್ನು ಮನಸ್ಸಿನ ಮೂಲಕ ತೆಗೆದುಕೊಂಡರೆ, ಆಗ ನಿಮಗೆ ಮುನ್ನಡೆಯುತ್ತಿದ್ದೀರೋ, ಹಿನ್ನಡೆಯುತ್ತಿದ್ದಿರೋ ಅರ್ಥವಾಗುವುದಿಲ್ಲ. ನೀವು ಮೆದುವಾಗುತ್ತಿದ್ದಿರೋ ಅಥವಾ ಕಠಿಣವಾಗುತ್ತಿದ್ದೀರೋ ಗೊತ್ತಾಗುವುದಿಲ್ಲ. ನಿಮಗೆ ನೀವು ಸರಿಯಾಗಿದ್ದೀರಿ ಅನಿಸಬಹುದು, ಆದರೆ, ನಿಮ್ಮ ಸುತ್ತಲಿನ ಜನಕ್ಕೆ ಬೇರೆಯೇ ಅನಿಸಬಹುದು.

ಶರೀರದ ಒಳ್ಳೆಯತನ ಎಂದರೆ ಅದು ಎಂದೂ ಸುಳ್ಳು ಹೇಳುವುದಿಲ್ಲ, ಆದರೆ ಮನಸ್ಸು ಯಾವಾಗಲೂ ಎಲ್ಲಾ ರೀತಿಯ ಸುಳ್ಳುಗಳನ್ನೂ ಹೇಳುತ್ತಿರುತ್ತದೆ. ಮನಸ್ಸನ್ನು ನಂಬದಿರುವವರು ಶರೀರದೊಂದಿಗೆ ಆರಂಭಿಸುತ್ತಾರೆ. ಹಠಯೋಗವು ಅತ್ಯುತ್ತಮವಾದ ಹಾದಿ, ಏಕೆಂದರೆ ಶರೀರ, ಮನಸ್ಸು, ಜೀವಶಕ್ತಿ, ಮತ್ತು ನೀವು ಇವ್ಯಾವುದೂ ಬೇರೆಬೇರೆಯಲ್ಲ. ನೀವು ಒಂದೇ ವಿಷಯವನ್ನು ಬೇರೆ ಬೇರೆ ಕೋನಗಳಿಂದ ಸಮೀಪಿಸಬಹುದು. ನೀವು ಹಠಯೋಗವನ್ನು ಆಗೊಮ್ಮೆ ಈಗೊಮ್ಮೆ ಮಾಡುವವರಾದರೆ ಮಾತ್ರ ಅದು ಕಠಿಣವೆನಿಸಬಹುದು. ಹಾಗೆ ಮಾಡಿದಾಗ ಬಗ್ಗುವುದು ಕಷ್ಟವಾಗಬಹುದು. ಅದೇ ನೀವು ಪ್ರತಿದಿನ ಮಾಡಿದರೆ ಸಾಧನೆಯು ಕಠಿಣವೆನಿಸುವುದೇ ಇಲ್ಲ.

ಆಸನಸಿದ್ಧಿ ಮತ್ತು ಧ್ಯಾನ

ಹಠಯೋಗ ಪರಮಾರ್ಥಕ್ಕೆ ಮತ್ತೊಂದು ಮಾರ್ಗ ಅಷ್ಟೇ. ಆದರೆ ಅದು ದೈಹಿಕ ಸಾಧನೆ. ನೀವು ಒಳ್ಳೆಯ ಆರೋಗ್ಯದಿಂದಿದ್ದರೆ, ಅದು ಒಂದು ಸುಂದರವಾದ ಸುಲಭ ಮಾರ್ಗ. ನಿಮಗೆ ಆಸನ ಸಿದ್ಧಿಯಾದರೆ, ಅಂದರೆ ಒಂದೇ ಭಂಗಿಯಲ್ಲಿ ನಿರಾಯಾಸವಾಗಿ ಮತ್ತು ಸ್ಥಿರವಾಗಿ ದೀರ್ಘ ಕಾಲ ಇರಲು ಸಾಧ್ಯವಾದರೆ, ಧ್ಯಾನವು ಸುಲಭವಾಗುತ್ತದೆ. ಆದರೆ ನೀವು ಒದ್ದಾಡಿಕೊಂಡು ಧ್ಯಾನ ಮಾಡಿದರೆ, ಅದಕ್ಕೆ ಕಾರಣ ದೇಹ ಮತ್ತು ಮನಸ್ಸಿನ ಕೆಲವು ಅಂಶಗಳು ಸೂಕ್ತ ರೀತಿಯಲ್ಲಿ ಸಹಕರಿಸದೆ ಇರುವುದು.

ಸಮಸ್ಯೆ ಏನೆಂದರೆ ನೀವು ನಿಮ್ಮ ದೇಹ ಮತ್ತು ಮನಸ್ಸನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡದೇ ಇರುವುದು. ನೆಲದ ಮೇಲೆ ಕುಳಿತಾಗಲೇ ನಿಮ್ಮ ಶರೀರ ಯಾವ ಸ್ಥಿತಿಯಲ್ಲಿ ಇದೆ ಎಂದು ನಿಮಗೆ ಅರಿವಾಗುವುದು. ಹಠಯೋಗ ಎಂದರೆ ನಮ್ಮನ್ನು ನಾವೇ ಸುವ್ಯವಸ್ಥಿತವಾಗಿ ಇರಿಸಿಕೊಳ್ಳುವುದು. ನೀವು ಸರಿಯಾದ ರೀತಿಯಲ್ಲಿ ಹಠಯೋಗವನ್ನು ಅಭ್ಯಾಸ ಮಾಡಿದರೆ, ನೀವು ಸುದೀರ್ಘ ಕಾಲ ಜೀವಿಸುತ್ತೀರಿ, ಏಕೆಂದರೆ, ಸಾವೆಂಬುದು ನಿಮ್ಮ ಜೀವವ್ಯವಸ್ಥೆಯತ್ತ ಸುಳಿಯಲು ನೀವು ಬಿಡುವುದಿಲ್ಲ. ಇಲ್ಲವಾದಲ್ಲಿ ಸಾವು ನಿಧಾನವಾಗಿ ನಿಮ್ಮೊಳಗೆ ಹರಿಯಲು ಪ್ರಾರಂಭಿಸುತ್ತದೆ, ನಿಮ್ಮ ದೇಹ ಸೆಟೆದುಕೊಳ್ಳಲು ಆರಂಭವಾಗುತ್ತದೆ.

ಹಠಯೋಗವು ಆಸನಸಿದ್ಧಿಯನ್ನು ಉಂಟುಮಾಡಬಲ್ಲದು. ಆಸನಸಿದ್ಧಿಯಾಯಿತೆಂದರೆ, ನಿಮ್ಮ ಶರೀರವು ನಿಶ್ಚಲವಾಗುತ್ತದೆ

ಹಠಯೋಗವು ಧ್ಯಾನವನ್ನು ಆನಂದಮಯವಾಗಿಸುತ್ತದೆ. ಹಾಗೆಯೇ ನೀವು ನಿಮ್ಮ ಮನಸ್ಸನ್ನು ಒಂದೇ ವಿಷಯದಲ್ಲಿ ಮಗ್ನವಾಗಿರುವಂತೆ ತರಬೇತಿ ಮಾಡಿಕೊಂಡರೆ, ಧ್ಯಾನವು ನಿರಾಯಾಸವಾಗುತ್ತದೆ. ನಿಮ್ಮ ದೇಹ-ಮನಸ್ಸುಗಳೆರಡೂ ಸರಿಯಾದ ರೀತಿಯಲ್ಲಿ ತರಬೇತಾಗಿದ್ದರೆ ಖಂಡಿತವಾಗಿ ಧ್ಯಾನವು ಕಠಿಣವೆನಿಸುವುದಿಲ್ಲ. ಹಠಯೋಗವು ಆಸನಸಿದ್ಧಿಯನ್ನು ಉಂಟುಮಾಡಬಲ್ಲದು. ಆಸನಸಿದ್ಧಿಯಾಯಿತೆಂದರೆ, ನಿಮ್ಮ ಶರೀರವು ನಿಶ್ಚಲವಾಗುತ್ತದೆ.

