ಇಂದಿಗೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 72 ವರ್ಷಗಳಾಗುತ್ತದೆ. ಈ 72 ವರ್ಷಗಳಲ್ಲಿ ಅನೇಕ ಗಮನಾರ್ಹವಾದ ಸಂಗತಿಗಳು ನಡೆದಿವೆ. ಆದರೆ, ನಮ್ಮ ದೇಶದಲ್ಲಿ ಇನ್ನೂ ಬಗೆಹರಿಸಬೇಕಾದಂತಹ ಅನೇಕ ವಿಷಯಗಳಿವೆ. ಅವುಗಳಲ್ಲಿ ಪ್ರಮುಖವಾದ ಮೂರನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ.

Sadgurugala Svaatantra Dinada Sandesha

ಲಿಪ್ಯಂತರ:

ಸದ್ಗುರು: ನಮಸ್ಕಾರ! ಇಂದಿಗೆ ಸ್ವಾತಂತ್ರ್ಯ ದೊರಕಿ 72 ವರ್ಷಗಳಾಗುತ್ತೆ. ಹಲವಾರು ದಾಳಿ ಮತ್ತು ಆಕ್ರಮಣಗಳ ಯಾತನೆಗಳಿಗೆ ಒಳಗಾದ ಈ ಮಹಾನ್ ನಾಗರೀಕತೆಯು, ತೀವ್ರ ಹೋರಾಟ ಮತ್ತು ತ್ಯಾಗದ ಬಳಿಕ, 72 ವರ್ಷಗಳ ಹಿಂದೆ, ತನ್ನ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಈ 72 ವರ್ಷಗಳಲ್ಲಿ ಅನೇಕ ಗಮನಾರ್ಹವಾದ ಸಂಗತಿಗಳು ನಡೆದಿವೆ ಆದರೆ, ನಮ್ಮ ದೇಶದಲ್ಲಿ ಇನ್ನೂ ಬಗೆಹರಿಸಬೇಕಾದಂತಹ ಅನೇಕ ವಿಷಯಗಳಿವೆ. ನಮ್ಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಅದ್ಭುತವಾದ ಕೆಲಸವನ್ನು ಮಾಡಿವೆ, ನಮ್ಮ ವ್ಯಾಪಾರೋದ್ಯಮ ಸಂಸ್ಥೆಗಳು ಅದ್ಭುತವಾದ ಸಂಗತಿಗಳನ್ನು ಕೈಗೊಂಡಿವ, ನಮ್ಮ ಶಿಕ್ಷಣ ವ್ಯವಸ್ಥೆಗಳು ಮತ್ತು ಮೂಲಭೂತಸೌಕರ್ಯಗಳು ಅಭಿವೃದ್ಧಿಯನ್ನು ಹೊಂದಿವೆ. ಭಾರತೀಯರು ಪ್ರಪಂಚದೆಲ್ಲೆಡೆ ಹೋಗಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ ಮತ್ತು ಜೀವನದ ವಿವಿಧ ಆಯಾಮಗಳಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಆದರೆ, ಅದೇ ಸಮಯದಲ್ಲಿ, ನಮ್ಮ ದೇಶವನ್ನು ಕಿತ್ತು ತಿನ್ನುತ್ತಿರುವ ಕೆಲವು ಸಂಗತಿಗಳ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಯು ಆಸಕ್ತಿಯನ್ನು ವಹಿಸಿ, ಅವುಗಳನ್ನು ಯಾವುದೇ ರೀತಿಯಲ್ಲಾದರೂ ಪರಿಹರಿಸುವ ಪ್ರಯತ್ನವನ್ನು ಮಾಡಬೇಕು. ಮುಂಬರುವ ದಶಕದಲ್ಲಿ ನಾವು ಪರಿಹರಿಸಬೇಕಾದ ಪ್ರಮುಖ ಮೂರು ವಿಷಯಗಳಿವು: ಮೊದಲನೆಯದು - ನಮ್ಮ ದೇಶದ ಜೀವಾಳವನ್ನು ಕಿತ್ತು ತಿನ್ನುತ್ತಿರುವ ಜಾತಿ ಮತ್ತು ಮತಗಳ ವಿಭಜನೆ. ನಾವಿದನ್ನು ಇತ್ಯರ್ಥ ಮಾಡಲೇಬೇಕು! ನಮ್ಮ ಗುರುತು, ಜಾತಿ, ಮತ, ಸಮುದಾಯಗಳನ್ನು ಮೀರಿಬೇಕು ಮತ್ತು ರಾಷ್ಟ್ರೀಯತೆಯ ಕಡೆಗೆ ಹೋಗಬೇಕು. ನಮ್ಮ ಮನೆಯೊಳಗೆ ನಾವು ಯಾವುದೇ ಧರ್ಮವನ್ನು ಅನುಸರಿಸುತ್ತಿರಬಹುದು, ಆದರೆ, ನಮ್ಮ ಗುರುತು ನಮ್ಮ ರಾಷ್ಟ್ರೀಯತೆಯೊಂದಿಗೆ ಇರಬೇಕು. ನಾವು ಯಶಸ್ವಿ ರಾಷ್ಟ್ರವಾಗಿ ಮುನ್ನಡೆಯಲು ಇದು ಬಹಳ ಅವಶ್ಯಕ.

ಯಶಸ್ವಿ ರಾಷ್ಟ್ರ ಅಂತ ಹೇಳಿದಾಗ, ನಾನು ಅರ್ಧ ಶತಕೋಟಿ ಯುವಜನರ ಬಗ್ಗೆ ಮಾತನಾಡುತ್ತಿದ್ದೇನೆ. ನಮ್ಮದು ಜಗತ್ತಿನಲ್ಲಿ ಅತ್ಯಂತ ಯುವ ರಾಷ್ಟ್ರ. ಈ ಯುವಜನರು ತಮಗಾಗಿ ಒಂದು ಜೀವನವನ್ನು ರೂಪಿಸಿಕೊಳ್ಳಬೇಕಿದ್ರೆ, ದೇಶದ ಒಳಿತಿಗಾಗಿ ಗಮನಾರ್ಹವಾದ ಕೊಡುಗೆಯನ್ನು ನೀಡಬೇಕಿದ್ದರೆ, ಜಗತ್ತಿನ ಯೋಗಕ್ಷೇಮದ ವಿಚಾರದಲ್ಲಿ ಮಹತ್ತರವಾದ ಛಾಪನ್ನು ಮೂಡಿಸಬೇಕಿದ್ದರೆನಾವು ಮಾಡಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ, ನಮ್ಮ ನಂಬಿಕೆಗಳು, ಜಾತಿಗಳು ಮತ್ತು ಮತಗಳು ಇನ್ನಿತ್ಯಾದಿ ಸಣ್ಣಪುಟ್ಟ ಗುರುತುಗಳನ್ನು ಪರಿಗಣಿಸದೇ, ರಾಷ್ಟ್ರೀಯತೆಯಲ್ಲಿ ನಮ್ಮನ್ನು ನಾವು ಒಗ್ಗೂಡಿಸಿಕೊಳ್ಳಬೇಕು. ನಾವು ಇದೊಂದನ್ನು ಮಾಡಿ ಮತ್ತು ನಮ್ಮ ಯುವಜನರನ್ನು ಉತ್ಸಾಹಪೂರ್ಣ ಮತ್ತು ಏಕಾಗ್ರಚಿತ್ತ ಸ್ಥಿತಿಗೆ ತಂದರೆ, ಈ ದೇಶದಲ್ಲಿ ನಾವು ಪವಾಡವನ್ನೇ ಮಾಡಬಹುದು. ನಮಗೀಗ ಜನಸಂಖ್ಯೆಯ ಲಾಭವಿದೆ - ಈ  ಅನುಕೂಲವು ಮುಂದಿನ ೧೦-೨೦ ವರ್ಷಗಳ ತನಕ ಮಾತ್ರ ಇರುತ್ತದೆ. ಈ 10-15 ವರ್ಷಗಳ ಅವಧಿಯಲ್ಲಿ, ನಾವು ಪರಸ್ಪರ ವಿರುದ್ಧವಾಗಿ ಕೆಲಸ ಮಾಡದೆ, ಪರಸ್ಪರ ವಿರುದ್ಧವಾಗಿ ಮಾತನಾಡದೆ, ಪರಸ್ಪರರೊಂದಿಗೆ ಹೋರಾಡದೆ, ಈ ಇಡೀ ಜನಸಂಖ್ಯೆಯು ಒಂದು ರಾಷ್ಟ್ರದಂತೆ ಒಟ್ಟಾದರೆ, ನಾವೊಂದು ಪವಾಡಸದೃಶ ರಾಷ್ಟ್ರವಾಗುತ್ತೇವೆ. ನಮ್ಮಲ್ಲಿ ಸಾಧ್ಯತೆಯಿದೆ, ನಮ್ಮಲ್ಲಿ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವಿದೆ. ನಾವು ಮಾರ್ಗದರ್ಶನ ಮಾಡ್ತೀವಿ ಅಂತ ಜಗತ್ತು ನಮ್ಮ ಕಡೆಗೆ ನೋಡುತ್ತಿದೆ.

ಇಂದು ವಿಶ್ವದಲ್ಲಿ ಎಲ್ಲರೂ, ಭಾರತವು ಜಗತ್ತಿನ ಭವಿಷ್ಯದಲ್ಲಿ ಒಂದು ಮಹಾನ್ ಯಶೋಗಾಥೆಯಾಗೋದನ್ನ ಎದುರು ನೋಡುತ್ತಿದ್ದಾರೆ. ಮುಂಬರುವ ಇಪ್ಪತ್ತು ವರ್ಷಗಳಲ್ಲಿ, ಭಾರತವು, ಜಗತ್ತಿನ ಮಹಾನ್ ಯಶೋಗಾಥೆಗಳಲ್ಲಿ ಒಂದಾಗಿರುತ್ತದೆ. ಆದರೆ, ಇದನ್ನು ನಾವು ಮಾಡಬೇಕಿದೆ - ಇದೊಂದು ಭವಿಷ್ಯವಾಣಿಯಲ್ಲ, ಇದು ನಮ್ಮ ಯೋಜನೆಯಾಗಿರಬೇಕು.

ಎರಡನೆಯದು - ಭ್ರಷ್ಟಾಚಾರವು ನಮ್ಮ ರಾಷ್ಟ್ರದ ಆರ್ಥಿಕ ಚೈತನ್ಯವನ್ನು ಕಿತ್ತು ತಿಂದಿದೆ. ಇದನ್ನು ಉಪಶಮನಮಾಡಲು ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ವಹಿವಾಟಿನ ಪ್ರತಿಯೊಂದು ಅಂಶಗಳಲ್ಲೂ ತಂತ್ರಜ್ಞಾನವನ್ನು ಒಳಗೂಡಿಸುವುದು ಅತ್ಯಂತ ಮುಖ್ಯವಾದ ವಿಷಯ. ವ್ಯಾಪಾರ ವಹಿವಾಟಿನ ಪ್ರತಿಯೊಂದು ಅಂಶವೂ - ಜನನ ಪ್ರಮಾಣಪತ್ರದಿಂದ ಹಿಡಿದು ಸಾವಿನ ಪ್ರಮಾಣಪತ್ರದವರೆಗೆ, ಬ್ಯಾಂಕಿಂಗ್-ನಿಂದ ಹಿಡಿದು, ಎಲ್ಲದರವರೆಗೆ - ಇವೆಲ್ಲವೂ ತಂತ್ರಜ್ಞಾನದ ಅಡಿಯಲ್ಲಿ ಬಂದಾಗ, ಭ್ರಷ್ಟಾಚಾರಕ್ಕಿರೋ ಅವಕಾಶ ನಿರ್ಮೂಲನವಾಗುತ್ತದೆ. ಅದಕ್ಕಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜನರು ಸಹಕರಿಸಿ ಇದನ್ನವರು ಸರ್ಕಾರಕ್ಕಿಂತ ಮೊದಲೇ ಮಾಡಬೇಕು. ಈ ರೀತಿಯಾದ ಶುದ್ಧ ವಾತಾವರಣದಲ್ಲಿರುವುದು ನಮ್ಮ ಹಿತಾಸಕ್ತಿಯಲ್ಲಿದೆ. ಭ್ರಷ್ಟಾಚಾರವು ಕೇವಲ ಹಣದ ಬಗ್ಗೆಯಲ್ಲ - ಅದು ದೇಶದಲ್ಲಿರುವ ಮೂಲಭೂತ ಮಾನವ ಘನತೆಯನ್ನು ಕಸಿದುಕೊಳ್ಳುತ್ತದೆ.

