ಇಲ್ಲಿ ಸದ್ಗುರುಗಳು ವಿವರಿಸುವುದೇನೆಂದರೆ, ದೈವೀಕೃಪೆಯು ಎಲ್ಲಾ ಕಡೆ ಇದೆ. ಸಂಪೂರ್ಣವಾಗಿ ಗ್ರಹಣಶೀಲರಾಗಿರುವವರು ಅದನ್ನು ಅವರು ಎಲ್ಲಿದ್ದರೂ ಪಡೆದುಕೊಳ್ಳುವರು. ಅವರಿಗೆ ಒಂದು ಕಲ್ಲು ಕೂಡ ಗುರುವಾಗಬಹುದು. ಅಂತಹವರು ಅಪರೂಪ. ಆದರೆ ತಮ್ಮದೇ ಮನಸ್ಸಿನಿಂದ ತುಂಬಿ ಹೋಗಿರುವ ಹೆಚ್ಚಿನವರಿಗೆ ಈ ಸರ್ವವ್ಯಾಪೀ ದೈವತ್ವವು ಅನುಭವಕ್ಕೆ ಬರದಿರಬಹುದು. ಅವರಿಗೆ ಅನುಭವಕ್ಕೆ ಬರುವಂತೆ ಮಾಡಲು ಒಂದು ರೀತಿಯ ಶಕ್ತಿಸ್ಥಿತಿಯನ್ನು ಏರ್ಪಡಿಸಬೇಕಾಗುತ್ತದೆ. ಆದ್ದರಿಂದ ದೇವಸ್ಥಾನ, ಧ್ಯಾನ, ಜೀವಂತ ಗುರು ಇತ್ಯಾದಿಗಳು ಅವರಿಗೆ ಬೇಕಾಗುತ್ತವೆ. ಅದೂ ಅಲ್ಲದೆ ತಮ್ಮದೇ ಮನಸ್ಸಿನಿಂದ ತುಂಬಿಹೋಗಿರುವವರಿಗೆ ಅವರನ್ನು ಸತತವಾಗಿ ಸರಿದಾರಿಯಲ್ಲಿಡಲು ಅವರಿಗಿಂತ ಜಾಣ ಮನಸ್ಸು ಬೇಕು. ದೇಹತ್ಯಾಗ ಮಾಡಿರುವ ಗುರುವಿನೊಂದಿಗೆ ಅದು ಸಾಧ್ಯವಿಲ್ಲ. ಆದ್ದರಿಂದ ದೇಹತ್ಯಾಗ ಮಾಡಿದಂತಹ ಗುರುಗಳು ಅವರಿಗೆ ಒಂದು ಪ್ರೇರಣೆಯಾಗಬಹುದಷ್ಟೆ ಹೊರತು ಮಾರ್ಗದರ್ಶಕರಲ್ಲ.
Jeevantha Guruvina Mahatvavenu?
ಲಿಪ್ಯಂತರ:
ಪ್ರಶ್ನೆ: ದೇಹತ್ಯಾಗ ಮಾಡಿರೋ ಗುರುವಿಗೆ ಹೋಲ್ಸಿದ್ರೆ ಜೀವಂತ ಗುರುವಿನ ಮಹತ್ವ ಏನು? ಇವ್ರಿಬ್ರಲ್ಲಿ ವ್ಯತ್ಯಾಸ ಏನು?
