೨೩ ಸಪ್ಟೆಂಬರ್ ೧೯೮೨ ರಂದು ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ತಮಗುಂಟಾದ ಪ್ರಚಂಡ ಅಧ್ಯಾತ್ಮಿಕ ಅನುಭವವನ್ನು ಸದ್ಗುರುಗಳು ಇಲ್ಲಿ ಬಿಚ್ಚಿಡುತ್ತಾರೆ. "ಎಲ್ಲರಿಗೂ ಅದನ್ನು ಪಡೆದುಕೊಳ್ಳುವ ಯೋಗ್ಯತೆ ಇದೆ, ಮತ್ತು ಎಲ್ಲರಿಗೂ ಆ ಸಾಮರ್ಥ್ಯ ಇದೆ" ಎಂದು ಒತ್ತಿ ಹೇಳುತ್ತಾ ಆತ್ಮಜ್ಞಾನವನ್ನು ಹೊಂದುವ ಬಗ್ಗೆ ನಮ್ಮಲ್ಲಿರಬಹುದಾದ "ಅದೆಲ್ಲ ನಮಗೆ ಅಸಾಧ್ಯ" ಎಂಬ ಋಣಾತ್ಮಕ ಭಾವನೆಯನ್ನು ಇಲ್ಲವಾಗಿಸುತ್ತಾರೆ.

Sadhgurugala Jnanodaya - Avarade Maatugalalli

ಲಿಪ್ಯಂತರ:

ಸದ್ಗುರು: ಒಂದ್ ಮಧ್ಯಾಹ್ನ, ನಾನು ಬೆಳೆದಿದ್ದಂತ ಊರಾದ ಮೈಸೂರಿನಲ್ಲಿರೋ ಚಾಮುಂಡಿ ಬೆಟ್ಟದ್ ಮೇಲೆ ಹೋಗಿ ಕೂತಿದ್ದೆ. ಅಲ್ಲಿವರ್ಗೆ ನಾನ್ ಯಾವಾಗ್ಲೂ ಅಂದ್ಕೊಂಡಿದ್ದಿದ್ದು ಇದು ನಾನು, ಅದು ಯಾರೋ ಬೇರೆ ಅಂತ. ನಂಗ್ ಆ ಬೇರೆಯವರ್ ಜೊತೆ ತೊಂದ್ರೆ ಏನೂ ಇರ್ಲಿಲ್ಲ, ಆದ್ರೆ ಅದ್ ಯಾರೋ ಬೇರೆ, ಮತ್ತು ಇದು ನಾನು. ಜೀವನ್ದಲ್ಲಿ ಮೊದಲ್ನೇ ಸರ್ತಿ ಯಾವುದು ನಾನು ಯಾವುದು ನಾನಲ್ಲ ಅಂತ ಗೊತ್ತಾಗ್ಲಿಲ್ಲ ನಂಗೆ. ನಾನು ಎಂಬುದು ಎಲ್ಲಾ ಕಡೆ ಹರಡ್ ಹೋಗಿತ್ತು. ನಾನ್ ಅಂದ್ಕೊಂಡೆ ಈ ಭ್ರಮೆ 5-10 ನಿಮಿಷಗಳವರೆಗೆ ಇತ್ತು ಅಂತ. ಆದ್ರೆ ನಾನು ನನ್ ಸಹಜ ಸ್ಥಿತಿಗ್ ವಾಪಸ್ ಬಂದಾಗ 4.5 ಗಂಟೆ ಕಳ್ದ್ ಹೋಗಿತ್ತು. ನಾನ್ ಅಲ್ಲೇ ಕೂತಿದ್ದೆ, ಪೂರ್ತಿ ಪ್ರಜ್ಞೆಯಲ್ಲಿ, ಕಣ್ಣುಗಳ್ ತೆರ್ದಿದ್ವು. ನಾನಲ್ಲಿಗ್ ಹೋಗಿ ಕೂತಿದ್ದು ಮಧ್ಯಾನ ಸುಮಾರು 3 ಗಂಟೆಗೆ. ಈಗ ಸಂಜೆ ಏಳೂವರೆ ಆಗ್ ಹೋಗಿತ್ತು. ಸೂರ್ಯ ಮುಳ್ಗ್ ಹೋಗಿದ್ದ. ನಾನು ಬರೀ 10 ನಿಮಿಷ ಅಂದ್ಕೊಂಡೆ, ಆದ್ರೆ 4.5 ಗಂಟೆ ಕಳ್ದ್ ಹೋಗಿತ್ತು. ನಾನು ದೊಡ್ಡವನಾದ್ ಮೇಲೆ ಮೊದಲ್ನೇ ಬಾರಿಗೆ ನನ್ ಕಣ್ಣೀರು ಹರೀತಾ ಇತ್ತು, ಯಾವ್ ಮಟ್ಟಿಗೆ ಅಂದ್ರೆ ನನ್ ಶರ್ಟ್ ಪೂರ್ತಿ ಒದ್ದೆಯಾಗ್ ಹೋಗಿತ್ತು. ನಾನು ಮತ್ತು ಕಣ್ಣೀರು ಅಂದ್ರೆ ಅಸಾಧ್ಯ. ನಾನು ಹೀಗಿದ್ದೆ.

