ಮನಸ್ಸನ್ನು ಹೇಗೆ ನಿಲ್ಲಿಸುವುದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸದ್ಗುರುಗಳು, ಈ ’ಯೋಚನೆಗಳು ಇಲ್ಲದೇ ಇರುವುದು’, ’ನೋ ಮೈಂಡ್’ ಇತ್ಯಾದಿಗಳು ಬಹಳ ಅಪಾರ್ಥಗೊಂಡಿವೆ ಎನ್ನುತ್ತಾರೆ. ಆದ್ದರಿಂದ ಇಂದು ಜನರು ಮನಸ್ಸನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಕೇಳುವುದು, ಇಷ್ಟೊಂದು ಸಾಮರ್ಥ್ಯದ ಮನಸ್ಸನ್ನು ಪಡೆಯಲು ಲಕ್ಷಾಂತರ ವರ್ಷಗಳ ವಿಕಾಸದ ಪ್ರಕ್ರಿಯೆ ಬೇಕಾಯಿತು; ಹಾಗಾದರೆ ಅದನ್ನು ನಿಲ್ಲಿಸುವುದು ಯಾಕೆ? ನಿಮ್ಮ ಮನಸ್ಸು ಯಾವಾಗಲೂ ನಿಮಗೆ ಅತ್ಯಂತ ಪ್ರಸನ್ನತೆಯನ್ನೇ ಉಂಟುಮಾಡುತ್ತಿದ್ದಿದ್ದರೆ, ನೀವದನ್ನು ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೀರೇನು?

Oduva Manassannu nillisodu hege?

ಲಿಪ್ಯಂತರ:

ಪ್ರಶ್ನೆ: ಸದ್ಗುರು, ನಾವು ಸುಮ್ನೆ ಇದ್ರುನೂ ನಮ್ ಮನಸ್ಸು ವಟವಟ ಅಂತಾನೇ ಇರುತ್ತೆ. ಯಾವಾಗ್ಲೂ ತೊಂದ್ರೆ ಕೊಡತ್ತೆ. ನಮ್ ಯೋಚನೆಗಳು ಯಾವಾಗ್ಲೂ ಭೂತಕಾಲದ ಅಥವಾ ಭವಿಷ್ಯದ ಕಲ್ಪನೆಯಲ್ಲಿರುತ್ತೆ. ಇದ್ರಿಂದ ನಮಗ್ ಯಾವ್ ಪ್ರಯೋಜನಾನೂ ಇಲ್ಲ. ಇದ್ರಿಂದ ಹೇಗ್ ಬಿಡಿಸ್ಕೊಳ್ಳೋದು?

ಸದ್ಗುರು: ಈ ಯೋಚನೆಗಳನ್ನ ನಿಲ್ಸೋದ್ರ ಬಗ್ಗೆ ತುಂಬಾ ಚಿಂತನೆಗಳಾಗಿವೆ. ಯೋಚನೆ ಇಲ್ದೇ ಇರೋದು, ಮನಸ್ಸೇ ಇಲ್ದೇ ಇರೋದು ಇಂಥ ಮಾತುಗಳು ಎಲ್ಲಾ ಕಡೆ ತುಂಬಾನೇ ಕೇಳ್ಬರ್ತಿವೆ ಮತ್ತು ಈ ಪದಗಳು ತುಂಬಾನೇ ಅಪಾರ್ಥವಾಗಿ ಅವಕ್ಕೆ ಏನೇನೋ ಅರ್ಥಗಳು ಬಂದಿವೆ. ಜನ ಈಗ ಮನಸ್ನ ಹೇಗೆ ನಿಲ್ಸೋದು ಅಂತ ಪ್ರಯತ್ನ ಪಡ್ತಿದ್ದಾರೆ.

