ಥೈರಾಯ್ಡ್ ತೊಂದರೆಗಳು ಯಾಕೆ ಹೆಚ್ಚಾಗುತ್ತಿವೆ?

 

ಇಂದು ಜಗತ್ತಿನಲ್ಲಿ ಥೈರಾಯ್ಡ್ ಅಸಮತೋಲನದ ಸಮಸ್ಯೆ ವ್ಯಾಪಕವಾಗಿ ಕಂಡುಬರುತ್ತಿರುವುದರ ಹಿಂದಿನ ಕಾರಣವನ್ನು ಸದ್ಗುರುಗಳು ಇಲ್ಲಿ ವಿಶ್ಲೇಷಿಸುತ್ತಾರೆ.

Thyroid tondaregalu yake hecchaguttive?

ಲಿಪ್ಯಂತರ:

ಪ್ರಶ್ನೆ: ಸದ್ಗುರು, ಈ ದಿನಗಳಲ್ಲಿ, ಅನೇಕ ಜನರಿಗೆ ಥೈರಾಯ್ಡ್ ಸಮಸ್ಯೆಗಳು ಕಂಡುಬರ್ತಿವೆ, hypothyroidism ಅಥವಾ hyperthyroidism. ನಾವು ಅಯೋಡೈಸ್ಡ್ ಉಪ್ಪು ಸೇವಿಸ್ತಿದ್ರೂ ಕೂಡ ಈ ಥೈರಾಯಿಡ್ ಸಮಸ್ಯೆಗಳು ವ್ಯಾಪಕವಾಗಿದೆ. ಈ ಸಮಸ್ಯೆ  ಹೆಚ್ಚಾಗೋದಿಕ್ಕೆ ಏನ್ ಕಾರಣ? ಇದು Diabetes ಮತ್ತು hyper-tesnsion ತರಹ ಮಾನಸಿಕ ಒತ್ತಡಕ್ಕೆ ಸಂಬಂಧ ಪಟ್ಟಿದ್ಯ? ಹಠ ಯೋಗ ಮತ್ತು ಕ್ರಿಯಾ ಮಾಡೋದ್ರಿಂದ ಅಥವಾ ಈಶ ಯೋಗ ಕೇಂದ್ರದಂತಹ ಪವಿತ್ರ ಸ್ಥಳಗಳಲ್ಲಿ ಇರೋದ್ರಿಂದ, ಇಂತ ಸ್ಥಿತಿಗಳಿಂದ ನಮಗ್ ಹೊರಬರಲು ಸಾಧ್ಯವೇ? ಇದ್ರಿಂದ ಹೊರ ಬರೋದಿಕ್ಕೆ ನಾವ್ ಏನ್ ಮಾಡ್ ಬಹುದು?

ಸದ್ಗುರು: ಹಠ ಯೋಗದ ಅಭ್ಯಾಸದಿಂದ ತುಂಬಾ ಜನ ಇದ್ರಿಂದ ಗುಣವಾಗಿದ್ದಾರೆ, ಅದರ ಬಗ್ಗೆ ಎರಡು ಮಾತಿಲ್ಲ. ಪವಿತ್ರವಾದ ಸ್ಥಳದಲ್ಲಿದ್ದರೆ ಅದರ ಪರಿಣಾಮ ಇನ್ನೂ ಜಾಸ್ತಿಯಾಗತ್ತೆ. ಆದ್ರೆ, ಸಾಕಷ್ಟು ವ್ಯಾಪಕವಾಗಿ ಕಾಣಿಸಿಕೊಳ್ತಿರೋ ಥೈರಾಯಿಡ್ ಅಸಮತೋಲನ – ನೋಡಿ, ನಾವ್ ಇದನ್ ಅರ್ಥ ಮಾಡ್ಕೋಬೇಕು. ನೀವು ಥೈರಾಯಿಡ್ ಅಂತ ಕರೆಯೋದನ್ನ, ಯೋಗ ಶಾಸ್ತ್ರದಲ್ಲಿ ನಾವ್ ಗ್ರಂಥಿಗಳನ್ನ ಹಾಗ್ ನೋಡಲ್ಲ. ಆದ್ರೆ ವೈದ್ಯಕೀಯವಾಗಿ ನೀವು ಥೈರಾಯಿಡ್ ಅಂತ ಕರಿಯೋದು, ಪ್ರತಿದಿನ ನಿಮ್ ದೇಹಾನ ಸರಿದೂಗ್ಸೋಕ್ಕೆ ಉತ್ಪತ್ತಿಯಾಗೋ ಒಂದು ರಸ. ಅದು ನಿಯಂತ್ರಣ ಮಾಡ್ತಿದೆ -- ಜೀರ್ಣಕ್ರಿಯೆ ಎಷ್ಟ್ ಆಗ್ಬೇಕು, ಎಷ್ಟು ಶಕ್ತಿಯನ್ನು ಉತ್ಪಾದಿಸ್ಬೇಕು, ಎಷ್ಟು ಕೊಬ್ಬನ್ನು ಉತ್ಪಾದಿಸ್ಬೇಕು, ಎಷ್ಟು ಸ್ನಾಯುಗಳನ್ನು ಕಟ್ಟಬೇಕು, ಎಲ್ಲವೂ, ಅದು ನಿಮ್ ದೈಹಿಕ ರಚನೆಯನ್ನ ಸರಿದೂಗ್ಸೋದಿಕ್ಕೆ ಪ್ರಯತ್ನಿಸ್ತಿದೆ.

