ಆಧ್ಯಾತ್ಮಿಕ ಸಾಧಕರೊಬ್ಬರ ’ಭಕ್ತಿಯ ಪ್ರಾಮುಖ್ಯತೆಯ’ ಬಗ್ಗೆಯಾದ ಪ್ರಶ್ನೆಯೊಂದನ್ನು ಉತ್ತರಿಸುತ್ತಾ ಸದ್ಗುರುಗಳು, ಭಕ್ತಿಯಿಂದ ಇರುವುದು ಯಾರ ಅಥವಾ ಯಾವುದರ ಬಗ್ಗೆಯಾದರೂ ಅಲ್ಲ ಎನ್ನುವುದನ್ನು ಇಲ್ಲಿ ವಿವರಿಸುತ್ತಾರೆ. ಭಕ್ತಿಯೆನ್ನುವುದು ನಿಮ್ಮ ಹೃದಯದಲ್ಲಿ ಬಹುಕಾಲ ಉಳಿಯಬಹುದಾದ ಮಾಧುರ್ಯತೆಯಾಗಿದ್ದು, ಅದರ ಸಹಾಯದಿಂದ ನಿಮ್ಮ ದೇಹ ಮತ್ತು ಮನಸ್ಸುಗಳು ಅವುಗಳ ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ.

ಲಿಪ್ಯಂತರ:

ಪ್ರಶ್ನೆ: ಇಲ್ಲಿನ ಬಹುತೇಕ ಜನರು ಶಿವನ ಬಗ್ಗೆ ಅಪಾರವಾದ ಭಕ್ತಿಯನ್ನು ಹೊಂದಿದ್ದಾರೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ನಾನು ಅಮೇರಿಕಾದ ದಕ್ಷಿಣ ಮಿಸ್ಸಿಸ್ಸಿಪ್ಪಿಯಿಂದ ಬಂದಿದ್ದೇನೆ ಮತ್ತು ನನಗೆ ಈ ಯೋಗವೆಂಬುದೆಲ್ಲ ಹೊಸದು - ಮೂರು ತಿಂಗಳಷ್ಟು ಹೊಸದು! ನಿಮ್ಮ ಬಗ್ಗೆ ನನಗೆ ಅಪಾರವಾದ ಭಕ್ತಿಯಿದೆ, ಏಕೆಂದರೆ ನನಗದರ ಅನುಭೂತಿಯಾಗಿದೆ. ಆದರೆ ಶಿವನ ಕಡೆಗೆ ನನ್ನಲ್ಲಿ ಯಾವುದೇ ಭಕ್ತಿಯ ಭಾವನೆ ಉಂಟಾಗುವುದಿಲ್ಲ. ನಾವು ಮಂತ್ರಗಳನ್ನೇನೋ ಹೇಳುತ್ತೇವೆ, ಆದರೆ ಆಧ್ಯಾತ್ಮಿಕ ಪಥದಲ್ಲಿ ಮುಂದುವರಿಯಲು ನಾವು ಅವನ ಬಗ್ಗೆ ಭಕ್ತಿಯನ್ನು ಇಟ್ಟುಕೊಳ್ಳುವುದು ಅವಶ್ಯಕವೆ?