ನಿಶ್ಚಲತೆಯು ವಿವಿಧ ಹಂತಗಳಲ್ಲಿ ಇರುತ್ತದೆ. ನೀವು ಸಂಪೂರ್ಣವಾಗಿ ನಿಶ್ಚಲರಾದರೆ, ಅನಾಯಾಸವಾಗಿ ನೀವು ಧ್ಯಾನದಲ್ಲಿರುತ್ತೀರಿ. ಒಂದೇ ಒಂದು ಪ್ರಯತ್ನವೆಂದರೆ ನೀವು ಒಂದೇ ಕಡೆ ಕುಳಿತು ನಿಮ್ಮ ಮನಸ್ನನ್ನು ಎಲ್ಲಿ ಬೇಕೋ ಅಲ್ಲಿ ಇರಿಸುವುದು. ಸದ್ಯಕ್ಕೆ ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ನಿಮ್ಮ ಮಾತನ್ನು ಕೇಳುತ್ತಿಲ್ಲ - ಅವು ಎಲ್ಲ ಕಡೆ ಹಾರಾಡುತ್ತಿವೆ. ನಾನೇನಾದರೂ ನಿಮ್ಮನ್ನು ಈಗ ಇಲ್ಲಿ ಒಂದೂವರೆ ಘಂಟೆ ಕೂರಿಸಿದರೆ, ನಿಮ್ಮ ಕಾಲುಗಳು ಅದರದೇ ಕಥೆಯನ್ನು ಹೇಳುತ್ತವೆ. ನಾನು ಎರಡು ಘಂಟೆ ಅಥವಾ ಅದಕ್ಕಿಂತ ಜಾಸ್ತಿ ಕೂರಿಸಿದರೆ, ನಿಮ್ಮ ಮೂತ್ರಕೋಶವು ತನ್ನದೇ ಕಥೆಯನ್ನು ಪ್ರಾರಂಭಿಸುತ್ತದೆ. ಆಗ ನೀವು ಸ್ವರ್ಗ ಅಥವಾ ಪರಮಾರ್ಥ ಯಾವುದನ್ನೂ ಲೆಕ್ಕಿಸುವುದಿಲ್ಲ. ಆಗ ನಿಮಗೆ ಹೋಗಬೇಕಿರುವುದು ಒಂದೇ ಒಂದು ಸ್ಥಳಕ್ಕಷ್ಟೇ. ಕೆಲವರ ವಿವಶತೆ ಆಹಾರವಾದರೆ, ಮತ್ತೆ ಕೆಲವರಿಗೆ ಲೈಂಗಿಕತೆ ಅಥವಾ ಇತರ ದೈಹಿಕ ವಿವಶತೆಗಳಿರಬಹುದು. ಈ ವಿವಶತೆಗಳು ಮೇಲೆದ್ದವೆಂದರೆ, ಬೇರೆಲ್ಲವೂ ಕಣ್ಮರೆಯಾಗುತ್ತದೆ. ಇದಕ್ಕೆಲ್ಲಾ ಬೇರೆ ಬೇರೆ ರೀತಿಯ ಪರಿಹಾರಗಳಿವೆ.

ವಿವಶತೆಗಳನ್ನು ತೊಡೆದು ಹಾಕುವುದು.