[Sadhguru - "Your physical structure is very closely related to your psychological structure"] ನಿಮ್ಮ ದೈಹಿಕ ರಚನೆ ನಿಮ್ಮ ಮಾನಸಿಕ ರಚನೆಯೊಂದಿಗೆ ಬಹಳ ಹತ್ತಿರದ ಸಂಬಂಧ ಹೊಂದಿದೆ. ಇಂದು ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ -- ನೀವಿಲ್ಲಿ ಕೂತು ಒಂದ್ ಪರ್ವತದ್ ಬಗ್ಗೆ ಯೋಚ್ಸಿದ್ರೆ ನಿಮ್ ಗ್ರಂಥಿಗಳು ಒಂದ್ ರೀತೀಲಿ ಕೆಲಸ ಮಾಡುತ್ತೆ. ಒಂದ್ ಹುಲಿ ಬಗ್ಗೆ ಯೋಚ್ಸಿದ್ರೆ, ಇನ್ನೊಂದ್ ರೀತೀಲಿ ಆಗುತ್ತೆ. ಸಮುದ್ರದ್ ಬಗ್ಗೆ ಯೋಚ್ಸಿದ್ರೆ, ಮತ್ತೊಂದ್ ರೀತೀಲಿ ಆಗುತ್ತೆ, ಗಂಡಿನ ಬಗ್ಗೆ, ಹೆಣ್ಣಿನ ಬಗ್ಗೆ ಯೋಚ್ಸಿದ್ರೆ, ಮತ್ತೊಂದ್ ರೀತೀಲಿ ಆಗುತ್ತೆ. ಬರೀ ಒಂದ್ ಯೋಚನೆ – ಮತ್ತೇನಿಲ್ಲ. ಪರ್ವತದ್ ಜೊತೆ ಸಂಪರ್ಕ ಇಲ್ಲ, ಹುಲಿ ಸಂಪರ್ಕ ಇಲ್ಲ, ಗಂಡು, ಹೆಣ್ಣು, ಸಮುದ್ರ, ಯಾವುದೂ ಇಲ್ಲ – ಬರೀ ಒಂದ್ ಯೋಚನೆ ನಿಮ್ ಗ್ರಂಥಿಗಳಲ್ಲಿ ಏರಿಳಿತ ಉಂಟ್ ಮಾಡತ್ತೆ. ನಾನ್ ಏನ್ ಹೇಳ್ತಿದೀನಿ ಅಂದ್ರೆ, ಅಷ್ಟು ಸೂಕ್ಷ್ಮವಾಗಿದೆ ಈ ವ್ಯವಸ್ಥೆ -- ನಿಮ್ಮನ್ನ ಸ್ವಸ್ಥವಾಗಿರಿಸೋದಿಕ್ಕೆ, ಅದು ಎಲ್ಲವನ್ನ ಸರಿದೂಗಿಸ್ತಾನೇ ಇರತ್ತೆ.

ನಿಮ್ ತೊಂದ್ರೆ ಏನಂದ್ರೆ, ನಿಮ್ಗೆ ಒಂದ್ ಎತ್ತಿನ ಗಾಡಿ ಬೇಕು ಅಷ್ಟೆ, ನೀವು ಕಾಣೆಯಾಗಿರೋ ಕೊಂಡಿ ಆಗಿರೋದ್ರಿಂದ, (ನಗು) ನಿಮಗೆ ಎತ್ತಿನ ಗಾಡಿ ಬೇಕು ಆದರೆ ನಿಮಗ್ ಸಿಕ್ಕಿರೋದು ಒಂದ್ ಉತ್ತಮವಾದ spaceship, ಮ್ಚ್. ಪ್ರತಿ ಚಿಕ್ ವಿಷಯಾನೂ ಬಹಳ ದೊಡ್ ಬದಲಾವಣೆ ಉಂಟ್ ಮಾಡುತ್ತೆ. ಸುಮ್ನೆ ಮುಟ್ಟಿದರೆ ಸಾಕು, boom, ಅಲೆಗಳ್ ತರಹ ನಿಮ್ ಶರೀರದಲ್ಲಿ ಏನೇನೆಲ್ಲ ಆಗತ್ತೆ. ಸುಮ್ನೆ ನೀವ್ ಹೀಗ್ ನೋಡಿ (ಸನ್ನೆ ಮಾಡಿ ತೋರಿಸಿ) ಒಂದ್ ಮರದ್ ಬಗ್ಗೆ ಒಂದು ತೀರ್ಮಾನವನ್ ಮಾಡಿದ್ರೆ, ಇದು (ತಮ್ಮನ್ನೇ ಉಲ್ಲೇಖಿಸುತ್ತಾ) ಅನೇಕ ರೀತಿಯ ರಾಸಾಯನಿಕ ಮತ್ತು ಬೇರೆ ತರಹದ ಬದಲಾವಣೆಗಳಿಗೆ ಒಳಗಾಗುತ್ತೆ. ಗ್ರಂಥಿಗಳ ಕೆಲಸ ಬದಲಾಗುತ್ತೆ.