ಸದ್ಗುರು: ಶಿವನಿಗೆ ನಿಮ್ಮ ಭಕ್ತಿಯ ಅವಶ್ಯಕತೆ ಇಲ್ಲ. ನಿನ್ನೆ ತಾನೇ ಯಾರೋ ನನಗೆ ಫ್ರೆಡ್ರಿಕ್ ನೀತ್ಸೆ (Friedrich Nietzsche) ಬರೆದಿರುವ ಒಂದು ಪುಸ್ತಕದ ಚಿಕ್ಕ ಭಾಗವನ್ನು ಓದಿ ಹೇಳುತ್ತಿದ್ದರು. ನೀವು ಅವರ ಬಗ್ಗೆ ಕೇಳಿದ್ದೀರ? ಅವರು ಜರ್ಮನಿಯವರು. “ಬೆಳಕನ್ನು ಸ್ವೀಕರಿಸಲು ಇಲ್ಲಿ ಬಹಳಷ್ಟು ಜನರಿರುವ ಕಾರಣದಿಂದಲೇ, ಸೂರ್ಯ ತಾನು ಉದಯಿಸುವುದನ್ನು ಆನಂದಿಸಬಹುದು" ಎಂದು ಫ್ರೆಡ್ರಿಕ್ ನೀತ್ಸೆ ಹೇಳುತ್ತಾರೆ. ಇದು ಶುದ್ಧ ಮೂರ್ಖತನ. ನೀವ್ಯಾರೂ ಸಹ ಇಲ್ಲಿರದಿದ್ದರೂ, ಸೂರ್ಯ ಅದೇ ರೀತಿಯಲ್ಲಿ, ವೈಭವದಿಂದ ಉದಯಿಸುತ್ತಾನೆ. ಹೌದೋ ಅಲ್ಲವೋ? ಅವನು ನಿಮಗಾಗಿ ಉದಯಿಸುವುದಿಲ್ಲ. ಇದು ಮನುಷ್ಯರಿಗೆ ಬಂದಿರುವ ಒಂದು ರೋಗ – ಅವರ ಪ್ರಕಾರ ಇಡೀ ಅಸ್ತಿತ್ವವು ಮಾನವ ಕೇಂದ್ರಿತವಾಗಿದೆ. ಅದು ನಿಜವಲ್ಲ. ಇಲ್ಲಿರುವುದು ಮನುಷ್ಯ ಕೇಂದ್ರಿತವಲ್ಲ. ಒಂದು ಅಗಾಧವಾದ ವಿದ್ಯಮಾನವು ಇಲ್ಲಿ ಸಂಭವಿಸುತ್ತಿದೆ. ಅದು ಮಾನವತೆಗಾಗಿ ಸಂಭವಿಸುತ್ತಿಲ್ಲ. ಅದಕ್ಕೆ ಮಾನವತೆಯೊಂದಿಗೆ ಸಂಬಂಧವಿದೆಯಾದರೂ, ಅದರ ಸ್ವರೂಪ ಮಾನುಷವಲ್ಲ.

ಹಾಗಾಗಿ ಶಿವನಿಗೆ ನಿಮ್ಮ ಭಕ್ತಿಯ ಅವಶ್ಯಕತೆ ಇಲ್ಲ. ನೀವು ನಿಮ್ಮ ಹೃದಯದಲ್ಲಿ ಭಕ್ತಿಯನ್ನಿಟ್ಟುಕೊಂಡರೆ ಸಾಕು. ಭಕ್ತಿಯೆಂದರೇನು ಎನ್ನುವ ಕಡೆಗೆ ನಾವೀಗ ಗಮನಹರಿಸೋಣ. ಒಂದು ಅರ್ಥದಲ್ಲಿ, ಭಕ್ತಿಯೆಂದರೆ ನಿಮ್ಮ ಹೃದಯದಲ್ಲಿನ ಮಾಧುರ್ಯತೆ. ಯಾವುದೇ ಮನುಷ್ಯನಿಗಾದರೂ ಸಹ ಬದುಕಲು ಅದೊಂದು ಅತ್ಯುತ್ತಮವಾದ ರೀತಿ. ನೀವು ಈ ಮಾಧುರ್ಯವನ್ನು ನಿಮ್ಮ ಹೃದಯದಲ್ಲಿ ಇಟ್ಟುಕೊಳ್ಳದೇ ಹೋದರೆ, ನಿಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಂದಾಗಿ ನೀವು ಕಟುವಾಗುತ್ತೀರಿ. ಅದರಿಂದ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಬಹುದು ಎಂದುಕೊಳ್ಳಬೇಡಿ. ನೀವೊಂದು ಮನೆಯನ್ನು ಕಟ್ಟಬಹುದು, ಕುಟುಂಬವನ್ನು ಕಟ್ಟಬಹುದು, ದೊಡ್ಡ ಮೊತ್ತದ ಬ್ಯಾಂಕ್ ಬ್ಯಾಲೆನ್ಸ್ಅನ್ನು ಹೊಂದಬಹುದು, ನೀವು ಮಿಸ್ಸಿಸ್ಸಿಪ್ಪಿಯಲ್ಲಿ ಹುಟ್ಟಿರಬಹುದು, ಏನೇ ಆದರೂ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಲು ಬರುವುದಿಲ್ಲ. ಸ್ವಲ್ಪ ಕಾಲದವರೆಗೆ ಮಾತ್ರ ನಿಮ್ಮ ಪ್ರತ್ಯೇಕತೆ ಕೆಲಸಮಾಡುತ್ತದೆ; ನಂತರ, ಒಂದಲ್ಲ ಒಂದು ರೀತಿಯಲ್ಲಿ ಜೀವನ ನಿಮ್ಮನ್ನು ಸದೆಬಡಿಯುತ್ತದೆ. ನಿಮ್ಮ ಹೃದಯಲ್ಲಿ ಮಾಧುರ್ಯವಿರದೇ ಹೋದರೆ, ನೀವು ಕಟುವಾಗುವಿರಿ, ಅಸಮಾಧಾನಗೊಳ್ಳುವಿರಿ.  ಇಂದು ಮಾನವತೆಯ ಬಹುದೊಡ್ಡ ಭಾಗಕ್ಕೆ ಹೀಗಾಗಿದೆ.

ಹಾಗಾಗಿ, ಒಂದು ರೀತಿಯಲ್ಲಿ ಭಕ್ತಿಯೆಂದರೆ, ನಿಮ್ಮ ಹೃದಯದಲ್ಲಿ ಬಹುಕಾಲ ಉಳಿಯುವ ಮಾಧುರ್ಯತೆ – ಹೊರಗಿನ ಯಾವುದೇ ಸಹಾಯದ ಮೇಲೆ ಅವಲಂಬಿತವಾಗಿಲ್ಲದಂತಹ ಮಾಧುರ್ಯತೆ. ನೀವು ಯಾರನ್ನಾದರೂ ಪ್ರೀತಿಸಿದಾಗ, ನಿಮ್ಮ ಹೃದಯವು ಮಧುರತೆಯಿಂದ ತುಂಬುತ್ತದೆ. ಆದರೆ ಅದೆಷ್ಟು ಸಮಯದವರೆಗೆ ಉಳಿಯುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ನಿಮ್ಮ ಪ್ರೇಮ ಪ್ರಸಂಗದಿಂದಾಗಿ ನಿಮ್ಮ ಹೃದಯ ಅತ್ಯಂತ ಕಹಿಯಾಗಬಹುದು. ಹೌದೋ ಅಲ್ಲವೋ? ನಾವದನ್ನು ನಿಮಗೆ ಹಾರೈಸುತ್ತಿಲ್ಲ, ಆದರೂ, ಪರಿಸ್ಥಿತಿಗಳ ಕಾರಣದಿಂದಾಗಿ, ಅಥವಾ ರೋಗ, ಸಾವು, ನಷ್ಟ ಅಥವಾ ಇನ್ನೂ ಹಲವಾರು ಕಾರಣಗಳಿಂದಾಗಿ, ಅಥವಾ ಬರೀ ಬೇಸರದಿಂದಲೂ ಹಾಗಾಗಬಹುದಾದ ಸಾಧ್ಯತೆಯಿದೆ. ನೀವು ಯಾರನ್ನು ಬಹಳ ಅದ್ಭುತವೆಂದು ತಿಳಿದಿದ್ದಿರೋ, ಕೆಲ ವರ್ಷಗಳ ನಂತರ ಅವರನ್ನು ನೋಡಿ, "ನಾನು ಈ ತಪ್ಪನ್ನು ಮಾಡಿದೆನೆ?!" ಎಂದು ನೀವು ಯೋಚಿಸುತ್ತೀರಿ. ನಿಮಗದನ್ನು ನಂಬಲು ಸಾಧ್ಯವಾಗುವುದಿಲ್ಲ! ಇನ್ನೂ ಎಷ್ಟೋ ಸಂಗತಿಗಳು ನಡೆಯಬಹುದು. ಹಾಗಾಗಿ, ಇಲ್ಲಿ ಭಕ್ತಿ ಎನ್ನುವುದು ಹೃದಯದಲ್ಲಿ ಬಹುಕಾಲ ಉಳಿಯುವ ಮಾಧುರ್ಯ - ಯಾರ ಮೇಲೂ ಅವಲಂಬಿತವಾಗಿಲ್ಲದ ಮಾಧುರ್ಯ.