ನಾನು ಯಾವಾಗ್ಲೂ ಸಂತೋಷವಾಗೇ ಇದ್ದೆ. ಅದು ಯಾವತ್ತೂ ಸಮಸ್ಯೆಯಾಗಿರ್ಲಿಲ್ಲ ನಂಗೆ. ನಾನು ಮಾಡ್ತಿತ್ತಿದ್ ರಲ್ಲಿ ಯಶಸ್ವಿಯಾಗಿದ್ದೆ, ಯುವಕನಾಗಿದ್ದೆ, ಏನೂ ತೊಂದ್ರೆ ಇರ್ಲಿಲ್ಲ. ಎಲ್ಲಾ ಸರಿಯಾಗಿತ್ತು, ಆದ್ರೆ ಈಗ ಬೇರೆಯೇ ಒಂದ್ ತರದ ಆನಂದ ಉಕ್ಕಿ ಹರೀತಾ ಇತ್ತು ನನ್ನಲ್ಲಿ, ಹೇಳ್ಳಿಕ್ಕಸಾಧ್ಯವಾದಂತದು. ನನ್ ದೇಹದ ಪ್ರತಿಯೊಂದ್ ಕಣದಲ್ಲೂ ಆನಂದ ಉಕ್ಕಿ ಹರೀತಾ ಇತ್ತು. ಪದಗಳೇ ಇರ್ಲಿಲ್ಲ ನನ್ ಬಳಿ. ನಾನು ತಲೆಯಾಡಿಸಿ, ನನ್ ತಾರ್ಕಿಕ ಮನಸ್ಸನ್ನ "ಇದ್ ಏನಾಗ್ತಾ ಇದೆ ನಂಗೆ?" ಅಂತ ಕೇಳ್ಕೊಂಡಾಗ ಅದು ನಂಗೆ ಹೇಳಿದ್ದೇನಂದ್ರೆ "ಬಹುಶ ನಿಂಗೆ ಹುಚ್ಚು ಹಿಡೀತಾ ಇದೆ" (ನಗು). ಅದ್ ಏನು ಅಂತ ನಂಗೇನೂ ಚಿಂತೆ ಇರ್ಲಿಲ್ಲ, ಆದ್ರೆ ನಂಗದನ್ ಕಳ್ಕೊಳ್ಳೋಕ್ಕಿಷ್ಟ ಇರ್ಲಿಲ್ಲ. ಏಕಂದ್ರೆ ಇದು ನಾನು ಅನುಭವಿಸಿದ್ ವಿಷ್ಯಗಳಲ್ಲೆಲ್ಲಾ ಅತ್ಯಂತ ಸುಂದರವಾಗಿತ್ತು. ನಾನ್ ಅಂದ್ಕೊಂಡೇ ಇರ್ಲಿಲ್ಲ ಒಬ್ಬ ಮನುಷ್ಯ ತನ್ನೊಳ್ಗೆ ಈ ತರದ್ ಅನುಭವವನ್ನ ಪಡ್ಕೊಳ್ ಬಹುದು ಅಂತ. ನಾನ್ ನನ್ನ ಹತ್ರದ್ ಸ್ನೇಹಿತರ್ ಹತ್ರ ಹೋಗಿ, "ನೋಡಿ, ನನಗ್ ಈ ತರ ಆಗ್ತಾ ಇದೆ" ಅಂತ ಹೇಳ್ದಾಗ, ಹಾಗ್ ಹೇಳ್ತಿದ್ದಂಗೇನೆ ಕಣ್ಣೀರು ಬಂದ್ ಬಿಡೋದು, ಮತ್ತವ್ರು ಕೇಳ್ತಾ ಇದ್ರು "ಏನಾದ್ರೂ ಕುಡಿದ್ಯಾ? ಏನಾದ್ರೂ ನುಂಗಿದ್ಯಾ? ಏನ್ ಮಾಡ್ದೆ?" ಯಾರತ್ರಾನೂ ಏನೂ ಹೇಳಿ ಪ್ರಯೋಜ್ನ ಇಲ್ಲ ಅಂತ ಗೊತ್ತಾಯ್ತು ನಂಗೆ. ಏಕಂದ್ರೆ, ನಾನ್ ಸುಮ್ನೆ ಆಕಾಶಾನ್ ನೋಡಿದ್ರೆ ಕಣ್ಣೀರ್ ಬರೋದು, ಮರ ನೋಡಿದ್ರೆ ಕಣ್ಣೀರ್ ಬರೋದು, ಕಣ್ ಮುಚ್ಕೊಂಡ್ರೆ ಕಣ್ಣೀರ್ ಬರೋದು. ನಾನ್ ತುಂಬಿ ತುಳುಕ್ತಾ ಇದೀನಿ. ಆರು ವಾರಗಳಲ್ಲಿ ನನ್ ಪೂರ್ತಿ ವ್ಯಕ್ತಿತ್ವಾನೇ ಗಮನಾರ್ಹವಾಗಿ ಬದಲಾಯ್ತು. ಕಾಲದ್ ಪರಿಗಣನೇನೇ ಹೊರಟ್ ಹೋಯ್ತು ನಂಗೆ.