ನೀವು ಎಲ್ಲಾದ್ರೂ ಇರಿ, ಮುಂಬೈ, ಅಥವಾ ನ್ಯೂಯಾರ್ಕ್, ಅಥವಾ ಲಂಡನ್ ಎಲ್ಲೇ ಇರಿ, ನೀವು ಯಾವ್ ತರದ ಪರಿಸ್ಥಿತಿಗಳಿಗೆ ಒಳಪಟ್ಟಿದೀರಾ ಅನ್ನೋದನ್ನ ನೋಡಿ. ಪ್ರಾಯಶಃ ಸಾಮಾಜಿಕವಾಗಿ ಅದಕ್ಕೆ ನೀವು ಒಗ್ಗಿಹೋಗಿರಬಹುದು. ಆದರೆ ನೀವಿರೋ ಪರಿಸರವನ್ನ ನೋಡಿ, ಏನೇನ್ ಆಗ್ತಾ ಇದೆ ನೋಡಿ. ಅವುಗಳಲ್ಲಿ ಯಾವುದೂ ಈ ಜೀವಕ್ಕೆ ಅನುಕೂಲಕರವಾಗಿಲ್ಲ (ತಮ್ಮನ್ನೇ ಉಲ್ಲೇಖಿಸುತ್ತಾ). ನೀವು ಅದಕ್ಕೆ ಹೊಂದ್ಕೊಂಡ್ ಬಿಟ್ಟಿರ್ಬೋದು, ಬಹುಶಃ ನಿಮಗೀಗ ಆ ನಗರಗಳನ್ನ ಬಿಟ್ಟು ಬದುಕ್ಲಿಕ್ಕೇ ಆಗ್ದಿರ್ಬಹುದು, ಅದು ಬೇರೆ ವಿಷ್ಯ. ಆದರೆ, ನಿಮ್ ಜೀವ ಆ ರೀತಿಯ ವಾತಾವರಣವನ್ನ ಬಯಸ್ತಿಲ್ಲ. ಆದ್ದರಿಂದ ನಿಮ್ಮೊಳಗೆ ಆಗ್ತಾ ಇರೋ ಏರಿಳಿತಗಳು ನಿಮ್ ಪರವಾಗಿ ಇಲ್ಲ. ಗ್ರಂಥಿಗಳು ಸರಿಯಾಗ್ ಕೆಲಸ ಮಾಡ್ದೆ ಇರೋದು ಬರೀ ಒಂದು ಅಭಿವ್ಯಕ್ತಿ ಮಾತ್ರ. ರಸಗ್ರಂಥಿಗಳಲ್ಲಿ ಅತ್ಯಂತ ಸೂಕ್ಷ್ಮವಾದ ಒಂದ್ ಗ್ರಂಥಿಯೆಂದರೆ ಥೈರಾಯ್ಡ್ ಗ್ರಂಥಿ. ಇದು ಸುಲಭವಾಗಿ ಗಮನಕ್ಕೆ ಬರತ್ತೆ. ಮೊದಲು ನಿಮ್ ದೇಹದ ಮತ್ತು ಮನಸ್ಸಿನ parameterಗಳು ಸ್ವಲ್ಪ ಹೆಚ್ಚುಕಮ್ಮಿ ಆಗತ್ತೆ, ಬರೀ ಈ disturbance ಗಳಿಂದಾಗಿ.

ಇದ್ರ್ ಇನ್ನೊಂದ್ ಆಯಾಮ ಏನಂದರೆ ನಿಮ್ ಒಳಗೇನೆ ಏನು disturbance ಆಗ್ತಾ ಇದೆ ಅನ್ನೋದು – ನಿಮ್ಮದೇ ಮನಸ್ಸು ಕೆಲ್ಸ ಮಾಡ್ತಿರೋ ರೀತಿ. ಮತ್ತೊಂದ್ ರೀತಿಯ disturbance ಏನೂಂದ್ರೆ, ಯಾವ್ ತರದ್ ಆಹಾರ ನಿಮ್ಮೊಳಗೆ ಹೋಗ್ತಿದೆ ಅನ್ನೋದು. ಈವತ್ತು ನಿಮ್ಗೆ ರಾಸಾಯನಿಕಗಳು ಇಲ್ದೇ ಇರೋ ಆಹಾರವನ್ನ ತಿನ್ನೋದು ಸಾಧ್ಯವೇ ಇಲ್ಲ. ನೀವು ಸಾವಯವ ಆಹಾರವನ್ನ ತಿಂತಾ ಇದ್ದರೆ, ಅದರಲ್ಲಿ ಸಾವಯವ ರಾಸಾಯನಿಕವನ್ನ ಬಳಸ್ತಾರೆ ಅಷ್ಟೆ. ಪರಿಸ್ಥಿತಿ ಆ ಮಟ್ಟಕ್ ಬಂದಿದೆ. (ಪ್ರೇಕ್ಷಕರಲ್ಲಿ ಒಬ್ಬರ ನಗು) ಕಾಡ್ನಲ್ಲಿ ಸುಮ್ನೇ ಹಾಗೇ ಏನಾದರೂ ಬೆಳೆದಿದ್ದನ್ನ ತೆಗ್ದು ತಿನ್ನೋದು ತುಂಬಾ ಕಷ್ಟ. ಅದು ತುಂಬಾ, ತುಂಬಾ ಕಮ್ಮಿ. ಒಂದಿಷ್ಟ್ ಜನಕ್ಕೂ ಆ ತರದ್ ಆಹಾರ ತಿನ್ನೋ ಸಾಧ್ಯತೆ ಇಲ್ಲ. ಎಲ್ಲಾ ಮಾರ್ಕೆಟ್ನಿಂದ ಬರತ್ತೆ. ಮತ್ತು ಮಾರ್ಕೆಟ್ ಗೆ ಹೋಗೋದು ಯಾವುದು ಜಾಸ್ತಿ ಇದೆಯೊ ಅದು; ಅದ್ ಏನು ಅನ್ನೋದು ಅಲ್ಲಿ ಮುಖ್ಯ ಅಲ್ಲ.