"ಹಾಗಿದ್ದ ಮೇಲೆ, ನಾನು ಶಿವನ ಭಕ್ತನಾಗಬೇಕೆ?" ಅದು ಶಿವನಿಗೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಆದರೆ ನೀವು ಭಕ್ತರಾಗಿದ್ದರೆ – ಭಕ್ತಿಯೆನ್ನುವುದು ಬೇರೆಯದ್ದೇ ರೀತಿಯ ಬುದ್ಧಿವಂತಿಕೆ, ನಿಮ್ಮ ಬುದ್ಧಿಮತ್ತೆಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಮೂಲಭೂತ ಬುದ್ಧಿಮತ್ತೆಯ ಸ್ವರೂಪ ಹೇಗಿದೆಯೆಂದರೆ, ನಿಮಗೆ ಯಾವುದನ್ನಾದರೂ ತಿಳಿಯಬೇಕೆಂದಿದ್ದರೆ, ಅದನ್ನು ತುಂಡುತುಂಡು ಮಾಡಬೇಕು. ಅಲ್ಲವೇ? ನಿಮಗೆ ಯಾರ ಬಗ್ಗೆಯಾದರೂ ಆಸಕ್ತಿ ಮೂಡಿದರೆ, ನೀವು ಅವರನ್ನು ತುಂಡರಿಸುತ್ತೀರಿ. ನೀವದನ್ನು ದೈಹಿಕವಾಗಿ ಮಾಡಲು ಹೋಗುವುದಿಲ್ಲ, ಏಕೆಂದರೆ ಕಾನೂನು ಅದಕ್ಕೆ ಅನುಮತಿಸುವುದಿಲ್ಲ. ಆದರೆ ನೀವವರನ್ನು ಮಾನಸಿಕವಾಗಿ ತುಂಡರಿಸಿ ವಿಶ್ಲೇಷಿಸುತ್ತೀರಿ ಮತ್ತು ಒಂದು ಅನುಕೂಲಕರವಾದ ತೀರ್ಮಾನಕ್ಕೆ ಬರುತ್ತೀರಿ; ಸತ್ಯವಾದ ನಿರ್ಣಯಕ್ಕಲ್ಲ - ನಿಮಗೆ ಇಷ್ಟವಾಗುವ ರೀತಿಯಲ್ಲೊಂದು ನಿರ್ಣಯಕ್ಕೆ ಬರುತ್ತೀರಿ ಅಷ್ಟೆ. ಮುಂದೊಂದು ದಿನ ಅದು ಸರಿಯಲ್ಲ ಎಂದು ಗೊತ್ತಾದಾಗ, ನೀವು ಕಟುವಾಗುತ್ತೀರಿ. ವಿಷಯಗಳನ್ನು ಬೇರ್ಪಡಿಸುವುದೇ ಬುದ್ಧಿಮತ್ತೆಯ ಲಕ್ಷಣ. ವಿಷಯ ಅಥವಾ ವಸ್ತುಗಳನ್ನು ವಿಭಜಿಸುವುದರಿಂದ, ನೀವು ಅದರ ಉಪಯುಕ್ತತೆಯನ್ನು ತಿಳಿಯಬಹುದು. ಒಬ್ಬ ವ್ಯಕ್ತಿಯನ್ನು ನಾವು ವಿಶ್ಲೇಷಿಸಿದರೆ, ಅವರನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಾವು ಕಲಿಯಬಹುದಷ್ಟೆ, ಆದರೆ ನಮಗೆ ಅವರನ್ನು ತಿಳಿದುಕೊಳ್ಳಲು ಆಗುವುದಿಲ್ಲ. ನಾವು ಅವರನ್ನು ಸಂಪೂರ್ಣವಾಗಿ ಒಳಗೂಡಿಸಿಕೊಂಡರೆ ಮಾತ್ರ,  ನಾವವರನ್ನು ತಿಳಿದುಕೊಳ್ಳುತ್ತೇವೆ – ಇದನ್ನು ಬಿಟ್ಟು ಬೇರಿನ್ಯಾವ ಮಾರ್ಗವೂ ಇಲ್ಲ.