ಲಕ್ಷಾಂತ್ರ ವರ್ಷಗಳ ವಿಕಾಸ ಬೇಕಾಯ್ತು ನಮ್ ಮನಸ್ಸು ಈ ಮಟ್ಟಕ್ ಬೆಳೀಬೇಕಾದ್ರೆ. ಹ್ಮ್.. ಅಲ್ವೇ? ಲಕ್ಷಾಂತ್ರ ವರ್ಷಗಳ ಪ್ರಕೃತಿಯ ಮಹತ್ತರವಾದ ಕೆಲಸದಿಂದ ಇವತ್ತು ನಿಮ್ಗೆ ಇಷ್ಟೊಂದ್ ಸಾಮರ್ಥ್ಯ ಇರೋ ಮನಸ್ಸು ಸಿಕ್ಕಿದೆ. ಆದ್ರೆ ಈಗ ನೀವು ಇದನ್ನ ನಿಲ್ಸ್ ಬೇಕಂತೀರಾ. ಏನಕ್ಕೆ ನಿಲ್ಸ್ ಬೇಕಂತಿದೀರಾ? ಅದೇ ನಿಮ್ ಮನ್ಸು ಯಾವಾಗ್ಲೂ ನಿಮ್ಗೆ ಪ್ರಸನ್ನತೆಯನ್ನೇ ಕೊಡ್ತಿದ್ದಿದ್ರೆ ನೀವು ಅದನ್ನ ನಿಲ್ಸೋ ಬಗ್ಗೆ ಯೋಚಿಸ್ತಿದ್ರಾ? ಯೋಚಿಸ್ತಿದ್ರಾ? ಇಲ್ಲ. ಈಗ ಅದು ತುಂಬಾನೇ ಅಶಾಂತೀನ ಕೊಡ್ತಿದೆ. ಅದಕ್ಕೆ ನೀವು ಇದನ್ನ ಹೇಗೆ ನಿಲ್ಸೋದು ಅಂತ ಕೇಳ್ತಿದ್ದೀರಿ. ಪ್ರಪಂಚದಲ್ಲಿ ಎಲ್ಲೇ ಹೋದ್ರು ಈ ವಿಷ್ಯ ಜನರ ತಲೆಗೆ ತುಂಬಾನೇ ಹತ್ತಿದೆ. "ನೀವು ಧ್ಯಾನ ಮಾಡಿ" ಅಂತಂದ್ರೆ, "ಆದ್ರೆ ಸದ್ಗುರು, ನನಗ್ ನನ್ ಮನಸ್ ನ ನಿಲ್ಸಕ್ಕಾಗ್ತಿಲ್ಲ" ಅಂತಾರೆ. ನಾನಂದೆ, "ಅದಾಗೋದು ನೀವು ನಿಮ್ಮ kidney, liver, heart ನೆಲ್ಲ ನಿಲ್ಸ್ ದಾಗ ಮಾತ್ರ. ನೀವು ಇವನ್ನೆಲ್ಲ ನಿಲ್ಸಿ, ಮನಸ್ಸು ಕೂಡಾ ನಿಲ್ಲತ್ತೆ. ಇವನ್ನೆಲ್ಲ ನಿಲ್ಸ್ ಬೇಕಾ ನಿಮಗೆ?" "ಇಲ್ಲ ಇಲ್ಲ". "ಮತ್ ಯಾಕೆ ಮನಸ್ನ ನಿಲ್ಸ್ ಬೇಕಂತೀರಾ? ಮನಸ್ಸಿನ್ ಮೇಲೆ ಯಾಕೆ ಅಷ್ಟು ಪಕ್ಷಪಾತ ನಿಮ್ಗೆ? ನಿಮ್ ಹೃದಯ ಹೊಡ್ಕೊಳ್ತಿದ್ರೆ ಧ್ಯಾನ ಮಾಡಕ್ಕೇನೂ ತೊಂದ್ರೆ ಇಲ್ಲ ನಿಮ್ಗೆ. ನಿಮ್ liver ಕೆಲ್ಸ ಮಾಡ್ತಿದ್ರೆ ಧ್ಯಾನ ಮಾಡಕ್ಕೇನೂ ತೊಂದ್ರೆ ಇಲ್ಲ. ನಿಮ್ kidneys ಕೆಲ್ಸ ಮಾಡ್ತಿದ್ರೆ ಧ್ಯಾನ ಮಾಡಕ್ಕೇನೂ ತೊಂದ್ರೆ ಇಲ್ಲ. ಅದೇ ನಿಮ್ಮ ಮೆದುಳು ಕೆಲ್ಸ ಮಾಡ್ತಿದ್ರೆ ನಿಮ್ಗೆ ಧ್ಯಾನ ಮಾಡಕ್ಕಾಗಲ್ವ? ಯಾಕೆ ಏನು ತೊಂದ್ರೆ? ಬುದ್ಧಿಶಕ್ತಿ ಮೇಲೆ ನಿಮಗ್ ಏನೋ ವೈರ ಇದೆ ಅನ್ಸುತ್ತೆ! ಅಲ್ವಾ? (ನಗು)