ಮತ್ತು ಈ ದೇಶದಲ್ಲಿ (ನಗು) ಈಗ ಇವೆಲ್ಲ ಹೋಗ್ಬಿಟ್ಟಿವೆ, ತಲೆ ಕೆಡ್ಸ್ಕೋಬೇಡಿ. ನನ್ನ ಅಜ್ಜಿ ಏನ್ ಮಾಡ್ತಿದ್ರೂಂದ್ರೆ... ಪ್ರತಿದಿನ ತರಕಾರಿ ಮಾರೋವ್ರು, ಬುಟ್ಟಿ ತೊಗೊಂಡು ಮನೆ ಬಾಗಿಲಿಗೆ ಬರೋರು. ಆಗ್ತಾನೇ ಬೆಳಿಗ್ಗೆ ತರ್ಕಾರಿ ಕಿತ್ತು, 7:30 8 ಗಂಟೆಗ್ ಬರೋವ್ರು. ಅವ್ರು ಬಂದಾಗ, ಅಜ್ಜಿ ಎಲ್ಲಾನೂ ನೋಡೋರು. ಕೊಂಡ್ಕೋಬೇಕಿದ್ರೆ, ಆ ತರಕಾರಿ ಮಾರೋವ್ನುಗೂ ಆ ತರಕಾರೀನ ಮುಟ್ಟೋದಿಕ್ ಬಿಡ್ತಿರ್ಲಿಲ್ಲ. ಕಿತ್ಕೊಂಡ್ ತಂದಿದ್ದು ಅವ್ರೇ, ತಾಜಾ ತರಕಾರಿ, ಈಗ್ತಾನೆ ಗಿಡದಿಂದ ಬಂದಿದೆ. ಆದ್ರೆ ತಕ್ಕಡಿಗ್ ಹಾಕ್ಬೇಕಾಗಿದ್ರೆ ಅಥವಾ ಅದನ್ನ ಆರಿಸ್ಕೋಬೇಕಂದ್ರೆ, ಅವ್ರಿಗ್ ಮುಟ್ಟಕ್ಕ್ ಬಿಡ್ತಿರ್ಲಿಲ್ಲ. “ನನ್ ತರಕಾರಿಗಳ್ನ ನೀನ್ ಮುಟ್ಬೇಡ.” ಇದು ಕೀಟಾಣುಗಳನ್ನ ದೂರ ಇಡ್ಲಿಕ್ ಅಲ್ಲ. ಅವರಿಗೆ ಆ ಗಂಡ್ಸು ಅಥ್ವಾ ಆ ಹೆಂಗಸು ತನ್ನ್ ಮಕ್ಕಳು, ಮೊಮ್ಮಕ್ಕಳು ತಿನ್ನೋ ತರಕಾರಿಗಳ್ನ ಮುಟ್ಟೋದು ಇಷ್ಟ ಇರ್ಲ್ಲಿಲ್ಲ. ಅವುಗಳನ್ನ ಅವ್ರು ಒಂದ್ ರೀತೀಲಿ ಮುಟ್ತಾರೆ, ಅದಕ್ಕೆ ಪ್ರೀತಿ ತೋರಿಸ್ತಾರೆ, ಮುದ್ದು ಮಾಡ್ತಾರೆ, ಹೀಗ್ ನೋಡ್ತಾರೆ, ಹಾಗ್ ನೋಡ್ತಾರೆ ( ಕೈಯಲ್ಲಿ ತೋರಿಸ್ತಾ), ಆಮೇಲೆ ಕತ್ತರಿಸಿ, ಅಡಿಗೆ ಮಾಡ್ತಾರೆ.

ಇದನ್ನೆಲ್ಲ ಹಾಸ್ಯ ಅಂತ ಅನ್ಕೋಬೇಡಿ. ಇಂತದೆಲ್ಲ ನಿಮ್ ಜೀವನ್ದಲ್ಲಿ ಇಲ್ಲ ಅಂದ್ರೆ, ನಿಮ್ ಗ್ರಂಥಿಗಳನ್ನ ನಿಭಾಯಿಸೋಕ್ಕೆ ಮಾತ್ರೆಗಳನ್ನ ತೊಗೋಬೇಕು. ಆದ್ರೆ ಮಾತ್ರೆ ನುಂಗಿ ಇದನ್ನೆಲ್ಲ ಸರಿದೂಗಿಸೋದಿಕ್ಕೆ ಸಾಧ್ಯಾನೇ ಇಲ್ಲ. ನೀವ್ ಅದನ್ನ ತಡೆಹಿಡೀಬಹುದು, ಸಮತೋಲನಕ್ಕೆ ತರೋದಕ್ಕೆ ಸಾಧ್ಯವೇ ಇಲ್ಲ, ಯಾಕಂದ್ರೆ, ಪ್ರತಿದಿನ ಬೇರೆ ತರ ಇರತ್ತೆ, ಪ್ರತಿ ಘಳಿಗೆ ಬೇರೆ ತರ ಇರತ್ತೆ. ಅದಿಕ್ ತಕ್ ಹಾಗೆ ಸರಿದೂಗ್ಸೋದಿಕ್ಕೆ ಒಂದ್ ಸತತವಾದ್ calibration ಆಗ್ತಾ ಇರುತ್ತೆ ನಮ್ಮಲ್ಲಿ. ಅಂತದನ್ನ ಸಾಯಿಸಿ, ಮಾತ್ರೆ ತೊಗೋತ, ಹೇಗೋ ನಿಭಾಯಿಸಿಕೊಳ್ತೀರ – ನೀವು ಸ್ವಲ್ಪ ದೋಷಪೂರಿತವಾಗಿ ಕೆಲ್ಸ ಮಾಡ್ತಿರೋ ಒಂದ್ machine. ಈ ದೋಷಗಳು, ಹೇಗೇಗೋ ಹೊರಗ್ ಕಾಣಿಸ್ಕೊಳ್ಳತ್ತೆ. ಅದು ನಿಮಗ್ ಗೊತ್ತಾಗೋದು ತುಂಬ ಜಾಸ್ತಿಯಾದಾಗ ಮಾತ್ರ. ಸಣ್ ಪ್ರಮಾಣದಲ್ಲಿದ್ದಾಗ ಆಚೆ ಕಾಣಿಸ್ಕೊಳ್ಳಲ್ಲ.