ಸದ್ಗುರು: ಬದುಕಿರೋ ಮತ್ತು ಸತ್ತಿರೋ ವ್ಯಕ್ತಿಗಳ ನಡುವಿನ ವ್ಯತ್ಯಾಸವನ್ನೂ ವಿವರಿಸ್ಬೇಕಾ ನಾನು? (ನಗು) ಬಹಳ ವ್ಯತ್ಯಾಸ ಇದೆ. ಅಲ್ವಾ? ಈಗ್ ನಿಮ್ಗೆ ಹೇಗಿರೋದಿಕ್ಕೆ ಇಷ್ಟ - ಜೀವಂತ್ವಾಗಿರೋದಾ ಸತ್ತಿರೋದಾ? ಜೀವಂತ್ವಾಗಿರೋದು, ಅಲ್ವಾ? ಹಾಗಾಗಿ ಜೀವಂತ್ವಾಗಿರೋ ಮಹತ್ವವನ್ನ ನಾನೇನೂ ಹಾಡಿಹೊಗಳ್ಬೇಕಾಗಿಲ್ಲ. ಜೀವಂತ್ವಾಗಿರೋದು ತುಂಬ ಮಹತ್ವದ್ದು, ಅಲ್ವಾ? ಮ್? ನೀವು ಗುರುವೋ ಅಲ್ವೋ, ಜೀವಂತ್ವಾಗಿರೋದು ತುಂಬ ಮಹತ್ವದ್ದು, ಅಲ್ವಾ? ಅದೇ ಮಹತ್ವ ಎಲ್ಲಾದಕ್ಕೂ ಅನ್ವಯಿಸುತ್ತೆ. ದೇಹವನ್ನ ಬಿಟ್ಟು ಹೋಗಿರೋವಂತಾವ್ರು ನಮ್ಗೆ ದೊಡ್ಡ ಪ್ರೇರಣೆಯಾಗ್ಬಹುದು, ಆದರೆ ನಿಮ್ಗೆ ಅವ್ರ ಜೊತೆ ತೊಡಗೋದಿಕ್ಕಾಗಲ್ಲ. ದೇಹವನ್ನ ತ್ಯಜಿಸಿದ ನಂತರ ಒಂದು ನಿರ್ದಿಷ್ಟ ಸಮಯದ ವರೆಗೆ ಸಕ್ರಿಯರಾಗಿರೋದಿಕ್ಕೆ ಅವ್ರು ತಯಾರಿಗಿರ್ಬಹುದು, ಆ ಸಾಮರ್ಥ್ಯ ಅವರಲ್ಲಿರ್ಬಹುದು. ತಮ್ಮನ್ನ ತಾವು ಅದಕ್ಕೆ ಸಿದ್ಧಪಡಿಸಿಕೊಂಡಿದ್ರೆ, ತಮ್ ಮೇಲೆ ಒಂದು ಮಟ್ಟದ ಪ್ರಭುತ್ವವನ್ನ ಅವ್ರು ಸಾಧಿಸಿದ್ರೆ, ದೇಹವನ್ನ ತ್ಯಜಿಸಿದ ನಂತರ ಒಂದು ನಿರ್ದಿಷ್ಟ ಸಮಯದ ವರೆಗೆ ಸಕ್ರಿಯರಾಗಿರೋವಂತ ಕೆಲವ್ರು ಇರ್ಬಹುದು. ಹಾಗೇನೂ ಇಲ್ದೇ ಇದ್ರೆ, ಅವ್ರ ಪ್ರಾಣಶಕ್ತಿಗಳು ನಿಮ್ ಸಾಧನೆಗೆ ಅನುಕೂಲಕರವಾಗಿರುತ್ವೆ, ಆದ್ರೆ ಮಾರ್ಗದರ್ಶನವನ್ನೇನೂ ನೀಡಲ್ಲ. ಅವ್ರು ನಿಮ್ಗೆ ಒಳ್ಳೆ ವಾತಾವರಣ, ಒಳ್ಳೆ ಪರಿಸರವಾಗ್ತಾರೆ, ಅವ್ರು ಒಳ್ಳೆ ಮಣ್ಣಾಗ್ತಾರೆ ನೀವು ಚೆನ್ನಾಗ್ ಬೆಳೆಯೋದಿಕ್ಕೆ, ಆದ್ರೂ ಮಾರ್ಗದರ್ಶಕರೇನೂ ಆಗಲ್ಲ.