ಇದು ಪೆದ್ದರು ಮನುಷ್ಯನ ಬುದ್ಧಿಶಕ್ತಿಗೆ ವಿರೋಧವಾಗಿ ಮಾಡ್ತಿರೋ ಸಂಚು. ಧ್ಯಾನ ಮಾಡ್ಬೇಕಂದ್ರೆ ಮೆದುಳು ಸ್ಥಗಿತವಾಗ್ಬೇಕು ಅನ್ನೋದು. ಇಲ್ಲ. ನಿಮ್ ಮೆದುಳನ್ನ ನಿಲ್ಲಿಸ್ಬೇಕಾಗಿಲ್ಲ. ನಾವು ಇದರ ಬಗ್ಗೆ ನಿನ್ನೆನೇ ಮಾತಾಡ್ತಿದ್ವಿ. ನಾವ್ ನಿಮ್ಗೆ ಶಾಂಭವಿಯ ದೀಕ್ಷೆ ಕೊಡ್ತೀವಿ. ಅದೊಂದ್ ಸರಳವಾದ್ ಪ್ರಕ್ರಿಯೆ. ತುಂಬಾ ದಾರಿಗಳಿವೆ, ಇದು ಒಂದು ಸರಳವಾದ್ ದಾರಿ, ಆದ್ರೆ ಇದೊಂದು ಶಕ್ತಿಶಾಲಿ ಕ್ರಿಯೆ. ನೀವ್ ಇಲ್ಲಿ ಕೂತ್ರೆ, ನೀವು ನೋಡಬಹುದು ನಿಮ್ ದೇಹ ಇಲ್ಲಿರತ್ತೆ, ನಿಮ್ ಮನ್ಸು ಅಲ್ಲಿರತ್ತೆ ಮತ್ತು ನೀವು ಅನ್ನೋದು ಮತ್ತಿನ್ನೆಲ್ಲೋ ಇರತ್ತೆ. ಒಮ್ಮೆ ನಿಮಗೂ ನಿಮ್ ಮನಸ್ಸಿಗೂ ನಡುವೆ ಅಂತ್ರ ಬಂದ್ ಬಿಟ್ರೆ, ಆಮೇಲೆ ನಿಮ್ ಮನಸ್ಸು ಏನ್ಮಾಡ್ತಿದೆ ಅನ್ನೋದು ಒಂದ್ ದೊಡ್ ವಿಷ್ಯಾನೇ ಅಲ್ಲ.

ಇದ್ಹೇಗಂದ್ರೆ, ನೀವು ಟ್ರಾಫಿಕ್ ಜಾಮ್ ನಲ್ಲಿ ಸಿಕ್ ಹಾಕೊಂಡಿದ್ದೀರಾ... ಮುಂದೆ ಹೋಗಕ್ಕೆ ಕಷ್ಟ ಪಡ್ತಿದೀರ. ಅದು ಒಂದ್ ರೀತಿ ಅನುಭವ. ಅದೇ ನೀವು ಚಾಮುಂಡಿ ಬೆಟ್ಟದ್ ಮೇಲೆ ನಿಂತಿದ್ದೀರಾ, ಅಥವಾ ಒಂದು hot air balloon ನಲ್ಲಿ ತೇಲ್ತಾ ಇದೀರಾ ಅಂದ್ಕೊಳ್ಳಿ. ಅಲ್ಲಿಂದ ನೀವು ಬಗ್ಗಿ ನೋಡ್ತೀರಾ ಎಲ್ಲಾ ಟ್ರಾಫಿಕ್ ನ ಆರಾಮಾಗಿ. ಯಾಕೆ? ಅಂತರ ಇದೆ ಅದಕ್ಕೆ. ಅಲ್ವೇ? ನೀವು ಅದ್ರೊಳ್ಗಡೆ ಇದ್ದಾಗ, ಟ್ರಾಫಿಕ್ ಬೇರೆನೇ ತರದ್ ಅನುಭವ. ಅಷ್ಟು ಎತ್ತರದಿಂದ balloon ನಲ್ಲಿ ಕೂತು ಬಗ್ಗಿ ನೋಡ್ತಿದ್ರೆ, ನಿಮಗ್ ಶಬ್ದಗಳ್ ಕೂಡ ಕೇಳ್ಸಲ್ಲ. ಎಷ್ಟು ಚೆನ್ನಾಗೆ ಕಾಣ್ಸತ್ತೆ ಟ್ರಾಫಿಕ್ ಅಲ್ವೇ? ಹೌದೋ ಅಲ್ವೋ? ಏಕೆಂದ್ರೆ ಇಲ್ಲಿ ಅಂತರ ಇದೆ. ಹಾಗೇನೇ ನಿಮ್ಗೂ ನಿಮ್ ಮನಸ್ಸಿನ್ ಚಟುವಟಿಕೇಗೂ ಅಂತರ ಬಂದ್ರೆ, ಮನಸ್ಸು ತೊಂದ್ರೇನೇ ಅಲ್ಲ. ಮನಸ್ಸು ಒಂದು ಅದ್ಭುತ. ತೊಂದ್ರೆ ಅಲ್ಲ.