ಮುಂದಿನ್ ಬಾರಿ ಇದಾಗಿದ್ದು ಬಹಳ ಮಹತ್ತ್ವದ್ದು ಏಕಂದ್ರೆ ನನ್ ಸುತ್ತ ಜನ್ರಿದ್ರು. ನಾನ್ ನನ್ ಕುಟುಂಬದ್ ಜೊತೆ ಊಟಕ್ ಕೂತಿದ್ದೆ. ನಾನ್ ಬರೀ ಎರಡ್ ನಿಮ್ಷ ಅಂದ್ಕೊಂಡೆ, ಆದ್ರೆ ಏಳು ಗಂಟೆ ಕಳ್ದೋಗಿತ್ತು. ನಾನಲ್ಲೇ ಕೂತಿದ್ದೆ, ಪೂರ್ತಿ ಜಾಗೃತನಾಗಿ, ಆದ್ರೆ ನಂಗೆ ಕಾಲದ ಗಣನೇನೇ ಇರ್ಲಿಲ್ಲ. ಈ ತರ ಬಹಳ ಸಲ ಆಯ್ತು. ಒಂದಿನ ನಾನು ನನ್ ಗದ್ದೆನಲ್ ಕೂತಿದ್ದೆ. ನಾನು 25-30 ನಿಮ್ಷ ಕೂತಿದ್ದೆ ಅಂದ್ಕೊಂಡೆ, ಆದ್ರೆ 13 ದಿನ ಆಗ್ ಹೋಗಿತ್ತು. ಅಷ್ಟ್ರಲ್ಲಿ ಜನರ್ ಗುಂಪು ಸೇರ್ಬಿಟ್ಟಿತ್ತು. ಭಾರತ ಎಷ್ಟಿದ್ರೂ ಭಾರತ. ನನ್ ಕುತ್ತಿಗೇಲಿ ದೊಡ್ ದೊಡ್ ಹಾರಗಳಿದ್ವು. ಯಾರೋ ತಮ್ business ಬಗ್ಗೆ ಕೇಳ್ತಾ ಇದಾರೆ, ಯಾರೋ ತಮ್ ಮಗಳ್ ಮದ್ವೆ ಯಾವಾಗ್ ಆಗತ್ತೆ ಅಂತ ಕೇಳ್ತಾ ಇದಾರೆ; ನನಗ್ ಸುತರಾಂ ಇಷ್ಟ ಇಲ್ದೇ ಇದ್ದಂತ ವಿಷ್ಯಗಳೆಲ್ಲ ನನ್ ಸುತ್ಲೇ ನಡೀತಾ ಇದೆ! ನಾನ್ ನಿಜ್ವಾಗ್ಲೂ ಬರೀ 25-30 ನಿಮ್ಷ ಅಂದ್ಕೊಂಡಿದ್ದೆ, ಆದ್ರೆ ಈ ಜನ್ರು ಹೇಳ್ತಿದಾರೆ, "13 ದಿನಗಳಿಂದ ಕೂತಿದಾರೆ. ಸಮಾಧಿಯಲ್ಲಿದಾರೆ, ಅದೂ ಇದೂ"; ನಾನ್ ಈ ಪದಗಳನ್ನ ಕೇಳೂ ಇರ್ಲಿಲ್ಲ. ನಾನ್ ಬೆಳ್ದಿದ್ದು ಯೂರೋಪಿಯನ್ ಫಿಲಾಸಫಿ ಓದ್ಕೊಂಡು - ಕಮೂ, ಕಾಫ್ಕಾ, ಡಸ್ಟೋವ್ ಸ್ಕಿ, ನೀವದೆಲ್ಲಾ ಓದ್ತೀರಾ? ಅಮೆರಿಕದಲ್ಲಿ? ಮ್? ಆಮೇಲೆ ಅರವತ್ತರ ದಶಕ... ಬೀಟಲ್ಸ್ ಅದು ಇದು ಎಲ್ಲ ಇತ್ತು, ನಾನ್ ಬೆಳ್ದಿದ್ದು ಆ ತರ. ನಾನು ಮತ್ತು ಅಧ್ಯಾತ್ಮ ಬೇರೆನೇ ಪ್ರಪಂಚಗಳು. ನಾನ್ ಆ ಕಡೆ ಹೋಗೋ ಸಾಧ್ಯತೇನೇ ಇರ್ಲಿಲ್ಲ. ಹಾಗಾಗಿ ನನ್ನಲ್ಲಿ ಈ ತರದ್ ಪದಗಳು - ಸಮಾಧಿ, ಅದು, ಇದು - ಏನೂ ಇರ್ಲಿಲ್ಲ. ಜನ್ರು "ಓಹ್, ಅವ್ರು ಈ ತರದ್ ಸಮಾಧಿನಲ್ಲಿದಾರೆ, ಆ ತರದ್ ಸಮಾಧಿನಲ್ಲಿದಾರೆ, ಅವರನ್ ಮುಟ್ಟಿದ್ರೆ ಹಿಂಗಾಗುತ್ತೆ" ಅಂತ ಹೇಳ್ಬಿಟ್ಟು ನನ್ನನ್ನ ಹಿಡ್ಕೊಳೋದಿಕ್ ಪ್ರಯತ್ನ ಪಡ್ತಾ ಇದಾರೆ (ನಗು). ಹಾಗಾಗಿ ನಾನ್ ಮಾಡ್ಬಹುದಾಗಿದ್ದ ಒಂದೇ ಕೆಲ್ಸ ಅಂದ್ರೆ ಆ ಜಾಗ ಬಿಟ್ಟು ಹೋಗ್ಬಿಡೋದು, ಇದ್ರಿಂದ ತಪ್ಪಿಸ್ಕೊಳ್ಳೋದಿಕ್ಕೆ. ಏಕಂದ್ರೆ ನನ್ ಸುತ್ತ ಏನಾಗ್ತಾ ಇದೆ ಅಂತ ಅರ್ಥ ಮಾಡ್ಕೊಳ್ಳೋದಿಕ್ಕಾಗ್ಲಿಲ್ಲ ನಂಗೆ.

ನಾನ್ ನಿಮಗ್ ಈ ಕತೇನ ಯಾಕ್ ಹೇಳ್ತಾ ಇದೀನಿ ಅಂದ್ರೆ, ಇದು ಎಲ್ಲಾ ಮನುಷ್ಯರಿಗೂ ಸಾಧ್ಯವಿದೆ. ಇದು ನನ್ನ ಹಾರೈಕೆ ಮತ್ತು ಅಶೀರ್ವಾದ - ನಿಮಗ್ ಇದು ಆಗ್ಲೇ ಬೇಕು. ನೀವು ಎವರೆಸ್ಟ್ ಪರ್ವತ ಹತ್ತೀರೋ ಇಲ್ವೋ, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಆಗ್ತೀರೋ ಇಲ್ವೋ, ಈ ಭೂಮಿ ಮೇಲೆ ನಿಮ್ಮ ಜೀವನದ ಅನುಭವ ಇಂಪಾಗಿರ್ಬೇಕು. ನೀವು ಆನಂದದಿಂದ ಜೀವ್ಸಿ ಹೋಗ್ಬೇಕು. ಇದು ಎಲ್ಲಾ ಮನುಷ್ಯರಿಗೂ ಆಗ್ಬೇಕು. ಎಲ್ಲರಿಗೂ ಅದನ್ ಪಡ್ಕೊಳೋ ಯೋಗ್ಯತೆ ಇದೆ ಮತ್ತು ಎಲ್ಲರಿಗೂ ಆ ಸಾಮರ್ಥ್ಯ ಇದೆ.

ಚಾಮುಂಡಿ ಬೆಟ್ಟದಲ್ಲಾದ ತಮ್ಮ ಆಂತರಿಕ ಅನುಭವದಿಂದ ಸದ್ಗುರುಗಳು "ಇನ್ನರ್ ಎಂಜಿನಿಯರಿಂಗ್" ಅನ್ನು, ಬೇರೆಯವರೂ ಈ ಆಯಾಮವನ್ನು ಅನುಭವಿಸಲು ಅವರನ್ನು ಸಶಕ್ತರನ್ನಾಗಿಸುವುದಕ್ಕೋಸ್ಕರವಾಗಿ, ಒಂದು ಸಾಧನವನ್ನಾಗಿ ಸಿದ್ಧಪಡಿಸಿದರು.

ಅವರ ಈ ಸಾಧನದಿಂದ ೧೦ ಲಕ್ಷಕ್ಕೂ ಹೆಚ್ಚು ಹೃದಯಗಳು ಸ್ಪರ್ಶಿಸಲ್ಪಟ್ಟಿವೆ ಹಾಗೂ ಅವರೆಲ್ಲರೂ ಈಗ ತಮ್ಮ ಸೀಮೆಗಳನ್ನು ಮೀರಿ ತಮ್ಮ ಜೀವನವನ್ನು ಜೀವಿಸುತ್ತಿದ್ದಾರೆ. ಆ ಮೂಲಕ ಈ ಜಗತ್ತನ್ನು ಜೀವಿಸಲು ಹೆಚ್ಚು ಸುಂದರವೂ ಶಾಂತಿಯುತವೂ ಆದ ಸ್ಥಳವನ್ನಾಗಿ ಮಾರ್ಪಡಿಸಿದ್ದಾರೆ.

ಪ್ರೀತಿ, ಬೆಳಕು ಮತ್ತು ನಗುವಿನಿಂದ ತುಂಬಿದ ಜಗತ್ತು.

ಬನ್ನಿ, ಇದನ್ನು ನಿಜವಾಗಿಸೋಣ.