ಸದ್ಯಕ್ಕೆ ನಿಮ್ಮಲ್ಲಿ ಗ್ರಹಣಶೀಲತೆಯ ಅಂಶ ತುಂಬ ಕಡಿಮೆಯಿದೆ. ನೀವು ಬಹುಪಾಲು ನಿಮ್ದೇ ಮನಸ್ಸು. ಅಲ್ವಾ? ಮ್? ನಾನ್ ಹೇಳ್ತಿರೋದು ಸರಿ ತಾನೇ? ಹೌದು. ನೀವು ನಿಮ್ದೇ ಮನಸ್ಸಿನಿಂದ ತುಂಬ್ ಹೋಗಿದ್ದಾಗ, ನಿಮ್ಗ ಮಾರ್ಗದರ್ಶನದ್ ಮೇಲೆ ಮಾರ್ಗದರ್ಶನ, ಮಾರ್ಗದರ್ಶನದ್ ಮೇಲೆ ಮಾರ್ಗದರ್ಶನ ಬೇಕು. ನೀವು ಸಂಪೂರ್ಣವಾಗಿ ಗ್ರಹಣಶೀಲರಾಗಿದ್ರೆ, ನಿಮ್ಗೆ ಗುರುವಿನ್ ಅಗತ್ಯಾನೂ ಇಲ್ಲ. ಯಾಕಂದ್ರೆ ದೈವೀಕೃಪೆ ಎಲ್ಲಾ ಕಡೆ ಇದೆ. ನಿಮ್ಗೆ ಗುರುವಿನ್ ಅಗತ್ಯವಾಗ್ಲೀ, ದೇವಸ್ಥಾನ, ಧ್ಯಾನ ಅಥವಾ ಇನ್ಯಾವುದ್ರ ಅಗತ್ಯವಾಗ್ಲೀ ಇರೋದೇ ಇಲ್ಲ, ನೀವು ಸಂಪೂರ್ಣವಾಗಿ ಗ್ರಹಣಶೀಲರಾಗಿದ್ರೆ. ಅಂತವ್ರು ಬಹಳ ಅಪರೂಪ. ಸದ್ಯಕ್ಕೆ ನೀವು ಬಹುಪಾಲು ನಿಮ್ಮ ಮನಸ್ಸೇ. ಗ್ರಹಣಶೀಲತೆಯ ಕ್ಷಣಗಳು ಅಲ್ಲೊಂದು ಇಲ್ಲೊಂದು ಬರುತ್ತೆ ಅಷ್ಟೇ. ಅಲ್ವಾ? ನೀವು ಬಹುಪಾಲು ಮನಸ್ಸೇ ಆಗಿದ್ದಾಗ, ಜೀವಂತವಾಗಿರೋರೇ ಉತ್ತಮ ನಿಮ್ಗೆ, ಮೃತರಾಗಿರೋರಲ್ಲ. ನೀವು ಸಂಪೂರ್ಣವಾಗಿ ಗ್ರಹಣಶೀಲರಾಗಿದ್ರೆ, ಮೃತರಾಗಿರೋರ್ ಗುರುವಿನ ಜೊತೆ, ಅಥ್ವಾ ಅದೂ ಇಲ್ದೇ ಇದ್ರೂ ನೀವು ಚೆನ್ನಾಗೇ ಮುಂದ್ ವರೀತೀರಿ. ಯಾಕಂದ್ರೆ ದೈವೀಕೃಪೆ ಅಸ್ತಿತ್ವದ ಯಾವುದೋ ಒಂದ್ ಕಡೆ ಮಾತ್ರ ಇಲ್ಲ.
ಇಡೀ ಅಸ್ತಿತ್ವದಲ್ಲಿ ದೈವೀಕೃಪೆ ಇಲ್ದೇ ಇರೋವಂತಹ ಸ್ಥಳಾನೇ ಇಲ್ಲ. ಕೆಲವು ಸ್ಥಳಗಳು ಹೆಚ್ಚು ಅನುಕೂಲಕರವಾಗಿರ್ಬಹುದು, ಅದ್ ಬೇರೆ ವಿಷ್ಯ, ಆದ್ರೆ ಇಡೀ ಅಸ್ತಿತ್ವದಲ್ಲಿ ದೈವೀಕೃಪೆ ಇಲ್ದೇ ಇರೋವಂತಹ ಸ್ಥಳಾನೇ ಇಲ್ಲ. ಯಾವುದಾದ್ರೂ ಒಂದು ಸ್ಥಳದಲ್ಲಿ ಅದು ನೀವು ಗ್ರಹಿಸೋವಷ್ಟು ತೀವ್ರವಾಗಿ ತುಡೀತಾ ಇದ್ಯಾ ಅನ್ನೋದಷ್ಟೇ ಪ್ರಶ್ನೆ. ಯಾಕಂದ್ರೆ ನಿಮ್ಮ ಗ್ರಹಣಶೀಲತೆಗೆ ಒಂದು ಮಟ್ಟದ ಜೋಮು ಹಿಡ್ದಿರ್ಬಹುದು. ಈಗ ನೋಡಿ, ನೀವಿಲ್ಲಿ ಕೂತಿದೀರಿ. ಇದೊಂದ್ ತೋಟ ಅಷ್ಟೇ ಅಂತ ಅಂದ್ಕೊಳ್ತೀರಿ. ಅದೇ ನೀವು ದೇವಸ್ಥಾನದ್ ಒಳಗ್ ಹೋದ್ರೆ, ಹೀಗಾಗ್ತೀರಿ. ಮ್? ಆದ್ರೆ ಕೆಲವ್ರು ಧ್ಯಾನಲಿಂಗ ಗುಡಿಯೊಳಗ್ ಹೋಗಿ ಆಚೆ ಈಚೆ ನೋಡ್ತಾರೆ. ಏನೂ ಆಗ್ತಾ ಇಲ್ಲ. ಬರೀ ಟಪ್ ಟಪ್ ಟಪ್ ಅಂತ ನೀರಿನ್ ಹನಿಗಳು ಬೀಳ್ತಾ ಇವೆ. "ಏನೂ ಆಗ್ತಿಲ್ಲ, ಏನಾಗ್ತಿದೆ ಇಲ್ಲಿ?" ಅದಕ್ಕೆ ನಾವು ಅವ್ರನ್ನ ತಣ್ಣೀರ್ ನಲ್ಲಿ ಮುಳುಗು ಹಾಕಿಸ್ತೀವಿ... (ನಗು) ಇಲ್ಲಿ. ಆಮೇಲೆ ಅವ್ರ್ ಹೋಗಿ ಅಲ್ಲಿ ಕೂರ್ತಾರೆ ಮತ್ತು... ಏನೋ ಆಗ್ತಾ ಇದೆ. ಇನ್ನೂ ಕೆಲವ್ರಿದಾರೆ, ಅವ್ರನ್ನ ತಣ್ಣೀರ್ನಲ್ಲಿ ಮೂರು ಸರ್ತಿ ಮುಳುಗ್ ಹಾಕ್ಸಿದ್ರೂ ಏನೂ ಆಗಲ್ಲ, ಅಲ್ ಹೋಗ್ ಕೂತು ಮೇಲೆ ಕೆಳಗೆ ನೋಡ್ತಾರೆ. ಅವ್ರನ್ನ ಭೈರವಿ ಗುಡಿಗೆ ತಗೊಂಡು ಹೋಗಿ, ತಕ್ಷಣ ಅವ್ರು ಎಚ್ಚೆತ್ ಬಿಡ್ತಾರೆ. ಇವೆಲ್ಲ ಬೇರೆ ಬೇರೆ ತರದ ಶಕ್ತಿಸ್ಥಿತಿಗಳು. ಅದು ಇಲ್ಲೇನೂ ಕಡಿಮೆ ಇದೆ ಅಂತ ಅಲ್ಲ; ಅದು ಇಲ್ಲೂ ಇದೆ, ಆದ್ರೆ ಅದು ನೀವು ಗ್ರಹಿಸ್ ಬಹುದಾದಷ್ಟು ಮಟ್ಟಿಗಿನ ತೀವ್ರತೆಯಲ್ಲಿಲ್ಲ. ನೀವೆಲ್ಲಿದ್ರೂ ಅದು ಇದ್ದೇ ಇದೆ. ಇಲ್ಲಿ ಹಿಂದೆ ಬೋರ್ಡ್ ಗಳು ಇರ್ತಾ ಇದ್ವು. ಇನ್ನೂ ಇದ್ಯಾಂತ ಗೊತ್ತಿಲ್ಲ, ನಾನು ಹೋಗಿ ಚೆಕ್ ಮಾಡಿಲ್ಲ. ನಾವು ಮೊದ್ಲಿಗೆ ಬಂದಾಗ ಈ triangular block ನ ಓಪನ್ ಮಾಡಿದ್ವಿ. ಆವಾಗ ಬರೀ ಒಂದು ಗುಡಿಸ್ಲಿತ್ತು. ಈ triangular block ನಲ್ಲಿ ನಾವು ಮೊದ್ಲು ಕಟ್ಟಿದ್ದು ಒಂದು ಕೋಣೆ, ಮತ್ತೆ ಶೌಚಾಲಯದ ಒಂದ್ block. ಆಮೇಲ್ ನಾನು ನೋಡ್ದೆ ಜನ್ರಿಗೆ toilet problem ಗಳಿದ್ವು. Toilet problem ಅಂದ್ರೆ ಏನೂಂತ ಗೊತ್ತಾ ನಿಮ್ಗೆ?
ಒಮ್ಮೆ ಹೀಗಾಯ್ತು. ಶಂಕರನ್ ಪಿಳ್ಳೈ ಡಾಕ್ಟರ್ ಹತ್ರ ಹೋದ "ಡಾಕ್ಟ್ರೇ, ನಂಗೆ ತುಂಬ ಸೀರಿಯಸ್ Toilet problem ಇದೆ". ಡಾಕ್ಟ್ರು ಕೇಳಿದ್ರು "ಏನ್ ತೊಂದ್ರೆ? ಮೂತ್ರ ಮಾಡೋದಿಕ್ಕೆ ಆಗ್ತಾ ಇಲ್ವಾ?" "ಇಲ್ಲ ಡಾಕ್ಟ್ರೆ, ಅದ್ ತುಂಬ ಚೆನ್ನಾಗ್ ಆಗ್ತಾ ಇದೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಸರಿಯಾಗಿ ಆಗತ್ತೆ" "ಹಾಗಿದ್ರೆ ಕಕ್ಕಸು ಸರಿಯಾಗಿ ಹೋಗ್ತಾ ಇಲ್ವಾ, ಏನಾಗ್ತಿದೆ?" "ಇಲ್ಲ ಡಾಕ್ಟ್ರೆ, ಅದೂ ತುಂಬ ಚೆನ್ನಾಗ್ ಆಗ್ತಾ ಇದೆ. ಪ್ರತಿದಿನ ಬೆಳಗ್ಗೆ 7 ಗಂಟೆಗೆ ಸರಿಯಾಗಿ, ಯಾವತ್ತೂ ತಪ್ಪಲ್ಲ" ಆಮೇಲೆ ಡಾಕ್ಟ್ರು ಯೋಚ್ನೆ ಮಾಡಿ "ಹಾಗಾದ್ರೆ ಏನ್ toilet problem ನಿಮ್ಗೆ?". "ಆದ್ರೆ ಡಾಕ್ಟ್ರೇ, ನಾನು ದಿನಾ ಏಳೋದು 8 ಗಂಟೆಗೆ" (ನಗು)
ಹೀಗೆ ಇಲ್ಲಿ ಜನ್ರಿಗೆ ಈ ತರದ toilet problem ಗಳಿದ್ವು. ಅದು ಆಗ್ತಾ ಇರ್ಲಿಲ್ಲ ಅಂತ ಅಲ್ಲ, ಆಗ್ತಾ ಇತ್ತು, ಆದ್ರೆ ಸ್ವಲ್ಪ ಗಲೀಜಾಗಿ ಆಗ್ತಾ ಇತ್ತು. ಆದ್ರಿಂದ ನಾನು ಅವ್ರಿಗೆ ಒಂದು ಬೋರ್ಡ್ ಹಾಕೋದಿಕ್ಕೆ ಹೇಳ್ದೆ "ಇಲ್ಲೂ ದೈವತ್ವ ಇದೆ" ಅಂತ. ಪ್ರತೀ ಶೌಚಾಲಯದ್ ಒಳ್ಗಡೆ, ನೀವು ಬಾಗ್ಲು ಮುಚ್ಚಿ ಕೂತಾಗ ಅದು ಹೇಳುತ್ತೆ "ಇಲ್ಲೂ ದೈವತ್ವ ಇದೆ" (ನಗು) - ನೀವು ಸ್ವಲ್ಪ ಆದರದಿಂದ ಮಲವಿಸರ್ಜನೆ ಮಾಡ್ಲಿ ಅಂತ. ಮಲವಿಸರ್ಜನೇನೂ ಒಂದು ಆಧ್ಯಾತ್ಮಿಕ ಪ್ರಕ್ರಿಯೆಯಾಗ್ಬಹುದು. ಹೇಗಿದ್ರೂ ಎಲ್ಲಾ ಆಧ್ಯಾತ್ಮಿಕ ಪ್ರಕ್ರಿಯೆಯ ಉದ್ದೇಶ ನಿಮ್ಮನ್ನು ಶುದ್ಧಗೊಳಿಸೋದು. ಇದು ನೀವು ದಿನದಲ್ಲಿ ಮಾಡ್ಬಹುದಾದ ಅತ್ಯಂತ ಒಳ್ಳೆಯ ಶೌಚದ್ ಕೆಲ್ಸ, ಅಲ್ವಾ?
ಹೀಗೆ ದೈವೀಕೃಪೆ ಅಲ್ಲೂ ಇದೆ ಅಂತ ಹೇಳ್ತಿದೀನಿ. ಅದು toilet ನಲ್ಲಿ ಕಡಿಮೆ ಏನೂ ಇಲ್ಲ. ಆದ್ರೆ ಅದು ನಿಮ್ಗೆ toilet ನಲ್ಲಿ ಅನುಭವಕ್ಕೆ ಬರ್ದೇ ಇರ್ಬಹುದು, ಯಾಕಂದ್ರೆ ನಿಮ್ಗೆ ಅಲ್ಲಿ ನಿಮ್ ಕೆಲ್ಸ ಮುಗ್ಸಿ ಹೊರಗ್ ಹೋಗ್ಬೇಕಾಗಿದೆ ಅಷ್ಟೆ. ದೇವಸ್ಥಾನ ಹೆಚ್ಚು ಅನುಕೂಲಕರ. ಬರೀ ಪರಿಸರದ್ ದೃಷ್ಟಿಯಿಂದಲ್ಲ, ಶಕ್ತಿಸ್ಥಿತಿಯ ದೃಷ್ಟಿಯಿಂದ್ಲೂ ಅದು ನಿಮ್ಗೆ ಅನುಭವಕ್ಕೆ ಬರೋ ತರ ಅನುಕೂಲಕರವಾಗಿ ಮಾಡಲ್ಪಟ್ಟಿದೆ. ಪ್ರಾಣಶಕ್ತಿಯು