ಮೂರನೆಯ ವಿಷಯವೆಂದರೆ - ಭಯೋತ್ಪಾದನೆ ಮತ್ತು ಬಾಹ್ಯ ಆಕ್ರಮಣಗಳ ಅಪಾಯಗಳು. ಇದರಿಂದ ಸರ್ಕಾರ, ಗುಪ್ತಚರ ಸಂಸ್ಥೆಗಳು ಮತ್ತು ಜನಸಾಮಾನ್ಯರು ಜಾಗರೂಕರಾಗಿರುವಂತೆ ನಾನು ಮನವಿ ಮಾಡ್ಕೊಳ್ತಿದೇನೆ. ನಮ್ಮ ದೇಶಕ್ಕೆ ಮತ್ತೊಮ್ಮೆ ಇಂತಹ ಅಪಾಯಗಳು ಎದುರಾಗಬಾರದು. ಕಳೆದ ಸಾವಿರ ವರ್ಷಗಳ ಕಾಲ, ವಿಶೇಷವಾಗಿ ಕಳೆದ 250 ವರ್ಷಗಳ ಕಾಲದಲ್ಲಿ ನಮ್ಮ ಮೇಲೆ ನಡೆದ ಭಯಾನಕ ದೌರ್ಜನ್ಯವನ್ನು ನಾವು ಮರೆಯಬಾರದು. ಇದನ್ನು ಮರೆಯದಿರುವುದು ಬಹಳ ಮುಖ್ಯ. ಅದರೆ, ಅದಕ್ಕಿಂತ ಹೆಚ್ಚು ಮುಖ್ಯ ಏನಂದ್ರೆ ನಮಗಾದ ಅನ್ಯಾಯದ ಕುರಿತು ಕಹಿ ಭಾವನೆಯನ್ನು ಇಟ್ಟು ಕೊಳ್ಳದೇ ಇರೋದು. ನಮ್ಮ ನಾಗರಿಕತೆಯು ಎದುರಿಸಿದ ನೋವಿನ ಅನುಭವವನ್ನು, ನಮ್ಮ ಜೀವನದಲ್ಲಿ ಗಾಯವನ್ನಾಗಿ ಮಾಡಿಕೊಳ್ಳದೇ, ಅದನ್ನು ವಿವೇಕವನ್ನಾಗಿ ರೂಪಾಂತರಿಸುವುದು ಬಹಳ ಮುಖ್ಯ. ಏನಾದರೂ ನಮಗೆ ನೋವನ್ನುಂಟುಮಾಡಿದಾಗ, ಒಂದೋ ನಾವು ದುರ್ಬಲರಾಗುತ್ತೇವೆ ಇಲ್ಲವೇ ವಿವೇಕಶೀಲರಾಗುತ್ತೇವೆ. ನಾವು ವಿವೇಕಶೀಲರಾಗಬೇಕು ಮತ್ತು ಈ ಅನುಭವವು ನಮ್ಮನ್ನು ಪ್ರಬುದ್ಧರನ್ನಾಗಿಸಬೇಕು. ಆಗ ಮಾತ್ರ, ಭವಿಷ್ಯದ ಪೀಳಿಗೆಗೆ ಯೋಗ್ಯವಾಗಿರುವ ರಾಷ್ಟ್ರ ಮತ್ತು ವಿಶ್ವವನ್ನು ನಾವು ನಿರ್ಮಿಸುತ್ತೇವೆ.