ಇದು ಹೇಗಂದ್ರೆ. ನೋಡಿ, ನಿಮ್ ಕಾರ್ ಟೈರು ಪಂಕ್ಚರ್ ಆಗಿದ್ರೂ, ಇಪ್ಪತ್ತು ಕಿ.ಮೀ. ಸ್ಪೀಡ್ನಲ್ಲಿ ಮನೆ ತನಕ ಡ್ರೈವ್ ಮಾಡ್ ಬಹುದು. (ನಗು) ಏನೋ ಒಡೆಯುತ್ತೆ, ಏನೋ ಹಾಳಾಗತ್ತೆ, ಆದರೂ ಡ್ರೈವ್ ಮಾಡ್ ಬಹುದು. ಗಂಟೆಗೆ 200 ಕಿ.ಮೀ. ಹಾಗೆ ಹೊಡೀತಾ ಇದ್ದಾಗ ಟೈರು ಪಂಕ್ಚರ್ ಆದ್ರೆ, ರಸ್ತೆಯಿಂದ ಹಾರ್ ಹೋಗ್ತೀರ ಅಷ್ಟೆ. ಎಲ್ಲಾನೂ ಅಷ್ಟೆ. ಇದನ್ನೆಲ್ಲ ಸರಿಯಾಗ್ ನೋಡ್ ಕೊಂಡ್ರೆ, ನೀವು ನಿಮ್ ಚಟುವಟಿಕೆಯ ಗತಿಯನ್ನ ಹೆಚ್ಚಿಸ್ಬೇಕಂದ್ರೂ, ಅದು ಚೆನ್ನಾಗೆ ಓಡತ್ತೆ. ಆ ಸಮತೋಲನ ತರದೆ ಗತಿಯನ್ನ ತೀವ್ರ ಮಾಡ್ದ್ರೆ, ಅದು ಹುಚ್ಚುಚ್ಚಾಗ್ ಆಡುತ್ತೆ. ಪ್ರತಿದಿನ, ನಿಮ್ ಸುತ್ತ್ ಮುತ್ತಲೂ ಹಿಂಗಾಗೊದನ್ನ ನೀವ್ ನೋಡ್ತೀರ.

ಹಾಗಾಗಿ ನಿಮ್ ಜೀವನ್ದಲ್ಲಿ ಸ್ವಲ್ಪ invest ಮಾಡ್ಬೇಕು. ನಿಮ್ ಸಿಟಿ ಬಿಟ್ಟು ನೀವ್ ಕಾಡ್ನಲ್ಲೇನೂ ಹೋಗಿ ಇರಕ್ಕಾಗಲ್ಲ. ಈ ಪರಿಸರ ಬಿಟ್ಟ್ ಹೋಗಕ್ಕಾಗಲ್ಲ. ಕನಿಷ್ಟ ಪಕ್ಷ ನಿಮ್ಮನ್ನ ನೀವು ಸಜ್ಜುಗೊಳಿಸ್ಕೊಬೇಕು, ಆವಾಗ, ಇಂತ ವಿಷಯಗಳು ನಿಮ್ ಮೇಲೆ ತುಂಬಾ ಪರಿಣಾಮ ಬೀರಲ್ಲ. ಹೆಂಗಾದ್ರೂ ಪರಿಣಾಮ ಆಗೇ ಆಗತ್ತೆ, ಎಷ್ಟ್ ಆಗತ್ತೆ ಅನ್ನೋದು ಪ್ರಶ್ನೆ. ನಿಮ್ ಮನೆಯಲ್ಲಾದ್ರೂ ಸುತ್ತಮುತ್ತ ಗಿಡಗಳಿರ್ಲಿ. ಜಾಗ ಇಲ್ಲಾ ಅಂದ್ರೆ, ನಿಮ್ ರೂಮ್ನೇ ತುಂಬಿಸಿ. ಇದು ತುಂಬ ವಿಚಿತ್ರವಾಗಿರೋ ಬೆಡ್ರೂಮ್ ಆಗತ್ತೆ. (ಪ್ರೇಕ್ಷಕರಲ್ಲಿ ಒಬ್ಬರ ನಗು) ಅರ್ಧ roof ತೆಗದ್ ಬಿಡಿ. “ಅಯ್ಯೋ, ಅದರ್ ಮೇಲೆ ಇನ್ನೊಂದ್ floor ಇದೆ, ಸದ್ಗುರು” (ನಗು). ಸರಿ ಹಾಗಾದರೆ, ಆ ಹಾಳಾದ್ ಗೋಡೆ ತೆಗೀರಿ, ಆವಾಗಾದ್ರೂ ಸ್ವಲ್ಪ ಸೂರ್ಯನ್ ಬೆಳಕು ನಿಮ್ ಮೇಲೆ ಬೀಳ್ಲಿ. ಹೌದು. ಎಲ್ಲಾನೂ ಮುಚ್ಚಿ ಬಿಟ್ಟು ಒಂದ್ air conditioner ಯಾವಾಗಲೂ brrrr ಅಂತ ಓಡ್ತ ಇರೋದಲ್ಲ.