ತುಂಬ ಪ್ರಬಲವಾದ ಬುದ್ಧಿಮತ್ತೆ ಇರುವ ಯಾರಿಗಾದರು ನೀವೊಂದು ಹೂವನ್ನು ಕೊಟ್ಟರೆ - ಒಬ್ಬ ವಿಜ್ಞಾನಿಗೆ ಹೂವನ್ನು ಕೊಟ್ಟರೆ, ಅವರು ಮಾಡುವ ಮೊದಲ ಕೆಲಸವೆಂದರೆ - ಅದನ್ನು ಸೀಳಿಬಿಡುವುದು, ಏಕೆಂದರೆ ಅದರೊಳಗೇನಿದೆ ಎಂದು ಅವನಿಗೆ ತಿಳಿಯಬೇಕಾಗಿರುತ್ತದೆ. ಅದೇ ಒಬ್ಬ ಕವಿಗೆ ಆ ಹೂವನ್ನು ಕೊಟ್ಟರೆ, ಅವನು ಆ ಹೂವಿನ ಬಗ್ಗೆ ಕವಿತೆಗಳನ್ನು ಬರೆದು ಹಾಡುತ್ತಾನೆ. ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದರೆ ಆ ಹೂವಿನೊಳಗೆ ಏನಿದೆಯೆಂದು ಕವಿಗೆ ತಿಳಿಯದು, ಮತ್ತು ಅವನದರ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಸಹ ಹೋಗುವುದಿಲ್ಲ. ಅದೇ ಒಬ್ಬ ಯೋಗಿ, ತಾನೇ ಹೂವಾಗುವನು. ಅವನು ಒಂದು ಹೂವನ್ನು ನೋಡಿದರೆ, ಅವನೇ ಆ ಹೂವಾಗುತ್ತಾನೆ, ಏಕೆಂದರೆ ಅರಳುತ್ತಿರುವ ಒಂದು ಚಿಕ್ಕ ಹೂವಿನಲ್ಲಿ, ಅದು ಹುಲ್ಲಿನಲ್ಲಿ ಅಡಗಿಕೊಂಡು ಗಮನಕ್ಕೆ ಬಾರದಿದ್ದರೂ ಸಹ, ಸೃಷ್ಟಿಕರ್ತನ ಕೈವಾಡ ಅದರಲ್ಲಿ ಜಾಗೃತವಾಗಿದ್ದೇ ಇದೆಯಲ್ಲವೇ? ಅದು ನಮ್ಮಲ್ಲಿರುವಷ್ಟೇ ಜಾಗೃತವಾಗಿ ಆ ಹೂವಿನಲ್ಲೂ ಕೆಲಸಮಾಡುತ್ತಿದೆ, ಅದಕ್ಕಿಂತ ಕಡಿಮೆಯೇನಿಲ್ಲ. ನೀವೊಂದು ಸಣ್ಣ ಹುಲ್ಲುಕಡ್ಡಿಯನ್ನು ತುಂಬ ಗಮನವಿಟ್ಟು ನೋಡಿದ್ದೇ ಆದರೆ, ಅದನ್ನು ಅಗಾಧವಾದ ಗಮನ ನೀಡಿ ಮಾಡಲಾಗಿದೆ ಎನ್ನುವುದನ್ನು ನೀವು ಅರಿಯುತ್ತೀರಿ. ಅದನ್ನು ಸುಮ್ಮನೆ ಬೇಕಾಬಿಟ್ಟಿಯಾಗಿ ಮಾಡಲಾಗಿಲ್ಲ, "ಕೇವಲ ಇದೊಂದು ಹುಲ್ಲಿನ ಕಡ್ಡಿಯಷ್ಟೆ" ಎನ್ನುವ ರೀತಿಯಲ್ಲಿ ಅದನ್ನು ಮಾಡಲಾಗಿಲ್ಲ. ಅದನ್ನು ಯಾರೇ ಮಾಡಿದ್ದರೂ ಸಹ, ಅದಕ್ಕೆ ಅಪಾರವಾದ ಗಮನವನ್ನು ನೀಡಿ ಮಾಡಿದ್ದಾರೆ.

ಹಾಗಾಗಿ, ಒಬ್ಬ ಭಕ್ತನು ಬುದ್ಧಿವಂತಿಕೆಯ ವಿಭಿನ್ನ ಆಯಾಮವಾಗಿರುತ್ತಾನೆ. ಬೇರೆ ಯಾರೂ ಸಹ  ನೋಡದಿರುವಂತಹ ವಿಷಯಗಳನ್ನು ಅವನು ಕಾಣುತ್ತಾನೆ, ಏಕೆಂದರೆ ಭಕ್ತಿಯ ಅರ್ಥ "ನೀವು" ಎನ್ನುವುದು ಇಲ್ಲದಿರುವುದು. ನಿಮ್ಮ ಮತ್ತು ಪರಮಸತ್ಯದ ನಡುವೆ ಇರುವುದು ಒಂದೇ ಒಂದು ಅಡ್ಡಗೋಡೆ – ಅದು ನೀವೇ. ಆದ್ದರಿಂದ, ಭಕ್ತಿಯೆಂದರೆ ನೀವು ಇಲ್ಲವಾಗುವುದು. ಅದು ಸಾಧ್ಯವಾಗದೇ ಹೋದರೆ, ಕಡೇಪಕ್ಷ ನೀವು ನಿಮ್ಮತನದ ಗುಡ್ಡೆಯನ್ನು ಕಡಿಮೆಮಾಡಿಕೊಳ್ಳಬೇಕು. ನೀವು ಆ ಕಸದ ರಾಶಿಯನ್ನು ಕಡಿಮೆಮಾಡಿಕೊಂಡರೆ, ಇದ್ದಕ್ಕಿದಂತೆ ಜೀವನವು ಅದ್ಭುತವಾದ ರೀತಿಯಲ್ಲಿ ತೆರೆದುಕೊಳ್ಳುವುದನ್ನು ನೀವು ನೋಡುತ್ತೀರಿ – ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಜೀವನವು ಅರಳುತ್ತದೆ.

