ನಾವು ನಮ್ಮನ್ನು ಪರಿವರ್ತಿಸಿಕೊಳ್ಳಬೇಕಾದರೆ ಸೀರಿಯಸ್ ಆಗಿರೋದ್ರಿಂದ ರಜಾ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸದ್ಗುರುಗಳು ಇಲ್ಲಿ ಮಾತನಾಡುತ್ತಾರೆ. ಅದನ್ನು ಹೇಗೆ ಸಾಧ್ಯವಾಗಿಸುವುದು ಎಂಬುದನ್ನು ತಿಳಿಸುತ್ತಾ "ಜೀವನವನ್ನು ಸ್ವಲ್ಪ ಸಡಿಲಗೊಳಿಸಿ, ಸ್ವಲ್ಪ ಜಾಸ್ತಿ ನಗಿ, ನಿಮ್ಮ ಸುತ್ತ ಇರುವ ಜನರ ಜೊತೆ ನಿಮ್ಮನ್ನು ತೊಡಗಿಸಿಕೊಳ್ಳಿ, ಮತ್ತು ನಿಮಗೆ ಅಷ್ಟು important ಅನ್ನಿಸದೇ ಇರೋ ಸಂಗತಿಗಳನ್ನು ಮಾಡಿ" ಎಂಬ ಸಲಹೆಗಳನ್ನು ಅವರು ನಮಗಿಲ್ಲಿ ನೀಡುತ್ತಾರೆ.

Yake Swami ishtu serious?

ಲಿಪ್ಯಂತರ:

ಕೇಳುಗ: ಪ್ರಪಂಚಾನೇ ಮುಳ್ಗ್ ಹೋಗಿರೋ ತರ ಡೆಡ್ ಸೀರಿಯಸ್ ಆಗಿರೋವ್ರ್ ಗೆ ಯಾವ ಅಭ್ಯಾಸಗಳು ಒಳ್ಳೇದು?

ಕೇಳುಗ: ನೀವು ನಿನ್ನೆ ರಾತ್ರಿ ಇದ್ರ್ ಬಗ್ಗೆ ಮಾತಾಡಿದ್ರಿ

ಸದ್ಗುರು: ಮ್ ಹೌದು. ಒಮ್ಮೆ ಹೀಗಾಯ್ತು. ಒಬ್ಬ ಸೂಫಿ ಗುರುಗಳಿದ್ರು, ಬಾಸ್ರಾದಲ್ಲಿ. ಬಾಸ್ರಾ ಕೇಳಿದೀರ? ಬಾಸ್ರಾ ಮುತ್ತುಗಳಿಗೆ ಜನಪ್ರಿಯವಾಗಿರೋ ಒಂದ್ ಊರು. ಇರಾಕ್ ನಲ್ಲಿದೆ. ಅಥ್ವಾ ಈಗದು ಬಾಂಬ್ ಸ್ಫೋಟಗಳಿಗೆ ಜನಪ್ರಿಯವಾಗಿದೆ. ಯಾವ್ದಾದ್ರೂ ಇರ್ಲಿ. ಅವ್ನತ್ರ ಯಾರೋ ಬಂದು "ನನಗೇನಾದ್ರೂ ಹೇಳ್ಕೊಡಿ" ಅಂದ್ರು. ಅವನ್ ಒಪ್ಲಿಲ್ಲ. "ಬೋಧನೆ ಏನೂ ಇಲ್ಲ" ಅಂದ. ಆಮೇಲೆ ಹೆಚ್ಚು ಹೆಚ್ಚು ಪ್ರಮುಖವಾದ್ ವ್ಯಕ್ತಿಗಳು ಅವನತ್ರ ಬರೋದಿಕ್ ಶುರು ಮಾಡಿದ್ರು. "ದಯವಿಟ್ಟು ನಮಗೆ ಬೋಧಿಸಿ" ಅಂತ. ಅವನಂದ "ಇಲ್ಲ, ಬೋಧನೆ ಏನೂ ಇಲ್ಲ". ಈಗ ಅವನು ಕಲಿಸೋದಿಕ್ಕೆ ನಿರಾಕರಿಸಿದ್ರಿಂದ ಜಾಸ್ತಿ ಫೇಮಸ್ ಆಗ್ಬಿಟ್ಟ.