ಎಲ್ಲಾ ಕಡೆಯಿದೆ, ಆದ್ರೆ ನಿಮ್ಗೆ ಅದನ್ನ ಒಳತಗೊಳೋದಿಕ್ಕೆ ಆಗ್ತಾ ಇಲ್ಲ. ನೀವದನ್ನ ಒಂದು ನಿರ್ದಿಷ್ಟ ರೀತಿಯಲ್ಲಿ ಆಹಾರವನ್ನಾಗಿಸಿದ್ ಮೇಲೇನೇ ಸೇವಿಸೋದಿಕ್ಕಾಗುತ್ತೆ. ಒಂದ್ ಆಡು ಬಂದು ಈ ಹುಲ್ಲನ್ನ ಮೇಯತ್ತೆ. ಅದರ್ ಪೋಷಣೆ ಆಗೋಯ್ತು. ಆದ್ರೆ ನಿಮ್ಗೆ ಈ ಹುಲ್ಲನ್ನ ತಿಂದು ಶಕ್ತಿ ಪಡ್ಕೊಳ್ಳೋದಿಕ್ಕಾಗಲ್ಲ. ನಿಮಗ್ ಬೇರೆ ರೀತಿಯ ಆಹಾರ ಬೇಕು. ಹಲವು ರೀತಿಯ ಕ್ರಿಮಿಕೀಟಗಳಿವೆ, ಹಾಗೇ ಹಲವು ಸೂಕ್ಷ್ಮಾಣುಜೀವಿಗಳಿವೆ - ಅವುಗಳ 90 ಪರ್ಸೆಂಟ್ ಪ್ರಾಣಶಕ್ತಿ ಬರೀ ಸೂರ್ಯನ್ ಬೆಳಕು ಮತ್ತು ಗಾಳಿಯಿಂದಾಗುತ್ತೆ - ನೀರೂ ಇಲ್ಲ, ಆಹಾರಾನೂ ಇಲ್ಲ. ಬರೀ 10% ಪ್ರಾಣಶಕ್ತಿ ನೀರು ಮತ್ತು ಅವು ಸೇವಿಸೋ ಸ್ವಲ್ಪ ಆಹಾರದಿಂದಾಗುತ್ತೆ ಅಷ್ಟೆ, ಯಾಕಂದ್ರೆ ಅವು ಸೂಕ್ಷ್ಮವಾಗಿವೆ. ನೀವು ಸೂಕ್ಷ್ಮ ಜೀವಿಯಾಗಿದ್ರೆ, ಎಷ್ಟು ಸೇವಿಸ್ತಾ ಇದ್ರಿ? ಸೂಕ್ಷ್ಮಾತಿಸೂಕ್ಷ್ಮ ಅಲ್ವಾ?
ನೀವೂ ಕೂಡಾ, ತುಂಬಾ ಗ್ರಹಣಶೀಲರಾದ್ರೆ ಇದನ್ನು ಗಮನಿಸ್ಬಹುದು... ನೀವು ನೋಡಿರ್ಬಹುದು, ದಿನ ಇಡೀ ನೀವು ಹರ್ಷೋಲ್ಲಾಸದಲ್ಲಿದ್ರೆ, ನೀವು ಸೇವ್ಸೋ ಆಹಾರದ್ ಪ್ರಮಾಣ ಕಡಿಮೆಯಾಗ್ ಬಿಡತ್ತೆ. ಯಾಕಂದ್ರೆ ಆಗ ನಿಮ್ ಗ್ರಹಣಶೀಲತೆ, ಅಂದ್ರೆ, ಬೆಳಕು, ಗಾಳಿ, ನೀರು ಇವನ್ನು ನೀವು ಪಡ್ಕೊಳೋ ರೀತಿ ಚೆನ್ನಾಗಿರತ್ತೆ. ಬಹಳ ಸುಲಭವಾಗಿ ನಿಮ್ಮ ಪ್ರಾಣಶಕ್ತಿಯ 60%ನ್ನ ಬೆಳಕು, ಗಾಳಿ ಮತ್ತು ನೀರುಗಳಿಂದ ಉತ್ಪಾದಿಸ್ಕೊಳ್ಬಹುದು. ಉಳಿದ್ 40%ನ ಮಾತ್ರ ಆಹಾರದಿಂದ ಪಡ್ಕೊಳ್ಬಹುದು. ಜಗತ್ತಿನಲ್ಲಿರೋ ಬಹುಪಾಲು ಜನ್ರು ಅವ್ರು ಈಗ ತಿಂತಿರೋ ಆಹಾರದ ಪ್ರಮಾಣದ 25 ರಿಂದ 30% ತಿಂದು ಆರಾಮಾಗಿ ಜೀವಿಸ್ಬಹುದು. ದೇಹದ ತೂಕ ಹಾಗೇ ಕಾಪಾಡ್ಕೊಂಡು, ತೂಕ ಏನೂ ಕಳ್ಕೊಳ್ದೇ, ದೇಹದ್ ತೂಕ ಹಾಗೇ ಕಾಪಾಡ್ಕೊಂಡು, ಚೆನ್ನಾಗಿ ಜೀವಿಸ್ಬಹುದು; ಹೆಚ್ಚು ಆರೋಗ್ಯ, ಹೆಚ್ಚು ಲವಲವಿಕೆ, ಚುರುಕುತನ ಮತ್ತು ಚೈತನ್ಯ ಪಡ್ಕೋ ಬಹುದು - ಬರೀ 25 ರಿಂದ 30% ಆಹಾರದಿಂದ. ನೀವು ಪ್ರಯೋಗ ಮಾಡಿ ನೋಡ್ಬಹುದು, ಅದಾಗುತ್ತೆ. ನೀವು ಭಾವಸ್ಪಂದನ ಕಾರ್ಯಕ್ರಮದಲ್ಲಿದ್ದಾಗ ನೀವು ಸಾಮಾನ್ಯವಾಗಿ ತಿನ್ನೋ ಆಹಾರದ 20-25% ಕೂಡ ತಿನ್ನಲ್ಲ ನೀವು. ಯಾಕಂದ್ರೆ ನಾವು ನಿಮ್ಗೆ ತಿನ್ನೋದಿಕ್ಕೆ ಟೈಮ್ ಕೊಡಲ್ಲ (ನಗು), ಮತ್ತು ಜನ್ರು ಯಾವಾಗ್ಲಿಗಿಂತ್ಲೂ ಜಾಸ್ತಿ ಉತ್ಸಾಹದಲ್ಲಿರ್ತಾರೆ. ಸಂಯಮ ಕಾರ್ಯಕ್ರಮಕ್ಕೆ ಬಂದಂತವ್ರು ಧ್ಯಾನಸ್ಥರಾದ್ರೆ ಬಹಳ ಕಡಿಮೆ ತಿಂತಾರೆ, ಮತ್ತು ಚೆನ್ನಾಗೇ ಇರ್ತಾರೆ.
ಹಾಗಾಗಿ ನಿಮ್ಮ ಗ್ರಹಣಶೀಲತೆಯನ್ನ ವರ್ಧಿಸ್ಕೊಳ್ಬೇಕು. ನಿಮ್ಮ ಗ್ರಹಣಶೀಲತೆಯನ್ನ ಹೆಚ್ಚಿಸ್ಕೊಂಡ್ರೆ, ಮೃತರಾಗಿರೋರು, ಜೀವಂತ್ವಾಗಿರೋರು, ಅಸ್ತಿತ್ವದಲ್ಲಿಲ್ದೇ ಇರೋರು ಕೂಡ ನಿಮ್ಗೆ ಸಹಾಯ ಮಾಡ್ತಾರೆ. ಆದ್ರೆ ನೀವು ನಿಮ್ದೇ ಮನಸ್ಸಿನಿಂದ ತುಂಬ್ ಬಿಟ್ಟಿದ್ದಾಗ ನೀವು ಜೀವಂತ್ವಾಗಿರೋರ್ ಜೊತೆ ಇರ್ಬೇಕು. ಇಲ್ದೇ ಇದ್ರೆ ನಿಮ್ಮನ್ನೇ ನೀವು ಮೋಸ ಮಾಡ್ಕೊಳ್ತೀರಾ. ದಿವ್ಯಸಂದೇಶಗಳನ್ನೆಲ್ಲಾ ಪಡೆಯೋದಿಕ್ಕೆ ಶುರು ಮಾಡ್ತೀರಾ, ನಿಮಗ್ ಇಷ್ಟವಾಗೋಂತ ಸಂದೇಶಗಳು. ನಿಮ್ ಗುರು ನಿಮ್ಗೆ ಸ್ವರ್ಗದಿಂದ ಸಂದೇಶ ಕಳ್ಸಿದ್ರೆ, "ನಾನು ನಿನ್ನನ್ನು ಪ್ರೀತಿಸ್ತೇನೆ" ಅಂತ, ಅದನ್ ನಂಬ್ ಬೇಡಿ. ಅದು ನಿಮ್ದೇ ಮನಸ್ಸು (ನಗು), ಅಲ್ವಾ? ಅದು ನಿಮ್ದೇ ಮನಸ್ಸು, ಅವರು ಆ ತರದ್ದೇನನ್ನೂ ಮಾಡಲ್ಲ. ಸ್ವರ್ಗದಿಂದ ಪ್ರೇಮಪತ್ರಗಳನ್ನ ಪಡೆಯೋದು ತುಂಬ ಚೀಪ್, ಯಾಕಂದ್ರೆ ಅದಕ್ಕೆ ಪೇಪರ್ ಏನೂ ಬೇಕಾಗಲ್ಲ. ಪರಿಸರದ್ ದೃಷ್ಟಿಯಿಂದ್ಲೂ ತುಂಬ ಸೂಕ್ಷ್ಮವಾದ್ ವಿಚಾರ ಪೇಪರ್. ಹಾಗಾಗಿ ಅದು ಒಂದು ತುಂಬ ಪರಿಸರಸ್ನೇಹೀ ಪ್ರೇಮ ಪ್ರಸಂಗ.