ಹಾಗಾಗಿ, ಭಕ್ತಿಯೆನ್ನುವುದು ಶಿವನ ಬಗ್ಗೆಯಲ್ಲ, ಅದು ನಿಮ್ಮ ಬಗ್ಗೆ. ಆದರೆ, ನೀವು ಭಕ್ತಿಯಿಂದ ಸಾಗಬೇಕು. ನೀವು ಯಾವುದರ ಮೇಲೆ ಭಕ್ತಿ ಇರಿಸಿಕೊಂಡಿದ್ದೀರಿ ಎನ್ನುವುದು ಮುಖ್ಯವಾಗುವುದಿಲ್ಲ. ನೀವು ಸಂಪೂರ್ಣವಾದ ಭಕ್ತಿಯಿಂದ ಮುನ್ನಡೆಯಬೇಕು. ಭಕ್ತಿಯೆಂದರೆ "ನೀವು" ಎನ್ನುವುದು ಇಲ್ಲದಿರುವುದು. ಭಕ್ತಿಯೆಂದರೆ ಗ್ರಹಿಕೆಯ ಉನ್ನತವಾದ ಸ್ಥಿತಿ, ಏಕೆಂದರೆ, ನೀವು ಇನ್ನು ನಿಮ್ಮಿಂದಲೇ ತುಂಬಿಹೋಗಿರುವುದಿಲ್ಲ, ನಿಮ್ಮೊಳಗೊಂದು ಶೂನ್ಯತೆ ನೆಲೆಸಿರುತ್ತದೆ - ಹಾಗಿದ್ದಾಗ, ನಿಮಗಿಂತ ದೊಡ್ಡ ಶಕ್ತಿಯೊಂದು ನಿಮ್ಮನ್ನು ಸ್ಪರ್ಶಿಸಬಹುದು, ನಿಮ್ಮೊಳಗೆ ಪ್ರವೇಶಿಸಬಹುದು, ನಿಮ್ಮೊಳಗೆ ನೆಲೆಸಬಹುದು.

ಸದ್ಯದಲ್ಲಿ ನೀವು ನಿಮ್ಮ ಮಾನಸಿಕ ಅಸ್ತವ್ಯಸ್ತತೆಯ ಮೂಲಕ ಎಲ್ಲವನ್ನೂ ನೋಡುತ್ತಿದ್ದೀರಿ ಮತ್ತು ನೀವು ಕೇವಲ ನಿಮ್ಮ ಬುದ್ಧಿಮತ್ತೆಯನ್ನು ಮಾತ್ರ ಪ್ರಜ್ಞಾವಂತಿಕೆಯೆಂದು ಅರ್ಥೈಸಿಕೊಂಡಿದ್ದೀರಿ. ಬುದ್ಧಿಮತ್ತೆಯು ಕೇವಲ ಪ್ರಜ್ಞಾವಂತಿಕೆಯ ಒಂದು ಆರಂಭಿಕ ರೂಪವಷ್ಟೆ; ಪ್ರಯೋಜನಕಾರಿ ಉದ್ದೇಶಗಳಿಗೆ ಮಾತ್ರ ಅದು ಉಪಯುಕ್ತವಾಗಿದೆ. ನಿಮ್ಮ ಬುದ್ಧಿಮತ್ತೆಯೇನಿದ್ದರೂ ಜಗತ್ತಿನಲ್ಲಿ ಬದುಕುಳಿಯಲು, ಹೊಟ್ಟೆಪಾಡನ್ನು ನೋಡಿಕೊಳ್ಳಲು ಅವಶ್ಯಕವಷ್ಟೆ. ಬೇರೆ ಇನ್ಯಾವುದೇ ಆಯಾಮವು ನಿಮಗೆ ಲಭ್ಯವಾಗಬೇಕಿದ್ದರೆ, ನಿಮ್ಮ ಬುದ್ಧಿಮತ್ತೆಯು ಉತ್ತಮವಾದುದ್ದಲ್ಲ. ಅದಕ್ಕೆ ನಿಮ್ಮಲ್ಲಿನ ಆಳವಾದ ಪ್ರಜ್ಞಾವಂತಿಕೆಯ ಆಯಾಮ ಕಾರ್ಯನಿರ್ವಹಿಸಬೇಕಾಗುತ್ತದೆ. ಅದು ಕಾರ್ಯನಿರ್ವಹಿಸಬೇಕೆಂದರೆ, ಭಕ್ತಿಯಿಂದ ತುಂಬಿರುವುದು ಅತ್ಯಂತ ಸುಲಭದ ಮಾರ್ಗ.