ಒಮ್ಮೆ, ಒಬ್ಬ ಮಹಿಳೆ ಸಿನಿಮಾ ನೋಡುತ್ತಿದ್ದಳು. ಸಿನಿಮಾ ನಡೆಯುತ್ತಿದ್ದಾಗಲೇ ಅವಳು ಶೌಚಾಲಯಕ್ಕೆ ಹೋದಳು. ಅವಳು ವಾಪಸ್ಸು ಬರುವಾಗ ಆ ಸಾಲಿನ ಕೊನೆಯಲ್ಲಿ ಕುಳಿತಿದ್ದ ಒಬ್ಬಾತನ ಭುಜವನ್ನು ತಟ್ಟಿ ಕೇಳಿದಳು, “ನಾನು ಹೋಗುವಾಗ ನಿನ್ನ ಕಾಲನ್ನು ತುಳಿದೆನೇನು?”. ಆತನು ಅವಳು ಕ್ಷಮೆ ಕೇಳುತ್ತಾಳೆಂದುಕೊಂಡು “ಹೌದು" ಎಂದನು. ಆದರೆ ಅವಳು “ಹಾಗಾದರೆ ಇದೇ ನನ್ನ ಸಾಲು" ಎಂದಳು. ಜನರು ನಾನಾ ರೀತಿಯ ವಿವಶತೆಗಳನ್ನು ಪ್ರದರ್ಶಿಸುತ್ತಾರೆ. ನೀವು ಶರೀರವನ್ನು ಹೊಂದಿರುವಾಗ ನಾನಾ ರೀತಿಯ ವಿವಶತೆಗಳು ಇರುತ್ತವೆ - ತಿನ್ನುವುದು, ಮಲಗುವುದು, ಶೌಚಕ್ಕೆ ಹೋಗುವುದು - ಇನ್ನೂ ಅನೇಕಾನೇಕ ವಿಷಯಗಳು. ಆದರೆ ಅದೇ ನಿಮ್ಮ ಜೀವನದ ಗುರಿಯಾಗಬಾರದು.

ಹಠದ ಒಂದು ಅರ್ಥ ಪಟ್ಟುಬಿಡದಿರುವುದು. ಅಂದರೆ ನಿಮ್ಮ ದೇಹ, ಮನಸ್ಸು, ಭಾವನೆಗಳು ಅಥವಾ ನಿಮ್ಮ ಕುಟುಂಬ ಇಷ್ಟ ಪಡಲಿ ಪಡದಿರಲಿ, ನೀವು ಬೆಳಗ್ಗೆ ಎದ್ದು ಹಠ ಯೋಗವನ್ನು ಮಾಡಿಯೇ ಮಾಡುತ್ತೀರಿ.

ಹಠದ ಒಂದು ಅರ್ಥ ಪಟ್ಟುಬಿಡದಿರುವುದು. ಅಂದರೆ ನಿಮ್ಮ ದೇಹ, ಮನಸ್ಸು, ಭಾವನೆಗಳು ಅಥವಾ ನಿಮ್ಮ ಕುಟುಂಬ ಇಷ್ಟ ಪಡಲಿ ಪಡದಿರಲಿ, ನೀವು ಬೆಳಗ್ಗೆ ಎದ್ದು ಹಠ ಯೋಗವನ್ನು ಮಾಡಿಯೇ ಮಾಡುತ್ತೀರಿ. ನಿಮ್ಮ ದೈಹಿಕ ವಿವಶತೆಗಳನ್ನು ತೊಡೆದು ಹಾಕಲು ಒಂದು ನಿರ್ದಿಷ್ಟ ಧೃಡತೆ ಇರಲೇ ಬೇಕು. ಶರೀರಕ್ಕೆ ದಶಲಕ್ಷ ವರ್ಷಗಳ ವಿಕಸನದ ಚರಿತ್ರೆಯೇ ಇದೆ. ಅದಕ್ಕೆ ತನ್ನದೇ ಆದ ಪ್ರವೃತ್ತಿಗಳು, ಉದ್ದೇಶಗಳು ಮತ್ತು ವಿವಶತೆಗಳು ಇರುತ್ತವೆ. ಅದು ಅಷ್ಟು ಬೇಗ ಬಿಟ್ಟು ಕೊಡುವುದಿಲ್ಲ.