ಇದ್ ಇನ್ನೊಂದ್ ವಿಷ್ಯ. ನಿಮ್ ಸುತ್ತ ಇರೋ ಶಬ್ದದ್ ಕಂಪನಗಳು ನಿಮ್ ಶರೀರಾನ ಪೂರ್ತಿ ಮೇಲೆ ಕೆಳಗೆ ಮಾಡ್ತಿವೆ. ಯಾವಾಗಲೂ brrrrr…. ವಿಶೇಷವಾಗಿ ನಾನ್ ದೇಶದಿಂದ ಆಚೆ ಇದ್ದಾಗ, ಮುಖ್ಯವಾಗಿ Amercia ದಲ್ಲಿ, Europe ನಲ್ಲಿ ಸ್ವಲ್ಪ ವಾಸಿ, Amercia ದಲ್ಲಿ ಯಾವಾಗಲೂ ಏನಾದ್ರೂ ಗುಂಯ್ಯ್ ಅನ್ನುತ್ತಿರುತ್ತೆ, hmmmm. ನಿಲ್ಲೋದೆ ಇಲ್ಲ. ನಾನ್ ಇಲ್ಲಿಗ್ ಬಂದಾಗ, ಹೆಂಗಂದ್ರೆ (ಕೈ ಸನ್ನೆ ಮಾಡುತ್ತಾ), ಬರಿ ಶಾಂತಿ, ಜೀವ ಬಂದ್ ಹಂಗ್ ಆಗತ್ತೆ. ಎಲ್ಲಾನೂ ಗುಂಯ್ಯ್ ಅನ್ತಾ ಇದ್ದರೆ, ನೀವು poof (ನಗು). ಹೆಚ್ಚಿನ ಜನ್ರಿಗೆ ಹಿಂಗಾಗ್ತ ಇದೆ ಅಂತ ಅರಿವಿಲ್ಲ. ಅವ್ರು ದಿನದಲ್ಲಿ 8 ಗಂಟೆ ನಿದ್ರೆ ಮಾಡ್ತಾ ಇದ್ದಾರೆ ಅಂದ್ರೆ ಅದೇ, ಅವ್ರು ಪ್ರಾಕೃತಿಕ ವಾತಾವರಣದಲ್ಲಿ ಬದುಕ್ತ ಇಲ್ಲ ಅಂತರ್ಥ. ನಿದ್ದೆ ಮಾಡಿ ತಮ್ಮನ್ನ ತಾವು ಕಾಪಾಡ್ ಕೊಳ್ಳಲ್ಲಿಕ್ಕೆ ಪ್ರಯತ್ನ ಮಾಡ್ತಾರೆ.

ರೋಗದಿಂದ ನಿಮ್ಮನ್ನ ರಕ್ಷಿಸಿಕೊಳ್ಳೋಕೆ, ಮಾನಸಿಕ ಕಾಯಿಲೆಯಿಂದ ರಕ್ಷಿಸಿಕೊಳ್ಳೋಕೆ, ಎಲ್ಲಾ ತರಹದ ಅಸಮತೋಲನದಿಂದ ರಕ್ಷಿಸಿಕೊಳ್ಳೋಕೆ, ನೀವು ನಿದ್ರೆ ಮಾಡ್ತೀರ, ದಿನದಲ್ಲಿ 8 ರಿಂದ 10 ಗಂಟೆ. ಅಂದ್ರೆ ಅರ್ಧ ಜೀವನ, ನೀವ್ ಸತ್ತಂತೆ. ಸಾವು ಯಾವಾಗಲೂ ಒಳ್ಳೆ ಪರಿಹಾರ, ಆದರೆ ನಮಗ್ ಬೇಕಾಗಿರೋದು ಆ ಪರಿಹಾರ ಅಲ್ಲ. ನಾವ್ ಹುಡುಕ್ತ ಇರೋದು ಜೀವಂತ ಪರಿಹಾರ, ಮುಗ್ಸ್ ಬಿಡೋ ಪರಿಹಾರ ಅಲ್ಲ. ಏನನ್ನಾದರೂ ಕೊನೆಗೊಳಿಸಿದ್ರೆ ಅದು ಬಗೆಹರಿದಂತೆ, ಅಲ್ವಾ? ಮ್? ಬಗೆಹರಿತೋ ಇಲ್ವೊ? ಬಗೆಹರಿದಂತೇನೆ ಅದು, ಆದ್ರೆ ನಮಗ್ ಬೇಕಾದ್ ರೀತೀಲಲ್ಲ (ನಗು). ನಮಗ್ ಇಲ್ಲಿ ಜೀವಂತವಾಗಿದ್ಕೊಂಡು ಪರಿಹರಿಸ್ಕೊಳ್ಬೇಕು.

ಹಾಗಾಗಿ, ಇದು ಆಗ್ಬೇಕೂಂದ್ರೆ, ಸಾಧ್ಯವಿದೆ. ನೀವ್ ವಿಚಿತ್ರವಾಗ್ ಕಾಣ್ ಬಹುದು, ನನಗೂ ವಿಚಿತ್ರವಾಗೇ ಕಾಣ್ಸುತ್ತೆ -– ಆದರೆ, ನೀವ್ ಮಲಗೋ ಜಾಗದಲ್ಲಿ ಯಾವುದಾದರೂ ಗಿಡಗಳನ್ನ ತಂದ್ ಇಡಿ. ನೀವ್ ನಡಿಯೋವಾಗ, ಮನುಷ್ಯರನ್ನು ಬಿಟ್ಟು ಬೇರೆ ಜೀವಿಗಳ್ ಬಗ್ಗೆ ಕೂಡ ಅರಿವು ಇರಬೇಕು. ಹೆಚ್ಚಿನ ಜನರಿಗೆ ಬೇರೆ ಮನುಷ್ಯರ ಅರಿವೂ ಇಲ್ಲ, ಅದಕ್ಕೆ ನಿಮ್ಗೆ ನೆನಪಿಸ್ತಿದೀನಿ. ಏನೇನ್ ಜೀವಂತವಾಗಿದ್ಯೋ ಅದರ್ ಬಗ್ಗೆ ಪ್ರಜ್ಞೆ ಇರಬೇಕು. ಮರ, ಗಿಡ, ಹುಲ್ಲು, ಜಿಗೀತ ಇರೋ ಮಿಡತೆ, ನಿಮಗ್ ಇಷ್ಟ ಇಲ್ದೆ ಇರೋ ಜನ ನಿಮ್ಮನ್ನ ಹಾದು ಹೋಗೋದು (ನಗು), ಎಲ್ಲಾನೂ. ಎಲ್ಲದರ್ ಬಗ್ಗೇನೂ ನೀವ್ ಜೀವಂತವಾಗಿರ್ಬೇಕು.