ಒಂದ್ ದಿನ ಆ ಊರಿನ ಒಂದ್ ದೊಡ್ ವಿದ್ವಾಂಸ, ಶಾಸ್ತ್ರಗಳಲ್ಲಿ ಬಹಳ ಪಾಂಡಿತ್ಯ ಇರೋಂತಾವ್ನು, ಬಂದ್ ಪಟ್ಟು ಹಿಡ್ದ "ನೀವು ಬೋಧಿಸ್ಲೇ ಬೇಕು. ನನಗ್ಗೊತ್ತು, ಯಾವ ಪಂಡಿತನಿಗೂ ಗೊತ್ತಿಲ್ದೇ ಇರೋದೇನೋ ನಿಮಗ್ ಗೊತ್ತಿದೆ. ಆದ್ರಿಂದ ನೀವು ಕಲಿಸ್ಲೇ ಬೇಕು. ಅದನ್ನ ನಿಮ್ಮತ್ರಾನೇ ಇಟ್ಕೋಬಾರ್ದು". ಆಗ ಆ ಸೂಫಿ ಗುರುಗಳು ಅವ್ನನ್ನ ನೋಡಿ ಹೇಳಿದ್ರು "ನಾನ್ ನಿಂಗ್ ಕಲಿಸ್ ಕೊಡ್ದೇ ಇರೋದು ಕಲ್ಸೋದಿಕ್ಕೆ ನಾನ್ ತಯಾರಾಗಿಲ್ಲ ಅಂತಲ್ಲ, ಕಲಿಯೋದಿಕ್ಕೆ ನೀನ್ ತಯಾರಾಗಿಲ್ಲ ಅಂತ" ಪಂಡಿತ ಅಂದ "ಯಾಕೆ ಹಂಗ್ ಹೇಳ್ತಾ ಇದೀರ? ನಾನೇ ತಾನೇ ಬಂದು ನಿಮ್ಮನ್ನ ಕೇಳ್ತಾ ಇರೋದು? ಮತ್ತೆ ನೀವ್ ಹೇಳ್ತೀರ ನಾನ್ ತಯಾರಾಗಿಲ್ಲ ಅಂತ?" "ಅಲ್ಲ, ನಾನ್ ಕಲ್ಸೋದಿನ್ನ ಸ್ವೀಕರ್ಸೋದಿಕ್ಕೆ ನಿನಗಾಗಲ್ಲ" "ಏನದು ಬೋಧನೆ ಹೇಳಿ" "ನೀನ್ ತಯಾರಾಗಿದೀಯಾ?" "ಏನೇ ಇರ್ಲಿ ನಾನ್ ತಯಾರಿಗಿದೀನಿ"

ಆ ಗುರುಗಳು ಒಳ್ಗ್ ಹೋಗಿ, ಗಲೀಜಾಗಿರೋ ಒಂದ್ ತುಂಡು ಬಟ್ಟೇನ ತಂದು ಅವ್ನಿಗ್ ಕೊಟ್ ಅಂದ್ರು, "ಇದನ್ನ ಲಂಗೋಟಿ ತರ ಕಟ್ಕೊ. ನಿನ್ ಎಲ್ಲ ಅಂದವಾದ್ ಬಟ್ಟೆಗಳನ್ನ ತೆಗ್ದ್ ಬಿಡು. ಇದನ್ನ ಲಂಗೋಟಿ ತರ ಕಟ್ಕೊ" ಆ ಪಂಡಿತ ಆ ಗಲೀಜು ಬಟ್ಟೆಯನ್ನ ನೋಡಿ "ಇದಾ?" ಅಂದ. "ಅಷ್ಟೇ ಅಲ್ಲ. ನಾನ್ ನಿಂಗೊಂದ್ ಖಾಲಿ ಡಬ್ಬಿ ಕೊಡ್ತೀನಿ, ದಾರಕ್ ಕಟ್ಟಿರೋದು. ಅದನ್ ನಿನ್ ಕುತ್ಗೇಗ್ ಕಟ್ಕೊ. ಆಮೇಲ್ ನಾನ್ ನಿಂಗೆ ಸ್ವಲ್ಪ ಪೆಪ್ಪರ್ ಮಿಂಟ್ ಕೊಡ್ತೀನಿ. ನೀನ್ ಮಾರ್ಕೆಟ್ ಬದಿ ರಸ್ತೇನಲ್ಲಿ ನಿಂತ್ಕೊ. ಚಿಕ್ ಹುಡುಗ್ರು ನಿನ್ ನೋಡಿ ಕೀಟಲೆ ಮಾಡಿ ಕಲ್ ಹೊಡೀತಾರೆ. ಯಾರೆಲ್ಲ ನಿಂಗ್ ಕಲ್ ಹೊಡೀತಾರೋ, ಒಂದ್ ಪೆಪ್ಪರ್ಮಿಂಟ್ ತೆಗ್ದು, ಮುಗುಳ್ನಗ್ತಾ ಅವ್ರಿಗೆ ಕೊಡು" ಪಂಡಿತ ಅಂದ "ಇದೇನು ಹುಚ್ಚು. ಈ ಊರಲ್ಲಿ ನನ್ ಮರ್ಯಾದೆಗ್ ಏನಾಗುತ್ತೆ ನಾನ್ ಈ ತರ ಹುಚ್ಚುಚ್ಚಾಗಿ ಆಡಿದ್ರೆ" "ನೋಡು ನಾನ್ ಆವಾಗ್ಲೇ ಹೇಳ್ದೆ ನೀನ್ ತಯಾರಾಗಿಲ್ಲ ಅಂತ" (ನಗು)