ನಮ್ಮ ಆಶ್ರಮದಲ್ಲಿ ಸಾಮಾನ್ಯವಾಗಿ ದಿನಕ್ಕೆ ಎರಡು ಊಟಗಳಿರುತ್ತವೆ. ಬೆಳಗ್ಗೆ ಹತ್ತು ಘಂಟೆಗಿರುವ ಮೊದಲ ಊಟಕ್ಕೂ, ಸಂಜೆ ಏಳು ಘಂಟೆಗೆ ಇರುವ ರಾತ್ರಿಯೂಟಕ್ಕೂ ನಡುವೆ ಇರುವ ಸಮಯದಲ್ಲಿ ಜನರಿಗೆ ಹಸಿವಾಗುತ್ತದೆ. ಅವರು ಭಿಕ್ಷಾ ಹಾಲಿನಲ್ಲಿ ರಾತ್ರಿಯೂಟಕ್ಕೆ ಬಂದು ಕೂರುತ್ತಾರೆ. ಸ್ವಯಂ ಸೇವಕರು ಬಡಿಸುತ್ತಾರೆ, ಮತ್ತು ತಟ್ಟೆಯಲ್ಲಿ ಊಟವಿದ್ದಾಗ ನಿಮಗೆ ಅದನ್ನು ಕೂಡಲೇ ತಿನ್ನಬೇಕೆನಿಸುತ್ತದೆ. ಆದರೆ, ನೀವು ಎಲ್ಲರಿಗೂ ಬಡಿಸುವವರೆಗೂ ಕಾದು, ಎಲ್ಲರೂ ಜೊತೆಯಾಗಿ ಭೋಜನಮಂತ್ರವನ್ನು ಪಠಿಸಿ, ನಂತರವಷ್ಟೇ ನೀವು ತಿನ್ನುವುದು. ಇದೆಲ್ಲಾ ಹಠಯೋಗದ ಒಂದು ಭಾಗ. ನಿಮ್ಮ ದೇಹವನ್ನಷ್ಟೇ ಅಲ್ಲ, ನಿಮ್ಮ ಮನಸ್ಸನ್ನೂ ಅರಿವಿನಿಂದ ಇಟ್ಟುಕೊಳ್ಳುವ ಬಗ್ಗೆ ನೀವು ಪಟ್ಟುಬಿಡುವುದಿಲ್ಲ. ದೇಹದ ಭೌತಿಕ ಅಗತ್ಯಗಳು ಇನ್ನೂ ಇರುತ್ತವೆ, ಆದರೆ ಕಾಲಕ್ರಮೇಣ ನೀವು ಈ ವಿವಶತೆಗಳಿಂದಲೂ ಹೊರಬರುತ್ತೀರಿ. ನೀವು ಯಾವುದೇ ವಿವಶತೆಗಳಿಲ್ಲದೆ, ಯಾವುದೇ ಸಲಹೆ-ಸೂಚನೆಗಳಿಲ್ಲದೆ, ಇಲ್ಲಿ ಕುಳಿತಿದ್ದೀರೆಂದರೆ, ನೀವು ಧ್ಯಾನಮಗ್ನರಾಗಿದ್ದೀರೆಂದು ಅರ್ಥ. ನೀವೀಗ ದಾಟಲು ಶ್ರಮಿಸುತ್ತಿರುವುದು ಕರ್ಮದ ವಿವಶತೆಯ ಚಕ್ರಗಳು. ಕೇವಲ ನಿಮ್ಮ ಶರೀರವನ್ನು ಬಳಸಿಕೊಂಡು ಈ ವಿವಶತೆಗಳಿಂದ ಹೊರಬರಲು ಸ್ವಲ್ಪ ಸಮಯ ಮತ್ತು ಪ್ರಯತ್ನ ಅಗತ್ಯ. ಅದರೆ ಇದು ಖಂಡಿತವಾಗಿಯೂ ಒಂದು ವಿಶಿಷ್ಟ ಅನುಭವ.