ಈ ಸ್ವಾತಂತ್ರ್ಯ ದಿನದಂದು, ಪ್ರತಿಯೊಬ್ಬರು, ಪ್ರತಿಯೊಬ್ಬ ಭಾರತೀಯ ಪ್ರಜೆಯೂ, ಈ ಜವಾಬ್ದಾರಿಯನ್ನು ತಗೊಳ್ಬೇಕು. ನಮ್ಮ ರಾಷ್ಟ್ರದ ಚೈತನ್ಯವನ್ನು ಕಿತ್ತು ತಿನ್ನುತ್ತಿರುವ ಈ ಮೂರು ದುಷ್ಟ ಶಕ್ತಿಗಳನ್ನು, ಯಾವ ರೀತಿಯಲ್ಲಾಗುತ್ತದೆಯೋ ಆ ರೀತಿಯಲ್ಲಿ ನಿವಾರಿಸಬೇಕು. ಮತ್ತು ನಾವು ಪರಸ್ಪರ ವಿರುದ್ಧವಾಗಿ ಕೆಲಸವನ್ನು ಮಾಡದೇಪರಸ್ಪರ ವಿರುದ್ಧವಾಗಿ ಮಾತನಾಡದೇ, ನಮ್ಮ ದೇಶಕ್ಕಾಗಿ ಮಾತನಾಡಿ, ದೇಶಕ್ಕಾಗಿ ಕೆಲಸ ಮಾಡಿ ಇದನ್ನು ಪರಿಹರಿಸಬೇಕು. ಯಾಕಂದ್ರೆ ನಮ್ಮ ದೇಶದಲ್ಲಿ ಇನ್ನೂ ಸುಮಾರು 40 ಕೋಟಿ ಜನರು, ತಿನ್ನಲು ಹೊಟ್ಟೆ ತುಂಬಾ ಅಹಾರವಿಲ್ಲದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದನ್ನು ಸರಿಪಡಿಸಲೇಬೇಕು. ಇದನ್ನು ಸರಿಪಡಿಸಬೇಕಾದರೆ, ಒಗ್ಗಟ್ಟಿನ ಮತ್ತು ರಾಷ್ಟ್ರ ನಿರ್ಮಾಣದ ಸಾಮೂಹಿಕ ಕಾರ್ಯವು ನಡೆಯಬೇಕಿದೆ. ನಾನು ಎಲ್ಲರಲ್ಲೂ ಬೇಡಿಕೊಳ್ಳುತ್ತೇನೆ - ಈ 72ನೇ ಸ್ವಾತಂತ್ರ್ಯ ದಿನದಂದು ನಾವು ಬದ್ಧರಾಗಬೇಕು - ನಮ್ಮ ದೇಶದಲ್ಲಿ ಮೂಲಭೂತ ಪೋಷಣೆಯನ್ನೂ ಪಡೆಯದೇ ಇರುವ ದುರದೃಷ್ಟವಂತ ಜನರ ಪರಿಸ್ಥಿತಿಯು ಮುಂದಿನ ಐದರಿಂದ ಹತ್ತು ವರ್ಷದಲ್ಲಿ ಬದಲಾಗುವಂತೆ ಖಚಿತಪಡಿಸಿಕೊಳ್ಳಬೇಕು.