ನೀವು “ಓಹ್! ನಾನ್ ಮರ ನ ಪ್ರೀತಿಸ್ತೀನಿ” ಅಂತೆಲ್ಲ ಮಾಡೋದ್ ಬೇಡ (ಕೆಲವ್ರು ನಗುತ್ತಾರೆ). ನೀವೇನು ಮರವನ್ನ ಪ್ರೀತಿಸ್ಬೇಕಾಗಿಲ್ಲ (ನಗು), ಅದರಿಂದ ನಿಮ್ ಪೋಷಣೆ ಆಗ್ಬೇಕು, ಬದುಕೋದಕ್ಕೆ ಅದೊಂದೇ ಮಾರ್ಗ. ನಿಮಗ್ ಇಷ್ಟ ಇದ್ಯೊ ಇಲ್ವೋ, ಈವಾಗ್ಲೂ ನಿಮ್ಮನ್ನದು ಪೋಷಿಸ್ತಿದೆ. ಅರಿವು ಇಟ್ಟ್ ಕೊಂಡು ಮಾಡಿದ್ರೆ, ಎಲ್ಲಾನು ಇನ್ನೂ ಚೆನ್ನಾಗ್ ಕೆಲಸ ಮಾಡತ್ತೆ. ನಿಮ್ ಸುತ್ತಮುತ್ತ ಇರೋ ಎಲ್ಲದರ ಬಗ್ಗೆ ಜಾಗೃತರಾಗಿದ್ದರೆ, ಯಾವ್ದೇ ಭೇದಭಾವ ಇಲ್ದೆ, ನಿಮ್ ಥೈರಾಯ್ಡ್ ಸಮಸ್ಯೆ ನಿಯಂತ್ರಣವಾಗ್ ಬಹುದು. ಖಂಡಿತವಾಗಿ, ಬೆಳಿಗ್ಗೆ ಮಾಡೋ ಹಠಯೋಗ, ಕ್ರಿಯಾ,ಇವೆಲ್ಲ ಸಹಾಯ ಮಾಡತ್ತೆ ಮತ್ತು ಪ್ರಾಣಪ್ರತಿಷ್ಠೆ ಮಾಡಿದ ಪವಿತ್ರ ಸ್ಥಳಗಳೂ ಇವೆ. ಈ ತರ ತುಂಬಾ ಇದೆ.

ಒಂದ್ ಮುಖ್ಯ ಕಾರಣ ಅಂದ್ರೆ, ಮನುಷ್ಯರ ಚಟುವಟಿಕೆ ಕಮ್ಮಿ ಕಮ್ಮಿ ಆಗ್ತಾ ಇದೆ, ತಂತ್ರಜ್ಞಾನ ಬೆಳೀತ ಇದ್ದ ಹಾಗೆ. ಒಂದ್ ದಿನದಲ್ಲಿ, ಸರಾಸರಿಯಾಗ್, ಸಾಮಾನ್ಯ ಜನರು, ಎಷ್ಟು ಚಟುವಟಿಕೆ, ದೈಹಿಕ ಚಟುವಟಿಕೆ ಮಾಡ್ತಿದ್ರೋ, ಹಿಂದಿನ ಕಾಲದ್ ಜನರು, ಅದಿಕ್ ಹೋಲ್ಸಿದ್ರೆ, ಈಗಿನ್ ಕಾಲದಲ್ಲಿ ನಾವ್ಗಳು ಮಾಡ್ತಿರೋ ದೈಹಿಕ ಚಟುವಟಿಕೆ ಸಿಕ್ಕಾಪಟ್ಟೆ ಕಡಿಮೆ. ಇಷ್ಟ್ ಕಡಿಮೆ ಚಟುವಟಿಕೆ ಇಟ್ಕೊಂಡು, ನಮ್ಮ ವ್ಯವಸ್ಥೇನ ಸಮತೋಲನದಲ್ಲಿ ಇಟ್ಟಕೊಳ್ಳೋದ್ ಕಷ್ಟ. ಆದ್ದರಿಂದ, ಒಂದ್ ಚೂರ್ ಏರುಪೇರ್ ಆದರೆ, ಹೋಗಿ ಮಲ್ಕೋಬೇಡಿ. ಸ್ವಲ್ಪ ಏರುಪೇರು ಆಗಿದೆ ಅಂತ ಅನ್ನಿಸಿದರೆ, ಏಳಿ, ಚಟುವಟಿಕೆಗಳಲ್ಲಿ ಧುಮುಕಿ. ಎಲ್ಲೆಲ್ಲಿ ಹುರುಪಿನಿಂದ, ಸಂತೋಷದಿಂದ ಕೆಲಸ ನಡೀತಾ ಇದ್ಯೋ, ಅದರೊಳಗೆ ಧುಮುಕಿ, ಜಾಸ್ತಿ ಜಾಸ್ತಿ ಮಾಡಿ, ಆರೋಗ್ಯ ಕೆಡ್ತಾ ಇದೆ ಅಂತ ಅನ್ನಿಸಿದ್ರೆ, ನಿಜ್ವಾಗಲೂ. ಯಾಕಂದರೆ, ನೀವ್ ಹಿಂದಕ್ ಹೆಜ್ಜೆ ಇಟ್ರೆ, ಆ ಕಾಯಿಲೆಯ ಶಕ್ತಿಯನ್ನ ಹೆಚ್ಚ್ ಮಾಡ್ತಾ ಇದೀರ. ತುಂಬಾ ಅನಾರೋಗ್ಯ ಇದ್ದರೆ, ಅದ್ ಬೇರೆ ವಿಷ್ಯ. ಇಲ್ಲಾಂದ್ರೆ... ನಾವು ಮೂಲಭೂತವಾಗಿ ಗ್ರಂಥಿಗಳ ವಿವಿಧ ತೊಂದರೆಗಳ ಬಗ್ಗೆ ಮಾತಾಡ್ತ ಇದ್ದೀವಿ. ಇಂಥದಕ್ಕೆ ಚಟುವಟಿಕೆ ಒಂದು ಸರಳ ಪರಿಹಾರ.