ಹಠಯೋಗ ಬರೀ ದೇಹವನ್ನು ಬಗ್ಗಿಸುವುದು ಅಥವಾ ತಿರುಚುವುದಷ್ಟೇ ಅಲ್ಲ. ಮೂಲತಃ, ಇದು ನಾವು ಪ್ರಜ್ಞಾಪೂರ್ವಕವಾಗಿ ನಮ್ಮಲ್ಲಿರುವ ವಿವಶತೆಗಳನ್ನು ತೊಡೆದು ಹಾಕುವ ಒಂದು ಪ್ರಯತ್ನ - ದಶಲಕ್ಷ ವರ್ಷಗಳಿಂದ ಜೀವ ವಿಕಸನದೊಂದಿಗೆ ಹೊತ್ತು ತಂದಿರುವ ವಿವಶತೆಗಳು. ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುವ ವಿಷಯವೆಂದರೆ, ಅಥವಾ ‘ಮನುಷ್ಯ’ನಾಗಿರುವ ಸಾರಸತ್ವವೇ ವಿವಶತೆಗಳಿಂದ ಅರಿವಿನೆಡೆಗೆ ಸಾಗುವ ಸಾಧ್ಯತೆ. ನೀವು ನಿಮ್ಮ ವಿವಶತೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿದರೆ ಮಾತ್ರ ನೀವು ಒಬ್ಬ ಪರಿಪೂರ್ಣ ಮನುಷ್ಯನಾಗಲು ಸಾಧ್ಯ. ಇಲ್ಲವಾದರೆ ನೀವು ಮನುಷ್ಯರಲ್ಲ, ಮನುಷ್ಯ ‘ಆಗು’ತ್ತಿರುತ್ತೀರಿ ಅಷ್ಟೆ. ನಾವು ಇದನ್ನು "ಪ್ರಾಜೆಕ್ಟ್ ಮಾನವ" ಎನ್ನಬಹುದು.

ಸಂಪಾದಕರ ಟಿಪ್ಪಣಿ: ಈಶ ಹಠಯೋಗ ಪ್ರೋಗ್ರಾಮ್ ಗಳು ಶಾಸ್ತ್ರೀಯ ಹಠಯೋಗದ ಒಂದು ಸಮಗ್ರ ಪರಿಶೋಧನೆ. ಇದು ಈ ಯುಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕಳೆದು ಹೋಗಿರುವ ಈ ಸನಾತನ ಶಾಸ್ತ್ರದ ಅನೇಕ ಆಯಾಮಗಳಿಗೆ ಪುನರುಜ್ಜೀವನ ನೀಡುತ್ತದೆ. ಈ ಕಾರ್ಯಕ್ರಮಗಳು ಯೋಗಾಭ್ಯಾಸಗಳ ಕೆಲವು ಪರಿಣಾಮಕಾರಿ ಅಭ್ಯಾಸಗಳಾದ ಉಪ-ಯೋಗ, ಅಂಗಮರ್ದನ, ಸೂರ್ಯ ಕ್ರಿಯಾ, ಸೂರ್ಯ ಶಕ್ತಿ, ಯೋಗಾಸನ ಮತ್ತು ಭೂತಶುದ್ಧಿ ಮುಂತಾದವುಗಳನ್ನು ಪರಿಶೋಧಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ನಿಮ್ಮ ಹತ್ತಿರದ ಹಠಯೋಗ ಕಾರ್ಯಕ್ರಮಗಳನ್ನು ಇಲ್ಲಿ ಹುಡುಕಿ