ವಿಷ್ಯ ಇಷ್ಟೆ. ನಿಮ್ಗೆ ನಿಮಗ್ ಇಷ್ಟ ಆಗೋಂತ ಬೋಧನೆ ಬೇಕಾ, ಅಥ್ವಾ ನಿಮ್ಮನ್ ಪರಿವರ್ತಿಸುವಂತ ಬೋಧನೆ ಬೇಕಾ. ಇದು ಪ್ರಶ್ನೆ. ಈಗ ನೀವು ಹೇಳ್ತಾ ಇದೀರ "ನಾನ್ ಡೆಡ್ ಸೀರಿಯಸ್". ಮೊದಲ್ನೇ ಮತ್ತು ಮುಖ್ಯವಾದ್ ವಿಷ್ಯ ಏನಂದ್ರೆ, ನೀವ್ ನಿಮ್ಮನ್ನ ನಾನ್-ಸೀರಿಯಸ್ ಮಾಡ್ಕೋಬೇಕು. ಆದ್ರೆ ಅದು ಸಾಧ್ಯವಿಲ್ಲ. ಹಾಗಾಗಿ ನಾನ್-ಸೀರಿಯಸ್ ಆಗೋದಿಕ್ಕೆ ಉಳ್ದಿರೋ ಒಂದೇ ದಾರಿ ಏನಂದ್ರೆ, ಹಾಸ್ಯಾಸ್ಪದವಾಗಿರೋದು. ಆಗುತ್ತಾ ನಿಮ್ ಕೈಲಿ? ಅಲ್ಲೇ ಎದ್ ನಿಂತು ಸ್ವಲ್ಪ ಕುಣೀರಿ ನೋಡೋಣ. ಕುಣೀರಿ ಪರ್ವಾಗಿಲ್ಲ. (ನಗು, ಚಪ್ಪಾಳೆ) ಇಲ್ಲ, ನೀವು ಭಾರತದ್ ಶೈಲಿನಲ್ ಮಾಡ್ಬೇಕು, ಭಾರತದ್ ಕುಣಿತ. ಇಲ್ಲ ಇಲ್ಲ, ಭಾರತದ್ ಶೈಲಿನಲ್ ಮಾಡ್ಬೇಕು. (ನಗು, ಚಪ್ಪಾಳೆ) ನೋಡಿ ಈಗ ನಿಮ್ ಸೀರಿಯಸ್ನೆಸ್ ಸ್ವಲ್ಪ ಹೋಗ್ತಾ ಇದೆ. ಡೆಡ್ ಅಂತೂ ಅಲ್ಲ, ಇನ್ನೂ ಸೀರಿಯಸ್ ಆಗಿದೀರ, ಆದ್ರೆ ಡೆಡ್ ಅಲ್ಲ.