ಚಟುವಟಿಕೆ ಅಂದ್ರೆ - New York ಲ್ಲಿರೋರಿಗೆ ಹೇಳ್ತಾ ಇದ್ದೀನಿ – ಚಟುವಟಿಕೆಯಲ್ಲಿರಿ ಅಂದ್ರೆ, ನಿಮ್ ಕೈಯಲ್ಲಿ ಆ health band ಕಟ್ಟ್ ಕೊಂಡು, [Sadhguru - (ಕೈ ಸನ್ನೆ ಮಾಡ್ತ) (ನಗು), Ten steps (ಕೈ ಸನ್ನೆ ಮಾಡ್ತ) (ನಗು), twelve steps (ಕೈ ಸನ್ನೆ ಮಾಡ್ತ) (ನಗು)] ಇದು ಮಾಡ್ಬೇಡಿ. ಚಟುವಟಿಕೆ ಅಂದ್ರೆ ಇದಲ್ಲ, ಈ ತರ ಎಲ್ಲಾ ಮಾಡಿದ್ರೆ, ಹುಶಾರ್ ತಪ್ಪೋದ್ ಜಾಸ್ತಿ ಆಗುತ್ತೆ. ಸುಮ್ಮನೆ ಹಾಗೆ, ಖುಷಿಯಿಂದ ಏನಾದ್ರೂ ಮಾಡಿ... ಸಂತೋಷದಿಂದ ಜೀವಂತವಾಗಿರಿ. ಚಟುವಟಿಕೆ ಅಂದ್ರೆ.... ಇಲ್ಲೇ ಕೂತ್ಕೊಂಡು ನಿಮಗೆ ಖುಷಿಯಿಂದ ಜೀವಂತವಾಗಿರೋದ್ ಹೇಗೆ ಅಂತ ನಿಮಗ್ ಗೊತ್ತಿಲ್ಲ ಅಂದ್ರೆ, ಹಾಗೆ ಹೋಗಿ ಆಡಿ, ಆಟ ಆಡಿ, ಸುತ್ತಲೂ ಸುಮ್ನೆ ಓಡಿ. ನಡಿತಾ ಇರ್ಬೇಕಾದ್ರೆ ಮಿಡತೆಯನ್ನ ಅನುಕರಿಸಿ (ನಗು). ಪ್ರಯತ್ನಿಸಿ, ಯಾಕಾಗ್ಬಾರದು? ನೀವ್ ಇದನ್ನ ಮಾಡೇ ಇಲ್ವಾ? ಇದೇ ನಿಮ್ ಸಮಸ್ಯೆ (ನಗು). ನೀವ್ ಈವಾಗ ಹೋಗೋವಾಗ ನಾನ್ ನೋಡ್ತೀನಿ (ಕೈ ಸನ್ನೆ ಮಾಡ್ತಾ) (ನಗು) ಯಾಕಂದರೆ ಇಲ್ಲೆಲ್ಲಾ ಹುಲ್ಲಿದೆ (ನಗು), ಮಿಡತೆ ತರ ಹೋಗಿ ನೋಡೋಣ chuk, chuk, chuk, chuk, chuk (ಕೈ ಸನ್ನೆ ಮಾಡ್ತಾ). ಆವಾಗ್ ನೋಡಿ ನಿಮ್ಮೊಳಗೆ ಎಷ್ಟು ಜೀವಕಳೆ ಬರತ್ತೆ ಅಂತ (ನಗು).

[Sadhguru - "Essentially, you… your en… fundamental problem is you have become bloody serious about your life"] ಮೂಲಭೂತವಾಗಿ, ನಿಮ್ ಪ್ರಧಾನವಾದ್ ಸಮಸ್ಯೆ ನಪ್ಪಾ ಅಂದ್ರೆ, ನೀವ್ ನಿಮ್ ಜೀವನ ಬಗ್ಗೆ ಸಿಕ್ಕಾಪಟ್ಟೆ ಸೀರಿಯಸ್ ಆಗ್ಬಿಟ್ಟೀದ್ದೀರ. Tch, ಅದಕ್ಕೆ, ನಿಮ್ಗಳಿಗೆ ಮತ್ತೆ ನೆನಪ್ ಮಾಡ್ಬೇಕು. ನೀವು ಹೇಗಿದ್ರೂ ಸಾಯ್ತೀರ, ಇಷ್ಟು ಗಂಭೀರವಾಗಿರ್ಬೇಡಿ (ನಗು) ಯಾಕಂದ್ರೆ, ಇದು ಬಹಳ ಬೇಗ ಮುಗಿದ್ ಹೋಗುತ್ತೆ. ನೀವು ಹಿಡಿತವನ್ನು ಸಡಿಲಗೊಳಿಸಬೇಕು. ಈಗ್ಲೇ ಸಡಿಲಗೊಳಿಸಿದ್ರೆ, ಆ ಕೊನೆಯ scene ಬೇರೆ ರೀತಿಯಾಗಿರುತ್ತೆ. ಇಲ್ಲಾದ್ರೆ ಜನ್ರು ನೋಡೋದು (ಸನ್ನೆ ಮಾಡುತ್ತ) (ನಗು). ಅದೇ ನಿಮ್ಗ್ ಆಗೋ ದೊಡ್ಡ ವಿಷ್ಯ – ಸಾಯೋವಾಗ ಹಿಡಿತಾನ ಸಡಿಲ್ಸಿದ್ರಿ. ಈವಾಗ್ಲೇ ಹಿಡಿತಾನ ಸಡಿಲಿಸಿದರೆ, ನಿಮ್ ಜೀವನ ಅತ್ಯದ್ಭುತವಾಗಿ ನಡೆಯೋದನ್ನ ನೋಡ್ತೀರ.

 

 
 
  0 Comments
 
 
Login / to join the conversation1