ಅದ್ಹೇಗೇ ಇರ್ಲಿ, ಯೋಚನೆಗಳು ನಿಲ್ದೇನೇ ಹರೀತಾನೇ ಇದ್ರೆ, ನಿಮ್ಗೆ ಮನಸ್ಸಿನ್ ಲೂಸ್ ಮೋಶನ್ ಆಗಿದ್ರೆ, ನೀವು ಯಾವ್ದೋ ಕೆಟ್ ಹೋಗಿರೋ ಪದಾರ್ಥ ತಿಂದಿದ್ದೀರಾ ಅಂತರ್ಥ, ಅಲ್ವೇ? ಹೌದ್ ತಾನೇ? ನಿಮ್ ದೇಹಕ್ಕೆ ಲೂಸ್ ಮೋಶನ್ ಆಗೋದು ಕೆಟ್ ಹೋಗಿರೋ ಊಟ ಮಾಡಿದ್ರೇನೇ. ಹಾಗೇ ಮನಸ್ಸಿನ್ ಲೂಸ್ ಮೋಶನ್ ಆಗಿದ್ರೆ ಯಾವ್ದೋ ಕೆಟ್ಟಿರೋ ಪದಾರ್ಥ ತಿಂದಿದೀರಾ ಅಂತರ್ಥ. ಈ ಕೆಟ್ಟಿರೋ ಆಹಾರ ಯಾವ್ದು ಅಂದ್ರೆ, ನೀವು ಯಾವ್ದು ಅಲ್ವೋ ಅದರ್ ಜೊತೆ ಒಮ್ಮೆ ನಿಮ್ಮನ್ನ ನೀವು ಗುರ್ತಿಸ್ಕೊಂಡ್ರೆ, ಅಲ್ಲಿಗ್ ಮುಗೀತು. ನಿಮ್ ಮನಸ್ಸು ನಿರಂತರ ಓಟಾನೇ. ಬೇರೆ ದಾರೀನೇ ಇಲ್ಲ. ಏನ್ ಬೇಕಾದ್ರೂ ಮಾಡಿ, ಎಷ್ಟ್ ಬೇಕಾದ್ರು ಪ್ರಯತ್ನ ಪಡಿ. ಅದು ನಿಲ್ಲಲ್ಲ.

ಅದೇ, ನೀವು ಯಾವುದಲ್ವೋ ಅದರ ಜೊತೆ ನಿಮ್ಮನ್ನ ಗುರ್ತಿಸ್ಕೊಳ್ದೇ ಇದ್ರೆನಿಮ್ಗೆ ಎಲ್ಲದರ ಜೊತೆ ಹೇಗೆ ಇರೋದು ಮತ್ತು ಎಲ್ಲವನ್ನು ಹೇಗೆ ಬಳಸ್ಕೊಳೋದು ಅಂತ ಗೊತ್ತಿರುತ್ತೆ. ಆದರೆ ಅವುಗಳ ಜೊತೆ ನಿಮ್ಮನ್ ನೀವು ಗುರ್ತಿಸ್ಕೊಳ್ಳಲ್ಲಆಗ ನೀವು ಇಲ್ಲಿ ಕೂತ್ರೆ, ನಿಮ್ಮ ಮನಸ್ಸು ಸುಮ್ನೆ ಹೀಗೆ ಇರತ್ತೆ. ನಿಮಗೆ ಬೇಕಾದ್ರೆ ಅದನ್ ಬಳಸ್ಬೋದು, ಇಲ್ದಿದ್ರೆ ಸುಮ್ನೆ ಹೀಗೆ ಇರತ್ತೆ.

ಈಗ ನಿಮ್ ಕೈಗಳು ಹೀಗಿವೆಯಾ ಅಥವಾ ಭದ್ರವಾಗಿ ಹಿಡ್ಕೊಂಡಿದ್ದೀರಾ ಎಲ್ಲೆಲ್ಲೋ ಹೊರ್ಟೋಗ್ಬಾರ್ದು ಅಂತ? ಇಲ್ಲ. ಸುಮ್ನೆ ನೀವು ಹೀಗೆ ಇಡ್ಬೋದು. ಕೈಗಳನ್ನ ಹೀಗೆ ಇಡ್ಬೋದು, ಹೀಗೆ ಕೂಡ ಇಡ್ಬೋದು. ಬೇಕಾದ್ರೆ ಬಳಸ್ಬೋದು. ಆದ್ರಿಂದ ಅದು ಒಂದ್ ಉಪಯುಕ್ತವಾದಂತ ಉಪಕರಣ. ಅದೇ ನಿಮ್ ಕೈಗಳು ಹೀಗಾಗೋದ್ರೆ (gestures)... ಕೆಲವರಿಗೆ ಹೀಗೆ ಆಗೋಗಿದೆ ಗೊತ್ತಾ? ಹೌದೋ ಅಲ್ವೋ? ಅದು ಹೀಗಾಗೋದ್ರೆ ನೀವು ನಗೆಪಾಟಲು ಆಗ್ತೀರಾ. ಅಲ್ವೇ? ಇದು ನಿಮ್ ಮನಸ್ಸಿಗಾದ್ರೂ ಅದು ಅಷ್ಟೇ ನಗೆಪಾಟಲಿನ್ ಸಂಗತಿ. ಆದ್ರೆ ಬೇರೆ ಯಾರೂ ಅದನ್ನ ನೋಡ್ತಿಲ್ಲ ಅಂತ ಸಮಾಧಾನವಾಗಿ ಇರ್ಬೋದು ಅಷ್ಟೆ. ಆದ್ರೆ ಅದನ್ನೂ ನೋಡ್ಬೋದು. ಹುಷಾರಾಗಿ ಗಮನ್ಸಿದ್ರೆ ಜನ್ರು ಅದನ್ನೂ ನೋಡ್ಬೋದು. ಅಲ್ವೇ? ಜನ ನೋಡ್ತಾರೋ ಇಲ್ವೋ ಅನ್ನೋದು ನಮ್ಗೆ ಬೇಕಿಲ್ಲ. ಅದಲ್ಲ ವಿಷ್ಯ. ವಿಷ್ಯ ಏನಂದ್ರೆ, ನಿಮ್ಮ ಬದುಕಿನ ಅತಿ ಮುಖ್ಯವಾದ ಅಂಗ ನಿಮ್ಮ ಹಿಡಿತದಲ್ಲಿಲ್ಲ. ಅದು ಯಾವಾಗ್ಲೂ ಅದ್ರದ್ದೇ ಅಸಂಬದ್ಧವನ್ನ ಮಾಡ್ಕೋತಾ ಇದೆ. ನಿಮಗೇನು ಬೇಕೋ ಅದನ್ನ ಮಾಡ್ತಿಲ್ಲ.

ನೀವು ಈ ಖಾಯಿಲೆಯಿಂದ ಬಿಡುಗಡೆ ಹೊಂದ್ ಬೇಕಾದ್ರೆ, ಕೆಟ್ಟಿರೋ ಊಟ ಮಾಡೋದನ್ನ ನಿಲ್ಲಿಸ್ಬೇಕು. ತಪ್ಪಾದ ಊಟ ಅಥ್ವಾ ಕೆಟ್ಟಿರೋ ಊಟ ಅಂದ್ರೆ, ನೀವು ಯಾವುದಲ್ವೋ ಅದರ ಜೊತೆ ಗುರ್ತಿಸ್ಕೊಳೋದು. ನೀವಿಲ್ಲಿ ಕೂತಿದ್ದಾಗ ಇದರ್ ಜೊತೆಯಾಗಲೀ ಇದರ್ ಜೊತೆಯಾಗಲಿ ಗುರ್ತಿಸ್ಕೊಳ್ದಿದ್ರೆ, ನೀವ್ ನೋಡ್ತೀರಾ ಎಲ್ಲ ಚೆನ್ನಾಗೇ ಇರತ್ತೆ. ಆಗ ನಿಮ್ ಮನಸ್ಸು ನಿಮಗೇನು ಬೇಕೋ ಅದನ್ನೇ ಮಾಡತ್ತೆ. ಬೇಡ್ದಿದ್ರೆ, ಸುಮ್ನೆ ಹಾಗೆ ಇರತ್ತೆ. ಅದ್ ನಿಜವಾಗಿ ಹಾಗೇ ಇರ್ಬೇಕು. ಮನಸ್ಸು ಯಾವಾಗ್ಲೂ ಅದ್ರದ್ದೇ ಕತೆಗಳನ್ನ ಹೇಳ್ತಿರ್ಬಾರ್ದು. ನಿಮಗೇನು ಬೇಕೋ ಆ ಕತೇನಷ್ಟೆ ಅದು ಹೇಳ್ಬೇಕು. ಅಲ್ವೇ? ಇಲ್ಲಾಂದ್ರೆ ಅದೊಂದ್ ದೊಡ್ ಪೀಡೆ.