ಹಾಗಾಗಿ, ಜೀವ್ನವನ್ನ ಸ್ವಲ್ಪ ಸಡಿಲಗೊಳ್ಸಿ. ಸ್ವಲ್ಪ ಜಾಸ್ತಿ ನಗಿ. ನಿಮ್ ಸುತ್ತ ಇರೋ ಜನ್ರ್ ಜೊತೆ ತೊಡಗಿಸ್ಕೊಳ್ಳಿ. ನಿಮ್ಗೆ ಅಷ್ಟು important ಅನ್ನಿಸ್ದೇ ಇರೋವಂತವನ್ನ ಮಾಡಿ. ತುಂಬ important ಆಗಿರೋದನ್ನ ಮಾಡ್ಬೇಡಿ. ಸಣ್ ಸಣ್ ವಿಷ್ಯಗಳನ್ನ ಮಾಡಿ. ಸಣ್ ಸಣ್ ವಿಷ್ಯಗಳನ್ನ ಮಾಡೋದು ಮುಖ್ಯ. ಜೀವನ್ದಲ್ಲಿ ಬರೀ important ವಿಷ್ಯಗಳನ್ನ ಮಾಡ್ತಿದ್ರೆ, ಡೆಡ್ ಸೀರಿಯಸ್ ಆಗ್ತೀರ ಅಷ್ಟೆ. Bertrand Russell ಗೊತ್ತಾ ನಿಮ್ಗೆ, ಇಂಗ್ಲೆಂಡ್ ನವ್ರು. (ನಗು) Bertrand Russell ಹೇಳಿದ್ರು, "ನೀವು ಮಾಡ್ತಾ ಇರೋದು ಬಹಳ important ಅಂತ ನಿಮಗ್ ಅನ್ಸೋದಿಕ್ಕೆ ಶುರು ಆದ್ರೆ ನೀವು ರಜಾ ತಗೋಬೇಕು" ರಜಾ ಅಂದ್ರೆ ಭಾರತಕ್ಕೆ ಬರೋದಲ್ಲ. ರಜಾ ಅಂದ್ರೆ, ಪ್ರತಿದಿನ 24 ಗಂಟೆಗಳಲ್ಲಿ ನೀವು ರಜಾ ತಗೋಬೇಕು ನಿಮ್ ಸೀರಿಯಸ್ನೆಸ್ ನಿಂದ. ಸೀರಿಯಸ್ನೆಸ್ ಮುಖ್ಯವಾಗಿ ಬಂದಿರೋದು ನೀವು ನಿಮ್ಗೇನೇ ಕೊಡೋ ಪ್ರಾಮುಖ್ಯತೆಯಿಂದ. ನೀವು ನಿಮ್ಮನ್ನ important ವ್ಯಕ್ತಿ ಅಂತ ಭಾವಿಸ್ತೀರ. ನೋಡಿ ನೀವು ಈ ಅಸ್ತಿತ್ವದಲ್ಲಿ ಒಂದ್ ಧೂಳಿನ್ ಕಣ ಅಷ್ಟೆ. ನಾಳೆ ಬೆಳಿಗ್ಗೆ ನೀವ್ ಮಾಯವಾಗ್ಬಿಟ್ರೆ, ಭಾರತದಲ್ಲಂತೂ ಖಂಡಿತವಾಗಿ ಯಾರೂ ನಿಮ್ಮನ್ನ miss ಮಾಡಲ್ಲ. ನಿಮ್ ದೇಶದಲ್ಲೂ ಕೂಡ ಅವ್ರು ಅಷ್ಟೇನೂ ಚಿಂತೆ ಮಾಡಲ್ಲ. ಯಾರೋ ಕೆಲವು ಜನ್ರಷ್ಟೆ. ಅವ್ರೂ ಬೇಗ್ನೆ ಮರ್ತ್ ಬಿಡ್ತಾರೆ. ಅಲ್ವಾ? ಪ್ರಕೃತಿ ಊಫ್ ಅಂದ್ರೆ, ನೀವ್ ಹೋಗ್ಬಿಡ್ತೀರ. ಪ್ರಪಂಚಕ್ಕೆ ಏನೂ ಆಗಲ್ಲ, ಎಲ್ಲ ಚೆನ್ನಾಗೇ ನಡಿಯುತ್ತೆ ನೀವ್ ಇಲ್ದೇ ಇದ್ರೂ ಕೂಡ. ಪ್ರತಿ ಮನುಷ್ಯ ಇದನ್ನ ನೆನಪ್ನಲ್ ಇಟ್ಕೋಬೇಕು ಜೀವ್ನದ್ ಪ್ರತಿ ಕ್ಷಣದಲ್ಲೂ ಕೂಡ. ಪ್ರಪಂಚ ನಿಮ್ ಬಗ್ಗೆ ಏನ್ ಹೇಳುತ್ತೆ ಅನ್ನೋದು matter ಆಗಲ್ಲ. ನೀವು ಎಷ್ಟು ಮಹತ್ವದ ಕೆಲ್ಸ ಮಾಡ್ತಾ ಇದೀರ ಅನ್ನೋದೂ matter ಆಗಲ್ಲ. ನೀವ್ ತಿಳ್ಕೊಳ್ಬೇಕು, ನಾಳೆ ಬೆಳಿಗ್ಗೆ, ಪ್ರಪಂಚ ನೀವಿಲ್ದೇ ಹೋದ್ರೆ ಚೆನ್ನಾಗೇ ನಡಿಯುತ್ತೆ. ನೀವ್ ಯಾರೇ ಆಗಿದ್ರೂ. ಅಲ್ವಾ? ನೀವಿದನ್ನ ಸತತವಾಗಿ ನೆನಪಿಸ್ಕೊಳ್ತಿದ್ರೆ, ಸೀರಿಯಸ್ ಆಗಿರೋದಿಕ್ಕೆ ನಿಮಗ್ ಕಾರಣ ಇರೋದಿಲ್ಲ (ನಗು). ಡೆಡ್ ಅಂತೂ ಖಂಡಿತ ಅಲ್ಲ. ಈಗ್ಲೆ ಡೆಡ್ ಆಗ್ಬೇಡಿ. ಅದಿಕ್ಕೆ ಸಮಯ ಬರತ್ತೆ. ಇದು ಜೀವಂತ್ವಾಗಿರೋ ಸಮಯ.