ಒಮ್ಮೆ ಹೀಗಾಯ್ತು. ಒಬ್ ಹುಡ್ಗ ಕಾಲೇಜಿಗ್ ಹೋದ. ಮೊದಲ್ನೇ ದಿನ, ಈ ಕಡೆ ನೋಡ್ದ. ಅವನ್ ಎಡಗಡೆ ಒಂದು ಅಂದವಾದ ಹುಡ್ಗಿ ಕೂತಿದ್ಲು. ಅವ್ನು ಒಂದ್ ಸಣ್ ಕಾಗದದ್ ತುಂಡಿನ್ ಮೇಲೆ "ನಾನು ನಿನ್ನ ಪ್ರೀತಿಸ್ತೀನಿ, ನೀನು?" ಅಂತ ಬರ್ದು ಅವ್ಳಿಗೆ ಪಾಸ್ ಮಾಡ್ದ. ಅವ್ಳು "ಇಲ್ಲ" ಅಂತ ಬರ್ದು ವಾಪಸ್ ಕೊಟ್ಳು. ಅವ್ನು ಅದನ್ ನೋಡಿ, "ಇಲ್ಲ" ಅಂತಿದ್ದಿದ್ದನ್ನ ಒರೆಸ್ ಬಿಟ್ಟು, ಅದನ್ನೇ ತನ್ನ ಹಿಂದ್ ಕೂತಿದ್ ಹುಡ್ಗಿಗೆ ಕೊಟ್ಟ (ನಗು). ಅವ್ಳು ಅದನ್ ನೋಡಿ, "ಹೌದು" ಅಂತ ಬರ್ದು ವಾಪಸ್ ಕೊಟ್ಳು. ಈ ಕತೆಯ ನೀತಿ ಏನೂಂದ್ರೆ (ನಗು), ಕಾಗದ ಉಳ್ಸಿ (ನಗು), ಪರಿಸರ ಉಳ್ಸಿ (ನಗು).
ಹಾಗಾಗಿ, ಅದು ಪರಿಸರದ್ ದೃಷ್ಟಿಯಿಂದ ಒಳ್ಳೇದು. ಆಧ್ಯಾತ್ಮಿಕ ದೃಷ್ಟಿಯಿಂದ ಒಳ್ಳೇದಲ್ಲ. ಹಾಗಾಗಿ ನೀವು ಬರೀ ಮನ್ಸೇ ಆಗಿದ್ದಾಗ, ನಿಮ್ಮನ್ ನಿರಂತರವಾಗಿ ಸರಿದಾರಿಯಲ್ಲಿಡೋದಕ್ಕೆ ಇನ್ನೊಂದ್ ಮನಸ್ ಬೇಕು. ನೀವು ಮನ್ಸಾಗಿಲ್ದೇ ಇದ್ದಿದ್ರೆ, ನೀವು ಬರೀ ಗ್ರಹಣಶೀಲರಾಗಿದ್ದಿದ್ರೆ, ಸತ್ತಿರೋರು ಅಥ್ವಾ ಅಸ್ತಿತ್ವದಲ್ಲಿಲ್ದೇ ಇರೋರು ಕೂಡ ನಿಮಗ್ ಸಹಾಯ ಮಾಡ್ತಾರೆ. ಒಂದ್ ಕಲ್ ಬಂಡೆ ಕೂಡ ನಿಮಗ್ ಸಹಾಯ ಮಾಡತ್ತೆ. ಏನಾದ್ರೂ, ಬರೀ ಒಂದ್ ಹುಲ್ಲು ಕೂಡ ನಿಮ್ ಗುರುವಾಗ್ಬಹುದು. ಹೌದು. ಆದ್ರೆ ನೀವ್ ಮನಸ್ಸು ರಹಿತರಾಗಿದ್ರೆ ಮಾತ್ರ. ನೀವು ಮನಸ್ಸಿನಿಂದ್ಲೇ ತುಂಬ್ ಹೋಗಿದ್ದಾಗ, ಅದಾಗಲ್ಲ. ಆಗ ನಿಮ್ಗೆ ಇನ್ನೊಂದ್ ಮನಸ್ಸು ಬೇಕು, ನಿಮ್ ಮನಸ್ಸಿಗಿಂತ್ಲೂ ಜಾಣವಾದ್ ಮನಸ್ಸು, ನಿಮ್ಮನ್ ಸತತವಾಗಿ ಸರಿದಾರಿಯಲ್ಲಿಡೋದಕ್ಕೆ (ನಗು).